ಗಾಂಧೀಜಿಯ ಪವಿತ್ರ ಆರ್ಥಿಕತೆ

ಪವಿತ್ರ ಆರ್ಥಿಕತೆ ಎಂದರೆ ಮತ್ತೇನೂ ಅಲ್ಲ; ಸರಳ ಜೀವನ, ನಿಸ್ವಾರ್ಥ ಬದುಕು, ಆರ್ಥಿಕಮಿತಿ, ಗ್ರಾಮಗಳ ನಗರಮುಖಿ ಚಲನೆಯ ತಡೆ, ಖಾದಿ ಕನವರಿಕೆ, ದುಡಿಮೆಯ ಉತ್ತೇಜನ, ಸಂಪತ್ತಿನ ಧರ್ಮದರ್ಶಿತ್ವ.

1922ರಲ್ಲಿ ನೈಟಿಂಗೇಲ್ ಎಂಬ ಪಾದ್ರಿ ಶಿವಮೊಗ್ಗದ ತೀರ್ಥಹಳ್ಳಿ ನಾಮಧಾರಿಗಳ ಬಗ್ಗೆ ಬರೆಯುವಾಗ ಕಗ್ಗಾಡಿನೊಳಗಿನ ಆಧುನಿಕ ವಿದ್ಯೆಗೆ ಹಾತೊರೆದ ಮುಳುವಾಡಿಯ ಎಂ.ಆರ್.ಗಿರಿಯಪ್ಪಗೌಡರನ್ನು `ನಾಮಧಾರಿಗಳ ಜೂಯೆಲ್’ ಎನ್ನುತ್ತಾರೆ. `‘ಭಾರತದ ಹತ್ತಿ ಇಂಗ್ಲೆಂಡಿನ ಮಿಲ್ಲುಗಳಲ್ಲಿ ಸುಂದರ ಬಟ್ಟೆಯಾಗಿ ಮಾರ್ಪಟ್ಟು ನಮ್ಮ ಕೈಸೇರುವಂತೆ ನಮ್ಮ ಮಕ್ಕಳು ಮಿಷನ್ ಶಾಲೆಗಳ ತರಬೇತಿಯಲ್ಲಿ ಸುಂದರ ಚಾರಿತ್ರ್ಯವನ್ನು ಪಡೆಯುತ್ತಾರೆ’ ಎನ್ನುವ ಈ ಗೌಡರ ಮಾತಿನಂತೆ ಇಡೀ ಭಾರತ ಈ ತಿರುವಿನಲ್ಲೆ ಇತ್ತು, ನಿಜ. ಕುವೆಂಪು ರೀತಿಯ ಪ್ರತಿಭೆ ಅಡವಿಯಿಂದೀಚೆಗೆ ಬಂದು ಕೋಗಿಲೆ ಕಾಜಾಣ ದನಿ ನೀಡಿದ್ದು ಇದಕ್ಕೆ ರೂಪಕ.

ಗಿರಿಯಪ್ಪನವರು ಹೇಳುವಂತೆ ಇಡೀ ಭಾರತದ ಹತ್ತಿ ಥಳಥಳಿಸಿದ್ದು ನಿಜ. ಇದರೊಂದಿಗೆ ಬ್ರಿಟಿಷರು ಬಾಚಿಬಳಿದ ಈ ದೇಶ ಹೊಟ್ಟೆಬಟ್ಟೆಗಿಲ್ಲದ ಹೀನಸ್ಥಿತಿಗೆ ಮುಟ್ಟಿದ್ದು ಸಹ ಅಷ್ಟೇ ನಿಜ. ಇದನ್ನು ಸರಿಪಡಿಸಲೆಂದು 1917ರಲ್ಲಿ ದೇಶೀ ಮಂತ್ರದ ಯಂತ್ರ ಚರಕದ ನಾದಕ್ಕೆ ಹುಡುಕಿದಾಗ ಗಾಂಧೀಜಿಗೆ ದೇಶದಲ್ಲಿ ಅದು ಸಿಗದ ಸ್ಥಿತಿಯಾಗಿತ್ತು. ಬರೋಡದ ವಿಜಾಪುರ ಎಂಬಲ್ಲಿ ಅಟ್ಟದ ಮೇಲಿಂದ ಗಂಗಾಬಹೆನ್ ಎಂಬ ಮಹಿಳೆ ಮುರಿದ ಚರಕವೊಂದನ್ನು ತಂದು ನೀಡಿದರು. ಅಪಾರ ಸಂತೋಷದಿಂದ ಸರಿಪಡಿಸಿಕೊಂಡರು ಗಾಂಧಿ. ಚರಕದ ಮೊದಲ ಗೋಣಿತಟ್ಟಿನಂತಹ ನೆಯ್ದ ಸೀರೆಯನ್ನು ಕಸ್ತೂರ್‌ಬಾ ಉಟ್ಟರು. ಈ ಮೂಲಕ ಗುಡಿಕೈಗಾರಿಕೆಗೆ ಪುನಃಚೇತನಗೊಳಿಸಲು ಸತ್ಯಶೋಧನೆಗಿಳಿದ ಗಾಂಧೀಜಿಯ ಅಭಿಲಾಷೆಯೇ ಪವಿತ್ರ ಆರ್ಥಿಕತೆ.

ನೆಹರೂ ಆದಿಯಾಗಿ ಸ್ವತಂತ್ರ ಭಾರತದ ರಾಜಕಾರಣಿಗಳು ಜಾಗತೀಕರಣ ಎಂಬ ರಕ್ಕಸ ಗವಿಗಳನ್ನು ತಮಗರಿವಿಲ್ಲದಂತೆ ಹೊಕ್ಕರು. ಇದು ವಾಲಿಯು ಗವಿಯೊಳಗೆ ಹೊಕ್ಕು ಕದನಕ್ಕಿಳಿದ ಮಾದರಿ. ನಮ್ಮ ಪ್ರಧಾನಿಗಳು ದಿನಕ್ಕೊಂದು ದೇಶ ತಿರುಗಿ ಕೈಕುಲುಕುವಾಗ ಆರ್.ಸಿ.ಇ.ಪಿ. ಎಂಬ ಹದಿನಾರು ದೇಶಗಳ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಪೂರ್ವ ದೇಶಗಳಿಗೆ ದಿಡ್ಡಿ ಬಾಗಿಲು ತೆರೆಯುವ ಆತುರದಲ್ಲಿದ್ದಾರೆ.

ತೀವ್ರ ಸಂತಾಪಗಳು

ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಡಾ.ರಾಜೇಗೌಡರು ಹಾಸನದ ಆಲೂರು ತಾಲ್ಲೂಕಿನವರು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಜಾನಪದ ಇವರ ಆಸಕ್ತಿಯ ಕ್ಷೇತ್ರ. ಎಚ್.ಎಲ್.ನಾಗೇಗೌಡರ ಒಡನಾಡಿ; `ಜಾನಪದ ಲೋಕ’ದ ಜೊತೆಗಿದ್ದರು. `ತಾಳ ಬಂದೋ ತಂಬೂರಿ ಬಂದೋ’, ‘ಕೋಳಿ ಮತ್ತು ತುಳಸಿಕಟ್ಟೆ’, ‘ಜಾನಪದ ಸಂಕಥನ, ‘ದೇವರ ನಾಲಿಗೆಯನ್ನು ಸೀಳುವ ಕಥನ’ ಇವರ ಕೆಲವು ಕೃತಿಗಳು.

ರಾಜೇಗೌಡರು ಸಮಾಜಮುಖಿ ಪತ್ರಿಕೆಯ ಗಂಭೀರ ಓದುಗರು ಹಾಗೂ ಲೇಖಕರು; ರೂ.10,000 ಕೊಡುಗೆ ನೀಡಿ ಆಲೂರು ತಾಲೂಕಿನ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಿಗೆ ಪತ್ರಿಕೆಯ ವಾರ್ಷಿಕ ಚಂದಾ ಮಾಡಿಸಿದ್ದರು. ಅವರ ಕೊನೆಯ ಲೇಖನ ಪ್ರಕಟಿಸುವ ಮೂಲಕ ‘ಸಮಾಜಮುಖಿ’ ಬಳಗ ನಮಿಸುತ್ತದೆ.

ಈಗ ಇದು ಜಾರಿಯಾದರೆ ಹಾಲೋತ್ಪನ್ನ ನಂಬಿದ ಹೆಂಗಸರು ಮಕ್ಕಳು ಸಹಾ ಬೀದಿಗೆ ಬಂದು ನಿಲ್ಲುತ್ತಾರೆ. ತೋಟಗಳಲ್ಲಿ ಮೆಣಸು, ಏಲಕ್ಕಿ ಬೆಳೆಯುವ, ಗದ್ದೆ, ಹೊಲಗಳಲ್ಲಿ ಕಾಳುಕಡ್ಡಿ ಬೆಳೆಯುವ ಈರುಳ್ಳಿ, ಬೆಳ್ಳುಳ್ಳಿ ಕೀಳುವ ಜನ ಕಣ್ಣೀರು ಸುರಿಸುತ್ತಾರೆ. ಮೊದಲೇ ಕುಟುಕು ಜೀವದಲ್ಲಿರುವ ರೈತಾಪಿಯ ಕುತ್ತಿಗೆಯ ನೇಣಿದು. ಆಗಿನದು ಪಶ್ಚಿಮ ದೇಶಗಳ ನೇಣು. ಈಗಿನದು ಪೂರ್ವ ದೇಶಗಳ ನೇಣು. ಇದನ್ನು ಸರ್ಕಾರ ಎಳೆಯದಿರಲಿ! ಈ ತಡೆಯೇ ಪವಿತ್ರ ಆರ್ಥಿಕತೆ.

ರಾಜಕಾರಣವು ಬಡವರನ್ನು ರೈತರನ್ನು, ಕಾರ್ಮಿಕರನ್ನು ಮನುಷ್ಯರೆಂದೇ ಪರಿಗಣಿಸುತ್ತಿಲ್ಲ. ಇವರು ಬಡಿದು ಬಾಯಿಗೆ ಹಾಕಿಕೊಳ್ಳುವ ಹುಳುಗಳು. ದೇಶವು ಅವರ ತುಟಿಗೆ ನಾಟಿಬೀಡಿ ಹೊಗೆಸೊಪ್ಪು ಬದಲು ಸಿಗರೇಟು ಆಸೆ ತೋರಿಸಿ ಅದರೊಳಗೆ ಮತೀಯ ಅಫೀಮು ತುಂಬಿ ಗುಡಿಗುಡಿ ಸೇದಿಸುವ ಧೀರತೆಯಲ್ಲಿದೆ. ಪ್ರತಿ ರಾಜ್ಯಗಳು ಮನುನಿರ್ಮಿತ ಹಳೇ ಖಾಯಿಲೆಯ ಜಾತಿರಾಜಕಾರಣದಲ್ಲಿ ಪುನಃ ಕೃಷಿ ಮಾಡುತ್ತಿವೆ. ಈ ನಡುವೆ ಹೋರಾಟ ವಿರೋಧ ಎಲ್ಲವೂ ಸತ್ತು ಹೋಗಿವೆ. ಈ ಆಲೋಚನೆ ಮಾಡಿದರೆ ಸಾಕು ತಲೆ ಮೇಲೆ ಒನಕೆ ಏಟು ಬೀಳಲಾರಂಭಿಸಿವೆ. ಅಂದಿನ ರಾಜಕಾರಣವು ಸ್ವತಂತ್ರ ಹೋರಾಟಗಾರರನ್ನು ಗೌರವಿಸುತ್ತಿತ್ತು. ಇಂದು ಮನೆ ಮುರಿದು ದೇಶ ಮುರಿದು ಜೈಲಿನಿಂದ ಈಚೆಗೆ ಬರುವ ವೀರಾಧಿವೀರರಿಗೆ ಸಂಭ್ರಮದ ಸ್ವಾಗತ. ಇಂಥವರೇ ಎಲ್ಲೆಲ್ಲೂ ದೇಶದ ನೇತಾರರು. ಈಗ ನೋಡಿ ಆ ಗಿರಿಯಪ್ಪನ ಬಯಕೆ, ಗಾಂಧೀಜಿಯ ಚಿಂತನೆಗೆ ಹೊಂದಿಕೊಳ್ಳದೆ ಎಂಥಾ ಸ್ಥಿತಿಗಿಳಿದಿದೆ ಎಂದು.

ಮೊನ್ನೆ ಗಾಂಧಿ ಮಾರ್ಗದ ಪ್ರಸನ್ನ ದೇಶೀ ಉತ್ಪನ್ನ ಭದ್ರತೆಗಾಗಿ ಖಾದಿ ಕನವರಿಕೆಯಲ್ಲಿ ವಾರವಿಡೀ ಉಪವಾಸ ಕುಳಿತರು. ರಾಜಕಾರಣಿಗಳೇನೋ `ಆಯ್ತು ಬಿಡಿ ನಾವಿದ್ದೇವೆ’ ಎಂದು ನಿಂಬೆಹಣ್ಣು ರಸ ಕುಡಿಸಿ ಎಬ್ಬಿಸಿದರು. ದೇಶದ ಪರವಾಗಿ, ಬಡವರ ಪರವಾಗಿ ಪ್ರಸನ್ನ ಕೇಳುತ್ತಿರುವುದು ಅಧಿಕಾರವನ್ನಲ್ಲ; ಅಡಗಿಸಿಡುವ ಕೊಪ್ಪರಿಕೆ ಹಣವನ್ನಲ್ಲ, ಕೇವಲ ಗುಡಿ ಕೈಗಾರಿಕೆಗಳ ಮೇಲಿನ ಜಿ.ಎಸ್.ಟಿ. ವಿನಾಯ್ತಿ. ಇದರೊಡನೆ ದಾರಿಬಿಟ್ಟು ಮನೆಬಿಟ್ಟು ಅಡ್ಡಾಡುವ ಯುವ ಜನಾಂಗಕ್ಕೆ ಆಸರೆಯಾಗುವ ಗೃಹಕೈಗಾರಿಕೆಯ ಅಭಿವೃದ್ಧಿ.

ಇದು ಸಾಧ್ಯವೇ! ಜಗತ್ತು ಹಿಂಚಲಿಸಬಲ್ಲದೆ? ಎನ್ನುವವರುಂಟು. ಪ್ರಕೃತಿ ಮಾಡುತ್ತಿರುವ ರಣಗಾಯಕ್ಕೆ ಜಾಗತಿಕ ತಾಪಮಾನಕ್ಕೆ ಇದೇ ಮದ್ದು ಅಲ್ಲವೆ! ಹಾಗಾಗಿ ಪ್ರತೀ ಜಿಲ್ಲೆಯಲ್ಲಿ ಸಂಘಟಿಸಲಿರುವ ಪ್ರಸನ್ನ ಅವರ ಅಭಿಲಾಷೆಗೆ ಸಹಕರಿಸಬೇಕು. ಈ ನಂಬಿಕೆಯಲ್ಲಿ ಅವರು ಗ್ರಾಮವೊಂದರಲ್ಲಿ ಚರಕ ಸಂಸ್ಥೆ ಕಟ್ಟಿ ಐನೂರು ಸಾವಿರ ಜನಕ್ಕೆ ಜೀವನಾಧಾರ ಮಾಡಿಲ್ಲವೆ! ಇದು ಗಾಂಧೀಜಿಯ ಚರಕವು ಅಲ್ಲಲ್ಲಿ ನಾದ ಮಾಡುತ್ತಿರುವ ರೂಪಕ ಹೌದು.

Leave a Reply

Your email address will not be published.