ಗಾಂಧೀಜಿಯ ಹಿಂದ್ ಸ್ವರಾಜ್ ಜಾಗತೀಕರಣಕ್ಕೆ ಜವಾಬ್

ಜಾಗತೀಕರಣಕ್ಕೊಂದು ಗ್ಲಾಮರ್ ಇದೆ. ಅದು ಆಕರ್ಷಕವಾಗಿ ಕಾಣುವಲ್ಲಿ, ಶ್ರೀಮಂತ ಉದ್ಯಮಿಗಳ ಮತ್ತು ಅವರ ಹಿತ ಕಾಯುತ್ತಾ ಅಧಿಕಾರ ಚುಕ್ಕಾಣಿ ಹಿಡಿದಿರುವ ವ್ಯವಸ್ಥೆಯ ವಾರಸುದಾರರ ಬುದ್ಧಿಶಕ್ತಿಯಿದೆ. ಹಾಗಾಗಿ, ಇದರ ಹುಳುಕುಗಳನ್ನು ಗುರುತಿಸಿ ತಿರಸ್ಕರಿಸುವುದು ಅಷ್ಟು ಸುಲಭವಲ್ಲ.

ಸದ್ಯದ ಕೊರೊನ ವೈರಸ್ ಇಷ್ಟು ವ್ಯಾಪಕವಾಗಿ ಪ್ರಪಂಚದಾದ್ಯಂತ ಪಸರಿಸುವಂತಾಗಿದ್ದು ಜಾಗತೀಕರಣದಿಂದಾಗಿಯೇ. ಯಾಕೆಂದರೆ, ಜಗತ್ತೀಗ ಒಂದು ಗ್ರಾಮವಾಗಿವೆ. ಆದರೆ ಸಕಾರಾತ್ಮಕ ಬೆಳವಣಿಗೆಯೆಂದರೆ, ಮೊದಲ ಬಾರಿಗೆ ಜಾಗತೀಕರಣದ ಯಂತ್ರಗಳು ಸ್ತಬ್ಧವಾದಾಗ, ಇದರ ಇತಿಮಿತಿಗಳ ಸ್ಪಷ್ಟ ಅರಿವಾಗುತ್ತಿದೆ. ಮಾತ್ರವಲ್ಲ, ಚೀನಾದ ಉತ್ಪನ್ನಗಳು ದೇಶಿಯ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಪ್ರಾಬಲ್ಯ ಸಾಧಿಸಿದೆಯೆನ್ನುವುದರ ಸ್ವವಿಮರ್ಶೆಗೆ ಕಾಲಾವಕಾಶ ಕೊಟ್ಟು, ಸ್ವಾವಲಂಬನೆಯ ಜಾಗೃತಿ ಮೂಡುತ್ತಿದೆ.

ಈ ನಿಟ್ಟಿನಲ್ಲಿ ಸ್ವಾವಲಂಬನೆ ಆದರ್ಶ, ಆದರೆ ಜಾಗತೀಕರಣ ಅನಿವಾರ್ಯ ಕಟುವಾಸ್ತವ. ನಿಜವೇ? ಈ ಮಾತನ್ನು ಹಲವಾರು ವರ್ಷಗಳಿಂದ ವಿವಿಧ ಮೂಲಗಳಿಂದ ಕೇಳುತ್ತಾ, ಸಂಪೂರ್ಣವಾಗಿ ಒಪ್ಪಿಕೊಳ್ಳುವ ಹಂತಕ್ಕೆ ಪ್ರಭಾವಶಾಲಿ ಕಾರ್ಪೊರೇಟ್ ಜಗತ್ತು ನಮ್ಮನ್ನು ತಂದಿರಿಸಿದೆ. ಯಾಕೆಂದರೆ, ಯಾವುದೇ ಸುಳ್ಳನ್ನು ಪುನರಾವರ್ತನೆ ಮಾಡಿದಷ್ಟು ಸತ್ಯವಾಗಿ ಕಾಣಿಸಲಾರಂಭಿಸುತ್ತದೆ. ಇದು ಜಾಹೀರಾತುಗಳ ಯುಗ. ಜಾಗತೀಕರಣದ ಲಾಭ ಪಡೆಯುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮ ಉತ್ಪಾದನೆಯನ್ನು ತುರ್ತು ಅಗತ್ಯವೆಂದು ಹೇಗೆ ಆಕರ್ಷಕವಾಗಿ ಗ್ರಾಹಕರ ಮುಂದಿಟ್ಟು ಖರೀದಿಸುವ ಮಾನಸಿಕ ಒತ್ತಡ ಮೂಡಿಸಬೇಕೆಂದು ಗೊತ್ತು.

ಈ ರೀತಿ ಮಾರುಕಟ್ಟೆಗಳಲ್ಲಿ ಏಕಸ್ವಾಮ್ಯತೆ ಸಾಧಿಸಿರುವ ಕಂಪನಿಗಳ ಹಣದ ಪ್ರಭಾವವೆಷ್ಟಿದೆಯೆಂದರೆ, ಗುಣಾತ್ಮಕ ಅಂಶಗಳಷ್ಟೇ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳುತ್ತವೆ. ಉದಾಹರಣೆಗೆ, ಹೊಸ ಉದ್ಯೋಗಗಳ ಸೃಷ್ಟಿ, ಗ್ರಾಹಕರಿಗೆ ಆಯ್ಕೆಗಳಲ್ಲಿ ವೈವಿಧ್ಯ, ಸ್ಪರ್ಧಾತ್ಮಕ ಬೆಲೆ, ಇಲ್ಲದ ಮಧ್ಯವರ್ತಿಗಳ ಹಾವಳಿ, ತಂತ್ರಜ್ಞಾನದಿAದಾಗಿ ವಸ್ತುಗಳ ಗುಣಮಟ್ಟ ಸುಧಾರಣೆ ಇತ್ಯಾದಿ. ಆದರೆ, ಜಾಗತೀಕರಣದಿಂದಾಗಿ ಸದ್ದಿಲ್ಲದೇ ನಶಿಸುತ್ತಿರುವ ಗುಡಿ ಕೈಗಾರಿಕೆ, ಸಾಂಪ್ರದಾಯಿಕ ಉದ್ಯೋಗ ನಷ್ಟ, ಕ್ಷೀಣಿಸುತ್ತಿರುವ ಸಣ್ಣ ಉದ್ಯಮಗಳು, ಏಕಸ್ವಾಮ್ಯದಿಂದಾಗಿ ಅಸಮತೋಲನವಾಗಿರುವ ಮಾರುಕಟ್ಟೆ, ಕಣ್ಮರೆಯಾಗುತ್ತಿರುವ ಮಧ್ಯಮವರ್ಗ, ಬಡವ ಮತ್ತು ಶ್ರೀಮಂತರ ಮಧ್ಯೆ ಹೆಚ್ಚುತ್ತಿರುವ ಆದಾಯದ ಅಂತರ, ಮಣ್ಣಿನ ಸಂಸ್ಕೃತಿ ನಾಶ, ಪ್ರಾಕೃತಿಕ ಸಂಪನ್ಮೂಲಗಳ ಬೃಹತ್ ಹಗಲು ದರೋಡೆ, ನಾಶವಾಗುತ್ತಿರುವ ಕಾರ್ಮಿಕ ಹಕ್ಕುಗಳು ಮತ್ತು ಭದ್ರತೆ ಇತ್ಯಾದಿಗಳ ಚರ್ಚೆ ನಡೆಯುತ್ತಿಲ್ಲ.

ಒಂದು ಮಾತಿನಲ್ಲಿ ಹೇಳುವುದಾದರೆ, ನಾವು ಇವುಗಳು ಬಿಂಬಿಸುವಂತೆ ‘ಗ್ರಾಹಕನೇ ರಾಜ’ನೆಂದು ಭ್ರಮಿಸಿ, ರಾಜರಂತೆ ಅನಗತ್ಯ ವಸ್ತುಗಳನ್ನು ಖರೀದಿಸಿ (ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಉಪಯೋಗಿಸಿ), ಉದ್ಯಮಿಗಳನ್ನು ರಾಜರನ್ನಾಗಿಸುತ್ತೇವೆ. ಒಟ್ಟಿನಲ್ಲಿ, ಜಾಗತಿಕರಣವೆನ್ನುವುದು ಆಧುನಿಕ ಕಾಲದ ಮಾರುಕಟ್ಟೆ ವಸಾಹತು. ಇದರ ಅಡಿಪಾಯ ಆರ್ಥಿಕ ನೀತಿ. ಇದರ ಫಲವಾಗಿ, ಬಹುರಾಷ್ಟ್ರೀಯ ಕಂಪನಿಗಳು ಎಷ್ಟರಮಟ್ಟಿಗೆ ಬೆಳೆದಿವೆಯೆಂದರೆ, ಇವು ಸರಕಾರಗಳನ್ನು ಉರುಳಿಸಬಲ್ಲವು, ತಮಗನುಕೂಲವಾದ ಸರಕಾರವನ್ನು ಅಧಿಕಾರಕ್ಕೆ ತರಬಲ್ಲವು, ತಮ್ಮ ಉತ್ಪನ್ನಗಳನ್ನು ಖರೀದಿಸುವಂತೆ ಸರಕಾರಗಳ ಮೇಲೆ ಒತ್ತಡ ಹೇರಬಲ್ಲವು, ಪ್ರತಿಸ್ಪರ್ಧಿ ಕಂಪನಿಗಳನ್ನು ನಷ್ಟಕ್ಕೆ ತಳ್ಳಿ ಅವುಗಳನ್ನು ಖರೀದಿಸಿ ಏಕಸ್ವಾಮ್ಯ ಸಾಧಿಸಬಲ್ಲವು, ತಮಗನುಕೂಲವಾಗುವಂತಹ ಕಾನೂನನ್ನು ಜಾರಿಗೆ ತರಬಲ್ಲವು, ಅಥವಾ ಮಾಧ್ಯಮಗಳನ್ನು ಖರೀದಿಸಿ ತಮ್ಮನ್ನು ಸಮಾಜಮುಖಿಗಳಂತೆ ಬಿಂಬಿಸಿಕೊಳ್ಳಬಲ್ಲವು. ಇವುಗಳ ಪ್ರಾಬಲ್ಯದಿಂದಾಗಿ ಮಾರುಕಟ್ಟೆ ಅಸಮತೋಲನವಾಗಿ, ಸಣ್ಣ ಉದ್ಯಮಗಳು ಸ್ಪರ್ಧಿಸಲಾಗದೆ ಮುದುಡಿ ಹೋಗುತ್ತವೆ. ಈ ನಿಟ್ಟಿನಲ್ಲಿ, ಜಾಗತೀಕರಣದ ಮುಕ್ತ ಮಾರುಕಟ್ಟೆ, ನಿಜಾರ್ಥದಲ್ಲಿ ಮುಕ್ತವಾಗಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಯಶಸ್ವಿಯಾಗುವವರು, ಡಾರ್ವಿನ್‌ರ ನೈಸರ್ಗಿಕ ಆಯ್ಕೆಯ ಸಿದ್ಧಾಂತದAತೆ ಬಲಿಷ್ಠರು ಮಾತ್ರ. ಇದೆ, ನಮ್ಮ ಸ್ಟಾರ್ಟ್ ಅಪ್ ಕಂಪನಿಗಳು ಅನುಭವಿಸುತ್ತಿರುವ ಗೋಳು.

ಐತಿಹಾಸಿಕವಾಗಿ ಜಾಗತೀಕರಣವನ್ನು ವಿಶ್ಲೇಷಿಸಿದರೆ, ಶೀತಲ ಸಮರದ ಅಂತ್ಯದ ನಂತರ 1990ರ ದಶಕದಲ್ಲಿ ಶೀಘ್ರವಾಗಿ ಪಸರಿಸಿದ ಜಾಗತೀಕರಣ, ವಿಶೇಷವಾಗಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ, ಆರ್ಥಿಕ ಬೆಳವಣಿಗೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಿತು. ವಿಷಾದವೆಂದರೆ, ಈ ಬೆಳವಣಿಗೆಯ ಪಾಲಲ್ಲಿ ಕಾರ್ಮಿಕರ ಆದಾಯ ಭದ್ರತೆ ಹಂಚಿಹೋಗಿದೆ ಮತ್ತು ಕಂಪನಿಗಳ ಲಾಭ ಮಾತ್ರ ಕ್ರೋಡೀಕರಣಗೊಂಡಿದೆ.

ಈ ಹಿನ್ನೆಲೆಯಲ್ಲಿ, ಪ್ರಸ್ತುತ ವೈರಸ್ ದಾಳಿಯ ಮೊದಲೇ ಆರ್ಥಿಕ ಉದಾರೀಕರಣವನ್ನು ಪ್ರಶ್ನಿಸಲು ದೇಶಗಳು ಮುಂದಾಗಿದ್ದವು. ಇದಕ್ಕೆ ಸಾಕ್ಷಿಯಂತೆ, ಇತ್ತೀಚಿನ ವರ್ಷಗಳಲ್ಲಿ ‘ರಾಷ್ಟ್ರೀಯತೆ’ ಚುನಾವಣಾ ವಿಷಯವಾಗಿದ್ದು, ಈ ಸಿದ್ಧಾಂತಕ್ಕೆ ಪೂರಕವಾದ ಸರಕಾರಗಳು ಅಧಿಕಾರಕ್ಕೆ ಬರುತ್ತಿವೆ. ಈ ಪಲ್ಲಟಕ್ಕೆ ಪ್ರಮುಖ ಕಾರಣಗಳೆಂದರೆ; ಜಾಗತೀಕರಣವು ರಾಷ್ಟ್ರ ಪರಿಕಲ್ಪನೆಯನ್ನು ದುರ್ಬಲಗೊಳಿಸಿದ್ದು, ಅಸಮಾನತೆ ಹೆಚ್ಚಿಸಿದ್ದು, ದಿವಾಳಿಯಾದ ಉದ್ಯಮಿಗಳು ತೆರಿಗೆ ವಂಚಿಸಿ ಪಲಾಯನ ಮಾಡುತ್ತಿರುವುದು, ಅಥವಾ ಉದ್ಯೋಗನಿಮಿತ್ತ ವಲಸೆಗಳಿಂದಾಗಿ ಮಣ್ಣಿನ ಮಕ್ಕಳಲ್ಲಿ ಅಭದ್ರತೆ ಹೆಚ್ಚಾಗುತ್ತಿರುವುದು. ಇದಲ್ಲದೆ, ಜಾಗತೀಕರಣದ ದೆಸೆಯಿಂದ, ಯಾವುದೋ ಪ್ರದೇಶದಲ್ಲಿ ನಡೆಯುವ ಘಟನೆ/ದುರಂತದ ಪರಿಣಾಮ ವಿಶ್ವವ್ಯಾಪಿ ಪಸರಿಸುತ್ತದೆ. ಉದಾಹರಣೆಗೆ, ಒಂದು ದೇಶದ ಆರ್ಥಿಕ ಕುಸಿತದ ಬಿಸಿ ವಿಶ್ವ ಆರ್ಥಿಕತೆಗೆ ತಟ್ಟುತ್ತದೆ.

ಪ್ರಸಕ್ತ, ಜಾಗತೀಕರಣದ ವಕ್ತಾರರಿಗೆ ಒಂದು ವಿಷಯ ಮನದಟ್ಟಾಗಬೇಕಿದೆ. ಇದುವರೆಗೆ, ಜಾಗತೀಕರಣ ಪ್ರಜಾಸತ್ಮಾತ್ಮಕವಾಗಿದ್ದು. ಬಡಜನರನ್ನು ನಿಧಾನವಾಗಿ ಮಧ್ಯಮವರ್ಗಕ್ಕೆ ಮೇಲೆತ್ತುತ್ತಿದೆ, ಮಾತ್ರವಲ್ಲ, ಮಧ್ಯಮವರ್ಗಗಳ ಆದಾಯ ಹೆಚ್ಚಳದೊಂದಿಗೆ ಜೀವನಮಟ್ಟ ಸುಧಾರಿಸುತ್ತಿದೆ ಎಂದು ಬಿಂಬಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಮಧ್ಯಮವರ್ಗ ನಿಧಾನವಾಗಿ ಕಣ್ಮರೆಯಾಗುತ್ತಿದೆ. ನಿರೀಕ್ಷಿತ ಜೀವನಮಟ್ಟ ಮೇಲೇರಿದಂತೆ, ಉಳ್ಳವರು ಮತ್ತು ಇರದವರ ಅಂತರ ಹೆಚ್ಚಾಗುತ್ತಿದೆ. ಮುಖ್ಯವಾಗಿ, ದುಬಾರಿಯಾಗುತ್ತಿರುವ ವಿದ್ಯಾಭ್ಯಾಸ ವೆಚ್ಚ, ಆರೋಗ್ಯ ರಕ್ಷಣೆ ಮತ್ತು ಗೃಹ ನಿರ್ಮಾಣದಿಂದಾಗಿ, ಮಧ್ಯಮ ವರ್ಗ ಕೆಳಗೆ ತಳ್ಳಲ್ಪಡುತ್ತಿದೆ. ಇನ್ನೊಂದು ಗಮನಾರ್ಹ ವಿಚಾರವೆಂದರೆ, ಜಾಗತೀಕರಣದ ಉತ್ಪನ್ನಗಳ ಮಾರುಕಟ್ಟೆಯ ಸೆಳೆತ ಎಷ್ಟಿದೆಯೆಂದರೆ, ಅನಗತ್ಯ ದುಬಾರಿ ವಸ್ತುಗಳನ್ನು ಕೊಳ್ಳುವ ಚಟಕ್ಕೆ ಬಿದ್ದು ಜೀವನ ಪರ್ಯಂತ ಸಾಲಗಾರರಾಗಿಯೇ ಉಳಿಯುತ್ತೇವೆ. ಮಾತ್ರವಲ್ಲ, ಜೀವನದ ಸಣ್ಣಪುಟ್ಟ ಖುಷಿಗಳಿಂದ ವಿಮುಖರಾಗಿ, ಸಿಗದ ವಸ್ತುವಿನ ಹಂಬಲದಲ್ಲಿ ಕಳೆದುಹೋಗುತ್ತೇವೆ.

ಜವಾಹರಲಾಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹಿಮಾಂಶು ಹೇಳುವಂತೆ, ‘ನಮ್ಮ ಭಾರತೀಯ ಸಮಾಜ ಮೊದಲೇ ಜಾತಿ, ಧರ್ಮ, ಪ್ರಾಂತ್ಯ ಮತ್ತು ಲಿಂಗ ಭೇದಗಳಿಂದ ಒಡೆಯಲ್ಪಟ್ಟಿದ್ದು, ಇದರೊಂದಿಗೆ ಜಾಗತೀಕರಣ ಸೇರಿ, ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಇನ್ನೂ ಹೆಚ್ಚು ಮಾಡಿದೆ.’ ಸಧ್ಯಕ್ಕೆ, ಭಾರತದ 77% ಸಂಪತ್ತು, ಕೇವಲ 10% ಶ್ರೀಮಂತರ ಕೈವಶದಲ್ಲಿದೆ. 2019ರ ಆಕ್ಸ್ಫ್ಯಾಮ್ ಸರ್ವೇ ಪ್ರಕಾರ, ಕೇವಲ 26 ಮಂದಿ ಆಗರ್ಭ ಶ್ರೀಮಂತರು ವಿಶ್ವದ 50% ಸಂಪತ್ತಿನ ಒಡೆಯರಾಗಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದರೆ, ಈ ರೀತಿ ಸಂಪತ್ತು ಕ್ರೋಡೀಕರಿಸಿಕೊಂಡ ಶ್ರೀಮಂತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಅಂದರೆ, ಜಗತ್ತಿನ ಸಂಪತ್ತು ಕಡಿಮೆ ವ್ಯಕ್ತಿಗಳಲ್ಲಿ ಶೇಖರಣೆಯಾಗುತ್ತಿದೆ. ಆಕ್ಸ್ಫ್ಯಾಮ್ ಇಂಡಿಯಾ ಮುಖ್ಯಸ್ಥೆ ನಿಶಾ ಅಗರ್ವಾಲ್ ಹೇಳುವಂತೆ, ‘ಕಾರ್ಮಿಕರು ಮತ್ತು ರೈತರು, ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಎರಡು ಹೊತ್ತಿನ ಊಟ ಅಥವಾ ಔಷಧಿ ಖರೀದಿಸಲು ಕಷ್ಟಪಡುತ್ತಿದ್ದಾರೆ. ಉಳ್ಳವರ ಮತ್ತು ಇರದವರ ಈ ಅಂತರ ಪ್ರಜಾಪ್ರಭುತ್ವ ವಿರೋಧಿ, ಮಾತ್ರವಲ್ಲ, ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತೆ.’

ಈ ಸ್ಥಿತಿಯಲ್ಲಿ, ಜಾಗತೀಕರಣದ ಅಪಾಯಗಳ ಅರಿವಿನ ನಡುವೆ, ಇದಕ್ಕಿರುವ ಪ್ರಭಾವ ಮತ್ತು ಅಧಿಕಾರದಿಂದ ಬಿಡಿಸಿಕೊಂಡು ಸ್ವಾವಲಂಬನೆಗೆ ಜನರನ್ನು ಪ್ರೇರೇಪಿಸುವ ಸಾಧ್ಯತೆಯಿದೆಯೇ? ಅವುಗಳು ಕ್ಯಾರೆನ್ನದೆ ಪರಿಸರ ಕಾಯ್ದೆಗಳು, ಕೃಷಿ ಭೂಮಿಯ ದುರ್ಬಳಕೆ, ಬೆಲೆಯಿಲ್ಲದ ರೈತರ ಪ್ರತಿಭಟನೆ, ಹಾಗು ಸಿಗದ ಉದ್ಯೋಗ ಭದ್ರತೆಗಳಿಗೆ ಮನ್ನಣೆ ದೊರಕಿಸಲು ಸಾಧ್ಯವೇ? ಇದಕ್ಕೆ ಉತ್ತರ, 1909ರಲ್ಲಿ ಗಾಂಧೀಜಿ ಬರೆದ ‘ಹಿಂದ್ ಸ್ವರಾಜ್’.

ಸಧ್ಯ, ಕೊರೊನದಿಂದಾಗಿ ಲಕ್ಷಾಂತರ ಮಂದಿಯ ಹಳ್ಳಿಗಳಿಗೆ ಮರುವಲಸೆ ಪ್ರಕ್ರಿಯೆ, ಗಾಂಧೀಜಿಯ ಗ್ರಾಮಸ್ವರಾಜ್ ಪರಿಕಲ್ಪನೆಗೆ ಮತ್ತೆ ಜೀವಕೊಟ್ಟಿದೆ. ಹಾಗಿದ್ದಲ್ಲಿ, ರಸ್ಕಿನ್, ಟಾಲ್ಸ್ ಟಾಯ್ ಮತ್ತು ಥೋರೋ ಜೀವನದೃಷ್ಟಿಯಿಂದ ಪ್ರೇರಿತರಾಗಿ ಬರೆದ, ‘ಹಿಂದ್ ಸ್ವರಾಜ್’, ಸ್ವರಾಜ್ಯದ ಪರಿಕಲ್ಪನೆಯನ್ನು ಹೇಗೆ ವಿವರಿಸುತ್ತದೆ?

ಮೊದಲನೆಯದಾಗಿ, ಆ ಕಾಲಘಟ್ಟದ ತೀವ್ರಗಾಮಿ ರಾಷ್ಟ್ರೀಯತೆ ಪ್ರತಿಪಾದಿಸುತ್ತಿದ್ದ ಹಿಂಸೆಗೆ ಉತ್ತರವಾಗಿ ಮತ್ತು ತಾನು ಗುಜರಾತಿಗೆ ಭಾಷಾಂತರಿಸಿದ ಟಾಲ್ಸ್ ಟಾಯ್ ಪತ್ರದಲ್ಲಿ ಉಲ್ಲೀಖಿಸಿದ ‘ಅಹಿಂಸೆಯ ಹಾದಿಯ ಅಗತ್ಯ’ದಿಂದ ಪ್ರೇರಿತರಾದ ಗಾಂಧೀಜಿಗೆ, ತನ್ನ ದೇಶಕ್ಕೊಂದು ಭವಿಷ್ಯದ ಮಾರ್ಗಸೂಚಿ ಕೊಡಬೇಕೆನಿಸಿತು. ವಿಶೇಷವೆಂದರೆ, ಇದನ್ನವರು ಒಂದು ಸಂಭಾಷಣೆಯ ರೂಪದಲ್ಲಿ (ಒಂದು ಪತ್ರಿಕೆಯ ಸಂಪಾದಕ ಮತ್ತು ಓದುಗನ ನಡುವಿನ) ಬರೆದರು. ಇದರಲ್ಲಿ ಸಿದ್ಧಾಂತದ ಹೇರಿಕೆಯಿಲ್ಲ. ಬದಲಾಗಿ, ಬ್ರಿಟಿಷರು ಪರಿಚಯಿಸುತ್ತಿರುವ ಆಧುನಿಕತೆಗೆ ಪ್ರತಿಯಾದ ಆರ್ಥಿಕ ನೀತಿಯ ಮುಕ್ತಚರ್ಚೆ ಮತ್ತು ವಿಭಿನ್ನ ಸಂದೇಶ ರವಾನಿಸುವ ಜಿಜ್ಞಾಸೆಯಿದೆ.  ಅಂದರೆ, ಇದರ ವಿಶ್ಲೇಷಣೆ ಮತ್ತು ಪರಿಗಣನೆ ಓದುಗರಿಗೆ ಬಿಟ್ಟಿದ್ದು ಎನ್ನುವ ಸ್ವಾತಂತ್ರ÷್ಯವೂ ಇದೆ. 

ಇದರಲ್ಲಿ ಗಾಂಧೀಜಿ ಹೇಳುವಂತೆ, ಆಧುನಿಕ ನಾಗರಿಕತೆ ಪೈಶಾಚಿಕವಾದುದು. ಇದು ವ್ಯಕ್ತಿಯ ಆಂತರಿಕ ಬೆಳವಣಿಗೆ ಕುಂಠಿತಗೊಳಿಸುತ್ತದೆ. ತದ್ವಿರುದ್ಧವಾಗಿ, ಬಾಹ್ಯ ಶೃಂಗಾರದಲ್ಲಿಯೇ ವ್ಯಕ್ತಿಯ ಗಮನ ಕೇಂದ್ರೀಕರಿಸುತ್ತದೆ. ಇದರ ಫಲಶ್ರುತಿಯಾಗಿ, ಅನಿಯಂತ್ರಿತ ಉತ್ಪಾದನೆ ಹಾಗು ಗ್ರಾಹಕ ಸಂಸ್ಕೃತಿ   ಊರ್ಜಿತವಾಗುತ್ತದೆ. ಇದು ಪರಿಸರವನ್ನು ಬರಿ ಕಚ್ಚಾಸಾಮಗ್ರಿಯಂತೆ ನೋಡುತ್ತದೆ ಮತ್ತು ಸಾಂಪ್ರದಾಯಕ ಉದ್ಯೋಗಗಳನ್ನು ಬೇರುಸಹಿತ ಕಿತ್ತುಹಾಕುತ್ತದೆ. ಇಂತಹ ಪಲ್ಲಟಗಳು, ಮನಸ್ಸು ಮತ್ತು ಕೆಲಸದ ನಡುವೆ ಪರಕೀಯತೆ ತಂದು ಮನುಷ್ಯನನ್ನು ಯಾಂತ್ರಿಕಗೊಳಿಸುತ್ತದೆ. ಮಾತ್ರವಲ್ಲ, ಗ್ರಾಹಕರು ಮತ್ತು ಉತ್ಪಾದನೆಯ ನಡುವೆ ಅಂತರ ಏರ್ಪಡಿಸುತ್ತದೆ. ಮುಖ್ಯವಾಗಿ, ಒಂದು ಪ್ರದೇಶದಲ್ಲಿ ತಳವೂರಿದ್ದ ಜನರನ್ನು ‘ಅಭಿವೃದ್ಧಿ’ಯ ಹೆಸರಲ್ಲಿ ಸ್ಥಳಾಂತರಿಸುತ್ತದೆ. ಇದರಿಂದ, ಆ ಮಣ್ಣಿನ ಸಂಸ್ಕೃತಿ ನಾಶವಾಗುತ್ತದೆ.

ವಿಶೇಷವೆಂದರೆ, ಗಾಂಧೀಜಿ ಆಧುನಿಕತೆಯ ಎಲ್ಲ ಅಂಶಗಳನ್ನು ತ್ಯಜಿಸುವುದಿಲ್ಲ. ಆಧುನಿಕತೆ, ಹಲವು ಉತ್ತಮ ವಿಚಾರಗಳಾದ ನಾಗರಿಕ ಸ್ವಾತಂತ್ರ್ಯದ ಹಕ್ಕು, ಸಮಾನತೆ, ನೈರ್ಮಲ್ಯ, ಬಡವರ ಆರ್ಥಿಕ ಪರಿಸ್ಥಿತಿ ಸುಧಾರಣೆ, ದುಡಿಮೆಯ ಶ್ರೇಷ್ಠತೆ, ಮಹಿಳಾ ಸಬಲೀಕರಣ ಇತ್ಯಾದಿಗಳನ್ನು ಉಡುಗೊರೆ ಕೊಟ್ಟಿದೆ. ಆದರೆ, ಗ್ರಾಹಕೀಕರಣದಿಂದ ಬಾಹ್ಯವಸ್ತುಗಳಿಗೆ ಮಹತ್ವ ಕೊಟ್ಟಷ್ಟು ಆಂತರಿಕ ಸ್ವಾತಂತ್ರ್ಯ ಕಳೆದುಕೊಳ್ಳುತ್ತೇವೆ ಎನ್ನುವುದು ಗಾಂಧೀಜಿಯ ಕಳಕಳಿ. ವಿಶೇಷವಾಗಿ, ಗಾಂಧೀಜಿಯ ಈ ಅವಲೋಕನ ಪ್ರಸ್ತುತ ಸಂದರ್ಭದಲ್ಲಿ ಮಹತ್ವ ಪಡೆಯುತ್ತದೆ; ಆಧುನಿಕತೆಯ ಬಳುವಳಿಯಾದ ವಲಸೆಯಿಂದಾಗಿ ಸಾಂಕ್ರಾಮಿಕ ರೋಗಗಳು ತ್ವರಿತವಾಗಿ ಹರಡುತ್ತವೆ. ಉದಾಹರಣೆಗೆ, ಬಿಳಿ ಜನಾಂಗೀಯರ ಪ್ರವೇಶ ಮತ್ತು ಸಂಪರ್ಕದಿಂದಾಗಿ, ಅಮೆರಿಕದಲ್ಲಿದ್ದ ಮೂಲನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸತ್ತರು. ಇಲ್ಲಿ, ಗಾಂಧೀಜಿಯ ಉದ್ದೇಶ ಆಧುನಿಕತೆಗೆ ಪರ್ಯಾಯ ಮಾರ್ಗವನ್ನು ಸಾರ್ವಜನಿಕ ವಲಯದಲ್ಲಿ ಮುಕ್ತ ಚರ್ಚೆಗಾಗಿ ನೀಡುವುದಾಗಿತ್ತು.

ಈ ದೆಸೆಯಲ್ಲಿ, ಜಾಗತೀಕರಣಕ್ಕೆ ಪರ್ಯಾಯವನ್ನು ಕಂಡುಹಿಡಿಯಬೇಕಾದ ಅನಿವಾರ್ಯತೆ, ಹಾಗು ಸ್ವಾವಲಂಬನೆಯ ರೂಪುರೇಷೆಗಳನ್ನು ಮುಕ್ತವಾಗಿ ಚರ್ಚಿಸಿ ನಿರೂಪಿಸುವ ಕಾರ್ಯ ನಡೆಯಬೇಕಿದೆ. ನಾಮಕಾವಸ್ತೆ ಅಧಿಕಾರದಲ್ಲಿರುವ ಗ್ರಾಮ ಪಂಚಾಯತಿಗಳಿಗೆ ನಿಜಾರ್ಥದಲ್ಲಿ ಶಕ್ತಿ ತುಂಬಬೇಕಿದೆ. ಉದ್ಯೋಗಕ್ಕಾಗಿ ನಗರಗಳ ಅತಿಯಾದ ಅವಲಂಬನೆಯ ಬದಲಾಗಿ, ಉದ್ಯಮಗಳು ಹಳ್ಳಿಗಳತ್ತ ಮುಖ ಮಾಡಬೇಕಾಗಿದೆ. ಇದಕ್ಕಾಗಿ ಹಳ್ಳಿಗಳ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಗೊಳಿಸಬೇಕಾಗಿದೆ. ವಿಶೇಷವಾಗಿ, ಸಣ್ಣ ಉದ್ಯಮಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಸರಕಾರದಿಂದ ಉತ್ತೇಜನ ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಸಿಗಬೇಕಾಗಿದೆ. ಕೊನೆಯದಾಗಿ, ನಮ್ಮ ಆದ್ಯತೆಗಳ ಪಲ್ಲಟವಾದಷ್ಟು (ಬಾಹ್ಯ ಆಡಂಬರದಿಂದ ಆಂತರಿಕ ಗುಣಮಟ್ಟ ಅಭಿವೃದ್ಧಿ), ಸಾರ್ವಜನಿಕ ವಲಯದಲ್ಲಿ ಸ್ವಾವಲಂಬನೆಗೆ ಬೆಲೆ ಮತ್ತು ಗೌರವ ಹೆಚ್ಚುತ್ತದೆ.

*ಲೇಖಕರು ಸಹಾಯಕ ಪ್ರಾಧ್ಯಾಪಕರು, ಆಂಗ್ಲ ಭಾಷಾ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ.

*

Leave a Reply

Your email address will not be published.