ಗಾಂಧೀಜಿ ಮುಕ್ತ ಎಂದರೂ ಅಚ್ಚರಿಯಿಲ್ಲ!

-ಡಾ.ಟಿ.ಗೋವಿಂದರಾಜು

ಮುಖ್ಯಚರ್ಚಾ ವಿಷಯದ ಶೀರ್ಷಿಕೆಯ ಉದ್ದೇಶವೇ ಪ್ರಶ್ನಾರ್ಹವಾಗಿದೆ. ಕಾಂಗ್ರೆಸ್‍ಮುಕ್ತ ಭಾರತ ಎಂಬುದು ಬಿಜೆಪಿಯ ಜನ್ಮಾಂತರದ ಕನಸು. ಕ್ಷತ್ರಿಯರ ನಿರ್ವಂಶಕ್ಕಾಗಿಯೇ ಪರಶುರಾಮ, ಜನಾನುರಾಗಿ ಬಲಿಯನ್ನು ದೇಶ ಬಿಟ್ಟು ಓಡಿಸುವುದಕ್ಕಾಗಿಯೆ ವಾಮನ, ಶಿವಭಕ್ತ ಅಸುರರ ನಿರ್ನಾಮ ಮಾಡಿ ತನ್ನ ಭಕ್ತರನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಇತರ ಅವತಾರಗಳನ್ನು ವಿಷ್ಣು ತಾಳಿದಂತೆ ಕಾಂಗ್ರೆಸ್ ಅನ್ನು ನಿರ್ನಾಮ ಮಾಡುವುದಕ್ಕಾಗಿಯೇ ಬಿಜೆಪಿ ಹುಟ್ಟಿದಂತೆ ವರ್ತಿಸುತ್ತಿದೆ.

ಕಾಂಗ್ರೆಸ್ ಇಲ್ಲವಾದರೆ ಕೇವಲ ಬಿಜೆಪಿಯ ನಿರಂಕುಶ ಆಡಳಿತಕ್ಕೆ ಅನುಕೂಲ ಆಗುವುದರ ಹೊರತಾಗಿ ಜನಸಾಮಾನ್ಯರಿಗೆ ಅಲ್ಲ ಎಂಬುದನ್ನು ಈಗಾಗಲೆ ಸರಕಾರ ತನ್ನ ವರ್ತನೆ, ಕಾನೂನು ಬದಲಾವಣೆಗಳಿಂದ ಮಾಡಿ ತೋರಿಸಿದೆ. `ಕಾಂಗ್ರೆಸ್ ಮುಕ್ತ ಭಾರತ ಅನಿವಾರ್ಯವೇ?’ ಎಂಬ ಪ್ರಶ್ನೆಯಲ್ಲಿ ಪತ್ರಿಕೆಯೂ ಅದೇ ಉದ್ದೇಶಕ್ಕೆ ಮುಂದುವರೆದಿದೆ ಎಂಬರ್ಥ ಬರುತ್ತದೆ. `ಸದ್ಯಕ್ಕೆ ಬೇಡವೇ?’ ಎಂಬಲ್ಲಿಯೂ, ಈಗಲ್ಲದಿದ್ದರೂ ನಾಳೆಯಾದರೂ ಅದು ತೊಲಗಲೇ ಬೇಕೆಂಬ ಇಂಗಿತವನ್ನು ತೋರಿದೆ. ಬದಲಿಗೆ, `ಬಿಜೆಪಿ ಮುಕ್ತ ಭಾರತ ಅನಿವಾರ್ಯವೇ?’ ಎಂಬ ಶೀರ್ಷಿಕೆ ನೀಡಿದ್ದರೆ ಅದಕ್ಕೆ ಸಮರ್ಥನೆ ಸಿಗುತ್ತಿತ್ತು.

ಅಷ್ಟಕ್ಕೂ ಕಾಂಗ್ರೆಸ್ ಏಕೆ ತೊಲಗಬೇಕು? ಕೇವಲ ಅದರ ವಂಶಾಡಳಿತವೇ ದೊಡ್ಡ ಸಮಸ್ಯೆಯೇ? ನಿಜ, ಅಧಿಕಾರ ಕೆಲವು ಹಿತಾಸಕ್ತರ ವಶ ಎಲ್ಲಿಯೂ ಆಗಬಾರದು. ಹಾಗಿದ್ದರೆ, ಕಾಂಗ್ರೆಸ್‍ನ ದೋಷವನ್ನು ಎತ್ತಿ ತೋರುವ ಇತರ ಪಕ್ಷಗಳು ಮಾಡುತ್ತಿರುವುದೇನು? ವಂಶಾಡಳಿತವನ್ನು ಅವರೂ ಅಧಿಕೃತ ಆದರ್ಶ ಮಾಡಿಕೊಂಡಿದ್ದಾರಲ್ಲಾ! ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ ಬಿಜೆಪಿ ಬಲಾಢ್ಯರಿಗೆ ಕೇವಲ ಕರ್ನಾಟಕದಲ್ಲಿನ ತನ್ನ ಪಕ್ಷದ ಮುಖಂಡರ ವಂಶಾಡಳಿತ ಪದ್ಧತಿಯ ತೊಡೆ ಮುರಿಯುವ ತಾಕತ್ತಿಲ್ಲವಲ್ಲಾ, ಏಕೆ?

ಅಂದರೆ, ಬಿಜೆಪಿ ಕೇವಲ ನೆಹರೂ ಕುಟುಂಬದ ಜನಾನುರಾಗಿತನವನ್ನು ವಂಶಾಡಳಿತ ನೆವದಲ್ಲಿ ವಿರೋಧಿಸುತ್ತಿದೆಯೇ ಹೊರತು ಎಲ್ಲರ ವಂಶಾಡಳಿತವನ್ನು ಅಲ್ಲ. ನೆಹರೂ ಕುಟುಂಬವಾಗಲೀ, ಕಾಂಗ್ರೆಸ್, ದಳದ ಇತರ ಪ್ರಧಾನಿಗಳಾಗಲೀ ಈ ದೇಶಕ್ಕೆ ಮಾಡಿರುವ ದ್ರೋಹವಾದರೂ ಏನು? ಬಿಜೆಪಿ ಹೇಳುವ ಮುಸ್ಲಿಂ, ಕಾಶ್ಮೀರ ಹಾಗೂ ಭ್ರಷ್ಟಾಚಾರದ ವಿಚಾರಗಳನ್ನು ಹೊರಗಿಟ್ಟು ನೋಡಿದರೆ, ನೆಹರೂ ಕುಟುಂಬದವರಾಗಲೀ ಶಾಸ್ತ್ರಿ, ಸಿಂಗ್ ಮೊದಲಾದವರಾಗಲೀ ಯಾವ ಅಪರಾಧ ಮಾಡಿದ್ದಾರೆ? ಕಾಂಗ್ರೆಸ್ ಬೇಡ ಎಂದರೆ, ಮಿಕ್ಕವರೂ ಬೇಡ ಎಂದರ್ಥವಾಗದೇ.

ಬಿಜೆಪಿಗೆ ಕೇವಲ ಕಾಂಗ್ರೆಸ್ ಅಲ್ಲ, ಅಪಾರ ಜನಪ್ರಿಯತೆಯ ಗಾಂಧೀಜಿಯನ್ನೂ ಸಹಿಸಿಕೊಳ್ಳಲಾಗುತ್ತಿಲ್ಲವಲ್ಲ.  ಈಗ ಕಾಂಗ್ರೆಸ್ ಮುಕ್ತ ಅಂದವರ ಘೋಷಣೆ ಮುಂದೆ ಗಾಂಧೀಜಿ ಮುಕ್ತ ಎಂದು ಆದರೆ ಅಚ್ಚರಿ ಇದೆಯೇ.

ಇನ್ನು ವಾಮನಾಚಾರ್ಯ, ಕುಲಕರ್ಣಿ, ಚಂದ್ರೇಗೌಡ ಮೊದಲಾದ ಕೆಲವರ ಪ್ರತಿಕ್ರಿಯೆ ಬಗ್ಗೆ: ಈ ಮಹಾನೀಯರು ಹಾಗಲ್ಲದೆ ಮತ್ಹೇಗೆ ಬರೆಯುವುದು ಸಾಧ್ಯ? ಎಷ್ಟಾದರೂ ಅವರು ಬಿಜೆಪಿಯ ವಕ್ತಾರರು, ಫಲಾನುಭವಿಗಳು ಅಥವಾ ಪೋಷಕರು. ವಿರೋಧಿಸಿ ಬರೆದರೆ ಪಕ್ಷ ವಿರೋಧಿ ದಂಡನೆಗೆ ಒಳಗಾಗಿ ಅವಕಾಶ ಕಳೆದುಕೊಳ್ಳಬೇಕೆಂಬ ಭಯವಿದೆ. ನಮ್ಮಂತಹ ಸಾರ್ವಜನಿಕರ ವಿಚಾರ, ವಿವೇಕ ಬೇರೆಯೇ ಇರುತ್ತದೆಯಲ್ಲವೇ?

 

Leave a Reply

Your email address will not be published.