ಗಾಂಧೀ ಅವರನ್ನೊಳಗೊಂಡ ಕುವೆಂಪು ಮಾರ್ಗವೇ ಪ್ರಸ್ತುತ

ನಮ್ಮ ಈ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈಪರೀತ್ಯಗಳನ್ನು ಆಧುನಿಕ ವೈಜ್ಞಾನಿಕ ಸಂದರ್ಭಕ್ಕೆ ವಿವರಿಸಿಕೊಳ್ಳುವುದು ಹೇಗೆ? ಈ ಯಥಾಸ್ಥಿತಿಯಿಂದ ಹೊರಬರಬೇಕಾದರೆ ಹೂವಿನಂತೆ ಅರಳುವ ಮೊದಲು ಅದೇ ಹೂವಿನ ಮೊಗ್ಗಿನಂತೆ ಮೊನಚಾಗಿರಬೇಕಲ್ಲವೇ?

ತಮ್ಮ ಬದುಕಿನ ಸಾಧನೆಯ ಯಶಸ್ಸಿನ ರಹಸ್ಯವನ್ನು ಎನ್.ಆರ್.ನಾರಾಯಣಮೂರ್ತಿಗಳು ಇಗೋ ಹೀಗೆ ಸಾರ್ವತ್ರೀಕರಿಸಿಕೊಂಡಿದ್ದಾರೆ. ಯಾರೇ ಆಗಲಿ, ಏನನ್ನೇ ಆದರೂ ಸಾಧಿಸಬೇಕಾದರೆ ಅವರು ತಮ್ಮ ಅರ್ಹತೆಯನ್ನು ಪರೀಕ್ಷೆಗೊಡ್ಡಿಕೊಳ್ಳಬೇಕಾಗುತ್ತದೆ. ಅದು ಸಾಬೀತಾದ ಮೇಲೆ ಹಿಡಿದ ಕೆಲಸವನ್ನು ಸಾಧಿಸಲು ಬೇಕಾದ ಪ್ರಯತ್ನದ ಪ್ರಾಮಾಣಿಕತೆಯ ಸ್ವರೂಪವನ್ನು ಕುರಿತು ಚಿಂತಿಸಬೇಕಾಗುತ್ತದೆ ಮಾತ್ರವಲ್ಲ, ಪ್ರಾಮಾಣಿಕತೆಯ ಜತೆಯಲ್ಲಿ ಹೆಗಲು ಕೊಟ್ಟು ಅಚಲವಾಗಿ ನಿಂತು ಶ್ರದ್ಧಾಪೂರ್ವಕ ದುಡಿಯುವ ದೃಢವಾದ ನಿಷ್ಠೆಯೂ ಬೇಕಾಗುತ್ತದೆ. ಈ ಎರಡೂ ಮನೋಭೂಮಿಕೆಯ ಜತೆಯಲ್ಲಿ ಯಾವುದೇ ಏಳಿಗೆಗೆ ಅತ್ಯಂತ ಅನಿವಾರ್ಯವಾದ ಸ್ಪರ್ಧಾಭೂಮಿಕೆ ರೂಪುಗೊಳ್ಳದೆ ಹೋದರೆ ಎಲ್ಲವೂ ನೀರಿನಲ್ಲಿ ಹೋಮವಾದಂತಾಗುತ್ತದೆ. ಈ ತ್ರಿವಳಿಗಳ ಸಂಗಮವೇ ಬರಿಯ ಕೆಲವೇ ದಶಕಗಳ ಅರ್ಥಸಾಧಕ ಎನ್.ಆರ್.ನಾರಾಯಣಮೂರ್ತಿ

ತನ್ನ ಈ ಯಶಸ್ಸನ್ನು ಹಿಂತಿರುಗಿ ನೋಡಿ ಖಚಿತಪಡಿಸಿಕೊಂಡ ಭಾರತೀಯ, ಕನ್ನಡಿಗ ದಿಗ್ಗಜ ಉದ್ಯಮಿ ಇದಕ್ಕೆ ಪೂರಕವಾಗಿ ಅಗತ್ಯವಾಗಿರುವ ಮತ್ತು ಅವು ತನ್ನ ತವರಿನಲ್ಲಿ ಅಷ್ಟಾಗಿ ದೊರೆಯದಿರುವ ಒಂದೆರಡು ಸಂಗತಿಗಳನ್ನು ನಮ್ಮ ಮುಂದಿಡುತ್ತಿದ್ದಾರೆ. ಅವುಗಳೆಂದರೆ, ವಿಜ್ಞಾನದ ಬೆಂಬಲ ಮತ್ತು ಭಾರತೀಯ ಸಂಸ್ಕೃತಿಯ ಬೋಳೆತನ. ಸಮಾಜಮುಖಿ ಸೂಕ್ತ ಸಮಯದಲ್ಲಿ ತನ್ನ ಮಾರ್ಚ್ ತಿಂಗಳ ಮುಖ್ಯ ಚರ್ಚೆಯ ವಿಷಯವಾಗಿಸಿಕೊಂಡದ್ದು, ಒಂಬತ್ತು ಜನ ಗಟ್ಟಿಚಿಂತಕರು ಅದಕ್ಕೆ ಪರ-ವಿರೋಧದ ತಮ್ಮ ನಿಲುವುಗಳನ್ನು ಗಂಭೀರ ನೆಲೆಯಲ್ಲಿ ಪ್ರಕಟಿಸುವುದರ ಮೂಲಕ ಸ್ಪಂದಿಸಿರುವುದು ವಸ್ತುವಿನ ಪ್ರಸ್ತುತತೆಯನ್ನು ಗಮನಾರ್ಹವನ್ನಾಗಿಸುತ್ತದೆ. ಪ್ರಸ್ತುತ ನಮ್ಮ ಸಮಾಜ ತನ್ನ ಎಲ್ಲ ರಂಗಗಳಲ್ಲಿ ಅಭೂತಪೂರ್ವ ನಿರಾಶಾದಾಯಕ ಹಳಹಳಿಕೆಯನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ಅನುಭವಿ ಉದ್ಯಮಿಯೊಬ್ಬರು ಅದಕ್ಕೆ ಪರಿಹಾರ ರೂಪವಾದ ಮಾರ್ಗೋಪಾಯಗಳನ್ನು ಸೂಚಿಸಲು ಮಾಡಿರುವ ಧೈರ್ಯ ಕೂಡ ಇಲ್ಲಿ ತುಂಬ ಮುಖ್ಯ.

ಯಾವುದು ಬೇಕಾದರೂ ದೇಶದ್ರೋಹವಾಗಬಹುದಾದ ಸನ್ನಿವೇಶವಿದು. ಈ ಮಾತುಗಳು ನಮಗೆ ಸರಿಯಾಗಿ ಅರ್ಥವಾಗಬೇಕಾದರೆ ಇಲ್ಲಿಗೆ ಸರಿಯಾಗಿ ಇಪ್ಪತ್ತಾರು ವರ್ಷಗಳ ಹಿಂದೆ ಇಂಥದೆ ಇನ್ನೊಬ್ಬ ಮಹಾನ್ ಸಾಂಸ್ಕೃತಿಕ ಸಾಧಕ ಕುವೆಂಪು ತಮ್ಮೆದುರಿನ ಯುವ ಜನಾಂಗವನ್ನು ಕುರಿತು ಮಾಡಿದ್ದ ಆ ಅಮೋಘ ಸುವಿಖ್ಯಾತ ಭಾಷಣವನ್ನು ನೆನಪು ಮಾಡಿಕೊಳ್ಳಬೇಕು. ಅಂದಿನ ಪರಕೀಯ ಸರ್ಕಾರಕ್ಕೂ ಜ್ವರ ತರಿಸಿದ್ದ ವಿಚಾರಣೆ ಕೋರಿ ಇಲಾಖೆಯ ಮುಖ್ಯಸ್ಥರಿಗೆ (ಟಿ.ಎಸ್. ವೆಂಕಣ್ಣಯ್ಯನವರು) ಕೊಟ್ಟಿದ್ದ ನೋಟೀಸಿಗೆ, ‘ನಾನೂ ನನ್ನ ಮಗನಿಗೂ ಇಷ್ಟು ಚೆನ್ನಾಗಿ ಬುದ್ಧಿ ಹೇಳಲಾಗುತ್ತಿರಲಿಲ್ಲ’ ಎಂದುತ್ತರಿಸಿಕೊಂಡಿದ್ದ ಭಾಷಣವದು. ಅದರ ಹೆಸರು- ಕೇಳಿದರೇ ರೋಮಾಂಚನವಾಗುವ- ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಇದರ ಜತೆಗೆ ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಕುವೆಂಪು ಮಾಡಿದ್ದ ಬೆಂಗಳೂರು ಘಟಿಕೋತ್ಸವದ ಭಾಷಣ ಮತ್ತು ಅಖಿಲ ಕರ್ನಾಟಕ ಬರಹಗಾರ ಮತ್ತು ಕಲಾವಿದರ ಒಕ್ಕೂಟದ ಭಾಷಣಗಳನ್ನು ನೆನಪಿಟ್ಟುಕೊಳ್ಳಬೇಕು. ಈ ಭಾಷಣಗಳಲ್ಲಿ ಕೂಡ ಕುವೆಂಪು ಅವರು ಮೂರ್ತಿ ಅವರಂತೆ ಅರ್ಹತೆ, ಪ್ರಾಮಾಣಿಕತೆ ಮತ್ತು ಶ್ರದ್ಧಾಪೂರ್ವಕ ತಪಸ್ಸಿನ ಮಾತುಗಳನ್ನಾಡಿದ್ದಾರೆ. ಈ ಸಾಮರಸ್ಯ, ಸಮನ್ವಯತೆಗಳು ಪೂರ್ವಗ್ರಹಿಕೆಗಳಿಲ್ಲದ ಮನಸ್ಸಿನ ವಿನ್ಯಾಸಗಳು.

ವಿಷಯ ಕುರಿತು ಪ್ರಕಟವಾಗಿರುವ ಒಂಬತ್ತು ಜನರ ಚಿಂತನೆಗಳು ಪರಸ್ಪರ ಪೂರಕವಾಗಿರುವುದರ ಜತೆಗೆ ಭಿನ್ನಾಭಿಪ್ರಾಯಗಳಿಗೂ ಪರಸ್ಪರ ಸಮಜಾಯಿಷಿ ಒದಗಿ ಬರುತ್ತಿರುವುದು ಗಮನಾರ್ಹ. ಇಲ್ಲಿಯ ಸಾಂಸ್ಕೃತಿಕ ನಿಲುವುಗಳಲ್ಲಿರುವ ಗೊಂದಲಗಳನ್ನು ಗಮನಿಸಿದರೆ ನಮಗೆ ನಿಜವಾಗಿಯೂ ವೈಜ್ಞಾನಿಕ ಮನೋಧರ್ಮ ಸಾಧಿತವಾಗಿಲ್ಲ ಎಂಬುದು ಸ್ಪಷ್ಟ. ಇದಕ್ಕೆ ಮುಖ್ಯ ಕಾರಣ ಸಂಪ್ರದಾಯ, ಸಂಸ್ಕೃತಿ, ಮತ್ತು ಪರಂಪರೆ ಎಂಬೀ ಮೂರು ಮಾತುಗಳು ಪರಸ್ಪರ ಅರ್ಥಸ್ಪಷ್ಟತೆಯಿಲ್ಲದೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದು. ವಿವರಗಳಿಗೆ ಹೋಗದೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ, ನಮ್ಮ ಕಂದಾಚಾರಗಳೆಲ್ಲವೂ ಸಂಪ್ರದಾಯಗಳಾಗಿವೆ. ನಮ್ಮ ಸಂಸ್ಕೃತಿ ಎನ್ನುವುದು ಮತೀಯವಾಗಿದೆ. ಹಾಗೆಯೇ ನಮ್ಮ ಪರಂಪರೆ ಮಾತ್ರ ಭಾರತೀಯವಾದದ್ದು. ಈ ನನ್ನ ತಿಳಿವಳಿಕೆಯನ್ನು ಅಧಾರವಾಗಿಟ್ಟುಕೊಂಡು ನಾನು ಹೇಳಬೇಕೆಂದಿರುವುದು ನನ್ನ ದೃಷ್ಟಿಯಲ್ಲಿ ಇಸ್ಲಾಂ ಧರ್ಮವನ್ನು ಒಳಗೊಂಡಂತೆ ಭಾರತೀಯ ಪರಂಪರೆ ಎಂಬುದೊಂದು ಖಚಿತವಾಗಿಯೇ ಇದೆ.

ಉದಾಹರಣೆಗೆ, ನನಗೆ ದಾರಿಯಲ್ಲಿ ಸಿಕ್ಕ ಒಬ್ಬರನ್ನು ನಿಲ್ಲಿಸಿ ‘ನೀವು ನಮ್ಮ ಖ್ಯಾತ ಅಂಕಣಕಾರ ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ ಅವರನ್ನು ಹೋಲುತ್ತೀರಿ. ಅವರು ನಿಮಗೆ ಏನಾದರೂ ಸಂಬಂಧಿಕರೇ? ಎಂದು ಕೇಳಿದಾಗ, ಅವರು, ‘ಇಲ್ಲ ಇಲ್ಲ, ಅವರು ಅಯ್ಯಂಗರ‍್ರು ನಾವು ಸ್ಮಾರ್ತರು’ ಎನ್ನುತ್ತಾ ಧನ್ಯತೆಯಿಂದ ಎದೆ ನೀವಿಕೊಂಡದ್ದನ್ನು ಕಂಡು ಸ್ವಲ್ಪ ವಿಸ್ಮಿತನಾದೆ. ಆದರೆ ಎಂ.ಗೋಪಾಲಕೃಷ್ಣ ಅಡಿಗರ ಪ್ರಖ್ಯಾತ ಕವನ ಸಂಕಲನ ಭೂಮಿಗೀತದ ಕಡೆಯ ಕವನ ಶರದ್ಗೀತದ ಕಡೆಯ ಎರಡು ಸಾಲುಗಳು ನೆನಪಾಗಿ ನಮ್ಮ ವೈದಿಕ ಒಟ್ಟು ಮನಸ್ಥಿತಿಯ ಬಗ್ಗೆ ಮರುಕ ಉಂಟಾಯಿತು. ಆ ಸಾಲುಗಳು ಈ ಕೆಳಗಿನವು.

ಶ್ರುತಿ ಇರುವತನಕ ಶ್ರಾತಕ್ಕೆ ಬಾರದು ವಿಘ್ನ

ಸ್ಮೃತಿ ಇರುವತನಕವೂ ಸ್ಮಾರ್ತ ನಿರ್ವಿಘ್ನ

ನಮ್ಮ ಈ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈಪರೀತ್ಯಗಳನ್ನು ಆಧುನಿಕ ವೈಜ್ಞಾನಿಕ ಸಂದರ್ಭಕ್ಕೆ ವಿವರಿಸಿಕೊಳ್ಳುವುದು ಹೇಗೆ? ಈ ಯಥಾಸ್ಥಿತಿಯಿಂದ ಹೊರಬರಬೇಕಾದರೆ ಹೂವಿನಂತೆ ಅರಳುವ ಮೊದಲು ಅದೇ ಹೂವಿನ ಮೊಗ್ಗಿನಂತೆ ಮೊನಚಾಗಿರಬೇಕಲ್ಲವೇ?

ಬುದ್ಧ, ಮಹಾವೀರ, ಅಲ್ಲಮ, ಬಸವ, ಪರಮಹಂಸ, ರಮಣ, ಗಾಂಧಿ, ಅಂಬೇಡ್ಕರ್, ಕುವೆಂಪು ಇವರಲ್ಲಿ ಯಾರನ್ನು ‘ಅಭಾರತೀಯರು’ ಎಂದು ಕರೆಯಲಾಗುತ್ತದೆ? ಈ ಎಲ್ಲರೂ ವೈದಿಕ ತಥಾಕಥಿತ ಸಂಪ್ರದಾಯಗಳಿಂದ ಬಿಡಿಸಿಕೊಂಡು ವೇದೋಪನಿಷತ್ತುಗಳಿಗೆ ಸವಾಲುಗಳನ್ನೂ ಸೃಷ್ಟಿಸಿ, ಚರ್ಚೆಗಳನ್ನು ಹುಟ್ಟುಹಾಕಿ ತಮ್ಮ ತಮ್ಮ ಬದುಕಿನ ಸಂದರ್ಭಕ್ಕೆ ವೈಚಾರಿಕವಾಗಿ ಸ್ಪಂದಿಸಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದ ಭಾರತೀಯರೆ ಹೊರತು ಬೇರೇನಲ್ಲ. ಅವರಲ್ಲಿ ಗಾಂಧೀಜಿ, ಕುವೆಂಪು ಅಂಥವರು ಹೊರತಾಗಿ ನಿಲ್ಲದೆ ಒಳಗಡೆಯೇ ಇದ್ದುಕೊಂಡು ಸುಧಾರಣಾ ಮಾರ್ಗಕ್ಕೆ ನಾಂದಿ ಹಾಡಿದರು ಮಾತ್ರ. ಅರ್ಥವಿಷ್ಟೆ, ಹಿಂದೂ, ಇಸ್ಲಾಂ, ಜೈನ, ಬೌದ್ಧ ಇತ್ಯಾದಿಗಳೆಲ್ಲವೂ ಮತಗಳಷ್ಟೇ ಹೊರತು ಧರ್ಮಗಳಲ್ಲ. ಇದನ್ನೂ ಶೋಧಿಸಿ, ಸಾಧಿಸಿ ಒಂದು ಅಖಂಡ ಧರ್ಮವಾಗಿಸುವುದಕ್ಕೆ ವೈಜ್ಞಾನಿಕತೆಯ ಅಗತ್ಯವಿದೆ. ಭಾರತೀಯ ಮನಸ್ಸು ಮೊನಚಾಗುವುದಲ್ಲ, ಅರಳುವುದು ಎಂದಿರುವ ತೋಳ್ಪಾಡಿಯವರಿಗೆ ನಾನಿಲ್ಲಿ ಒಂದು ಮಾತನ್ನು ಹೇಳಲೇಬೇಕಾಗಿದೆ. ಈ ಮೇಲೆ ನಾನು ಸೂಚಿಸಿರುವಂತೆ ಇದ್ದಲ್ಲಿಯೇ ಇದ್ದುಕೊಂಡು ಅರಳುವುದು ಸಾಂಪ್ರದಾಯಿಕ ವೈದಿಕ ಮನಸ್ಸೇ ಹೊರತು ಬಹುತ್ವಕ್ಕೆ ಜನ್ಮವಿತ್ತ ಭಾರತೀಯವಲ್ಲ. ತೋಳ್ಪಾಡಿಯಂಥವರು ಊರು-ಕೇರಿಗಳಿಗೆ ಬಂದು ನಮ್ಮಂಥವರ ಜತೆ ಒಡನಾಡಿ ಪರಸ್ಪರ ಲಾಭ ಮಾಡಿಕೊಳ್ಳುವುದು ಒಳ್ಳೆಯದು.

ವಿಜ್ಞಾನ ಮತ್ತು ತಂತ್ರಜ್ಞಾನಗಳ ನಡುವಣ ವ್ಯತ್ಯಾಸವನ್ನು ಸರಿಯಾಗಿ ವಿವರಿಸಿಕೊಳ್ಳದೆ ಕೂಡ ಇಲ್ಲಿಯ ಚರ್ಚೆಗಳು ದಿಕ್ಕು ತಪ್ಪುತ್ತಿವೆ, ತಪ್ಪಿಸುತ್ತಿವೆ. ಅಭಿವೃದ್ಧಿಶೀಲ ಜಗತ್ತಿಗೆ ಬೇಕಾಗಿರುವುದು ನಿಜವಾಗಿ ತಂತ್ರಜ್ಞಾನ. ಅದನ್ನು ವಿವೇಕಯುತವಾಗಿ ಬಳಸಿಕೊಳ್ಳಬೇಕಾಗಿರುವುದು ವಿಜ್ಞಾನದ ದೃಷ್ಟಿಕೋನ. ಸೀಮಾತೀತ ತಂತ್ರಜ್ಞಾನ, ವಿವೇಕಹೀನ ರಾಜಕಾರಣಿ ಮತ್ತು ಉದ್ಯಮಪತಿಗಳ ಪರಸ್ಪರ ಲಾಭ ಮತ್ತು ಸ್ವಾರ್ಥಸಾಧಕ ಪ್ರವೃತ್ತಿಯಿಂದಾಗಿ ಭಾರತೀಯ ವಾಸ್ತವಲೋಕ ಅತಂತ್ರವಾಗುತ್ತಿರುವುದು ಹೊಳೆದು ಕಾಣುತ್ತಿರವ ಸತ್ಯ. ಇದನ್ನು ನಿಭಾಯಿಸುವುದಕ್ಕೆ ನಮ್ಮ ಯುವಕ ಯುವತಿಯರಲ್ಲಿ ಅಪೂರ್ವ ರೀತಿಯ ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಬುದ್ಧಿ ಜಾಗೃತಗೊಳ್ಳಬೇಕಾಗಿದೆ. ಇದಕ್ಕೆ ಮೇಲಿನ ‘ಅರಳು’ ದಾರಿಗಿಂತ ಹೊರಳು(ಪರ್ಯಾಯ) ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ.

ಉಸಿರುಗಟ್ಟಿಸುವ ವರ್ಣವ್ಯವಸ್ಥೆಯಿಂದ ಹೊರಗೆ ಬರಬೇಕಾಗಿರುವ ನಮ್ಮ ಯುವತಿಯರು ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದರ ಬದಲು ತಮ್ಮ ವೈಜ್ಞಾನಿಕ ದೃಷ್ಟಿ ವಿಚಾರ ಬುದ್ಧಿಗಳ ಪ್ರಯೋಜನ ಪಡೆದು ದೇವಾಲಯಗಳನ್ನು ಧಿಕ್ಕರಿಸುವ ಧೈರ್ಯಶಾಲಿಗಳಾಗಬೇಕಿತ್ತು. ಬಹುತೇಕ ಎಲ್ಲ ಭಾರತೀಯ ಮತಗಳು ಮಹಿಳೆಯರಿಗೆ ಮೋಕ್ಷವನ್ನು ತಿರಸ್ಕರಿಸಿರುವುದನ್ನು ಈ ಯುವತಿಯರು ಸರಿಯಾಗಿ ಅರ್ಥೈಸಿಕೊಂಡರೆ ಮಾತ್ರ ಅವರಿಗೆ ವೈಜ್ಞಾನಿಕ ಮುಕ್ತಿ ಸಾಧ್ಯವಾಗುತ್ತದೆ ಮಾತ್ರವಲ್ಲ, ಮೂರ್ತಿಯವರು ನಿರೀಕ್ಷಿಸುತ್ತಿರುವ ಸಮಾಜ ಒಂದೆರಡು ದಶಕಗಳಲ್ಲಿ ಸೃಷ್ಟಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಮೂಲಕ ನಮ್ಮ ದೇವಮಂದಿರಗಳಲ್ಲಿ ಕೊಳೆತು ನಾರುತ್ತಿರುವ ಸಂಪತ್ತನ್ನು ಬದುಕಿನ ವ್ಯಾವಹಾರಿಕ ಮುಕ್ತಿಗೆ ಮತ್ತು ನಮ್ಮ ಕಂದಮ್ಮಗಳ ವೈಜ್ಞಾನಿಕ ರೀತಿಯ ಶೈಕ್ಷಣಿಕ ಅಭಿವೃದ್ಧಿಗೆ ಬಳಸಿದ್ದೇ ಆದರೆ, ಆಗಬಹುದಾದ ಸಾಂಸ್ಕೃತಿಕ ಸುಧಾರಣೆ ಕೂಡ ಅತಿ ಶೀಘ್ರವಾಗಿಯೇ ಕೈಗೆಟಕುತ್ತದೆ.

ಪರಮಹಂಸರು ಹೇಳುವ ಹಾಗೆ, ಸಾವಿರಾರು ವರ್ಷಗಳಿಂದ ತುಂಬಿಕೊಂಡಿರುವ ಕತ್ತಲು ಕೋಣೆಯಲ್ಲಿ ಬೆಳಕು ಮೂಡಲು ಒಂದು ಸಣ್ಣ ಬೆಂಕಿ ಕಡ್ಡಿ ಸಾಕು. ಸ್ವತಃ ಮೂರ್ತಿಗಳೇ ಒಂದೆರಡು ದಶಕಗಳಲ್ಲಿಯೇ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡಿಲ್ಲವೇ? ಸಂದೇಶಾತ್ಮಕ ಮಾತುಗಳನ್ನಾಡುವ ಅಂತಸ್ಥೆರ್ಯ ಕೂಡ ಅವರಿಗೆ ಸಿದ್ಧಿಸಿಲ್ಲವೇ? ಇದನ್ನು ತಪಸ್ಸು ಎನ್ನದೆ ಮತ್ತೇನೆನ್ನಬೇಕು?

ಇಷ್ಟಾದರೂ ಮೂರ್ತಿಗಳ ದಾರಿಗಿಂತ ಗಾಂಧಿಯವರನ್ನೊಳಗೊಂಡ ದೇದೀಪ್ಯಮಾನವಾಗಿರುವ ಕುವೆಂಪು ಮಾರ್ಗವೇ ನನಗೆ ಹೆಚ್ಚು ಇಷ್ಟವಾಗುತ್ತದೆ. ಕಾರಣ ತುಂಬ ಸರಳ. ಇನ್ನುಮುಂದೆ ಅರ್ಥಕೇಂದ್ರಿತ ಸಾಹಸಮಯತೆಯನ್ನು ಈಗಾಗಲೇ ಜ್ವರಪೀಡಿತವಾಗಿರುವ ನಮ್ಮ ಭೂಮಿ ತಾಳಿಕೊಳ್ಳಲಾರದು. ಅದಕ್ಕೆ ನಿಸರ್ಗ ಪ್ರೀತಿಯ ಹೆಚ್ಚು ಸಹನಶೀಲವಾದ, ದೈಹಿಕ ಶ್ರಮದ ಸಮನ್ವಯಮಾರ್ಗ ಪ್ರಸ್ತುತಕ್ಕೆ ಶ್ರೇಯಸ್ಕರ. ಇದಕ್ಕೆ ಕೂಡ ಪೃಥ್ವಿದತ್ತ ಚಂದ್ರಶೋಭಿ ಸೂಚಿಸಿರುವ ಪ್ರತಿಯೊಂದು ತಲೆಮಾರೂ ಹೊಣೆಗಾರಿಕೆ ಹೊತ್ತು ಪ್ರಾಮಾಣಿಕ ಪ್ರಯತ್ನ ಮತ್ತು ಪ್ರಕೃತಿ ಸಹಜ ಜ್ಞಾನಾಧಾರಿತ ಸ್ಪರ್ಧಾಶ್ರದ್ಧೆಗಳೊಡನೆ ಮೈಬಗ್ಗಿಸಿ ದುಡಿಯಬೇಕಾಗುತ್ತದೆ. ಅಂದರೆ ಯಂತ್ರನಾಗರೀಕತೆಯಿಂದ ಹೊರಬರುವ ಅನಿವಾರ್ಯ ಧೈರ್ಯವನ್ನು ಅಭಿವ್ಯಕ್ತಿಸದೆ ಬೇರೆ ದಾರಿಯಿಲ್ಲ.

*ಲೇಖಕರು ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರು; ಸಾಹಿತ್ಯ ವಿಮರ್ಶಕರು ಹಾಗೂ ಸೃಜನಶೀಲ ಬರಹಗಾರರು. ವೈಚಾರಿಕತೆ ಅವರ ಚಟುವಟಿಕೆಗಳ ಕೇಂದ್ರಬಿಂದು.

Leave a Reply

Your email address will not be published.