ಗಾಢ ಮಬ್ಬಿನಲ್ಲಿ ಮಹಾಮಾರಿ: ಇದರ ಅಂತ್ಯಕ್ಕೆ ಎಲ್ಲಿದೆ ದಾರಿ?

ಕೊರೊನಾ ವೈರಾಣುವನ್ನು ಮಣಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ಮೂಲೆಗೊತ್ತಲಂತೂ ನಮಗೆ ಸಾಧ್ಯವಿದೆ. ಅದು ಒಂದು ರಾಷ್ಟ್ರದ ಇಚ್ಛಾಶಕ್ತಿಗೆ ಸಂಭಂದಿಸಿದ ವಿಚಾರ.

– ನಾಗೇಶ ಹೆಗಡೆ

ಈಗಿನ್ನೂ ಇದು ಸರಿಯಾಗಿ ಆರಂಭವೇ ಆದಂತಿಲ್ಲ, ಆಗಲೇ ಸಂಪಾದಕರು “ಈ ಸಾಂಕ್ರಾಮಿಕದ ಅಂತ್ಯ ಹೇಗೆ?” ಎಂದು ಕೇಳುತ್ತಿದ್ದಾರಲ್ಲ!

ಇರಲಿ, ಆರಂಭವಾಗಿದ್ದಕ್ಕೆಲ್ಲ ಒಂದು ಅಂತ್ಯ ಅನ್ನೋದು ಇದ್ದೇ ಇರುತ್ತದೆ ಎಂಬ ಆಶಾವಾದಿಗಳು ಈ ಜಗತ್ತಿನಲ್ಲಿ ತುಂಬ ಜನರಿದ್ದಾರೆ. ಕೆಲವರಂತೂ ಕೋವಿಡ್ ನಂತರದ ಬದುಕು ಹೇಗಿರುತ್ತದೆ ಎಂಬ ಘನಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. “ಕೋವಿಡ್ ನಂತರದ ಬದುಕು” ಎಂದೆಲ್ಲ ಊಹಿಸುವುದೇ ತಪ್ಪು ಎನ್ನುವವರೂ ಇದ್ದಾರೆ. “ಕೋವಿಡ್ ಜೊತೆಗಿನ ಬದುಕು ಹೇಗಿರುತ್ತದೆ ಎಂಬುದನ್ನು ನಾವು ಯೋಜಿಸಬೇಕಾಗಿದೆ” ಎನ್ನುತ್ತಾರೆ, ಅಮೆರಿಕನ್ ಚಿಂತಕ ನೀಲ್ ಫರ್ಗೂಸನ್.

ಹಾಗಿದ್ದರೆ ಕೊರೊನಾಕ್ಕೆ ಅಂತ್ಯ ಅನ್ನೋದೆ ಇರೋದಿಲ್ಲವೆ?

‘ಇರಲಿಕ್ಕಿಲ್ಲ’ ಎಂದು ವಾದಿಸುವ ಫರ್ಗ್ಯೂಸನ್, ಅದಕ್ಕೆ ಅಮೆರಿಕದ ಫ್ಲೂ ಜ್ವರದ ಉದಾಹರಣೆ ಕೊಡುತ್ತಾರೆ. ಫ್ಲೂ ಅಂದರೆ (ಕೊರೊನಾದ ಸಂಬಂಧಿಯೇ ಆದ) ಇನ್ ಫ್ಲ್ಯೂಯೆಂಝಾ ಜ್ವರ. ಅಲ್ಲಿ ಅದಕ್ಕೆ ಉತ್ತಮ ಲಸಿಕೆಗಳಿವೆ. ಆದರೂ ಪ್ರತಿ ವರ್ಷವೂ ಸರಾಸರಿ ಮೂರು-ನಾಲ್ಕು ಕೋಟಿ ಜನರು ಕಾಯಿಲೆ ಬೀಳುತ್ತಾರೆ. 35-40 ಸಾವಿರ ಜನರು ಸಾಯುತ್ತಿರುತ್ತಾರೆ. ಎರಡು ವರ್ಷಗಳ ಹಿಂದೆ 61 ಸಾವಿರ ಸಾವು ಸಂಭವಿಸಿದೆ. ಅಲ್ಲಿ ಫ್ಲೂ ವೈರಾಣು ಪ್ರತಿ ವರ್ಷ ಹೊಸ ವೇಷ ಧರಿಸಿ ಬರುತ್ತದೆ; ಅದಕ್ಕೆ ತಕ್ಕಂತೆ ಹೊಸ ಲಸಿಕೆಯೂ ಸಿದ್ಧವಾಗುತ್ತಿದೆ. ಹತ್ತು ವರ್ಷಗಳಾದರೂ ಅಮೆರಿಕದಂಥ ಅಮೆರಿಕದಲ್ಲೇ ಆ ಸಾಂಕ್ರಾಮಿಕದ ಅಂತ್ಯವಾಗಿಲ್ಲ. ಈಗ ಈ ಕೊರೊನಾ ಸಾಂಕ್ರಾಮಿಕಕ್ಕೆ ಒಂದು ಅಂತ್ಯ ಕಂಡೀತೆಂದು ಹೇಗೆ ಹೇಳೋಣ?

ಕೊರೊನಾ-ಕೋವಿಡ್ ಕುರಿತು ಅದೆಂಥ ಘೋರಗೋಜಲು ಇದೆ ಎಂಬುದನ್ನು ತೋರಿಸುವಂತೆ ಇತ್ತೀಚೆಗೆ (ಆಗಸ್ಟ್ 22ರಂದು) ದಿ ವಾಯರ್ ಜಾಲತಾಣದಲ್ಲಿ ಒಂದು ದೀರ್ಘ ಚರ್ಚೆ ನಡೆಯಿತು. ವೆಲ್ಲೋರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಹೆಸರಾಂತ ರೋಗಪ್ರಸರಣ ತಜ್ಞೆ ಪ್ರೊ. ಗಗನದೀಪ್ ಕಾಂಗ್ ಜೊತೆಗೆ ಪತ್ರಕರ್ತ ಕರಣ್ ಥಾಪರ್ ಸಂದರ್ಶನ ನಡೆಸಿದರು. ಕೊರೊನಾ ಸಾಂಕ್ರಾಮಿಕದ ಹಾವಳಿ ಕುರಿತು ಥಾಪರ್ ಕಳೆದ ನಾಲ್ಕಾರು ತಿಂಗಳಲ್ಲಿ ಜಗತ್ತಿನ ಅನೇಕ ಖ್ಯಾತ ವೈದ್ಯತಜ್ಞರು, ಅರ್ಥತಜ್ಞರು, ಸಂಖ್ಯಾತಜ್ಞರು, ನೀತಿನಿರೂಪಕರೊಂದಿಗೆ 10-12 ಸಂದರ್ಶನಗಳನ್ನು ನಡೆಸಿದ್ದಾರೆ. ಅವುಗಳಲ್ಲಿ ಯಾವುದನ್ನಾದರೂ ಅಥವಾ ಎಲ್ಲವನ್ನೂ (ಯೂಟ್ಯೂಬಿನಲ್ಲಿ) ನೋಡಿ ನಂತರ ಈ ಆಗಸ್ಟ್ 22ರ ಸಂದರ್ಶನವನ್ನು ನೋಡಿದರೆ, ಕಳೆದ ಆರು ತಿಂಗಳಲ್ಲಿ ಕೊರೊನಾ/ಕೋವಿಡ್ ಕುರಿತು ಹೆಚ್ಚು ಹೆಚ್ಚು ಸ್ಪಷ್ಟ ಚಿತ್ರಣ ಸಿಗುವ ಬದಲು ಜಾಸ್ತಿ ಜಾಸ್ತಿ ಸಂದೇಹಗಳು, ಪ್ರಶ್ನೆಗಳೇ ಏಳುತ್ತಿರುವಂತೆ ಭಾಸವಾಗುತ್ತಿದೆ. ವೈದ್ಯತಜ್ಞೆ ಪ್ರೊ. ಕಾಂಗ್ ಜೊತೆಗಿನ ಥಾಪರ್ ಸಂವಾದದ ಕೆಲವು ಸ್ಯಾಂಪಲ್ಲುಗಳನ್ನು ನೋಡಿ:

 

ಕರಣ್ ಥಾಪರ್: ಕೋವಿಡ್ ರೋಗಿಗಳ ಸಂಖ್ಯೆ ನಮ್ಮ ದೇಶದಲ್ಲೀಗ 30 ಲಕ್ಷಕ್ಕೇರಿದೆ. ದಿನಕ್ಕೆ 70 ಸಾವಿರದಷ್ಟು ಹೆಚ್ಚುತ್ತಿವೆ. ಕಳೆದ ಎರಡು ವಾರಗಳಿಂದ ಜಗತ್ತಿನ ಅತಿ ವೇಗದ ಏರಿಕೆ ನಮ್ಮದೇ ಆಗಿದೆ. ರೋಗ ಪ್ರಸರಣ ಹೀಗೆ ಹೆಚ್ಚುತ್ತಲೇ ಹೋಗುತ್ತದಾ? ಗರಿಷ್ಠ ಯಾವಾಗ ತಲುಪೀತು? ಇಳಿಕೆ ಯಾವಾಗ ಆರಂಭವಾದೀತು?

 

 

ಪ್ರೊ. ಕಾಂಗ್: ಅದನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ದಿಲ್ಲಿಯಲ್ಲಿ ಅಥವಾ ಮುಂಬೈಯ ಧಾರಾವಿಯಲ್ಲಿ ಅದು ಗರಿಷ್ಠ ತಲುಪಿರಬಹುದು. ಕೆಲವು ದೊಡ್ಡ ನಗರಗಳ ಕೆಲಮಟ್ಟಿನ ಚಿತ್ರಣವಷ್ಟೇ ನಮಗೆ ಸಿಕ್ಕಿದೆ. ಆದರೆ ಭಾರತವೆಂದರೆ ಭಾರೀ ಜನಸಂಖ್ಯೆಯುಳ್ಳ ದೇಶ. ಅನೇಕ ನಗರಗಳಲ್ಲಿ ಈಗಲೂ ಗರಿಷ್ಠ ಮಟ್ಟಕ್ಕೆ ಬಂದಿಲ್ಲ. ಕೆಲವು ಪ್ರದೇಶಗಳಲ್ಲಿ ಸೋಂಕು ಈಗಷ್ಟೇ ಆರಂಭವಾಗುತ್ತಿದೆ. ಮುಂದೆ ಒಂದೊಂದು ಊರಲ್ಲಿ ಒಂದೊಂದು ಕಾಲಘಟ್ಟದಲ್ಲಿ ಗರಿಷ್ಠ ತಲುಪಬಹುದು. ಅಲ್ಲೇ ಎರಡನೆಯ ಅಲೆ ಕೂಡ ಆರಂಭವಾಗಬಹುದು. ಏನೂ ಹೇಳುವಂತಿಲ್ಲ.

ಥಾಪರ್: ಆಗಸ್ಟ್ ಮುಗಿಯುವುದರಲ್ಲಿ ಭಾರತದಲ್ಲಿ ರೋಗಪೀಡಿತರ ಸಂಖ್ಯೆ ಹತ್ತು ಕೋಟಿ ತಲುಪುತ್ತದೆಂದು ಮಿಶಿಗನ್ ವಿವಿಯ ಪ್ರೊ. ಮುಖರ್ಜಿ ಅಂದಾಜು ಮಾಡಿದ್ದರು. ವಾಷಿಂಗ್‌ಟನ್‌ನ ಡಿಸೀಸ್ ಡೈನಮಿಕ್ಸ್ ತಜ್ಞರ ಅಂದಾಜಿನ ಪ್ರಕಾರ ಸೆಪ್ಟಂಬರ್ ಕೊನೆಯ ಹೊತ್ತಿಗೆ ಇಲ್ಲಿ 20 ಕೋಟಿ ತಲುಪಬಹುದು. ಎಮ್‌ಐಟಿ ತಜ್ಞರ ಪ್ರಕಾರ, 2021ರ ಫೆಬ್ರುವರಿ/ಮಾರ್ಚ್ ವೇಳೆಗೆ ಲಸಿಕೆ ಬಾರದೇ ಇದ್ದರೆ ಪ್ರತಿ ದಿನವೂ 2.8 ಲಕ್ಷ ಜನರಿಗೆ ರೋಗ ತಗುಲಬಹುದು. ನಿಮ್ಮ ಅಂದಾಜಿನ ಪ್ರಕಾರ, ದೀಪಾವಳಿ ವೇಳೆಗೆ ಎಷ್ಟು ಜನರು ಬಲಿಯಾಗಬಹುದು?

ಕಾಂಗ್: ಹೇಳೋಕಾಗಲ್ಲ. ಹಿಂದಿನ ಅಂದಾಜುಗಳೆಲ್ಲ ಲಾಕ್ಡೌನ್‌ಎಂಬ ಸರಕಾರಿ ಕ್ರಮವನ್ನೇ ಆಧರಿಸಿದ್ದವು. ನ್ಯೂಯಾರ್ಕ್, ಮಾಡ್ರಿಡ್, ಲಂಡನ್ನಿನ ದೃಶ್ಯಗಳನ್ನೂ ಅವು ಆಧರಿಸಿದ್ದವು. ಈಗಿನ ಮುನ್ನೋಟಕ್ಕೆ ಬೇರೆಯದೇ ಸೂತ್ರಗಳನ್ನು ಬಳಸಬೇಕು. ಜನಸಾಮಾನ್ಯರು ತಾವಾಗಿ ಮುಖವಾಡ, ದೈಹಿಕ ಅಂತರ, ಕೈಸ್ವಚ್ಛತೆಯಂಥ ಸುರಕ್ಷಾ ಕ್ರಮಗಳನ್ನು ಹೇಗೆ ಅನುಸರಿಸುತ್ತಾರೆ, ಎಷ್ಟು ಜನರು ಎಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂಬ ಚಿತ್ರಣ ಸಿಕ್ಕರೆ ಮುಂದಿನ ಅಂದಾಜನ್ನು ಹೇಳಬಹುದು.

ಥಾಪರ್: ಕೋವಿಡ್ ಪರೀಕ್ಷೆ ಪ್ರಮಾಣ ನಮ್ಮ ದೇಶದಲ್ಲಿ ತೀರ ಕಡಿಮೆ ಇದೆ. ಪ್ರತಿ ಸಾವಿರ ಜನರಲ್ಲಿ 25 ಮಂದಿಗಷ್ಟೆ ಟೆಸ್ಟ್ ಮಾಡಲಾಗುತ್ತಿದೆ. ಇಸ್ರೇಲ್, ಇಂಗ್ಲೆಂಡ್, ರಷ್ಯ, ಅಮೆರಿಕಗಳಲ್ಲಿ ನಮ್ಮದಕ್ಕಿಂತ ಹತ್ತು ಪಟ್ಟು ಹೆಚ್ಚು ಜನರನ್ನು ಪರೀಕ್ಷೆಗೆ ಒಡ್ಡುತ್ತಿದ್ದಾರೆ. ಅಮೆರಿಕದಲ್ಲಿ ಇನ್ನೇನು ಕಾಲೇಜುಗಳನ್ನು ಮತ್ತೆ ಆರಂಭಿಸುವ ಯೋಜನೆಯಿದ್ದು ಆಗ ಕ್ಯಾಂಪಸ್ಸಿನ ಪ್ರತಿ ವ್ಯಕ್ತಿಯನ್ನೂ ಎರಡು ದಿನಕ್ಕೊಮ್ಮೆ ಪರೀಕ್ಷೆ ಮಾಡಲಾಗುತ್ತದಂತೆ. ನಮ್ಮಲ್ಲಿ ಕೂಡ ಜಾಸ್ತಿ ಟೆಸ್ಟ್ ಮಾಡಿದರೆ, ರಿಪೀಟ್ ಟೆಸ್ಟಿಂಗ್ ಮಾಡಿದರೆ ನೈಜ ಚಿತ್ರಣ ಸಿಕ್ಕೀತೆ?

ಕಾಂಗ್: ನಿಖರವಾಗಿ ಹೇಳುವಂತಿಲ್ಲ. ನಮ್ಮಲ್ಲಿ ಹೆಚ್ಚಾಗಿ ಆಂಟಿಜೆನ್ ಟೆಸ್ಟ್ ಮಾಡುತ್ತಾರೆ. ಅದರಿಂದ ಕ್ಷಿಪ್ರ ಫಲಿತಾಂಶ ಸಿಗುತ್ತದೆ. ಆದರೆ ನಂಬಲರ್ಹವಲ್ಲ. ಅದರಲ್ಲಿ ತಪ್ಪು (ನೆಗೆಟಿವ್) ಫಲಿತಾಂಶದ ಪ್ರಮಾಣವೂ ಹೆಚ್ಚೇ ಇರುತ್ತದೆ. ನೆಗೆಟಿವ್ ಬಂದಾಗಲೆಲ್ಲ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಮಾಡಬೇಕು. ಅದು ದುಬಾರಿಯಾಗಿದ್ದು, ದೊಡ್ಡ ಪ್ರಮಾಣದಲ್ಲಿ ಆಗುತ್ತಿಲ್ಲ. ಸದ್ಯಕ್ಕೆ ಆಸ್ಪತ್ರೆಗಳಲ್ಲಿ ರಶ್ ಹೇಗಿದೆ ನೋಡಿ ಸಾಂಕ್ರಾಮಿಕದ ಸ್ಥೂಲ ಅಂದಾಜು ಮಾಡಬಹುದು. ಆದರೆ ಆಸ್ಪತ್ರೆಗೆ ಬಾರದೇ ಇರುವ ರೋಗಿಗಳ ಬಗ್ಗೆ ಗೊತ್ತೂ ಆಗುವುದಿಲ್ಲ. ಜೊತೆಗೆ ರೋಗ ಲಕ್ಷಣಗಳೇ ಇಲ್ಲದವರೂ ಇರುತ್ತಾರಲ್ಲ? ಅವರೂ ರೋಗ ಪ್ರಸಾರ ಮಾಡುತ್ತಿರಬಹುದು.

ಥಾಪರ್: ನಮ್ಮ ದೇಶದಲ್ಲಿ ಕೋವಿಡ್ ರೋಗಿಗಳ ಮರಣದ ಪ್ರಮಾಣ ತೀರ ಕಡಿಮೆ ಇದೆ. ಲಕ್ಷದಲ್ಲಿ ನಾಲ್ಕು ಜನ ಮಾತ್ರ ನಮ್ಮಲ್ಲಿ ಮೃತರಾಗುತ್ತಾರೆ. ಇಂಗ್ಲೆಂಡಿನಲ್ಲಿ 60, ಇಟಲಿಯಲ್ಲಿ 58 ಜನ ಮಾತ್ರ ಸಾಯುತ್ತಿದ್ದಾರೆ. ನಮ್ಮವರು ಗಟ್ಟಿ ಜನರೆ?

ಕಾಂಗ್: ಹೇಳುವಂತಿಲ್ಲ. ನಮ್ಮಲ್ಲಿ ಹಿರಿಯ ವೃದ್ಧರ ಸಂಖ್ಯೆ ಕಡಿಮೆ ಇದೆ. ನಾನಾ ರೋಗಾಣುಗಳನ್ನು ಎದುರಿಸಿ ತಂತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡವರ ಸಂಖ್ಯೆಯೂ ಹೆಚ್ಚೇ ಇದ್ದೀತು. ಇಲ್ಲಿ ಆಹಾರ ವೈವಿಧ್ಯ ಹಾಗೂ ಜನಾಂಗೀಯ ವೈವಿಧ್ಯ ಜಾಸ್ತಿ ಇದೆ. ಯಾವ ರಕ್ತಗುಣವಿದ್ದವರ ಮೇಲೆ ಕೊರೊನಾ ಹೇಗೆ ಪ್ರಭಾವ ಬೀರುತ್ತದೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ.  ನಮ್ಮ ನೆರೆಯ ಶ್ರೀಲಂಕಾ, ಪಾಕಿಸ್ತಾನ, ಆಫ್ರಿಕದ ಕೆಲವು ರಾಷ್ಟçಗಳಲ್ಲೂ ಮರಣದ ಪ್ರಮಾಣ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ತೀರ ಕಡಿಮೆ ಇದೆ.

 

ಥಾಪರ್: ನಮ್ಮಲ್ಲಿ ಒಬ್ಬ ವ್ಯಕ್ತಿ ಇಂಥದ್ದೇ ಕಾರಣದಿಂದ ಮೃತನೆಂದು ಡಾಕ್ಟರ್ ಸರ್ಟಿಫಿಕೇಟ್ ಪಡೆಯುವ ಪ್ರಮಾಣ ತೀರ ಕಡಿಮೆ ಇದೆ. ಸರಾಸರಿ ಶೇ. 22 ಮೃತ ದೇಹಗಳಿಗೆ ಡಾಕ್ಟರ್ ಸರ್ಟಿಫಿಕೇಟ್ ಇರುತ್ತದೆ. ಉತ್ತರ ಪ್ರದೇಶದಲ್ಲಿ ಶೇ. 5ಕ್ಕಿಂತ ಕಡಿಮೆ; ಬಿಹಾರದಲ್ಲಿ ಎರಡೂವರೆ ಅಷ್ಟೆ. ಹೀಗಿರುವಾಗ, ಕೊರೊನಾದಿಂದಲೇ ಸತ್ತರೆಂದು ಹೇಳುವುದರಲ್ಲಿ ಎಷ್ಟು ತಥ್ಯವಿದೆ?

ಕಾಂಗ್: ಇನ್ನು ಮುಂದೆ ಈ ಸಮಸ್ಯೆ ಇನ್ನಷ್ಟು ಜಟಿಲವಾಗಬಹುದು. ಡಾಕ್ಟರುಗಳ ಸಂಪರ್ಕಕ್ಕೆ ಬಾರದೆ ಹಳ್ಳಿಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೆ ದಾಖಲೆ ಇಡುವುದು ಕಷ್ಟ. ಬಾಣಂತಿ ಮರಣವನ್ನೂ ಕೋವಿಡ್ ಗೇ ಸೇರಿಸಿಬಿಟ್ಟರೆ ಅಸಲೀ ಬಾಣಂತಿ ಮರಣದ ಚಿತ್ರವೂ ಮಸಕಾಗುವ ಸಾಧ್ಯತೆ ಇದೆ. ಅಂಕಿಸಂಖ್ಯೆಗಳ ಗೋಜಲು ಜಾಸ್ತಿಯಾಗುತ್ತ ಹೋಗಬಹುದು.

ಥಾಪರ್: ಜರ್ಮನಿಯ ನರವಿಜ್ಞಾನಿ ಕಾರ್ಲ್ ಫ್ರಿಸ್ಟನ್ ಹೇಳುವ ಪ್ರಕಾರ, ಯಾವ ಸಾಂಕ್ರಾಮಿಕ ಬಂದರೂ ಎಲ್ಲ ಸಮುದಾಯದಲ್ಲೂ ನೂರಕ್ಕೆ 50ರಷ್ಟು ಜನರಂತೂ ಸುರಕ್ಷಿತವಾಗಿಯೇ ಇರುತ್ತಾರೆ. ಕೆಲವು ಸಮುದಾಯದಲ್ಲಿ ಅಂಥವರ ಪ್ರಮಾಣ 80-90% ಇದ್ದೀತು. ಅದೇಕೆಂಬುದು ನಿಗೂಢವಾಗಿಯೇ ಇದೆಯೆ ಅಥವಾ ವಿವರಣೆ ಕೊಡಬಹುದೆ?

ಕಾಂಗ್: ಏನೂ ಖಚಿತವಾಗಿ ಹೇಳುವಂತಿಲ್ಲ. ಸುರಕ್ಷಿತವಾಗಿರಲು ಅನೇಕ ಕಾರಣಗಳಿರುತ್ತವೆ.

ಥಾಪರ್: ಒಂದು ಸಮಾಜದಲ್ಲಿ ಶೇಕಡಾ ಎಷ್ಟು ಜನರಿಗೆ ರೋಗ ತಗುಲಿದರೆ ಅಥವಾ ಲಸಿಕೆ ಸಿಕ್ಕರೆ ಹರ್ಡ್ ಇಮ್ಯೂನಿಟಿ (ಸಾಮೂಹಿಕ ಪ್ರತಿರಕ್ಷಣೆ) ಬಂದೀತು? ಈ ಕುರಿತು ಎಲ್ಲ ಕಡೆ ಏಕರೂಪ ಸಂಖ್ಯೆಗಳಿಲ್ಲ. ನೀವೇನನ್ನುತ್ತೀರಿ?

ಕಾಂಗ್: ಯಾವ ಸಮಾಜದಲ್ಲಿ ಪ್ರತಿರಕ್ಷಣೆ ಎಷ್ಟಿರುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ ಕೆಲವರಿಗೆ ಸೋಂಕು ತಗುಲಿದ್ದು ಗೊತ್ತೇ ಆಗುವುದಿಲ್ಲ. ಇನ್ನು ಕೆಲವರಲ್ಲಿ ಅತಿರೇಕ ಪ್ರಮಾಣದಲ್ಲಿ ರೋಗ ಹಬ್ಬಿಸುವ ಗುಣಗಳಿರುತ್ತವೆ. ಅಂಥ ಸೂಪರ್ ಸ್ಪೆçಡರುಗಳನ್ನು ಗುರುತಿಸಿ ಕ್ವಾರಂಟೈನ್ ಮಾಡುವ ಕೆಲಸ ಆಗಬೇಕಿದೆ.   

(ಗಮನಿಸಿ: ಇದು ಈ ಸಂದರ್ಶನದ ಅಕ್ಷರಶಃ ಭಾಷಾಂತರವಲ್ಲ; ವಾಸ್ತವವಾಗಿ ಪ್ರೊ. ಕಾಂಗ್ ಎಲ್ಲೂ ‘ಗೊತ್ತಿಲ್ಲ’, ‘ಆಗುವುದಿಲ್ಲ’, ‘ಹೇಳುವಂತಿಲ್ಲ’, ‘ಸಾಧ್ಯವಿಲ್ಲ’ ಇತ್ಯಾದಿ ಪದಗಳನ್ನು ನೇರವಾಗಿ ಬಳಸಿಲ್ಲ; ಆದರೆ ಸುತ್ತುಬಳಸಿ ಅದನ್ನೇ ವ್ಯಕ್ತಪಡಿಸಿದ್ದಾರೆ.)

*

ಅಂತೂ ಇದೊಂದು ಗಾಢ ಮಬ್ಬಿನ ಸಾಂಕ್ರಾಮಿಕವೆಂದೇ ಹೇಳಬಹುದು. ಅಂಕಿಸಂಖ್ಯೆಗಳೇನೊ ಜಲಪಾತದಂತೆ ಎಲ್ಲೆಲ್ಲಿಂದಲೋ ಧುಮುಕುತ್ತಿವೆ. ಎಷ್ಟು ಜನರು ಕಾಯಿಲೆ ಬಿದ್ದಿದ್ದಾರೆಂಬುದು ಸ್ಪಷ್ಟವಿಲ್ಲ; ಎಷ್ಟು ಜನರು ಸತ್ತರೆಂಬುದು ಸ್ಪಷ್ಟವಿಲ್ಲ; ಸತ್ತವರೆಲ್ಲ ನಿಜಕ್ಕೂ ಕೋವಿಡ್ ನಿಂದಾಗಿಯೇ ಮೃತಪಟ್ಟರೆ ಎಂಬುದು ಸ್ಪಷ್ಟವಿಲ್ಲ (ಆತ್ಮಹತ್ಯೆ, ಅಪಮೃತ್ಯುವಿನಿಂದ ಅಸುನೀಗಿದವರಲ್ಲೂ ಕೋವಿಡ್ ಇತ್ತೆಂಬ ವರದಿಗಳೂ ಬರುತ್ತಿವೆ. ಕಳೆದ 40 ದಿನಗಳಿಂದ ಐಸಿಯುದಲ್ಲಿದ್ದ ರೋಗಿಯನ್ನು ಈಗ ಕೊರೊನಾ ಪಾಸಿಟಿವ್‌ಎಂದು ಗುರುತಿಸಲಾಗಿದೆ).

ವೈದ್ಯಲೋಕವೇ ಕೊರೊನಾ ಮೇಲೆ ಮುಗಿ ಬಿದ್ದಿದೆ. ಆದರೆ ಈಗ ಬಳಕೆಯಲ್ಲಿರುವ ದುಬಾರಿ ಔಷಧಗಳು ಅಥವಾ ಪ್ಲಾಸ್ಮಾ ಚಿಕಿತ್ಸೆ ಯಾರ ಮೇಲೆ ಎಷ್ಟರಮಟ್ಟಿಗೆ ಫಲಕಾರಿ ಆಗುತ್ತವೆ ಎಂಬುದನ್ನೂ ಯಾರೂ ಖಾತ್ರಿಯಾಗಿ ಹೇಳುತ್ತಿಲ್ಲ. ಸಾಮೂಹಿಕ ಪ್ರತಿರಕ್ಷೆ ಯಾವಾಗ ಬರುತ್ತದೆ ಎಂದು ಯಾರೂ ಹೇಳುವ ಸ್ಥಿತಿಯಲ್ಲಿಲ್ಲ. ನಾಳೆ ಲಸಿಕೆ ಬಂದರೂ ಅದು ಶೇಕಡಾ ಎಷ್ಟು ಜನರಿಗೆ ರಕ್ಷಣೆ ಕೊಡುತ್ತದೆ ಎಂಬುದನ್ನು ಯಾರೂ ಈಗ ಹೇಳಲಾರರು. ಲಸಿಕೆಯನ್ನು ಹಾಕಿಸಿಕೊಂಡರೆ ಅದು ಎಷ್ಟು ತಿಂಗಳು ಅಥವಾ ಎಷ್ಟು ವರ್ಷ ಪ್ರಭಾವಿಯಾಗಿ ಉಳಿಯುತ್ತದೆ ಎಂಬುದು ಗೊತ್ತಿಲ್ಲ. ಇಂದಿನ ಸಂದರ್ಭದಲ್ಲಿ ಕೊರೊನಾದ ಇತರ ಎಷ್ಟು ರೂಪಗಳು ಇವೆ ಎಂಬುದನ್ನು ಯಾವ ವೈರಾಲಜಿಸ್ಟೂ ಹೇಳುತ್ತಿಲ್ಲ. ಕೋವಿಡ್19 ಮುಂದಿನ ವರ್ಷ ಕೋವಿಡ್20 ಆಗಿ, 21, 22 ಆಗಬಹುದೆ ಎಂಬುದೂ ಸ್ಪಷ್ಟವಿಲ್ಲ.

“ನಮಗೆ ಗೊತ್ತಾಗಿದ್ದು ಏನೆಂದರೆ, ನಮಗೆ ಯಾವುದೂ ಸ್ಪಷ್ಟವಾಗಿ ಗೊತ್ತಿಲ್ಲ” ಎಂದು ಕರಣ್ ಥಾಪರ್ ತಮ್ಮ ಸಂದರ್ಶನದ ಕೊನೆಯಲ್ಲಿ ಹೇಳಿದ್ದನ್ನೇ ನಾವೂ ಹೇಳಬೇಕಾಗಿದೆ.

*

ಆದರೆ ಇಷ್ಟು ಹೇಳಿ ಲೇಖನವನ್ನು ಮುಗಿಸುವಂತಿಲ್ಲ. ಈ ಸಾಂಕ್ರಾಮಿಕ ತನ್ನೊಂದಿಗೆ ಇತರ ಅನೇಕ ಸಾಂಕ್ರಾಮಿಕಗಳನ್ನೂ ಹೊತ್ತು ತಂದಿದೆ. ಮಾಹಿತಿ ಸಾಂಕ್ರಾಮಿಕ, ಭಯದ ಸಾಂಕ್ರಾಮಿಕ, ಪ್ಲಾಸ್ಟಿಕ್ ತ್ಯಾಜ್ಯಗಳ ಸಾಂಕ್ರಾಮಿಕ, ದುರಾಸೆಯ ಸಾಂಕ್ರಾಮಿಕ ಇತ್ಯಾದಿಗಳು ನಮ್ಮಲ್ಲಿ ಹಾಸು ಹೊಕ್ಕಾಗಿವೆ. ಇವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿರುವುದು ಮಾಹಿತಿ ಸಾಂಕ್ರಾಮಿಕ. ಅದೇ ಈ ಕೊರೊನಾವನ್ನು ಮೆರೆಸುವಲ್ಲಿ ಮುಖ್ಯಪಾತ್ರ ವಹಿಸಿತ್ತು. ಈಗ ಅದರ ಅಟಾಟೋಪ ಕ್ರಮೇಣ ಕಡಿಮೆ ಆಗತೊಡಗಿದೆ.

ಚಾನೆಲ್ಲುಗಳಲ್ಲಿ ಟಿ.ಆರ್.ಪಿ. ಹೆಚ್ಚಿಸುವ ಅದರ ತಾಕತ್ತು ಇಳಿಯುತ್ತಿದೆ. ವಿಪರ್ಯಾಸ ಏನಂದರೆ ಕೊರೊನಾ ಪಸರಿಸುವ ಪ್ರಮಾಣ ಹೆಚ್ಚುತ್ತ ಹೋದಂತೆಲ್ಲ, ಜನರ ಗಮನವನ್ನು ತಮ್ಮತ್ತ ಸೆಳೆಯುವ ಬೇರೇನೇನೊ ಬರುತ್ತಿವೆ. ಹವಾಮಾನ ವೈಪರೀತ್ಯದಿಂದಾಗಿ ನಿಸರ್ಗವಿಕೋಪಗಳೂ, ಶಿಲಾನ್ಯಾಸದಂಥ ಯೋಜಿತ ಪ್ರಕ್ರಿಯೆಗಳೊ, ಸಿನೆಮಾ ನಟನ ಆತ್ಮಹತ್ಯೆಯಂಥ ದುರದೃಷ್ಟ ಘಟನೆಗಳೊ ಮುನ್ನೆಲೆಗೆ ಬರುತ್ತಿವೆ. ಸೋಂಕಿತರ ಸಂಖ್ಯೆ 30 ಸಾವಿರ ತಲುಪಿದಾಗ ಪತ್ರಿಕೆಗಳಲ್ಲೂ ಪ್ರಮುಖ ಹೆಡ್ ಲೈನ್ ಆಗುತ್ತಿದ್ದ ಸುದ್ದಿ ಈಗ ಅದೇ ಸಂಖ್ಯೆ 30 ಲಕ್ಷ ದಾಟಿದಾಗ ಒಳಪುಟಕ್ಕೆ ಸರಿದಿದೆ. ಕೊರೊನಾ ಸುದ್ದಿ ಎಲ್ಲಿದೆ ಎಂಬುದನ್ನು ಹುಡುಕಬೇಕಾಗಿ ಬರುತ್ತಿದೆ.

ಈ ಸುದ್ದಿಮಾರಿಯ ಅಂತ್ಯವಾದರೆ ಸಾಂಕ್ರಾಮಿಕ ಅಂತ್ಯವಾಯಿತೆAದೇ ನಾವು ತಿಳಿದುಕೊಳ್ಳೋಣವೆ?

*

ಕೊರೊನಾ ವೈರಾಣುವನ್ನು ಮಣಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ಮೂಲೆಗೊತ್ತಲಂತೂ ನಮಗೆ ಸಾಧ್ಯವಿದೆ. ಅದು ಒಂದು ರಾಷ್ಟçದ ಇಚ್ಛಾಶಕ್ತಿಗೆ ಸಂಬAಧಿಸಿದ ವಿಚಾರ. ಸದ್ಯಕ್ಕೆ ಭಾರತ ತನ್ನ ಜಿಡಿಪಿಯ ಕೇವಲ ಶೇ. 1.28ರಷ್ಟನ್ನು ಮಾತ್ರ ಆರೋಗ್ಯ ವ್ಯವಸ್ಥೆಗೆ ಮೀಸಲಿಟ್ಟಿದೆ. ಹೋಲಿಕೆಯಲ್ಲಿ ಚೀನಾ ನಮಗಿಂತ ಇಮ್ಮಡಿ ಹಣವನ್ನು (ಶೇ. 3ರಷ್ಟನ್ನು) ವೆಚ್ಚ ಮಾಡುತ್ತಿದೆ. ನಮ್ಮಲ್ಲಿ ಸರಕಾರಿ ಆಸ್ಪತ್ರೆಗಳ ಸ್ಥಿತಿಗತಿ, ಅದರಲ್ಲೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದಯನೀಯ ಸ್ಥಿತಿ ನಮಗೆಲ್ಲ ಗೊತ್ತೇ ಇದೆ. ನಮ್ಮಲ್ಲಿ ಡಾಕ್ಟರುಗಳ ಸಂಖ್ಯೆಯೂ ತೀರ ಕಡಿಮೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳ ಪ್ರಕಾರ, ನಮ್ಮ ದೇಶದ ಪ್ರತಿ 10 ಸಾವಿರ ಜನರಿಗೆ ಎಂಟು ಡಾಕ್ಟರುಗಳಿದ್ದರೆ ಚೀನಾದಲ್ಲಿ 18, ಬ್ರಝಿಲ್ನಲ್ಲಿ 22, ರಷ್ಯದಲ್ಲಿ 40, ಕ್ಯೂಬಾದಲ್ಲಿ 82 ಡಾಕ್ಟರುಗಳಿದ್ದಾರೆ. ಸೌಲಭ್ಯಗಳ ವಿಚಾರವನ್ನಂತೂ ಕೇಳಲೇಬೇಡಿ.

ಶುದ್ಧ ನೀರು, ಕನಿಷ್ಠ ಶೌಚವ್ಯವಸ್ಥೆ, ಶುದ್ಧ ಪರಿಸರ, ಸತ್ವಯುತ ಆಹಾರ, ಅದನ್ನು ದೊರಕಿಸಿಕೊಳ್ಳಲು ಬೇಕಾದ ಆರ್ಥಿಕ ತಾಕತ್ತು, ಸೂಕ್ತ ಪ್ರಾಥಮಿಕ ಶಿಕ್ಷಣ ಇವಿಷ್ಟೂ ಸಿಗುವಂತಾದರೆ ಕೊರೊನಾವನ್ನು ಬದಿಗೆ ಸರಿಸಲು ಸಾಧ್ಯವಿದೆ. ತೊಂದರೆ ಏನೆಂದರೆ, ನಮ್ಮಲ್ಲಿ ಆರೋಗ್ಯ ವ್ಯವಸ್ಥೆ ಎಂಬುದು ಬರೀ ಔಷಧಿ, ಆಸ್ಪತ್ರೆ, ಡಾಕ್ಟರು ಈ ಮೂರಕ್ಕೇ ಸೀಮಿತವಾದಂತಿದೆ. ನೀರಾವರಿ ಎಂಜಿನಿಯರ್, ಕಸ ವಿಲೆವಾರಿ ಕಾರ್ಮಿಕ, ಪ್ರಜ್ಞಾವಂತ ಶಿಕ್ಷಕ, ಇಲೆಕ್ಟಾçನಿಕ್ ಎಂಜಿನಿಯರು ಕೂಡ ಸಮುದಾಯದ ಒಟ್ಟಾರೆ ಆರೋಗ್ಯದ ಭಾಗವೇ ಆಗಿರುತ್ತಾನೆ. ನಮ್ಮಲ್ಲಿ ಜನಾಂಗೀಯ ವೈವಿಧ್ಯ ಇದೆ; ಪ್ರಜಾಸ್ತೋಮದಲ್ಲಿ ಯುವಜನರ ಅನುಪಾತವೇ ಜಾಸ್ತಿ ಇದೆ. ಇವೆರಡೂ ಕೊರೊನಾದ ಕ್ರೌರ್ಯವನ್ನು ತಗ್ಗಿಸಲು ಸಹಾಯಕವಾಗಿವೆ. ಈ ಕಾರಣಗಳಿಂದಾಗಿಯೇ ಕೋವಿಡ್ ಮರಣದ ಅನುಪಾತ ನಮ್ಮಲ್ಲಿ ತೀರ ಕಡಿಮೆ ಇದೆ. ಅದರ ಜೊತೆಗೆ ಸಾರ್ವಜನಿಕ ಸ್ವಾಸ್ಥ÷್ಯಕ್ಕೂ ತುಸು ಒತ್ತು ಕೊಟ್ಟರೆ, ಕೊರೊನಾ ಸೋಂಕು ತಗುಲಿದರೂ ಕೂಡ ಅದು ಕೋವಿಡ್ ಆಗಿ ಬದಲಾಗದಂತೆ ನೋಡಿಕೊಳ್ಳಬಹುದು. ಕೆಲಮಟ್ಟಿಗೆ ಕೇರಳದಲ್ಲಿ ಅದಕ್ಕೆ ಸಾಕ್ಷ್ಯಗಳು ಸಿಗುತ್ತಿವೆ.

ಇವೆಲ್ಲವನ್ನೂ ನಿಧಾನಕ್ಕೆ ತೂಗಿನೋಡಿ, ಒಂದು ಜಾಣ ಧೋರಣೆಯನ್ನು ರೂಪಿಸಿಕೊಳ್ಳುವ ಮೊದಲೇ ನಮ್ಮ ಪ್ರಧಾನ ಸೇವಕರು ಧಿಗ್ಗನೆ ಲಾಕ್ಡೌನ್ ಘೋಷಣೆ ಮಾಡುವಂತಾಗಿದ್ದು ಇಡೀ ದೇಶದ ಅರ್ಥವ್ಯವಸ್ಥೆಗೇ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಅದು, ನೋಟುಗಳ ನಿಷೇಧಕ್ಕಿಂತ ದೊಡ್ಡ ಹೊಡೆತವೆಂದು ತಜ್ಞರೂ ಒಪ್ಪಿಕೊಳ್ಳುವಂತಾಗಿದೆ. ಹೀಗೆ, ಆರ್ಥಿಕ ಸಂಕಷ್ಟಗಳ ಅಂತ್ಯಕ್ಕೂ ಸೋಂಕುಮಾರಿಯ ಅಂತ್ಯಕ್ಕೂ ನೇರ ನಂಟು ಉಂಟಾಗಿದ್ದು ನಾಳಿನ ಮುನ್ನೋಟವನ್ನು ಇನ್ನಷ್ಟು ಗೋಜಲು ಮಾಡಿದೆ.

*

“ಅಸಲೀ ಸುನಾಮಿ ಇನ್ನೇನು ಬರಲಿದೆ, ಸಜ್ಜಾಗಿ” ಎಂದು ಅಮೆರಿಕದ ಖ್ಯಾತ ಅರ್ಥತಜ್ಞ ಮಾರ್ಕ್ ಝಾಂಡಿ ಎಂಬಾತ ಆಗಸ್ಟ್ 20ರಂದು ಎಚ್ಚರಿಕೆ ನೀಡಿದ. ಆತ ಹೇಳಿದ್ದು ಕೊರೊನಾ ಸುನಾಮಿಯಲ್ಲ, ನಿರುದ್ಯೋಗದ ಸುನಾಮಿಯ ಕುರಿತಾಗಿತ್ತು. ಅಮೆರಿಕದಲ್ಲಿ ಇದೀಗ 11 ಲಕ್ಷ ಕಾರ್ಮಿಕರು ಮಹಾಮಾರಿ ಸಂದರ್ಭಕ್ಕೆAದೇ ಸೃಷ್ಟಿಯಾದ `ತುರ್ತು ನಿರುದ್ಯೋಗ ಪರಿಹಾರ’ಕ್ಕೆ ಅರ್ಜಿ ಹಾಕಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಕೇವಲ 27,000 ಜನರು ಪರಿಹಾರ ಕೋರಿದ್ದರು. ಅವರ ಸಂಖ್ಯೆ ಈಗ 11 ಲಕ್ಷಕ್ಕೇರಿದೆ. ಇನ್ನಷ್ಟು ಏರಲಿದೆ.

ಆತ ಮಾತಾಡಿದ್ದು ನಿರುದ್ಯೋಗದ ಒಂದು ಸುನಾಮಿ ಬಗ್ಗೆ ಅಷ್ಟೆ. ನೀವೀಗ ಬೇರೆ ರಂಗಗಳ ತಜ್ಞರನ್ನು ಕೇಳಿದರೆ ಬೇರೆ ಬೇರೆ ಸುನಾಮಿಗಳ ಬಗ್ಗೆ ಎಚ್ಚರಿಸುತ್ತಿದ್ದಾರೆ. ಬೆಲೆಕುಸಿತದ ಸುನಾಮಿ, ಖಿನ್ನತೆಯ ಸುನಾಮಿ, ಲಸಿಕೆಗಳ ಸುನಾಮಿ, ಪ್ಲಾಸ್ಟಿಕ್ ತ್ಯಾಜ್ಯಗಳ ಸುನಾಮಿ…

ಎಲ್ಲವನ್ನೂ `ಸುನಾಮಿ’ ಎನ್ನುವುದು ಸರಿಯಾಗಲಿಕ್ಕಿಲ್ಲ; ಕೆಲವು ಸುಂಟರಗಾಳಿ, ಇನ್ನು ಕೆಲವು ಭೂಕುಸಿತ, ಮತ್ತೆ ಕೆಲವು ಮೇಘಸ್ಫೋಟ ಎಂದೆಲ್ಲ ಹೆಸರಿಸಬಹುದು. ಎಲ್ಲಕ್ಕಿಂತ ಕಳವಳಕಾರಿ ಆಗಬಹುದಾದದ್ದು ಏನೆಂದರೆ ಪ್ರಜೆಗಳ ಹಕ್ಕುಗಳನ್ನು ಹೊಸಕಿ ಹಾಕಬಲ್ಲ ನಿರಂಕುಶ ಅಧಿಕಾರದ ಮಹಾಪೂರ. ಅದು ಮತ್ತೆ ಮತ್ತೆ ಬರುತ್ತಿರುತ್ತದೆ, ಮೇಲಿನಿಂದ ಕೆಳಕ್ಕಿಳಿದು ಬರುತ್ತದೆ. ರಾಷ್ಟç ನಾಯಕರಿಂದ ಹೊರಟು ಪಂಚಾಯ್ತಿ ಪಿಡಿಓ ಮೂಲಕವೂ ನುಗ್ಗಿ ಬರಬಹುದು.

ಒಂದು ದೃಶ್ಯವನ್ನು ಊಹಿಸಿಕೊಳ್ಳಬಹುದು: ಕೊರೊನಾ ನಿಗ್ರಹಕ್ಕೆ ಲಸಿಕೆಯೊಂದು ಬರುತ್ತದೆ. ಒಂದೇಕೆ, ಎರಡೋ ಅಥವಾ ಡಝನ್ನೋ ಬರಬಹುದು. ಅವುಗಳಲ್ಲಿ ಒಂದನ್ನು ಇಡೀ ರಾಷ್ಟ್ರದ ಎಲ್ಲ ಪ್ರಜೆಗಳೂ ಹಾಕಿಸಿಕೊಳ್ಳಲೇ ಬೇಕೆಂದು ಸರಕಾರ ಕಡ್ಡಾಯ ಮಾಡಬಹುದು. ಹಾಕಿಸಿಕೊಳ್ಳಲೇಬೇಕೆಂಬ ತುಡಿತ ಎಲ್ಲರಲ್ಲೂ ಉಂಟಾಗುವಂಥ ರಂಗಸಜ್ಜಿಕೆ ರೂಪುಗೊಂಡಿದೆ ಅನ್ನೋದೂ ನಿಜ ಅನ್ನಿ. ಅದನ್ನೇ ಕಡ್ಡಾಯ ಮಾಡಿದಾಗ ಆಧಾರ್ ಮಾದರಿಯಲ್ಲಿ ನಮ್ಮನ್ನು ಅದು ಎಲ್ಲ ಕಡೆಯಿಂದ ಕಟ್ಟಿಹಾಕಬಹುದು. ಅದಕ್ಕೆ ಆಗಲೇ ಸಿದ್ಧತೆ ನಡೆದಿದೆ.

ಕೆಂಪುಕೋಟೆಯ ಭಾಷಣದಲ್ಲಿ ಪ್ರಧಾನಿ ಮೋದಿಯವರು ಹೊಸ `ರಾಷ್ಟ್ರೀಯ ಡಿಜಿಟಲ್ ಹೆಲ್ಥ್ ಮಿಶನ್’ ಅಡಿಯಲ್ಲಿ ಎಲ್ಲರಿಗೂ ಹೆಲ್ಥ್ ಕಾರ್ಡು ವಿತರಿಸುವ ಸೂಚನೆ ಕೊಟ್ಟಿದ್ದಾರೆ. ಅದು ಕಡ್ಡಾಯವಾದರೆ ನೀವು ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಸಾಕ್ಷ್ಯವನ್ನು ತೋರಿಸಿದರೆ ಮಾತ್ರ ಬ್ಯಾಂಕಿನ ನಿಮ್ಮದೇ ಅಕೌಂಟಿನಿಂದ ನೀವು ಹಣ ತೆಗೆಯಲು ಅನುಮತಿ ಸಿಗುತ್ತದೆ ಅನ್ನಿ. ಆಗೇನು ಮಾಡುತ್ತೀರಿ? ಅಥವಾ ನಿಮ್ಮ ಮಗ/ಮಗಳಿಗೆ ಲಸಿಕೆ ಹಾಕಿದ್ದರೆ ಮಾತ್ರ ಶಾಲೆ/ಕಾಲೇಜಿಗೆ ಪ್ರವೇಶ ಸಿಗುತ್ತದೆ ಅನ್ನಿ. ಅಸಲಿ ಲಸಿಕೆಯೊ, ನಕಲಿ ಸರ್ಟಿಫಿಕೇಟೊ, ಏನೋ ಒಂದು ದಾಖಲೆಯನ್ನು ಪಡೆಯಲು ನೀವು ಒಲ್ಲದ ಮನಸ್ಸಿನಿಂದ ಎಲ್ಲೋ ಕ್ಯೂ ನಿಂತು, ತೋಳಿಗೆ ಸೂಜಿ ಚುಚ್ಚಿಸಿಕೊಂಡು, ಹೇಳಿದಷ್ಟು ಹಣ ತೆತ್ತು, ಫೋಟೊ ತೆಗೆಸಿಕೊಂಡು ಕಾರ್ಡ್ ಹಿಡಿದು ಓಡಾಡಬೇಕಾಗುತ್ತದೆ.

ಆಧಾರ್ ಎಂಬ ಗಣಿಯಲ್ಲಿ ಸಿಗದ ನಿಮ್ಮ ಖಾಸಗಿ ಮಾಹಿತಿಗಳನ್ನು ಹೆಲ್ತ್ ಕಾರ್ಡ್ ಎಂಬ ಹೊಸ ನಿಕ್ಷೇಪದ ಮೂಲಕ ಸರಕಾರ ಎತ್ತಬಹುದು (ಆಗಲೂ ಕೆಲವರು ಲಸಿಕೆ ಹಾಕಿಸಿಕೊಳ್ಳದೆ ಉಳಿಯಬಹುದು. ನವಜಾತ ಶಿಶು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ರೋಗಿ ಅಥವಾ ಮಲೆಮಹದೇಶ್ವರ ಬೆಟ್ಟದ ಸೋಲಿಗ. ಅಂಥವರ ಮೂಲಕವೇ ಕೊರೊನಾ ಜೀವಂತವಾಗುಳಿದು ಮತ್ತೆ ಚಿಗಿತುಕೊಳ್ಳಬಹುದು).

ಕೊನೆಯಲ್ಲಿ,

ಕೊರೊನಾವನ್ನು ಜೀವಂತವಾಗಿಡಬಲ್ಲ ಇನ್ನೊಂದು ಮುಖ್ಯ ಸಂಗತಿ ಇದೆ: ಕೊರೊನಾವನ್ನು ಅಥವಾ ಕೊರೊನಾ ಭಯವನ್ನು ಆದಷ್ಟು ಹೆಚ್ಚು ದಿನ ಉಳಿಸಿಕೊಂಡಷ್ಟೂ ಹೆಚ್ಚು ಲಾಭ ಪಡೆಯುವ ಅನೇಕ ವ್ಯವಸ್ಥೆಗಳು ಗಟ್ಟಿಯಾಗಿ ನಮ್ಮಲ್ಲಿ ತಳವೂರುತ್ತಿವೆ. ಕೊರೊನಾ ಕಾಲಿಟ್ಟ ಹೊಸದರಲ್ಲಿ ತಬ್ಲೀಗಿ ಹೆಸರಿನಲ್ಲಿ ಕೋಮುದ್ವೇಷದ ಕಿಚ್ಚೆಬ್ಬಿಸಿ ರಾಜಕೀಯ ಲಾಭ ಪಡೆದಿದ್ದಂತೂ ಆಯಿತು. ಗಿಡಮೂಲಿಕೆಗಳ ಚೂರ್ಣವನ್ನು ರಾಷ್ಟ್ರೀಯ ವೇದಿಕೆಯಲ್ಲಿ `ಕೊರೊನಿಲ್’ ಹೆಸರಿನಲ್ಲಿ ಪ್ರದರ್ಶಿಸಿ ಅದರ ಲಾಭ ಪಡೆದಿದ್ದಂತೂ ಆಯಿತು. ದೇಶವನ್ನು ಮುನ್ನಡೆಸಲು ಹೊರಟವರು ಸ್ವಯಂಕೃತ ಆರ್ಥಿಕ ಸಂಕಷ್ಟಗಳ ಕತೆ ಹೇಳಿ ಅನುಕಂಪ ಗಿಟ್ಟಿಸಿದ್ದೂ ಆಯಿತು. ಕೊರೊನಾ ನೆಪ ಹೇಳಿ, ಕಾರ್ಮಿಕರ ಸಂಖ್ಯೆಯನ್ನೂ ಸಂಬಳವನ್ನು ಕಡಿಮೆ ಮಾಡಿ ಅನುಕೂಲ ಪಡೆದಿದ್ದೂ ಆಯಿತು.

ಇನ್ನು, ಅಂಬುಲೆನ್ಸ್, ಪಿಪಿಇ ಕಿಟ್ಸ್, ಸ್ಯಾನಿಟೈಸರುಗಳಿಂದ ಹಿಡಿದು ಐಸಿಯು, ವೆಂಟಿಲೇಟರ್, ತರಾವರಿ ಔಷಧ, ನಾನಾ ಬಗೆಯ ಆಪ್‌ಗಳು, ಸ್ಮಾರ್ಟ್ ಫೋನುಗಳು, ವೆಬಿನಾರ್ ಸಾಫ್ಟವೇರುಗಳು, ದೂರಶಿಕ್ಷಣ ಸರಂಜಾಮುಗಳು… ಕೊರೊನಾ ಮೂಲಕ ಲಾಭ ಪಡೆಯುವ ವಿಧಾನಗಳು ಒಂದೆ ಎರಡೆ?

ಕೊರೊನಾ ಚಿರಾಯುವಾಗಲೆಂದು ಹಾರೈಸುವವರು ಒಬ್ಬರೆ, ಇಬ್ಬರೆ?

*ಉತ್ತರ ಕನ್ನಡದ ಬಕ್ಕೆಮನೆ ಗ್ರಾಮದಲ್ಲಿ ಜನಿಸಿದ ಲೇಖಕರು ಖರಗ್‌ಪುರ ಐಐಟಿಯಲ್ಲಿ ಎಂಎಸ್ಸಿ, ನವದೆಹಲಿಯ ಜೆ.ಎನ್.ಯು.ದಲ್ಲಿ ಎಂ.ಫಿಲ್. ಮುಗಿಸಿದ್ದಾರೆ. ಅವರು ಪರಿಸರ ಅಧ್ಯಯನ, ಕಳಕಳಿ, ಬರವಣಿಗೆಗೆ ಬದ್ಧರು.

Leave a Reply

Your email address will not be published.