ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು

ಇತ್ತೀಚೆಗೆ ಅಗಲಿದ ಸುಭದ್ರಮ್ಮ ಮನ್ಸೂರು ಬದುಕಿನುದ್ದಕ್ಕೂ ಲವಲವಿಕೆಯಿಂದ ನಟಿಸುತ್ತಿದ್ದರು, ಹಾಡುತ್ತಿದ್ದರು. ಅವರ ಆ ಉತ್ಸಾಹ ಕೊನೆಯವರೆಗೂ ಕುಂದಲಿಲ್ಲ ಎಂಬುದೇ ಒಂದು ಸಂತಸದ ಸೋಜಿಗ!

 

ಸಂಗೀತದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು; ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಸಂಗೀತ ಹಾಗೂ ಅಭಿನಯ ಎರಡರಲ್ಲೂ ಸಾಧನೆಯ ಶಿಖರವೇರಿದ ಸುಭದ್ರಮ್ಮ ಮನ್ಸೂರು ಕನ್ನಡ ರಂಗಭೂಮಿಯ ಅಪ್ರತಿಮ ಕಲಾವಿದೆ. ಅಸ್ಖಲಿತ ಮಾತುಗಾರಿಕೆ, ಅಮೋಘ ಅಭಿನಯ, ಸುಮಧುರ ಕಂಠದ ಹಾಡುಗಾರಿಕೆಗೆ ಮತ್ತೊಂದು ಹೆಸರೇ ಸುಭದ್ರಮ್ಮ ಮನ್ಸೂರು. ಅಂತೆಯೇ ಅವರು ಗಾನಕೋಗಿಲೆಯೂ ಹೌದು, ಅಭಿನೇತ್ರಿಯೂ ಹೌದು. ಏಳು ದಶಕಗಳ ಕಾಲ ನಿರಂತರವಾಗಿ ವೃತ್ತಿ ನಟಿಯಾಗಿ ತಮ್ಮ ಜೀವನವನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡಿದ್ದರು.

ಬಳ್ಳಾರಿಯಲ್ಲಿ ಸಂಗೀತ ಮನೆಪಾಠ ಮಾಡುತ್ತಿದ್ದ ಭಾಗ್ಯಮ್ಮ, ಮೆಕಾನಿಕ್ ಜ್ವಾಲಾಪತಿ ದಂಪತಿಗೆ 1939ರಲ್ಲಿ ಜನಿಸಿದ ಸುಭದ್ರ ತನ್ನ ಹನ್ನೊಂದನೇ ವಯಸ್ಸಿಗೆ ಬಳ್ಳಾರಿಯಲ್ಲಿ ಕ್ಯಾಂಪ್ ಮಾಡಿದ್ದ ಶ್ರೀ ಸುಮಂಗಲಿ ನಾಟ್ಯಸಂಘ ಎಂಬ ನಾಟಕ ಕಂಪನಿ ಸೇರಿ ಬಾಲ ನಟಿಯಾಗಿ ಬಣ್ಣ ಹಚ್ಚಿದರು. ಒಂದೊಂದಾಗಿ ಹಾಡುಗಳನ್ನು ಕಲಿತರು. ಕ್ರಮೇಣ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸುವ ಅವಕಾಶ ಪಡೆದರು. ಅಭಿನಯ, ಹಾಡುಗಾರಿಕೆ ಒಟ್ಟೊಟ್ಟಿಗೆ ಕಲಿಯುತ್ತ ‘ಹಾಡು ನಟಿ’ಯಾದರು. ನಾಟಕ ಕಂಪನಿ ಕರ್ನಾಟಕಾಂಧ್ರದ ಹಲವು ಪಟ್ಟಣಗಳಲ್ಲಿ ಎರಡು ವರ್ಷ ಕ್ಯಾಂಪ್ ಮುಂದುವರಿಸಿತು. ಅದೇ ಕಂಪನಿಯ ಹಿರಿಯ ನಟರಾಗಿದ್ದ ಲಿಂಗರಾಜ ಮನ್ಸೂರು-ಸುಭದ್ರ (ಲಿಂಗರಾಜ ಅವರು ಸಂಗೀತ ಲೋಕದ ದಂತಕತೆ ಮಲ್ಲಿಕಾರ್ಜುನ ಮನ್ಸೂರು ಅವರ ಸಂಬAಧಿ) ಮಧ್ಯೆ ಪ್ರೇಮ ಅಂಕುರಿಸಿ 1952ರಲ್ಲಿ ಅವರ ವಿವಾಹವಾಯಿತು. ಸುಭದ್ರ ಇಲ್ಲಿಂದ ಸುಭದ್ರ ಮನ್ಸೂರು ಆದರು.

ಶ್ರೇಷ್ಠ ನಟಿಯ ಗುಟ್ಟು!

ಜನತೆಯ ನಡೆನುಡಿ, ಹಾವಭಾವವನ್ನು ಕಲಾತ್ಮಕವಾಗಿ ರಂಗದ ಮೇಲೆ ತರುವುದೇ ನಾಟಕ. ಅನುಕರಣೆ ಇದಕ್ಕೆ ಮೂಲ. ಕಲಾವಿದರು ಮೂಲತಃ ಅನುಕರಿಸುವ ಕಲೆ ರೂಢಿಸಿಕೊಳ್ಳಬೇಕು. ಇದು ಮೂಲಭೂತ ಗುಣ. ಸುಭದ್ರಮ್ಮ ಒಳ್ಳೆಯ ಅನುಕರಣಶೀಲೆ. ಸಹಕಲಾವಿದರೊಂದಿಗೆ ಕಾಲ ಕಳೆಯುವಾಗ ಅವರ ವಿಶೇಷ ಪ್ರತಿಭೆಯನ್ನು ನೋಡಿಯೇ ಆನಂದಿಸಬೇಕು. ಹಾಸ್ಯಪ್ರವೃತ್ತಿ ಅವರಲ್ಲಿ ಜಾಗೃತ. ಪ್ರಸನ್ನ ಮುಖಭಾವದ ಮರೆಯಲ್ಲಿ ಇಂತಹದೊAದು ತಮಾಷೆಯ, ಅನುಕರಣೆಯ ಕಲಾವಂತಿಕೆ ಅಡಕವಾಗಿರುವುದು ಗೊತ್ತೇ ಆಗುವುದಿಲ್ಲ. ಶ್ರೇಷ್ಠ ನಟಿಯ ಗುಟ್ಟು ಇದು. ಅವರ ಹಾಸ್ಯ ಪ್ರವೃತ್ತಿ, ಜಪ ತಪ ಧ್ಯಾನ ಹಾಗೂ ಅಧ್ಯಯನಶೀಲತೆ ಅವರ ವ್ಯಕ್ತಿತ್ವದ ಘನತೆ ಹೆಚ್ಚಿಸಿದೆ.

 

ಲಿಂಗರಾಜ ಮನ್ಸೂರು ಅದಾಗಲೇ ವೃತ್ತಿ ರಂಗಭೂಮಿಯ ಪ್ರಖ್ಯಾತ ನಟರೆನಿಸಿಕೊಂಡಿದ್ದರು. ಮುಂದಿನ 17 ವರ್ಷ ಕಾಲ ಸುಭದ್ರ- ಮನ್ಸೂರು ದಂಪತಿ ಏಣಗಿ ಬಾಳಪ್ಪನವರ ಕಲಾವೈಭವ ನಾಟ್ಯಸಂಘ, ಮಾಸ್ಟರ್ ಹಿರಣ್ಣಯ್ಯ ಮಿತ್ರಮಂಡಳಿ ಹಾಗೂ ಮಾಚ ಮತ್ತು ಹನುಮಂತರ ಬೆನಕಟ್ಟಿ ನಾಟಕ ಕಂಪನಿಗಳಲ್ಲಿ ನಟ ನಟಿಯರಾಗಿ ಸೇವೆ ಸಲ್ಲಿಸಿದರು. ಆ ಹದಿನೇಳು ವರ್ಷ ಸುಭದ್ರ ಅವರಿಗೆ ನಟನೆ ಮತ್ತು ಅಭಿನಯದ ಕಲಿಕೆಯ ಜತೆಗೆ ಅದನ್ನು ಪ್ರಯೋಗಕ್ಕೆ ತರುವ ಅವಧಿಯಾಗಿದ್ದರೆ; ಲಿಂಗರಾಜ ಮನ್ಸೂರರಿಗೆ ತಮ್ಮ ಪ್ರಬುದ್ಧ ಅಭಿನಯ ಪ್ರದರ್ಶನಕ್ಕೆ ಅಖಾಡವಾಗಿತ್ತು.

ಹದಿನೇಳು ವರ್ಷದ ನಾಟಕ ಕಂಪನಿ ಜೀವನ ಸಾಕೆನಿಸಿ ದಂಪತಿ 1966ರಲ್ಲಿ ಬಳ್ಳಾರಿಗೆ ವಾಪಸ್ ಬಂದು ನೆಲೆಸಿದರು. ಲಿಂಗರಾಜ ಅವರ ವಯಸ್ಸು ಐವತ್ತು ಮೀರಿತ್ತು. ಸುಭದ್ರಮ್ಮಗೆ 27ರ ಹರೆಯ. ಲಿಂಗರಾಜ ಅವರು ತಮ್ಮ ಅಭಿನಯ ಸಾಧ್ಯತೆಗಳನ್ನೆಲ್ಲ ನಾಟಕ ಕಂಪನಿಗಳಲ್ಲಿ ಸೂರೆ ಹೊಡೆದಾಗಿತ್ತು. ಅಷ್ಟಕ್ಕೂ ಗ್ರಾಮೀಣ ಮತ್ತು ಪಟ್ಟಣದ ಹವ್ಯಾಸಿ ರಂಗಭೂಮಿಯಲ್ಲಿ ವೃತ್ತಿ”ನಟ”ರಿಗೆ ಅವಕಾಶ ಇಲ್ಲ. ವೃತ್ತಿ”ನಟಿ”ಯರಿಗೆ ಹೇರಳ ಅವಕಾಶ ಇದೆ. ಇಲ್ಲಿಂದ ಮುಂದಿನದು ಲಿಂಗರಾಜ ಅವರಿಗೆ ವಿಶ್ರಾಂತ ಜೀವನ. ಸುಭದ್ರಮ್ಮನಿಗೆ ಬಿಡುವಿಲ್ಲದ ರಂಗಪಯಣ. ನಾಟಕ ಕಂಪನಿಗಳಲ್ಲಿ ಅಭಿನಯ, ಹಾಡುಗಾರಿಕೆಯ ಹಲವು ಪಟ್ಟುಗಳನ್ನು ಕಲಿತು ಹೊರಬಂದಿದ್ದ ಸುಭದ್ರಮ್ಮಗೆ ಅದನ್ನು ಪ್ರಯೋಗಕ್ಕೊಡ್ಡುವ ದೊಡ್ಡ ಅಖಾಡ ಆಂಧ್ರದ ಗಡಿ ಮತ್ತು ಕರ್ನಾಟಕದಾದ್ಯಂತ ಲಭಿಸಿತು. ಮುಂದಿನ ಐವತ್ತು ವರ್ಷಗಳ ಕಾಲ ಪಟ್ಟಣವೂ ಸೇರಿದ ಗ್ರಾಮೀಣ ಹವ್ಯಾಸಿ ರಂಗಭೂಮಿ ವೃತ್ತಿ ನಟಿಯರ ಪೈಕಿ ಅಗ್ರಗಣ್ಯರೆನಿಸಿದರು. ಅದು ಅರ್ಧ ಶತಮಾನದ ಕನ್ನಡ ರಂಗಭೂಮಿಯ ಚರಿತ್ರೆ.

ಪೌರಾಣಿಕ ನಾಟಕಗಳ ಕುಂತಿ, ಗಾಂಧಾರಿ, ದ್ರೌಪದಿ, ಉತ್ತರೆ, ಸೀತೆ, ಮಂಡೋದರಿ, ಮಲ್ಲಮ್ಮ, ನಂಬೆಕ್ಕ; ಸಾಮಾಜಿಕ ನಾಟಕಗಳ ನಾಯಕಿ, ಉಪನಾಯಕಿ, ಖಳನಾಯಕಿ, ಹಾಸ್ಯ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ಅಮೋಘವಾಗಿ ಅಭಿನಯಿಸಿ ಹೆಸರು ಮಾಡಿದರು. ಪ್ರಯೋಗಶೀಲ ನಾಟಕಗಳಲ್ಲಿ ನಟಿಸಿದರು. ರಂಗಗೀತೆ ಗೋಷ್ಠಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ರಂಗಶಿಬಿರಗಳಲ್ಲಿ ಹಾಡುಗಳನ್ನು ಕಲಿಸಿದರು.

ಮಾಳಿಗೆ ಮೇಲೆಲ್ಲ ಜನ!

ಏಳೆಂಟು ನೂರು ಪ್ರೇಕ್ಷಕ ಸಾಮರ್ಥ್ಯದ ದೊಡ್ಡ ರಂಗಮಂದಿರ ಭರ್ತಿಯಾದರೆ ಭಾರಿ ಜನ ಎನ್ನುತ್ತೇವೆ. ಸುಭದ್ರಮ್ಮ ಅಭಿನಯಸಿದ ನಾಟಕ ವೀಕ್ಷಿಸಲು ಜನಸಾಗರ. ಹಳ್ಳಿಯ ಬಯಲು ಸಾಲದಾಗಿ ಮನೆಯ ಮಾಳಿಗೆ ಮೇಲೆಲ್ಲ ಕುಳಿತಿರುತ್ತಾರೆ. ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಆಂಧ್ರದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ನಲವತ್ತು ವರ್ಷಗಳಲ್ಲಿ ಸುಭದ್ರಮ್ಮ ನಟಿಸಿದ ಇಂತಹ ನೂರಾರು ನಾಟಕಗಳು ಸಾಕ್ಷಿಯಾಗಿವೆ. ಅವೆಲ್ಲೂ ದಾಖಲಾಗಿಲ್ಲ!

 

ರಂಗಗೀತೆಗಳಿಗೆ ಮತ್ತಷ್ಟು ಶಾಸ್ತ್ರೀಯತೆ ಹಿನ್ನೆಲೆ ಬೇಕಿತ್ತು. ಅದಕ್ಕಾಗಿ ಬಳ್ಳಾರಿಯ ಚಂದ್ರಶೇಖರ ಆಚಾರಿ ಗವಾಯಿಗಳ ಬಳಿ ಶಾಸ್ತ್ರೀಯ ಸಂಗೀತವನ್ನು ಶ್ರದ್ಧೆಯಿಂದ ಕಲಿತರು. ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ಎನ್ನುವ ಹಾಗೆ ತಮ್ಮ ಸಂಭಾಷಣಾ ವೈಖರಿಯನ್ನು ಸುಧಾರಿಸುತ್ತಲೇ ಹೋದರು. ಲಿಂಗಮೆಚ್ಚಿ ಅಹುದಹುದೆನ್ನುವ ಹಾಗೆ ಭಾವಪೂರ್ಣವಾಗಿ ನಟಿಸಿದರು. ಚಿತ್ರರಂಗದಲ್ಲಿ ರಾಜಕುಮಾರ್ ಹೇಗೋ; ರಂಗಭೂಮಿಯಲ್ಲಿ ಸುಭದ್ರಮ್ಮ ಹಾಗೆ ಎಂಬ ಪ್ರತೀತಿಗೊಳಗಾದರು. ಇಷ್ಟಾದರೂ ತಾನಿನ್ನೂ ಕಲಿಯುವುದಿದೆ ಎನ್ನುವ ವಿನಮ್ರತೆಯನ್ನು ಹೊಂದಿ, ತಮ್ಮ ಸೃಜನಶೀಲ ಪ್ರತಿಭೆ ಸದಾ ಹೊಳೆಯುತ್ತಿರುವಂತೆ ಜತನವಾಗಿ ಪೋಷಿಸಿಕೊಂಡು ಬಂದಿದ್ದಾರೆ. ಪೌರಾಣಿಕ ನಾಟಕಗಳ ಗಟ್ಟಿಗಿತ್ತಿಯರ ಪಾತ್ರಗಳಲ್ಲೇ ಹೆಚ್ಚು ನಟಿಸಿರುವ ಸುಭದ್ರಮ್ಮ- ಆ ಪಾತ್ರಗಳನ್ನು ಆವಾಹಿಸಿಕೊಂಡಿರುವರೋ ಏನೋ ಎನ್ನುವ ಹಾಗೆ ಅವರ ಮುಖದಲ್ಲಿ ಸದಾ ಪ್ರಸನ್ನಭಾವ ಇರುತ್ತದೆ.

ಸುಭದ್ರಮ್ಮನ ಸುಮಧುರ ಕಂಠ ಅದೆಂತ ಮೋಹಕ ಎಂದರೆ ಇವರೇನಾದರೂ ಚಿತ್ರರಂಗಕ್ಕೆ ಹೋಗಿದ್ದರೆ- ಅದರಲ್ಲೂ ಹಿಂದಿ ಚಿತ್ರರಂಗದಲ್ಲಿ ಹಾಡುಗಾರಿಕೆಗೆ ಅವಕಾಶ ಪಡೆದಿದ್ದರೆ ಲತಾ ಮಂಗೇಶ್ಕರ್, ಆಶಾ ಭೋಸಲೆ ಅವರಷ್ಟೇ ಖ್ಯಾತಿ ಪಡೆಯುತ್ತಿದ್ದರು ಎಂದು ಎನಿಸದಿರದು. ಕನ್ನಡಿಗರ ಸುದೈವ. ಅವರ ಅಮೋಘ ಕಂಠಸಿರಿಯನ್ನು ಕೇಳುವ ಬಾಗ್ಯ ಕಳೆದ ಎಪ್ಪತ್ತು ವರ್ಷಗಳಿಂದ ನಮ್ಮದಾಗಿದೆ. ಸುಭದ್ರಮ್ಮ ರಂಗಪ್ರವೇಶ ಪಡೆದ ದಿನದಿಂದ ಇಲ್ಲಿವರೆಗೆ 200ಕ್ಕೂ ಅಧಿಕ ಶೀರ್ಷಿಕೆಯ ಸುಮಾರು ಹನ್ನೆರಡು ಸಾವಿರ ಪ್ರದರ್ಶನಗಳಲ್ಲಿ ನಟಿಸಿದ್ದಾರೆ.

ಮರಳಿನಲಿ ಶಿವನೊಲಿಸುವುದು ಸುಲಭ

“ಹದಿಹರೆಯದಲ್ಲಿ ನಾಟಕ ಕಂಪನಿಗಳಲ್ಲಿ ಮಹಾರಥಿ ಕರ್ಣ, ಕುರುಕ್ಷೇತ್ರ, ಅಕ್ಷಯಾಂಬರ, ಬಡತನದ ಭೂತ, ಮಾತಂಗಕನ್ಯೆ, ಅಗ್ನಿಕಮಲ, ಸಂಪೂರ್ಣ ರಾಮಾಯಣ ಮುಂತಾದ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಆರಂಭದಲ್ಲಿ ಆ ಶಬ್ದಗಳ ಜೋಡಣೆ ಮಾಡಿ ಕಲಿಯಲು ಬಹಳ ಕಷ್ಟವಾಯಿತು. ತಲೆಗೆ ಹೋಗ್ತಾ ಇರಲಿಲ್ಲ. ಮಾನಸಿಕವಾಗಿ ಗಟ್ಟಿಯಾದೆ. ಅರ್ಥಗ್ರಹಣ ಮಾಡುವ ಶಕ್ತಿ ಬೆಳೆಯಿತು. ಶಬ್ದಸೌಂದರ್ಯ ಅನುಭವಿಸುವ ಮನೋಭಾವವನ್ನು ರೂಢಿಸಿಕೊಂಡೆ. ಉಚ್ಛಾರಣೆಯ ಭಾವ ಅರಿತೆ..”

ಅಸ್ಖಲಿತವಾಗಿ ಸಂಭಾಷಣೆ ನುಡಿಸುವ ಪರಿಗೆ ಅವರು ಕಾರಣ ನೀಡುವುದು ಹೀಗೆ. “ಒರತಿಯಂದದಿ ಮರಳಿನಲಿ ಶಿವನೊಲಿಸಿಕೊಳ್ಳುವುದು ಸುಲಭ. ಆದರೆ ಎಲ್ಲ ಬಲ್ಲೆನೆಂಬ ಗರ್ವವನು ಘಲ್ಲಿಸದೆ ಬಿಡಲಾರನು ಆ ಗಂಗಾಧರನು..” ಎಂಬ ಕಂದಗಲ್ಲರ ‘ನರವೀರ ಪಾರ್ಥ’ ನಾಟಕದ ಸಂಭಾಷಣೆ ನನಗೆ ದಾರಿದೀಪವಾಯಿತು ಎನ್ನುತ್ತಾರೆ ಮನ್ಸೂರು.

ಸುಭದ್ರಮ್ಮ ಅವರ ಪ್ರತಿಭೆ ಮತ್ತು ರಂಗಭೂಮಿಗೆ ಅವರ ಕೊಡುಗೆಯನ್ನು ಗಣಿಸಿ ಕನ್ನಡ ರಂಗಭೂಮಿಯ ಬಹುತೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮುಡಿಗೇರಿವೆ. ಗುಬ್ಬಿ ವೀರಣ್ಣ ಪ್ರಶಸ್ತಿ, ನಾಡೋಜ, ಡಾಕ್ಟರೇಟ್, ರಾಜ್ಯೋತ್ಸವ, ನಾಟಕ ಅಕಾಡೆಮಿ, ಆಳ್ವಾಸ್ ನುಡಿಸಿರಿ, ಸಂದೇಶ, ಪಾಟೀಲ ಕೊಟ್ರಗೌಡ, ಕಲಾಬಂಗಾರ, ಶಿವಕುಮಾರ, ಚಿಂದೋಡಿ ಲೀಲಾ, ಲಕ್ಷ್ಮಿಬಾಯಿ ಸುಬ್ಬಯ್ಯನಾಯ್ಡು, ಇಂಡುವಾಳ ಹೊನ್ನಯ್ಯ, ಶಾಂತವೇರಿ ಗೋಪಾಲಗೌಡ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಅಮೆರಿಕದ ವಿಶ್ವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಕಲಾವಿದೆಯಾಗಿ ಸುಭದ್ರಮ್ಮ ಮನ್ಸೂರು ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದು ಗ್ರಾಮೀಣ ರಂಗಭೂಮಿಗೆ. ಪಟ್ಟಣ, ನಗರಗಳನ್ನೂ ಈ ಗ್ರಾಮೀಣ ರಂಗಭೂಮಿ ಎಂಬ ವ್ಯಾಖ್ಯಾನ ಒಳಗೊಂಡಿದೆ.

ವೃತ್ತಿಯಿಂದ ಪಡೆದದ್ದನ್ನು ಅವರು ಹಳ್ಳಿಗಳಿಗೆ ಕೊಂಡೊಯ್ದರು. ಪಟ್ಟಣಗಳಿಗೆ ತೆಗೆದುಕೊಂಡು ಹೋದರು, ನಗರಗಳಲ್ಲಿ ಪ್ರದರ್ಶಿಸಿದರು. ಒಂದು ರೀತಿ ಅದು ವೃತ್ತಿ ರಂಗಭೂಮಿ ಮುಂದುವರಿಕೆ. ತಮ್ಮ ಕಲಾ ಜೀವನದುದ್ದಕ್ದು ಅವರು ಹೆಚ್ಚು ನಾಟಕಗಳ ಪ್ರದರ್ಶನಗಳಲ್ಲಿ ನಟಿಸಿದ್ದು ಹವ್ಯಾಸಿಗಳ ಮಧ್ಯೆ. ಅವರ ರಂಗ ಆಯುಷ್ಯವನ್ನು ಒಟ್ಟು ನಾಲ್ಕು ಭಾಗ ಮಾಡಿದರೆ, ಅದರಲ್ಲಿ ನಾಲ್ಕನೇ ಒಂದು ಭಾಗ ಮಾತ್ರ ವೃತ್ತಿ ನಾಟಕ ಕಂಪನಿ ಬರುತ್ತದೆ. ಉಳಿದ ಮೂರು ಪಾಲು ಗ್ರಾಮೀಣ ರಂಗಭೂಮಿ ಬರುತ್ತದೆ. 

*ಲೇಖಕರು ಹಿರಿಯ ಪತ್ರಕರ್ತರು, ವೃತ್ತಿ ರಂಗಭೂಮಿ ಪರಿಣತರು; ಸುಭದ್ರಮ್ಮ ಮನ್ಸೂರು ಕುರಿತ ಅವರ ಕೃತಿಯನ್ನು ಹಂಪಿ ಕನ್ನಡ ವಿವಿ ಪ್ರಕಟಿಸಿದೆ.

Leave a Reply

Your email address will not be published.