ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!

ಕೊರತೆಗಳ ಎಲ್ಲ ದುಃಖವನ್ನೂ ಮರೆಸುವ ನಿರಂತರ ನಗುವೇ ಜಿನ್ನಪ್ಪ ಪೂಜಾರಿಯವರ ಆಸ್ತಿಯಾಗಿದ್ದರೂ ಅದನ್ನು ಮೀರಿಸಿದ ನೋವಿನ ಹೊಳಹು ನಗೆಯ ನಡುವೆ ಚಿಮ್ಮುತ್ತದೆ.

ಇವರು ಜಿನ್ನಪ್ಪ ಪೂಜಾರಿ. ಅರುವತ್ನಾಲ್ಕರ ಹರಯ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಗಾಂಧಿನಗರದಲ್ಲಿ ಅವರ ವಾಸ. ಒಂದು ಕಾಲದಲ್ಲಿ ತಾಳೆಮರವೇರಿ ಕಳ್ಳು ಇಳಿಸಿ ಬದುಕುತ್ತಿದ್ದ ಬಿಲ್ಲವ ಜನಾಂಗ ಅವರದು. ಸರಕಾರದ ನೀತಿಯಿಂದಾಗಿ ಈ ಗ್ರಾಮೀಣ ಕಸುಬನ್ನು ಹಲವು ಕಾನೂನು ಕಟ್ಟಳೆಗಳು ಪೀಡಿಸಿದ ಪರಿಣಾಮ ವೃತ್ತಿ ಅಳಿವಿನಂಚು ಸೇರಿತು. ಮುಕ್ತವಾದ ಸೇಂದಿ ಮಾರಾಟಕ್ಕೂ ಕಾಯಿದೆಯ ಕಬಂಧ ಬಾಹು ಪೀಡಿಸಿತು. ಇಂತಹ ವೃತ್ತಿ ನಿರತರಿಗೆ ಸರಕಾರ ಪರ್ಯಾಯ ಬದುಕು ತೋರಿಸಲಿಲ್ಲ. ರಸ್ತೆಗಳ ವಿಸ್ತರಣೆ ಮತ್ತು ಮನೆಗಳ ನಿರ್ಮಾಣಕ್ಕೆ ತಾಳೆಮರಗಳು ಅವ್ಯಾಹತವಾಗಿ ನಾಶವಾಗುವಾಗ ತಡೆಯಲಿಲ್ಲ. ಇದರ ಪರಿಣಾಮ ಹಲವು ಬಿಲ್ಲವ ಕುಟುಂಬಗಳು ತಮ್ಮ ಬದುಕನ್ನು ತಾವೇ ರೂಪಿಸುವುದು ಅನಿವಾರ್ಯವಾಯಿತು. ಆಗ ಜಿನ್ನಪ್ಪ ಪೂಜಾರಿಯವರು ಆರಿಸಿಕೊಂಡ ಮಾರ್ಗ ದಿನಸಿ ಅಂಗಡಿ.

ಸ್ವಂತ ಅಂಗಡಿ ಹಾಕಲು ಬಂಡವಾಳ ಇರಲಿಲ್ಲ. ಒಂದು ಕಿಲೋಮೀಟರ್ ದೂರದ ಕಟ್ಟೆಯಲ್ಲಿ ಬೇರೆಯವರ ಅಂಗಡಿಯನ್ನು ಲೀಸಿಗೆ ವಹಿಸಿಕೊಂಡಿದ್ದಾರೆ. ದಿನದ ವ್ಯಾಪಾರ ಆಗಲಿ ಬಿಡಲಿ, ಮದುವೆ, ಮುಂಜಿ ಅಂತ ಬಾಗಿಲು ಹಾಕಿರಲಿ ಸಂಜೆಯಾಗುವಾಗ ಅವರು ದೈನಿಕ ಬಾಡಿಗೆ ನೂರೈವತ್ತು ರೂಪಾಯಿ ಕೊಡಲೇಬೇಕು. ಮಾಲು ಹಾಕಿಕೊಂಡು, ಬರುವ ವ್ಯಾಪಾರದ ಲಾಭದಲ್ಲಿ ಬಾಡಿಗೆ ಕಳೆದು ಏನು ಉಳಿಯುತ್ತದೋ ಇದು ಅವರ ಪಾಲಿಗೆ ಬರುವ ಪಂಚಾಮೃತ.

ನಾನು ವ್ಯಾಪಾರ ಆರಂಭಿಸುವಾಗ ಇಲ್ಲಿದ್ದುದು ಎರಡು ಅಂಗಡಿಗಳು. ಕಡಮೆ ಬೆಲೆ, ಉತ್ತಮ ಸರಕು ಕೊಡುವ ಕಾರಣಕ್ಕೆ ನನ್ನ ಅಂಗಡಿಗೆ ಜನ ಬರುತ್ತಿದ್ದರು, ಒಳ್ಳೆಯ ವಹಿವಾಟೂ ಆಗುತ್ತಿತ್ತು. ಆದರೆ ಈಗ ಹೆಜ್ಜೆಗೊಂದು ಅಂಗಡಿಗಳಾಗಿವೆ. ಈ ಪೈಪೋಟಿಯಲ್ಲಿ ವ್ಯಾಪಾರವಾಗಬೇಕಿದ್ದರೆ ಸಾಲ ಕೊಡಬೇಕಾಗುತ್ತದೆ. ಬಹುತೇಕ ಸಾಲಗಳು ಮರಳಿ ಬರುವುದಿಲ್ಲ. ಕೊಂಡುಹೋದವ ತಿರುಗಿ ನೋಡುವುದಿಲ್ಲ. ಇದು ಲಾಭದ ಹಾದಿಗೆ ಮುಳ್ಳಾಗುತ್ತಿದೆ ಎಂದು ಇದುವರೆಗೂ ಹೋರಾಟದಲ್ಲೇ ಬದುಕು ಸಾಗಿಸಿರುವ ಜಿನ್ನಪ್ಪ ಪೂಜಾರಿ ನೋವಿನಿಂದ ಹೇಳುತ್ತಾರೆ. ಕಲಿತದ್ದು ಐದನೆಯ ತರಗತಿ ಮಾತ್ರ. ಮನೆಯಲ್ಲಿ ವೃದ್ಧ ತಾಯಿ ಅಪ್ಪಿ ಇದ್ದಾರೆ. ಹೆಂಡತಿ ಯಮುನ ಯಾನೆ ಬೇಬಿ, ಮಗಳು ತೀರ್ಥ, ಅಳಿಯ ಕಿರಣ್, ಮೊಮ್ಮಕ್ಕಳಾದ ಗಗನ್, ಗೌತಮಿ ಜತೆಗಿದ್ದಾರೆ. ಇವರೆಲ್ಲರ ಬದುಕಿನ ನಿರ್ವಹಣೆಗೆ ಜಿನ್ನಪ್ಪರೊಬ್ಬರೇ ಆಧಾರವಾಗಿದ್ದಾರೆ. ಇಬ್ಬರು ಗಂಡುಮಕ್ಕಳು ಕಿರಣ್ ಮತ್ತು ಉಮೇಶ್ ದೂರದ ಊರಿನಲ್ಲಿ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದಾರೆ.

ಅಂಗಡಿ ವ್ಯಾಪಾರದಲ್ಲಿ ಜಿನ್ನಪ್ಪರಿಗೆ ನಿಗದಿತ ಲಾಭವೇನೂ ಇಲ್ಲ. ಒಂದೊಂದು ದಿನ ಐನೂರು ರೂಪಾಯಿ ತನಕ ಉಳಿಯುತ್ತದೆ. ಆದರೆ ಅವರು ಸ್ವಲ್ಪ ಬಿಂದಾಸ್ ಮನುಷ್ಯ. ಹೊಟ್ಟೆಗೆ ತಿನ್ನದೆ ಉಳಿಸಿ ಏನು ಮಾಡುವುದು? ಹೀಗಾಗಿ ದಿನಕ್ಕೆ ಒಂದು ಲೀಟರ್ ಹಾಲು, ಮೊಮ್ಮಕ್ಕಳಿಗೆ ಎರಡು ಮೊಟ್ಟೆ, ಊಟಕ್ಕೆ ಎರಡು ಕಿಲೋ ಅಕ್ಕಿ ಎಲ್ಲ ಲೆಕ್ಕ ಹಾಕಿದರೆ ದಿನದ ವೆಚ್ಚಕ್ಕೆ ಇನ್ನೂರೈವತ್ತು ರೂಪಾಯಿ ಬೇಕು. ವಾರಕ್ಕೊಮ್ಮೆ ಕೋಳಿ ಮಾಂಸ ಬೇಕೇ ಬೇಕು. ಮಕ್ಕಳ ಮದುವೆ ಮತ್ತಿತರ ಅಗತ್ಯಗಳಿಗೆ ಸಹಕಾರಿ ಬ್ಯಾಂಕಿನಲ್ಲಿ ಹತ್ತು ಲಕ್ಷ ರೂಪಾಯಿ ಸಾಲ ತೆಗೆದಿದ್ದಾರೆ. ಶೇ. ಹದಿನಾರರ ಬಡ್ಡಿ ಕೊಡಬೇಕು. ಸಾಲದ ತಿಂಗಳ ಕಂತು ಹದಿನೈದು ಸಾವಿರ ಬರುತ್ತದೆ. ಮನೆ ಖರ್ಚಿಗೆ ಬಳಸಿ ಮಿಕ್ಕ ಹಣ ಕಂತಿಗೆ ಸೇರುತ್ತದೆ. ಅದಕ್ಕಾಗಿ ಸ್ವಲ್ಪ ಹಣ ಮಕ್ಕಳು ಕೊಡುತ್ತಾರೆ. ಸಾಲ ಶೂಲವಾಗದಿದ್ದರೂ ಒಂದು ಪೈಸೆ ವೆಚ್ಚ ಮಾಡುವಾಗಲೂ ಭಯಪಡಿಸುತ್ತದೆ ಸಾಲದ ನೆನಪು.

ಸರಕಾರದ ಅರ್ಧ ಎಕರೆ ಭೂಮಿ ಆಕ್ರಮಣ ಮಾಡಿ ಮನೆ ಕಟ್ಟಿದ್ದಾರೆ, ಬಾವಿ ತೋಡಿದ್ದಾರೆ, ಜಿನ್ನಪ್ಪರು ತೆಂಗು ಮತ್ತು ಅಡಕೆ ಕೃಷಿ ಮಾಡಿದ್ದಾರೆ. ಕೃಷಿ ಮೂಲದಿಂದ ಮೂವತ್ತು ಸಾವಿರ ಆದಾಯವಿದೆ. ಆದರೆ ಭೂಮಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಿ ದಶಕವೇ ಕಳೆದಿದೆ. ಸರಕಾರಗಳು ಬದಲಾಗಿವೆ. ಆದರೆ ಅವರಿಗೆ ಇನ್ನೂ ಹಕ್ಕು ಪತ್ರ ನೀಡಿಲ್ಲ. ಹೀಗಾಗಿ ಭೂಮಿಯ ಅಭಿವೃದ್ಧಿಗೆಂದು ಸರಕಾರ ಸಣ್ಣ ರೈತರಿಗೆ ಕೊಡುವ ಯಾವುದೇ ಸೌಲಭ್ಯವೂ ಅವರ ಮನೆಯ ಕದ ತಟ್ಟಿಲ್ಲ. ಹಳೆಯ ಮಣ್ಣಿನ ಗೋಡೆಯ ಮನೆಯಲ್ಲಿ ವಾಸವಿದ್ದಾರೆ. ಸರಿಯಾದ ಸುಣ್ಣ, ಬಣ್ಣ ಮಾಡಿಸಲು ಆರ್ಥಿಕ ಬಲ ಇಲ್ಲ. ಹೆಂಚಿನ ಮಾಡಿನ ತೊಲೆಗಳು ಮುರಿಯುವ ಸ್ಥಿತಿಯಲ್ಲಿವೆ. ಭೂಮಿಗೆ ಹಕ್ಕುಪತ್ರ ಸಿಗಲು ವಿಳಂಬವಾಗಿ ಹೊಸಮನೆ ಕಟ್ಟಲು ಸರಕಾರದ ಸೌಲಭ್ಯ ಬೇಕು ಅಂದರೂ ಕೈಗೆ ಬರದ ಸ್ಥಿತಿಯಿದೆ.

ಹಳದಿ ಪಡಿತರ ಚೀಟಿಯಿದ್ದು ಇವರು ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಒಪ್ಪಿಕೊಂಡಿದ್ದರೂ ಇಂದಿನ ಆಮೆ ಗತಿಯ ಆಡಳಿತ ವ್ಯವಸ್ಥೆ ಅವರ ಬದುಕಿನ ಕಾಯಕಲ್ಪಕ್ಕೆ ಕಾಳಜಿ ವಹಿಸಿಲ್ಲ. ಮನೆಯ ಬಾಗಿಲು ಹಳತಾಗಿದೆ. ಹೊಸ ಬಾಗಿಲು, ಕಿಟಕಿ ಎಲ್ಲ ಆಗಬೇಕು ಎಂಬ ಕನಸು ಅವರಲ್ಲಿದೆ. ಮನೆಯ ಒಟ್ಟು ಮೌಲ್ಯ ಲೆಕ್ಕ ಹಾಕಿದರೆ ಎರಡು ಲಕ್ಷ ರೂಪಾಯಿ ಆಗಲಿಕ್ಕಿಲ್ಲ.

ಮೊಮ್ಮಗ ಕಿರಣ್ ಕಲಿಕೆಯಲ್ಲಿ ಚುರುಕಿದ್ದಾನೆ. ‘ನಾನು ಕಲಿತದ್ದು ಕನ್ನಡ ಶಾಲೆ. ನನ್ನ ಮೊಮ್ಮಗನಿಗೂ ಸರಕಾರಿ ಶಾಲೆಯೇ ಆಗಬೇಕು’ ಎಂದು ಅವರು ಅವನನ್ನು ಸ್ಥಳೀಯ ಶಾಲೆಗೆ ಕಳುಹಿಸುತ್ತಿದ್ದಾರೆ. ಇಪ್ಪತ್ತೈದರಲ್ಲಿ ಇಪ್ಪತ್ನಾಲ್ಕು ಅಂಕ ತೆಗೆಯುವ ಮೊಮ್ಮಗನ ಬಗೆಗೆ ಅವರಿಗೆ ಅಭಿಮಾನವಿದೆ.

ಈ ಬದುಕಿನಲ್ಲಿ ಸುಖ ಅಂತ ಏನಾದರೂ ಇದೆಯಾ? ಕೇಳಿದರೆ ಜಿನ್ನಪ್ಪರ ಮೊಗದಲ್ಲಿ ಸದಾ ಸೂಸುವ ನಗು ಮಾಯವಾಗುತ್ತದೆ. ಸ್ವಂತಕ್ಕೊಂದು ಸೈಕಲ್ ಕೂಡ ಇಲ್ಲ. ಒಂದು ದಿನ ಅಂಗಡಿ ಬಾಗಿಲು ಹಾಕಿದರೂ ಮರುದಿನದ ಊಟದ ಪ್ರಶ್ನೆ ಎದುರಾಗುತ್ತದೆ. ಇದರ ಜೊತೆಗೆ ದೇವಸ್ಥಾನಗಳ ಬ್ರಹ್ಮಕಲಶಕ್ಕೆ, ಜಾತ್ರೆಗೆ, ಯಕ್ಷಗಾನಕ್ಕೆ ದೇಣಿಗೆ ಕೇಳಿಕೊಂಡು ಬರುವವರು ಊರಿನವರೇ ಆಗಿರುವುದರಿಂದ ನಿರಾಶೆ ಮಾಡುವಂತಿಲ್ಲ. ಆಗಾಗ ಬಾಧಿಸುವ ಕಾಯಿಲೆ, ಕಸಾಲೆಗಳಿಗೆ, ಬಂಧುಗಳು, ಸ್ನೇಹಿತರ ಮನೆಗಳಲ್ಲಿ ನಡೆಯುವ ಮದುವೆಗಳಿಗೆ ನೀಡುವ ಉಡುಗೊರೆಗಳು ಎಲ್ಲವೂ ಕೇಳುವ ಒಂದೇ ಪ್ರಶ್ನೆ, `ನಿನ್ನ ಕಿಸೆಯಲ್ಲಿ ದುಡ್ಡೆಷ್ಟಿದೆ?’. ಕೈಗಡ ತಂದರೆ ಸಮಯಕ್ಕೆ ಕೊಡಬೇಕಾದ ಬದ್ಧತೆ. ಒಟ್ಟಿನಲ್ಲಿ ಜೀವನದ ಪ್ರತಿಯೊಂದು ಕ್ಷಣವೂ ಸವಾಲಿನದೇ ಆಗಿರುತ್ತದೆ. ಆದಾಯ ಎಂಬ ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ. ಎಳೆದಾಟದಲ್ಲೇ ಒಂದು ದಿನ ಬದುಕು ಮುಗಿಯುತ್ತದೆ ಹೊರತು ಇದಕ್ಕೊಂದು ನಿಲ್ದಾಣವಿಲ್ಲ ಎಂಬ ಚಿಂತನೆಯೇ ಅವರ ಅನುದಿನದ ಚಿಂತೆಯೂ ಆಗಿದೆ.

ಒಡವೆ ಬೇಕು, ಹೊಸ ಸೀರೆ ತಂದುಕೊಡಿ ಎಂದು ಜಿನ್ನಪ್ಪರ ಸಹಧರ್ಮಿಣಿ ಎಂದೂ ಕೇಳಿದವರಲ್ಲ. ಇರುವ ಒಂದು ಮಾಂಗಲ್ಯಸರವೇ ಶಾಶ್ವತವಾಗಿದ್ದರೆ ಸಾಕು ಎನ್ನುತ್ತಾರೆ ಆಕೆ. ನನ್ನ ಗಂಡನ ಗಳಿಕೆಯಲ್ಲಿ ಹೊಟ್ಟೆ ತುಂಬ ಊಟ, ಮಾನ ಮುಚ್ಚುವಷ್ಟು ಬಟ್ಟೆ ಬಿಟ್ಟರೆ ಬೇರೆ ಯಾವ ಬಯಕೆಯನ್ನೂ ವ್ಯಕ್ತಪಡಿಸಲು ಆಗುವುದಿಲ್ಲ. ಇದರಲ್ಲಿ ನನಗೆ ತೃಪ್ತಿಯಿದೆ, ಸಂತೋಷವಿದೆ. ಇಷ್ಟು ಅನುಕೂಲವೂ ಇಲ್ಲದವರ ಮುಂದೆ ನಾವು ಧನಿಕರಲ್ಲವೆ? ಎಂಬ ಪ್ರಶ್ನೆ ಅವರದು. ಶಾಲೆಗೆ ಹೋಗಿಲ್ಲ. ಆಧುನಿಕ ಪ್ರಪಂಚದ ಕನಸುಗಳನ್ನು ಅವರು ಕಂಡಿಲ್ಲ.

ಕಷ್ಟಪಟ್ಟು ಆದಾಯ ಬರುವ ಮಾರ್ಗ ಕಂಡುಕೊಳ್ಳಬಲ್ಲೆ. ಉಚಿತವಾಗಿ ಸಿಗುವುದನ್ನೆಲ್ಲ ಪಡೆಯುವ ಯಾಚನೆಯ ಬದುಕು ನನಗೆ ಯಾತನೆಯದು. ಸ್ವಾಭಿಮಾನದಿಂದ ಬದುಕುವ ಬಯಕೆಗೆ ನಿಶ್ಚಿಂತವಾದ ಅನುಕೂಲವಿದ್ದರೆ ಬದುಕಿ ತೋರಿಸಬಲ್ಲೆ ಎನ್ನುವ ಕೆಚ್ಚು ಅವರಲ್ಲಿದೆ. ಸರಕಾರದ ಶೌಚಾಲಯ ಸೌಲಭ್ಯಕ್ಕೂ ಕೈ ಚಾಚದೆ ಸ್ವಂತ ಹಣದಿಂದ ಕಟ್ಟಿದ್ದಾರೆ.

ಸಾಮಾನ್ಯವಾಗಿ ಬದುಕಲು ಅಗತ್ಯವಾದ ಎಲ್ಲವೂ ಮನೆಯೊಳಗಿಲ್ಲ. ಫ್ರಿಜ್ಜು, ವಾಷಿಂಗ್ ಮೆಷಿನ್ ಇಂತಹ ಆಧುನಿಕ ಸೌಕರ್ಯಗಳಿನ್ನೂ ಈ ಮನೆಗೆ ಪರಿಚಿತವಾಗಿಲ್ಲ. ಹಳೆಯ ಒಂದು ಟಿವಿ ಮಾತ್ರ ಇದೆ. ಕೊರತೆಗಳ ಎಲ್ಲ ದುಃಖವನ್ನೂ ಮರೆಸುವ ನಿರಂತರ ನಗುವೇ ಜಿನ್ನಪ್ಪರ ಆಸ್ತಿಯಾಗಿದ್ದರೂ ಅದನ್ನು ಮೀರಿಸಿದ ನೋವಿನ ಹೊಳಹು ನಗೆಯ ನಡುವೆ ಚಿಮ್ಮುತ್ತದೆ. ಕುಟುಂಬದ ಎಲ್ಲರ ಆಗುಹೋಗುಗಳಿಗೂ ತನ್ನ ಗಳಿಕೆಯನ್ನೇ ಊರುಗೋಲಿನಂತೆ ಬಳಸುವ ಜಿನ್ನಪ್ಪರು ಇಂದಿಗೂ ಉಳಿತಾಯದ ಗಂಟು ಎಂದು ತೋರಿಸಲು ಏನೂ ಮಾಡಿಲ್ಲ. ಆದರೆ ಅಳದಂಗಡಿಯ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಸಂಘದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ.

`ಏನು ನಿಮ್ಮ ಅಪೇಕ್ಷೆ?’ ಎಂದು ಕೇಳಿದರೆ ಸರಕಾರದ ಸವಲತ್ತುಗಳಿಗಾಗಿ ಕಚೇರಿಗಳಿಗೆ ಅಲೆಯುವುದು, ಸಿಕ್ಕಿದುದರಲ್ಲಿ ಬಹುಪಾಲು ಮುಗಿಸುವುದು ನನಗಿಷ್ಟವಿಲ್ಲ. ನಮ್ಮಂತಹ ದುಡಿದು ಬದುಕುವವರಿಗೆ ಒಳಿತು ಮಾಡಲು ಆಳುವವರಿಗೆ ಕಳಕಳಿಯಿದ್ದರೆ ನಮ್ಮ ಜಾಗದ ಹಕ್ಕುಪತ್ರ ಕೊಡಿಸಿ, ಅದರಲ್ಲಿ ಕೃಷಿಯ ಅಭಿವೃದ್ಧಿ ಮಾಡಲು ಬ್ಯಾಂಕುಗಳಿಂದ ಸಾಲ ತೆಗೆಯುವ ಅರ್ಹತೆಯಾದರೂ ಭೂಮಿಗೆ ಸಿಗುವಂತೆ ತ್ವರಿತವಾಗಿ ಮಾಡಿದರೆ ಸ್ವತಃ ಕಷ್ಟಪಟ್ಟು ಆದಾಯ ಬರುವ ಮಾರ್ಗ ಕಂಡುಕೊಳ್ಳಬಲ್ಲೆ. ಉಚಿತವಾಗಿ ಸಿಗುವುದನ್ನೆಲ್ಲ ಪಡೆಯುವ ಯಾಚನೆಯ ಬದುಕು ನನಗೆ ಯಾತನೆಯದು. ಸ್ವಾಭಿಮಾನದಿಂದ ಬದುಕುವ ಬಯಕೆಗೆ ನಿಶ್ಚಿಂತವಾದ ಅನುಕೂಲವಿದ್ದರೆ ಬದುಕಿ ತೋರಿಸಬಲ್ಲೆ ಎನ್ನುವ ಕೆಚ್ಚು ಅವರಲ್ಲಿದೆ. ಸರಕಾರದ ಶೌಚಾಲಯ ಸೌಲಭ್ಯಕ್ಕೂ ಕೈ ಚಾಚದೆ ಸ್ವಂತ ಹಣದಿಂದ ಕಟ್ಟಿದ್ದಾರೆ.

ಪ್ರಾಮಾಣಿಕತೆ ಬದ್ಧತೆ ಇವೆರಡೂ ನನ್ನ ಆಸ್ತಿಗಳು ಎನ್ನುತ್ತಾರೆ ಜಿನ್ನಪ್ಪ ಪೂಜಾರಿ. ದೂರವಾಣಿ: 8277302415

Leave a Reply

Your email address will not be published.