ಗಿರಮಿಟಿಯಾ ಗಾಂಧಿ ಸತ್ಯಾಗ್ರಹ ಚಳವಳಿಯ ಪೂರ್ವತಾಲೀಮು

ಮೋಹನದಾಸ ಕರಮಚಂದ ಗಾಂಧಿಯವರ ದಕ್ಷಿಣ ಆಫ್ರಿಕಾದ ವಾಸ ಮತ್ತು ಅಲ್ಲಿ ಅವರು ನಡೆಸಿದ ಹೋರಾಟಗಳ ದೀರ್ಘ ಕಥಾನಕ `ಗಿರಮಿಟಿಯಾ’. ಬೇರೆ ದೇಶಗಳಿಗೆ ಹೋಗಿ ಜೀತದಾಳುಗಳಾಗಿ ದುಡಿಯಬೇಕಾಗಿ ಬಂದವರನ್ನು ಗಿರಮಿಟಿಯಾ (ಅಗ್ರಿಮೆಂಟ್‍ನ ಅಪಭ್ರಂಶ) ಎಂದು ಕರೆಯುತ್ತಾರೆ. ದಕ್ಷಿಣ ಆಪ್ರಿಕಾದಲ್ಲಿದ್ದ ಇಂತವರ ಸ್ಥಿತಿಗತಿಗಳನ್ನು ಬದಲಿಸಲು ಮೋಹನದಾಸರು ನಡೆಸಿದ ಸತ್ಯಾಗ್ರಹ ಚಳವಳಿಗಳ ದಾಖಲೆಗಳನ್ನು ಅಧ್ಯಯನ ಮಾಡಿ ಮತ್ತು ಆ ಪ್ರದೇಶಗಳಿಗೆ ಭೇಟಿ ಕೊಟ್ಟು ಕ್ಷೇತ್ರಕಾರ್ಯ ನಡೆಸಿ ಗಿರಿರಾಜ ಕಿಶೋರ ಅವರು ಈ ಕಾದಂಬರಿಯನ್ನು 1999ರಲ್ಲಿ ರಚಿಸಿರುತ್ತಾರೆ. ಬಿರ್ಲಾ ಪ್ರತಿಷ್ಠಾನದ ವ್ಯಾಸ ಸಮ್ಮಾನವನ್ನು ಈ ಕಾದಂಬರಿ ಪಡೆದುಕೊಂಡಿದೆ. ಅದನ್ನು ಪ್ರಭಾಕರ ಮ.ನಿಂಬರಗಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು ಭಾಷಾ ಭಾರತಿ 860 ಪುಟಗಳ ಈ ಬೃಹತ್ ಸಂಪುಟವನ್ನು 2016ರಲ್ಲಿ ಪ್ರಕಟಿಸಿದೆ.

ಹೆಂಡತಿಯ ಆಭರಣಗಳನ್ನು ಮಾರಾಟ ಮಾಡಿ ಲಂಡನ್ನಿಗೆ ಹೋಗಿ ಬಾರ್ ಅಟ್ ಲಾ ಓದಿ ಬ್ಯಾರಿಸ್ಟರ್ ಪದವಿ ಪಡೆದು ಇಂಡಿಯಕ್ಕೆ ಮರಳಿದ ಮೋಹನದಾಸ ಕರಮಚಂದ್‍ಗಾಂಧಿಗೆ ನಿರುದ್ಯೋಗ ಸಮಸ್ಯೆ ಕಾಡಿತು. ಅಷ್ಟೇನು ವಾಕ್ಪಟು ಅಲ್ಲದ್ದರಿಂದ ವಕೀಲಿಯಲ್ಲಿ ಸೋಲು; ಬಾಂಬೆ ನ್ಯಾಯಾಲಯದಲ್ಲಿ ವೈಯಕ್ತಿಕ ನೈತಿಕತೆ ಮತ್ತು ಅನೈತಿ ಕತೆಗಳ ತಾಕಲಾಟ; ಹಿರಿಯಣ್ಣನ ಮೇಲೆ ಅವಲಂಬಿತ ಕುಟುಂಬ; ಕೇವಲ ಅರ್ಜಿ ಬರೆದು ಜೀವನ ನಿರ್ವಹಣೆ; ಅದರಲ್ಲೂ ದಲ್ಲಾಳಿ ಕಾಟ. ಇವುಗಳೀಂದ ಬೇಸತ್ತ ಮೋಹನದಾಸ ಭಾರತದ ಸಾವಿರಾರು ಬಡ ನಿರುದ್ಯೋಗಿ ಕಾರ್ಮಿಕರಂತೆ ಒಂದು ವರ್ಷದ ಗಿರಮಿಟ್ ಒಪ್ಪಂದದ ವಕೀಲಿ ಸಹಾಯಕ ಕೆಲಸಗಾರನೆಂದು ದಕ್ಷಿಣ ಆಫ್ರಿಕಾಕ್ಕೆ ಹೋಗಬೇಕಾಯಿತು.

ಬ್ಯಾರಿಸ್ಟರ್ ಆಗಿದ್ದ ಕಾರಣ ಇತರ ಬಡ ಕಾರ್ಮಿಕರಿಗಿಂತ ಹತ್ತುಪಟ್ಟು ವೇತನ ಹಾಗೂ ಗೌರವಯುತ ಜೀವನವಿತ್ತು. ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದ ಪೋಷಾಕುಗಳೆಲ್ಲ ಬ್ರಿಟಿಷರಂತೆ; ಅಂತರಂಗದಲ್ಲಿ ಮಾತ್ರ ಅಪ್ಪಟ ಭಾರತೀಯತೆ. ಡರ್ಬನ್ನಿಗೆ ಹೋದ ಮರುದಿನವೇ ವರ್ಣದ್ವೇಷದ ದಳ್ಳುರಿಗೆ ಈಡಾಗಬೇಕಾಯಿತು. ಭಾರತೀಯ ಅಸ್ಮಿತೆ(ಐಡೆಂಟಿಟಿ)ಗಾಗಿ ಹೋರಾಟಕ್ಕಿಳ್ಳಿದು, ಡರ್ಬನ್ನಿನಿಂದ ಪ್ರಿಟೋರಿಯಾಕ್ಕೆ ಹೋಗುವಾಗ ಪೀಟರ್ ಮೆರಿಟ್ಜ್ ಬರ್ಗ್ ಎಂಬ ಸ್ಟೇಷನ್ನಿನಲ್ಲಿ ಟಿಕೇಟ್ ಕೊಂಡಿದ್ದದೂ ಫಸ್ಟ್ ಕ್ಲಾಸ್ ಭೋಗಿಯಿಂದ ಕೆಳಗೆ ಎಸೆಯಲ್ಪಟ್ಟ. ನಂತರ ಸಾರೋಟಿನ ಚಾಲಕನಿಂದ ದೈಹಿಕ ಹಾಗೂ ಮಾನಸಿಕ ಹಲ್ಲೆಗೊಳಗಾದ. ಇದು ಅವನ ಹಣೆ ಬರಹ ಎಂಬಂತಾಯಿತು. ಜೀವನದಲ್ಲಿ ತಾನು ಅನುಭವಿಸಿದ ಪ್ರತಿಯೊಂದು ದೌರ್ಜನ್ಯ ಮತ್ತು ಅಪಮಾನಗಳಿಂದ ಅವನ ಮನದಲ್ಲಿ ಕ್ಷಮಾ ಭಾವನೆ, ಸಹಿಷ್ಣುತೆ ಹಾಗೂ ಸದಾಶಯ ಭಾವನೆಗಳು ಚಿಗುರೊಡೆದು ವಿಕಾಸಗೊಳ್ಳಲು ಪ್ರಾರಂಭಿಸಿದವು. ಸಂವೇದನಾ ಶೀಲತೆ ಮತ್ತಷ್ಟು ಸೂಕ್ಷ್ಮವಾಯಿತು. ಎದುರಿನವರ ಅಂತರಂಗದಲ್ಲಿ ಇಣುಕಿ ನೋಡುವ ಸಂಯಮ ಬಂದಿತು. ಸತ್ಯಾನ್ವೇಷಣೆ ಮತ್ತು ಅದರೊಂದಿಗೆ ಪ್ರಯೋಗಗಳು ಹೆಚ್ಚಾದವು. ಸಾಮಾನ್ಯ ಮತ್ತು ಅಸಾಮಾನ್ಯ ಜೀವನದ ನಡುವಿನ ಸಂಘರ್ಷ ಶುರುವಾಯಿತು. ಕರ್ಮ ಕೌಶಲ್ಯದೊಂದಿಗೆ ಆತ್ಮಾನುಸಂಧಾನದಲ್ಲಿ ತತ್ಪರತೆ ಕಾಣಿಸಿಕೊಂಡಿತು.

ಆ ಕಾಲಕ್ಕೆ ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಾರಕ್ಕೋಸ್ಕರ ಬಂದಿರುವ ಗಿರಮಿಟಿಯಾ ಕೂಲಿಗಳೊಡನೆ ಸಮೀಕರಿಸಿ ಎಲ್ಲ ಭಾರತೀಯರನ್ನೂ ಕೂಲಿಗಳೆಂದೇ ಸಂಬೋಧಿಸುವುದು ಬಿಳಿಯ ಸಮುದಾಯದಲ್ಲಿ ರೂಢಿಯಾಗಿತ್ತು. ಅಂಥ ಕೂಲಿಗಳ ಜೊತೆ ಮೋಹನದಾಸನೂ ಒಬ್ಬ ಕೂಲಿಯಾದ, `ದಿ ಕೂಲಿ ಬ್ಯಾರಿಸ್ಟರ್’. ಸ್ವತಃ, ಈತ ವರ್ತಕ ದಾದಾ ಅಬ್ದುಲ್ಲಾ ಸೇಠರ ಕೋರ್ಟು ವ್ಯವಹಾರ ನೋಡಿಕೊಳ್ಳಲು ಒಂದು ವರ್ಷದ ಅವಧಿಗೆ ಬಂದ ಒಪ್ಪಂದದ ಬ್ಯಾರಿಸ್ಟರ್ ಇದ್ದ. ಆದರೂ ಆತ ಸಾಮಾನ್ಯವಾಗಿ ವ್ಯಾಪಾರಿ ಭಾರತೀಯರ ನೋವಿಗೆ ಮಿಡಿಯುವ ಮಿತ್ರನೆಂದು ಭಾವಿಸಲ್ಪಟ್ಟ. ಆದರೆ, ಅವನ ಎದೆಯಲ್ಲಿ ಬಡ ಗಿರಮಿಟಿಯಾಗಳ ನೋವಿಗಾಗಿ ಅಪಾರ ಸಂಕಟವಿತ್ತು. ಮೂರು ಪೌಂಡು ತಲೆಗಂದಾಯ ಮತ್ತು ಭಾರತೀಯ ವಿವಾಹಗಳ ಬಗ್ಗೆ ಅಲ್ಲಿನ ಸುಪ್ರೀಂ ಕೋರ್ಟ್ ನ್ಯಾಯಾಧೀಶನ ತೀರ್ಪು (ದೇಶ ಪ್ರವೇಶಕ್ಕೆ ವಿವಾಹದ ಪ್ರಮಾಣ ಪತ್ರದ ಸಾಕ್ಷಿ ಇತ್ಯಾದಿ) ಇವೆರಡೂ ಕೇವಲ ಬಹು ಸಂಖ್ಯಾತ ಬಡ ಗಿರಮಿಟಿಯಾಗಳಿಗೆ ಅಪಾಯಕಾರಿಯಾಗಿದ್ದವು. ವ್ಯಾಪಾರಿಗಳೇನೊ ಮೂರು ಪೌಂಡು ಭರಿಸಬಲ್ಲವರಾಗಿದ್ದರು. ಆದರೆ ಬಡ ಗಿರಮಿಟಿಯಾಗಳ ಪಾಡು? ಕಡೆಗೆ ಇವೆರಡೇ ವಿಷಯಗಳು ಮೋಹನದಾಸನ ಸಂಘರ್ಷಕ್ಕೆ ಕಾರಣವಾದವು. ಆ ವೇಳೆ ಗಿರಮಿಟಿಯಾಗಳು ಸಹಭಾಗಿಗಳಾಗಿ ಮುಂಚೂಣಿಗೆ ಬಂದರೆ, ವ್ಯಾಪಾರಸ್ಥರು ನೇಪಥ್ಯದಲ್ಲಿ ಉಳಿಯತೊಡಗಿದರು.

ಗಿರಿಮಿಟಿಯ ಒಂದು ಐತಿಹಾಸಿಕ ಕಾದಂಬರಿ

ಐತಿಹಾಸಿಕ ಕಾದಂಬರಿಗಳಲ್ಲಿ ನೂರಕ್ಕೆ ಅರವತ್ತು ಪ್ರಮಾಣದಲ್ಲಿ ಇತಿಹಾಸವಿರುವುದು ಸಹಜ. ಇನ್ನುಳಿದ ನಲವತ್ತು ಪ್ರಮಾಣದಲ್ಲಿ ಲೇಖಕನ ಕಲ್ಪನೆ ಸಹಜ ಬೆರೆತಿರುತ್ತದೆ. ಲೇಖಕ ಗಿರಿರಾಜ ಕಿಶೋರ ಅವರು ಮುನ್ನುಡಿಯಲ್ಲಿ ಹೇಳಿರುವಂತೆ `ಈ ಕೃತಿಯಲ್ಲಿ ಜೀವನ ಹೆಚ್ಚಿದೆ, ಇತಿಹಾಸ ಕಡಿಮೆಯಿದೆ. ಸಾಮಾನ್ಯವಾಗಿ ಗಾಂಧಿಯನ್ನು ಚೆನ್ನಾಗಿ ಬಲ್ಲೆವೆಂದು ಭಾರತೀಯರು ಎದೆಯುಬ್ಬಿಸಿ ಹೇಳುವುದುಂಟು. ನಿಜವೆಂದರೆ ಆಂಥವರು ಗಾಂಧಿಯನ್ನು ಅತಿ ಕಡಿಮೆ ಅರಿತಿರುತ್ತಾರೆ. ಗಾಂಧಿ ನಮ್ಮ ದೇಶದವರು ಎಂಬ ಒಂದೇ ಕಾರಣಕ್ಕೆ ಆತ ಎಲ್ಲರ ತಿಳುವಳಿಕೆಗೆ ನಿಲುಕುವ ವ್ಯಕ್ತಿ ಅಲ್ಲ. ಹೆಚ್ಚು ಹೆಚ್ಚು ಅರಿತಷ್ಟು ಅರಿಯುವುದು ಇನ್ನೂ ಉಳಿದಿರುತ್ತದೆ. ಜ್ಞಾನದ ಪರಿಧಿಗೆ ನಿಲುಕುವುದಕ್ಕಿಂತ ನಿಲುಕಬೇಕಾಗಿರುವುದು ಇನ್ನೂ ಬಹಳ ಉಳಿಯುತ್ತದೆ. ದಕ್ಷಿಣ ಆಫ್ರಿಕಾದ ಕೂಲಿ ಸಮಾಜಕ್ಕೆ ಗಾಂಧಿಯ ಮಹತ್ವ ಬಹಳವಿತ್ತು. ಅದೇ ರೀತಿ ಕೂಲಿಕಾರರ ಆಥವಾ ಗಿರಮಿಟಿಯಾಗಳ `ಮಕ್ಕಾ’ ಎಂದು ಕರೆಯಲ್ಪಡುವ ಮಾರಿಷಸ್ ಹಾಗೂ ಗಿರಮಿಟಿಯಾಗಳಿರುವ ಎಲ್ಲ ದೇಶಗಳಿಗೆ ಗಾಂಧಿಯ ಪ್ರಸ್ತುತತೆ ಅಷ್ಟೇ ಮಹತ್ವದ್ದಾಗಿದೆ. ಸಹಜವಾಗಿ ಇಂದಿಗೂ ಎಲ್ಲ ಕಡೆ ಹರಡಿರುವ ಗಿರಮಿಟಿಯಾಗಳ ನಿಯತಿಯೂ ಒಂದೇ ರೀತಿಯದ್ದೆಂದು ಹೇಳಬಹುದು(ಮುನ್ನುಡಿ)

`ನೊಂದ ನೋವನ್ನು ನೋಯದವರೆತ್ತ ಬಲ್ಲರೇ ತಾಯಿ’ ಎಂಬ ಅಕ್ಕ ಮಹಾದೇಯಿಯ ಅನುಭವದ ನುಡಿಗೆ ಗಾಂಧಿಯ ಜೀವನ ಒಂದು ಜೀವಂತ ನಿದರ್ಶನ. ದಕ್ಷಿಣ ಆಫ್ರಿಕೆಯ ಬಿಳಿಯರ ಗಣಿಗಳಲ್ಲಿ ಹಾಗೂ ಅವರ ಎಸ್ಟೇಟುಗಳಲ್ಲಿ ಕೆಲಸ ಮಾಡಲು ಕೂಲಿಗಳು ದೊರೆಯುತ್ತಿರಲಿಲ್ಲ. ಸ್ಥಳೀಯ ಬುಡಕಟ್ಟು ಸಮುದಾಯಗಳು ಬಿಳಿಯರ ಮಾತು ಕೇಳದಾದರು. ಮೈಬಗ್ಗಿಸಿ ಅವರು ದುಡಿಯುತ್ತಿರಲಿಲ್ಲ. ಲಾಭ ಬಡುಕರಾದ ಗಣಿ ಮಾಲೀಕರಿಗೆ ಹಾಗೂ ಜಮೀನು ಒಡೆಯರಿಗೆ ಕಡಿಮೆ ಕೂಲಿಗೆ ಕೆಲಸ ಮಾಡುವ ಬಡವರು ಬೇಕಾಗಿತ್ತು. ಹತ್ತೊಂಭತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟಿಷರ ವಸಾಹತುವಿನಲ್ಲಿ ಕಿರೀಟಪ್ರಾಯವಾಗಿದ್ದ ಇಂಡಿಯಾ ದೇಶದಿಂದ ಕಾರ್ಮಿಕರನ್ನು ಹಡಗಿಗೆ ತುಂಬಿ ತರಲಾಗುತ್ತಿತ್ತು. ಅವರಲ್ಲಿ ಅನೇಕರು ಹಡಗು ಪ್ರಯಾಣದಲ್ಲಿ ರೋಗ ರುಜಿನಗಳಿಂದ ಅಸು ನೀಗುತ್ತಿದ್ದರು. ಹೆಣಗಳನ್ನು ಸಮುದ್ರಕ್ಕೆಸೆದು, ಬದುಕಿ ಉಳಿದವರನ್ನು ಮಾರಿಷಸ್ ಬಂದರಿನಿಂದ ಆಫ್ರಿಕಾ ಅಮೇರಿಕಾ ಮುಂತಾದ ದೇಶಗಳಿಗೆ ಹರಾಜು ಹಾಕಲಾಗುತ್ತಿತ್ತು. ಇದಕ್ಕೂ ಮೊದಲು ಆಫ್ರಿಕಾದ ನಿಗ್ರೋಗಳನ್ನ ಅಮೆರಿಕಾ ಮತ್ತು ಯೂರೋಪಿಯನ್ ರಾಷ್ಟ್ರಗಳಿಗೆ ಹಿಡಿದುಕೊಂಡು ಹೋಗಿ ಮಾರಾಟ ಮಾಡಿದ್ದೂ ಉಂಟು. ಹಾಗೆ ಬಡ ಭಾರತೀಯ ಕೂಲಿಗಳೂ ದಳ್ಳಾಳಿಗಳ ಮೂಲಕ ದಕ್ಷಿಣ ಅಮೇರಿಕಾದ ವಸಾಹತುಗಳಿಗೆ ಮಾರಾಟವಾಗುತ್ತಿದ್ದರು. ಹೀಗೆ ಉದರ ನಿಮಿತ್ತ ಬಂದ ಕೂಲಿಗಳು ಬಿಳಿಯರ ಹೊಲ ಗದ್ದೆ ತೋಟಗಳಲ್ಲಿ ಮತ್ತು ಗಣಿಗಳಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದರು. ಬಂಗಾಳ, ಮದ್ರಾಸ್, ಗುಜರಾತ್, ಬಾಂಬೆ ಮುಂತಾದ ರಾಜ್ಯಗಳ ಹಿಂದೂ, ಮುಸಲ್ಮಾನ, ಪಾರ್ಸಿ, ಸಿಕ್ ಮುಂತಾದ ಧಾರ್ಮಿಕ ನೆಲೆಯ ಬಡ ಜನರು ದಕ್ಷಿಣ ಅಪ್ರಿಕಾದಲ್ಲಿ ದಿನದ ಹನ್ನೆರಡು ಗಂಟೆ ದುಡಿಯುತ್ತಿದ್ದರು. ಅವರು ನತಾಲ್, ಪ್ರಿಟೋರಿಯಾ, ಟ್ರಾನ್ಸ್ ವಾಲ ಮುಂತಾದ ಬ್ರಿಟಿಷ್ ಮಸಾಹತುಗಳಲ್ಲಿ ಹರಡಿದ್ದರು. ಗಿರಮಿಟಿಯಾ ಒಪ್ಪಂದದ ಅವಧಿ ಮುಗಿಸಿದವರು ಸ್ವಂತಕ್ಕೆ ಹಣ್ಣು ತರಕಾರಿ ಹಾಲು ಮಾರಾಟ ಮಾಡುವ ಹಾಗೂ ಅಲ್ಪಸ್ವಲ್ಪ ಜನೀನು ಸಾಗುವಳಿ ಮಾಡುವ ವೃತ್ತಿಯಲ್ಲಿ ನಿರತರಾಗಿದ್ದು, ಬಿಳಿಯರ ವರ್ಣಭೇದ ನೀತಿಯ ಶೋಷಣೆಗೆ ಗುರಿಯಾಗಿದ್ದರು. `ಕೂಲಿ ಬ್ಯಾರಿಸ್ಟರ್’ ಆಗಿ ಗಾಂಧಿ ದಕ್ಷಿಣ ಆಫ್ರಿಕಾವನ್ನು ಪ್ರವೇಶಿಸುವ ಮುನ್ನ ಇದ್ದ ಚಿತ್ರ ಇದು.

ಇದು ಹಿಂದೂ ಮತ್ತು ಮುಸ್ಲಿಂ ಪರಿವಾರಗಳಿಗೆ ಮಾಡುವ ಅವಮಾನವಾಗಿತ್ತು. ಮೂರನೆಯದರ ಪ್ರಕಾರ ಗಣಿ ಕಾರ್ಮಿಕರು ಮೂರು ಪೌಂಡ್ ತಲೆಗಂದಾಯ ಕಟ್ಟಬೇಕಾಗಿತ್ತು. ಇವೆಲ್ಲ ಅತಾರ್ಕಿಕವೂ ಅಮಾನವೀಯವೂ ಅನೈತಿಕವೂ ಆಗಿದ್ದವು. ಬ್ಯಾರಿಸ್ಟರ್ ಗಾಂಧಿ ಇವುಗಳ ವಿರುದ್ಧ ಸತ್ಯಾಗ್ರಹ ಚಳುವಳಿ ಹೂಡುವಂತೆ ಪ್ರೇರೇಪಿಸಿದರು.

ಬಿಳಿಯರ ವರ್ಣನೀತಿ ಭಾರತೀಯ ಗಿರಮಿಟಿಯಾಗಳನ್ನು ಮನುಷ್ಯರೆಂದು ಭಾವಿಸಿರಲಿಲ್ಲ. ಕೊಳಕರು, ಭ್ರಷ್ಟರು; ಇಲಿಗಳಿಗೂ ಕಡೆಯಾದ ಕೀಳು ಜೀವಿಗಳೆಂದು ಅಡಿಗಡಿ ಜರೆದು ಆಡಿಕೊಳ್ಳುತ್ತಿದ್ದರು. ಇಂಡಿಯಾದ ಜಾತಿಭಾರತಕ್ಕೂ ಕಡೆಯಾಗಿ ಅಲ್ಲಿ ಅಸ್ಪಶ್ಯತೆ ಆಚ ರಣೆಯಲ್ಲಿತ್ತು. ಸಂಜೆ ಒಂಭತ್ತರ ತರುವಾಯ ಬೆಳಿಗ್ಗೆ ಆರು ಗಂಟೆಗೆ ಮುನ್ನ ಗಿರಮಿಟಿಯಾಗಳು ಬೀದಿಯಲ್ಲಿ ತಿರುಗಾಡುವಂತಿಲ್ಲ. ಬಿಳಿಯರಿಗೆ ಮೀಸಲಾದ ರಸ್ತೆ ಬದಿಯಲ್ಲಿ ನಡೆಯುವಂತಿಲ್ಲ, ಬಿಳಿಯರೊಂದಿಗೆ ಭೋಜನಕೂಟವಿಲ್ಲ. ಹೋಟೆಲ್ ಮಾಲಿಕರು ಅಶ್ವೇತ ಭಾರತೀಯರಿಗೆ ಉಳಿದುಕೊಳ್ಳಲು ಅವಕಾಶ ಕೊಡುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿದ್ದ ಭಾರತೀಯ ಕೂಲಿ ಕಾರ್ಮಿಕರನ್ನು `ನಾವು ಸಮ ನಿಮಗೆಂಬ’ ಆತ್ಮಸ್ಥೈರ್ಯ ಧೈರ್ಯದಿಂದ ತಲೆ ಎತ್ತಿ ನಡೆವಂತೆ ಮಾಡಿದರು. ಸತ್ಯ ಅಹಿಂಸಾ ಮಾರ್ಗದಲ್ಲಿ ತರಬೇತಿ ನೀಡಿ ಭಯರಹಿತ ಸತ್ಯಾಗ್ರಹಿಗಳನ್ನಾಗಿ ರೂಪಿಸಿದರು.

ಗಾಂಧಿ ತನ್ನ ಜೀವಿತ ಕಾಲದ ಉದ್ದಕ್ಕೂ ಎರಡು ಬಗೆಯ ಯುದ್ಧದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಂತರಂಗ ಬಹಿರಂಗ ಎರಡರಲ್ಲೂ ಅವರು ಸತ್ಯಾರ್ಥಿಯಾಗಿ ಅನ್ವೇಷಣೆಗೆ ಹೊರಟರು. ಅವರು ಯಾವುದೇ ಪ್ರಯೋಗ ಮಾಡುವ ಮೊದಲು ತನ್ನಿಂದ ಅದು ಸಾಧ್ಯವಾಗುವುದೇ ಎಂದು ಪ್ರಯೋಗ ಮಾಡಿ ಆಮೇಲೆ ಇತರರಿಗೆ ಹೇಳುತ್ತಿದ್ದರು. ಉದಾಹರಣೆಗೆ ಬ್ರಹ್ಮಚರ್ಯವ್ರತ; ತನ್ನಿಂದ ಇದು ಸಾಧ್ಯವೇ ಎಂದು ಕಠಿಣ ಪ್ರಯೋಗ ಮಾಡಿದರು. ಪತ್ನಿ ಕಸ್ತೂರಿಬಾ ಅವರನ್ನೂ ಆ ಯಜ್ಞದಲ್ಲಿ ಸಹಕರಿಸುವಂತೆ ಕೇಳಿಕೊಂಡರು. ಕಾಯಕದಲ್ಲಿ ಮೇಲು ಕೀಳು ಎಂಬುದಿಲ್ಲ ಎಲ್ಲ ಒಂದೇ ಎಂಬುದನ್ನು ತಾವೇ ಮಾಡಿ ತೋರಿಸಿದರು. ಕಲ್ಕತ್ತೆಯ ಕಾಂಗ್ರೆಸ್ ಅಧಿವೇಶನಕ್ಕೆ ಹೋದಾಗ ಅಲ್ಲಿನ ದುರ್ವಾಸನೆ ಭರಿತ ಸಂಡಾಸ್‍ಗಳನ್ನು ಬಕೀಟು ಪೊರಕೆ ಹಿಡಿದು ತಾವೇ ಸಫಾಯಿ ಮಾಡಿ ಸ್ವಯಂ ಸೇವಕರಿಗೆ ಮಾದರಿಯಾದರು. ಬಾಲ್ಯ ವಿದ್ಯಾಭ್ಯಾಸ ಮಾತೃ ಭಾಷೆಯಲ್ಲಿ ಆಗಬೇಕೆಂದು ಪ್ರತಿಪಾದಿಸಿದರು. ಆದ್ದರಿಂದ ತಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಕಳುಹಿಸದೆ ಗುಜರಾತಿಯಲ್ಲಿ ತಾವೆ ಕಲಿಸಲು ಉಪಕ್ರಮಿಸಿದರು. ಹೋರಾಟದ ನಡುವೆ ಅದಕ್ಕೆ ಸಮಯ ಸಿಕ್ಕದೆ ಚಡಪಡಿಸುತ್ತಿದ್ದರು. ಟಾಲ್‍ಸ್ಟಾಯ್ ಫಾರಂನಲ್ಲಿ ಒಟ್ಟಿಗೆ ಬಾಳುವುದನ್ನು ತರಬೇತು ಮಾಡಿದರು. ಮೊದಲು ದಕ್ಷಿಣ ಆಫ್ರಿಕಾದ ವಸಾಹತುಗಳು ತಮಗೆ ಕೂಲಿಗಳು ಬೇಕೆನಿಸಿದಾಗ ಪಶುಗಳನ್ನು ಹಿಡಿದು ತರುವಂತೆ ಹಡಗು ತುಂಬಿ ಭಾರತೀಯರನ್ನು ಕರೆ ತಂದರು. ಆಗ ಯಾವ ನಿಯಮಗಳೂ ಇರಲಿಲ್ಲ. ಆದರೆ ಕ್ರಮೇಣ ಯಂತ್ರೋಪಕರಣ ಸಾಧನಗಳು ಬಂದಂತೆ ಕೂಲಿಗಳ ಹೆಚ್ಚು ಅವಶ್ಯಕತೆ ಇರಲಿಲ್ಲ. ಬಿಳಿಯರು ತಾವೇ ಆಫ್ರಿಕಾಕ್ಕೆ ವಲಸೆ ಬಂದವರಾದರೂ ಅದನ್ನು ಮರೆತು `ಇದು ನಮ್ಮದೇ ಸ್ವಂತ ದೇಶ’ ಎಂದು ಭಾವಿಸಿ ಏಷ್ಯನ್ನರನ್ನು ದೂರ ಇಡಲು ಅನೇಕ ಕಾನೂನುಗಳನ್ನು ರೂಪಿಸಿದರು.

ಗಾಂಧಿಭಾಯಿಯನ್ನು ಬಿಡುಗಡೆ ಮಾಡುವವರಿಗೆ ನಾವು ಧರಣಿ ಕೈ ಬಿಡುವುದಿಲ್ಲವೆಂದು ಪ್ರತಿರೋಧ ಒಡ್ಡಿದರು. ಆಗ ಜೈಲುಗಳು ಸಾಲದಾದವು. ಬಿಳಿಯರ ಸರ್ಕಾರಕ್ಕೆ ಇದು ತಲೆ ನೋವಾಗಿಬಿಟ್ಟಿತು. ಉಪವಾಸ ಸತ್ಯಾಗ್ರಹ ಅಸ್ತ್ರದ ಮಹಿಮೆಯನ್ನು ಅರಿಯದ ಬಿಳಿಯ ಅಧಿಕಾರಿಗಳು ಲಾಠಿ ಬೂಟುಗಳಿಂದ ಬಡಿದರು.

ಅವುಗಳಲ್ಲಿ ಮುಖ್ಯವಾದುವು ಟ್ರಾನ್ಸ್ ವಾಲದ ಏಷಿಯಾಟಿಕ್ ಆಕ್ಟ್ ಹಾಗೂ ಇಮಿಗ್ರೇಷನ್ ಆಕ್ಟ್, ಜೋಹನ್ಸ್ ಬರ್ಗ್ ಗಣಿಗಳ ಮೂರು ಪೌಂಡು ಪೋಲ್ ಟ್ಯಾಕ್ಸ್ ಇತ್ಯಾದಿ. ಮೊದಲ ಕಾನೂನಿನ ಪ್ರಕಾರ ಹೊರಗಿನಿಂದ ಬಂದು ಇಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದವರು ತಮ್ಮ ಕೈ ಬೆರಳುಗಳ ಗುರುತು ನೀಡಿ ಪೊಲೀಸರಿಂದ ಪಾಸ್ ಪಡೆಯಬೇಕಾಗಿತ್ತು. ಎರಡನೆಯದರ ಪ್ರಕಾರ ಗಂಡ ಹೆಂಡತಿ ಎನ್ನುವುದಕ್ಕೆ ಅವರು ಲಗ್ನವಾದ ಪ್ರಮಾಣಪತ್ರ-ಸಾಕ್ಷಿಗಳನ್ನು ತೋರಿಸಬೇಕಾಗಿತ್ತು. ಇದು ಹಿಂದೂ ಮತ್ತು ಮುಸ್ಲಿಂ ಪರಿವಾರಗಳಿಗೆ ಮಾಡುವ ಅವಮಾನವಾಗಿತ್ತು. ಮೂರನೆಯದರ ಪ್ರಕಾರ ಗಣಿ ಕಾರ್ಮಿಕರು ಮೂರು ಪೌಂಡ್ ತಲೆಗಂದಾಯ ಕಟ್ಟಬೇಕಾಗಿತ್ತು. ಇವೆಲ್ಲ ಅತಾರ್ಕಿಕವೂ ಅಮಾನವೀಯವೂ ಅನೈತಿಕವೂ ಆಗಿದ್ದವು. ಬ್ಯಾರಿಸ್ಟರ್ ಗಾಂಧಿ ಇವುಗಳ ವಿರುದ್ಧ ಸತ್ಯಾಗ್ರಹ ಚಳುವಳಿ ಹೂಡುವಂತೆ ಪ್ರೇರೇಪಿಸಿದರು. ಗಾಂಧಿಭಾಯಿ ಕರೆಗೆ ಓಗೊಟ್ಟು ಸಾವಿರ ಸಾವಿರ ಬಡ ಕಾರ್ಮಿಕರು ಬೀದಿಗಿಳಿದರು. ಜೋಹಾನ್ಸ್ ಬರ್ಗ್‍ನಿಂದ ಟ್ರಾನ್ಸ್ ವಾಲದವರೆಗೆ ಜಾಥಾ ಹೋದರು. ಟ್ರಾನ್ಸ್ ವಾಲ ಗಡಿಯಲ್ಲಿ ಗಾಂಧಿ ಮತ್ತು ಕೆಲವು ಸಂಗಡಿಗರನ್ನು ಸರ್ಕಾರ ಸೆರೆ ಹಿಡಿಯಿತು. ಆದರೆ ನಿರಕ್ಷರಕುಕ್ಷಿಗಳಾದ ಆ ಕಾರ್ಮಿಕರು ಭಯವಿಲ್ಲದೆ ಸತ್ಯಾಗ್ರಹ ಮುಂದುವರಿಸಿದರು. ಬ್ರೆಡ್ ಸಕ್ಕರೆ ತಿಂದು ಜೀವ ಹಿಡಿದರು; ತಾವು ಉಳಿದಿದ್ದ ರಸ್ತೆ ಬದಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿದರು. ಗಾಂಧಿಭಾಯಿಯನ್ನು ಬಿಡುಗಡೆ ಮಾಡುವವರಿಗೆ ನಾವು ಧರಣಿ ಕೈ ಬಿಡುವುದಿಲ್ಲವೆಂದು ಪ್ರತಿರೋಧ ಒಡ್ಡಿದರು. ಆಗ ಜೈಲುಗಳು ಸಾಲದಾದವು. ಬಿಳಿಯರ ಸರ್ಕಾರಕ್ಕೆ ಇದು ತಲೆ ನೋವಾಗಿಬಿಟ್ಟಿತು. ಉಪವಾಸ ಸತ್ಯಾಗ್ರಹ ಅಸ್ತ್ರದ ಮಹಿಮೆಯನ್ನು ಅರಿಯದ ಬಿಳಿಯ ಅಧಿಕಾರಿಗಳು ಲಾಠಿ ಬೂಟುಗಳಿಂದ ಬಡಿದರು. ಆದರೂ ಆ ಬಡವರಲ್ಲಿ ಒಡಮೂಡಿದ ಫೀನಿಕ್ಸ್ ಪಕ್ಷಿಯ ಚೈತನ್ಯವನ್ನು ನೋಡಿ ಗಾಬರಿಗೊಂಡರು. ಗಾಂಧಿ ಒಬ್ಬ `ಜಾದುಗಾರ’ನಿರಬೇಕೆಂದು ಹುಬ್ಬೇರಿಸಿದರು.  

ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ಕೈಗೊಂಡ ಇನ್ನೆರಡು ಮಹತ್ವದ ಸಾಧನೆಗಳೆಂದರೆ ನತಾಲ್ ಇಂಡಿಯನ್ ಕಾಂಗ್ರೆಸ್ ಸ್ಥಾಪನೆ ಮತ್ತು ಇಂಡಿಯನ್ ಒಪಿನಿಯನ್ ಪತ್ರಿಕೆಯ ಪ್ರಕಟಣೆ. ಇವು ಅವರ ದೂರದೃಷ್ಟಿಗೆ ದಿಕ್ಸೂಚಿಗಳು. ಒಂದು ಮಾನವ ಸಂಪನ್ಮೂಲ ಶಕ್ತಿ ಸಂಘಟನೆಗೆ ಕಾರಣವಾದರೆ, ಇನ್ನೊಂದು ಅದರ ಕಾರ್ಯಸಾಧನೆಯ ಪ್ರಕಟಣೆಗೆ ಅನುವಾಯಿತು.

ಗಾಂಧಿ ನಿರ್ವಹಿಸಿದ ಪಾದಯಾತ್ರೆಯ ನಿಯಮಗಳು ಹೀಗಿದ್ದವು

“ಪಾದಯಾತ್ರಿಗಳು ಶರಾಬು ಕುಡಿಯಕೂಡದು, ಬೀಡಿ ಇತ್ಯಾದಿ ವ್ಯಸನಗಳಿಗೆ ಹಣ ವೆಚ್ಚ ಮಾಡಕೂಡದು, ಯಾರಿಂದಲೂ ಬೇಡಬಾರದು, ಕಳ್ಳತನ, ಮೋಸ, ಜಗಳ, ವ್ಯಭಿಚಾರ ಇವನ್ನೆಲ್ಲ ತ್ಯಜಿಸಬೇಕು, ದೊರೆತಷ್ಟರಲ್ಲೇ ತೃಪ್ತರಿರಬೇಕು. ಗಾಂಧಿಭಾಯಿಯನ್ನು ಟಾಲ್‍ಸ್ಟಾಯ್ ಫಾರ್ಮ್ ತಲುಪುವ ಮುನ್ನ ಬಂಧಿಸಿದರೆ ಎಲ್ಲರೂ ತಮ್ಮ ಮುಖಂಡನ ಮಾತಿನಂತೆ ನಡೆಯಬೇಕು. ಪೊಲೀಸರೊಡನೆ ಜಗಳವಾಡಬಾರದು. ಅವರು ಹೊಡೆದರೆ ಬಡೆದರೆ ಏನೇ ಮಾಡಿದರೂ ಶಾಂತಿಯಿಂದ ಸಹಿಸಬೇಕು. ರಾತ್ರಿ ಬಿಡಾರ ಹೂಡಿದಲ್ಲಿ ಹೊಲಸು ಮಾಡಬಾರದು, ಶಾಂತವಿದ್ದು ಗೌರವದಿಂದ ವರ್ತಿಸಬೇಕು.’’ (ಗಿರಮಿಟಿಯಾ.ಪುಟ-772) ಮೆರವಣಿಗೆಯ ಶಾಂತಿ ಕಾಪಾಡಲು ಛಡಿ-ಲಾಠಿ ಏಟುಗಳಿಗಿಂತ ಈ ನಿಯಮಗಳು ಶಕ್ತಿಯುತವಾಗಿದ್ದವು. ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ದಕ್ಷಿಣ ಆಫ್ರಿಕಾದ ಸತ್ಯಾಗ್ರಹ ಪ್ರಯೋಗಗಳು ಪೂರ್ವತಾಲೀಮು ಆದಂತಿವೆ. 21 ವರ್ಷಗಳ ದೀರ್ಘ ಹೋರಾಟದ ನಂತರ 1914ರ ಜುಲೈನಲ್ಲಿ ಗಾಂಧಿ ಮರಳಿ ಭಾರತಕ್ಕೆ ಹೊರಟು ನಿಂತರು. ಆದರೆ ಅಲ್ಲಿನ ಭಾರತೀಯರು ತಾವು ಬೇಡಿಕೆಗಳನ್ನು ಗೆದ್ದ ಸಂಭ್ರಮವನ್ನು ಆಚರಿಸಲಾರದೆ ಒದ್ದೆಗಣ್ಣಾಗಿ ಗದ್ಗದಿತ ಕಂಠದಿಂದ ಬೀಳ್ಕೊಟ್ಟರು. ಗಾಂಧಿ ಮರಳಿ ಬರುತ್ತ ಲಂಡನ್ನಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ರಾಜಕೀಯ ಗುರು ಪ್ರೊ.ಗೋಪಾಲಕೃಷ್ಣ ಗೋಖಲೆಯವರನ್ನು ಕಸ್ತೂರಬಾ ಜೊತೆ ಹೋಗಿ ಕಂಡು ಆಶೀರ್ವಾದ ಪಡೆದರು. ಇಲ್ಲಿಗೆ ಗಿರಿರಾಜ ಕಿಶೋರ ಅವರ ಗಿರಿಮಿಟಿಯಾ ಕಾದಂಬರಿ ನಿಲುಗಡೆಯಾಗುತ್ತದೆ. ಇತಿಹಾಸಕ್ಕೆ ಅಪಚಾರವಾಗದಂತೆ, ಕಲ್ಪನೆಯಲ್ಲಿ ಮೈಮರೆಯದೆ ಕಾದಂಬರಿ ವಾಸ್ತವವಾಗಿ ಓದುಗನನ್ನು ವಿಚಾರ ವಿಮರ್ಶೆಗೆ ಹಚ್ಚುತ್ತದೆ.

ಗಾಂಧಿ ಜೀವನಾದರ್ಶಗಳ ಹಿನ್ನೆಲೆಯಲ್ಲಿ ಇವತ್ತಿನ ಭಾರತವನ್ನು ಅವಲೋಕಿಸಿದರೆ ಭವಿಷ್ಯದಲ್ಲಿ ಕಾರ್ಮೋಡ ಕವಿದಂತಾಗುತ್ತದೆ. ಜಾಗತಿಕ ವಿಜ್ಞಾನಿ ಐನ್ ಸ್ಟೈನ್ ಉದ್ಗರಿಸಿದಂತೆ `ರಕ್ತ ಮಾಂಸಭರಿತ ಗಾಂಧಿ ಎಂಬ ಒಬ್ಬ ವ್ಯಕ್ತಿ ಇದ್ದನೆಂದರೆ ನಂಬಲಾರದಂತಾಗುತ್ತಿದೆ’. ಪ್ರಸ್ತುತ ಭಾರತ ಜಾತಿ ಧರ್ಮಗಳ ಅಗ್ನಿಕುಂಡದಲ್ಲಿ ಬೇಯುತ್ತಿದೆ. ಅತ್ತ ಜಗತ್ತು ಏರುತ್ತಿರುವ ತಾಪಮಾನ ತಗ್ಗಿಸಲು ಪರಿಸರವಾದಿಗಳ ಕೈಯಲ್ಲಿ ಗಾಂಧಿಯ ಅಹಿಂಸಾ ಅಸ್ತ್ರ ಪ್ರಯೋಗವಾಗುತ್ತಿದ್ದರೆ, ಇತ್ತ ಹಿಂದೂ ರಾಷ್ಟ್ರ ಸ್ಥಾಪನೆಯ ರಾಜಕಾರಣ ವಿಜೃಂಭಿಸುತ್ತಿದೆ. ಗಾಂಧಿಗೆ ಗುಂಡಿಕ್ಕಿದ ಗೋಡ್ಸೆ ಆರಾಧ್ಯ ಪುರುಷನಾಗುತ್ತಿದ್ದರೆ, ಹಿಂದುತ್ವವಾದಿ ಗುಂಪುಗಳು ಮಿಲಿಟೆಂಟ್ ಆಗಿ ಪೊಲೀಸ್‍ಗಿರಿ ಮಾಡುತ್ತಿವೆ. ಕಲ್ಬುರ್ಗಿ, ಗೌರಿ ಮುಂತಾದ ಪ್ರಗತಿಪರ ಚಿಂತಕರ ಹಂತಕರ ಹೇಳಿಕೆಯ ಪ್ರಕಾರ ಅವರಿಗೆ ಪಿಸ್ತೂಲು ಹಿಡಿಯುವ, ಒಡೆಯುವ ಟ್ರೈನಿಂಗ್ ಕೊಟ್ಟವರು ಕಷಾಯಿ ವಸ್ತ್ರಧಾರಿಗಳೆಂದು ವರದಿಗಳಿವೆ. ಹೀಗಾಗಿ ಗಾಂಧಿ ಕನಸಿನ ಬಹುತ್ವ ಭಾರತ ನುಚ್ಚು ನೂರಾಗುತ್ತಿದೆ. ಯುಗಯಾತ್ರೀ ಭಾರತೀಯ ಸಂಸ್ಕೃತಿಯ ತ್ಯಾಗ ಬಲಿದಾನ ನೇಪಥ್ಯಕ್ಕೆ ಸರಿಯುತ್ತಿದೆ. ಗಾಂಧಿ ಪ್ರಣೀತ ಸತ್ಯ, ಅಹಿಂಸೆ, ಸರಳ ಜೀವನ, ಉನ್ನತ ಚಿಂತನ, ನೈತಿಕತೆ, ಶುದ್ಧ ಚಾರಿತ್ರ್ಯ ಇತ್ಯಾದಿ ಮೌಲ್ಯಗಳು ನೆಲ ಕಚ್ಚುತ್ತಿವೆ. ಒಟ್ಟಾರೆ ಮಾನವೀಯತೆಗೆ ಅವಸರ್ಪಿಣಿ ಕಾಲ. ಪ್ರತಿಯೊಂದು ಧರ್ಮದಲ್ಲೂ ಭಯೋತ್ಪಾದಕರು ಹುಟ್ಟಿಕೊಳ್ಳುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಪುರೋಹಿತಶಾಹಿ ಪಾರುಪತ್ಯ ಅಧಿಕವಾಗುತ್ತಿದೆ. ಮಾಕ್ರ್ಸ್ ಹೇಳಿದಂತೆ ಧರ್ಮ ಎಂಬುದು ಅಫೀಮು. ಅದು ಜನತಂತ್ರವನ್ನು ನಿರರ್ಥಕಗೊಳಿಸುತ್ತಿದೆ. ನಮ್ಮ ಪವಿತ್ರ ಸಂವಿಧಾನ ಅಪ್ರಸ್ತುತವಾಗಿ ಮನುಧರ್ಮಶಾಸ್ತ್ರ ಮೇಲುಗೈಯಾಗುತ್ತಿದೆ. ಮಹಿಳೆಯ ಸ್ವಾತಂತ್ರ್ಯ ಹೊಸ್ತಿಲು ದಾಟದಾಗಿದೆ. ಸಮಷ್ಠಿ ಶಿಕ್ಷಣದಲ್ಲಿ ಬುದ್ಧ, ಬಸವ, ಲಿಂಕನ್, ಗಾಂಧಿ ಅಂಬೇಡ್ಕರ್ ಇಂಥವರ ಸೆಕ್ಯೂಲರ್ ಕಲಿಕೆಗೆ ಒತ್ತು ಬೀಳುತ್ತಿಲ್ಲ. ಇನ್ನು ಮುಂದಾದರೂ ಗಾಂಧಿಯ `ಆತ್ಮಕಥೆ ಅಥವಾ ಸತ್ಯಾನ್ವೇಷಣೆ’ ಕುರಿತಂತ ಕೃತಿಗಳು ಶಾಲಾ ಪಠ್ಯಗಳಲ್ಲಿ ಅವಶ್ಯ ಜಾಗ ಪಡೆಯಬೇಕು. ಉನ್ನತ ಶಿಕ್ಷಣ ಪಠ್ಯಗಳಲ್ಲಿ `ಗಿರಮಿಟಿಯಾ’ ದಂತ ಕಾದಂಬರಿ ಕೃತಿಗಳು ಸೇರ್ಪಡೆಯಾಗಬೇಕು. ಒಟ್ಟಾರೆ ಗಾಂಧಿ ಮೈನಸ್ ಭಾರತ ಅಥವಾ ಜಗತ್ತು ಎಂದರೆ ಅರಾಜಕತೆಯ ಬರ್ಬರ ಯುಗಕ್ಕೆ ಬರೆವ ಮುನ್ನುಡಿಯಲ್ಲವೆ? ನಾಗರಿಕ ಜಗತ್ತು ಇನ್ನೂ ಉಳಿಯಬೇಕಾದರೆ ಗಾಂಧೀಜಿಯ ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದಿಂದ ಮಾತ್ರ ಎಂಬುದು ನಿರ್ವಿವಾದ.

ಸಮಾಜಮುಖಿಯಲ್ಲಿ ಪಿಹೆಚ್‍ಡಿ ಸಾರಾಂಶ

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷವೂ ನೂರಾರು ಪಿಹೆಚ್‍ಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ವಿವಿಯ ಒಳಗಿನ ಹಾಗೂ ಹೊರಗಿನ ನುರಿತ ಪ್ರಾಧ್ಯಾಪಕರಿಂದ ಪರಿಶೀಲಿಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಸಂಶೋ ಧನೆಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ. ಈ ಕೊರತೆಯನ್ನು ಸರಿದೂಗಿಸಲು ಸಮಾಜಮುಖಿ ಪತ್ರಿಕೆ ಮುಂದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಲ್ಲಿಸಲಾದ ನಿಮ್ಮ ಪಿಹೆಚ್‍ಡಿ ಪ್ರಬಂಧವನ್ನು 1000 ಶಬ್ದಗಳ ಸಾರಾಂಶದೊಂದಿಗೆ ಪ್ರಕಟಣೆಗೆ ಸಲ್ಲಿಸಿ. ಆಯ್ದ ಸಾರಾಂಶಗಳನ್ನು ಮಾಸ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಅತಿ ಉತ್ತಮ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಕೂಡಾ ಹೊರತರಲಾಗುವುದು. ನಿಮ್ಮ ಸಂಶೋಧನೆಯನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ನೆರವು ನೀಡಲಾಗುವುದು.

ನೀವೂ ಬರೆಯಿರಿ, ಜತೆಗಿರಿ

  • ‘ಸಮಾಜಮುಖಿ’ಯ ಸ್ವರೂಪಕ್ಕೆ ತಕ್ಕ ಲೇಖನ, ಕವಿತೆ, ನೀಳ್ಗತೆ, ವ್ಯಂಗ್ಯಚಿತ್ರ, ಪ್ರಬಂಧಗಳನ್ನು ಪ್ರಕಟಣೆಗಾಗಿ ಕಳಿಸಬಹುದು.
  • ‘ನಮ್ಮೂರು’ ಅಂಕಣದಲ್ಲಿ ನಿಮ್ಮ ಊರಿನ ಜನ, ಭಾಷೆ, ವರ್ತನೆ, ಸೌಹಾರ್ದ, ಭೌಗೋಳಿಕತೆ, ಸಮಸ್ಯೆ, ಹೆಗ್ಗಳಿಕೆ ಕುರಿತ ವಿಶೇಷ ಅಂಶಗಳನ್ನು ಜೋಡಿಸಿ ಪ್ರಬಂಧದ ಧಾಟಿಯಲ್ಲಿ ಬರೆಯಲು ಅವಕಾಶವಿದೆ.
  • ‘ನನ್ನ ಕ್ಲಿಕ್’ ಅಂಕಣ ಛಾಯಾಚಿತ್ರಕಾರರಿಗೆ ಮೀಸಲು. ಛಾಯಾಚಿತ್ರಕಾರರು ತಮ್ಮ ಸಂಗ್ರಹದಿಂದ ತಾವೇ ಆಯ್ದ ವಿಶೇಷ, ವಿಶಿಷ್ಟ ಚಿತ್ರವನ್ನು ಪುಟ್ಟ ಟಿಪ್ಪಣಿಯೊಂದಿಗೆ ಕಳಿಸಬಹುದು.
  • ಪ್ರಕಾಶಕರು ತಮ್ಮ ಇತ್ತೀಚಿನ ಪ್ರಕಟಣೆಗಳ ಎರಡು ಪ್ರತಿಗಳನ್ನು ಕಳಿಸಿದರೆ ಓದುಗರಿಗೆ ‘ಹೊಸ ಪುಸ್ತಕ’ ಅಂಕಣದಲ್ಲಿ ಪರಿಚಯಿಸಲಾಗುವುದು. 
  • ‘ಪ್ರತಿಬಿಂಬ’ ವಿಭಾಗದಲ್ಲಿ ನಿಮ್ಮ ನಿಷ್ಟುರ ನುಡಿಗಳಿಗೆ, ಗಂಭೀರ ಚರ್ಚೆಗೆ ಅವಕಾಶವಿದೆ.

ಸಮಾಜಮುಖಿ ಮಾಸಪತ್ರಿಕೆ,

ನಂ.111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡು, ಲಾಲ್‍ಬಾಗ್ ರಸ್ತೆ, ಬೆಂಗಳೂರು 560027

ದೂ: 9606934018, 7760191345, ಇಮೇಲ್:samajamukhi2017@gmail.com

Leave a Reply

Your email address will not be published.