ಗಿರೀಶ ಕಾರ್ನಾಡರ ಒಡನಾಟ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ ಕಾರ್ನಾಡ ಮತ್ತು ಸಹಾಯಕ ನಿರ್ದೇಶಕ ಸುರೇಶ ಕುಲಕರ್ಣಿ ಅವರ ಒಡನಾಟ, ಬಾಂಧವ್ಯ ಬಲು ಅಪರೂಪದ್ದು. ದಶಕಗಳ ಕಾಲ ಕಾರ್ನಾಡರ ಸಹವಾಸದಲ್ಲಿ ಕಂಡುಂಡ ಘಟನಾವಳಿಗಳ ಸುರುಳಿಯನ್ನು ಸುರೇಶ ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ; ಕಾರ್ನಾಡರು ಹೀಗೂ ಇದ್ದರಾ ಎಂಬ ಉದ್ಗಾರ ಹೊರಡಿಸುವಷ್ಟು ಅಪರಿಚಿತ ಗುಣಸ್ವಭಾವಗಳನ್ನು ಅನಾವರಣಗೊಳಿಸಿದ್ದಾರೆ.

ಹೊರಜಗತ್ತು ಭಾವಿಸಿದಂತೆ ಕಾರ್ನಾಡರು ಸಂಪ್ರದಾಯ ವಿರೋಧಿ ಆಗಿರಲಿಲ್ಲ; ದೈವಲೀಲೆ, ರಾಹುಕಾಲ ನಂಬುತ್ತಿದ್ದರು!

ಯಾರು ಏನೇ ಹೇಳಲಿ ಕಾರ್ನಾಡರು ಏನೆಂಬುದು ನನಗೆ ಗೊತ್ತು. ಅವರು ನನಗೆ ಹಿರಿಯಣ್ಣ ಇದ್ದಾಂಗ. ಅಂದರೆ ತಂದೆಗೆ ಸಮ ಅಂತ ಹೇಳ್ತಾರ. ಅವರ ನನ್ನ ಸಂಬಂಧ ಹಂಗ ಇತ್ತು. ಇದು ಸುಮ್ಮನೆ ಬಾಯ್ಮಾತಿಗೆ ಹೇಳೊ ಮಾತಲ್ಲ. ಅಖಂಡ 35 ವರ್ಷದ ಒಡನಾಟದ ಭಾವನೆ, ಆತ್ಮಾನುಭವ.

ನನ್ನ ಅವರ ಒಡನಾಟ ವಿಚಿತ್ರವಾಗಿ ಬೆಳೀತು. ಬಿ.ಕಾಮ್ ಮುಗಿಸಿದ್ದೆ, ಎಲ್‍ಎಲ್‍ಬಿ ಕೊನೆ ವರ್ಷದ ಓದು ನಡೆದಿತ್ತು. ಮನ್ಯಾಗ ದುಡ್ಡಿನ ಅಡಚಣಿ. ಉದ್ಯೋಗ ಮಾಡೋಣ ಅಂದರ ಯಾವುದೂ ಸಟ್ ಆಗವಲ್ದಾಗಿತ್ತು. ಆಗ ಹುಕ್ಕೇರಿ ಅನ್ನೋರ ಕಡೆ ಹೋಗಿದ್ದೆ. ಸಂಯುಕ್ತ ಕರ್ನಾಟಕದ ಏಜನ್ಸಿ ಇತ್ತು. ಅದು ಇದು ಕೆಲಸಾ ಮಾಡಿದೆ. ಆಮೇಲೆ ಒಂದಿನ ಕುಟುಂಬ ಸ್ನೇಹಿತ ಅಶೋಕ ಕುಲಕರ್ಣಿ ಸಿಕ್ಕಿದ್ರು. ಅವರು ಏನು ಮಾಡಲಿಕತಿ ಅಂದ್ರು. ಸುಮ್ಮನಿದ್ದೆ. ಅವರೇ `ನಾಳೆ ನೀ ಗಿರೀಶ ಕಾರ್ನಾಡ್ ಕಡೆ ಹೋಗು. ಅಶೋಕ ಕುಲಕರ್ಣಿ ಕಳಿಸ್ಯಾರ ಅಂತ ಹೇಳು’ ಅಂತ ಕಳಿಸಿದ್ದರು.

ಮರುದಿನ ಟ್ರಿಮ್ ಆಗಿ ಗಿರೀಶ ಕಾರ್ನಾಡರ ಕಡೆ ಹೋದೆ. ಮಾತಾಡಿಸಿದ್ರು. ಅವರಿಗೆ ಏನನಿಸಿತೋ, `ಆಯ್ತು…. ನಾನು ಒಂದು ಹೊಸ ಸಿನೆಮಾ ತಗೀಲಿಕತೀನಿ. `ಒಂದಾನೊಂದು ಕಾಲದಲ್ಲಿ’ ಅಂತ. ನೀ ನನ್ನ ಜತಿ ಸಹಾಯಕ ನಿರ್ದೇಶಕ ಆಗಿ ಕೆಲಸಾ ಮಾಡು ಆಯ್ತಾ?’ ಅಂದ್ರು. ಸಿನಿಮಾದ ಮೂಲ ಪ್ರತಿ ಕೊಟ್ಟರು. ಇದನ ಓದಕೋ ಅಂದ್ರು. ಯಾರಿ ಗೂ ತೋರಸಬ್ಯಾಡ ಅಂತನೂ ಹೇಳಿದ್ರು. ಎಲ್ಲಾದಕ್ಕೂ ಹೂನ್ರಿ ಅಂತ ಹೇಳಿ ಮರಳಿದೆ.

ನನಗ ಸ್ವರ್ಗಕ್ಕೆ ಮೂರೇ ಗೇಣು ಅನ್ನೋ ಅಷ್ಟು ಸಂತೋಷ ಆಗಿತ್ತು. ಅದಾದ ಮೇಲೆ 35 ವರ್ಷ ಅವರ ಜೋಡಿ ಕೆಲಸಾ ಮಾಡೋ ಭಾಗ್ಯ ನನ್ನದಾಗಿತ್ತು.

ಖರೇ ಹೇಳಬೇಕಂದರ ನನ್ನ ಕನಸು ಇದ್ದದ್ದು ಬೇರೇನೇ. ಬಿಕಾಮ್ ಆಗಿತ್ತಲ್ಲ. ಬ್ಯಾಂಕ್ ನೌಕರಿ ಹಿಡೀಬೇಕು. ಮದುವಿ ಆಗಬೇಕು. ಬ್ಯಾಂಕ್ ಲೋನ್ ತಗದು ಸಣ್ಣ ಮನೆ ಕಟ್ಟಿಕೋಬೇಕು. ನಾನಾತು, ನನ್ನ ಸಂಸಾರ ಆತು ಅಂತ ಇದ್ದ ಬಿಡೋದು ಅಂತ ಕನಸು ಕಂಡಿದ್ದೆ. ಆದ್ರ ಆಗಿದ್ದೇ ಬೇರೆ.

`ಒಂದಾನೊಂದು ಕಾಲದಲ್ಲಿ’ ಆದ ಮೇಲೆ ಅವರು ಪುಣೆ ಫಿಲ್ಮ್ ಇನ್ಸ್ ಟಿಟ್ಯೂಟ್‍ನ್ಯಾಗ `ಫಿಲ್ಮ ಅಪ್ರಿಷಿಯೇಶನ್ ಕೋರ್ಸ್ ಮಾಡಿಸಿದ್ರು. ನನ್ನನ್ನು ಮುಂಬೈಗೆ ಕರೆದುಕೊಂಡು ಹೋದರು. ಕಾನೂರು ಸುಬ್ಬಮ್ಮ ಹೆಗ್ಗಡತಿ, ಉತ್ಸವ್, ಮಾನಸ್ ಮನೋರೋಗಿಗಳ ಧಾರಾವಾಹಿ, ಚೆಲುವಿ ಟೆಲಿಫಿಲ್ಮ್, ಮೀಠಾ ಭವಿಷ್ಯ-ಇದು ಶುಗರ್ ಕೋಆಪರೇಟಿವ್ ಮೂವ್‍ಮೆಂಟ್ ಮೇಲೆ ತೆಗೆದ ಸಾಕ್ಷ್ಯಚಿತ್ರ, ಹೀಂಗ ವಿವಿಧ ಸಿನೆಮಾ,ಧಾರಾವಾಹಿ, ಸಾಕ್ಷ್ಯಚಿತ್ರ ಏನೇನು ಮಾಡಿದ್ರು ಎಲ್ಲಾದರಾಗೂ ನಾನು ಸಹಾಯಕನಾಗಿ ಕೆಲಸಾ ಮಾಡೀನಿ.

ಕರ್ನಾಟಕದಾಗ ಅಪೆಕ್ಸ್ ಬ್ಯಾಂಕ್ ಡಾಕ್ಯುಮೆಂಟರಿ ಮಾಡಿದಿವಿ. ಕನಕ, ಪುರಂದರ, ಬಸವಣ್ಣ, ಅಲೆಮಿ ಚಿರಾಗ್ (ಸೂಫಿಗೆ ಸಂಬಂಧಿಸಿದ್ದು) ಸಾಕ್ಷ್ಯಚಿತ್ರ ಮಾಡಿ ಎಲ್ಲರಿಂದ ಸೈ ಅನಸಿಕೊಂಡರು.

ಗಿರೀಶ ಅವರನ್ನ ಭೆಟ್ಟಿ ಆದಾಗ ನಾವು ಮಾಳಮಡ್ಯಾಗ ಮಾಸೂರ ನಾಯಕ ಚಾಳನ್ಯಾಗ ಇದ್ದವಿ. ಅಲ್ಲೇ 56 ವರ್ಷ ಕಳದೀವಿ. ಅದು ಒಂದು ರೀತಿ ಕೂಡುಕುಟುಂಬದ ಅನುಭವ ಕೊಡತಿತ್ತು. ಗಿರೀಶರು ಧಾರವಾಡದಾಗ ಇದ್ದರಂದ್ರ ನಮ್ಮ ಮನೆಗೆ ತಪ್ಪದೇ ಮೇಲಿಂದ ಮೇಲೆ ಬರೋರು. ನಮ್ಮ ತಾಯಿಗೆ ಅವರೂ ಅವ್ವ ಅಂತನ ಅಂತಿದ್ರು. ಅವಲಕ್ಕಿ ಚಹಾ ಮಾಡಿಸಿಕೊಂಡು ಸವಿದು ಬಾಯ್ತುಂಬ ಹೊಗಳೋರು. ನಮ್ಮವ್ವಗ ಓಡ್ಯಾಡೋದು ಆಗ್ತಿದ್ದಿಲ್ಲ. ಸರಕೋತನ ಎಲ್ಲ ಕೆಲಸ ಮಾಡೋರು. ಗಿರೀಶ ಅವ್ವನ ಬಾಜೂಕ ಕೆಳಗ ನೆಲದ ಮೇಲೇ ಕೂಡೋರು. ಹೀಂಗ ಇತ್ತು ಅವರ ಸರಳತೆ. ವಿದೇಶಕ್ಕೆ ಹೋಗಿ ಬಂದೀನಿ, ನಿರ್ದೇಶಕ ಇದ್ದೀನಿ ಅಂತ ಒಂದಿನಾನೂ ತೊರಿಸ್ಕೋತಿದ್ದಿಲ್ಲ.

ಧಾರವಾಡ ಬಿಟ್ಟು ಹೊರಗಿದ್ರ, ‘ಏನಂತದ ಧಾರವಾಡ’ ಅಂತಿದ್ರು. ಇಲ್ಲೇ ಇದ್ರ, ‘ಏನಂತದ ಚಾಳ್’ ಅಂತ ಕೇಳಿತಿದ್ರು. ಧಾರವಾಡ ಅಂದ್ರ ಅಷ್ಟು ಆಪ್ಯಾಯಮಾನವಾಗಿತ್ತು ಅವರಿಗೆ. ಅಷ್ಟೇ ಅಲ್ಲ, ಅವರು ತಮ್ಮ ಮನೆಯ ಸಮೀಪದ ಸೋಮೇಶ್ವರದ ನೆನಪಿಗೆ ಮಗನಿಗೆ ಸೋಮೇಶ ಅಂತ ಹೆಸರಿಟ್ರ, ಮಗಳಿಗೆ ಶಾಲ್ಮಲೆ ಅಂತ ಕರೀತಿದ್ರು. ಅದು ಆಮೇಲೆ ರೂಢಿಯೊಳಗ ಹೆಸರು ಬದಲಾದವು. ರಘು, ರಾಧಾ ಅಂತ ಕರಿ ಯೂದಾತು.

ಕಾರ್ನಾಡರ ಸ್ಕೂಟರ್ ಉಡುಗೊರೆ

ನನ್ನ ಸ್ಕೂಟರ್ ಕಥೀನು ದೊಡ್ಡದು. ನಾನು ಸೈಕಲ್ ಮೇಲೆ ಓಡಾಡತಿದ್ದೆ. ಒಮ್ಮೆ ಅವರೇ ಕೇಳಿದ್ರು, ‘ಸುರೇಶ, ನಿನಗ ಸ್ಕೂಟರ್ ನಡಸಲಿಕ್ಕೆ ಬರ್ತದೇನು?’. ‘ಬರ್ತದರಿ’ ಅಂದೆ. ಹೊಸ ಸ್ಕೂಟರ್ ಎಷ್ಟು ಬೀಳಬಹುದು ಅಂತ ಕೇಳಿದ್ರು. ‘ಗೊತ್ತಿಲ್ಲರಿ. ನನ್ನ ಒಬ್ಬ ಗೆಳೆಯ ಬಾಗಿ ಸ್ಕೂಟರ್ಸ್‍ನಾಗ ಕೆಲಸ ಮಾಡತಾನ ಕೇಳತೀನಿ’ ಅಂದೆ. ಶೋರೂಮ್‍ಗೆ ಹೋಗಿ ಸ್ಕೂಟರ್ ನೋಡಿದೆ. ಬಜಾಜ್ ಚೇತಕ್ 20 ಸಾವಿರ ಅದ ಅಂತ ಗೆಳೆಯ ಹೇಳಿದ. ನಾ ಗಿರೀಶರಿಗೆ ಹೇಳಿದೆ. ಅವರು ಹಿಂದ ಮುಂದ ಯೋಚನೀನ ಮಾಡಲಿಲ್ಲ. 20 ಸಾವಿರದ್ ಚೆಕ್ ಬರದ ಕೊಟ್ಟುಬಿಟ್ಟರು. ನಾ ರೊಕ್ಕ ಮುಟ್ಟಸ್ತೀನಿ ಅಂದ್ರೂ ಕೇಳಲಿಲ್ಲ. ಹಿಂಗಾಗಿ ಅದು ಗಿರೀಶರು ನನಗೆ ಕೊಟ್ಟ ಉಡುಗೊರೆ.

ಸ್ಕೂಟರಿಂದು ಇನ್ನೊಂದು ಘಟನೆ ಅದ. ಇದು 1984-85ರಾಗ ನಡೀತು. ಅವರದೊಂದು ವೆಸ್ಪಾ ಸ್ಕೂಟರ್ ಇತ್ತು, ಪುಣೆದಾಗ. ಅಲ್ಲಿಂದ ಇಲ್ಲಿ ಧಾರವಾಡಕ್ಕ ತಂದರ ಅದರ ಲೈಸನ್ಸ್ ನವೀಕರಣ, ವರ್ಗಾವಣೆ ಎಲ್ಲ ಮಾಡಸಬೇಕಾಗಿತ್ತು. `ಸುರೇಶ, ನಿನಗ ಇಲ್ಲಿ ಆರ್‍ಟಿಒ ಆಫೀಸನಾಗ ಯಾರರ ಪರಿಚಯ ಅದ ಏನು. ನನ್ನ ಸ್ಕೂಟರ್ ಇಲ್ಲಿ ತರೋದದ’ ಅಂದ್ರು. ಗೊತ್ತಿದ್ದಾರ ಅಂದೆ.

ಆರ್‍ಟಿಒ ಜಯಸಿಂಹ ಅಂತ ಇದ್ರು. `ನೀವು ಬರ್ತೀನಿ ಅಂದ್ರ ಹೋಗೋಣ ನಡೀರಿ’ ಅಂದೆ. ನಾ ಸ್ಕೂಟರ್ ನಡಿಸಿದೆ. ಅವರು ಹೆಲ್ಮೆಟ್ ಹಾಕ್ಕೊಂಡು ಹಿಂದ ಕೂತರು. ಅಲ್ಲಿ ಹೋದ ಮೇಲೆ ಆರ್‍ಟಿಒ ಓಳ್ಳೆ ಮುತುವರ್ಜಿಯಿಂದ ಕಾಗದ ಪತ್ರ ಎಲ್ಲಾ ಮಾಡಿಸಿಕೊಟ್ಟರು. ಗಿರೀಶ ಕಾರ್ನಾಡರು ಆಫೀಸಿಗೆ ಬಂದಾರಂದ್ರ ಕೇಳಬೇಕ. ಎಲ್ಲಾ ಆತು. ಆಮೇಲೆ ಗಿರೀಶರು ಆ ಆರ್‍ಟಿಒ ಅವರನ್ನ, `ಅಲ್ಲರಿ ಇಲ್ಲಿ ಧಾರವಾಡದಾಗ ಸ್ಕೂಟರ್ ನಡಸಬೇಕಾದ್ರ ಹೆಲ್ಮೆಟ್ ಕಂಪಲ್‍ಸರಿ ಇಲ್ಲೇನ್ರಿ’ ಅಂತ ಕೇಳಿದ್ರು. ಆಫೀಸರ್ ಅವರು ‘ಅದ’ ಅಂದ್ರು. ‘ಹಂಗಾರ ಈ ಸುರೇಶ ಈಗ ಬರಬೇಕಾದರ ಹೆಲ್ಮೆಟ್ ಇಲ್ಲದ ಸ್ಕೂಟರ್ ನಡಿಸ್ಯಾನ ನೋಡ್ರಿ. ಇವಗ ದಂಡಾ ಹಾಕರಿ ಮತ್ತ’ ಅಂತ ಕಿಚಾಯಿಸಿದರು. ಆರ್‍ಟಿಒ ಆಫೀಸರ್ ನಕ್ಕು ಸುಮ್ಮನಾದರು.

ರೇಖಾ ಮತ್ತು ಕಡಲೇ ಹಿಟ್ಟು

`ಉತ್ಸವ್’ ಸಿನಿಮಾ ಮಾಡುಮುಂದ ಆದ ಅನುಭವಾನ ನಾನು ಜನ್ಮಾಪ್ತಿ ಮರಿಯೋಂಗಿಲ್ಲ. ಅದರಾಗ ಶಶಿಕಪೂರ, ರೇಖಾ ನಾಯಕ ನಾಯಕಿ. ಅಮ್ಜದ್ ಖಾನ್ ಮೊದಲಾದವರಿದ್ದಾರ. ರೇಖಾಳದು ವಸಂತಸೇನಾ ಪಾತ್ರ. ಕುಂದಾಪುರದ ಎಂಎಲ್‍ಎ, ಹಲಸನಾಡು ಸುಬ್ಬರಾವ್ ಮನೆ ನಮ್ಮ ಲೊಕೇಶನ್. ಅವರೋ ಭಾರಿ ಮಡಿವಂತಿಕೆ ಅನುಸರಿಸ್ತಿದ್ರು. ಚಪ್ಪಲಿ ಹಾಕಿಕೊಂಡು ಬಾಗಿಲ ಒಳಗೆ ಹೋಗೋ ಹಂಗಿಲ್ಲ. ನಾವು ಹಂಗೂ ಹಿಂಗೂ ಮಾಡಿ ಕರೆಂಟಿನ ವೈರ್ ಇರ್ತಾವರಿ, ಹೊಸ ಹವಾಯಿ ಚಪ್ಪಲಿ ಹಾಕ್ಕೋತೀವಿ ಅಂತ ಪರ್ಮಿಷನ್ ತಗೊಂಡಿದ್ದಿವಿ.

ಅದೊಂದು ದಿನ ವಸಂತಸೇನಾಳ ಸ್ನಾನಗೃಹದ ಸೀನ್ ಇತ್ತು. ಆಕೆ ಗಂಧ ಲೇಪನ ಮಾಡಿಕೊಂಡು ಸ್ನಾನ ಮಾಡಬೇಕಾದ ಸೀನ್. ಸೆಟ್ ಮೇಲೆ ನಾವು ಮೂವರೇ ಇದ್ದವಿ. ನಾನು, ಗಿರೀಶ್ ಮತ್ತು ಕ್ಯಾಮರಾಮ್ಯಾನ್. ರೇಖಾ ಗಂಧ ಹಚ್ಕೊಳ್ಳಿಕ್ಕೆ ಶುರು ಮಾಡಿದ್ಲು. ಒಂದು ದೊಡ್ಡ ಬಟ್ಟಲ ತುಂಬಿ ಗಂಧದ ಪೇಸ್ಟ್ ಇಟ್ಟಿದ್ದೆ. ಆ ಸೀನ್ ಸರಿ ಆಗೋದ್ರೊಳಗ ಗಂಧ ಮುಗಿದು ಬಿಟ್ತು. ಇನ್ನೇನು ಮಾಡೋದು? ಮನೆ ಓನರ್ ಕಡೆ ಓಡಿದೆ. ನಿಮ್ಮ ಕಡೆ ಸ್ವಲ್ಪ ಗಂಧದ ಪುಡಿ ಸಿಗಬಹುದಾ ಅಂತ ಕೇಳಿದೆ. ಹೀಂಗ ಆಗ್ಯದ ಅಂತನೂ ಹೇಳಿದೆ. ಅವರಂದರು. ಗಂಧದ ಪುಡಿ ಇಲ್ಲ. ಕಡಲೇ ಹಿಟ್ಟು ಪೇಸ್ಟ್ ಮಾಡಿಡಿ, ನೋಡೋರಿಗೇನು ಗೊತ್ತಾಗಲ್ಲ ಅಂದ್ರು. ಸರಿ ಅನಿಸ್ತು. ಕಡಲೆಹಿಟ್ಟು ಕಲಿಸಿಕೊಂಡು ಬಂದೆ. ಶಾಟ್ ಕೊಡಲಿಕ್ಕೆ ರೇಖಾ ಬಂದು ಕೈಯಾಗ ಪೇಸ್ಟ ತೊಗೊಂಡ್ಲು. ಒಮ್ಮೆಲೆ, `ಮೈಗಾಡ್ ಗಿರೀಶ ಇಟ್ ಸ್ಮೆಲ್ಸ್ ಹೆಲ್’ ಅಂತ ಜೋರಾಗಿ ಚೀರಿದ್ಲು. 

ಗಿರೀಶ ನನ್ನ ಕಡೆ ನೋಡಿ ಏನಾತು ಸುರೇಶ ಅಂದ್ರು. ಹಿಂಗಾಗೇದ. ಈಗಂತೂ ಗಂಧದ ಪುಡಿ ಸಿಗಂಗಿಲ್ಲ. ಈ ಅವಕಾಶ ಹೋತಂದ್ರ ಮತ್ತ ಸೆಟ್ ಹಾಕೋದು ಶ್ರಮ ಎಲ್ಲ ವ್ಯರ್ಥ ಆಗ್ತದ. ನಾ ಹೇಳ್ತೀನಿ ತಡೀರಿ ಅಂದೆ. ರೇಖಾನ ಹತ್ತರ ಹೋಗಿ `ಇದು ಬೇಸನ್ ಪೇಸ್ಟ್ ಅದ, ಮೈಗೆ ಹಚ್ಕೊಂಡು ಸ್ನಾನ ಮಾಡಿದ್ರ ಚರ್ಮ ಶೈನ್ ಆಗ್ತದ. ನಮ್ಮಮ್ಮ ಈತನಕ ಬೇಸನ್ ಪೇಸ್ ಹಚ್ಕೊಂಡೇ ಸ್ನಾನ ಮಾಡೋದು. ಅವರಿಗೆ ಈಗ 70ರ ಮೇಲೆ ವಯಸ್ಸು. ಈಗಲೂ ಆಕಿ ಚರ್ಮ ಮಸ್ತ ಅದ. ಏನಾಗೂದಿಲ್ಲ ಮೇಡಮ್ ಅದನ ಹಚ್ಕೋಬಹುದು. ನಿಮಗೆ ಒಳ್ಳೇದು’ ಅಂದೆ. ಆಗ ರೇಖಾ `ನಿಜವಾಗಲೂ’ ಅಂತ ಕನ್ನಡದಾಗ ನನಗ, ಗಿರೀಶಗ ಕೇಳಿದ್ಲು. ಹೌದು ಅಂದವಿ. ಅಂತೂ ಆ ಸೀನ್ ಮುಗೀತು. ಆಮೇಲೆ ಗಿರೀಶ ನನಗ `ಸುರೇಶ ಭಾಳ ಥ್ಯಾಂಕ್ಸ್, ಟೈಮ್, ಹಣ ಎರಡೂ ಉಳಿಸಿದಿ ನೀನು’ ಅಂತ ಮೆಚ್ಚಿಕೊಂಡರು.

ಬೆನ್ನಮೇಲೆ ಒಂದು ಟವಲ್ ಕೂಡ ಹಾಕೋ ಹಂಗಿಲ್ಲ. ಚಿತ್ರೀಕರಣ ಮುಗಿಯೋದರೊಳಗ ಬೆನ್ನ ಮೇಲೆ ಕೆಂಪ ಗುಳ್ಳಿ ಎದ್ದಿದ್ದವು. ಗಿರೀಶ ಪತ್ನಿ ಸರಸ್ವತಿ ಅವರು ಅಲ್ಲಿಗೆ ಬಂದಿದ್ದರು. ಅವರಂತೂ ಭಾಳ ಅಂತಃಕರುಣಿಯಾಕಿ. ನನ್ನ ಅವಸ್ಥೆ ನೋಡಿ `ವಾಟ್ ಈಸ್ ದಿಸ್ ಗಿರೀಶ?’

ರೇಖಾ ಆಗ ಮಣಿಪಾಲದಾಗ ಪೈ ಅನ್ನೋರ ಮನ್ಯಾಗ ಇದ್ಲು. ಮರುದಿನ ನಾವು ಅಲ್ಲಿಗೆ ಹೋಗಿದ್ವಿ. ಪೈ ಅವರು ಗಿರೀಶರನ್ನ `ನಿನ್ನೆ ಯಾವ ಸೀನ್ ಇತ್ತು’ ಅಂತ ಕೇಳಿದ್ರು. ನಾವು ಹೇಳಿದ್ವಿ. ಯಾಕ ಅಂತ ಕೇಳಿದ್ರ, ರೇಖಾ ಬೆಳಗಿನ ಜಾವ ಬಂದು ಬಾತರೂಮ್ ಸೇರಕೊಂಡವರು ಮೂರು ತಾಸ ಮೇಲೆ ಹೊರಗ ಬಂದಾರ ಅಂದ್ರು. ಆಗಿದ್ದೆಲ್ಲ ಹೇಳಿದ್ವಿ. ಬಿದ್ದುಬಿದ್ದು ನಕ್ಕರು. ನಮಗೂ ನಗು ತಡಿಯಲಾಗಲಿಲ್ಲ.

ಉತ್ಸವ್ ಸಿನೇಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ರಾಮನಗರ, `ಶೋಲೆ’ ಚಿತ್ರೀಕರಣ ಆಗಿತ್ತಲ್ಲ ಅಲ್ಲಿತ್ತು. ಅಲ್ಲಿ ಪರಿಸರ ಕಲ್ಲುಬಂಡೆಗಳಿಂದ ತುಂಬಿರೋದು. ಚಿತ್ರದುರ್ಗದ್ಹಂಗ… ಬೇಸಿಗೆ ದಿನಗಳವು. ಬಂಡೆಗಲ್ಲೆಲ್ಲ ಕಾದಿರತಿದ್ದವು. ಅಂಥಾದರಾಗ ನಂದು ಬರೀಗಾಲೀಲೆ ಓಡಾಡೋ ಸೀನ್ ಇತ್ತು. ಬೆನ್ನಮೇಲೆ ಒಂದು ಟವಲ್ ಕೂಡ ಹಾಕೋ ಹಂಗಿಲ್ಲ. ಚಿತ್ರೀಕರಣ ಮುಗಿಯೋದರೊಳಗ ಬೆನ್ನ ಮೇಲೆ ಕೆಂಪ ಗುಳ್ಳಿ ಎದ್ದಿದ್ದವು. ಗಿರೀಶ ಪತ್ನಿ ಸರಸ್ವತಿ ಅವರು ಅಲ್ಲಿಗೆ ಬಂದಿದ್ದರು. ಅವರಂತೂ ಭಾಳ ಅಂತಃಕರುಣಿಯಾಕಿ. ನನ್ನ ಅವಸ್ಥೆ ನೋಡಿ `ವಾಟ್ ಈಸ್ ದಿಸ್ ಗಿರೀಶ?’ ಅಂತ ಗಂಡನ ಮೇಲೆ ಸಿಟ್ಟು ಮಾಡಿ, ನನ್ನ ಬೆನ್ನಿಗೆ ತಾವೇ ಔಷಧಿ ಸವರಿದರು. ಇಬ್ಬರೂ ಗಂಡಾ ಹೆಂಡತಿ ಭಾಳ ಆರೈಕೆ ಮಾಡತಿದ್ದರು.

ಶಶಿಕಪೂರ ಕಾರು ರಾಮನಗರ ದಾಟೋಕಿಂತ ಮೊದಲ ಒಬ್ಬ ಅಜ್ಜಗ ಡಿಕ್ಕಿ ಹೊಡೀತು. ಅಜ್ಜನ ಮೊಣಕಾಲು ಕೆತ್ತಿತು. ಭಾಳ ಏನ್ ಗಾಯ ಆಗಿರಲಿಲ್ಲ. ಆ ಊರವರೆಲ್ಲ ಜೋರು ಜಗಳ ಮಾಡಿದರು. ಅವರೆಲ್ಲ ಶಶಿಕಪೂರನ ಶಮ್ಮಿಕಪೂರ ಅನಕೊಂಡುಬಿಟ್ಟಿದ್ದರು.

ಚಿತ್ರೀಕರಣ ಎಲ್ಲಾ ಮುಗೀತು. ರೇಖಾ, ಶಶಿಕಪೂರ ಎಲ್ಲಾರಿಗೂ ಬೆಂಗಳೂರಿನಾಗ ಇಳಕೋಳ ವ್ಯವಸ್ಥೆ ಮಾಡಿದ್ದಿವಿ. ರೇಖಾನ ಕಾರು ಮುಂದ ಹೋತು. ಅವರ ಹಿಂದ ಶಶಿಕಪೂರ, ಗಿರೀಶ ಅವರೆಲ್ಲರ ಕಾರು, ಅವರ ಹಿಂದ ನಮ್ಮ ಕಾರು ಹೊರಟಿತ್ತು. ಶಶಿಕಪೂರ ಕಾರು ರಾಮನಗರ ದಾಟೋಕಿಂತ ಮೊದಲ ಒಬ್ಬ ಅಜ್ಜಗ ಡಿಕ್ಕಿ ಹೊಡೀತು. ಅಜ್ಜನ ಮೊಣಕಾಲು ಕೆತ್ತಿತು. ಭಾಳ ಏನ್ ಗಾಯ ಆಗಿರಲಿಲ್ಲ. ಆ ಊರವರೆಲ್ಲ ಜೋರು ಜಗಳ ಮಾಡಿದರು. ಅವರೆಲ್ಲ ಶಶಿಕಪೂರನ ಶಮ್ಮಿಕಪೂರ ಅನಕೊಂಡುಬಿಟ್ಟಿದ್ದರು. ಸಿನಿಮಾದವರು ಅಂದ್ರ ಒಂದು ರೊಕ್ಕ ಕಿತ್ತಬೇಕು ಅಂತ ವಿಚಾರ. ಇನ್ನೊಂದು ಈ ಸಿನಿಮಾದೋರಗೆಲ್ಲ ಸೊಕ್ಕು ಜಾಸ್ತಿ ಅಂತ ಪೂರ್ವಾಗ್ರಹನೋ ಏನೋ ಎಲ್ಲೆಲ್ಲೂ ನಮ್ಮನ್ನ ಮುಂದ ಹೋಗಲಿಕ್ಕೆ ಬಿಡಲಿಲ್ಲ. ನನ್ನ ಹತ್ತರ ರೊಕ್ಕ ಭಾಳ ಇರಲಿಲ್ಲ. 1500 ಅಷ್ಟು ಇದ್ದವು. ಕೊಟ್ಟಿವಿ. ಅಷ್ಟೊತ್ತಿಗೆ ಪೊಲೀಸರು ಬಂದರು. ಎಲ್ಲಾ ಬಗೆಹರಿಸಿ ಅವರನ್ನೆಲ್ಲ ಬೆಂಗಳೂರಿಗೆ ಕಳಿಸಿದವಿ. ಅವರು ನನ್ನ ಹಿಡಕೊಂಡಬಿಟ್ಟರು. ನಾ ಏನು ಹೇಳಿದರೂ ಕೇಳಲಿಕ್ಕೆ ತಯಾರಿಲ್ಲ. ನಿರ್ವಾಹ ಇಲ್ಲದೆ ಪೊಲೀಸ್ ಸ್ಟೇಶನ್‍ಗೆ ಬಂದೆ. ಗಿರೀಶ ಅವರೂ ಭಾಳ ಬೇಜಾರು ಮಾಡಿಕೊಂಡರು.

ಇತ್ಲಾಗ ಗಿರೀಶ ಅವರು ತಾಬಡತೋಬಡ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಫೋನ್ ಹಚ್ಚಿದರು. ಕಮೀಷನರ್ ಗರುಡಾಚಾರ್ ಬಂದು ಅಲ್ಲಿ ಪೊಲೀಸರಿಗೆ ಶಿಸ್ತ್ ಬೈದರು. ನಾ ಕೊಟ್ಟಿದ್ದ ರೊಕ್ಕಾ ವಾಪಸ್ ಕೊಡಿಸಿದ್ರು. ಪೊಲೀಸ್ ಜೀಪ್‍ನ್ಯಾಗ ಬೆಂಗಳೂರತನ ಕರ್ಕೊಂಡುಬಂದು ಬಿಟ್ಟರು. 

ವಿಧವಾ ವಿವಾಹ ಆಗಬಹುದು

ಒಮ್ಮೆ ರಾಘವೇಂದ್ರ ಖಾಸನೀಸ ಅವರ `ಬೇಡಿಕೊಂಡವರು’ ಕೃತಿ ಚಿತ್ರ ಮಾಡಬೇಕು ಅಂತ ತಯಾರಾದರು. ಅದಕ್ಕಾಗಿ ಮಂತ್ರಾಲಯಕ್ಕ ಹೋಗಿ ಲೊಕೇಶನ್ ನೋಡಿಕೊಂಡು ಬರೋಣ ಬಾ ಅಂತ ಮನೀಗೆ ಬಂದರು. ಮಸ್ತ್ ಜೀನ್ಸ್ ಪ್ಯಾಂಟ್, ಟೀಶರ್ಟ್, ಹಾಕ್ಕೊಂಡು ಬಂದಿದ್ದರು. ನಾ ಹೇಳಿದೆ, ‘ಅದಕ್ಕಿಂತ ಮೊದಲ ಒಂದು ಅರ್ಜಂಟ್ ಕೆಲಸ ಅದ. ಇಲ್ಲೆ ಕಾಮನಕಟ್ಯಾಗ ಮನಿ ಅದ. ನೀವು ನನ್ನ ಜತಿ ಬರ್ಬೇಕು. ಒಂದು ಪ್ರಪೋಸಲ್ ಬಂದದ. ಆಕೀ ಗಂಡ ತೀರಕೊಂಡಾರಂತ. ಇವತ್ತು ಬೆಂಗಳೂರಿಂದ ಬರ್ತಾಳಂತ. ನೋಡಿಕೊಂಡು ಹೋಗರಿ ಅಂತ ಕರದಾರ. ಅಲ್ಲಿ ಹೋಗಿ ಬರೋಣ’. ‘ಅಯ್ಯ ಅದಕೇನಂತ ನಡೀರಿ ಹೋಗೋಣ’ ಅಂದೋರೆ, ‘ತಡಿ ಮನೀಗೆ ಹೋಗಿ ಬರ್ತೀನಿ’ ಅಂದು ಧೋತ್ರ, ಜುಬ್ಬಾ ಹಾಕ್ಕೊಂಡು ಬಂದ್ರು.

ನಾವಿಬ್ಬರೂ ಸ್ಕೂಟರ್ ಮೇಲೆ ಹೋದವಿ. ರವಿವಾರ ಇತ್ತು. `ಮಹಾಭಾರತ’ ಧಾರಾವಾಹಿ ಬರ್ತಿತ್ತು. ಆ ಮನಿಯವರು ನಮ್ಮನ್ನು ನೋಡಿ, ಅದರಾಗೂ ಗಿರೀಶ ಅವರನ್ನ ನೋಡಿ ಇಲ್ಲೇ ಸೋಫಾ ಮೇಲೆ ಕೂಡರಿ. ಅಂದರು. ನನಗ ಬಾಜು ಸ್ಟೂಲ್ ತೋರಿಸಿದ್ರು. ತಕ್ಷಣ ಗಿರೀಶ ಅವರು `ಏನರಿ, ಆತನ ವರ, ನನಗ ಆದರ ಮಾಡಿದರ ಹೆಂಗ. ಅವನೂ ಇಲ್ಲೇ ನನ್ನ ಬಾಜು ಕೂಡತಾನ ಅಂತ ತಮ್ಮ ಪಕ್ಕಕ್ಕ ಕೂಡಿಸಿಕೊಂಡರು. ಕನ್ಯಾ ಕರೀತಾರಂತ ದಾರಿ ಕಾದ ಕಾದಿವಿ. ಒಂದು ಆಲ್ಬಮ್ ತಂದು ಇಕೀನ ನೋಡರಿ ಕನ್ಯಾ ಅಂತ ಗ್ರೂಪ್ ಫೋಟೊನ್ಯಾಗ ತೋರಿಸಿದರು. ಗಿರೀಶ ಅವರಿಗೆ ಸಿಟ್ಟು ಬಂತು. ಅಲ್ಲಾ ಕನ್ಯಾ ಬಂದಿಲ್ಲೇನು ಅಂತ ಕೇಳಿದ್ರು. ಆ ಮನಿಯವರು ಇಲ್ಲರಿ, ರಿಸರ್ವೇಶನ ಸಿಗಲಿಲ್ಲ ಅಂತರಿ, ಬಂದಿಲ್ಲರಿ ಅಂದ್ರು. ಗಿರೀಶ ಅವರು ಎದ್ದೋರೆ, ‘ನಡೀರಿ ಸುರೇಶ, ಹೋಗೋಣ’ ಅಂತ ಹೊರಗ ಕರ್ಕೊಂಡು ಬಂದು, ‘ಸ್ಕೂಟರ್ ಬಾಂಬೆ ರೆಸ್ಟೋರೆಂಟ್ ಕಡೆ ಹೊಡೀರಿ’ ಅಂದರು. ಅಲ್ಲಿ ಟಿಫಿನ್, ಚಹಾ ಮುಗಿಸ್ಕೋಬೇಕಾತು.

ವಿಧವಾ ವಿವಾಹ ಅಗಬಹುದು, ಏನ್ ತಪ್ಪಿಲ್ಲ ಅಂತ ಬಂದರ ಇವರದೊಳೆ ಆತು. ಗಿರೀಶ ಅವರಿಗೆ ವಿಧವಾ ವಿವಾಹ ಸರಿ ಅನಿಸಿತ್ತು. ಅವರ ತಂದೆ ಸಮಾಜ ಸುಧಾರಣೆಯತ್ತ ಮನಸಿರೋರು. ಅವರ ತಂದೆ ಡಾ.ರಘುನಾಥ ಕಾರ್ನಾಡರು ಮೊದಲನೇ ಪತ್ನಿ ತೀರಿ ಹೋದ ಮೇಲೆ ತಮ್ಮ ಕ್ಲೀನಿಕ್‍ನಲ್ಲಿರೋ ನರ್ಸ್ ವಿಧವೆಯಾಗಿದ್ರೂ ಅವರನ್ನೇ ಮದುವೆಯಾಗಿದ್ದರು. ಅವರ ಮಗನೇ ಗಿರೀಶ.

ಆಯಿ ಮತ್ತು ಸಕ್ಕರೆ

ಗಿರೀಶರ ತಾಯಿ ರಾಧಾಬಾಯಿ, ಭಾರಿ ಜಾಗೃತ ಹೆಣಮಗಳು. ಸರಕಾರದ ನಿಯಮಗಳೇನವ ಅದರಂಗ ನಡೀಬೇಕು ಅನ್ನೋದು ಅವರ ತತ್ವ. ಅವರದು ರೇಷನ್ ಕಾರ್ಡ್ ಇತ್ತು. ಅದರ ಪ್ರಕಾರ ಎರಡು ಕಿಲೊ ಸಕ್ಕರೆ ಬರ್ತಿತ್ತು. ಆದ್ರ ಆ ಅಂಗಡಿಯಂವ ಏನೋ ತಕರಾರು ಮಾಡಿ ಇವರಿಗೆ ಸಕ್ಕರೀನ ಕೊಟ್ಟಿದ್ದಿಲ್ಲ. ಗಿರೀಶರು ಆಗ ಇಂಗ್ಲೆಂಡ್‍ನ್ಯಾಗ ಇದ್ರು. ಅಲ್ಲಿಂದ ಟ್ರಂಕಾಲ್ ಮಾಡಿದರು ಅಂದ್ರ ಮೊದಲನೇ ಪ್ರಶ್ನೆ ಏನಂತದ ಧಾರವಾಡ ಅಂತ ಕೇಳ್ತಿದ್ರು. ಆಮೇಲೆ ಆಯಿ (ಅವರ ತಾಯಿ) ಅದೇನೋ ರೇಷನ್ ಕಾರ್ಡಿನ ಸಮಸ್ಯೆ ಅದ ಅಂತ ನೋಡಪ. ಸಕ್ಕರೆ ಬೇಕಂತ. ಒಂದು ಹತ್ತು ಕಿಲೊ ಕೊಟ್ಟು ಬಂದು ಬಿಡು. ಆಕೀಗೆ ರೇಷನ್ ಅಂಗಡಿಗೆ ಹೋಗೋದರ ತಪ್ಪತದ ಅಂದರು. ನಾನು ಮರುದಿನ ಅವರ ಮನೀಗೆ ಹೋದೆ. ರೇಷನ್ ಕಾರ್ಡ್ ಇಸ್ಕೊಂಡು ನೋಡಿದೆ. ಅಂಗಡಿಗೆ ಹೋಗಿ ಕೇಳಿದರ, ಏನಿಲ್ಲರಿ ಅದರಾಗ ಯಾರ ಹೆಸರ ಅದಲ್ಲ ಅವರ ಹೊಸ ಫೋಟೊ ಹಚ್ಚಿದರೆ ಸಾಕು. ಮತ್ತ ಮೊದಲಿನಂಗ ಸಕ್ಕರಿ ಕೊಡತೀವಿ ಅಂದರು. ಅದರಾಗ ಗಿರೀಶ ಫೋಟೊ ಹಚ್ಚಬೇಕಾಗಿತ್ತು. ಅವರೇನೊ ಇಂಗ್ಲೆಂಡಿಗೆ ಹೋಗಿದ್ರು. ಇಷ್ಟರಾಗ ಬರೋರು ಇರಲಿಲ್ಲ. ಅವರು ಹೇಳಿದಂಗ ಬೇರೆ ಅಂಗಡಿಯೊಳಗ ಹತ್ತು ಕಿಲೊ ಸಕ್ಕರೆ ತಗೊಂಡು ಹೋಗಿ ಅವರ ಆಯಿಗೆ ಕೊಟ್ಟೆ. ಅವರು `ಇದರ ರಸೀತಿ ಎಲ್ಲಿ? ಹತ್ತು ಕಿಲೊ ಒಮ್ಮೆಲೇ ಹೆಂಗ ಕೊಟ್ಟ? ಅಂತೆಲ್ಲ ಪ್ರಶ್ನೆ ಮಾಡಿದ್ರು. ಹೆಂಗೋ ಮಾಡಿ ಸಂಭಾಳಿಸಿ ಬಂದೆ.

ಹಿಂಗೆಲ್ಲ ಆತು ಅಂತ ಗಿರೀಶ ಅವರು ಫೋನು ಮಾಡಿದಾಗ ಹೇಳಿದೆ. ಅವರು, `ಎಲ್ಲಾ ಬಿಟ್ಟು ರೇಷನ್ ಕಾರ್ಡಿಗೆ ಫೋಟೊ ಹಚ್ಚಲಿಕ್ಕೆ ಇಂಗ್ಲೆಂಡಿಂದ ಅಲ್ಲಿಗೆ ಬರ್ಲಾ’ ಅಂತ ಕೇಳಿದ್ರು.

ಕೆಲ ದಿನಗಳ ನಂತರ ಗಿರೀಶ ಅವರು ಇಲ್ಲಿಗೆ ಬಂದರು. ನಾ ಹೇಳಿದೆ. ನಡೀರಿ ಫುಡ್ ಆ್ಯಂಡ್ ಸಿವಿಲ್ ಸಪ್ಲೈ ಆಫೀಸಿಗೆ ಹೋಗಿ ರೇಷನ್ ಕಾರ್ಡಿನ ಸಮಸ್ಯೆ ಬಗಿಹರಿಸೋಣ ಅಂದೆ. ಅಲ್ಲಿಗೆ ಹೋದರೆ ಅವ ಗಿರೀಶ ಅವರನ್ನು ಗುರತ ಹಿಡೀಲಿಲ್ಲ. ಮೇಲೆ ಏನೇನೋ ಮಾತಾಡಿದ. ನಾನು ಗಿರೀಶ ಅವರನ್ನ ಸೀದಾ ಡಿಸಿ ಕಚೇರಿಗೆ ಕರ್ಕೊಂಡು ಬಂದೆ. ಡಿಸಿ ಮಹೇಶನ್ ಅಂತ ಇದ್ರು. ಅವರು ಗಿರೀಶರ ದೊಡ್ಡ ಫ್ಯಾನ್. ಅವರ ಆಫೀಸ ಹೊರಗ ಹೋಗಿ ಅಟೆಂಡರ್‍ಗೆ ಹೀಂಗ ಅಂತ ಹೇಳಿದೆ. ಅವ, ಇಲ್ಲರಿ, ಮೀಟಿಂಗ್ ನಡದದ. ಈಗ ನಿಮ್ಮನ್ನ ಕಳಿಸಿದ್ರ ನನ್ನ ಬೈದುಬಿಡ್ತಾರ ಅಂದ. ಏನೂ ಆಗಂಗಿಲ್ಲ. ಒಂದು ಸೆಕೆಂಡ್ ನೀ ಹೋಗಿ ಗಿರೀಶ ಕಾರ್ನಾಡರು ಬಂದಾರ ಅಂತ ಹೇಳು, ಸಾಕು ಅಂದೆ. ಅಂವ ಅಂಜಕೋತ ಹೋಗಿ ಹೇಳಿದ, ಹೇ, ಒಳಗ ಕರೀರಿ. ಅವರು ಇಂಟರ್‍ನ್ಯಾಷನಲ್ ಪರ್ಸನಾಲಿಟಿ ಗೊತ್ತಾಗಲ್ಲ? ಈ ಮೀಟಿಂಗ್ ಎಲ್ಲ ಆಮೇಲೆ ಮಾಡೋಣ ನಡೀರಿ. ಅರ್ಜೆಂಟ್ ಒಬ್ರನ್ನ ಭೆಟ್ಟಿಯಾಗಬೇಕು ಅಂತ ಹೇಳಿ ನಮ್ಮನ್ನ ಒಳಗ ಕರೀಸಿ ಏನು ಕೆಲಸ ಆಗಬೇಕಿತ್ತು ಅಂತ ಕೇಳಿದ್ರು. ರೇಷನ್ ಕಾರ್ಡಿನ ಸಮಸ್ಯೆ ಹೇಳಿದೆ. ಅರ್ಧಾ ತಾಸಿನೊಳಗ ಎಲ್ಲಾ ಕೆಲಸ ಮಾಡಿಸಿದ್ರು. ಫುಡ್ ಆ್ಯಂಡ್ ಸಿವಿಲ್ ಸಪ್ಲೈ ಅಧಿಕಾರೀನ ಕರದ ಗಿರೀಶ ಅವರ ಫೋಟೊ ಹಚ್ಚಿಸಿ ರೇಷನ್ ಕಾರ್ಡ್ ಕೊಟ್ಟರು.

ಡಿಸಿಗಂತೂ ಗಿರೀಶ ಅವರನ್ ಎದ್ರಿಗೆ ನೋಡಿ ಖುಷಿ ಆಗಿಬಿಟ್ಟಿತ್ತು. ಅಲ್ಲೇ ಅಟ್ಟದ ಮೇಲೆ ಮನೆ. ಹೆಂಡತಿ, ಮಕ್ಕಳನ್ನ ಕರಿಸಿ, ಗಿರೀಶರ ಭೆಟ್ಟಿ ಮಾಡಿಸಿದ. ಮಕ್ಕಳಿಗೆ ಗಿರೀಶರ ಆಶೀರ್ವಾದ ತೊಗೋಳಿಕ್ಕೆ ಹೇಳಿದ. ಎಲ್ಲೇ ಹೋದ್ರು ಗಿರೀಶರು ಭಾಳ ಸರಳ ಇರ್ತಿದ್ರು.

ಅಘೋರಿ ಭೆಟ್ಟಿ

ಗಿರೀಶರಿಗೆ ಅಗ್ನಿ ಮತ್ತು ಇಳೆ ಬರೀಬೇಕಾಗಿತ್ತು. ಅದರೊಳಗ ಸಾಮಯಜ್ಞ, ವಾಮಯಜ್ಞ ಮಾಹಿತಿ ಬರೀಬೇಕಂದ್ರ ಅದರ ಬಗ್ಗೆ ಎಲ್ಲ ಗೊತ್ತಿರಬೇಕಲ್ಲ. ಅದಕ್ಕ ಒಬ್ಬ ಅಘೋರಿನ್ನ ಭೆಟ್ಟಿ ಮಾಡಬೇಕು ಅಂತ ಅಂದ್ರು. ನಾ ಹೇಳಿದೆ, ನನ್ನ ಒಬ್ಬ ಗೆಳೆಯ ಅಘೋರಿ ಇದ್ದಾನ. ನಡೀರಿ ಬೆಟ್ಟಿ ಮಾಡಸ್ತೀನಿ ಅಂದೆ. ಅವರಿಗೆ ಆಶ್ಚರ್ಯ ಆಗಿಬಿಟ್ತು. ಅಲ್ಲಿ ಇಲ್ಲಿ ಎಲ್ಲಾ ಕಚೇರ್ಯಾಗ ಜನ ಗೊತ್ತಿದ್ದಾರಂದ್ರ ಸೈ. ಇಂವಗ ಅಘೋರಿನೂ ಗೊತ್ತಿದ್ದಾನ ಅಂತ ದಂಗಾದರು. ಆತು ಹಂಗಾರ ಭೆಟ್ಟಿ ಮಾಡಸು, ಹತ್ತು ನಿಮಿಷ ಮಾತಾಡೋಣ ಅಂದ್ರು.

ಅಶೋಕ ಕಟ್ಟಿ ಅಂತ ನನ್ನ ಗೆಳೆಯ ಅಘೋರಿಯಾಗಿದ್ದ. ಸಣ್ಣಂದಿರತ ನಾಗಾ ಸಾಧುಗಳ ಬಗ್ಗೆ ಆಸಕ್ತಿ ಇತ್ತು ಅವಗ. ಎಲ್ಲಾ ಸಾಧನೆ ಮಾಡಿಕೊಂಡಿದ್ದ. ನೋಡಿದರ ಅಂಜಕೋಬೇಕು ಹಂಗ ಕಾಣತಿದ್ದ. ಆದ್ರ ನನ್ನ ಜತಿ ಛೋಲೊ ಮಾತಾಡತಿದ್ದ. ಗಿರೀಶರನ್ನ ಅವನ ಕಡೆ ಕರ್ಕೊಂಡು ಹೋದೆ. ಹತ್ತು ನಿಮಿಷದ ಭೆಟ್ಟಿ ಅಂದವರು ನಾಲ್ಕೂವರೆ ತಾಸಾದ್ರೂ ಮಾತು ಮುಗಸವಲ್ರು. ಎಲ್ಲಾ ಆದ ಮೇಲೆ ಅವನಿಗೆ ಗಿರೀಶರು ದುಡ್ಡು ಕೊಡಲಿಕ್ಕೆ ಹೋದ್ರು. ಅವ ಹೇಳಿದ, ನಾ ದುಡ್ಡು ಮುಟ್ಟೂದಿಲ್ಲ. ಒಳಗ ಕೋಣ್ಯಾಗ ಹೋಮ ಕುಂಡ ಅದ. ಅದರ ಮೇಲೆ ಎಷ್ಟು ದಕ್ಷಿಣೆ ಇಡ್ತೀರಿ ಇಡರಿ ಅಂತ ಕಳಿಸಿದ. ಅಬ್ಬಾ, ಕೋಣಿಯೊಳಗ ನೋಡಿ ನಾವಿಬ್ಬರೂ ದಂಗಾಗಿಬಿಟ್ಟವಿ. ಆ ಹೋಮಕುಂಡದಾಗ ನಿಗಿನಿಗಿ ಕೆಂಡ, ಆಜು ಬಾಜು ಎಲ್ಲ ಕುಂಕುಮ, ತಲೆಬುರುಡೆ, ಇನ್ನೂ ಏನೇನೋ ಇದ್ದವು. ನೋಡೀನೇ ಗಾಬರಿ ಆಗಿದ್ದಿವಿ. ಆದಷ್ಟು ಲೊಗೂ ಹೊರಗ ಓಡಬೇಕು ಅನಿಸಿತ್ತು.

ಮರೀಲಿಕ್ಕೆ ಸಾಧ್ಯ ಇಲ್ಲ

ಒಮ್ಮೆ ನಾಸಿಕ್‍ನ್ಯಾಗ ಸಿನಿಮಾ ಶೂಟಿಂಗ್ ನಡದಿತ್ತು. ಶೂಟಿಂಗ್ ಇನ್ನೂ ಮುಗಿದಿರಲಿಲ್ಲ. ನನಗೆ ಭಾಳ ಅಂದ್ರ ಭಾಳ ಜ್ವರ ಬಂದವು. ನಡೀಲಿಕ್ಕೂ ಆಗಲಿಲ್ಲ. ಗಿರೀಶರು ನನ್ನ ಮುಂಬೈಗೆ ಕರ್ಕೊಂಡು ಬಂದರು. ಸಣ್ಣ ಹುಡುಗನಂಗ ಕೈ ಹಿಡಿದು ಡಾಕ್ಟರ್‍ಗೆ ತೋರಿಸಿದರು. ಅಲ್ಲೇ ಅಡ್ಮಿಟ್ ಮಾಡಬೇಕಾತು. ಡಾಕ್ಟರ್ ಗೆ ಹೇಳಿಬಿಟ್ರು, ‘ನಿಮ್ಮ ಫೀಸ್ ಎಷ್ಟರ ಆಗಲಿ. ಇವನಿಗೆ ಛೊಲೊ ಟ್ರೀಟ್‍ಮೆಂಟ್ ಕೊಡರಿ. 50 ಸಾವಿರ ಡಿಪಾಸಿಟ್ ಕಟ್ಟಿರತೀನಿ. ಮತ್ತ ಹೆಚ್ಚಾದರೂ ಪರವಾಗಿಲ್ಲ’.

ಕಾರ್ನಾಡರು ಬಂದಾರ ಅನ್ನೋಣ ಎಲ್ಲರೂ ಆಟೋಗ್ರಾಫ್ ಕೊಡರಿ ಅಂತ ಪೀಡಸೋರಾದರು. ಅವರು ಹೇಳಿಬಿಟ್ಟರು, ‘ಸುರೇಶ ಇಲ್ಲಿ ದವಾಖಾನ್ಯಾಗ ಇರೋತನ ನಾನು ಬೆಳಗ್ಗೆ ಸಂಜೆ ಬಂದು ಹೋಗ್ತೀನಿ. ಇಂವ ಡಿಸ್ಚಾರ್ಜ್ ಆಗೋ ದಿನ ಎಲ್ಲರಿಗೂ ಆಟೋಗ್ರಾಫ್ ಕೊಡ್ತೀನಿ’.

ನನ್ನ ಡಿಸ್ಚಾರ್ಜ್ ಮಾಡಿಸಿದ ದಿವಸ ದವಾಖಾನಿಗೆ ಒಯ್ದಿದ್ದ ಬೆಡ್‍ಶೀಟ್, ಚಾದರ, ನನ್ನ ಬಟ್ಟಿಬರೀ ಎಲ್ಲ ತಾವ ಹಿಡಕೊಂಡು ಮನೀಗೆ ಕರ್ಕೊಂಡು ಬಂದು ಬೇಳಗಾವಿಗೆ ವಿಮಾನ ಟಿಕೆಟ್ ತಗೀಸಿಕೊಟ್ಟು, ‘ಸ್ವಲ್ಪ ದಿನ ಮನೆಕಡೆ ಹೋಗಿ ಬರ್ರಿ. ಎಲ್ಲಾ ಆರಾಮ ಆಗ್ತದ’ ಅಂತ ಕಳಿಸಿದ್ರು. ಬೆಳಗಾವಿಯೊಳಗ ನನ್ನ ಕೊನೀ ತಂಗಿ ಇದ್ಳು.

ಅವರ ಜೊತಿ ಇದ್ದಾಗ ತಂದಿ ಜೊತಿ ಇದ್ದಂಗ ಅನಸತಿತ್ತು. ಯಾವುದೇ ವಿಷಯ ಇರಲಿ ಭಾಳ ಛಂದ ತಿಳಿಸಿ ಹೇಳೋರು. ಜೀವನದ ಸೂಕ್ಷ್ಮಗಳ ಕಲೀಲಿಕ್ಕೆ ಭಾಳ ಅವಕಾಶ ಸಿಕ್ತು.

`ತಲೆದಂಡ’ಕ್ಕೆ ಬೈಗುಳ

ಗಿರೀಶರು `ತಲೆದಂಡ’ ನಾಟಕ ಬರೀತಿದ್ರು. ಬಸವಣ್ಣನ ಕುರಿತಾದ  ನಾಟಕ ಅದು. ಅದರಾಗ ಬರೆಯೋದಕ್ಕ ಬೈಗುಳ ಬೇಕಾಗಿತ್ತಂತ. ನಮ್ಮ ಮನೆಗೆ ಬಂದು ಕೇಳಿದ್ರು. ಸುರೇಶ ಸ್ವಲ್ಪ ಗ್ರಾಮ್ಯ ಬೈಗುಳ ಗೊತ್ತಿದ್ರ ಹೇಳರಿ ಅಂದ್ರು. ಹಳ್ಯಾಗ ಬೈಯೋ ಎಲ್ಲಾ ಬೈಗುಳ ಗೊತ್ತಿದ್ದವು. ಆದ್ರ ಅವರ ಮುಂದ ಹೆಂಗ ಹೇಳೋದು ಅಂತ ಅಷ್ಟೇನೂ ಗೊತ್ತಿಲ್ಲ ಬಿಡರಿ. ಇವನೌನ, ಸೂ…ಮಗ ಇಷ್ಟ…ಗೊತ್ತವ ಅಂತ ರಾಗಾ ತಗದೆ. ಅವರಿಗೆ ಗೊತ್ತಾತು. ಇವ ಹಿಂಗ ಹೇಳಿದ್ರ ಕೇಳಂಗಿಲ್ಲ ಅಂತ ಹೇಳಿ, ರಾತ್ರಿ ಭೆಟ್ಟಿ ಆಗೋಣು ಸುರೇಶ ಅಂದ್ರು. ಇಬ್ಬರದೂ ಒಂದ ಗುಟ್ಟು. ರಾತ್ರಿ ಅಂದ್ರ ನಮ್ಮದು ಎಣ್ಣಿ ಪಾರ್ಟಿ ಅಂತ. ರಾತ್ರಿ ಭೆಟ್ಟಿ ಆದಾಗ ಮೊದಲ ನನಗೆ ಒಂದು ಪೆಗ್ ಕುಡಿಸಿ ಬೈಗುಳ ಕೇಳಿದ್ರು. ಭಯಂಕರ ಬೈಗುಳ ಎಲ್ಲ ಹೊರಗ ಬಂದವು. ಒಂದು ಕಾಗದ, ಪೆನ್ನು ತಂದಬಿಟ್ಟಿದ್ರು.

ನಶೇ ಇಳದ ಮೇಲೆ ಗೊತ್ತಾತು. ಏನೇನು ಬೈಗುಳ ಹೇಳೀನಿ ಅಂಬೂದು.

ಐಸ್ ಕೂಲ್ ಸ್ವಭಾವ

ಗಿರೀಶರದು ಭಾಳ ಅಂದ್ರ ಭಾಳ ಶಾಂತ ಸ್ವಭಾವ. ಸದಾ ಐಸ್ ಕೂಲ್ ಆಗಿ ಇರ್ತಿದ್ರು. ಪುಣೆ ಫಿಲ್ಮ್ ಇನ್ಸ್ ಟಿಟ್ಯೂಟ್‍ನಾಗ ಜಯು ಪಟವರ್ಧನ್, ನಚಿಕೇತ ಪಟವರ್ಧನ್ ಅಂತ ಆರ್ಟ್ ಡೈರೆಕ್ಟರ್ ಇದ್ರು. ಅವರು ಗಿರೀಶ ನಿಮಗೆ ಸಿಟ್ಟು ಬರದಿಲ್ಲೇನು ಅಂತ ಕೇಳತಿದ್ರು. ಸಿಟ್ಟು ಬಂದ್ರ ಏನು ಮಾಡತೀರಿ ಅಂತನೂ ಕೇಳತಿದ್ರು. ಸಿಟ್ಟು ಬಂದ್ರ 1 ರಿಂದ  100 ಎಣಸ್ತೀನಿ, ಇಲ್ಲಾಂದ್ರ ಇದ್ದ ಜಾಗದಿಂದ ಸ್ವಲ್ಪ ದೂರ ಹೋಗಿ ಒಂದ್ ದಮ್ ಸಿಗರೇಟು ಎಳೀತೀನಿ, ಮುಗೀತು ಅಂತ ಹೇಳತಿದ್ರು. ಒಮ್ಮೊಮ್ಮೆ ಕಲಾವಿದರು ಭಾಳ ಕಾಡಿದರ ಅವರನ್ನು ಬೈತಿದ್ದಿಲ್ಲ. ಅದೆಲ್ಲ ಸಿಟ್ ನನ್ನ ಮೇಲೆ ತೀರಿಸಿಕೊಳ್ತಿದ್ರು. ಅವಾಗೆಲ್ಲ ನಚೀಕೇತ ಅವರು ಕಲಾವಿದರಿಗೆ, ನೋಡರಿ ನೀವು ಕಿರಿಕಿರಿ ಮಾಡಿದ್ರ ಆ ಸಿಟ್ ಸುರೇಶ ಸಹಿಸ್ಕೋಬೇಕು ಅಂತ ಹೇಳಿ ನನ್ನ ವಹಿಸಿಕೊಂಡು ಮಾತಾಡತಿದ್ರು.

ಗಿರೀಶರ ಸಿಟ್ಟು ಭಾಳ ಹೊತ್ತು ಇರತಿದ್ದಿಲ್ಲ. ಮತ್ತ ಸಂಜೀಕೆ ನಾವಿಬ್ರೂ ಕೂತವಿ ಅಂದ್ರ, ಸರಸ್ವತಿ ಅವರು ಬಂದು, ‘ಸಾಕಿನ್ನು ಸುರೇಶಗ ಒಂದು ಪೆಗ್ ಮುಗೀತು. ಇನ್ನು ಕುಡದರ ಊಟ ಮಾಡಲಾರದೆ ಹೋಗ್ತಾರ. ಏಳರಿ ಊಟ ಮಾಡಿ ಕಳಸ್ರಿ’ ಅಂತ ಇಂಗ್ಲಿಷ್‍ನಾಗ ಜೋರು ಮಾಡೋರು. ಅವರಿಗೆ ಕನ್ನಡ ಬರ್ತಿದ್ದಿಲ್ಲ. ಅವರ ಮಾತೃಭಾಷೆ ಮಲಯಾಳಂ ಆಗಿತ್ತು.

ಮಗಳ ಮದುವೆ

ಎಲ್ಲರೂ ಅನಕೊಂಡಂಗ ಗಿರೀಶ ಸಂಪ್ರದಾಯ ವಿರೋಧಿ ಏನಲ್ಲ. ಮಗಳ ಮದುವೀನ ಎಲ್ಲಾ ನಮ್ಮ ಪದ್ಧತಿ ಪ್ರಕಾರನ ಮಾಡಿದ್ರು. ಅವರು  ತಮ್ಮ ವಿದೇಶಿ ಸ್ನೇಹಿತರಿಗೆ ಗೊತ್ತಾಗಲಿ ಅಂತ ಮದುವೆ ಪದ್ಧತಿ ಎಲ್ಲಾ ಇಂಗ್ಲಿಷ್‍ನಾಗ ಪ್ರಿಂಟ್ ಹಾಕಿಸಿ ಅಲ್ಲಲ್ಲೇ ಇಡಸಿದ್ರು. ರವಿಶಂಕರ ಗುರೂಜಿ ಆಶ್ರಮದಾಗ ಭಾಳ ಛಂದ ಮದವಿ ಮಾಡಿಕೊಟ್ಟರು.

ಗಿರೀಶ ಪಕ್ಕಾ ಕಾಂಗ್ರೆಸ್‍ವಾದಿ. ಆದ್ರ ಲಾಲಕೃಷ್ಣ ಆಡ್ವಾಣಿ ಇವರ ಫ್ಯಾನ್. ಅವರು ಭೆಟ್ಟಿ ಆದಾಗ, `ನೀವು ತುಘಲಕ್‍ನಂತಹ ಮತ್ತೊಂದು ನಾಟಕ ಬರೀರಿ. ಪೆಂಗ್ವಿನ್ ಅವರ ಕಡಿಂದ ಪಬ್ಲಿಷ್ ಮಾಡಸ್ತೀನಿ’ ಅಂತಿದ್ರಂತ.

ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ವಾಜಪೇಯಿ ಅವರು ಪ್ರಧಾನಿ ಆಗಿದ್ರು. ಪ್ರಶಸ್ತಿ ಪ್ರದಾನ ಸಮಾರಂಭದಾಗ ಗಿರೀಶರು, ‘ಬೇಂದ್ರೆ ಅವರಂತಹವರು ಹುಟ್ಟಿಬೆಳೆದ ನಾಡಿನವನಾದ ನಾನು ಕವಿ ಆಗಬೇಕು ಅನಕೊಂಡಿದ್ದೆ. ನಾಟಕಕಾರ ಆದೆ. ದೈವಲೀಲೆ. ಇಂದು ಪ್ರಶಸ್ತಿ ದೊರಕಿದೆ. ಸಂತಸವಾಗಿದೆ’ ಅಂದರು.

ಆಮೇಲೆ ವಾಜಪೇಯಿ ಅವರು ಮಾತಾಡಿದಾಗ, ‘ನಾನು ನಾಟಕಕಾರ ಆಗಬೇಕು ಅನಕೊಂಡಿದ್ದೆ, ಕವಿ ಆದೆ’ ಅಂತ ಹೇಳಿ ಚಕಿತಗೊಳಿಸಿದ್ರು.

13 ಜ್ಞಾನಪೀಠ ಬರಬೇಕಿತ್ತು

ಒಮ್ಮೆ ಮರಾಠಿ, ಹಿಂದಿ ಸಿನಿಮಾ ನಿರ್ದೇಶಕ ಜಬ್ಬಾರ್ ಪಟೇಲ್ ಸಂಜಿ ಹೊತ್ತಿನಾಗ ಮಾತಾಡತ ಕೂತಾಗ, ‘ಗಿರೀಶ, ನಮ್ಮ ಮರಾಠಿ ಸಾಹಿತಿಗಳಿಗೆ ಅನ್ಯಾಯ ಆಗೇದ. ಕೇಂದ್ರ ಭಾಳ ಪಾರ್ಶಾಲಿಟಿ ಮಾಡೇದ. ನಿಮಗಾದರ ಏಳು ಜ್ಞಾನಪೀಠ ಬಂದಾವ, ನಮಗ ಎರಡೇ ಬಂದಾವ’ ಅಂದ್ರಂತ. ಅದಕ್ಕ ಗಿರೀಶ ಅವರು, ‘ಅಯ್ಯೋ ನಮಗ 13 ಜ್ಞಾನಪೀಠ ಬರಬೇಕಾಗಿತ್ತು, ಏಳಷ್ಟ ಬಂದಾವ. ನಮಗೂ ಪಾರ್ಶಾಲಿಟಿ ಮಾಡ್ಯಾರ’ ಅಂದು ಅವರ ಬಾಯಿ ಮುಚ್ಚಿಸಿದ್ರಂತ.

ಒಮ್ಮೆ ಗಿರೀಶ ಅವರನ್ನ ಕೇಳಿದ್ದೆ, ‘ನೀವು ಎಲ್ಲೇ ಇರಲಿ, ಏನಂತದ  ಧಾರವಾಡ ಅಂತ ಕೇಳ್ತೀರಿ. ಧಾರವಾಡನ್ನ ನೀವು ಅಷ್ಟು ಮಿಸ್ ಮಾಡ್ಕೋತೀರಿ ಅಂತಾತು. ಎಲ್ಲಿದ್ರ ನೀವು ನಮ್ಮ ದೇಶ, ನಮ್ಮ ಧಾರವಾಡ ಮರತಿರತೀರಿ?. ಅದಕ್ಕವರು, ‘ಎಲ್ಲಿ ಹೋದರೂ ಸ್ವಲ್ಪ ದಿನಕ್ಕ ನಮ್ಮ ಊರು, ನಮ್ಮ ಮನೆ ನೆನಪಾಗೂದ. ಆದ್ರ ರೋಮ್ ನಗರಕ್ಕ ಹೋದರೆ ಇಡೀ ಜಗತ್ತು ಮರೀತದ ನೋಡರಿ’ ಅಂತ ಹೇಳಿದ್ರು. ‘ಇವತ್ತು ನಾ ಏನರ ಸಾಧನೆ ಮಾಡೀನಿ ಅಂದ್ರ ಅದಕ್ಕ ಧಾರವಾಡನ ಕಾರಣ. ಇಲ್ಲಿ ಮನೋಹರ ಗ್ರಂಥಮಾಲಾ, ಅಲ್ಲಿ ಅಟ್ಟದ ಮೇಲಿನ ಚರ್ಚೆ, ಕೀರ್ತಿನಾಥ ಕುರ್ತಕೋಟಿ, ಜಿ.ಬಿ.ಜೋಶಿ ಮೊದಲಾದವರ ಒಡನಾಟ ಎಲ್ಲಾ ಸೇರಿ ಸಾಧನೆ ಸಾಧ್ಯ ಆಗೇದ’ ಅಂತ ಹೇಳ್ತಿದ್ರು.

ಸಪ್ತ ಭಾಷಾ ಪ್ರವೀಣ

ಗಿರೀಶ ಅವರು ತಾವು ಮಾಡೋ ಪಾತ್ರಕ್ಕ ತಮ್ಮದೇ ಧ್ವನಿ ಇರಬೇಕು ಅಂತ ಬಯಸ್ತಿದ್ರು. ಹಿಂಗಾಗಿ ಅವರು ಕನ್ನಡ, ತೆಲುಗು, ಮಲೆಯಾಳಂ, ತಮಿಳು, ಹಿಂದಿ, ಇಂಗ್ಲಿಷ್, ಮರಾಠಿ ಭಾಷೆ ಸಿನಿಮಾ ಮಾಡಿದ್ರಂದ್ರ ತಾವ ಸಂಭಾಷಣೆ ಡಬ್ ಮಾಡ್ತಿದ್ರು.

ಅವರ ಕೆಲಸದ ಬಗ್ಗೆ ಎಷ್ಟು ಕಾಳಜಿ, ಶ್ರದ್ಧೆ ಇತ್ತಂದ್ರ ಹೇಳಲಿಕ್ಕೆ ಸಾಧ್ಯ ಇಲ್ಲ. ಕೆಲಸ ಒಪ್ಕೊಂಡ್ರು ಅಂದ್ರ ಬದ್ಧತೆ ಇಂದ ಮಾಡ್ತಿದ್ರು. ಈ ಮಾತಿಗೆ ಸಲ್ಮಾನ್ ಖಾನ್ ನಾಯಕ ನಟನಾಗಿರುವ ಹಿಂದಿ ಸಿನೆಮಾ `ಟೈಗರ್ ಜಿಂದಾ ಹೈ’ ಸಾಕ್ಷಿ. ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ಅವರಿಗೆ ಕೃತಕ ಉಸಿರಾಟ ಅನಿವಾರ್ಯ ಆಗಿತ್ತು. ಪುಟ್ಟದೊಂದು ಆಕ್ಸಿಜನ್ ಯಂತ್ರ ಕೊರಳಿಗೆ ಜೋಡಾಗಿತ್ತು. ಕೂಸಿನಂಗ ಅದನ ಬಗಲಾಗ ಇಟ್ಕೊಂಡೇ ಸಿನಿಮಾದಾಗ ನಟಿಸಿದ್ರು. ಸೀನೂ ಅದಕ್ಕ ತಕ್ಕಂಗ ಇತ್ತು.

ಈಗ ಅವರಿಲ್ಲ. ನಾ ಒಬ್ಬ ಫ್ರೆಂಡ್, ಫಿಲಾಸಫರ್, ಗೈಡ್‍ನ ಕಳಕೊಂಡೀನಿ. ಅವರು, ‘ಸುರೇಶ ನೀ ಹೋಗಿಬಿಟ್ರ ಧಾರವಾಡದ ಬಗ್ಗೆ ಏನರ ಕೇಳಬೇಕಂದ್ರ ಯಾರನ ಕೇಳಲಿ? ಅಂತ ಪೀಡಿಸಿದ್ದರು. ಅವರೇ ಹೋಗಿಬಿಟ್ಟರು!

Leave a Reply

Your email address will not be published.