ಗೀತಸಾಹಿತಿ ಪ್ರಮೋದ್ ಮರವಂತೆ

ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಮರವಂತೆಯ ಪ್ರಮೋದ್, ಕನ್ನಡ ಸಿನಿಮಾರಂಗದ ಈ ಹೊತ್ತಿನ ಪ್ರಸಿದ್ಧ ಯುವ ಗೀತಸಾಹಿತಿಗಳಲ್ಲಿ ಒಬ್ಬರು. ‘ಮೂಲೆ ಸೇರಿದ ಪದಗಳನ್ನು ತಂದು ಹಾಡಿನ ಸಾಲಿನಲ್ಲಿ ಕೂರಿಸುವ’ ಕೆಲಸವೇ ಅವರ ಗೀತಸಾಹಿತ್ಯದ ವಿಶೇಷತೆ.

ನಿಮ್ಮ ಭಾಷೆಯ ಅಭಿಮಾನವನ್ನು ಸಾಮಾನ್ಯವಾಗಿ ಹೇಗೆ ಪ್ರದರ್ಶಿಸುತ್ತೀರಿ?

ಕನ್ನಡ ನಮಗೆಲ್ಲಾ ಅನ್ನ ಕೊಡುತ್ತಿರುವ ಭಾಷೆ. ಕನ್ನಡದ ಅಳಿವಿನ ಭಯ ಕಾಡುತ್ತಿರುವ ರಾಜಧಾನಿಯಲ್ಲಿ ಕನ್ನಡವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಮುಂದಿರುವ ದೊಡ್ಡ ಸವಾಲು. ನಾನು ಸಾಮಾನ್ಯವಾಗಿ ಯಾವುದೇ ಮಾಲ್ ಅಥವಾ ಅಂಗಡಿ, ಎಲ್ಲೇ ಹೋದರೂ ಅಲ್ಲಿನ ಸಿಬ್ಬಂದಿಗಳು ಯಾವುದೇ ಭಾಷಿಗರಾಗಿರಲಿ ನಾನು ಕನ್ನಡದಲ್ಲೇ ವ್ಯವಹರಿಸುತ್ತೇನೆ. ಕನ್ನಡ ಚಿತ್ರಗಳನ್ನು ಮಾತ್ರ ಸಿನಿಮಾ ಮಂದಿರಗಳಲ್ಲಿ ನೋಡುತ್ತೇನೆ. ಸ್ನೇಹಿತರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುತ್ತೇನೆ. ಆಗಾಗ ಚಿಕ್ಕ ಮಕ್ಕಳಿಗೆ ಬಾಲಮಂಗಳ ತುಂತುರು ಕಥೆ ಪುಸ್ತಕಗಳನ್ನು ತಂದು ಕೊಡುತ್ತೇನೆ. ಡಿ.ಜೆ.ಗಳು ಕನ್ನಡ ಹಾಡುಗಳನ್ನು ಪ್ಲೇ ಮಾಡದೆ ಇದ್ದಾಗ ಅವರೊಂದಿಗೆ ಜಗಳಕ್ಕೆ ನಿಂತ ಸಂದರ್ಭಗಳೂ ಆಗಿವೆ.

ಗೀತೆ ರಚನೆ ಮಾಡುವಾಗ ನಿರ್ದೇಶಕರು ನೀಡುವ ಕಥಾ ಸಾಂದರ್ಭಿಕ ಸೂಚನೆಗಳನ್ನೂ ಮೀರಿ ಕನ್ನಡ ಭಾಷೆ ಬಳಸುವಾಗ ನೀವು ತೆಗೆದುಕೊಳ್ಳುವ ಎಚ್ಚರಿಕೆ ಅಥವಾ ಕ್ರಮ ಏನು?

ಸಂಗೀತ ಭಾಷೆಯನ್ನು ಸುಂದರವಾಗಿ ಕೇಳಿಸುವ ಒಂದು ಅದ್ಭುತವಾದ ಮಾಧ್ಯಮ. ಸಿನಿಮಾ ಹಾಡುಗಳಿಗೆ ಸಾಹಿತ್ಯ ಬರೆಯುವಾಗ ಹೆಚ್ಚಾಗಿ ಕನ್ನಡ ಪದಗಳನ್ನೆ ಬಳಸಿದರೂ ಅಲ್ಲಲ್ಲಿ ಇಂಗ್ಲಿಷ್ ಪದಗಳನ್ನು ಬಳಸುವ ಅನಿವಾರ್ಯತೆ ಇದ್ದೇ ಇರುತ್ತದೆ. ನಾನು ಹೆಚ್ಚಿನ ಸಂದರ್ಭಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರ ಆಯ್ಕೆ ಎಂದು ಬಂದಾಗ ಕನ್ನಡ ಪದಗಳನ್ನೇ ಸೂಚಿಸುತ್ತೇನೆ. ಮೂಲೆ ಸೇರಿರುವ ಒಂದಿಷ್ಟು ಸುಂದರ ಪದಗಳನ್ನು ತಂದು ಹಾಡಿನಲ್ಲಿ ಕೂರಿಸುವ ಯತ್ನವನ್ನು ಯಾವಾಗಲೂ ಮಾಡುತ್ತೇನೆ. ಹಾಡು ಬರೆದ ಮೇಲೆ ಹಾಡುಗಾರರು ಹಾಡುವಾಗ ಪದಗಳ ಉಚ್ಛಾರಣೆ, ಅಲ್ಪ ಪ್ರಾಣ, ಮಹಾ ಪ್ರಾಣ ಇನ್ನಿತರ ವಿಚಾರಗಳ ಕಡೆ ಗಮನ ಕೊಡುವ ನಿಟ್ಟಿನಲ್ಲಿ ಆ ಸಂದರ್ಭದಲ್ಲಿ ನಾನು ಹಾಜರಿರುತ್ತೇನೆ.

ಕನ್ನಡ ನಾಡು, ನುಡಿಯ ಹಳೆಯ ಹಾಡುಗಳಲ್ಲಿ ನಿಮಗೆ ಇಷ್ಟವಾದ ಹಾಡು ಯಾವುದು? ಕನ್ನಡ ಕಟ್ಟುವ ಕಾಯಕದಲ್ಲಿ ಇಂಥ ಸಿನಿಮಾ ಹಾಡುಗಳೂ ಮುಖ್ಯ ಪಾತ್ರವಹಿಸುತ್ತವೆ ಎಂದು ನಿಮಗನಿಸುತ್ತದೆಯೇ?

ಎಂದೆಂದಿಗೂ ನನ್ನ ಇಷ್ಟದ ಹಾಡು ರಾಜಕುಮಾರ್ ಅವರ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’. ಪ್ರತಿಯೊಬ್ಬರ ಮನಸ್ಸಲ್ಲಿ ಇರುವ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಹಾಡುಗಳು ಎಷ್ಟು ಮುಖ್ಯವೊ ಕನ್ನಡ ನಾಡು ನುಡಿಯ ಬಗ್ಗೆ ಬರೆದಂತಹ ಹಾಡುಗಳೂ ಅಷ್ಠೆ ಮುಖ್ಯವಾಗುತ್ತವೆ. ಭಾಷೆಯ ಮೇಲಿನ ಅಭಿಮಾನವನ್ನು ಸಾರುವಲ್ಲಿ ಅಂತಹ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಿನಿಮಾ ಹಾಡುಗಳು ಜನರನ್ನು ಬೇಗ ತಲುಪುವ ಸಾಧ್ಯತೆಗಳಿರುವುದರಿಂದ ಸಿನಿಮಾಗಳಲ್ಲಿ ಇಂತಹ ಹಾಡುಗಳು ಹೆಚ್ಚಾಗಬೇಕು ಎನ್ನುವುದು ನನ್ನ ಅನಿಸಿಕೆ.

ಕನ್ನಡ ಉಳಿಯಬೇಕಾದರೆ ನೀವು, ಜನ, ಸರ್ಕಾರ ಏನು ಮಾಡಬೇಕು?

ಕನ್ನಡ ಹಳ್ಳಿಯ ಪ್ರದೇಶಗಳಲ್ಲಿ ತಕ್ಕಮಟ್ಟಿಗೆ ಸುಭದ್ರವಾಗಿದೆ. ಅವನತಿಯ ದಾರಿ ಹಿಡಿದಿರುವುದು ಬೆಂಗಳೂರಿನಲ್ಲಿ ಹಾಗು ಕರ್ನಾಟಕದ ಗಡಿ ಪ್ರದೇಶಗಳಲ್ಲಿ. ಈ ಕಹಿ ಸತ್ಯವನ್ನು ಎಲ್ಲ ಕನ್ನಡಿಗರೂ ಅರಿಯಬೇಕು. ಕನ್ನಡವನ್ನು ಬಳಸಬೇಕು. ಕನ್ನಡವನ್ನು ಮುಂದಿನ ಪೀಳಿಗೆಯ ನಾಲಗೆಯ ಮೇಲೆ ಭದ್ರವಾಗಿರಿಸಬೇಕು. ಇಂಗ್ಲಿಷ್ ಮೀಡಿಯಂ ವ್ಯಾಮೋಹವಿರುವ ಈ ಕಾಲದಲ್ಲಿ ಕೊನೆಯ ಪಕ್ಷ ಮನೆಯಲ್ಲಾದರೂ ಅಪ್ಪ ಅಮ್ಮ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ಹೊರ ರಾಜ್ಯದಿಂದ ಬಂದವರ ಜೊತೆಯೂ ಕನ್ನಡದಲ್ಲೇ ವ್ಯವಹರಿಸಬೇಕು. ಅವರಿಗೆ ನಮ್ಮ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾದರೂ ನಡೆಯಬೇಕು. ಸರ್ಕಾರ ಶಾಲಾ ಮಕ್ಕಳಿಗೆ ಕನ್ನಡವನ್ನು ಮೊದಲನೆ ತರಗತಿಯಿಂದಲೂ ಕಡ್ಡಾಯ ಮಾಡಬೇಕು. ಕನ್ನಡಕ್ಕೆ ಎಲ್ಲೇ ಅವಮಾನವಾದರೂ ಅಲ್ಲಿ ಕನ್ನಡಿಗರು ದನಿ ಎತ್ತಬೇಕು, ಇಷ್ಠೆ.

ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ಹೋರಾಟವೂ ಒಂದು ಮಾಹಿತಿ ಅಥವಾ ಒಂದು ಜೋಕ್ ಆಗಿಬಿಡುವ ಅಪಾಯವಿದೆಯಲ್ಲವೇ?

ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಪರ ಹೋರಾಟವನ್ನು ಸ್ವಪ್ರಚಾರಕ್ಕೆ ಬಳಸಿದ ಒಂದಿಷ್ಟು ಉದಾಹರಣೆಗಳನ್ನು ಕಂಡು ನನಗೆ ಬೇಸರವಾಗಿದೆ. ಭಾಷೆಯ ಹೋರಾಟ ಸಂಪೂರ್ಣವಾಗಿ ಸ್ವಚ್ಚ ಮನಸ್ಸಿನಿಂದ ಯಾವುದೇ ರಾಜಕೀಯ ದುರುದ್ದೇಶಗಳಿಲ್ಲದೆ ನಡೆಸಬೇಕು. ಅಲ್ಲಲ್ಲಿ ಕನ್ನಡ ಸಂಘಟನೆಗಳ ಉಪಸ್ಥಿತಿಯ ಬಗ್ಗೆ ಕನ್ನಡೇತರರಿಗೆ ಆಗಾಗ ಅರಿವು ಮೂಡಿಸುತ್ತಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಸಿನಿಮಾಗಳನ್ನು ಪ್ರೋತ್ಸಹಿಸಬೇಕು. ಸಿನಿಮಾಗಳ ಪೈರಸಿಯನ್ನು ಎಲ್ಲರೂ ವಿರೋಧಿಸಬೇಕು.

ನೀವು ಸಿದ್ಧಮಾದರಿ ಬಿಟ್ಟು ಕುಂದಾಪುರ ಕನ್ನಡವನ್ನು ಸಿನಿಮಾದಲ್ಲಿ ಬಳಸಿ ಯಶಸ್ವಿಯಾಗಿದ್ದೀರಿ. ಈ ಪ್ರಯೋಗ ಕನ್ನಡ ಗೀತರಚನೆಯ ಸಾಧ್ಯಾಸಾಧ್ಯತೆಯನ್ನು ಯಾವೆಲ್ಲ ರೀತಿಯಲ್ಲಿ ವಿಸ್ತರಿಸಿದೆ?

ಮಂಡ್ಯ, ಹುಬ್ಬಳ್ಳಿ ಹಾಗೆ ಇನ್ನಿತರ ಭಾಗಗಳಲ್ಲಿ ಬಳಸುವ ಭಾಷೆಗಳಂತೆ ಕುಂದಾಪುರ ಕನ್ನಡವೂ ಒಂದು. ಆದರೆ ಕುಂದಾಪುರ ಕನ್ನಡವನ್ನು ಈ ಹಿಂದೆ ಕಲಾತ್ಮಕ ಚಿತ್ರಗಳ ಸಂಭಾಷಣೆಗಳಲ್ಲಿ ಬಳಸಿಕೊಳ್ಳಲಾಗಿತ್ತೆ ಹೊರತು ಪೂರ್ಣಪ್ರಮಾಣದ ಕಮರ್ಷಿಯಲ್ ಸಿನಿಮಾಗಳಲ್ಲಿ ಬಳಸಿಕೊಂಡಿರಲಿಲ್ಲ.

‘ಚಂದ ಚಂದ’ ಹಾಡಿನ ಆಗಮನ ಹಾಗು ಯಶಸ್ಸಿನ ನಂತರ ಕನ್ನಡಿಗರಿಗೆಲ್ಲಾ ಈ ರೀತಿಯ ಒಂದು ಸುಂದರ ಭಾಷೆಯಿದೆ ಎನ್ನುವ ಅರಿವಾಗಿದೆ. ಹಾಗೆ ಆ ಭಾಷೆ ಇಷ್ಟವಾಗಿದೆ. ನಾವಾಡುವ ಭಾಷೆಗೆ ಚಿಕ್ಕ ಉಡುಗೊರೆಯನ್ನು ಅರ್ಪಿಸಿದ ಸಮಾಧಾನ ನನಗಿದೆ.

ಸಂದರ್ಶನ: ಮೌನೇಶ್

Leave a Reply

Your email address will not be published.