ಗುಡುಗಿ ಹಾಡಿದ ಕವಿ ಸಿದ್ಧಲಿಂಗಯ್ಯ

ಕೊಳೆಗೇರಿಯಲ್ಲಿ ಬೆಳೆದು ಪಕ್ಕದಲ್ಲೇ ಸ್ಮಶಾನದೊಳಗಿದ್ದ ಲೈಟ್ ಕಂಬದ ಬೆಳಕಿನಲ್ಲಿ ಯಾರದ್ದೋ ಗೋರಿಯ ಮೇಲೆ ಕುಳಿತು ತನ್ನ ಶಾಲೆಯ ಪಾಠಗಳನ್ನು ಓದಿಕೊಳ್ಳುತ್ತಿದ್ದ ಅಸ್ಪøಶ್ಯ ಜಾತಿಯ ಹುಡುಗನೊಬ್ಬ ತೀರಿಕೊಂಡು ನಗರದ ಅತ್ಯಂತ ಪ್ರತಿಷ್ಠಿತ ಸ್ಮಶಾನದೊಳಕ್ಕೆ ಪ್ರವೇಶ ಪಡೆದದ್ದು ಒಂದು ರೋಚಕ ಇತಿಹಾಸ. ಇತಿಹಾಸ ಪುರುಷ ಕವಿ ಸಿದ್ದಲಿಂಗಯ್ಯ.

-ಅಗ್ರಹಾರ ಕೃಷ್ಣಮೂರ್ತಿ

ಒಮ್ಮೆ ಕಾಳೇಗೌಡ ನಾಗವಾರರ ಜೊತೆ ನಾವಿಬ್ಬರು ರಿಪ್ಪನ್ ಪೇಟೆ ಬಳಿಯ ಹುಂಚದ ಜೈನ ಬಸದಿಯ ಒಳಕ್ಕೆ ಪ್ರವೇಶಿಸುವಾಗ ಸಿದ್ದಲಿಂಗಯ್ಯ ಇದ್ದಕ್ಕಿದ್ದಂತೆ ಅಲ್ಲಿದ್ದ ವ್ಯಕ್ತಿಯ ಬಳಿ, “ನೋಡಿ ನಮ್ಮಲ್ಲಿ ಒಬ್ಬರು ಹರಿಜನರಿದ್ದೀವಿ, ನಾವು ಒಳಗೆ ಬರಬಹುದಾ” ಎಂದು ಪ್ರಶ್ನಿಸಿಬಿಟ್ಟರು. ಅದು ಕೀಳರಿಮೆಯ ಪ್ರಶ್ನೆಯಾಗಿರಲಿಲ್ಲ; ಆ ಧಾರ್ಮಿಕನಿಗೆ ಒಂದು ಶಾಕ್ ಕೊಡುವ ಉದ್ದೇಶದ್ದಾಗಿತ್ತು! ಒಂದು ಗಳಿಗೆ ಕಂಪಿತನಾದ ವ್ಯಕ್ತಿ, “ಪರವಾಗಿಲ್ಲ ಬನ್ನಿ, ಒಳಗೆ ಸ್ವಾಮೀಜಿ ಹತ್ತಿರ ಇದನ್ನೇನೂ ಹೇಳ್ಬೇಡಿ” ಅಂದು ಒಳಗೆ ಕರೆದೊಯ್ದ. ಆದರೆ ಸ್ವಾಮೀಜಿ ಬಳಿಯೂ ಜಾತಿ ಚರ್ಚೆ ಮುಂದುವರಿಯಿತು. ಅವರು ನಗುತ್ತಾ ಅಂಥ ತಾರತಮ್ಯ ಇಲ್ಲಿಲ್ಲ ಎಂದು ಬಸದಿಯನ್ನು ಅಲ್ಲಿದ್ದ ತಾಳೆಯೋಲೆಯ ಪ್ರತಿಗಳನ್ನು ತೋರಿಸಿ ಕಳಿಸಿದರು.

ಇನ್ನೊಮ್ಮೆ ತಪಸ್ಸು ಮಾಡಿ ಮಳೆ ಸುರಿಸುತ್ತೇನೆಂದು ಹೇಳಿಕೊಳ್ಳುತ್ತಿದ್ದ ಸ್ವಾಮಿಯ ಕುಟೀರಕ್ಕೆ ಹೋದೆವು. ಅಲ್ಲಿ ಸಿದ್ದಲಿಂಗಯ್ಯ ಅದೂಇದೂ ಕೇಳಿ ಹಾಗಿದ್ದರೆ ಮಳೆ ಬರಿಸಿ ಎಂದು ಸವಾಲು ಹಾಕಿದರು. ಸ್ವಾಮೀಜಿಯ ಗಣಭಕ್ತರು ನಮ್ಮ ಮೇಲೆ ಎಗರಿದ ಕೂಡಲೆ ನಾವು ಕುಟೀರದಿಂದ ದೌಡಾಯಿಸಿದೆವು! ಇಂಥ ವೈಚಾರಿಕ ವರಸೆಗಳನ್ನು ಆಗಿನ 18-20ರ ವಯೋಮಾನದ ನಮಗೆ ಯಾರೂ ಪ್ರಜ್ಞಾಪೂರ್ವಕವಾಗಿ ಕಲಿಸುತ್ತಿರಲಿಲ್ಲ. ಆಗಿನ ಯುಗಧರ್ಮವೇ ಕಲಿಸಿತ್ತು.

ಒಂದು ನಿರ್ದಿಷ್ಟ ಸಾಮಾಜಿಕ ಹಿನ್ನೆಲೆಯ, ಗುಪ್ತವಾಗಿ `ಕ್ರಾಂತಿಕನ್ಯೆ ಮೋಹಜನ್ಯೆ ನಿನ್ನ ನಾನು ಮದುವೆಯಾಗುವೆ’ ಎನ್ನುವಂಥ ಕವಿತೆಗಳನ್ನು ಬರೆದು ಅವುಗಳ ಕಾವನ್ನು ಕಾಪಾಡಿಕೊಳ್ಳುತ್ತಿದ್ದ ಸಿದ್ದಲಿಂಗಯ್ಯ ಪದವಿಪೂರ್ವ ಕಲಿಕೆಗೆ ತೊಡಗುವುದು 1969-70ರಲ್ಲಿ. ಎಪ್ಪತ್ತು ಎಂಬತ್ತರ ದಶಕಗಳ ಕಾಲವನ್ನು ಯುಗಧರ್ಮವೆಂದು ಭಾವಿಸಿ ಆ ಅವಧಿಯ ಘಟನಾವಳಿಗಳನ್ನೊಮ್ಮೆ ಪರಿಭಾವಿಸಿದರೆ ಅವರ ವ್ಯಕ್ತಿತ್ವವನ್ನು ರೂಪಿಸಿದ ಯುಗಶಕ್ತಿಯ ಅರಿವಾಗುತ್ತದೆ. ಕಾಲೇಜಿನ ವಾತಾವರಣದಲ್ಲಿ ಭವಿಷ್ಯದ ರಾಜಕಾರಣಿಗಳು ರೂಪುಗೊಳ್ಳುತ್ತಿದ್ದ ಕಾಲ. ವಿದ್ಯಾರ್ಥಿ, ಕಾರ್ಮಿಕ, ಔದ್ಯೋಗಿಕ, ಸರ್ಕಾರಿ ನೌಕರರು ಮತ್ತಿತರ ಹಲವಾರು ವರ್ಗಗಳ ಚಳವಳಿ, ಮುಷ್ಕರಗಳ ಕಾಲ. ಹಿಂದುಳಿದವರ ಧೀಶಕ್ತಿ ದೇವರಾಜ ಅರಸರ ಕಾಲ. ಉಳುವವ ಹೊಲದೊಡೆಯನಾದ ಕಾಲ.

ಕಮ್ಯುನಿಷ್ಟ್‍ವಾದ, ಮಾಕ್ರ್ಸ್ ಸಿದ್ಧಾಂತ, ಲೋಹಿಯಾರ ಸಮಾಜವಾದ, ಸಿಪಿಐ, ಸಿಪಿಎಂ, ಎಸ್‍ಎಫ್‍ಐ, ಎಬಿವಿಪಿ ಇವೆಲ್ಲ ತೀವ್ರವಾಗಿ ನಡೆಸುತ್ತಿದ್ದ ಪ್ರತಿಭಟನೆ, ಮುಷ್ಕರ, ಧರಣಿ ಮುಂತಾದ ಚಟುವಟಿಕೆಗಳು, ಮೈಸೂರು ರಾಜ್ಯ ಕರ್ನಾಟಕವಾದದ್ದು; ಬೆಂಗಳೂರಿಗೆ ಭರತ್ ಜುಂಝನ್‍ವಾಲಾ, ಅಬ್ರಹಾಂ ಕೋವೂರ್, ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ಆಗಮನ; ಬೆಂಗಳೂರು ವಿವಿಗೆ ಪ್ರಖರ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳ ಪ್ರತಿಪಾದಕರಾಗಿದ್ದ ಡಾ.ಹೆಚ್.ಎನ್. ಕುಲಪತಿಯಾಗಿದ್ದದ್ದು, ಮೈಸೂರಿನಲ್ಲಿ ನಡೆದ ಜಾತಿ ವಿನಾಶ ಸಮ್ಮೇಳನ, ಬರಹಗಾರರ ಕಲಾವಿದರ ಒಕ್ಕೂಟ, ಎಡ ಹಾಗೂ ಪ್ರಗತಿಪರ ಧೋರಣೆಯುಳ್ಳ ಸಾಂಸ್ಕೃತಿಕ ಸಂಘಟನೆ ‘ಸಮುದಾಯ’ ದ ಸ್ಥಾಪನೆ; ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ, ಜೆಪಿ ಚಳವಳಿ, ಪ್ರಥಮ ಕಾಂಗ್ರೆಸ್ಸೇತರ ಸರ್ಕಾರಗಳು; ಎಲ್ಲಕ್ಕಿಂತ ಹೆಚ್ಚಾಗಿ ಪ್ರೊಫೆಸರ್ ಎಂಡಿ ನಂಜುಂಡಸ್ವಾಮಿ, ಪಿ.ಲಂಕೇಶ್ ನಿರ್ವಹಿಸಿದ ಪಾತ್ರ, ಗೋಕಾಕ್ ಚಳವಳಿ… ಹೀಗೆ ಆ ಎರಡು ದಶಕಗಳ ಕಾಲಘಟ್ಟದಲ್ಲಿ ನಡೆದ ವಿದ್ಯಮಾನಗಳಿಗೆ ಲೆಕ್ಕವಿಲ್ಲ.

ಸಾಹಿತ್ಯ, ನಾಟಕ, ಸಿನಿಮಾ ಕ್ಷೇತ್ರದಲ್ಲಿ ಉಂಟಾದ ಮಹತ್ವದ ಬೆಳವಣಿಗೆಗಳನ್ನು ಮರೆಯಲಾಗುವುದಿಲ್ಲ. ಕುವೆಂಪು, ಬೇಂದ್ರೆ, ಮಾಸ್ತಿ, ಪುತಿನ, ಕೆಎಸ್‍ನ ಮುಂತಾದ ನವೋದಯ ಕಾಲದ ಬಹುತೇಕ ಎಲ್ಲ ದಿಗ್ಗಜರು ಬದುಕಿದ್ದ ಕಾಲ ಅದು. ಪ್ರೊ ಜಿಎಸ್ಸೆಸ್ ಸೆನೆಟ್ ಸಭಾಂಗಣದಲ್ಲಿ ನಡೆಸುತ್ತಿದ್ದ ಸಾಹಿತ್ಯೋತ್ಸವಗಳು, ಬಯಲು ರಂಗಭೂಮಿ, ಹೊಸ ಅಲೆಯ ಸಿನೆಮಾಗಳು ಬಂದದ್ದು, ಹೆಗ್ಗೋಡಿನ ಚಟುವಟಿಕೆಗಳು ಹೀಗೆ ನೂರಾರು ಸಂಗತಿಗಳನ್ನು ದಾಖಲಿಸಬಹುದು.

ಇಪ್ಪತ್ತರ ಹರೆಯದ ಅದರಲ್ಲೂ ಸಾಹಿತ್ಯವನ್ನು ಅಭ್ಯಾಸ ಮಾಡುತ್ತಿದ್ದ ಹಲವಾರು ಸೂಕ್ಷ್ಮಗ್ರಾಹಿ ಚೈತನ್ಯಗಳ ಮನದಾಳದಲ್ಲಿ ಮೇಲಿನೆಲ್ಲ ವಿದ್ಯಮಾನಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸಿ ಅವರ ವ್ಯಕ್ತಿತ್ವಗಳನ್ನು ರೂಪಿಸಿದವು. ಸಿದ್ದಲಿಂಗಯ್ಯ ಇವೆಲ್ಲವುಗಳಿಗೆ ಮನಸ್ಸುಕೊಟ್ಟಿದ್ದ ವ್ಯಕ್ತಿ. ಅಂಥ ಸಂದರ್ಭದಲ್ಲೇ ನಡೆದದ್ದು “ಬೂಸ” ಎಂಬ ಆಸ್ಫೋಟಕ ಚಳವಳಿ. ಅದರ ಬಗ್ಗೆ ಈಗಾಗಲೆ ಬಹಳಷ್ಟು ದಾಖಲೆಗಳಿವೆ. ಇಲ್ಲಿ ಪುನರಾವರ್ತಿಸುವ ಅಗತ್ಯವಿಲ್ಲ. 

ಮೈಸೂರಿನಲ್ಲಿ ದೇವನೂರು ಮಹಾದೇವ, ಭದ್ರಾವತಿಯಲ್ಲಿ ಬಿ.ಕೃಷ್ಣಪ್ಪ ಮುಂತಾದವರು ಪ್ರಾರಂಭಿಸಿದ ಈ ಚಳವಳಿ ರಾಜ್ಯಾದ್ಯಂತ ಜ್ವಾಲಾಮುಖಿಯಂತೆ ಹಬ್ಬಿತು. ಈ ಚಳವಳಿಯ ಕೇಂದ್ರ ಸ್ಥಾನ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಮತ್ತು ಕೇಂದ್ರ ವ್ಯಕ್ತಿಗಳು, ಅದೇ ಕಾಲೇಜಿನಲ್ಲಿದ್ದ ಸಿದ್ದಲಿಂಗಯ್ಯ ಮತ್ತು ಅವರ ಕೆಲವು ದಲಿತೇತರ ಗೆಳೆಯರು. ಆ ಚಳವಳಿಯನ್ನು ಸಿದ್ದಲಿಂಗಯ್ಯ `ಅತ್ಯುತ್ತಮ ಮನಸ್ಸುಗಳನ್ನು ಅರಿಯಲು ಸಾಧ್ಯವಾಗಿಸಿದ ಚಳವಳಿ’ ಎಂದು ಕರೆದಿದ್ದಾರೆ. ಅ ಚಳವಳಿ ಸಿದ್ದಲಿಂಗಯ್ಯ ಮತ್ತು ಅವರು ನಂಬಿದ ಮಾಕ್ರ್ಸ್-ಅಂಬೇಡ್ಕರ್ ಸಿದ್ಧಾಂತಗಳನ್ನು, ಕಾಪಾಡಿಕೊಂಡಿದ್ದ ಕಾವ್ಯವನ್ನು ಗಟ್ಟಿಗೊಳಿಸಿ ಅವರನ್ನು ಒಬ್ಬ ದಲಿತ ಯುವ ಕಲಿಯನ್ನಾಗಿ ರೂಪಿಸಿತು.

ಆ ದಶಕಗಳಲ್ಲಿ ಅಖಂಡ ಕರ್ನಾಟಕದ ದಲಿತ ಪ್ರಜ್ಞೆಯನ್ನು ಪ್ರಪ್ರಥಮ ಬಾರಿಗೆ ಜಾಗೃತಗಳಿಸಿದ್ದಷ್ಟೇ ಅಲ್ಲದೆ ಬಲವಾಗಿ ಒಗ್ಗೂಡಿಸಿತು ಮತ್ತು ಹೇಗೆ ಒಂದು ಪವಾಡದಂತೆ ಒಗ್ಗೂಡಿಸಿತೋ ಹಾಗೆಯೇ ಛಿದ್ರವಿಛಿದ್ರವೂ ಆಯಿತು. ಬೂಸಾ ನಂತರದ ಒಂದೆರಡು ವರ್ಷಗಳಲ್ಲಿಯೇ ಪ್ರಕಟವಾದ `ಹೊಲೆಮಾದಿಗರ ಹಾಡು’ ದಲಿತ ಕಲಿಯನ್ನು ದಲಿತ ಕವಿಯನ್ನಾಗಿಸಿತು. ಸ್ವಾತಂತ್ರ್ಯಪೂರ್ವ ಕನ್ನಡ ಕಾವ್ಯದಲ್ಲಿ ಚಳವಳಿಯ ಹಾಡುಗಳ ರಚನೆಯಾದದ್ದುಂಟು. ಸ್ವಾತಂತ್ರ್ಯಕ್ಕಾಗಿ ಜನಜಾಗೃತಿಗೊಳಿಸಲು, ಉದ್ದೀಪಿಸಲು ನವೋದಯ ಕವಿಗಳು ಹೋರಾಟದ ಹಾಡುಗಳನ್ನು ರಚಿಸುತ್ತಿದ್ದರು. ಜನ ಸಭೆ ಮೆರವಣಿಗೆಗಳಲ್ಲಿ ಹಾಡುತ್ತಿದ್ದರು. ಸ್ವಾತಂತ್ರ್ಯಾನಂತರ ಆ ಕಾವ್ಯ ಪ್ರಕಾರವನ್ನು ಅತ್ಯಂತ ಶಕ್ತಿಯುತವಾಗಿ ಬಳಸಿ ಬಂದ ಸ್ವಾತಂತ್ರ್ಯವನ್ನೇ `ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ’ ಎಂದು ಪ್ರಶ್ನಿಸುತ್ತ ಹೋರಾಟದ ಅನೇಕ ಹಾಡುಗಳನ್ನು ರಚಿಸಿದರು. ಛಿದ್ರಗೊಂಡಿದ್ದರೂ ಎಲ್ಲ ಗುಂಪುಗಳೂ ಸಿದ್ದಲಿಂಗಯ್ಯನವರ ಹಾಡುಗಳನ್ನೇ ತಮ್ಮ ಕಾರ್ಯಕ್ರಮಗಳ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿರುವುದು ಒಂದು ಸುಂದರ ಸಂಗತಿ.

ಓಂಪ್ರಕಾಶ್ ಕಣಗಲಿಯವರು 1992ರಲ್ಲಿ ಒಮ್ಮೆ ತಮ್ಮ ಕ್ಷೇತ್ರದಲ್ಲಿ ದಲಿತ ಸಮಾವೇಶವನ್ನು ಆಯೋಜಿಸಿದ್ದರು. ನಾವು ಸಭೆಯ ಸ್ಥಳಕ್ಕೆ ಹೋದಾಗ ಜನ ಬಂದು ಸೇರುತ್ತಿದ್ದರು. ಹಾಡುಗಾರರು ಹೋರಾಟದ ಹಾಡುಗಳನ್ನು ಹಾಡುತ್ತಿದ್ದರು. ಕಣಗಲಿಯವರು ಆಗ ಮಂತ್ರಿಯಾಗಿದ್ದವರು. ತಮ್ಮ ಕ್ಷೇತ್ರದ ಸಾವಿರಾರು ಜನರನ್ನು ಬಸ್ಸು ಟೆಂಪೋಗಳ ಮೂಲಕ ಕರೆತರಲು ಏರ್ಪಾಡು ಮಾಡಿದ್ದರು. ಒಂದೊಂದು ಬಸ್ಸು, ಒಂದೊಂದು ಟೆಂಪೋ ಬಂದಾಗಲೂ ಗುಂಪುಗುಂಪುಗಳಲ್ಲಿ ಜನ ಪೆಂಡಾಲಿನ ಕಡೆಗೆ ತಡವಾಗಿರಬಹುದೆಂಬ ಕಾತುರದಿಂದ ಓಡೋಡಿ ಬರುತ್ತಿದ್ದರು.

ವೇದಿಕೆಯಲ್ಲಿ ಹಾಡುಗಾರರು `ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎಂದು ಹಾಡುತ್ತಿದ್ದರು. ಸಿದ್ದಲಿಂಗಯ್ಯನವರ ಕಾವ್ಯದ ಶಕ್ತಿಯ ವಿರಾಟ್ ದರ್ಶನ ಅಲ್ಲಿ ನನಗೆ ಗೋಚರಿಸುತ್ತಿತ್ತು. ಇವರು ಗದ್ಯ ಬರಹದಲ್ಲಿ ಸಾಧಿಸಿದ ವಿಶಿಷ್ಟತೆಯ ಬಗ್ಗೆ ಬೇರೆಯಾಗಿಯೇ ಬರೆಯಬೇಕು. ಹಾಸ್ಯ, ವ್ಯಂಗ್ಯದ ಆಯಾಮವನ್ನು ವಿಸ್ತರಿಸಿ ಕೆಳವರ್ಗದ ಪಾತ್ರಗಳನ್ನು ಉದಾತ್ತೀಕರಿಸಿ ಮೇಲ್ವರ್ಗದ ಸಾಮಾಜಿಕರಲ್ಲಿ ಗಿಲ್ಟ್ ಉಂಟುಮಾಡುವ ವಿನೂತನ ಶೈಲಿಯನ್ನು ಅವರು ವಿಶೇಷವಾಗಿ ಗದ್ಯದಲ್ಲೂ ತಮ್ಮ ಅಸಂಖ್ಯಾತ ಭಾಷಣಗಳಲ್ಲಿಯೂ ಅಳವಡಿಸಿಕೊಡಿದ್ದರು. ಅದನ್ನು ಡಿ.ಆರ್.ನಾಗರಾಜ್ `ಬಡವರ ನಗುವಿನ ಶಕ್ತಿ’ ಎಂದು ಕರೆದಿದ್ದಾರೆ.

ಸಾವನ್ನು ಹೀಗೇ ಎಂದು ವಿವರಿಸಲು ಸಾಧ್ಯವಿಲ್ಲ. ಸಾವೆಂಬುದು ಸಾವು ಅಷ್ಟೇ. ಆದರೆ ಅದು ಕೆಲವು ಸಂದರ್ಭಗಳಲ್ಲಿ ಐತಿಹಾಸಿಕ ನಿರ್ಣಯಗಳನ್ನು ದೃಢೀಕರಿಸುತ್ತದೆ. ಕನ್ನಡ ಕಾವ್ಯವನ್ನು ಬೇರೆ ದಿಕ್ಕಿಗೆ ತಿರುಗಿಸಿದ ಕವಿ ಎಂಬ ಮೆಲುದನಿಗೆ, ಕೆಳದನಿಗೆ ಹಲವೊಮ್ಮೆ ಸದಭಿಪ್ರಾಯಗಳಲ್ಲದ ದನಿಗಳಿಗೆ ಅಥವಾ ಪಾಶ್ರ್ವನುಡಿಗಳಿಗೆ ಸಾವು ಶರಾ ಬರೆದು ಸತ್ಯವನ್ನು ಘೋಷಿಸುತ್ತದೆ. ಸಿದ್ದಲಿಂಗಯ್ಯನವರ ಸಾವು ಈಗ ಸಾಮಾಜಿಕ ಜಾಲತಾಣಗಲ್ಲಿ ಮಳೆಗೆರೆಯುತ್ತಿದೆ! ಅವರು ಚರ್ಚೆಗೆ ಅತೀತರಲ್ಲವೆಂಬ ಮಾತುಗಳು, ಅವರು ಕೆಂಡದ ಉಂಡೆಗಳನ್ನೇ ಉಗುಳುತ್ತಿರಬೇಕಾಗಿತ್ತು ಎಂದು, ಅವರು ಬಲಪಂಥೀಯರಾದರೆಂದು ಇತ್ಯಾದಿ ಇತ್ಯಾದಿ., ಮಳೆ ನಿಲ್ಲಲೇಬೇಕು; ನಿಲ್ಲುತ್ತದೆ.

ನಾನು ಸಿದ್ದಲಿಂಗಯ್ಯ ಜೂನ್ 1971 ರಲ್ಲಿ ಜೊತೆಯಲ್ಲಿ ಆನರ್ಸ್ ಪದವಿ ಕಲಿಯಲು ಸೇರಿದೆವು. ಈ ಜೂನಿಗೆ ಸರಿಯಾಗಿ 50 ವರ್ಷಗಳಾದವು. ಬೂಸಾ ಗಲಾಟೆಗಳಲ್ಲಿ ಇಬ್ಬರೂ ಮಾರಣಾಂತಿಕ ಹಲ್ಲೆಗೊಳಗಾದೆವು. ಪೆರಿಯಾರ್ ಬಂದಾಗ ನಮ್ಮಿಬ್ಬರಿಗೂ ಸನಾತನಿಗಳು ಹಲ್ಲೆ ಮಾಡಿದಾಗ ಸಿದ್ದಲಿಂಗಯ್ಯನ ಹೆಗಲ ಮೇಲೆ ಪೆರಿಯಾರರು ತಮ್ಮ ಬಲಗೈಯನ್ನೂ ನನ್ನ ಹೆಗಲಮೇಲೆ ತಮ್ಮ ಎಡಗೈಯನ್ನೂ ಹಾಕಿ ಸಮಾಧಾನ ಮಾಡಿದರು. ಅವನ್ನೆಲ್ಲ ಮರೆಯಲಾಗುವುದಿಲ್ಲ. ಇವೆಲ್ಲ ಸಾರ್ವಜನಿಕ ಸಂಗತಿಗಳು. ಇನ್ನು ವೈಯಕ್ತಿಕವಾಗಿ ಸಿದ್ದಲಿಂಗಯ್ಯ ನನಗೆ ಸಹಾಯ ಮಾಡಬೇಕಾದ ಗಳಿಗೆಗಳಲ್ಲಿ ನಿಸ್ಪೃತೆಯಿಂದ ವರ್ತಿಸಲಿಲ್ಲ. ಇವನ್ನೆಲ್ಲ ಮರೆಯಬಹುದು.

ಜಾತಿಗೊಂದು ಸುಡುಗಾಡಿರುವ ನಮ್ಮ ಸಮಾಜದಲ್ಲಿ, ಈಗ ಕೋವಿಡ್ ಸಾಂಕ್ರಾಮಿಕದ ದುರಿತ ಕಾಲದಲ್ಲಿ ಸುಡುಗಾಡುಗಳೇ ಇಲ್ಲದಂತಾಗಿರುವ ಕಾಲದಲ್ಲಿ ಹರಿಶ್ಚಂದ್ರ ಘಾಟಿನಲ್ಲಿ ಬೆಳೆದ ನನ್ನ ಗೆಳೆಯ ರಾಜ್ಯದ ರಾಜಧಾನಿಯ ಅತ್ಯಂತ ಪ್ರತಿಷ್ಠಿತ ಸುಡುಗಾಡಿನಲ್ಲಿ ಮೂರನೆಯವನಾಗಿ ಮಣ್ಣಾಗಿದ್ದಾರೆ. ಯಾವ ಸಂಸ್ಕಾರಗಳೂ ವಿಧಿಗಳೂ ಇರಬಾರದೆಂದು ಖಡ್ಡಾಯವಾಗಿ ತಿಳಿಸಿ ಮಣ್ಣಾದ ಮೇಷ್ಟ್ರು ಜಿಎಸ್ಸೆಸ್, ವೈದಿಕ ಸಂಸ್ಕಾರದ ವಿಧಿವಿಧಾನಗಳಲ್ಲಿ ಯಾವೊಂದನ್ನೂ ಚಾಚೂ ತಪ್ಪಿಸದೆ ನಡೆಸಬೇಕೆಂದು ಬಯಸಿ ಮಲಗಿದ ಅನಂತಮೂರ್ತಿ ಇವರ ಜೊತೆ ಬೌದ್ಧದಮ್ಮಾನುಯಾಯಿಗಳ ವಿಧಿಯಲ್ಲಿ ವಿಶ್ರಮಿಸಿದ ಸಿದ್ದಲಿಂಗಯ್ಯ ಪ್ರತಿಷ್ಠಿತ ಸ್ಮಶಾನಕ್ಕೆ ಜಾತ್ಯಾತೀತ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಈ ಹೊಸ ಶ್ಮಶಾನದ ಪರಂಪರೆ ಧರ್ಮಾತೀತವೂ ಆಗಿ ಮುಂದುವರಿಯುವುದೊ ನೋಡೋಣ. ಅಂತೆಯೇ ಆದರೆ ಅಲ್ಲಿ ಚಿರಶಾಂತಿಯಲ್ಲಿ ಮಲಗಿರುವ ಮೂವರಿಗೂ ಸಂತಸವಾದೀತು.

Leave a Reply

Your email address will not be published.