ಗುರು-ಶಿಷ್ಯ ಪರಂಪರೆಯಲ್ಲಿ ‘ಮೀ ಟೂ’ ಸದ್ದು!

ಕೆಲವು ದಿನಗಳ ಹಿಂದೆ, ಭೋಪಾಲಿನ ಪ್ರಸಿದ್ಧ ಧ್ರುಪದ್ ಸಂಸ್ಥಾನದ ಇಬ್ಬರು ಖ್ಯಾತ ಸಂಗೀತ ಗುರುಗಳ ವಿರುದ್ಧ ಆಮಸ್ಟರ್ಡ್ಯಾಮ್ ಮೂಲದ ಶಿಷ್ಯೆಯೊಬ್ಬಳು, ಫೇಸ್ಬುಕ್ ಮೂಲಕ ಮಾಡಿದ ಲೈಂಗಿಕ ಕಿರುಕುಳದ ಆರೋಪ, ಭಾರತದ ಸಂಗೀತ ಜಗತ್ತಿನಲ್ಲಿ ‘ಮೀ ಟೂ’ ಅಭಿಯಾನಕ್ಕೆ ಪುನಃ ಚಾಲನೆ ತಂದಿತು. ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ, ಹಲವಾರು ವರ್ಷಗಳಿಂದ ಆ ಧ್ರುಪದ್ ಸಂಗೀತ ಸಂಸ್ಥಾನದಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿದ್ದರೂ, ಅದರಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದ ಯಾವ ಭಾರತೀಯ ಶಿಷ್ಯಂದಿರೂ ಉಸಿರೆತ್ತಿರಲಿಲ್ಲ.

ಡಾ.ಜ್ಯೋತಿ

ಈ ಘಟನೆ ಸಾರ್ವಜನಿಕ ಚರ್ಚೆಗೆ ಬಂದಮೇಲೆ ಕೆಲವರು ಹೇಳಿಕೊಂಡಂತೆ, ಆ ಗುರುಗಳು ಶಿಷ್ಯಂದಿರನ್ನು ಹದ್ದುಬಸ್ತಿನಲ್ಲಿಟ್ಟ ರೀತಿ ಹೀಗಿತ್ತು; ‘ನಮಗೆ ಸಹಕರಿಸಿದರೆ, ನಿಮ್ಮ ವೃತ್ತಿರಂಗದಲ್ಲಿ ಏಳಿಗೆ ಕಾಣುತ್ತೀರಿ. ಒಂದು ವೇಳೆ ಪ್ರತಿಭಟಿಸಿದರೆ, ಏನನ್ನೂ ಸಾಧಿಸಲಾರಿರಿ.’ ಈ ಹಿಂದೆ, 2018ರಲ್ಲಿ ಕರ್ನಾಟಕ ಸಂಗೀತ ಜಗತ್ತಿನಲ್ಲೂ ‘ಮೀ ಟೂ’ ಚರ್ಚೆ ಸ್ವಲ್ಪ ಕಾಲ ಸಂಚಲನಯೆಬ್ಬಿಸಿ ಆಮೇಲೆ ನಿಧಾನವಾಗಿ ಸ್ತಬ್ಧವಾಯಿತು. ಆದರೆ, ಈ ಬಾರಿಯ ವಿಶೇಷವೆಂದರೆ, ಸುಮಾರು 90 ಮಂದಿ ಪ್ರಸಿದ್ಧ ಹಿಂದೂಸ್ತಾನಿ ಸಂಗೀತ ವಿದ್ವಾಂಸರು ಶೋಷಿತ ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತು ಈ ಘಟನೆಯನ್ನು ಖಂಡಿಸುವುದರೊಂದಿಗೆ, ‘ಇವರಿಗೆ ನ್ಯಾಯ ಸಿಗಬೇಕು, ಜೊತೆಗೆ, ಸಂಗೀತ ಜಗತ್ತಿನ ಗುರು-ಶಿಷ್ಯ ಬಾಂಧವ್ಯದಿಂದ ಇಂತಹ ಕೆಟ್ಟ ‘ಸಂಸ್ಕೃತಿ’ಯನ್ನು ಕಿತ್ತೊಗೆಯಬೇಕು’ ಎಂದು ಸಾಮೂಹಿಕ ಕರೆ ನೀಡಿದ್ದಾರೆ.

ಈ ವಿಚಾರವಾಗಿ, ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯ ವರದಿಗಾರ್ತಿ ಮಾಲಿನಿ ನಾಯರ್ ತನ್ನ ಲೇಖನದಲ್ಲಿ ವಿಶ್ಲೇಷಿಸಿದಂತೆ, ಭಾರತದ ಶಾಸ್ತ್ರೀಯ ಸಂಗೀತ ಜಗತ್ತಿನ ಗುರು-ಶಿಷ್ಯ ಪರಂಪರೆಯಲ್ಲಿ ಪುರುಷ ಪ್ರಧಾನತೆ ಉಸಿರುಕಟ್ಟಿಸುವಷ್ಟು ಪ್ರಭಾವಶಾಲಿಯಾಗಿದೆ. ಜೊತೆಗೆ, ಈ ಪ್ರವೃತ್ತಿಗೆ ಸಂಪ್ರದಾಯದ ಶ್ರೀರಕ್ಷೆಯಿದೆ. ಈ ಕಾರಣದಿಂದ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯವಿರುವ ವರ್ತಮಾನದ ಕಾಲಘಟ್ಟದಲ್ಲಿ ಕೂಡ ಶಿಷ್ಯಂದಿರ ಧ್ವನಿ ಅಲ್ಲಿಯೇ ಹುದುಗಿಹೋಗುತ್ತದೆ. ಯಾಕೆಂದರೆ, ಈ ಸಾಂಪ್ರದಾಯಕ ಕಲಿಕೆಯಲ್ಲಿ ಶಿಷ್ಯಂದಿರ ವೃತ್ತಿರಂಗದ ಯಶಸ್ಸಿಗೆ ಗುರುವಿನ ನಾಮಬಲವೇ ಮೊದಲ ಬುನಾದಿ. ಅದಿಲ್ಲದೆ, ವೃತ್ತಿರಂಗದಲ್ಲಿ ಪ್ರವೇಶ ಮತ್ತು ಉನ್ನತಿ ಬಹುತೇಕ ಕಷ್ಟಸಾಧ್ಯ. ಹಾಗಾಗಿ, ವಿದ್ಯಾರ್ಥಿಗೆ ಗುರುವಿನ ಕೃಪಾಕಟಾಕ್ಷದಲ್ಲಿ ಸದಾ ಇರುವುದು ಅನಿವಾರ್ಯವಾಗುತ್ತದೆ. ಈ ರೀತಿ, ಶಿಷ್ಯಂದಿರ ವೃತ್ತಿಜೀವನದ ಪ್ರವೇಶ ಸಂಪೂರ್ಣವಾಗಿ ಗುರುವಿನ ಕೈಯಲ್ಲಿರುವ ಪದ್ಧತಿ, ಬಹುತೇಕ ಎಲ್ಲಾ ಸಾಂಪ್ರದಾಯಕ ಕಲಾಪ್ರಕಾರಗಳಲ್ಲಿಯೂ ಕಾಣಬಹುದು.

ಮೇಲಿನ ಅಭಿಪ್ರಾಯಕ್ಕೆ, ಕರ್ನಾಟಕ ಶಾಸ್ತ್ರೀಯ ಸಂಗೀತಕಾರ ಹಾಗೂ ಸಾಮಾಜಿಕ ಕಾರ್ಯಕರ್ತ ಟಿ.ಎಂ.ಕೃಷ್ಣ, ಸಹಮತ ವ್ಯಕ್ತಪಡಿಸುತ್ತಾ, ‘ಗುರು-ಶಿಷ್ಯ ಪರಂಪರೆಯ ಚೌಕಟ್ಟಿನಲ್ಲಿಯೇ ಈ ಸಮಸ್ಯೆಯ ಮೂಲ ಅಂತರ್ಗತವಾಗಿದೆ’, ಎನ್ನುತ್ತಾರೆ. ಈ ಸಂಬಂಧದಲ್ಲಿ ಸಮಾನತೆಯ ಬದಲಾಗಿ, ಗುರುವಿನ ಕೈಯಲ್ಲಿ ಅಧಿಕಾರ ಸಂಪೂರ್ಣ ಧ್ರುವೀಕರಣವಾಗಿದೆ. ಇದನ್ನು ಸಾಂಪ್ರದಾಯಕ ನೆಲೆಯಿಂದ ವಿಶ್ಲೇಷಿಸಿದರೆ, ಗುರು-ಶಿಷ್ಯ ಸಂಬಂಧದಲ್ಲಿ ಗುರುವಿನ ಅಮೋಘ ಜ್ಞಾನಕ್ಕೆ ಗೌರವಸೂಚಕವಾಗಿ, ಶಿಷ್ಯನಾದವನು ಸಂಪೂರ್ಣ ವಿಧೇಯತೆ ತೋರಿಸುವುದು ಸಹಜ ಹಾಗು ಅನಿವಾರ್ಯ ಕೂಡ.

ಆದರೆ, ಈ ಅಪ್ರತಿಮ ಅಧಿಕಾರದ ಬಲದಿಂದ ಗುರು, ತನ್ನ ಶಿಷ್ಯಂದಿರಿಂದ ಪ್ರಶ್ನಾತೀತವಾಗಿ ಸೇವೆ ಮಾಡಿಸಿಕೊಳ್ಳುವ ಅವಕಾಶವಿದೆ. ಆದ್ದರಿಂದ, ಮಹಿಳಾ ಸಬಲೀಕರಣದ ವರ್ತಮಾನದ ಕಾಲಘಟ್ಟದಲ್ಲಿಯಾದರೂ ಈ ಪ್ರವೃತ್ತಿಯನ್ನು ತಪ್ಪೆಂದು ಒಪ್ಪಿಕೊಂಡು, ಇದು ಮುಂದುವರಿಯದಂತೆ ನಡೆದುಕೊಳ್ಳುವುದು ನಿಜವಾದ ನಾಗರಿಕತೆಯ ಲಕ್ಷಣ. ಈ ದೆಸೆಯಲ್ಲಿ, ಗುರು ತನ್ನ ಶಿಷ್ಯರನ್ನು ಗೌರವದಿಂದ ಕಾಣುವುದರೊಂದಿಗೆ, ಅವರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಪರಿಗಣಿಸಬೇಕಿದೆ.

ಇಲ್ಲಿ ನಾವು ಮುಖ್ಯವಾಗಿ ಗುರುತಿಸಬೇಕಾದ ಅಂಶವೆಂದರೆ, ಈ ರೀತಿಯ ಲೈಂಗಿಕ ಶೋಷಣೆ ಕೇವಲ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಸಾಮಾನ್ಯವಾಗಿ, ಹೆಚ್ಚಿನ ಸಾಂಪ್ರದಾಯಿಕ ಕಲಾಪ್ರಕಾರಗಳಾದ ನೃತ್ಯ, ನಟನೆ, ಚಿತ್ರಕಲೆ ಅಥವಾ ಕರಕೌಶಲ ಇತ್ಯಾದಿಗಳಲ್ಲಿಯೂ ಕಾಣಬಹುದು. ಯಾಕೆಂದರೆ, ಇಲ್ಲೆಲ್ಲಾ ಅನೌಪಚಾರಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜೊತೆಗೆ ಇದು ಅತ್ಯಗತ್ಯವೂ ಕೂಡ.

ಉದಾಹರಣೆಗೆ, ಗುರುವಾದವನು ನಿಮ್ಮ ನೃತ್ಯದ ಹಾವಭಾವವನ್ನು ತಿದ್ದಬೇಕಾಗಬಹುದು, ಸಂಗೀತ ವಾದ್ಯಗಳನ್ನು ನುಡಿಸಲು ಕಲಿಸುವಾಗ ನಿಮ್ಮ ಬೆರಳುಗಳ ಲಯ ಪರೀಕ್ಷಿಸಬೇಕಾಗಬಹುದು, ಅಥವಾ ನಟನೆ ಕಲಿಸುವಾಗ ನಿಮ್ಮ ಆಂಗಿಕ ಅಭಿನಯ ಟ್ಯೂನ್ ಮಾಡಬೇಕಾಗಬಹುದು. ಹಾಗಾಗಿ, ಗುರು-ಶಿಷ್ಯರು ಲಿಂಗ ಭೇದವಿಲ್ಲದೆ ಬಹಳ ಸನಿಹದಲ್ಲಿ, ಕೆಲವೊಮ್ಮೆ ಏಕಾಂತದಲ್ಲಿಯೂ ವಿಚಾರ ವಿನಿಮಯ ಮತ್ತು ತರಬೇತಿ ಕೊಡಬೇಕಾಗುತ್ತದೆ. ಇಂತಹ ಏಕಾಂತದ ಅಥವಾ ನಿಶ್ಯಬ್ದದ ಅಗತ್ಯವಿರುವ, ಮೇಲಾಗಿ, ಕಣ್ಗಾವಲು ಅಥವಾ ಮೇಲ್ವಿಚಾರಣೆರಹಿತ ಕಲಿಕೆಯಲ್ಲಿ, ಗುರುವಿನ ಅಧಿಕಾರ ಮತ್ತು ಕಲಿಕೆಯ ಹಂಬಲದ ಶಿಷ್ಯೆಯ ಅಸಹಾಯಕತೆ ಮುಖಾಮುಖಿಯಾಗುವ ಸಂದರ್ಭದಲ್ಲಿ, ಸದ್ದುಗದ್ದಲದ ಪ್ರತಿಭಟನೆಗಿಂತ ಅಸಹನೀಯ ಮೌನದ ನಿಟ್ಟುಸಿರೇ ಅಧಿಕ.

ಮೇಲ್ನೋಟಕ್ಕೆ ಹೇಳುವುದಾದರೆ, ಸಾಮಾನ್ಯವಾಗಿ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಆಗುವ ದೈಹಿಕ ಆಕರ್ಷಣೆ ಇಲ್ಲೂ ಆಗಬಹುದು. ಆದರೂ ಸಹ, ಗುರು-ಶಿಷ್ಯರಿಬ್ಬರಿಗೂ ಮಾನಸಿಕ ನಿಗ್ರಹ ಮತ್ತು ಈ ಒಡನಾಟದ ಮೂಲ ಉದ್ದೇಶದ ನಿರಂತರ ಅರಿವು ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ, ಅಧಿಕಾರ ಸ್ಥಾನದಲ್ಲಿರುವ ಗುರು ಈ ಸಂಬಂಧದ ದುರ್ಬಳಕೆಯಾಗದಂತೆ ಮನೋವೈಶಾಲ್ಯ ಬೆಳೆಸಿಕೊಂಡರೆ ನಿಜಾರ್ಥದ ಗುರುವಾಗುತ್ತಾನೆ. ಮುಖ್ಯವಾಗಿ, ಗುರು ಶಿಷ್ಯರನ್ನು ತನ್ನ ಸಮಾನರಂತೆ ಕಂಡು, ಅವರಲ್ಲಿ ಕೊರತೆಯಾಗಿರುವ ವಿದ್ಯೆ, ಜ್ಞಾನ ಮತ್ತು ಉದ್ಯೋಗ ಮಾರ್ಗದರ್ಶನ ಕೊಡುವ ಕಾರ್ಯದತ್ತ ಮಾತ್ರ ಗಮನಹರಿಸುವುದು ಆದರ್ಶಪ್ರಾಯ.

ಗುರು-ಶಿಷ್ಯ ಪರಂಪರೆಯನ್ನು ಐತಿಹಾಸಿಕವಾಗಿ ಗಮನಿಸಿದರೆ, ನಾವೀಗ ‘ಮೀ ಟೂ’ ಎಂದು ಕರೆಯುವ ಲೈಂಗಿಕ ದೌರ್ಜನ್ಯವನ್ನು, ಒಂದು ಸಾಮಾನ್ಯ ವಿಷಯವೆಂದು ನಿರ್ಲಕ್ಷಿಸಿದ ಕಾಲವೊಂದಿತ್ತು. ಯಾಕೆಂದರೆ, ಆ ಕಾಲದ ಹೆಣ್ಣು ತನ್ನ ಗುರುವಿನ ಇಂತಹ ನಡವಳಿಕೆಯ ವಿರುದ್ಧ ದನಿಯೆತ್ತಿ ಪ್ರತಿಭಟಿಸಬಹುದು ಅಥವಾ ಗುರುಕುಲದಲ್ಲಿ ನಡೆದಿರುವುದನ್ನು ಹೊರಜಗತ್ತಿನಲ್ಲಿ ಹೇಳಿಕೊಳ್ಳಬಹುದು ಅಂದುಕೊಂಡಿರಲಿಲ್ಲ. ಇದಕ್ಕೆ ಬಲು ವಿಶಿಷ್ಟ ಕಾರಣವೆಂದರೆ, ಸಾಂಪ್ರದಾಯಿಕ ಕಲಾಪ್ರಕಾರಗಳಿಗೆ ಆರಂಭದ ದಿನಗಳಲ್ಲಿ ಪ್ರವೇಶ ಬಯಸಿದ ಬಹುತೇಕ ಹೆಣ್ಣು ಮಕ್ಕಳು ಬಡವರ್ಗ ಮತ್ತು ಕೆಳಜಾತಿಯವರಾಗಿದ್ದರು. ಜೊತೆಗೆ, ಇಲ್ಲಿ ತರಬೇತಿಗೊಂಡ ಕಲೆಯ ಗಳಿಕೆಯಿಂದಲೇ, ತನ್ನ ಮತ್ತು ಮನೆಮಂದಿಯ ಹೊಟ್ಟೆಪಾಡು ನೋಡಿಕೊಳ್ಳಬೇಕಾಗಿದ್ದುದರಿಂದ, ಪ್ರತಿಭಟಿಸದಿರುವುದು ಅನಿವಾರ್ಯವಾಗಿತ್ತು. ಆದ್ದರಿಂದಲೇ, ಮಹಿಳಾ ಶಿಷ್ಯವೃಂದ ಬಹುಕಾಲ ಉಸಿರು ಬಿಗಿಹಿಡಿದು, ನಡೆದ ಶೋಷಣೆಯನ್ನು ‘ಲೈಂಗಿಕ ದೌರ್ಜನ್ಯ’ವೆಂದು ಹೆಸರಿಸದೆ ಮೌನವಹಿಸಿತ್ತು.

ಕಾಲಕಳೆದಂತೆ, ಈ ಕಲಾಪ್ರಕಾರಗಳು ಹೆಣ್ಣು ಮಕ್ಕಳಿಗೂ ಹಣ ಮತ್ತು ಹೆಸರು ಗಳಿಸುವ ಗೌರವ ಮಾರ್ಗಗಳಾಗಿ ಸಾರ್ವತ್ರಿಕವಾಗಿ ಪಲ್ಲಟವಾದ ಮೇಲೆ, ಎಲ್ಲಾ ವರ್ಗದ ಹೆಣ್ಣುಮಕ್ಕಳ ಪ್ರವೇಶ ಆರಂಭವಾಯಿತು. ಇದರೊಂದಿಗೆ, ಮಹಿಳಾ ಸಬಲೀಕರಣದ ಜಾಗೃತಿ ಕೂಡ, ಈ ವಲಯಗಳಲ್ಲಿ ಬಹುಸಂಖ್ಯಾತರಾಗುತ್ತಿರುವ ಮಹಿಳೆಯರನ್ನು ಎಚ್ಚರಿಸತೊಡಗಿತು. ಆದರೂ ಪಾಶ್ಚಾತ್ಯ ದೇಶಗಳಂತೆ, ನಮ್ಮ ದೇಶದಲ್ಲಿ ಗುರು-ಶಿಷ್ಯ ಪರಂಪರೆಯಲ್ಲಿನ ಲೈಂಗಿಕ ದೌರ್ಜನ್ಯದ ಧ್ವನಿ ಅಷ್ಟೊಂದು ಪ್ರಬಲವಾಗಿ ಕೇಳಿಸುತ್ತಿಲ್ಲ. ಅಂದರೆ, ಇಲ್ಲಿ ಸಮಸ್ಯೆಗಳಿಲ್ಲವೆಂದಲ್ಲ. ಬದಲಾಗಿ, ಹೆಣ್ಣುಮಕ್ಕಳು ಹೇಳಿಕೊಳ್ಳಲು ಇನ್ನೂ ಮುಂದೆ ಬರುತ್ತಿಲ್ಲ. ಅಕಸ್ಮಾತ್, ಒಂದು ವೇಳೆ ಧೈರ್ಯ ಮಾಡಿ ಮುಂದೆ ಬಂದವರ ವೃತ್ತಿಬದುಕು ಹೇಗೆ ಕೊನೆಯಾಗುತ್ತದೆ ಎನ್ನುವುದನ್ನೂ ನಾವು ನೋಡಿದ್ದೇವೆ. ಯಾಕೆಂದರೆ, ಇಂತಹ ಕಲಾಜಗತ್ತಿನ ವೃತ್ತಿರಂಗದಲ್ಲಿ, ಗುರುವಿನ ಪ್ರಾಬಲ್ಯ ಹೆಚ್ಚಾಗಿರುವುದರಿಂದ, ಪ್ರತಿಭಟನೆಯ ಧ್ವನಿಯೆತ್ತಿದ ಶಿಷ್ಯರ ವೃತ್ತಿಬದುಕು ಕೊನೆಯಾಗುವ ಸಾಧ್ಯತೆಯೇ ಹೆಚ್ಚು.     

ಹಾಗಾಗಿಯೇ, ಇತ್ತೀಚಿಗೆ `ಮೀ ಟೂ’ ದನಿಯೆತ್ತಿದ ಹೆಚ್ಚಿನವರಿಗೆ ಸಾಮಾನ್ಯವಾಗಿ ಕುಹಕದಿಂದ ಕೇಳುವ ಪ್ರಶ್ನೆ, ‘ಈಗ್ಯಾಕೆ ಹೇಳುತ್ತಿದ್ದೀರಿ, ಆಗಲೇ ಯಾಕೆ ಹೇಳಿಲ್ಲ?’. ನಮ್ಮಲ್ಲಿ ಹೆಚ್ಚಿನವರಿಗೆ ಅರ್ಥವಾಗದ ಪ್ರಶ್ನೆ, ಹೆಣ್ಣು ಯಾಕೆ ತನ್ನ ಮೇಲಾಗುವ ದೌರ್ಜನ್ಯವನ್ನು ಹೇಳಿಕೊಳ್ಳಲು ಹಿಂಜರಿಯುತ್ತಾಳೆ? ಯಾಕೆಂದರೆ, ನಾವು ಅವಳಿಗೆ ತಕ್ಷಣ ಧ್ವನಿಯೆತ್ತಿ ಪ್ರತಿಭಟಿಸುವಷ್ಟು ಶಕ್ತಿ ಇನ್ನೂ ತುಂಬಿಲ್ಲ. ಹೆಚ್ಚಾಗಿ, ಇಂತಹ ಘಟನೆಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಹೆಣ್ಣು, ಇದರಿಂದ ಸುಧಾರಿಸಿಕೊಂಡು ಸಹಜ ಸ್ಥಿತಿಗೆ ಮರಳಲು ಕಾಲಾವಕಾಶ ಬೇಕಾಗುತ್ತದೆ. ಕೆಲವೊಮ್ಮೆ ವರ್ಷಗಳೇ ತಗುಲಬಹುದು. ಅಥವಾ ಹೇಳಲಾಗದೆ, ಮನಸ್ಸಿನಲ್ಲಿಯೇ ಉಳಿದುಹೋಗಬಹುದು. ಆಕೆ ಬಾಯಿ ತೆರೆಯುವ ಮೊದಲೇ ಹತ್ತಾರು ಬಾರಿ ಯೋಚಿಸಬೇಕಾಗುತ್ತದೆ.

ಮೊದಲನೆಯದಾಗಿ, ಒಂದು ವೇಳೆ ಹೇಳಿಕೊಂಡರೆ ಎಲ್ಲಿಯಾದರೂ, ತನ್ನದೇ ತಪ್ಪೆಂದು ಜನ ಅಂದುಕೊಳ್ಳುತ್ತಾರೆಂಬ ಭಯ. ಅದೇ ಕ್ಷೇತ್ರದಲ್ಲಿ ಮುಂದುವರಿಯಲು, ಗುರುವಿನ ಮೇಲೆ ಮಾಡಿರುವ ಆಪಾದನೆಯ ಫಲವಾಗಿ ಅವಕಾಶಗಳು ಕುಂಠಿತವಾಗುವ ಭಯ. ಮುಂದೆ, ಮದುವೆಯಾಗಲು ಗಂಡು ಸಿಗದಿರುವ ಭಯ, ಮನೆಯವರು ಮರ್ಯಾದೆಯ ಹೆಸರಲ್ಲಿ ಬಾಯಿ ಮುಚ್ಚಿಸುವ ಭಯ… ಹೀಗೆ, ಹೆಣ್ಣು ಧೈರ್ಯ ಮಾಡುವುದು ಬಹಳ ಅಪರೂಪ.

ಅಲ್ಲದೆ, ನಮ್ಮ ಸಮಾಜ ಕೂಡ, ಗಂಡು ಮಾಡುವ ದೌರ್ಜನ್ಯವನ್ನು ಕ್ಷಮಿಸಿಬಿಡುವ ಉದಾರತನ ತೋರುತ್ತದೆ. ಅಥವಾ, ‘ಆ ಮನುಷ್ಯ ಬಹಳ ದೊಡ್ಡ ವ್ಯಕ್ತಿ. ಅಂತಹವರ ಮೇಲೆ ಆಪಾದನೆ ಮಾಡಿದ್ದಾಳೆಯೆಂದರೆ, ಯಾರದ್ದೋ ಪಿತೂರಿ ಇರಬೇಕು. ಇಲ್ಲವೇ, ಈಕೆ ಬ್ಲಾಕ್ ಮೇಲ್ ಮಾಡುತ್ತಿರಬೇಕು’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಹೀಗೆ, ಅವಳ ಆಪಾದನೆಯನ್ನೇ ಸಂಶಯ ದೃಷ್ಟಿಯಿಂದ ನೋಡುವವರು ಹೆಚ್ಚು. ಇಂತಹ ಪ್ರತಿಕೂಲ ಸಾಮಾಜಿಕ ನಿಲುವುಗಳಿಂದಾಗಿಯೇ, ಹೆಣ್ಣು ಈ ಪ್ರಭಾವಿ ಚೌಕಟ್ಟಿನೊಳಗೆ ಆಗುವ ದೌರ್ಜನ್ಯವನ್ನು ಸಹಿಸಿಕೊಳ್ಳುತ್ತಾಳೆ ಹೊರತು, ಬಾಯಿ ಬಿಡುವುದಿಲ್ಲ.    

ಇನ್ನೊಂದು ಆಯಾಮದಿಂದ ಈ ಸ್ತ್ರೀ ಶೋಷಣೆಯನ್ನು ಗಮನಿಸಿದರೆ, ಇದು ಅನಾದಿ ಕಾಲದಿಂದಲೂ, ‘ಗುರುವಿಗೆ ಗುಲಾಮನಾಗದ ಹೊರತು ದೊರೆಯದಣ್ಣ ಮುಕ್ತಿ’ ಎನ್ನುವ ನಾಣ್ಣುಡಿಯಂತೆ, ಗುರು-ಶಿಷ್ಯ ಪರಂಪರೆಯಲ್ಲಿ ಜ್ಞಾನಾರ್ಜನೆಯೊಂದೇ ಮುಖ್ಯ ಹೊರತು, ಅಲ್ಲಿ ಘಟಿಸಬಹುದಾದ ಇಂತಹ ‘ಚಿಕ್ಕಪುಟ್ಟ’ ವಿಷಯಗಳು ನಗಣ್ಯವೆನ್ನುವ ದೃಷ್ಟಿಕೋನದಿಂದಲೇ ನೋಡಲಾಗುತ್ತಿತ್ತು. ವಿಶೇಷವಾಗಿ, ದೈವ ಸಮಾನನಾದ ಗುರುವಿಗೆ, ಶಿಷ್ಯನಾದವನು ಅಹಂ ತ್ಯಜಿಸಿ ಸಂಪೂರ್ಣವಾಗಿ ಗುಲಾಮನಾಗದ ಹೊರತು, ಜ್ಞಾನಪ್ರಾಪ್ತಿ ಅಸಾಧ್ಯವೆನ್ನುವ ನಂಬಿಕೆಯಿತ್ತು. ಇಂತಹ ಸಮರ್ಪಣಾ ಭಾವದ ವಿನಮ್ರ ಶಿಷ್ಯಂದಿರ ಮೇಲೆ ಸಹಜವಾಗಿ, ಗುರು ಏಕಸಾಮ್ಯ ಅಧಿಕಾರ ಪಡೆಯುತ್ತಾನೆ. ಕೆಲವೊಮ್ಮೆ ಶಿಷ್ಯರು ಕೂಡ, ತಾವು ಗುರುವಿಗೆ ತೋರುವ ಸಂಪೂರ್ಣ ಶರಣಾಗತಿ, ಕಲಿಕಾ ಪ್ರಕ್ರಿಯೆಯನ್ನು ಸರಳವಾಗಿಸುತ್ತದೆಯೆಂದು ತಿಳಿಯುತ್ತಾರೆ.

ಆದರೆ, ಆಧುನಿಕ ಕಾಲಘಟ್ಟದಲ್ಲಿ ಈ ಅಧಿಕಾರ-ಸಮರ್ಪಣೆಯ ಮನೋಭಾವದಿಂದ ಕಳಚಿಕೊಂಡು ಗುರು-ಶಿಷ್ಯ ಪರಂಪರೆಯನ್ನು ಸಮಾನತೆಯ ಮಂತ್ರದೊಂದಿಗೆ ಮರುವ್ಯಾಖ್ಯಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ, ಗುರು-ಶಿಷ್ಯ ಸಂಬಂಧವನ್ನು ನಾಲ್ಕು ಆಯಾಮಗಳಲ್ಲಿ ವಿಶ್ಲೇಷಿಸಬಹುದು.

ಮೊದಲನೆಯದು, ಗುರುವಿನಲ್ಲಿ ಕೇಂದ್ರಿತವಾಗಿರುವ ಅಧಿಕಾರ. ಜ್ಞಾನದ ವಿಷಯದಲ್ಲಿ ಹಿರಿಯ ಸ್ಥಾನದಲ್ಲಿರುವ ಗುರು, ತನ್ನ ವೃತ್ತಿಯ ಜವಾಬ್ದಾರಿಯರಿತು ಶಿಷ್ಯರ ಜ್ಞಾನಾಭಿವೃದ್ಧಿಯತ್ತ ಗಮನಹರಿಸಬೇಕಿದೆ.

ಎರಡನೆಯದು, ಗಂಡು-ಹೆಣ್ಣಿನ ಸಂಬಂಧ. ಗುರು-ಶಿಷ್ಯರು ಒಂದೇ ಲಿಂಗದವರಾದರೆ ಶೋಷಣೆಯಿಲ್ಲವೆಂದಲ್ಲ, ನಡೆಯುವ ಸಾಧ್ಯತೆಯಿದೆ. ಅದೇ ರೀತಿ, ಗುರು ಸ್ತ್ರೀಯಾಗಿದ್ದು, ಶಿಷ್ಯ ಪುರುಷನಾಗಿದ್ದಲ್ಲಿ ಎಲ್ಲಾ ಸರಿಯಾಗಿರುತ್ತದೆ ಅಂದೆನಿಲ್ಲ. ಆದಾಗ್ಯೂ, ಗುರು ಪುರುಷನಾಗಿದ್ದು, ಶಿಷ್ಯ ಸ್ತ್ರೀಯಾದರೆ, ಎರಡು ರೀತಿಯ ಶೋಷಣೆ ನಡೆಯುವ ಸಾಧ್ಯತೆಯಿದೆ-ಒಂದು ಲಿಂಗ ಆಧಾರಿತ, ಇನ್ನೊಂದು ಅಧಿಕಾರಕೇಂದ್ರಿತ.

ಇನ್ನು ಮೂರನೆಯದು, ಗುರುವಿನ ಬಗ್ಗೆ ಇರುವ ಸಾಂಪ್ರದಾಯಕ ಗೌರವ ಮತ್ತು ಭಕ್ತಿ. ಇದು ಕಲಿಕೆಗೇನೋ ಅವಶ್ಯ. ಆದರೆ ಶಿಷ್ಯಂದಿರು ಇದರೊಂದಿಗೆ ಸ್ವಜಾಗೃತಿ ಬೆಳೆಸಿಕೊಳ್ಳುವುದು ಹಿತ. 

ಕೊನೆಯದಾಗಿ, ವೃತ್ತಿರಂಗದ ಉನ್ನತಿಗೆ ಅಗತ್ಯವಿರುವ ಗುರುವಿನ ನಾಮಬಲ ಮತ್ತು ಬೆಂಬಲ. ಆದರೆ, ಇದನ್ನು ಗಿಟ್ಟಿಸಿಕೊಳ್ಳಲು ತಾನು ಎಷ್ಟು ದೂರ ಕ್ರಮಿಸಬಲ್ಲೆ ಎನ್ನುವ ಸ್ವಅರಿವು ಶಿಷ್ಯಂದಿರಿಗೆ ಮುಖ್ಯ. ಈ ಎಲ್ಲ ಅರೆಕೋರೆಗಳ ಮಧ್ಯೆ, ಅಧಿಕಾರ ಮತ್ತು ಹಿರಿಯ ಸ್ಥಾನದಲ್ಲಿರುವ ಗುರುವಿಗೆ, ಈ ಪರಂಪರೆಯಲ್ಲಿ ಸಮಾನತೆ, ಮುಕ್ತತೆ ಮತ್ತು ಪಾರದರ್ಶಕತೆ ಸಾಧಿಸುವ ಮಹತ್ತರ ಜವಾಬ್ದಾರಿಯಿದೆ.

ಈ ಪ್ರಸ್ತುತತೆಯಲ್ಲಿ, ‘ಮೀ ಟೂ’ ಅಭಿಯಾನದಿಂದ ಏನಾದರೂ ಸಾಮಾಜಿಕ ಬದಲಾವಣೆ ಆಗಿದೆಯೇ ಎಂದು ಅಮೆರಿಕಾದ ಸಂಸ್ಥೆಯೊಂದು 2018ರಲ್ಲಿ ನಡೆಸಿದ ಸಮೀಕ್ಷೆಯ ವಿಶ್ಲೇಷಣೆಯತ್ತ ಗಮನಹರಿಸೋಣ. ಈ ವರದಿ ಹೇಳುವಂತೆ, ಹೆಚ್ಚಿನ ಗಂಡಸರಿಗೆ ತಾವು ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ, ಶೋಷಣೆಯ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಅರಿವಿಲ್ಲ. ಅದಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯರಿಗೆ ಕೂಡ ತಮಗಾಗುವ ಕಿರುಕುಳಗಳು, ಲೈಂಗಿಕ ದೌರ್ಜನ್ಯದ ಆಯಕಟ್ಟಿನಲ್ಲಿ ಬರುತ್ತದೆ ಮತ್ತು ಅದನ್ನು ಪ್ರತಿಭಟಿಸಬಹುದೆನ್ನುವ ತಿಳಿವಳಿಕೆಯಿಲ್ಲ.

ಇಂದಿಗೂ ಹೆಚ್ಚಿನ ಮಹಿಳೆಯರು ಧ್ವನಿಯೆತ್ತಲು ಹಿಂಜರಿಯುವ ಪ್ರಮುಖ ಕಾರಣವೆಂದರೆ, ವೃತ್ತಿರಂಗದಲ್ಲಿ ಆಗಬಹುದಾದ ಹಿನ್ನಡೆ. ಇನ್ನೂ ಆಘಾತಕಾರಿ ಅಂಶವೆಂದರೆ, ‘ಮೀ ಟೂ’ ಅಭಿಯಾನದಿಂದಾಗಿ ಮಹಿಳೆಯರನ್ನು ಅವಕಾಶ ವಂಚಿತರನ್ನಾಗಿಸುವ, ಸಾರ್ವಜನಿಕ ವ್ಯವಸ್ಥೆಯಿಂದ ದೂರವಿಡುವ ಅಥವಾ ಅವರ ನಡವಳಿಕೆಯನ್ನು ಸದಾ ಸಂಶಯದಿಂದ ನೋಡುವ ಋಣಾತ್ಮಕ ಅಂಶಗಳು ಹೆಚ್ಚಾಗಿವೆ. ಇವುಗಳ ನಡುವೆಯೂ, `ಮೀ ಟೂ’ ಹೆಣ್ಣಿಗೆ ತನ್ನ ಮೈಮನಗಳ ಹಕ್ಕಿನ ಬಗ್ಗೆ ಹೊಸ ಜಾಗೃತಿ ಮೂಡಿಸಿದೆ. ಜೊತೆಗೆ, ಗಂಡಸಿಗೆ ಕೂಡ ಹೆಣ್ಣಿನೊಂದಿಗೆ ಸಭ್ಯವಾಗಿ ನಡೆದುಕೊಳ್ಳುವ ಪ್ರಜ್ಞೆ ಹೆಚ್ಚಿಸಿದೆ. ಇದರೊಂದಿಗೆ, ಮತ್ತಷ್ಟು ಹೊಸ ಪ್ರಕರಣಗಳು ಕತ್ತಲಿನಿಂದ ಬೆಳಕಿಗೆ ಬರುತ್ತಿವೆ. ಈ ದೆಸೆಯಲ್ಲಿ, ‘ಮೀ ಟೂ’ ಧ್ವನಿ ಎತ್ತಿದ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸ ಸುತ್ತಲಿನ ಸಮಾಜ ಮಾಡಬೇಕಿದೆ. ಅಂತೆಯೇ, ಧ್ವನಿಯೆತ್ತಲಾಗದ ಅಸಹಾಯಕ ಜೀವಗಳಿಗೆ ನಾವು ಧ್ವನಿಯಾದರೆ, ಶೋಷಿತರಿಗೆ ಮಾನಸಿಕ ಒತ್ತಡ ಕಡಿಮೆಯಾಗಿ, ಆತ್ಮವಿಶ್ವಾಸ ಹೆಚ್ಚುತ್ತದೆ. 

ಹೆಚ್ಚುತ್ತಿರುವ ‘ಮೀ ಟೂ’ ಪ್ರಕರಣಗಳಿಂದ ಗುರು-ಶಿಷ್ಯ ಬಾಂಧವ್ಯವನ್ನು ಸಾರಾಸಗಟಾಗಿ ಸಂಶಯದಿಂದ ನೋಡಬೇಕಾಗಿಲ್ಲ. ಇತಿಹಾಸದಲ್ಲಿ ಹಲವಾರು ಬಾರಿ, ಈ ಒಡನಾಟ ಹೊಸ ಜ್ಞಾನ ಪರಂಪರೆಯನ್ನೇ ಸೃಷ್ಟಿಸಿದ ಉದಾಹರಣೆಗಳಿವೆ. ಈ ಶ್ರೇಷ್ಠ ಪರಂಪರೆ ಇನ್ನೂ ಮುಂದುವರಿಯುತ್ತಲೇ ಇದೆ. ಹಾಗೆಯೇ, ಶ್ರೇಷ್ಠ ಶಿಷ್ಯರನ್ನು ರೂಪಿಸಿದ ಅಥವಾ ತಮ್ಮಿಂದ ಅಸಾಧ್ಯವಾದುದನ್ನು ತಮ್ಮ ಶಿಷ್ಯರ ಮೂಲಕ ಸಿದ್ಧಿಸಿದ ಮಹಾನ್ ಗುರುಗಳಿದ್ದಾರೆ. ಬಹಳ ಮುಖ್ಯ ಸಂಗತಿಯೆಂದರೆ, ಎಲ್ಲ ವೃತ್ತಿರಂಗಗಳಲ್ಲಿಯೂ ಪುರುಷರು ಈಗಾಗಲೇ ಗಟ್ಟಿಯಾಗಿ ತಳವೂರಿ ಯಶಸ್ಸು ಸಾಧಿಸಿರುವ ಹಿನ್ನೆಲೆಯಲ್ಲಿ, ಹೆಣ್ಣಿಗೆ ಮೇಲೇರಲು ಗುರುವಿನ ರೂಪದಲ್ಲಿ ಸಹಾಯಹಸ್ತ ಅಗತ್ಯ. ಆದರೆ, ಈ ಅನಿವಾರ್ಯತೆಯನ್ನು ಅವಳ ಬಲಹೀನತೆಯೆಂದು ತಪ್ಪಾಗಿ ಗ್ರಹಿಸದೆ, ಯಾವ ಪ್ರತಿಫಲ ಅಪೇಕ್ಷೆಯಿಲ್ಲದೆ ಸಹಾಯ ಮಾಡುವವನೇ ನಿಜವಾದ ಗುರು.

ಗಾಂಧೀಜಿ ಹೇಳಿದಂತೆ, `ಮನುಷ್ಯನ ಅತ್ಯಂತ ಅಮಾನವೀಯ, ಕ್ರೂರ ಮತ್ತು ಕೆಳಮಟ್ಟದ ನಡತೆಯೆಂದರೆ; ಸ್ತ್ರೀ ಶೋಷಣೆ’. ಅಂದರೆ, ಲೈಂಗಿಕ ದೌರ್ಜನ್ಯವೆನ್ನುವುದು ಕೇವಲ ಹೆಣ್ಣಿನ ಸಮಸ್ಯೆಯಲ್ಲ, ಇದೊಂದು ಸಾಮಾಜಿಕ ಪಿಡುಗು. ಆದ್ದರಿಂದ, ಇದನ್ನು ಹೋಗಲಾಡಿಸುವ ಸಲುವಾಗಿ ಗಂಡು-ಹೆಣ್ಣು ಇಬ್ಬರೂ ಕೈಜೋಡಿಸಿ ಸಮಾನತೆಯ ಸಮಾಜ ಕಟ್ಟಬೇಕಿದೆ.

*ಲೇಖಕರು ಸಹಾಯಕ ಪ್ರಾಧ್ಯಾಪಕರು, ಆಂಗ್ಲ ಭಾಷಾ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ.

Leave a Reply

Your email address will not be published.