ಗುರೂಜಿಯ ಗ್ರಹಗತಿ!

-ಮಣ್ಣೆ ರಾಜು

ಕಳೆದ ಸಂಚಿಕೆಯಲ್ಲಿ ಜ್ಯೋತಿಷಿಗಳು ತಮ್ಮ ರಹಸ್ಯಗಳನ್ನು ಬಿಚ್ಚಿಟ್ಟು ಟಿವಿ ವೀಕ್ಷಕರನ್ನು ಬೆಚ್ಚಿಬೀಳಿಸಿದ ವಿಡಂಬನೆ ಆಸ್ವಾದಿಸಿದ್ದೀರಿ. ಈ ಬಾರಿ ಖ್ಯಾತ ಹಾಸ್ಯ ಬರಹಗಾರ ಮಣ್ಣೆ ರಾಜು ಅವರು ‘ಗುರೂಜಿಯ ಗ್ರಹಗತಿ’ ಬಿಡಿಸಿದ್ದಾರೆ…!

ತಪಸ್ಸು ಮಾಡಿದರೆ ದೇವರು ಪ್ರತ್ಯಕ್ಷ ಆಗುತ್ತಾನೊ ಇಲ್ಲವೊ, ದಿನಾ ಬೆಳಿಗ್ಗೆ ಟಿವಿ ಆನ್ ಮಾಡಿದರೆ ಸಾಕು ದೈವಸ್ವರೂಪಿ ಗುರೂಜಿ ಪ್ರತ್ಯಕ್ಷರಾಗುತ್ತಾರೆ. ಅಷ್ಟಲ್ಲದೆ, ಟಿವಿಯ ಲೈವ್ ಪ್ರೋಗ್ರಾಂನಲ್ಲಿ ಭಕ್ತರ ಫೋನ್ ಕರೆಗಳನ್ನು ಸ್ವೀಕರಿಸಿ ಅವರ ಕಷ್ಟ ನಿವಾರಿಸಿ, ಕೋರಿಕೆ ಈಡೇರಿಸುತ್ತಾರೆ.

ಗುರೂಜಿಗೆ ಪ್ರಚಂಡ ದೂರದೃಷ್ಟಿ ಇದೆ. ಟೆಲಿಸ್ಕೋಪ್ ಇಲ್ಲದೆ ಗ್ರಹ, ನಕ್ಷತ್ರಗಳನ್ನು ವೀಕ್ಷಿಸುತ್ತಾರೆ. ಯಾವ ಗ್ರಹ ಯಾವ ಮನೆಯಲ್ಲಿದೆ ಎಂಬುದನ್ನು ಕುಳಿತಲ್ಲೇ ಹೇಳಿಬಿಡುತ್ತಾರೆ. ಆ ಗ್ರಹದ ಗ್ರಹಗತಿಗಳೇನು, ಅದನ್ನು ಕಾಡಿರುವ ಗ್ರಹಚಾರಗಳೇನು ಎಂದು ಹೇಳುತ್ತಾರೆ. ಭೂಗೋಳ, ಖಗೋಳವನ್ನು ಗುರೂಜಿ ಅರೆದು ಕುಡಿದು ಅರಗಿಸಿಕೊಂಡಿರಬಹುದು, ಮಳೆ, ಬೆಳೆ, ಮಿಂಚು, ಗುಡುಗು, ಸಿಡಿಲು, ಪ್ರವಾಹ, ಬರ, ಭೂಕಂಪಗಳ ಬಗ್ಗೆ ಸೀಸನ್ನಿಗೆ ಮೊದಲೇ ಹೇಳಿಬಿಡುವಂತಹ ಹವಾಮಾನ ತಜ್ಞತೆ ಇವರಿಗೆ ಒಲಿದಿದೆ. ಪ್ರಕೃತಿ ವಿಕೋಪಗಳನ್ನೂ ಮುಂಗಡವಾಗಿ ತಿಳಿಸಿ, ಅಗಬಹುದಾದ ದೊಡ್ಡ ಅವಘಡಗಳು ಸಣ್ಣ ಮಟ್ಟದಲ್ಲೇ ಮುಗಿಯುವಂತೆ ನಿಯಂತ್ರಿಸುತ್ತಾರೆ.

ರಾಜಕಾರಣಿಗಳ ಅಧಿಕಾರ ಭವಿಷ್ಯ, ಪ್ರಧಾನ ಮಂತ್ರಿ, ಮುಖ್ಯ ಮಂತ್ರಿಗಳ ಅಧಿಕಾರವಧಿ ಇನ್ನೆಷ್ಟು ಕಾಲ ಬಾಳಿಕೆಬರಬಹುದು. ಅವರಿಗೆ ಎದುರಾಗಬಹುದಾದ ಕುರ್ಚಿ ಕಂಟಕಗಳು ಯಾರಿಂದ, ಯಾವುವು ಎಂದು ತಿಳಿಸುವ ಗುರೂಜಿ, ಕಂಟಕಗಳ ನಿವಾರಣೆಗೆ ಅನುಸರಿಸಬೇಕಾದ ಸೂತ್ರಗಳು, ಸ್ತೋತ್ರಗಳ ಬಗ್ಗೆಯೂ ಹೇಳಿ ಕಾಪಾಡುತ್ತಾರೆ. ಸರ್ಕಾರ ಇನ್ನೆಷ್ಟು ದಿನ ಬಾಳುತ್ತದೆ. ಯಾವಾಗ ಬೀಳುತ್ತದೆ. ಈ ಸರ್ಕಾರ ನಂಬಿಕೊAಡ ಜನ ಹೇಗೆಲ್ಲಾ ಬಾಳಬೇಕು ಎನ್ನುವ ರಾಜಕೀಯ ವಿಶ್ಲೇಷಣೆ ಮಾಡುವಲ್ಲಿ ಗುರೂಜಿ ಪರಿಣತರಾಗಿದ್ದಾರೆ.

ಭಕ್ತರ ಕೌಟುಂಬಿಕ ನೆಮ್ಮದಿಗೆ ಸದಾ ಕಾಳಜಿವಹಿಸುವ ಗುರೂಜಿ, ದಾಂಪತ್ಯ ಕಲಹ, ಅತ್ತೆ ಸೊಸೆ ಜಗಳ, ನೆರೆಹೊರೆಯವರ ಮನಸ್ತಾಪಗಳಿಗೆ ಪರಿಹಾರ ಸೂಚಿಸುತ್ತಾರೆ. ಮಕ್ಕಳನ್ನು ಬೆಳೆಸುವ, ಗಂಡನನ್ನು ಪಳಗಿಸುವ ಟಿಪ್ಸ್ ಕೊಟ್ಟು ಸಂಸಾರ ಕಾಪಾಡುತ್ತಾರೆ. ಉದ್ಯೋಗ, ವ್ಯವಹಾರಗಳ ನಷ್ಟಕ್ಕೆ ಕಾರಣಗಳೇನು, ಪರಿಹಾರ ಮಾರ್ಗಗಳೇನು ಎಂದು ತಿಳಿಸುತ್ತಾರೆ. ಕೆಟ್ಟ ಗ್ರಹಗಳ ಸಿಟ್ಟು ಶಮನ, ಶುಭ ಗ್ರಹಗಳ ಪ್ರಯೋಜನಗಳ ಬಗ್ಗೆಯೂ ಹೇಳುತ್ತಾರೆ.

ಮನೆ ಬಾಗಿಲು, ಕಿಟಕಿ ಯಾವ ದಿಕ್ಕಿನಲ್ಲಿದ್ದರೆ ಸಂಸಾರ ದಿಕ್ಕು ತಪ್ಪುವುದಿಲ್ಲ. ಅಡಿಗೆ ಮನೆ, ಮಲಗುವ ಕೋಣೆಯಲ್ಲಿ ಇರಬೇಕಾದ ಗಾಳಿ, ಬೆಳಕಿನ ಪ್ರಮಾಣ ಹೇಳಿ ವಾಸ್ತು ದೋಷ ರಿಪೇರಿ ಮಾಡುತ್ತಾರೆ. ಮಕ್ಕಳು ಡಾಕ್ಟರ್, ಇಂಜಿನಿಯರ್ ಓದಬೇಕೆಂದರೆ ಮನೆಯಲ್ಲಿ ಇರಲೇಬೇಕಾದ ವಾತಾವರಣ, ತಂದೆ-ತಾಯಿಯರ ಪಾತ್ರ ತಿಳಿಸಿ, ಮಕ್ಕಳು ಯಾವ ದಿಕ್ಕಿನಲ್ಲಿ ಕುಳಿತು ಅಧ್ಯಯನ ಮಾಡಬೇಕು, ಅವರ ಮೂಡನ್ನು ಹೇಗೆ ಕಾಪಾಡಬೇಕು ಎಂಬ ಮಾಹಿತಿ ನೀಡಿ ನೆರವಾಗುತ್ತಾರೆ.

ಬಾಧಿಸಬಹುದಾದ ಕೆಮ್ಮು, ನೆಗಡಿ, ಶೀತ, ಜ್ವರ, ತಲೆ ನೋವಿನಂತಹ ಪೂರಕ ರೋಗಗಳಿಂದ ಹಿಡಿದು, ಅಂತರಾಷ್ಟಿçÃಯ ಕುಖ್ಯಾತಿಯ ಮಾರಕ ರೋಗಗಳ ಬಗ್ಗೆಯೂ ಗುರೂಜಿ ಮುನ್ಸೂಚನೆ ನೀಡಿಬಿಡುತ್ತಾರೆ. ಕಾಯಿಲೆಗೆ ಸೂಕ್ತ ಮದ್ದನ್ನೂ ತಿಳಿಸಿ, ಆರೋಗ್ಯ ಸಲಹೆ ನೀಡುವ ಗುರೂಜಿ ಎಲ್ಲರ ಮನೆಯ ಫ್ಯಾಮಿಲಿ ವೈದ್ಯರಾಗಿದ್ದಾರೆ.

ಮಾಟ, ಮಂತ್ರ, ಕಾಟಗಳ ನಿವಾರಣೆಗೆ ಮಾಡಬೇಕಾದ ಪೂಜೆ ಪುನಸ್ಕಾರ, ಅನುಸರಿಸಬೇಕಾದ ವ್ರತ, ಪಥ್ಯಗಳನ್ನು ತಿಳಿಸಿಕೊಟ್ಟು ಉಪಕರಿಸುತ್ತಾರೆ.

ಸರ್ವಜ್ಞಾನಿ, ಸರ್ವೋಪಕಾರಿಯಾದ ಗುರೂಜಿಯವರು ಬರಿಗೈಯಲ್ಲಿ ಹೋಗಿ ಈ ಟಿವಿ ಚಾನಲ್‌ಗೆ ಸೇರಿಕೊಂಡಿದ್ದರು. ಎರಡು ವರ್ಷದ ಎಪಿಸೋಡ್‌ಗಳು ಮುಗಿಯುವ ವೇಳೆಗೆ ಗುರೂಜಿಯ ಗ್ರಹಗತಿ ಬದಲಾಯಿತು. ಸಾಧಾರಣ ವಸ್ತç ಹೊದ್ದು ಹೋಗಿ ಟಿವಿ ಚಾನಲ್ ಸೇರಿದ್ದ ಗುರೂಜಿ, ಈಗ ದಿನಕ್ಕೊಂದು ಜರತಾರಿ ಹೊದೆಯುತ್ತಾರೆ. ಕೊರಳ ತುಂಬಾ ಬಂಗಾರದ ಸರಗಳು ಮಿಣಮಿಣ ಮಿನುಗುತ್ತಿವೆ. ಹತ್ತೂ ಬೆರಳಲ್ಲಿ ಇಪ್ಪತ್ತಾರು ಉಂಗುರಗಳಿವೆ.

ಇನ್‌ಕಂ ಟ್ಯಾಕ್ಸ್ನವರು ಕಣ್ಣು ಹಾಕಬಹುದಾದಷ್ಟು ಸಂಪಾದನೆ ಮಾಡಿದ್ದಾರೆ. ಎಲ್ಲದಕ್ಕಿಂತಾ ಹೆಚ್ಚಾಗಿ ಅಪಾರ ಸಂಖ್ಯೆಯ ಭಕ್ತಬಳಗವನ್ನು ಹೊಂದಿದ್ದಾರೆ.

ಹೀಗಿದ್ದ ಗುರೂಜಿಯ ಗ್ರಹಗತಿ ಕೆಟ್ಟು, ಉರುಳಿದ ಕಾಲ ಚಕ್ರದಡಿ ಸಿಲುಕಿತು. ಗಡಿಯಾರ ಕೆಟ್ಟರೆ ರಿಪೇರಿ ಮಾಡಬಹುದು, ಟೈಂ ಕೆಟ್ಟರೆ ರಿಪೇರಿ ಮಾಡೋಕ್ಕಾಗುತ್ತಾ? ಗುರೂಜಿಗೆ ಶುಕ್ರ ದೆಸೆ ಮುಗಿದು ವಕ್ರ ದೆಸೆ ಶುರುವಾಗಿತ್ತು. ಎಷ್ಟೆಲ್ಲಾ ಶಕ್ತಿ, ಸಾಮರ್ಥ್ಯ ಹೊಂದಿದ್ದ ಗುರೂಜಿಯ ಯಾವ ಮನೆಗೆ ಯಾವ ಗ್ರಹ ವಕ್ಕರಿಸಿತೋ, ಏನು ಎಡವಟ್ಟಾಯಿತೋ ಗೊತ್ತಿಲ್ಲ, ಗುರೂಜಿ ಹಾಗೂ ಚಾನಲ್‌ನವರ ನಡುವಿನ ಸಂಬAಧ ಹದಗೆಟ್ಟಿತು. ಇವರು ಚಾನಲ್ ಖಾಲಿ ಮಾಡುವ ಕಾಲ ಬಂದಿತು. ಇವರ ಜಾಗಕ್ಕೆ ಇನ್ನೊಬ್ಬ ಗುರೂಜಿ ಬಂದು ಟವೆಲ್ ಹಾಕಿದ್ದಾರೆ.

ಚಲಾವಣೆಯಲ್ಲಿ ಉಳಿಯಬೇಕೆಂದರೆ ಗುರೂಜಿ ಇನ್ನೊಂದು ಚಾನಲ್ ಹೊಂಚಿಕೊಳ್ಳಬೇಕಾಗಿದೆ. ಕೆಟ್ಟ ಕಾಲ ಕಳೆದು ಒಳ್ಳೆಯ ಕಾಲ ಬಂದು ಹೊಸ ಚಾನಲ್ ಸಿಕ್ಕಮೇಲೆ ಗುರೂಜಿ ಭಕ್ತರ ಭವಿಷ್ಯ ಹೇಳುತ್ತಾ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ. ತಾವು ಚಾನಲ್ ಚೇಂಜ್ ಮಾಡಿದಾಗ, ಕೈಯಲ್ಲಿ ರಿಮೋಟ್ ಹಿಡಿದಿರುವ ಭಕ್ತಗಣ ಹೊಸ ಚಾನಲ್‌ಗೆ ಚೇಂಜ್ ಆಗಿ ಪ್ರೋಗ್ರಾಂನ ಟಿಆರ್‌ಪಿ ಕಾಪಾಡುತ್ತಾರಾ, ಇಲ್ಲವಾ ಅನ್ನೋ ಆತಂಕ ಗುರೂಜಿಗೆ ಇದೆ.

Leave a Reply

Your email address will not be published.