ಗೂಗಲ್ ಇರುವಾಗ ಗುರುವೇಕೆ?

 

ಗುರುವಿಗೆ ಪ್ರಶ್ನೆ ಮಾಡಬಲ್ಲ ಮತ್ತು ಅದರಂತೆ ಸಮರ್ಥವಾಗಿ ವಿದ್ಯಾರ್ಥಿಯನ್ನು ಜ್ಞಾನ, ಅನುಭವ ಮತ್ತು ಕಲಿಕೆಯಲ್ಲಿ ಸಂತೃಪ್ತಿಗೊಳಿಸುವ ಪರ್ಯಾಯ ತಂತ್ರಜ್ಞಾನ ಮಾರ್ಗಗಳು ಬಂದಿರುವುದರಿಂದ ಗುರುಬೇಕೆ ಎಂಬ ಪ್ರಶ್ನೆ ಗಟ್ಟಿಗೊಳ್ಳುತ್ತಿದೆ.

ಡಾ.ವಿಷ್ಣು ಎಂ. ಶಿಂದೆ

ಶಿಕ್ಷಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸುವುದು ಸಂಪ್ರದಾಯಿಕ ಕ್ರಮ. ಇಂದು ಕಾಲ ಬದಲಾದಂತೆ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಾತಾವರಣವು ಬದಲಾಗಿದೆ. ಈ ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸನ್ನಿವೇಶ, ಅವಕಾಶ ಮತ್ತು ಅಗತ್ಯಗಳು ಸಂಪೂರ್ಣ ಬದಲಾಗಿವೆ.

ಇಯಾನ್ ಗಿರ್ಲ್ಬ್ಟ್ ತನ್ನ ಇಂಗ್ಲೀಷ್ ಕೃತಿ “Motivation in the classroom” ನಲ್ಲಿ “Why do I Need a Teacher When I’ve Got Google?” ಎಂಬ ಇಪ್ಪತ್ತೊಂದನೆ ಶತಮಾನದ ಹೊಸ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾನೆ. ಒಂದು ಗಂಭೀರವಾದ ಶೈಕ್ಷಣಿಕ ವಿಚಾರ ಪ್ರಣಾಳಿಕೆಗೆ ಈ ಪುಸ್ತಕ ದಾರಿ ಮಾಡಿಕೊಟ್ಟಿದೆ.

ಜಗತ್ತಿನ ಶಿಕ್ಷಣದ ಪರಿಕಲ್ಪನೆ, ಕಲಿಕಾ ಸಾಧನಗಳ ಆವಿಷ್ಕಾರ, ಪರೀಕ್ಷಾ ಪದ್ಧತಿಗಳು, ಯೋಜನಾ ವಿನ್ಯಾಸಗಳು ಫಲಿತಾಂಶ, ವಿಶ್ಲೆಷಗಳು. ಪಠ್ಯಕ್ರಮ ವಿನ್ಯಾಸಗಳು ಹಾಗೂ ಪದವಿಗಳ ಸ್ವರೂಪಗಳಲ್ಲಿ ಗಣನೀಯವಾಗಿ ಬದಲಾವಣೆ ಆಗಿವೆ. ಆದರೆ ಶಿಕ್ಷಕರ ಪಾತ್ರದ ಬಗ್ಗೆ ಇರುವ ಸಾಂಪ್ರದಾಯಿಕ ಒಕ್ಕಣೆ ಮಾತ್ರ ಬದಲಾಗಿಲ್ಲ. ಗುರು ಶಿಷ್ಯ ಎನ್ನುವಲ್ಲಿಯೇ ಶೈಕ್ಷಣಿಕ ಅಸಮಾನತೆಯ ಬೀಜಗಳು ಚಿಗುರೊಡೆಯುತ್ತವೆ ಎಂಬುದನ್ನು ಗಮನಿಸಬೇಕು.

ಭಾರತಕ್ಕೆ ಶ್ರೇಷ್ಠ ಅಧ್ಯಾಪಕರ, ಮಾರ್ಗದರ್ಶಕರ ಪರಂಪರೆ ಇರುವುದು ನಿಜ. ಆದರೆ ಕಾಲಘಟ್ಟ ಬದಲಾದಂತೆ ಶಿಕ್ಷಕರ ವೃತ್ತಿ, ಮನೋಧರ್ಮ ಬದಲಾಗುತ್ತಾ ಬಂದಿದೆ. ಶೈಕ್ಷಣಿಕ ಕ್ರಾಂತಿಯು ತಂತ್ರಜ್ಞಾನ ಸಹಿತವಾಗಿ ಬೆಳೆದಿದೆ. ಗುರುವಿಗೆ ಪ್ರಶ್ನೆ ಮಾಡಬಲ್ಲ ಮತ್ತು ಅದರಂತೆ ಸಮರ್ಥವಾಗಿ ವಿದ್ಯಾರ್ಥಿಯನ್ನು ಜ್ಞಾನ, ಅನುಭವ ಮತ್ತು ಕಲಿಕೆಯಲ್ಲಿ ಸಂತೃಪ್ತಿಗೊಳಿಸುವ ಪರ್ಯಾಯ ತಂತ್ರಜ್ಞಾನ ಮಾರ್ಗಗಳು ಬಂದಿರುವುದರಿAದ ನನಗೆ ಗುರುಬೇಕೆ? ಎಂಬ ಪ್ರಶ್ನೆ ಗಟ್ಟಿಗೊಳ್ಳುತ್ತಿದೆ.

ನಿಜ ಹೇಳದ ಶಿಕ್ಷಕರು ಬೇಕೆ?

ಬೋಧನೆ ಮಾಡುವಾಗ ಮಗುವಿನಲ್ಲಿ ಉಂಟಾಗುವ ಚಿಂತನಾ ಪ್ರಶ್ನೆಗಳಿಗೆ ಶಿಕ್ಷಕ ಸಮಂಜಸ ಉತ್ತರ ನೀಡಲು ಪ್ರಯತ್ನಿಸಬೇಕು. ಒಂದು ಸಿದ್ಧಾಂತ, ಕಾವ್ಯ, ವಿಜ್ಞಾನ, ಶಾಸ್ತ್ರಗಳ ಬಗ್ಗೆ ಸಮಗ್ರ ಜ್ಞಾನ, ಅನುಭವವಿದ್ದಾಗ ಮಾತ್ರ ಶಿಕ್ಷಕರು ಸತ್ಯ ಹೇಳಲು ಸಾಧ್ಯ. ಮಲೆನಾಡನ್ನು ನೋಡದೆಯೆ ಒಬ್ಬ ಕನ್ನಡ ಅಧ್ಯಾಪಕ ಮಲೆನಾಡಿನ ಸಿರಿಯನ್ನು ತರಗತಿಯಲ್ಲಿ ಬಣ್ಣಿಸುತ್ತಾನೆ. ಅಂದರೆ ನಮಗೆ ತಿಳಿಯಲಾರದ ಸಂಗತಿಗಳ ಬಗ್ಗೆ ಒಣ ಸುಳ್ಳನ್ನು ಹೇಳುವುದು ಮೋಸದ ಕೆಲಸ.

ಇತಿಹಾಸ ಬೋಧನೆಯಲ್ಲಂತೂ ಕೆಲ ಶಿಕ್ಷಕರು ತಮ್ಮ ಅನುಭವಕ್ಕೆ ವಿಷಯಗಳು ನಿಲುಕದಿದ್ದರೂ ಬೃಹತ್ ಸುಳ್ಳುಗಳನ್ನು ಹೇಳುತ್ತಾರೆ. ಇದಕ್ಕೆ ಅವರಿಗಿರುವ ಕಾಲಜ್ಞಾನದ ಕೊರತೆ. ಸಂಶೋಧನೆಯ ಅರಿವಿನ ಕೊರತೆ. ಆಧುನಿಕತೆಯ ಸಂಪರ್ಕದ ಕೊರತೆ ಎಂದೇ ಹೇಳಬಹುದು. ಒಮ್ಮೆ ವಿದ್ಯಾರ್ಥಿಗೆ ಶಿಕ್ಷಕರಿಗೆ ಪೂರ್ಣ ಜ್ಞಾನವಿಲ್ಲವೆಂದು ತಿಳಿದರೆ ‘www’ ಮೊರೆ ಹೋಗಲು ವಿದ್ಯಾರ್ಥಿ ಆರಂಭಿಸುತ್ತಾನೆ. ನನಗೆ ಪೂರ್ಣ ಜ್ಞಾನ ನೀಡುವ ಪರ್ಯಾಯ ಮತ್ತು ಅತೀ ಮುಖ್ಯವಾದ ಸಂಪನ್ಮೂಲ ತಂತ್ರಜ್ಞಾನವೆಂದು ಮಗುವಿಗೆ ಮನದಟ್ಟಾದಾಗ ಸಂಪ್ರದಾಯಿಕ ಶಿಕ್ಷಕನ ಅಸ್ತಿತ್ವವೇ ಬುಡಮೇಲಾಗುತ್ತದೆ.

ಹೊಸ ವಿಂಗಡಣೆ

ಡಿಜಿಟಲ್ ಲೋಕದ ಮಕ್ಕಳು ಹಾಗೂ ಡಿಜಿಟಲ್ ವಲಸಿಗ ಶಿಕ್ಷಕರು (Digital Natives and Digital Immigrants) ಎಂಬ ವಿಂಗಡಣೆ ಬಹಳಷ್ಟನ್ನು ಹೇಳುತ್ತದೆ. ಅಮೆರಿಕಾದ ಶಿಕ್ಷಣತಜ್ಞ ಮತ್ತು ಪ್ರಯೋಗಶೀಲ ಚಿಂತಕನಾದ ಮಾರ್ಕಪ್ರೆನ್‌ಸ್ಕಿ ಶಿಕ್ಷಣದ ಹೊಸ ಜಗತ್ತಿನ ಬಗ್ಗೆ ವಿಶೇಷ ವ್ಯಾಖ್ಯಾನಗಳನ್ನು ಬರೆದಿದ್ದಾನೆ. ಇಂದಿನ ಯುಗದ ಮಕ್ಕಳ ಕಲಿಕೆ, ಕೌಶಲ್ಯ, ಚಿಂತನಾಕ್ರಮ ಮತ್ತು ಬೋಧಕರ ವಾಸ್ತವದ ಬಗ್ಗೆ ಇವನ ಚಿಂತನೆಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.

ಇಂದು ಮೊಬೈಲ್ ಯುಗದಲ್ಲಿರುವ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ನಮಗಿಂತಲೂ ಬೇಗ ಕಲಿಯಬಲ್ಲರು, ಅವರ ತಾಂತ್ರಿಕ ಕೌಶಲಗಳು ಹಿರಿಯರಿಗಿಂತಲೂ ವೇಗವಾಗಿವೆ. ಏಕೆಂದರೆ ಅವರು ಡಿಜಿಟಲ್ ಲೋಕದಲ್ಲಿಯೇ ಜನ್ಮ ತಾಳಿದವರು. ಅವರನ್ನು ಡಿಜಿಟಲ್ ನೇಟೀವ್ಸ್ (Digital Natives) ಎಂದು ಕರೆಯುತ್ತಾರೆ.

ಶಿಕ್ಷಕರೆಲ್ಲರೂ Digital Immigrants, ಡಿಜಿಟಲ್ ಲೋಕಕ್ಕೆ ಬಂದ ವಲಸಿಗರು. ಹೊಸದಾಗಿ ಡಿಜಿಟಲ್ ಲೋಕದ ಸಂಪರ್ಕ ಪಡೆಯುತ್ತಿರುವವರು. ಪ್ರತಿಯೊಂದನ್ನು ಇನ್ನೊಬ್ಬರಿಂದಾ ಅಥವಾ ಇನ್ನೊಂದು ಕಾಲಘಟ್ಟದ ವ್ಯಕ್ತಿಯಿಂದ ಹೊಸದಾಗಿ ಕಲಿಯುತ್ತಾ ಹೋಗಬೇಕಾಗುತ್ತದೆ. ಆದ್ದರಿಂದ ತಂತ್ರಜ್ಞಾನ ಲೋಕದ ಬಗೆಗೆ ಒಂದು ತಿರಸ್ಕಾರ ಅಥವಾ ಆಕರ್ಷಣೆ ಎರಡೂ ಬರುವ ಸಾಧ್ಯತೆಗಳು ಇವೆ. ಸಹಜವಾಗಿ ಡಿಜಿಟಲ್‌ನ ವಲಸಿಗರಾದ ಶಿಕ್ಷಕರನ್ನು ಐಟಿ ಮೂಲ ನಿವಾಸಿಗಳಾದ ವಿದ್ಯಾರ್ಥಿಗಳು ಕೀಳಾಗಿ ನೋಡುವುದು ಸಹಜ. ಶಿಕ್ಷಕರು ಸಹ ತಂತ್ರಜ್ಞಾನ ಯುಗದಲ್ಲಿ ಸಹಕಲಿಕಾರ್ಥಿ ಎಂದೆನಿಸಬೇಕಾಗಿದೆ.

ಮುಕ್ತ ಕಲಿಕೆಯ ದಾರಿಗಳು

ಮಕ್ಕಳು ‘ತಂತ್ರಜ್ಞಾನ’ ಏಕೆ ಇಷ್ಟ ಪಡುತ್ತಾರೆ? ಏಕೆ ಕೆಲ ಬಾರಿ ಶಿಕ್ಷಕರನ್ನು ದ್ವೇಷಿಸುತ್ತಾರೆ? ಎಂದರೆ ‘www’ ಅವರಿಗೆ ಉತ್ತರ ನೀಡುತ್ತದೆ. ಏನಾದರೂ ಆಗಲಿ ಪ್ರತಿಕ್ರಿಯೆ ನೀಡುತ್ತದೆ. ಆದರೆ ಬಹುಪಾಲು ಮಕ್ಕಳಿಗೆ ಶಿಕ್ಷಕರನ್ನು ಪ್ರಶ್ನಿಸಿದಾಗ ಪೂರ್ಣ ಉತ್ತರ ಸಿಗುವುದಿಲ್ಲ ಅಥವಾ ಸುಳ್ಳು ಉತ್ತರ ಸಿಗಬಹುದು ಅಥವಾ ಉತ್ತರದ ಬದಲು ಪ್ರಶ್ನೆಯೇ ಸಿಗಬಹುದು. ಹೀಗೆ ಅನೇಕ ಬಾರಿ ಭ್ರಮನಿರಸನಗೊಳ್ಳುವ ಮಗು ತನ್ನ ಸಂತೃಪ್ತಿಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಲು ಆರಂಭಿಸುತ್ತದೆ. ಅದನ್ನೆ ನಾವು ಸ್ವಾವಲಂಬಿ ಸ್ವಯಂಕಲಿಕೆಯ ಮಾರ್ಗವೆಂದು ಕರೆಯಬಹುದು.

ಶ್ರೇಷ್ಠ ಮನೋವಿಜ್ಞಾನಿ ಬಿ.ಎಫ್ ಸ್ಕಿನ್ನರ್ (1948) ತನ್ನ ಪ್ರಯೋಗವಾದ ಕ್ರಿಯಾನುಬಂಧ ಕಲಿಕೆಯಲ್ಲಿ ಒಂದು ಪಾರಿವಾಳದ ಮೇಲೆ ಪ್ರಯೋಗ ಮಾಡಿದ. ಪ್ರಯತ್ನಿಸಿದಾಗಲೆಲ್ಲ ಪಾರಿವಾಳಕ್ಕೆ ಕಾಳು ದೊರೆಯುವಂತೆ ಮಾಡಿದನು. ಹಲವು ಬಾರಿ ಇದನ್ನು ಪುನರಾವರ್ತಿಸಿದಾಗ, ಯಶಸ್ಸು ದೊರೆತಷ್ಟೆ ಪಾರಿವಾಳವು ಕಾಳು ಪಡೆಯುವ ತನ್ನ ಪ್ರಯತ್ನವನ್ನು ಹೆಚ್ಚುಮಾಡಿದ್ದು ಗೋಚರವಾಯಿತು. ಇದರಿಂದ ನಮ್ಮ ಕ್ರಿಯೆ ಮತ್ತು ಆ ಕ್ರಿಯೆಗೆ ಸಿಗುವ ಪ್ರತಿಕ್ರಿಯೆಗೂ ಸಂಬAಧಗಳಿವೆ ಎಂದು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದನು.

ನಾವು ತರಗತಿಯ ಶಿಕ್ಷಕರು ಈ ತತ್ವದ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರಿಂದ ಮಕ್ಕಳು ನಮ್ಮನ್ನು ತಿರಸ್ಕರಿಸುತ್ತಿದ್ದಾರೆ. ನಮ್ಮ ಮಕ್ಕಳು ಕೇಳುವ ಪ್ರಶ್ನೆಗಳಿಗೆ ನಮ್ಮ ಬಳಿ ತಕ್ಷಣ ಉತ್ತರವಿಲ್ಲ. ಪ್ರಯೋಗಗಳಿಂದ ಅವರನ್ನು ಪ್ರೇರೇಪಿಸುವ ಸಾಮಗ್ರಿ, ಕೌಶಲ ನಮಗೆ ಕಡಿಮೆಯಾದಾಗ ಮಕ್ಕಳು ಸ್ವಯಂ ಕಲಿಕೆಯಲ್ಲಿ ಹೆಚ್ಚು ಒಲವು ತೋರುತ್ತಿದ್ದಾರೆ.

ಮೊಬೈಲ್ ಅನ್ವಯಕಗಳ ಬಳಕೆ

ಮಕ್ಕಳಿಗೆ ಇಂದು ಶಿಕ್ಷಕರು ಕಲಿಸುವುದಕಿಂತ ಹೆಚ್ಚು ಕಲಿಯಲು ಬಿಡುವುದು ಮುಖ್ಯವಾಗಿದೆ. ಸ್ವಯಂ ಅಧ್ಯಯನ ಸಾಧ್ಯತೆಗಳು ತರಗತಿಯ ಒಳಗಡೆಯೆ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಬೋಧನೆಗಿಂತ ಕ್ರಿಯಾಶೀಲ ಕಲಿಕೆಗೆ ಪ್ರಾತಿನಿಧ್ಯ ನೀಡುವುದು ಮುಖ್ಯವಾಗಿದೆ. ಈ ನೆಲೆಯಲ್ಲಿ ಕೇಂದ್ರ ಸರ್ಕಾರದ ಇ-ಪಾಠಶಾಲಾ ಮೊಬೈಲ್ ಅನ್ವಯಕ (APP)ನ್ನು ಶಿಕ್ಷಕರು ಬಳಸಿಕೊಳ್ಳಬಹುದು. ಇದರಲ್ಲಿ ಕಲಿಕೆಯ ವಿಷಯದ ಆಡಿಯೊ-ವಿಡಿಯೊಗಳನ್ನು ಸಿದ್ಧಗೊಳಿಸಿ ನೀಡಲಾಗಿದೆ. ಶಿಕ್ಷಕರು ಮಕ್ಕಳ ವಯೋಮಾನ, ತರಗತಿ, ವಿಷಯಗಳನ್ನು ಆಧರಿಸಿ ಸಾಮಗ್ರಿಯನ್ನು ಬಳಸಿಕೊಳ್ಳಬೇಕಾಗುತ್ತದೆ.

ವ್ಯತ್ಯಾಸಗಳಿಲ್ಲದ ಶಿಕ್ಷಣ

ಆಧುನಿಕ ತಂತ್ರಜ್ಞಾನ ಸಾಮಗ್ರಿಗಳು ಮಕ್ಕಳ ಬೆರಳ ತುದಿಯಲ್ಲಿವೆ. ಅವು ವಿಶಿಷ್ಟ ಕಲಿಕಾ ಅನುಭವಗಳನ್ನು ನೀಡಬಲ್ಲವು. ಉದಾಹರಣೆಗೆ NCERT Tex Book APPನಲ್ಲಿ 1ರಿಂದ 12ನೇ ತರಗತಿಯ ಎಲ್ಲ ಪುಸ್ತಕಗಳು ಲಭ್ಯವಿವೆ. ಈ APP ಅಳವಡಿಸಿಕೊಂಡು, ಶಿಕ್ಷಕರು ವೈವಿಧ್ಯಮಯ ಪಠ್ಯಪುಸ್ತಕಗಳನ್ನು ಬಳಸಿಕೊಳ್ಳಬಹುದು. ಇಂದು ಕಲಿಕೆ-ಬೋಧನೆಯಲ್ಲಿ ನಗರ ಗ್ರಾಮೀಣ ವ್ಯತ್ಯಾಸಗಳು ಹೊರಟುಹೋಗಿವೆ. ಗ್ರಾಮೀಣ ಮಕ್ಕಳಿಗೆ ಸಾಮರ್ಥ್ಯಗಳಿವೆ. ಶಿಕ್ಷಕರು ಇದನ್ನು ಪ್ರಾಯೋಗಿಕವಾಗಿ ತಮ್ಮ ತರಗತಿಯಲ್ಲಿ ಅನ್ವಯಿಸಬೇಕು.

ಬಹು ಸಂವಹನ ಸಾಧ್ಯತೆಗಳು

ಹಿಂದಿನ ಕಾಲದಲ್ಲಿ ಸಂವಹನಕ್ಕೆ ಮಿತಿಗಳಿದ್ದುದರಿಂದ ಏಕಮುಖ ಸಂವಹನ ಅನಿವಾರ್ಯವಾಗಿತ್ತು. ಹೊಸ ತಲೆಮಾರಿನವರು ಏಕಕಾಲದಲ್ಲಿಯೇ ಬಹುಮಾಧ್ಯಮದ ಸಂವಹನ ಸಂಪರ್ಕಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ, ಇಮೇಲ್‌ನಲ್ಲಿರುವಾಗಲೇ ಫೇಸ್‌ಬುಕ್, ಅದರಂತೆ ಹಲವು ವೆಬ್‌ಸೈಟ್‌ಗಳನ್ನು ಹುಡುಕುತ್ತಾರೆ. ಸಂಪರ್ಕಗಳನ್ನು ತಾವೇ ನಿಯಂತ್ರಿಸುತ್ತಾರೆ. ವೇಳೆ ಹಾಗೂ ಸಂಪನ್ಮೂಲಗಳನ್ನು ಅತ್ಯಂತ ಉತ್ತಮವಾಗಿ ಬಳಸುತ್ತಾರೆ. ಇದು ಆಧುನಿಕ ಸಂವಹನ ಸಾಧ್ಯತೆಗಳನ್ನು ಹೆಚ್ಚಿಸಿದೆ.

ಸಂವಹನ ಹಿಂದಿನ ದಿನಗಳಲ್ಲಿ ಸ್ಥಿರವಾಗಿತ್ತು. ಕೆಲ ದೇಶಗಳಲ್ಲಿ ಅದು ಕ್ರಿಯಾಶೀಲವಾಗಿದ್ದರೆ, ಇನ್ನೂ ಕೆಲವು ಸ್ಥಳಗಳಲ್ಲಿ ಸಂವಹನ ಹಿಂದುಳಿದ ವ್ಯವಸ್ಥೆಯಾಗಿತ್ತು. ಕೆಲ ಪ್ರದೇಶಗಳಲ್ಲಿ ಸಂವಹನ ತಂತ್ರಜ್ಞಾನದ ಸ್ಪರ್ಶವೂ ಆಗಿರಲಿಲ್ಲ. ಇದರಿಂದ ಜಗತ್ತಿನಲ್ಲಿ ಸಂವಹನಕ್ಕೆ ಸಂಬAಧಿಸಿದAತೆ ಡಿಜಿಟಲ್ ಭಿನ್ನತೆ ಮನೆ ಮಾಡಿತ್ತು. ಆದರೆ ಇಂದು ಸಂವಹನವು ಚಲನಶೀಲವಾಗಿರುವುದರಿಂದ ಅದರ ಸಾಧ್ಯತೆಗಳು ಅಪಾರವಾಗಿವೆ. ಸಂವನವು ವ್ಯಕ್ತಿಯ ಜೊತೆಯಲ್ಲಿ ಸಂಚರಿಸುವುದರಿಂದ ವ್ಯಕ್ತಿಯ ಸಂವಹನದ ಜೊತೆಯಲ್ಲಿ ಇರುತ್ತಾರೆ. ಕ್ಷಣಾರ್ಧದಲ್ಲಿ ತಮ್ಮನ್ನು ಸಂಪರ್ಕಿಸುವವರಿಗೆ ಪ್ರತಿಕ್ರಿಯೆ ನೀಡುತ್ತಾರೆ.

ರಚನಾವಾದಕ್ಕೆ ಪ್ರಾತಿನಿಧ್ಯ

ತರಗತಿಯಲ್ಲಿ ಕಲಿಕೆ-ಬೋಧನೆ ಉತ್ತಮವಾಗಲು, ಮಕ್ಕಳಿಗೆ ಕಲಿಕೆಯಲ್ಲಿ ಪಾಲ್ಗೋಳ್ಳುವ ಹೆಚ್ಚು ಅವಕಾಶ ನೀಡಬೇಕು. ಶಿಕ್ಷಕರ ಪಾತ್ರವು ಕಡಿಮೆಯಾಗಿರಬೇಕು. ಶಿಕ್ಷಕರು ಕಲಿಕೆಯ ವಿಷಯವನ್ನು ನಿರೂಪಿಸಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಹುಡುಕಲು ಮಕ್ಕಳಿಗೆ ಸಹಾಯಮಾಡಬೇಕು. ಇಂದು ಮಕ್ಕಳಲ್ಲಿ ವಿಷಯಗಳನ್ನು ಸಂಗ್ರಹಿಸುವ ಕಲೆ ಉತ್ಕೃಷ್ಟವಾಗಿದೆ. ಸೂಕ್ಷ್ಮವಾಗಿ ವಿಷಯಗಳನ್ನು ಅವರು ಗ್ರಹಿಸಬಲ್ಲರು. ಇವುಗಳ ಕಲಿಕೆಗೆ ಮಹತ್ವ ನೀಡಬೇಕು. ಮಕ್ಕಳು ತಮ್ಮ ಕಲಿಕೆಗೆ ಬೇಕಾಗುವ ಅನುಭವಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡುವುದಕ್ಕೆ ರಚನಾವಾದ ಆಧಾರಿತ ಕಲಿಕೆ ಎನ್ನುವರು. ಹೀಗೆ ಸಾಮರ್ಥ್ಯಗಳ ವೃದ್ಧಿಸುವಿಕೆಯ ನೆಲೆಯಲ್ಲಿ ಬೋಧನೆ-ಕಲಿಕೆಯು ನಡೆಯಬೇಕು. ಶಿಕ್ಷಕರಿಂದಲೇ ಈ ಬದಲಾವಣೆ ಸಾಧ್ಯ.   

ಹೊಸದೊಂದು ಕಲಿಕಾ ಅನುಭವ

“ಶಾಲೆಯ ನಾಲ್ಕು ಗೋಡೆಗಳ ನಡುವೆ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ” ಎಂದು ಕೊಠಾರಿ ಶಿಕ್ಷಣ ಆಯೋಗವು 1964-66ರಲ್ಲಿ ಉಲ್ಲೇಖಿಸಿದ್ದು ಗಮನಾರ್ಹ. ತರಗತಿಯಲ್ಲಿ ಕಲಿಕಾ ಸಂತೃಪ್ತಿ ಹೊಂದದ ಮಗು ಆರಂಭದಲ್ಲಿ ಶಾಲೆ ಬಿಟ್ಟು ಹೊರ ನಡೆಯುತ್ತದೆ. ನಾನಾ ಕಾರಣದಿಂದ ತರಗತಿಗಳು ನಡೆಯದಿದ್ದರೆ ಮಗು ಆಟವಾಡಲು ಅಥವಾ ಹೊರ ಜಗತ್ತಿನ ಸಂಪರ್ಕ ಪಡೆಯಲು ಮಗು ಶಾಲೆ ಬಿಡುತ್ತದೆ.

ಇಂಟರ್‌ನೆಟ್, ಮೊಬೈಲ್ ತಂತ್ರಜ್ಞಾನ ಹಾಗೂ ಹೊಸ ತಂತ್ರಜ್ಞಾನ ಪರಿಕರಗಳ ಮೂಲಕ ಮಾಹಿತಿ ಸಂಗ್ರಹ ಪಡೆಯುತ್ತಾ ಸ್ವಯಂ ಕಲಿಕೆ, ಪ್ರಯೋಗದೊಂದಿಗೆ ಮುಕ್ತ ಕಲಿಕೆ ರೂಪುಗೊಳ್ಳುತ್ತಿದೆ. ಇದನ್ನು ಸೀಮಾತೀತ ಶಿಕ್ಷಣ ಎನ್ನಬಹುದು. ತರಗತಿಯ ನಾಲ್ಕು ಗೋಡೆಗಳಾಚೆ ಹೊಸದೊಂದು ಕಲಿಕಾ ಅನುಭವದ ಲೋಕವನ್ನು ಮಗು ತಾನೆ ಸೃಷ್ಟಿಸಿಕೊಂಡಿದೆ. ನಾವು ಶಾಲೆಯಲ್ಲಿ ಹಾಕುವ ನಿರ್ಬಂಧಗಳನ್ನು ಮೀರುವ ಶಕ್ತಿ ಬಂದಿದೆ. ಶಾಲೆಗೆ ತಡವಾದರೆ 1 ರೂಪಾಯಿ ದಂಡ, ಕಡಿಮೆ ಅಂಕ, ಪೋಷಕರ ಸಭೆಯಲ್ಲಿ ಬೈಯುವುದು ಇಂತಹ ಎಲ್ಲ ಸಂಪ್ರದಾಯಿಕ ಪದ್ಧತಿಗಳನ್ನು ಮಗು ತಿರಸ್ಕರಿಸುತ್ತಾ ಸಾಗುತ್ತದೆ. ಕಲಿಕೆಯ ಸ್ವಾವಲಂಬನೆಯ ಮೂಲಕ ಮುಕ್ತ ಕಲಿಕೆಗೆ ಹೊಸ ತಲೆಮಾರು ಪ್ರಯತ್ನಿಸುತ್ತಿದೆ. ಇದು ಅಹಂ ಇರುವ ಶಿಕ್ಷಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

*ಲೇಖಕರು ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.