ಗೋವಾ ಚಲನಚಿತ್ರೋತ್ಸವ

ಕೊರತೆಗಳ ನಡುವೆಯೂ ಭರವಸೆಯ ಒರತೆ

ಇತ್ತೀಚೆಗೆ ಗೋವಾದಲ್ಲಿ ನಡೆದ 50 ಕೋಟಿ ರೂಪಾಯಿ ವ್ಯಚ್ಚದ, 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಅನ್ಯಾನ್ಯ ಕಾರಣಗಳಿಂದ ಸುದ್ದಿಯಲ್ಲಿತ್ತು. ಫೆಸ್ಟಿವಲ್ ಡೈರಕ್ಟರ್ ಮತ್ತಾತನ ನೌಕರಶಾಹೀ ಕೂಟ ಕೆಲವೇ ವರ್ಷಗಳಲ್ಲಿ ಇಫ್ಫಿಯನ್ನು ಸಾಂಸ್ಕೃತಿಕವಾಗಿ ಆಪೋಶನ ತೆಗೆದುಕೊಂಡರೂ ಅಚ್ಚರಿಯಿಲ್ಲ. ಇದೆಲ್ಲದರ ನಡುವೆ ನಾನು ಸಾಕಷ್ಟು ಶ್ರಮವಹಿಸಿದ ಕಾರಣ ಕೆಲವು ಅಮೂಲ್ಯ ಸಿನಿಮಾಗಳನ್ನು ನೋಡಲು ಸಾಧ್ಯವಾಯ್ತು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮೂಲಭೂತವಾಗಿ ಇರುವಂತದ್ದು ಬೇರೆಬೇರೆ ದೇಶ, ಭಾಷೆಯ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರಗಳನ್ನು ನೋಡಿ ಅನುಭವಿಸಲು. ಆದರೆ ಚಿತ್ರೋತ್ಸವದ ಮೊದಲ ಅವಧಿಯಲ್ಲಿ ಕಷ್ಟಪಟ್ಟು ಕೆಲವು ಒಳ್ಳೆಯ ಸಿನಿಮಾಗಳನ್ನು ಹೆಕ್ಕಲು ಸಾಧ್ಯವಾಯಿತಾದರೂ ದ್ವಿತೀಯಾರ್ಧದಲ್ಲಿ ಒಳ್ಳೆಯ ಸಿನಿಮಾಗಳು ನೋಡಲು ಸಿಗದೇ ಚಲನಚಿತ್ರೋತ್ಸವ ಸೊರಗಿ ಸೋತಂತೆ ಕಂಡುಬಂದಿತು. ಇದರ ಜತೆಜತೆಯಲ್ಲಿ ಕೆನಡಾ ದೇಶದಿಂದ ಬಂದ ನಿರ್ದೇಶಕಿ ಅಲಿಸನ್ ರಿಚಡ್ರ್ಸ್ ಅಂತೂ ಇಫ್ಫಿಯ ಸಂಘಟನಾತ್ಮಕ ಸ್ವರೂಪ ಮತ್ತು ಸಿನಿಮಾಗಳ ಆಯ್ಕೆಯ ಬಗೆಗೆ ಪ್ರತಿಕ್ರಿಯಿಸುತ್ತಾ, ‘ನಾನು ನೋಡಿದ ಅತ್ಯಂತ ಕೆಟ್ಟದಾದ ಫಿಲ್ಮ್ ಫೆಸ್ಟಿವಲ್‍ಗಳಲ್ಲಿ ಇದು ಒಂದು’ ಎಂದರು.

ನನಗೆ ಇದು ವಾರ್ಷಿಕವಾಗಿ ಒಂದು ರೀತಿ ಗೋವಾ ಸಿಟಿಯಲ್ಲಿ ಸಂಭವಿಸುವ, ಅಲ್ಲಿನ ಪ್ರವಾಸೋದ್ಯಮ ಮತ್ತು ಹೋಟೆಲ್ ಇತ್ಯಾದಿ ವ್ಯಾಪಾರದ ಚಕ್ರವು ತಿರುಗಲು ನಡೆಸುವ ಹೂಟದಂತೆ ಕಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಅತ್ಯಂತ ಕೆಟ್ಟ ಕ್ಯುರೇಶನ್, ಪ್ರತೀ ವರ್ಷ ಕರಣ್ ಜೋಹರ್‍ನಂತಹ ಭಟ್ಟಂಗಿಯನ್ನು ಕರೆಸಿ ಕಾರ್ಯಕ್ರಮ ನಿರೂಪಿಸಿ ಆತನಿಗೆ ಕೋಟಿಗಟ್ಟಲೆ ಕೊಟ್ಟು, ಅತ್ಯಂತ ಕೆಟ್ಟ ಸಂಗೀತ ಸಂಜೆಯನ್ನು ಏರ್ಪಡಿಸಿ, ಮ್ಯಾರಿಯಟ್ ಮತ್ತು ತಾಜ್ ವಿವಾಂತಾ ಹೋಟೆಲ್‍ನಲ್ಲಿ ಜನರ ತೆರಿಗೆ ಹಣದಿಂದ ಕಾಕ್‍ಟೈಲ್ ಪಾರ್ಟಿ ಏರ್ಪಡಿಸುತ್ತಾರೆ. ಫೆಸ್ಟಿವಲ್‍ಗೆಂದು ಬಿಡುಗಡೆಯಾಗುವ 50 ಕೋಟಿಯಲ್ಲಿ ಸಂಬಂಧಿಸಿದವರೆಲ್ಲಾ ಇಂತಿಷ್ಟು ಕಮೀಶನ್ ಎಂದು ತಿಂದು ತೇಗಲು ಇರುವ ಮಾರುಕಟ್ಟೆ, ಕೂಟ, ಜಾತ್ರೆಯಾಗಿ ಇಫ್ಫಿ ಬದಲಾಗಿರುವುದು ನನ್ನಂತಹ ಸಿನಿಮಾಪ್ರಿಯನಿಗೆ ತೀವ್ರ ನಿರಾಸೆಯನ್ನಂತೂ ಉಂಟುಮಾಡಿದೆ.

ಇಲ್ಲಿನ ಫೆಸ್ಟಿವಲ್ ಡೈರಕ್ಟರ್ ಮತ್ತಾತನ ನೌಕರಶಾಹೀ ಕೂಟವು ಕೆಲವೇ ವರ್ಷಗಳಲ್ಲಿ ಇಫ್ಫಿಯನ್ನು ಸಾಂಸ್ಕೃತಿಕವಾಗಿ ಆಪೋಶನ ತೆಗೆದುಕೊಂಡರೂ ಅಚ್ಚರಿಯೇನಿಲ್ಲ. ಇದೆಲ್ಲದರ ನಡುವೆ ನಾನು ಸಾಕಷ್ಟು ಶ್ರಮವಹಿಸಿದ ಕಾರಣ ಈ ಕೆಳಗಿನ ಕೆಲವು ಅಮೂಲ್ಯ ಸಿನಿಮಾಗಳನ್ನು ಕಾಣಲು ಸಾಧ್ಯವಾಯ್ತು. ನೋಡಿದ ಸುಮಾರು 35 ಸಿನಿಮಾಗಳಲ್ಲಿ ಈ ಕೆಳಗಿನ ಕೆಲವು ಗಾಢವಾಗಿ ಕಾಡುತ್ತವೆ.

‘ಕಮಿಟ್‍ಮೆಂಟ್’

ಸೆಮಿ ಕಪ್ಲಾನೋಗ್ಲು ಎಂಬ ಟರ್ಕಿಶ್ ನಿರ್ದೇಶಕನ ‘ಕಮಿಟ್‍ಮೆಂಟ್’ ಸಿನಿಮಾ ಬಹಳ ಮಹತ್ವದ್ದು. ಈತ ಹನಿ, ಎಗ್ ಮತ್ತು ಮಿಲ್ಕ್ ಎಂಬ ಮೂರು ಸಿನಿಮಾಗಳ ಯೂಸುಫ್ ಟ್ರಲಜಿ (ತ್ರಿವಳಿ)ಯ ಸಿನಿಮಾ ಮಾಡಿದ ನಿರ್ದೇಶಕ. ಹನಿ ಅಥವಾ ‘ಬಾಲ್’ ಸಿನಿಮಾಕ್ಕೆ 2010ರಲ್ಲಿ ಬರ್ಲಿನ್ ಚಿತ್ರೋತ್ಸವದಲ್ಲಿ ಆತ್ಯಂತಿಕ ಪ್ರಶಸ್ತಿಯಾದ ಗೋಲ್ಡನ್ ಬಿಯರ್ ಲಭಿಸಿತ್ತು. ಟರ್ಕಿ ನಗರದ ಭೂದೃಶ್ಯಗಳ ಮೇಲಿನ ಮಾನವೀಯ ಸಂಬಂಧ, ವಿಶೇಷವಾಗಿ ವ್ಯಾಪಕವಾಗಿ ಬದಲಾಗುತ್ತಿರುವ ಸಾಮಾಜಿಕ ವಿನ್ಯಾಸ ಮತ್ತು ಪಾತ್ರಗಳ ಸಂದರ್ಭದಲ್ಲಿ ದುಡಿಯುವ ನಗರದ ತಾಯಿ ಮತ್ತು ಆಕೆಯ ತಾಯಿತನದ ಸಂಕೀರ್ಣ ಪ್ರಶ್ನೆಯನ್ನು ಇಲ್ಲಿ ಕಪ್ಲಾನೋಗ್ಲು ತನ್ನ ಕಾಳಜಿಯನ್ನಾಗಿಸಿದ್ದಾನೆ.

ದೊಡ್ಡ ಬ್ಯಾಂಕೊಂದರಲ್ಲಿ ದುಡಿಯುವ ಅಸ್ಲಿ (ಕುಬ್ರಾಕಿಪ್) ತನ್ನ ಮಗುವನ್ನು ನೋಡಿಕೊಳ್ಳಲು ಗುಲ್ಲಿಹಾಲ್ (ಏಸ್ ಯುಕ್ಸೆಲ್) ಎಂಬ ದಾದಿಯನ್ನು ನೇಮಿಸಿಕೊಳ್ಳುತ್ತಾಳೆ. ಮಗುವನ್ನು ಅತ್ಯಂತ ಜತನದಿಂದ ಬದ್ಧತೆಯಿಂದ ಸಾಕಿದರೂ ಮೊದಮೊದಲು ದಾದಿಯ ಮೇಲೆ ಕ್ಯಾಮೆರಾಗಳನ್ನಿಟ್ಟು ಬೇಹುಗಾರಿಕೆ ಮಾಡುತ್ತಾ, ಕೊನೆಗೆ ಆಕೆಯ ಬದ್ಧತೆಗೆ ಸಂಪೂರ್ಣ ಸೋಲುತ್ತಾಳೆ. ಕೊನೆಗೊಂದು ದಿನ ಗುಲ್ಲಿಹಾಲ್‍ಳ ಸೈನಿಕ ಗಂಡ ಸತ್ತಾಗ ಆಕೆಯ ಮಗುವನ್ನು ತನ್ನ ಮನೆಗೆ ತಂದು ತನ್ನೆರಡು ತೊಡೆಗಳ ಮೇಲೆ ತನ್ನ ಮತ್ತು ಆಕೆಯ ಮಗುವನ್ನು ಮಲಗಿಸಿ ನಿರುಮ್ಮಳಾಗುವ ಮೂಲಕ ಸಿನಿಮಾ ಮುಗಿಯುತ್ತದೆ. ಕಪ್ಲಾಂಗೋ ಈ ಸಿನಿಮಾದ ಮೂಲಕ ವಿವಿಧ ರೀತಿಯ ವ್ಯಕ್ತಿ, ಲಿಂಗ ಹಾಗೂ ಅವು ಹೊಂದಿರುವ ಕೌಟುಂಬಿಕ ಬಂಧ-ಸಂಬಂಧಗಳನ್ನು ಶೋಧಿಸಲು ಯತ್ನಿಸುತ್ತಾನೆ.

‘ಗೆಸ್ಟ್ ಆಫ್ ಹಾನರ್’

ಕೆನಡಾದ ಪ್ರಸಿದ್ಧ ನಿರ್ದೇಶಕ ಆಟಮ್ ಉಜಿಯನ್ ಸಿನಿಮಾ ‘ಗೆಸ್ಟ್ ಆಫ್ ಹಾನರ್’, ತಂದೆ ಮತ್ತು ಮಗಳು ಬೇರೆ ಬೇರೆ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದ ಸಂಕೀರ್ಣತೆಯನ್ನು ನಮ್ಮ ಮುಂದೆ ಇಡುತ್ತದೆ. ಯಾರೂ ಊಹಿಸಲಾಗದ ರೀತಿಯಲ್ಲಿ ಒದಗುವ ಬದುಕಿನ ದುರಂತಗಳು. ತದನಂತರದ ಜೀವಿತವನ್ನು ಪ್ರಭಾವಿಸುವ ಪರಿಯನ್ನು ಉಜಿಯನ್ ಈ ಚಿತ್ರದ ಮೂಲಕ ನಮ್ಮ ಮುಂದಿಡುತ್ತಾನೆ.

‘ಫ್ಯಾಮಿಲಿ ರೋಮಾನ್ಸ್ ಎಲ್‍ಎಲ್‍ಸಿ’

ಜರ್ಮನಿಯ ಪ್ರಸಿದ್ಧ ನಿರ್ದೇಶಕ ವರ್ನರ್ ಹರ್ಝೋಗ್ ಈ ವರ್ಷ, ‘ಫ್ಯಾಮಿಲಿ ರೋಮಾನ್ಸ್ ಎಲ್‍ಎಲ್‍ಸಿ’ ಎನ್ನುವ ಸಿನಿಮಾದ ಮೂಲಕ ತನ್ನ 78ನೆಯ ವಯಸ್ಸಿನಲ್ಲೂ ತರುಣರನ್ನು ನಾಚಿಸುವಂತೆ ರಂಗಕ್ಕೆ ಪುನರ್ ಪ್ರವೇಶಿಸಿದ್ದಾನೆ. ರೋಮಾನ್ಸ್ ಕೂಡಾ ಒಂದು ರೀತಿಯ ವ್ಯವಹಾರ. ಎಲ್ಲವೂ ಮತ್ತು ಎಲ್ಲರೂ ಈ ಜಗತ್ತಿನಲ್ಲಿ ಬಾಡಿಗೆಗೆ ಸಿಗುತ್ತಾರೆ. ಸಂಪೂರ್ಣ ಜಪಾನ್‍ನಲ್ಲಿ ಚಿತ್ರೀಕೃತವಾದ ಈ ಸಿನಿಮಾದಲ್ಲಿ 12 ವರ್ಷದ ಒಬ್ಬ ಬಾಲಕಿ ಕಳೆದುಹೋದ ತಂದೆಯ ಬದಲಿಗೆ ಒಬ್ಬಾತನನ್ನು ಬಾಡಿಗೆಗೆ ತೆಗೆದುಕೊಳ್ಳುವ ಕಥೆಯಿದು. ಆತ ಆಕೆಯ ತಂದೆಯ ಸ್ಥಾನವನ್ನು ತುಂಬುತ್ತಾನೆ, ಆರೈಕೆ ಮಾಡುತ್ತಾನೆ. ಕೊನೆಯಲ್ಲಿ ಆಕೆಯ ತಾಯಿ ಬಾಡಿಗೆ ತಂದೆಯನ್ನೇ ಖಾಯಂ ತಂದೆಯಾಗಲು ಒತ್ತಾಯಿಸಿದಾಗ ಆತ ಇದು ಕಂಪೆನಿಯ ನಿಯಮದ ವಿರುದ್ಧವೆಂದು ನಿರಾಕರಿಸುತ್ತಾನೆ. ಒಂಟಿ ಮನುಷ್ಯರು ಅಸಾಧ್ಯದ ಕನಸುಗಳನ್ನು ಬೆಂಬತ್ತುವ ಕಲ್ಪನೆಯ ಸಿನಿಮಾವಿದು.

‘ಮತಿಯಾಸ್ ಆ್ಯಂಡ್ ಮ್ಯಾಕ್ಸಿಮ್’

ತನ್ನ 20ನೇ ವಯಸ್ಸಿನಲ್ಲಿ ನಿರ್ದೇಶಿಸಿ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ‘ಐ ಕಿಲ್ಡ್ ಮೈ ಮದರ್’ ನಿರ್ದೇಶಕ ಕ್ಸೇವಿಯರ್ ಡೋಲಾನ್‍ನ ಹೊಸ ಸಿನಿಮಾ ‘ಮತಿಯಾಸ್ ಆ್ಯಂಡ್ ಮ್ಯಾಕ್ಸಿಮ್’. 30ರ ಹರೆಯದ ಈ ತರುಣ, ಪ್ರಸಿದ್ಧ ಕಾನ್ ಚಿತ್ರೋತ್ಸವದಲ್ಲಿ ಜೂರಿ ಪ್ರಶಸ್ತಿ (2014ರ ಮಾಮ್ಮಿ) ಮತ್ತು ವೆನಿಸ್ ಚಿತ್ರೋತ್ಸವದಲ್ಲಿ ಪಿಪ್ರೆಸ್ಕಿ ಪ್ರಶಸ್ತಿಗೆ (2013 ಟಾಂ ಎಟ್ ದಿ ಫಾರ್ಮ್) ಭಾಜನನಾಗಿದ್ದ. ಮತಿಯಾಸ್ ಆ್ಯಂಡ್ ಮ್ಯಾಕ್ಸಿಮ್ ಇಬ್ಬರೂ ಬಾಲ್ಯದ ಗೆಳೆಯರು. ಅವರಿಗೆ ತಮ್ಮ ಗೆಳತಿಯ ಕಿರುಚಿತ್ರವೊಂದರಲ್ಲಿ ನಟನೆಯ ಭಾಗವಾಗಿ ಕಿಸ್ ಮಾಡಬೇಕಾದ ಸಂದರ್ಭ ಬರುತ್ತದೆ. ಇದು ಕ್ರಮೇಣ ಒಂದು ವಿಚಿತ್ರ ರೀತಿಯ ಗುಮಾನಿಯನ್ನು ಅವರ ಸ್ನೇಹಿತರ ವಲಯದಲ್ಲಿ ಸೃಷ್ಟಿಸುತ್ತದೆ. ಅದು ಅಂತಹ ವಲಯದ ಸಹಜ ಭ್ರಾತೃತ್ವವನ್ನು ಮುರಿಯಲೂ ಕಾರಣವಾಗಿ ಕ್ರಮೇಣ ಅವರ ಬದುಕನ್ನೇ ಗಾಢವಾಗಿ ಪ್ರಭಾವಿಸುವ ಮಟ್ಟಕ್ಕೆ ಬೆಳೆಯುತ್ತದೆ. ಸಂಬಂಧಗಳ ಮುರಿತ ಮತ್ತದರ ಸಂಕೀರ್ಣ ದೃಶ್ಯೀಯತೆಯನ್ನು ಡೋಲಾನ್ ಸುಂದರವಾಗಿ ನಿರ್ವಹಿಸುತ್ತಾನೆ.

‘ದಿ ಗೋಲ್ಡನ್ ಗ್ಲೋವ್’

ಟರ್ಕಿಯಲ್ಲಿ ಹುಟ್ಟಿ ಜರ್ಮನಿಯಲ್ಲಿ ಬೆಳೆದು ‘ಹೆಡ್ ಆನ್,’ ‘ದಿ ಎಡ್ಜ್ ಆಫ್ ಹೆವನ್’ ಮತ್ತು ‘ಇನ್ ದಿ ಫೇಡ್’ ಚಿತ್ರಗಳ ಮೂಲಕ ಚಾಲ್ತಿಗೆ ಬಂದ ಫತ್ಹೇ ಅಕಿನ್‍ನ ಅತ್ಯಂತ ವಿಲಕ್ಷಣ ಪ್ರಯೋಗ ‘ದಿ ಗೋಲ್ಡನ್ ಗ್ಲೋವ್’. ಸುಮಾರು 1970ರಲ್ಲಿ ಜರ್ಮನಿಯ ಹ್ಯಾಮ್‍ಬರ್ಗ್‍ನಲ್ಲಿಯ ಸೈಂಟ್ ಪೌಲಿ ಜಿಲ್ಲಾ ಕೇಂದ್ರ ರಾತ್ರಿ ಮನರಂಜನೆಗೆ, ಕುಡುಕತನಕ್ಕೆ, ವ್ಯಭಿಚಾರಕ್ಕೆ,

ಜೂಜಿಗೆ ಮತ್ತು ಒಂಟಿ ಜೀವಗಳಿಗೆ ಮನೆಮಾತಾಗಿತ್ತು. ಫ್ರಿಟ್ಝ್ ಹೊಂಕಾ ಎನ್ನುವವ ಈ ಗರಡಿಯ ಒಬ್ಬ ಸದಸ್ಯ. ಅಷ್ಟೇನೂ ನಿಪುಣತೆ ಮತ್ತು ದುಡಿಮೆಯ ಕೌಶಲ್ಯ ಹೊಂದಿರದ ಈತ ಒಂಟಿಯಾದ ವಯಸ್ಸಿನ ಹೆಣ್ಣುಗಳನ್ನು ಬೇಟೆಯಾಡಿ ಅಮಾನುಷವಾಗಿ ಸುಖಿಸಿ ಕೊಲೆಗೈದು ತನ್ನ ಮನೆಯ ಅಟ್ಟದ ಒಂದು ಭಾಗದಲ್ಲಿ ಹಾಕಿ ಗೊತ್ತಾಗದಂತಿರಿಸುತ್ತಿದ್ದ. ಆದರೆ ಕೊನೆಗೆ ಆತನ ಮನೆಯ ಕೆಳಗಿರುವ ಗ್ರೀಕ್ ಕುಟುಂಬದ ಕಾರಣದಿಂದ ಉಂಟಾದ ಬೆಂಕಿ ಅವಘಡದಿಂದ ಹೊಂಕಾನ ಕೃತ್ಯಗಳು ಗೊತ್ತಾಗುತ್ತವೆ. ಪ್ರಿಟ್ಝ್ ಹೊಂಕಾ ಎನ್ನುವ ಸೀರಿಯಲ್ ಕಿಲ್ಲರ್‍ನ ನಿಜ ಕಥೆಯಿಂದ ಪ್ರೇರಣೆ ಪಡೆದ ಹೀಂಝ್ ಸ್ಟಂಕ್‍ನ, ‘ದೇರ್ ಗೋಲ್ಡನ್ ಹ್ಯಾಂಡ್‍ಶ್ಚು’ ಕಾದಂಬರಿಯನ್ನು ಆಧರಿಸಿದ ಸಿನಿಮಾವಿದು.

ಸಮುದಾಯಗಳ ಅಸ್ಮಿತೆ, ವಲಸೆಯ ರಾಜಕಾರಣ, ಅಂಚಿಗೆ ಸರಿದವರು, ತೃತೀಯ ಲಿಂಗಿಗಳು ಮುಂತಾದ ವಿಷಯಗಳ ಬಗ್ಗೆ ಈ ಮೊದಲು ಕೇಂದ್ರೀಕರಿಸಿದ್ದ ಅಕಿನ್‍ನ ಮೊದಲ ಕ್ರೈಂ ಥ್ರಿಲ್ಲರ್ ಇದು. ಆದರೆ ಸಾಮಾನ್ಯ ಬಾಲಿವುಡ್ ನೆಲೆಯ ಕ್ರೈಂ ಥ್ರಿಲ್ಲರ್‍ನಂತಲ್ಲದೇ ವಿಘಟಿತ ಸಮಾಜ ಮತ್ತು ಸಾಮಾಜಿಕ ಪ್ರತಿಫಲನದ ರೂಪದಲ್ಲಿಯೇ ಕಥನವು ರೂಪುಗೊಂಡು ಒಂದು ಸಂಕೀರ್ಣ ಸಮಾಜಶಾಸ್ತ್ರೀಯ ಸ್ವರೂಪದಲ್ಲಿ ಬೆಳೆಯುತ್ತ ಹೋಗುತ್ತದೆ. ಸಿನಿಮಾದ ಮೇಕಿಂಗ್ ವಿಶೇಷವಾಗಿ ‘ಹೊಂಕಾ’ನ ಪಾತ್ರದಲ್ಲಿ ಅಕಿನ್ ಕಾಸ್ಟ್ ಮಾಡಿದ ಜೋನಾಸ್ ಡ್ಯಾಸ್ಲೆರ್ ಕೇವಲ 30ರ ಆಸುಪಾಸಿನಲ್ಲಿರುವ ನಟ. ಆದರೆ ವಯಸ್ಸನ್ನೇ ನಾಚಿಸುವ 45ರ ಹರೆಯದ ಅಷ್ಠಾವಕ್ರವಾಗಿ ಆತ ಗಂಭೀರವಾಗಿ ನಟಿಸಿದ್ದಾನೆ.

‘ಅಬೌಟ್ ಎಂಡ್‍ಲೆಸ್‍ನೆಸ್’

ಸ್ವೀಡನ್ ದೇಶದ ಮಾಸ್ಟರ್ ರಾಯ್ ಎಂಡರ್‍ಸನ್ ಸಿನಿಮಾವಾದ ‘ಅಬೌಟ್ ಎಂಡ್‍ಲೆಸ್‍ನೆಸ್’ ಚಿತ್ರೋತ್ಸವದ ಗಣನೀಯ ಸಿನಿಮಾಗಳಲ್ಲಿ ಒಂದು. ಬಹುಶಃ ಮಾನವ ಜಗತ್ತಿನ ವೈಭವ ಮತ್ತು ನೀರಸತೆಯೆರಡನ್ನೂ ಏಕಕಾಲದಲ್ಲಿ ಕಟ್ಟಿಕೊಡುವ ರೂಪಕಾತ್ಮಕ ಶಕ್ತಿಯಿರುವ ಸಿನಿಮಾವಿದು. ತನ್ನ ಸಹಜ ಸಿದ್ಧಿತ ಸ್ವಭಾವವಾದ ಮಿಡ್ ಶಾಟ್‍ನಲ್ಲಿ ಫ್ರೇಂ ಮಾಡಿ ಕೆಲವು ಸೆಕೆಂಡುಗಳ ಕಾಲ ಅವರನ್ನು ವೀಕ್ಷಿಸುವಂತೆ ಮಾಡಿ ಮುಂದಿನ ಫ್ರೇಂಗೆ ಹೊರಳುವುದು ಮತ್ತು ಮೊದಲಿನ ಮತ್ತು ನಂತರದ ಫ್ರೇಂ ನಡುವೆ ಒಂದು ವಿಶಿಷ್ಟವಾದ ಕಾರ್ಯಕಾರಣತೆಯನ್ನು ಊಹಿಸುವಂತೆ ಮಾಡುವ ಕೌಶಲ, ಬ್ಲಾಕ್ ಕಾಮಿಡಿಯ ಛಾಯೆ ಮತ್ತು ಅತ್ಯಂತ ಅಸಂಗತವಾದ ಆದರೆ ರೂಪಕಾತ್ಮಕ ಧ್ವನಿಯಿರುವ ಸಂಭಾಷಣೆಯ ಮೂಲಕ ‘ಮನುಷ್ಯ ಕುತೂಹಲದ ಮ್ಯೂಸಿಯಂ’ ಎನ್ನುವ ರೀತಿಯ ಸಿನಿಮಾವನ್ನು ಆ್ಯಂಡರ್‍ಸನ್ ಸೃಷ್ಟಿಸಿದ್ದಾನೆ.

ಸಿನಿಮಾದ ಪಾತ್ರಗಳ ಕುರಿತು ನಮ್ಮನ್ನು ನಿರ್ದಿಷ್ಟವಾಗಿ ನಗುವಂತೆ ಮಾಡಿ ಒಂದು ನೆಲೆಯ ದಯನೀಯತೆಯನ್ನು ಪ್ರಕಟಪಡಿಸುವುದಕ್ಕಿಂತಲೂ ಆತ, ಪಾತ್ರಗಳು ಸಂವಾದಿಯಾಗುವ ಅರ್ಥಗಳ ಜತೆ ನಮ್ಮನ್ನಿಟ್ಟು ನೋಡುವ ಹಾಗೂ ಹೋಲಿಸುವ ಕೈಂಕರ್ಯಕ್ಕೆ ಪ್ರೇರೇಪಿಸುತ್ತಾನೆ. ಸ್ವಪ್ರತಿಫಲನಾತ್ಮಕತೆಯ ವಿಮರ್ಶೆಗೆ ಪ್ರೇಕ್ಷಕನನ್ನು ದೂಡುವ ಕಾರಣದಿಂದ ಈ ಸಿನಿಮಾ ಒಂದು ಸ್ತರದ ಡಿವೈನ್ ಕಾಮಿಡಿಯೂ ಆಗುತ್ತದೆ.

‘ದಿ ಹಾಲ್ಟ್’ ಅಥವಾ ‘ಆಂಗ್ ಹುಪಾ’

ಲಾವ್ ಡಯಾಜ್ ಸಮಕಾಲೀನ ಜಗತ್ತಿನ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬ. ಫಿಲಿಪೈನ್ಸ್‍ನ ಸಮಾಜ, ಚರಿತ್ರೆ, ಸ್ಕೃತಿ ಮತ್ತದು ಅನುಭವಿಸಿದ ಆಘಾತವನ್ನು ಸಶಕ್ತವಾಗಿ ಕಟ್ಟಿಕೊಟ್ಟಂತಹ ನಿರ್ದೇಶಕ. ಆತ ‘ದಿ ಹಾಲ್ಟ್’ ಅಥವಾ ‘ಆಂಗ್ ಹುಪಾ’ ಸಿನಿಮಾದಲ್ಲಿ ಫಿಲಿಪೈನ್ಸ್‍ನ ರಾಜಧಾನಿ ಮನಿಲಾದ ಚರಿತ್ರೆ ಮತ್ತದರ ಸ್ಕೃತಿಯೊಂದಿಗೆ ಭವಿಷ್ಯದ ಕರಾಳತೆಯನ್ನು ತುಂಬಾ ಬಲಿಷ್ಠವಾಗಿ ಕಟ್ಟಿಕೊಡುತ್ತಾನೆ. ಸುಮಾರು 2034ರ ಘಟನೆ ಎಂದು ಕಲ್ಪಿಸಲಾದ ಈ ಸಿನಿಮಾದ ಕತೆ ವರ್ತಮಾನದ ಫಿಲಿಪೈನ್ಸ್‍ನ ಸಮಾಜೋ-ರಾಜಕೀಯ ಸ್ಥಿತಿಗತಿಗಳ ವ್ಯಾಖ್ಯಾನ ಮತ್ತು ನಿರೂಪಣೆಯಾಗಿದೆ.

ಸದ್ಯದ ಸ್ಥಿತಿಯೇ ಭವಿಷ್ಯದಲ್ಲಿ ಒಂದು ನೆಲೆಯ ಭ್ರಾಮಕ ಮತ್ತು ಕಲ್ಪಿತ ಕೇಡುಗಾಲಕ್ಕೆ ನಾಂದಿಯಾಗುತ್ತದೆ ಎನ್ನುವುದು ಡಯಾಜ್‍ನ ಪ್ರಮುಖ ಪ್ರತಿಪಾದನೆ. ಸುಮಾರು 276 ನಿಮಿಷದ ಈ ಸಿನಿಮಾ ತಾತ್ವಿಕವಾಗಿ ಗೊಡಾರ್ಡ್‍ನ ಆಲ್ಫಾವಿಲ್ಲೆಯನ್ನು ಹೋಲುತ್ತದೆ. ಮನಿಲಾದಲ್ಲಿ ‘ಡಾರ್ಕ್ ಕಿಲ್ಲರ್’ ಎಂಬ ಹೆಸರಿನ ಸಾಂಕ್ರಾಮಿಕ ರೋಗ ಹಾಗೂ ಜ್ವಾಲಾಮುಖಿ ಸ್ಫೋಟಿಸುತ್ತದೆ. ಅತ್ಯಂತ ಹೇಯ, ಸರ್ವಾಧಿಕಾರಿಯಾದ ನಿರ್ವಾಣೋ ನವಾರ್ರೋನ ನಿರಂಕುಶತೆ ಹೇಗೆ ಫಿಲಿಫೈನ್ಸ್ ಅನ್ನು ಕತ್ತಲೆಯ ಕೂಪಕ್ಕೆ ತಳ್ಳಿತು ಎಂಬುದನ್ನು ನಿರೂಪಿಸುತ್ತಲೇ ಸ್ವಾತಂತ್ರ್ಯದ ಭರವಸೆಯ ಬಗೆಗೂ ಈ ಸಿನಿಮಾ ಮಾತನಾಡುತ್ತದೆ.

‘ಯಂಗ್ ಅಹ್ಮದ್’

ಜೀನ್ ಪಿಯರೆ ಡಾರ್ಡಿನ್ ಮತ್ತು ಲೂಕ್ ಡಾರ್ಡಿನ್ ಸಹೋದರರ ಬಹು ನಿರೀಕ್ಷಿತ ಸಿನಿಮಾ ‘ಯಂಗ್ ಅಹ್ಮದ್’ ಸುಮಾರು 15 ವರ್ಷದ ಮುಸ್ಲಿಂ ಹುಡುಗನ ಕುರಿತಾದ ಸಿನಿಮಾ. ಫ್ರಾನ್ಸ್‍ನ ಒಂದು ಪಟ್ಟಣದಲ್ಲಿ ಧರ್ಮಗುರುವಿನ ಪ್ರಭಾವದಿಂದ ಖುರಾನ್ ಮತ್ತು ಧಾರ್ಮಿಕತೆಯನ್ನು ಅಕ್ಷರಶಃ ಪಾಲಿಸುವ ಕಾರಣದಿಂದ ಆತ ಮದ್ಯಪಾನ, ಸಾಮಾಜಿಕ ಕೂಟಗಳು, ಆಧುನಿಕ ಫ್ಯಾಶನ್‍ಯುಕ್ತ ವಸ್ತ್ರಗಳ ವಿರುದ್ಧ. ಇಂತಹ ಅಹ್ಮದ್ ಹೊಂದಿದ್ದ ಡಿಸ್‍ಲೆಕ್ಸಿಯಾವನ್ನು ಆತನ ಯಹೂದೀ ಶಿಕ್ಷಕಿ ಸರಿಪಡಿಸುತ್ತಾಳೆ. ಆಕೆ ನಡೆಸುವ ಅರೇಬಿಕ್ ತರಗತಿಗಳ ವಿರುದ್ಧ ಅಹ್ಮದ್‍ನ ಮೌಲ್ವಿ ತೆಗೆದ ತಕರಾರಿನಿಂದ ಆಕೆಯನ್ನು ಕೊಲ್ಲಲು ಹವಣಿಸಿ, ವಿಫಲನಾಗಿ ರಿಮ್ಯಾಂಡ್ ಹೋಂ ಅನ್ನು ಸೇರುತ್ತಾನೆ.

ಅಲ್ಲಿಂದ ಸುಧಾರಣೆಯಾಗಿ ಬಂದರೂ ಪುನಃ ಶಿಕ್ಷಕಿಯ ಮನೆಯ ಮಾಡಿನ ಮೂಲಕ ಪ್ರವೇಶಿಸಿ ದಾಳಿ ನಡೆಸುವ ಸಂದರ್ಭದಲ್ಲಿ ಮಾಡಿನಿಂದ ಬೀಳುತ್ತಾನೆ. ಬಿದ್ದಾಗ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಬಹುಶಃ ಮತೀಯವಾದ ಬ್ರೈನ್‍ವಾಶಿಂಗ್‍ನಿಂದ ಸಂಕುಚಿತವಾದ ಮನೋಸ್ಥಿತಿಯೊಂದು ಹೇಗೆ ರೂಪುಗೊಳ್ಳಬಹುದು, ಅದೇ ಹೊತ್ತಿಗೆ ಅದನ್ನು ಮೀರುವ, ಮೀರಬೇಕಾದ ಮಾನವೀಯ ನೆಲೆಯು ಎಷ್ಟು ಪ್ರಮುಖ ಎಂಬುದನ್ನು ‘ಯಂಗ್ ಅಹ್ಮದ್’ ಮನವರಿಕೆ ಮಾಡುತ್ತದೆ. ಡಾರ್ಡೆನ್ ಬ್ರದರ್ಸ್ ಎಲ್ಲಿಯೂ ಮತೀಯವಾದ ಬ್ರೈನ್ ವಾಶಿಂಗ್ ರೂಪುಗೊಳ್ಳುವ ಸಮಾಜೋ-ರಾಜಕೀಯಾತ್ಮಕ ಸನ್ನಿವೇಶವನ್ನು ವಿವರಿಸದಿದ್ದರೂ ಫ್ರಾನ್ಸ್, ಬೆಲ್ಜಿಯಂ ಮತ್ತು ಯುರೋಪ್‍ನಲ್ಲಿ ಇಂತಹದೊಂದು ದುರಿತ ಅನುಭವವಿರುವುದು ಸತ್ಯವೆಂಬಂತೆ ಸಿನಿಮಾ ಒದಗುತ್ತದೆ.

‘ಆ್ಯಂಡ್ ದೆನ್ ವಿ ಡ್ಯಾನ್ಸ್’

ಮೆರಾಬ್ ಅತ್ಯಂತ ಸಣ್ಣ ವಯಸ್ಸಿನಲ್ಲೇ ಜಾರ್ಜಿಯನ್ ನೃತ್ಯಕೂಟದಲ್ಲಿ ತರಬೇತಿ ಪಡೆದ ಡ್ಯಾನ್ಸರ್. ಆತನ ತಂಡಕ್ಕೆ ಹೊಸಬ ಇರಾಕ್ಲಿ ಬಂದು ಸೇರಿದಾಗ ಇಡೀ ತಂಡದಲ್ಲಿ ಒಂದು ಸ್ಪರ್ಧೆಯ ವಾತಾವರಣ ರೂಪುಗೊಳ್ಳುತ್ತದೆ. ಕ್ರಮೇಣ ಮೆರಾಬ್ ಮತ್ತು ಇರಾಕ್ಲಿ ಪ್ರಖರ ಸ್ಪರ್ಧಿಗಳೂ, ಪ್ರಣಯಿಗಳೂ ಆಗುತ್ತಾರೆ. ಲೆವಾನ್ ಅಕಿನ್ ಎಂಬ ಜಾರ್ಜಿಯಾದ ನಿರ್ದೇಶಕನ ‘ಆ್ಯಂಡ್ ದೆನ್ ವಿ ಡ್ಯಾನ್ಸ್’ ಎಂಬ ಸುಂದರ ಸಿನಿಮಾದ ಸಾರವಿದು.

‘ಲಾರಾ’

ಲಾರಾ ಸುಮಾರು 60ರ ಆಸುಪಾಸಿನ ಜರ್ಮನ್ ಮಹಿಳೆ, ವಿಚ್ಛೇದಿತೆ. ಆಕೆಯ ಮಗ ದೊಡ್ಡ ಪಿಯಾಸಿಸ್ಟ್, ಆಕೆಯ ಪತಿಯ ಜತೆಗಿರುತ್ತಾನೆ. ಮಗನಿಗೆ ಮೊದಲ ಗುರು ಈಕೆಯೇ. ಆಕೆಯ 60ರ ಹುಟ್ಟುಹಬ್ಬದ ದಿನವೇ ಮಗನ ಮೊದಲ ಸಾರ್ವಜನಿಕ ಪ್ರದರ್ಶನ. ಆಕೆಯ ಮಗನ ಆಹ್ವಾನವಿಲ್ಲದಿದ್ದರೂ ಲಾರಾ ಪ್ರದರ್ಶನದ ಅನೇಕ ಉಳಿಕೆ ಟಿಕೆಟ್‍ಗಳನ್ನು ಖರೀದಿಸಿ ತನ್ನ ಆಪ್ತೇಷ್ಠರಿಗೆ ಹಂಚುತ್ತಾಳೆ. ತಾಯಿಯು ಪ್ರದರ್ಶನದಲ್ಲಿರುವುದನ್ನು ನೋಡಿ ಮೊದಲರ್ಧದಲ್ಲಿ ಮಗ ಪಿಯಾನೋ ನುಡಿಸುವುದಿಲ್ಲ. ತಾಯಿ ಲಾರಾ ಇದರಿಂದ ನೊಂದು ಹೊರಗಡೆ ಎದ್ದು ಹೋಗುತ್ತಾಳೆ. ದ್ವಿತೀಯಾರ್ಧದಲ್ಲಿ ಮಗ ಇಡೀ ಗೋಷ್ಠಿಯನ್ನು ತಾಯಿಗೆ ಅರ್ಪಿಸಿ ಪಿಯಾನೋ ನುಡಿಸುತ್ತಾನೆ. ತಾಯಿ ಹೊರಗಿನಿಂದ ಅದನ್ನು ಕೇಳುತ್ತಿರುತ್ತಾಳೆ. ಜಾನ್ ಒಲೆ ಗೆರ್‍ಸ್ಟರ್‍ನ ಜರ್ಮನಿಯ ಸಿನಿಮಾ ‘ಲಾರಾ’ ಗಾಢವಾಗಿ ಪ್ರೇಕ್ಷಕರನ್ನು ಕಾಡುತ್ತದೆ.

‘ಪೋರ್ಟೈಟ್ ಆಫ್ ಲೇಡಿ ಆನ್ ಫೈರ್’

ಫ್ರೆಂಚ್ ನಿರ್ದೇಶಕಿ ಸೆಲಿನ್ ಸಿಯಾಮಾ ಅವರ, ‘ಪೋರ್ಟೈಟ್ ಆಫ್ ಲೇಡಿ ಆನ್ ಫೈರ್’, ಈ ಬಾರಿಯ ಕಾನ್ ಚಿತ್ರೋತ್ಸವದಲ್ಲಿ ಬಹುತೇಕ ಪ್ರಶಸ್ತಿಯ ಕೊನೆಯ ಹಂತದವರೆಗೆ ಪೈಪೋಟಿ ನೀಡಿ ಚರ್ಚಿತವಾಗಿದ್ದ ಸಿನಿಮಾ. ಸುಮಾರು 1770ರ ಫ್ರಾನ್ಸ್‍ನಲ್ಲಿ ವಧುವಾಗಬೇಕಿದ್ದ ಶ್ರೀಮಂತ ಮನೆಯ ಹೆಣ್ಣುಮಗಳಾದ ಹೆಲೋಯಿಸ್‍ಳ ಭಾವಚಿತ್ರವನ್ನು ರಚಿಸಲು ಬರುವ ಪೈಂಟರ್ ಮೆರಿಯನ್ ಅವಳ ಅರಿವಿಗೆ ಬಾರದಂತೆ ಆಕೆಯ ಚಿತ್ರ ರಚಿಸಬೇಕಾಗುತ್ತದೆ. ಕ್ರಮೇಣ ಇಬ್ಬರು ಅನುರಕ್ತರಾಗುತ್ತಾರೆ. ಚಿತ್ರದ ವಸ್ತು ಅತ್ಯಂತ ಅನನ್ಯವಲ್ಲದಿದ್ದರೂ ಚಿತ್ರ ನಿರ್ಮಾಣ (ಮೇಕಿಂಗ್) ವಿಶೇಷವಾಗಿ ಫೋಟೋಗ್ರಫಿಯಂತೂ ಅತ್ಯದ್ಭುತವಾಗಿದೆ. ಪ್ರತೀ ಫ್ರೇಮ್ ಒಂದು ಪೋರ್ಟೈಟ್‍ನಂತಿದ್ದು ಪೈಂಟಿಂಗ್‍ನಂತಿದೆ.

‘ಸೋ ಲಾಂಗ್ ಮೈ ಸನ್’

ಚೈನಾದ ನಿರ್ದೇಶಕ ವಾಂಗ್ ಶಿಯಾವೋಶುವಾಯಿಯ, ‘ಸೋ ಲಾಂಗ್ ಮೈ ಸನ್’ ಸಿನಿಮಾ ಚೈನಾದಲ್ಲಿ ಸುಮಾರು ಮೂರು ದಶಕಗಳಲ್ಲಿ ಎರಡು ಕುಟುಂಬಗಳಲ್ಲಿ ಉಂಟಾದ ತಲ್ಲಣವನ್ನು ಆಧರಿಸಿದೆ. ಒಂದು ಕುಟುಂಬದಲ್ಲಿ ಮಗುವೊಂದನ್ನು ಕಳೆದುಕೊಂಡ ನಂತರ ಈ ಎರಡು ಕುಟುಂಬಗಳು ಬೇಸರ ಪಡುತ್ತವೆ. ಕಮ್ಯುನಿಸ್ಟ್ ಚೈನಾದ ಜನಸಂಖ್ಯಾ ನೀತಿ, ಪಾರ್ಟಿ ರಾಜಕಾರಣದ ಅತಿರೇಕ, ಸಣ್ಣತನಗಳನ್ನು ಕೂಡಾ ಸಿನಿಮಾ ಗಂಭೀರವಾಗಿ ತರಾಟೆಗೆ ತೆಗೆದುಕೊಳ್ಳುತ್ತದೆ. ಕಮ್ಯುನಿಸ್ಟ್ ಸರ್ಕಾರವಿದ್ದಾಗ್ಯೂ ತೀರದ ಬಂಡವಾಳಶಾಹೀಯಾಗುವ ಧಾವಂತದ ಚೈನಾದ ರಾಜ್ಯ ವ್ಯವಸ್ಥೆಯು ಅತ್ಯಂತ ವ್ಯಕ್ತಿಗತವಾಗಿ ತನ್ನ ಪ್ರಜೆಗಳ ಬದುಕನ್ನು ನಿಯಂತ್ರಿಸುವುದರ ವಿರುದ್ಧ ತಣ್ಣಗಿನ ಪ್ರತಿಭಟನೆಯನ್ನೂ ನಡೆಸುತ್ತದೆ.

ಚೈನಾ ಸರ್ಕಾರದಿಂದ ಹಣಕಾಸಿನ ನೆರವನ್ನು ಪಡೆದಿದ್ದಾಗ್ಯೂ ಈ ಪಾಟಿ ಪ್ರತಿರೋಧವನ್ನು ತೋರುವ ಗುಣ, ಈ ಸಿನಿಮಾದ ಹೆಗ್ಗಳಿಕೆ ಕೂಡಾ ಆಗಿದೆ. ಇದೇ ಹೊತ್ತಿಗೆ ಉಭಯ ಕುಟುಂಬಗಳು ವಿಘಟಿತವಾಗಿ ಅನೇಕ ವರ್ಷಗಳ ನಂತರ ಪುನಃ ಕೂಡಿಕೊಳ್ಳುವ ಪ್ರಯತ್ನ (ರಿಕನ್ಶಿಲಿಯೇಶನ್) ಕೂಡಾ ಮಹತ್ವದ್ದಾಗಿ ಈ ರೀತಿಯ ಪ್ರಭುತ್ವ ಪೀಡಿತ ಸಮುದಾಯಗಳು ಅರಸುವ ಆಶಾವಾದದಂತೆ ಕಾಣಿಸುತ್ತದೆ.

‘ದಿ ಫಾದರ್’

ಕ್ರಿಸ್ತಿನಾ ಗೊಜೇವಾ ಮತ್ತು ಪೀಟರ್ ವಲ್ಲನೋವ್ ನಿರ್ದೇಶನದ ಜಾಜಿಯಾದ ‘ದಿ ಫಾದರ್’ ಚಿತ್ರೋತ್ಸವದ ಮತ್ತೊಂದು ಆಕರ್ಷಕ ಸಿನಿಮಾ. ಅತ್ಯಂತ ಹಿರಿಯ ಚಿತ್ರಕಾರ ತನ್ನ ಹೆಂಡತಿಯ ಸಾವಿನ ನಂತರ, ಆಕೆಯು ಮೊಬೈಲ್ ಫೋನ್ ಮೂಲಕ ತನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಳೆ ಎಂಬ ನಂಬಿಕೆಯಿಂದ ಸತ್ತ ಚೈತನ್ಯಗಳನ್ನು ಸಂಪರ್ಕಿಸುತ್ತೇನೆ ಎಂದು ನಂಬಿಸುವ ಒಬ್ಬ ತಂತ್ರಗಾರನ ಮೊರೆ ಹೋಗುತ್ತಾನೆ. ಮಗ ತಂದೆಯನ್ನು ವಾಪಸ್ ತರಲು ವಹಿಸುವ ಶ್ರಮ ಮತ್ತು ಮಗುವಂತಾದ ತಂದೆಯ ವಿವಿಧ ರಂಪಗಳನ್ನು ಸಹಿಸುವ ತೋಟಿಯೇ ‘ದಿ ಫಾದರ್’ ಸಿನಿಮಾ.

‘ಬಕುರಾವ್’

ಈ ವರ್ಷದ ಕಾನ್ ಚಿತ್ರೋತ್ಸವದಲ್ಲಿ ಜ್ಯೂರಿ ಪ್ರೈಝ್ ಪ್ರಶಸ್ತಿ ಪಡೆದ ಸಿನಿಮಾ ‘ಬಕುರಾವ್’ ಪ್ರಶಸ್ತಿಗೆ ಅತ್ಯಂತ ಯೋಗ್ಯಚಿತ್ರವೆಂದು ಅದರ ವೀಕ್ಷಣೆಯಿಂದ ಮನವರಿಕೆಯಾಯಿತು. ಬ್ರೆಝೆಲ್‍ನ ಒಂದು ಸಣ್ಣ ಪಟ್ಟಣ ಬಕುರಾವ್‍ನಲ್ಲಿ ನಡೆಯುವ ಈ ಕಥಾನಕ ಅಮೆರಿಕೆಯ ಭೌತಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಸಾಮ್ರಾಜ್ಯಶಾಹಿಯ ವಿರುದ್ಧ ಮಾಡಿರುವ ಬಲಿಷ್ಠವಾದ ರಾಜಕೀಯ ಹೇಳಿಕೆಯಂತೆಯೇ ಕಂಡುಬರುತ್ತದೆ.

ಬಕುರಾವು ಒಂದು ವಿಶ್ವಾತ್ಮಕವಾದ ಜನಾಂಗೀಯ, ಭಾಷಿಕ, ಸಮುದಾಯಗಳ ಪ್ರತಿನಿಧಿತ್ವ ಸಾಧಿಸಿದ ಹಳ್ಳಿ. ಇಂತಹ ಹಳ್ಳಿಯ ಸಾಕ್ಷಿ ಪ್ರಜ್ಞೆಯಂತಿದ್ದ ಅಜ್ಜಿ ಕಾರ್ಮೆಲಿಟಾ ಸತ್ತಾಗ ಸೇರಿದ ಮಂದಿಯ ದುಃಖ ನಿಧಾನವಾಗಿ ಕಳೆದಾಗ ಭೂಪಟದಲ್ಲಿ ಹಳ್ಳಿ ನಾಪತ್ತೆಯಾಗಿರುವುದು ತಿಳಿಯುತ್ತದೆ. ಇದಾದ ಸ್ವಲ್ಪ ದಿನಗಳಲ್ಲಿ ಅಮೆರಿಕೆ ಪ್ರಾಯೋಜಿತ ದುಷ್ಟರ ತಂಡ ಹಳ್ಳಿಯ ನೀರು, ಖನಿಜ, ಭೂಮಿಯನ್ನು ನುಂಗಿ ಮಾರಲು ಹಳ್ಳಿಯನ್ನೇ, ಅಲ್ಲಿನ ಜನರನ್ನು ಸಮೂಹ ನಾಶ ಮಾಡಲು ಮಾಡುವ ಪ್ರಯತ್ನವನ್ನು ಅತ್ಯಂತ ಜೈವಿಕವೆಂಬಂತೆ ಹಳ್ಳಿ ಎದುರುಗೊಂಡು ವಿಫಲವಾಗಿಸುವ ರೂಪಕವೇ ಬಕುರಾವು.

ಕ್ಲೆಬೆರ್ ಮೆಂಡೋನ್ಸಾ ಫಿಲೋ ಮತ್ತು ಜೂಲಿಯಾನೇ ಡೋರ್ನೆಲ್ಲಿಸ್ ಜಂಟಿ ನಿರ್ದೇಶನದ ಈ ಸಿನಿಮಾ, ಒಂದು ಸಹಜ ಕುತೂಹಲದ ಥ್ರಿಲ್ಲರ್ ರೀತಿ ಕಂಡರೂ ಬ್ರೆಝಿಲ್‍ನ ಸಮಾಜೋ-ರಾಜಕೀಯಾತ್ಮಕ ಕಥನದ ರೀತಿಯಲ್ಲಿ ಕಂಡು ಬಲಿಷ್ಠವಾದ ರಾಜಕೀಯ ನಾಟಕದಂತೆಯೂ ಒದಗುತ್ತದೆ. ಒಂದು ವಿಚಿತ್ರ ನೆಲೆಯ ಟ್ರೌಮಾ ಮತ್ತು ನಗುವಿನ ಮಿಶ್ರಣದಿಂದಾಗಿ ನಮಗೆ ಲ್ಯಾಟಿನ್ ಅಮೆರಿಕಾದ ಇನ್ನೊಬ್ಬ ಪ್ರತಿಭಾವಂತ ನಿರ್ದೇಶಕ ಅಲೆಜಾಂಡ್ರೊ ಜಡರೋವಸ್ಕಿಯನ್ನು ನೆನಪಿಸುತ್ತದೆ.

‘ಇಟ್ ಮಸ್ಟ್ ಬಿ ಹೆವನ್’

ಸಮಕಾಲೀನ ಸಂದರ್ಭದ ಪ್ಯಾಲಿಸ್ತೀನಿನ ಅಭಿಜಾತ ನಿರ್ದೇಶಕ ಎಲಿಯಾ ಸುಲೇಮಾನ್‍ನ, ‘ಇಟ್ ಮಸ್ಟ್ ಬಿ ಹೆವನ್’ ಫೆಸ್ಟಿವಲ್‍ನ ಒಂದು ಗಣನೀಯ ಸಿನಿಮಾ. ಚಿತ್ರದ ಮುಂಚೂಣಿ ಪಾತ್ರ (ಪ್ರೊಟಗನಿಸ್ಟ್)ವಾಗಿ ಸ್ವತಃ ನಿರ್ದೇಶಕ ಸುಲೇಮಾನ್‍ನೇ ತನ್ನ ನೂತನ ಚಿತ್ರದ ಉತ್ಪಾದನೆಗಾಗಿ ಫ್ರಾನ್ಸ್ ಮತ್ತು ಅಮೆರಿಕೆಯ ಚಿತ್ರ ನಿರ್ಮಾಣದ ಕಂಪೆನಿಗಳನ್ನು ಸಂದರ್ಶಿಸಲು ಪ್ರವಾಸ ಹೋಗುತ್ತಾನೆ. ಅನೇಕ ಚದುರಿದ ಹಾಸ್ಯ ಪ್ರಸಂಗಗಳ ಸಹಿತ ಸ್ವತಃ ಸುಲೇಮಾನ್ ಪ್ಯಾಲಿಸ್ತೀನ್ ಪ್ರತಿನಿಧಿಯಾಗಿ ತನ್ನ ಕ್ಯಾಮೆರಾ ಅಥವಾ ಅದನ್ನು ಡೈರೆಕ್ಟರ್ಸ್ ಗೇಝ್ ಎಂದು ಕರೆಯಬಹುದಾದ ಫ್ರೇಂ, ಚೌಕಟ್ಟು ಮತ್ತು ದೃಷ್ಟಿಯ ಮೂಲಕ ಜಗತ್ತನ್ನು ನೋಡುತ್ತಾನೆ.

ಒಂದು ರೀತಿ ಸಾಮಾನ್ಯ ಕ್ಲೌನ್ ರೀತಿಯಲ್ಲಿ ಫ್ರೆಂಚ್ ಸಿನಿಮಾ ನಿರ್ದೇಶಕ ಜಾಕೆಸ್ ತತಿ ಹಾಗೂ ಬಸ್ಟರ್ ಕೀಟನ್‍ನ ಎರಕದಂತೆ ಎಲ್ಲಿಯೂ ತೀರಾ ಮಾತನಾಡದೆ ಒಂದು ರೀತಿಯ ಸಟೈರಿಕಲ್ ಮೌನವನ್ನು ತಾಳುತ್ತಾ ಹೋಗುತ್ತದೆ. ಅದೇ ಹೊತ್ತಿಗೆ ಅತ್ಯಂತ ಸೂಕ್ಷ್ಮವಾದ ವೀಕ್ಷಣೆ ಮತ್ತು ಅವಲೋಕನವನ್ನು ನಡೆಸುತ್ತದೆ. ಇಂತಹ ಅವಲೋಕನ ಪ್ಯಾಲಿಸ್ತೀನ್ ಮತ್ತು ಜಗತ್ತು ಪ್ರತಿನಿಧಿತಗೊಂಡ ಸಾಂಸ್ಕೃತಿಕ ಮತ್ತು ನಾಗರಿಕತಾತ್ಮಕ ವೈರುಧ್ಯದ ಧ್ರುವ, ಸಂಘರ್ಷ ಮತ್ತದರ ವೈವಿಧ್ಯದ ಸ್ವರೂಪವನ್ನು ನಮಗೆ ಮನಗಾಣಿಸುತ್ತದೆ. ಇದೇ ಹೊತ್ತಿಗೆ ಒಂದು ವಿಶಿಷ್ಟವಾದ ಭೌಗೋಳಿಕ, ಜನಾಂಗೀಯ ಮತ್ತು ನಾಗರಿಕತಾತ್ಮಕವಾದ ಪ್ಯಾಲಿಸ್ತೀನಿನ ಅಸ್ಮಿತೆಯನ್ನು ಎಳೆಎಳೆಯಾಗಿ ಜಗತ್ತಿಗೆ ಮನವರಿಕೆ ಮಾಡುತ್ತದೆ. ಇಡೀ ಸಿನಿಮಾದ ಮೇಕಿಂಗ್ ಕೂಡಾ ಗಮನಾರ್ಹ. ಒಂದು ರೀತಿಯ ನೃತ್ಯೀಯ ಅಸಂಗತ ಮಾದರಿಯಲ್ಲಿ ಸುಲೇಮಾನ್ ದೃಶ್ಯಗಳನ್ನು ಕಟ್ಟುತ್ತಾ ಹೋಗುತ್ತಾನೆ.

*ಸಿನಿಮಾ, ಚರಿತ್ರೆ, ರಾಜಕೀಯ ತತ್ವಶಾಸ್ತ್ರ, ಚಿತ್ರಕತೆ ರಚನೆ ಲೇಖಕರ ಆಸಕ್ತಿಯ ಕ್ಷೇತ್ರಗಳು. ಸಿನಿಮಾ ರಸಗ್ರಹಣ ಕುರಿತು ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಶಿಕ್ಷಣ. ಪ್ರಸ್ತುತ ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚರಿತ್ರೆ ಉಪನ್ಯಾಸಕರು.

Leave a Reply

Your email address will not be published.