ಗ್ರೇಟಾ ಥನ್ಬರ್ಗ್ ಹಂಚಿಕೊಂಡ ಟೂಲ್ ಕಿಟ್ ತನಿಖೆ ನಡೆಸುತ್ತಿರುವುದೇಕೆ?

-ಮಲ್ಲಿಕಾ ಜೋಷಿ

ಅನುವಾದ: ನಾ ದಿವಾಕರ

ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಶೇರ್ ಮಾಡಿರುವ ಟೂಲ್ ಕಿಟ್ ವಿರುದ್ಧ ದೆಹಲಿಯ ಸೈಬರ್ ಅಪರಾಧ ಪಡೆಯ ಪೊಲೀಸರು ರಾಜದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷ ಹರಡುವ ಆರೋಪಗಳನ್ನು ಹೊರಿಸಿ ಎಫ್‍ಐಆರ್ ದಾಖಲಿಸಿದ್ದಾರೆ. ಈ ಎಫ್‍ಐಆರ್‍ನಲ್ಲಿ ಯಾವುದೇ ವ್ಯಕ್ತಿಯನ್ನು ಹೆಸರಿಸಿಲ್ಲವಾದರೂ, ವಿಶೇಷ ಕ್ರೈಂಬ್ರಾಂಚಿನ ಅಧಿಕಾರಿ ಪ್ರವೀರ್ ರಂಜನ್ ಹೇಳಿರುವಂತೆ, ಈ ಟೂಲ್ ಕಿಟ್ ಸಿದ್ಧಪಡಿಸುವಲ್ಲಿ ಪೊಯೆಟಿಕ್ ಜಸ್ಟಿಸ್ ಫೌಂಡೇಷನ್ ಎಂಬ ಸಂಸ್ಥೆ ಸಕ್ರಿಯವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದು ಖಾಲಿಸ್ತಾನ್ ಪರ ಸಂಘಟನೆ ಎಂಬ ಆರೋಪವೂ ಇದೆ.

ಟೂಲ್ ಕಿಟ್ ಎಂದರೇನು?

ಟೂಲ್ ಕಿಟ್ ಎಂದರೆ ಯಾವುದೇ ಒಂದು ಕಾರ್ಯ ನಿರ್ವಹಿಸಲು ಅನುಕರಣೀಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಒದಗಿಸುವ ಒಂದು ವಿಧಾನ. ಇದು ಉದ್ದೇಶಿತ ಕಾರ್ಯವನ್ನು ಅವಲಂಬಿಸಿ ವಿಭಿನ್ನ ಅಂಶಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಭಾರತ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಪ್ರವರ್ತನ ವಿಭಾಗ ತನ್ನದೇ ಆದ ಟೂಲ್ ಕಿಟ್ ಹೊಂದಿದ್ದು ಇದರಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಜಾರಿಗೊಳಿಸುವ ಬಗ್ಗೆ ಮಾರ್ಗದರ್ಶಿ ಸೂತ್ರಗಳಿರುತ್ತವೆ. ಈ ಹಕ್ಕುಗಳ ಉಲ್ಲಂಘನೆಯಾದಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನಗಳಿರುತ್ತವೆ, ಜೊತೆಗೆ ಅನ್ವಯಿಸಬಹುದಾದ ಕಾನೂನುಗಳು, ನಕಲಿ ಮತ್ತು ಸ್ವಾಮ್ಯಚೌರ್ಯದ ವ್ಯಾಖ್ಯಾನ ಇತ್ಯಾದಿಗಳು ಇರುತ್ತವೆ.

ಅಮೆರಿಕನ್ ಅಸೋಸಿಯೇಷನ್‍ನ ಒಂದು ಭಾಗವಾಗಿರುವ ಯಂಗ್ ಅಡಲ್ಟ್ ಲೈಬ್ರರಿ ಸರ್ವೀಸಸ್ ಅಸೋಸಿಯೇಷನ್ ಎಂಬ ಸಂಘಟನೆ ಹಲವು ಟೂಲ್ ಕಿಟ್‍ಗಳನ್ನು ಆನ್‍ಲೈನ್ ಮೂಲಕವೇ ಪ್ರಕಟಿಸಿದ್ದು ದಕ್ಷ ಗ್ರಂಥಾಲಯ ವ್ಯವಸ್ಥೆ ಮತ್ತು ಯುವ ಜನತೆಯೊಡನೆ ಕಾರ್ಯನಿರ್ವಹಣೆಯ ಬಗ್ಗೆ ಸಲಹೆ, ಮಾರ್ಗದರ್ಶನ ನೀಡುತ್ತದೆ.

ಮುಷ್ಕರಗಳ ಸಂದರ್ಭದಲ್ಲಿ ಟೂಲ್‍ಕಿಟ್‍ಗಳು ಸಾಮಾನ್ಯವಾಗಿ ಪ್ರತಿಭಟನೆಯ ಸ್ವರೂಪ, ಸಂದರ್ಭ, ಸುದ್ದಿ ಮಾಹಿತಿಯ ಕೊಂಡಿಗಳು, ಮೂಲಗಳು ಮತ್ತು ಪ್ರತಿಭಟನೆಯ ವಿಧಾನಗಳನ್ನು ಹೊಂದಿರುತ್ತವೆ. ಇದರಲ್ಲಿ ಸಾಮಾಜಿಕ ಮಾಧ್ಯಮಗಳೂ ಉಲ್ಲೇಖವಾಗಿರುತ್ತವೆ.

ಟೂಲ್‍ಕಿಟ್‍ಗಳ ಪ್ರಾಮುಖ್ಯ?

ಟೂಲ್ ಕಿಟ್‍ಗಳು ಹಲವು ದಶಕಗಳಿಂದಲೂ ಪ್ರಚಲಿತವಾಗಿವೆ. ಸಾಮಾಜಿಕ ಮಾಧ್ಯಮಗಳು ಜನತೆಗೆ ಸುಲಭವಾಗಿ ಕೈಗೆಟುಕುತ್ತಿರುವ ಹಿನ್ನೆಲೆಯಲ್ಲಿ ಇದು ಇಂದು ಹೆಚ್ಚು ಜನಪ್ರಿಯವಾಗಿದ್ದು ಕಳೆದ ಹಲವು ವರ್ಷಗಳಲ್ಲಿ ಹೆಚ್ಚು ಬಳಕೆಯಾಗುತ್ತಿವೆ. 2011ರಲ್ಲಿ ಅಮೆರಿಕದಲ್ಲಿ ನಡೆದ ವಾಲ್ ಸ್ಟ್ರೀಟ್ ಆಕ್ರಮಿಸಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲೂ, 2019ರ ಹಾಂಕಾಂಗ್ ಪ್ರತಿಭಟನೆಯಲ್ಲಿ, ಹಲವು ಪರಿಸರ ಹೋರಾಟಗಳಲ್ಲಿ ಟೂಲ್ ಕಿಟ್ ಬಳಕೆಯಾಗಿದೆ. ಭಾರತದಲ್ಲೂ ಸಿಎಎ ವಿರೋಧಿ ಹೋರಾಟದಲ್ಲಿ ಟೂಲ್ ಕಿಟ್ ಬಳಕೆಯಾಗಿತ್ತು. ಇತ್ತೀಚೆಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರದಲ್ಲೂ ಬಳಕೆಯಾಗಿದೆ.

ಹಾಂಕಾಂಗ್ ಪ್ರತಿಭಟನೆಯ ಸಂದರ್ಭದಲ್ಲಿ ಟೂಲ್ ಕಿಟ್‍ಗಳ ಮೂಲಕ ಮುಷ್ಕರ ನಿರತರಿಗೆ, ಗುರುತು ಹಿಡಿಯಲಾರದಂತೆ ಮಾಡಲು ಮತ್ತು ಅಶ್ರುವಾಯುವಿನಿಂದ ಪಾರಾಗಲು, ಮಾಸ್ಕ್ ಮತ್ತು ಹೆಲ್ಮೆಟ್ ಧರಿಸಲು ಸಲಹೆ ನೀಡಲಾಗಿತ್ತು. ಸಿಎಎ ವಿರೋಧಿ ಹೋರಾಟದಲ್ಲಿ ಟೂಲ್ ಕಿಟ್ ಮೂಲಕ ಟ್ವಿಟರ್ ಹ್ಯಾಷ್ ಟ್ಯಾಗ್ ಬಳಸುವುದಕ್ಕೆ, ಯಾವ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಬೇಕು ಎಂದು ತಿಳಿಸಲು, ಏನು ಮಾಡಬೇಕು, ಪೊಲೀಸರು ಬಂಧಿಸಿದರೆ ಯಾವ ದಾಖಲೆ ಒದಗಿಸಬೇಕು ಇಂತಹ ಹಲವು ವಿಚಾರಗಳನ್ನು ವಾಟ್ಸ್ ಆಪ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುವಂತೆ ಟೂಲ್ ಕಿಟ್‍ಗಳಲ್ಲಿ ಮಾರ್ಗದರ್ಶನ ನೀಡಲಾಗಿತ್ತು.

ಗ್ರೇಟಾ ಥನ್‍ಬರ್ಗ್ ಟ್ವೀಟ್

18 ವರ್ಷದ ಗ್ರೇಟಾ ಟ್ವಿಟರ್ ಮೂಲಕ ಹಂಚಿಕೊಂಡಿರುವ ಟೂಲ್ ಕಿಟ್ ಭಾರತದಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಸಂಬಂಧಿಸಿದ್ದಾಗಿದೆ. ದೆಹಲಿಯ ಸುತ್ತ ಮುತ್ತ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸುತ್ತಿರುವುದರ ಬಗ್ಗೆ ಸಿಎನ್‍ಎನ್ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದನ್ನು ಕುರಿತು ಪಾಪ್ ಗಾಯಕಿ ರಿಯಾನ್ನಾ ಟ್ವೀಟ್ ಮಾಡಿದ್ದ ಬೆನ್ನಲ್ಲೇ ಈ ಪ್ರಕರಣವೂ ದಾಖಲಾಗಿದೆ. ನಂತರ ಥನ್‍ಬರ್ಗ್ ಟ್ವೀಟ್ ಮಾಡಿದ್ದ ಟೂಲ್‍ಕಿಟ್ ಅಳಿಸಿಹಾಕಲಾಗಿದ್ದು, ಇದನ್ನು ಭಾರತದಲ್ಲಿರುವ ಹೋರಾಟಗಾರರು ನಿರ್ವಹಿಸುತ್ತಿದ್ದಾರೆ ಎಂದು ಗ್ರೇಟಾ ಹೇಳಿದ್ದಾರೆ.

ಈ ಅಳಿಸಿಹಾಕಲಾದ ಟೂಲ್ ಕಿಟ್‍ನಲ್ಲಿ ಉಪ ವಿಭಾಗಗಳಿದ್ದು ಇದರಲ್ಲಿ ತುರ್ತು ಕ್ರಿಯೆಗಳು, ಹಿಂದೆ ಕೈಗೊಂಡ ಕಾರ್ಯಕ್ರಮಗಳು ಮತ್ತು ನೀವು ಹೇಗೆ ನೆರವಾಗಬಹುದು ಎನ್ನುವ ವಿಚಾರಗಳು ಒಳಪಟ್ಟಿವೆ.

ತುರ್ತು ಕ್ರಿಯೆಗಳ ವಿಭಾಗದಲ್ಲಿ ಆಸಕ್ತಿ ಇರುವವರು ಟ್ವಿಟರ್ ಸ್ಟಾರ್ಮ್ ಆರಂಭಿಸಬಹುದು ಎಂದು ಸಲಹೆ ನೀಡಲಾಗಿದ್ದು, ಫೆಬ್ರವರಿ 4 ಮತ್ತು 5 ರಂದು ಇದನ್ನು ಆರಂಭಿಸಿ ಐಕಮತ್ಯ ಪ್ರದರ್ಶಿಸಲು ಫೋಟೋ ಅಥವಾ ವಿಡಿಯೋಗಳನ್ನು sಛಿಡಿಚಿಠಿಜಿಚಿಡಿmಚಿಛಿಣs@gmಚಿiಟ.ಛಿom ಗೆ ಮೇಲ್ ಮಾಡುವಂತೆಯೂ, ಸರ್ಕಾರದ ಪ್ರತಿನಿಧಿಗಳಿಗೆ ದೂರವಾಣಿ ಕರೆ ಅಥವಾ ಇ ಮೇಲ್ ಮಾಡುವಂತೆಯೂ, ಏಕಸ್ವಾಮ್ಯ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಯವರಿಂದ ಕಸಿದುಕೊಳ್ಳುವಂತೆಯೂ, ತಳಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವಂತೆಯೂ, ಭಾರತದ ರಾಯಭಾರ ಕಚೇರಿಯ ಬಳಿ ಪ್ರತಿಭಟನೆ ನಡೆಸುವಂತೆಯೂ, ಮಾಧ್ಯಮ ಕಚೇರಿಗಳ ಬಳಿ, ಸ್ಥಳೀಯ ಸರ್ಕಾರಿ ಕಚೇರಿಗಳ ಬಳಿ ಪ್ರತಿಭಟನೆ ನಡೆಸುವಂತೆಯೂ, ಈ ಎಲ್ಲ ಕಾರ್ಯಕ್ರಮಗಳನ್ನು ಫೆಬ್ರವರಿ 13-14ರಂದು ನಡೆಸುವಂತೆಯೂ ಕರೆ ನೀಡಲಾಗಿದೆ.

ಈ ಟೂಲ್‍ಕಿಟ್‍ನಲ್ಲಿ ಐದು ಸಂಪರ್ಕ ಕೊಂಡಿಗಳಿವೆ. ಹೆಚ್ಚಿನ ಮಾಹಿತಿ-ಪ್ರಮುಖ ಸಂಪರ್ಕ ಕೊಂಡಿಗಳು ಎನ್ನುವ ವಿಭಾಗ ಇನ್ನೂ ಕಾರ್ಯ ನಿರ್ವಹಿಸುತ್ತಿದೆ. ಮತ್ತೊಂದು ಸಂಪರ್ಕ ಕೊಂಡಿಯು ಪ್ರತಿಭಟನೆ ನಡೆಸುವ ಬಗ್ಗೆ, ದೇಣಿಗೆ ಸಂಗ್ರಹಿಸುವ ಬಗ್ಗೆ, ರೈತರ ಮುಷ್ಕರಕ್ಕೆ ಬೆಂಬಲಿಸಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಬಗ್ಗೆ ಮಾಹಿತಿ ಒದಗಿಸುವ ವೆಬ್ ತಾಣಕ್ಕೆ ಸಂಪರ್ಕ ಸಾಧಿಸುತ್ತದೆ. ಈ ವೆಬ್ ತಾಣದ ಮೂಲ ಮಾಹಿತಿಯಲ್ಲಿ “ಭಾರತದ ಕೃಷಿ ಸಮುದಾಯವನ್ನು ಬಾಧಿಸುತ್ತಿರುವ ಸಾಮಾಜಿಕ ನ್ಯಾಯದ ವಿಚಾರಗಳ ಬಗ್ಗೆ ಅಮೆರಿಕ, ಬ್ರಿಟನ್ ಮತ್ತು ಕೆನಡಾದ ವ್ಯಕ್ತಿಗಳನ್ನೊಳಗೊಂಡ ಸ್ವಯಂ ಸೇವಕ ಗುಂಪುಗಳಾದ ನಾವು ಅನುಕಂಪ ಹೊಂದಿದ್ದೇವೆ. ನಮ್ಮ ಹಿರೀಕರಿಂದ, ಸೋದರ ಸೋದರಿಯರಿಂದ ದೂರ ಇರುವ ನಾವು ಅವರು ಭೂಮಿಯ ಸ್ವಾಯತ್ತತೆಗಾಗಿ ಹೋರಾಡುತ್ತಿರುವುದನ್ನು ಕಂಡು ಚಿಂತಿತರಾಗಿದ್ದೇವೆ” ಎಂದು ಹೇಳಲಾಗಿದೆ.

ಮತ್ತೊಂದು ವೆಬ್ ತಾಣದ ಸಂಪರ್ಕ ಕೊಂಡಿಯು “ಮಾಹಿತಿ, ಬರಹ ಮತ್ತು ತಂತ್ರಜ್ಞಾನದ ಮೂಲಕ ಸ್ವಾತಂತ್ರ್ಯವನ್ನು ಕುರಿತಂತೆ ಭೌಗೋಳಿಕ ರಾಜಕಾರಣ ಮತ್ತು ಚಿಂತನೆಗಳನ್ನು ಪಸರಿಸುವ ಡಿಜಿಟಲ್ ವೇದಿಕೆ” ಎಂದು ಬಣ್ಣಿಸಲ್ಪಟ್ಟಿದೆ. ಈ ಕೊಂಡಿಯನ್ನು ಅನುಸರಿಸಿದರೆ ಒಂದು ಪುಟದಲ್ಲಿ “ನಾನು ಅಂಬಾನಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಹೊಂದಿದ್ದೇನೆಯೇ” ಎಂಬ ಪ್ರಶ್ನೆ ಉಲ್ಲೇಖವಾಗಿದೆ. ಇದರಲ್ಲಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯವರ ಉಲ್ಲೇಖವಿದೆ.  ಕೃಷಿ ಮಸೂದೆ ವಿರೋಧಿ ಸುದ್ದಿ ಪತ್ರಿಕೆಗೆ ಸಂಬಂಧಿಸಿದ ಕೊಂಡಿಯೂ ಇಲ್ಲಿ ಲಭ್ಯವಿದ್ದು, ನವಂಬರ್‍ನಿಂದ ಈವರೆಗೆ ಮುಷ್ಕರದ ನಡುವೆ ಮಡಿದಿರುವ ರೈತರ ಸಂಖ್ಯೆಗಳೂ ಇಲ್ಲಿ ಉಲ್ಲೇಖವಾಗಿದೆ.

ಮುನ್ನೆಚ್ಚರಿಕೆ ಚಟುವಟಿಕೆಗಳ ವಿಭಾಗದ ಟೂಲ್ ಕಿಟ್‍ನಲ್ಲಿ ಮೇಲೆ ಉಲ್ಲೇಖಿಸಲಾದ ಇ-ಮೇಲ್ ವಿಳಾಸಕ್ಕೆ ಐಕಮತ್ಯ ಪ್ರದರ್ಶಿಸುವ ಫೋಟೋ ಮತ್ತು ವಿಡಿಯೋಗಳನ್ನು ರವಾನಿಸುವುದು, ಜನವರಿ 25ರ ಒಳಗೆ ಇದನ್ನು ಕಳಿಸುವಂತೆಯೂ, ಜನವರಿ 23ಕ್ಕೆ ಟ್ವಿಟರ್ ದಾಳಿ ನಡೆಸುವಂತೆಯೂ, ಜನವರಿ 26ರಂದು ಭಾರತದ ರಾಯಭಾರಿ ಕಚೇರಿಯ ಮುಂದೆ, ಸರ್ಕಾರಿ ಕಚೇರಿಗಳ ಮುಂದೆ, ಮಾಧ್ಯಮಗಳ ಕಚೇರಿಗಳ ಮುಂದೆ, ಅಂಬಾನಿ ಮತ್ತು ಅದಾನಿಯವರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವಂತೆಯೂ ಮಾರ್ಗದರ್ಶನ ನೀಡಲಾಗಿದೆ. ಈ ವಿಭಾಗವನ್ನು ಉಲ್ಲೇಖಿಸುವ ಮೂಲಕವೇ ಪೊಲೀಸರು ಜನವರಿ 26ರ ಗಲಭೆಗಳು ಪೂರ್ವ ನಿಯೋಜಿತವಾಗಿದ್ದವು, ಪಿತೂರಿಯ ಒಂದು ಭಾಗವಾಗಿತ್ತು ಎಂದು ಆರೋಪಿಸುತ್ತಿದ್ದಾರೆ.

ಬುಧವಾರ ತಡರಾತ್ರಿಯ ವೇಳೆಗೆ ಥನ್‍ಬರ್ಗ್ ಮತ್ತೊಂದು ಸಂಕ್ಷಿಪ್ತ ಟೂಲ್‍ಕಿಟ್ ಒಂದನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಈ ಟೂಲ್ ಕಿಟ್‍ನಲ್ಲಿ “ಭಾರತದಲ್ಲಿ ನಡೆಯುತ್ತಿರುವ ರೈತ ಮುಷ್ಕರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದವರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಮತ್ತು ಸ್ಪಷ್ಟತೆ ನೀಡುವ ನಿಟ್ಟಿನಲ್ಲಿ,

ಪರಿಸ್ಥಿತಿಯನ್ನು ಗ್ರಹಿಸುವ ನಿಟ್ಟಿನಲ್ಲಿ ಹಾಗೂ ತಮ್ಮದೇ ಆದ ವಿಶ್ಲೇಷಣೆಯ ಮೂಲಕ ರೈತ ಮುಷ್ಕರವನ್ನು ಹೇಗೆ ಬೆಂಬಲಿಸಬೇಕು ಎಂದು ನಿರ್ಧರಿಸಲು ಮಾಹಿತಿಯನ್ನು ಒದಗಿಸಲಾಗಿದೆ” ಎಂಬ ಉಲ್ಲೇಖವಿದೆ. ರೈತ ಮುಷ್ಕರಕ್ಕೆ ಬೆಂಬಲಿಸಲು ಇಚ್ಚಿಸುವವರು #ರೈತ ಮುಷ್ಕರ ಮತ್ತು #ನಾವು ರೈತರೊಡನೆ ನಿಲ್ಲುತ್ತೇವೆ ಎನ್ನುವ ಹ್ಯಾಷ್ ಟ್ಯಾಗ್ ಬಳಸುವಂತೆ ಸೂಚನೆ ನೀಡಲಾಗಿದೆ.

ಇಲ್ಲಿ ಅದಾನಿ ಅಥವಾ ಅಂಬಾನಿಯ ಉಲ್ಲೇಖ ಇಲ್ಲದಿದ್ದರೂ ಜನರಿಗೆ ಉರುವಲು ಆಧಾರಿತ ಇಂಧನ ಬಳಕೆಯಿಂದ ದೂರ ಇರುವಂತೆ ಸಲಹೆ ನೀಡಲಾಗಿದೆ. ಈ ಕಡತದ ಕೊನೆಯಲ್ಲಿ ವೆಬ್‍ತಾಣದ ಕೊಂಡಿಯನ್ನು ಒದಗಿಸಲಾಗಿದ್ದು, ರೈತ ಮುಷ್ಕರದ ಬಗ್ಗೆ ಸುದ್ದಿ ಪ್ರಕಟಿಸುವ ಪತ್ರಿಕೆಗೆ ಸಂಪರ್ಕ ಸಾಧಿಸುತ್ತದೆ. ಇತರ ಕೊಂಡಿಗಳನ್ನು ಅಳಿಸಿಹಾಕಲಾಗಿದೆ.

ಪೊಲೀಸರು ಏನು ಹೇಳುತ್ತಾರೆ?

ತನಿಖೆಯ ಸಂದರ್ಭದಲ್ಲಿ ಈ ಟೂಲ್ ಕಿಟ್ ಪೊಯೆಟಿಕ್ ಜಸ್ಟಿಸ್ ಫೌಂಡೇಷನ್ ಮೂಲಕ ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ಹೇಳುತ್ತಾರೆ. ಮುನ್ನೆಚ್ಚರಿಕೆ ಚಟುವಟಿಕೆಗಳ ವಿಭಾಗದಲ್ಲಿ ಜನವರಿ 26ರ ಕಾರ್ಯ ಚಟುವಟಿಕೆಗಳ ಉಲ್ಲೇಖ ಇರುವುದಾಗಿಯೂ ಪೊಲೀಸರು ಹೇಳುತ್ತಾರೆ. ಇದೇ ಸಂದರ್ಭದಲ್ಲಿ ರೈತರು ನಿಗದಿತ ಮಾರ್ಗವನ್ನು ಅನುಸರಿಸದೆ ದೆಹಲಿಯ ಕೆಂಪುಕೋಟೆಯ ಬಳಿಗೆ ಧಾವಿಸಿ ಗಲಭೆಗಳನ್ನು ಉಂಟುಮಾಡಿರುವುದು ಪೊಲೀಸರ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಳೆದ ಹಲವು ದಿನಗಳಲ್ಲಿ ನಡೆದ ಘಟನೆಗಳು, ಜನವರಿ 26ರಂದು ನಡೆದ ಹಿಂಸಾಚಾರ ಇವೆಲ್ಲವನ್ನೂ ಗಮನಿಸಿದಾಗ ಟೂಲ್ ಕಿಟ್‍ನಲ್ಲಿ ಹೇಳಿರುವಂತೆಯೇ ಕ್ರಿಯಾ ಯೋಜನೆಯನ್ನು ಜಾರಿಗೊಳಿಸಿರುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತದೆ ಎನ್ನುತ್ತಾರೆ ಕ್ರೈಂ ಪೊಲೀಸ್ ಅಧಿಕಾರಿ ರಾಜನ್. ಈ ಟೂಲ್ ಕಿಟ್ ಸಿದ್ಧಪಡಿಸಿದವರ ಉದ್ದೇಶ ವಿಭಿನ್ನ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಗುಂಪುಗಳಲ್ಲಿ ಸೌಹಾರ್ದತೆಯನ್ನು ಹಾಳುಮಾಡಿ ಭಾರತ ಸರ್ಕಾರದ ವಿರುದ್ಧ ಅಸಮಾಧಾನವನ್ನು ಉಂಟುಮಾಡುವುದೇ ಆಗಿದೆ ಎಂದು ಪೊಲೀಸರು ಆರೋಪಿಸುತ್ತಾರೆ.

 

Leave a Reply

Your email address will not be published.