ಚಟ ಚಕ್ರವರ್ತಿಗಳ ದಿಟ ಚಿತ್ರಗಳು!

ಚಟ ಚಕ್ರವರ್ತಿಗಳು ತಮ್ಮದೇ ಆದ ಕಾರಣಗಳನ್ನು ಕೊಟ್ಟುಕೊಂಡು ತಮ್ಮ ಚಟಾದಿಗಳನ್ನು ತಮ್ಮ ಅಂತ್ಯದವರೆಗೆ ಕಾದಿರಿಸಿಕೊಳ್ಳುತ್ತಾರೆ. ಕೆಲವರದು ಸುಖಾಂತವಾದರೆ, ಇನ್ನೂ ಎಷ್ಟೋ ದುಃಖಾಂತಗಳು!

ಯಾರಾದರೂ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಾಗ ಉಳಿದವರಲ್ಲಿ (ಬದುಕುಳಿದವರು?) ಸಾಮಾನ್ಯವಾಗಿ ಏಳುವ ಪ್ರಶ್ನೆ ಎಂದರೆ “ಅವನಿಗೆ ಏನಾದರೂ ಚಟ ಇತ್ತೋ ಏನೋ?” ಅಂತ. ಇಷ್ಟು ಸಣ್ಣ ವಯಸ್ಸಿನಲ್ಲೇ ಸಾವಿಗೆ ದೂಡಿರಬಹುದಾದ ಒಂದು ದೌರ್ಬಲ್ಯ ಅವನಲ್ಲಿ ಏನಿತ್ತು? ಅನ್ನುವ ಕುತೂಹಲ ಮನುಷ್ಯನ ಸಹಜ ಗುಣ. ಆ ಒಂದು ದೌರ್ಬಲ್ಯವನ್ನು ಚಟ ಅಂತ ಕರೆಯುವುದಾದರೆ, ಹಾಗೆ ಕೇಳುವುದೂ ಕೂಡ ಒಂದು ಚಟವೇ! 

ಅದೇ ತರಹ ಗಂಟೆಗೊAದು ಸಿಗರೇಟು ಸೇದುತ್ತಿದ್ದ ಒಬ್ಬ ಮುದುಕರು ತೀರಿ ಹೋದಾಗ ಅದೇ ಚಟ ಅವರ ಪ್ರಾಬಲ್ಯದ ಸಂಕೇತವೂ ಆಗುತ್ತದೆ! ವರ್ಷಗಟ್ಟಲೆ ಅಷ್ಟು ಸಿಗರೇಟು ಸೇದಿದ್ದರೂ ಇಷ್ಟು ಗಟ್ಟಿ ಇದ್ದರಲ್ಲ! ಅಂತ ಹೇಳಿ, ಚಟ ಮಾಡುವವರು ಆ ತರಹದ ಸಮರ್ಥನೆ ಮಾಡಿಕೊಂಡು ಅದೇ ಖುಷಿಯಲ್ಲಿ ಒಂದು ಬೀಡಿ ಸೇದಿ ಬರುತ್ತಾರೆ!

ಚಟಗಳು ಚಟ್ಟಕ್ಕೇರುವತನಕ ಅಂತ ಒಂದು ಮಾತಿದೆ. ನಿಜ ಹೇಳಬೇಕೆಂದರೆ ಇಂತಹ ಮಾತುಗಳೇ ಚಟ ಮಾಡುವವರಿಗೆ ಪ್ರೇರಣೆ! ಚಟಗಳು ಅಂದಾಗ ನೆನಪಾಗೋದು ಸಾರಾಯಿ, ಸಿಗರೇಟು, ತಂಬಾಕು, ನಶ್ಯ, ಡ್ರಗ್ಸ್ ಇತ್ಯಾದಿ. ಆದರೆ ಅವು ಇಷ್ಟಕ್ಕೆ ಸೀಮಿತ ಆಗಿಲ್ಲ. ಕಾಫಿ ಕುಡಿಯೋದು, ಮೊಬೈಲನ್ನ ತಿರುಗಾ ಮುರುಗಾ ನೋಡುತ್ತಾ ಅದರಲ್ಲೇ ಮುಳುಗಿರೋದು… ಇವೂ ಕೂಡ ಚಟಗಳೇ ತಾನೇ? ನಮ್ಮ ಪರಿಚಯದವರೊಬ್ಬರಿಗೆ ಗಂಟೆಗಟ್ಟಲೆ ಸ್ನಾನ ಮಾಡುವ ರೂಢಿ ಇತ್ತು. ಬರಿ ನೀರಲ್ಲಿ ಮಾಡುತ್ತಿದ್ದರೆ? ಇಲ್ಲ, ಏನೇನೋ ವಾಸನೆಯ ಎಣ್ಣೆ ಉಜ್ಜಿ ಉಜ್ಜಿ ತಿಕ್ಕಿಕೊಳ್ಳುತ್ತಿದ್ದರು. ಕೆಲವಕ್ಕೆ ಅಭ್ಯಾಸಗಳು ಅಂತಾರೆ ಇನ್ನೂ ಕೆಲವಕ್ಕೆ ದುರಭ್ಯಾಸ. ಆದರೆ ಈ ಎರಡರ ನಡುವೆ ಅಂತರ ಮಾತ್ರ ತುಂಬಾ ತೆಳುವು. ಒಳ್ಳೆಯದೋ ಕೆಟ್ಟದ್ದೋ ಎರಡರಲ್ಲೂ ಸಾಮ್ಯತೆಗಳು ಜಾಸ್ತಿ.

ನನ್ನೊಬ್ಬ ಸಂಬಂಧಿ ಇದ್ದಾರೆ ಅವರಿಗೆ ಯಾವುದೇ ತರಹದ ಚಟಗಳಿಲ್ಲ ಅಂತ ನಾನು ಎಲ್ಲರೆದುರು ಹೆಮ್ಮೆಯಿಂದ ಹೇಳುತ್ತಿದ್ದೆ. ಆದರೆ ನನ್ನ ನಂಬಿಕೆ ಕುರುಡು ಅಂತ ಇತ್ತೀಚಿಗೆ ಗಮನಕ್ಕೆ ಬಂತು! ಅವರು ತಮ್ಮ ಬಳಿ ಯಾವಾಗಲೂ ಒಂದು ಪುಟ್ಟದಾದ ವಿಕ್ಸ್ ಡಬ್ಬ ಇಟ್ಟಿರುತ್ತಾರೆ. ಅದನ್ನು ಆಗಾಗ ಹಣೆಗೆ ಮೆತ್ತಿಕೊಳ್ಳದಿದ್ದರೆ ಅವರಿಗೆ ಸಮಾಧಾನವೇ ಇಲ್ಲವಂತೆ. ಆ ಡಬ್ಬದ ಬೆಲೆ 2 ರುಪಾಯಿ ಮಾತ್ರ ಆಗಿರಬಹುದು ಆದರೆ ಅದು ಒದಗಿಸುವ ತೃಪ್ತಿ ಅಗಾಧ, ಜೊತೆಗೆ ಅದು ಸೃಷ್ಟಿಸುವ ಅವಾಂತರ ಕೂಡ!

ಒಮ್ಮೆ ಯಾವುದೊ ಬೇರೆ ಊರಿಗೆ ಹೋಗಿದ್ದಾಗ ರಾತ್ರಿ ಊಟವಾದ ನಂತರ ಮಾಮೂಲಿನಂತೆ ತಮ್ಮ ಡಬ್ಬಿ ತೆರೆದು ಹಣೆಗೆ ಮೆತ್ತಿಕೊಳ್ಳಲು ಹೋದಾಗ ಅವರ ಹೃದಯವೇ ನಿಂತ ಅನುಭವ. ಯಾಕೆಂದರೆ ಆ ಡಬ್ಬಿಯಲ್ಲಿದ್ದ ವಿಕ್ಸ್ ಮುಗಿದುಹೊಗಿದ್ದು ಆಗಲೇ ಅವರ ಅರಿವಿಗೆ ಬಂದಿತ್ತು! ಅವರ ತಲೆನೋವು ಇನ್ನೂ ಹೆಚ್ಚಾಗತೊಡಗಿತು. ಮೈಯಲ್ಲಿ ನಡುಕ ಶುರುವಾಯ್ತು. ಒಂದು ವೇಳೆ ಊರಿನ ಯಾವುದೇ ಅಂಗಡಿಯಲ್ಲಿ ಆ ಡಬ್ಬಿ ಸಿಗದೇ ಹೋದರೆ ಎಂದು ನೆನೆಸಿ ಮೈ ಝುಮ್ ಅಂತು! ಯಾಕಂದರೆ ಒಂದ್ಯಾವುದೋ ಬ್ರಾಂಡ್ ವಿಕ್ಸ್ ಗೆ ಅವರ ತಲೆ ಒಗ್ಗಿಕೊಂಡಿತ್ತು.

ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಇಡಿ ಊರು ಅಡ್ಡಾಡಿ ಆ ಡಬ್ಬಿ ಯಾವುದೋ ಅಂಗಡಿಯಲ್ಲಿ ಸಿಕ್ಕ ಮೇಲೆಯೇ ಉಸಿರು ಬಿಟ್ಟದ್ದು! ಇದು ವಿಕ್ಸ್ ನ ತಪ್ಪೇ? ಖಂಡಿತ ಅಲ್ಲ. ಈ ಅಭ್ಯಾಸ ಯಾವ ಚಟಕ್ಕೆ ಕಡಿಮೆ ಇದೆ? ಡ್ರಗ್ಸ್ ಸಿಕ್ಕಿಲ್ಲ ಅಂತ ಆದರ ದಾಸ ಚಡಪಡಿಸುವದಕ್ಕೂ ಇವರು ವಿಕ್ಸ್ ಡಬ್ಬಕ್ಕೆ ಪರಿತಪಿಸುವದಕ್ಕೂ ಏನು ವ್ಯತ್ಯಾಸ? ಈಗೀಗ ಮಕ್ಕಳೂ ಕೂಡ ಮೊಬೈಲ್ ಕೊಡದಿದ್ದರೆ ಹೀಗೆ ಆಡುತ್ತಾರೆ. ಅವರಿಗೆ ಮೊಬೈಲ್ ಚಟ ಕಲಿಸಿದ್ದು ಯಾರು? ಯಾವಾಗಲೂ ಅದರಲ್ಲೇ ಮುಳುಗಿರುವ ದೊಡ್ದವರೇ ಅಲ್ಲವೇ? ದೊಡ್ಡವರಿಗೊಂದು ನ್ಯಾಯ ಚಿಕ್ಕವರಿಗೊಂದು ನ್ಯಾಯವೇ?  

ಹಾಗಂತ ಚಟಗಳನ್ನು ಯಾವಾಗಲೂ ಹಿರಿಯರಿಂದಲೇ ಚಿಕ್ಕವರು ಕಲಿಯುತ್ತಾರೆ ಅನ್ನೋದು ತಪ್ಪಾಗುತ್ತೆ. ಚಟಗಳು ಮನುಷ್ಯನನ್ನು ಹೇಗೆ ಅವರಿಸಿಕೊಳ್ಳುತ್ತವೆ ಎನ್ನುವುದಕ್ಕೆ ಹಲವು ಸಿದ್ಧಾಂತಗಳು ಇವೆ. ಅಪ್ಪನನ್ನು ನೋಡಿ ಮಗ ಕಲಿಯುತ್ತಾನೆ ಅಂಬೋದು ಒಂದು ಸಿದ್ಧಾಂತ. ಆದರೆ ಅಪ್ಪ ದೊಡ್ಡ ಕುಡುಕ ಇದ್ದಾಗ ಮಗ ಒಂದು ಅಡಿಕೆ ಹೋಳನ್ನು ಕೂಡ ಮುಟ್ಟದವನಾಗಿರುವ ಉದಾಹರಣೆಗಳು ಹೇರಳವಾಗಿವೆ. ಅಥವಾ ಅಪ್ಪ ತುಂಬಾ ಸಭ್ಯನಾಗಿದ್ದರೂ ಮಗ ಸರ್ವ ಚಟ ಸಂಪನ್ನ ಆಗಿರುವ ಕೇಸುಗಳು ಇನ್ನೂ ಬಹಳಷ್ಟು!

ಪುಟ್ಯಾಗೆ ಆಗಾಗ ಹೆಂಡತಿಯ ಮನವೊಲಿಸಿ (?) ವಿಸ್ಕಿ ಕುಡಿಯುವ ಚಟ ಇತ್ತು. ಯಾಕೆಂದರೆ `ಮನ್ಯಾಗ ಕುತಗೊಂಡ್ ಎಷ್ಟ ಬೇಕಾದ್ರೂ ಕುಡಿ, ಹೊರಗ ಗೆಳ್ಯಾರ್ ಜೋಡಿ ಪಾರ್ಟಿ ಗೀಟಿ ಅಂದಿ… ಹುಷಾರ್!’ ಅಂತ ಅವನ ಹೆಂಡತಿ ಪಾರಿ ಕಟ್ಟುನಿಟ್ಟು ಮಾಡಿದ್ದಳು. ಯಾಕೆಂದರೆ ಕುಡಿದು ಗೆಳೆಯರ ನಡುವೆ ಜಗಳವಾಗಿ ಕೊಲೆಗಳಾಗಿಬಿಟ್ಟರೆ?! ಎಂಬುದು ಅವಳ ಚಿಂತೆ. ಆದರೂ ಮನೆಯಲ್ಲಿ ಕೂತು ಕುಡಿಯಬೇಕೆಂದರೆ ಅಷ್ಟು ಸುಲಭದಲ್ಲಿ ಬಿಡುವಳೇ ಅವಳು? ಅವಳನ್ನು ಗೋಗರೆದು ಕೇಳಬೇಕು, ಆಫೀಸ್ ನ ಯಾವುದೋ ಸಮಸ್ಯೆಯಿಂದಾಗಿ ತನ್ನ ತಲೆಗಾದ ತ್ರಾಸು ಅಷ್ಟಿಷ್ಟಲ್ಲ ಅಂತ ಅವಳಿಗೆ ಸಂಶಯ ಬಾರದಂತೆ ವಿವರಿಸಬೇಕು! ಆಯ್ತು ಕುಡಿ ಮಾರಾಯ ಅಂತ ಅವಳು ಅನುಮತಿ ಕೊಟ್ಟರೂ ಒಬ್ಬನೇ ಕುಳಿತು ಎಷ್ಟಂತ ಕುಡಿದಾನು? ಕುಡುಕರಿಗೆ ಒಂದು ಮಾಹೋಲ್ ಬೇಕು; ಅದಿಲ್ಲದಿರೆ ಮದಿರೆಯನ್ನು ತಲೆಗೆ ಹೇಗೆ ಏರಿಸಿಕೊಳ್ಳುವುದು? ಅದೇ ಪಾರಿಯ ಟ್ರಿಕ್ಕು! 

ಪುಟ್ಯಾಗೆ ಕುಡಿಯೋದನ್ನ ಕಳಿಸಿದ್ದು ಅವರಪ್ಪನೆ! ವಯಸ್ಸಿಗೆ ಬಂದ ತನ್ನ ಮಗ ಗೆಳೆಯರಿಂದ ಚಟ ಕಲಿಯುವುದು ಬೇಡ ಅಂತ ಮೊದಲ ಸಲ ಬಿಯರು ಕುಡಿಯುವುದನ್ನ ತಾನೇ ತನ್ನ ಕೈಯಾರೆ ಕುಡಿಸಿ ಕಲಿಸಿದ. ಬಿಯರಿನ ರುಚಿಯನ್ನು ಅನುಭವಿಸಿ ಪಳಗಿದ್ದ ಪುಟ್ಯಾ ಹೊರಗಡೆ ಇದ್ದಾಗ ವಿಸ್ಕಿ ಕುಡಿಯುವುದ ರೂಡಿಸಿಕೊಂಡ! ಬೀರನ್ನು ಆಗಲೇ ಗುಟುಕರಿಸಿದ್ದ ಅವನು ತನ್ನ ಗೆಳೆಯರಿಗೆ ಗುರುವಾಗಿದ್ದ!

ಇವನಿಗೆ ಈ ಚಟವಾದರೆ ಪಾರಿಗೆ ವಾಕಿಂಗ್ ಚಟ. ಮಳೆ ಇರಲಿ ಚಳಿ ಇರಲಿ ಸಂಬಂಧ ಇಲ್ಲ. ಒಂದು ದಿನ ವಾಕಿಂಗ್ ಮಾಡಿಲ್ಲ ಅಂದರೆ ಅವಳಿಗೆ ಮನಸ್ಸು ಸರಿ ಇರುವುದಿಲ್ಲ. ಅವತ್ತಿಡಿ ದಿನ ಏನೂ ಉತ್ಸಾಹವೇ ಇಲ್ಲ ಅಂತ ಚಡಪಡಿಸುತ್ತಾಳೆ. ಆದರೆ ಪರಮ ಮೈಗಳ್ಳನಾಗಿದ್ದ ಪುಟ್ಯಾ ಮಾತ್ರ ಎಂದೂ ವಾಕಿಂಗ್ ಹೋಗುತ್ತಿರಲಿಲ್ಲ ಯಾಕಂದರೆ ಬೆಳಿಗ್ಗೆ ತಡವಾಗಿ ಏಳೋದು ಅವನ ಚಟ! ಒಂದು ಸಲ ಸುನಾಮಿ ಬಂದು ಸಮುದ್ರದ ದಡದಲ್ಲಿ ವಾಕಿಂಗ್ ಹೋಗಿದ್ದ ಎಷ್ಟೋ ಜನ ಸತ್ತಾಗ ಪಾರಿ ಎದುರು ಈತ ಬೇಜಾರಿನಿಂದ ಹೇಳಿದ್ದ `ಪಾಪ ಎಷ್ಟ್ ಮಂದಿ ಸತ್ತಾರ್ ನೋಡಲೇ… ಅದಕ ನಾ ಮುಂಜಮುAಜಾನೆ ವಾಕಿಂಗ್ ಹೋಗಂಗಿಲ್ಲ!’

ನಮ್ಮ ಕಾಲೇಜಿನ ದಿನಗಳಲ್ಲಿ ಇಂತಹ ಚಟಗಾರರಿಗೆ ಚಚ ಅಥವಾ ಸೀಸೀ ಅನ್ನುತ್ತಿದ್ದರು. ಅಂದರೆ ಅದರ ಅರ್ಥ ಚಟ ಚಕ್ರವರ್ತಿಗಳು ಅಂತ. ಅವರು ಸರ್ವ ಚಟಗಳಲ್ಲಿ ಪಾರಂಗತರು. ಅವರು ತಮ್ಮ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದವರಂತೆ ಬೀಗುತ್ತಿದ್ದರು. ಅದರಿಂದಾಗಿಯೇ ಅವರ ಮಿತ್ರ ವೃಂದವೂ ಅಧಿಕವೇ ಇತ್ತು. ಅವರ ಸುತ್ತಲೂ ಯಾವಾಗಲೂ ಹುಡುಗರು. ಯಾವುದೇ ಪಾನ ಗೋಷ್ಠಿ ನಡೆದರೂ ಅವರಿಗೆ ಒಂದು ದೊಡ್ಡ ಮರ್ಯಾದೆ.

ಅವನು ಒಂದೇ ಸಲಕ್ಕೆ ಎಷ್ಟೊಂದು ಕುಡಿಯುತ್ತಾನೆ ಅನ್ನೋದು ಪ್ರತಿಷ್ಠೆಯ ಸಂಗತಿ ಆಗಿರುತ್ತಿತ್ತು. ಹಾಗೆ ಕಂಠ ಪೂರ್ತಿ ಕುಡಿದು ಗಾಡಿ ಓಡಿಸಿಕೊಂಡು ಹೋಗುವುದು ಇನ್ನೂ ದೊಡ್ಡ ಸಾಧನೆ. ಅಂತಹ ಒಬ್ಬ ಮಹಾನುಭಾವ ನಮ್ಮ ಕಾಲೇಜ್ ಅಲ್ಲಿ ಇದ್ದ. ಅವನು ಕುಡಿದು ಇನ್ನಿಬ್ಬರನ್ನು ತನ್ನ ಬೈಕಿನಲ್ಲಿ ಕೂಡಿಸಿಕೊಂಡು ತನ್ನ ರೂಮಿನವರೆಗೆ ಸರಿಯಾಗಿ ಹೋಗುತ್ತಿದ್ದ. ಆ ಸ್ಥಿತಿಯಲ್ಲಿ ಅವನ ಹಿಂದೆ ಕೂತುಕೊಂಡು ಹೋಗುವರದು ಇನ್ನೂ ದೊಡ್ಡ ಧೈರ್ಯ. ಸಾರಾಯಿಯ ಮಹತ್ವವೇ ಅಂತದ್ದು. ಕುಡಿದಾಗ ಧೈರ್ಯ ನೂರು ಪಟ್ಟು! ಆದರೆ ರೂಮಿನ ಹತ್ತಿರ ಬಂದ ಕೂಡಲೇ ಗಾಡಿ ನಿಲ್ಲಿಸಿ ನಡೆದು ಬರುವಾಗ ಮಾತ್ರ ಆತ ಜೋಲಿ ತಪ್ಪಿ ಬಿದ್ದು ಬಿಡುತ್ತಿದ್ದ! ಅವನ ಗಾಡಿ ಕುಡಿದಿರುತ್ತಿರಲಿಲ್ಲವಲ್ಲ! 

ಅದರಲ್ಲೂ ಚಟ ಮಾಡುವರು ಬೇರೆಯವರ ಜೊತೆ ತುಲನೆ ಮಾಡಿಕೊಂಡು ಸಮರ್ಥನೆ ಮಾಡಿಕೊಳ್ಳೋದು ಜಾಸ್ತಿ. ದಿನಕ್ಕೆ ಎರಡು ಸಿಗರೇಟು ಸೇದೋನು ಪ್ಯಾಕ್ ಗಟ್ಟಲೆ ಸೇದೋನ ಬಗ್ಗೆ ಹೇಳೋದು… “ಗಂಡಸು ಅಂದ ಮ್ಯಾಲೆ ಚಟಾ ಇರ್ಬೇಕಪಾ. ಆದರ… ಅದಕ್ಕೂ ಲಿಮಿಟ್ ಇರಬೇಕು. ದಿನಕ್ಕ ಎರಡೋ ಮೂರೋ ಸೇದಿದರ ಸರಿ, ಪ್ಯಾಕ್ ಗಟ್ಟಲೆ ಸೇದಿದರ ಏನಾಗ ಬ್ಯಾಡಾ ಪುಪ್ಪಸದ ಗತಿ?!” ಆದರೆ ಒಂದೂ ಸಿಗರೇಟು ಸೇದದವನಿಗೆ ಈ ಎರಡು ಮೂರು ಸೇದೋನೆ ದೊಡ್ಡ ಚಟಗಾರ. ಹಾಗೆ ಸಿಗರೇಟು ಮುಟ್ಟದವನಿಗೂ ಬೇರೊಂದು ಚಟ ಇರಬಹುದು.

ನಮ್ಮ ಗೆಳೆಯನೊಬ್ಬನಿಗೆ ಯಾವುದೇ ಹೊತ್ತಿನಲ್ಲಿ ಚಹಾ ಕೊಟ್ಟರೂ ಕುಡಿಯುತ್ತಾನೆ. ರಾತ್ರಿ ಹನ್ನೆರಡಕ್ಕೆ ಎಬ್ಬಿಸಿ ಚಾ ಕುಡಿತೀಯ ಅಂದ್ರೆ ದೇವರಾಣೆಗೂ ಇಲ್ಲ ಅನ್ನೋದಿಲ್ಲ. ಆ ಹೊತ್ತಿನಲ್ಲಿ ಚಹಾ ಕುಡಿದರೆ ಎಷ್ಟೋ ಜನರಿಗೆ ನಿದ್ದೆಯೇ ಬಾರದು. ಆದರೆ ಇವನಿಗೆ ಹಾಗಲ್ಲ ಚಹಾ ಕುಡಿದು ಮತ್ತೆ ಮಲಗಿಯೇಬಿಡುತ್ತಾನೆ. ಇಂತಹ ಚಹಾ ಕುಡುಕನಿಗೆ, ಚಹಾ ಮಾಡಲು ಹಾಲು ಇಲ್ಲ ಎಂದರೂ ಎದೆ ಒಡೆದುಕೊಂಡು ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುತ್ತಾನೆ. ಹಾಲೋ… ಅಲ್ಕೊಹಾಲೋ ಎರಡೂ ಒಂದೆಯೇ!

ಚಟಗಳು ಆಳುವುದಕ್ಕೆ ಶುರು ಮಾಡಿದಾಗ ಆ ಚಕ್ರವರ್ತಿಗಳ ಮನೆಗಳವರು ತುಂಬಾ ಕಷ್ಟ ಪಡುತ್ತಾರೆ. ಒಬ್ಬ ಸಿಗರೇಟು ಸೇದುವವ ಮನೆಯಲ್ಲಿದ್ದರೆ ಆ ಮನೆಯ ಹಲವು ಸ್ಥಳಗಳು ಯಾವಾಗಲೂ ಒಂದು ವಿಚಿತ್ರ ವಾಸನೆಗೆ ತುತ್ತಾಗಿ ಬೇರೆಯವರಿಗೆ ಹಿಂಸೆ ಕೊಡುತ್ತವೆ. ಆ ಹಿಂಸೆ ಚಟ ಮಾಡುವವನಿಗೆ ಗೊತ್ತಿರದೇ? ಖಂಡಿತ ಗೊತ್ತಿರುತ್ತದೆ. ಪ್ರತಿ ಸಲ ಸಿಗರೇಟು ಸೇದಿ ಆದ ಮೇಲೆ ಆತ ಆ ಒಂದು ಪಾಪಪ್ರಜ್ಞೆಗೆ ಒಳಗಾಗಿರುತ್ತಾನೆ. ನಾಳೆಯಿಂದ ಸಿಗರೇಟು ಮುಟ್ಟೋದೇ ಇಲ್ಲ ಅಂತ ಶಪಥ ಮಾಡಿ ಅದರ ತುಂಡನ್ನು ಅಲ್ಲೇ ಹೊಸಕಿಹಾಕಿರುತ್ತಾನೆ! ಆದರೆ ಮರುದಿನ ಶುಭ್ರ ಬಿಳಿಯ ಬಟ್ಟೆ ಧರಿಸಿ ಕೆಣಕಿ ಕರೆಯುವ ಹೊಸ ಸಿಗರೇಟು ಅವನ ಶಪಥವನ್ನು ಮರೆಸಿರುತ್ತದೆ. ಸಿಗರೇಟಿನ ಸಹವಾಸ ಬೇಡ ಅಂತ ಇತ್ತೀಚಿಗೆ ಇಲೆಕ್ಟ್ರಾನಿಕ್ ಸಿಗರೇಟು ಸೇದೋದೂ ಒಂದು ಹೊಸ ಚಟ. ಎಲ್ಲಿ ಬೇಕಾದರೂ ಸೇದಬಹುದಾದ ಅದು ಕೈಯಲ್ಲಿದ್ದರೆ ಚಟ ಇನ್ನೂ ಜಾಸ್ತಿ ಆಗುವುದೇ ಹೊರತು ಕಡಿಮೆ ಹೇಗಾದೀತು?

ತಂಬಾಕು ಗುಟಕಾ ತಿನ್ನುವವರ ಮನೆಯವರಿಗೆ ಇನ್ನೂ ಬೇರೆಯ ಸಂಕಟ. ಜಗಿಯುವವರಿಗೆ ಉಗುಳಲು ಜಾಗ ಬೇಕು. ಹಳ್ಳಿಗಳಲ್ಲಾದರೆ ಉಗುಳಲು ಯಥೇಚ್ಚ ಜಾಗ ಇರುತ್ತೆ. ಪಟ್ಟಣಗಳಲ್ಲಿ ಉಗುಳಲು ಜಾಗವೇ ದುರ್ಲಭ. ಹೀಗಾಗಿ ಮನೆಯಲ್ಲಿಯೇ ಜಗಿದು ಉಗಿಯಲು ಅವರು ಬಳಸೋದು ಸಿಂಕು. ದಿನವೂ ಹೊಡೆಯುವ ಇವರ ಪಿಚಕಾರಿಗೆ ಅದು ತನ್ನ ಸ್ವಂತಿಕೆ ಕಳೆದುಕೊಂಡು ಕೆಂಪಾಗಿ ಹೋಗಿರುತ್ತದೆ!

ಒಂದು ಸಲ ಧಾರವಾಡದ ಹೊಸ(?) ಬಸ್ ನಿಲ್ದಾಣಕ್ಕೆ ಹೋಗಿದ್ದೆ. “ಇಲ್ಲಿ ಉಗುಳಬೇಡಿ” ಎನ್ನುವ ಫಲಕಗಳು ಅಲ್ಲಿ ರಾರಾಜಿಸುತ್ತಿದ್ದವು. ಗೋಡೆ, ಮೂಲೆಗಳಲ್ಲಿ ಕೆಂಪು ಕೆಂಪು ಉಗುಳಿದ ಕಲೆಗಳು. ಆ ಕಲೆಗಳು ದಿನಗಳೆದಂತೆ ಗಾಢವಾಗಿ ಕಪ್ಪು ಬಣ್ಣಕ್ಕೆ ತಿರುಗಿ ಗೋಡೆಯೆಲ್ಲ ಅಸಹ್ಯವಾಗಿ ಕಾಣುತ್ತಿತ್ತು. ಅಂತಹ ಕಡೆಯಲ್ಲೆಲ್ಲ ಉಗುಳಬೇಡಿರಿ ಅನ್ನುವ ಫಲಕಗಳು. ಆ ಬೋರ್ಡಿನ ಮೇಲೆಯೂ ಕೆಂಪಗಿನ ಕಲೆ.  ಬಾಯಲ್ಲಿ ರಸಗವಳ ತುಂಬಿಕೊಂಡವನಿಗೆ ಅಷ್ಟೆಲ್ಲ ಓದುವ ಪುರುಸೊತ್ತು ಎಲ್ಲಿ? ಯಾವನೋ ಒಬ್ಬನು ಉಗುಳಿದ ಮೇಲೆ ಮುಗೀತು. ಅಲ್ಲೇ ಉಗುಳೋದು ಇತರರ ಧರ್ಮ. ಹಾಗೆಯೇ ಬೇರೆಯವರನ್ನು ನೋಡಿಯೇ ಅಲ್ಲವೇ ಅವನು ಚಟ ಕಲಿತದ್ದು?

ಚಟ ಚಕ್ರವರ್ತಿಗಳನ್ನು ಹೆದರಿಸಲು ಸರಕಾರ ಕೆಲವು ತಂತ್ರಗಳನ್ನು ಮಾಡಿದೆ. ತಂಬಾಕು ಉತ್ಪನ್ನಗಳ ಮೇಲೆ ಕ್ಯಾನ್ಸರ್ ಆಗಿರುವ ವ್ಯಕ್ತಿಯ ಫೋಟೋ ಹಾಕಿ ಭಯ ಹುಟ್ಟಿಸುವ ತಂತ್ರ. ಆದರೆ ಅದನ್ನೇ ದಿನಾಲೂ ನೋಡಿ ನೋಡಿ ಅದು ನಿಜಕ್ಕೂ ಭಯ ಹುಟ್ಟಿಸೀತೆ? ಅದೂ ಒಂಥರಾ ಇಲ್ಲಿ ಉಗುಳಬೇಡಿ ಎಂಬ ಫಲಕದಂತೆ ಅವನಿಗೆ ರೂಢಿಯಾಗುತ್ತೆ. ಜನರ ಆರೋಗ್ಯದ ಬಗ್ಗೆ ಕಾಳಜಿ ಇರುವ ಸರಕಾರ ಸಿಗರೇಟು, ತಂಬಾಕುಗಳನ್ನು ನಿಷೇಧ ಯಾಕೆ ಮಾಡೋಲ್ಲ? ಅದಕ್ಕೆ ಉತ್ತರಿಸುವವರು ಯಾರು? ಅವರೂ ದೊಡ್ಡ ಚಟಗಾರರೆ ಇರಬೇಕು!

ಯಾವುದೇ ಒಂದು ಅಭ್ಯಾಸವೋ ದುರಭ್ಯಾಸವೊ ನಿಯಮಿತವಾಗಿ ದಿನಾಲೂ ಅದೇ ಸಮಯಕ್ಕೆ ಮಾಡಿಕೊಂಡಿದ್ದರೆ ನಮ್ಮ ದೇಹವೂ ಅದಕ್ಕೆ ಒಗ್ಗಿಕೊಂಡುಬಿಡುತ್ತದೆಯೇನೋ! ಅದನ್ನು ಸ್ವಲ್ಪ ಬದಲಾಯಿಸಿದರೂ ನಮ್ಮ ದೇಹ ಅದಕ್ಕೆ ಹೊಂದಿಕೊಳ್ಳುತ್ತೆ. ಆದರೆ ಮನಸ್ಸು ಕೇಳಬೇಕಲ್ಲ? ಮನಸ್ಸೆಂಬ ಮರ್ಕಟ ಅದೊಂದು ಅಭ್ಯಾಸದಲ್ಲೂ ಏರುಪೇರಾಗಿದ್ದಕ್ಕೆ ವಿಚಿತ್ರ ರೀತಿಯಲ್ಲಿ ಕಿಚಾಯಿಸಿ ಅದು ಸಿಗುವವರೆಗೂ ಕಾಡಿಸುತ್ತದೆ. ಮನಸ್ಸನ್ನು ನಿಗ್ರಹಿಸುವ ಶಕ್ತಿ ಎಲ್ಲರಿಗೂ ಇರಬೇಕಲ್ಲ. ಅದಕ್ಕೆ ಚಟ ಚಕ್ರವರ್ತಿಗಳು ತಮ್ಮದೇ ಆದ ಕಾರಣಗಳನ್ನು ಕೊಟ್ಟುಕೊಂಡು ತಮ್ಮ ಚಟಾದಿಗಳನ್ನು ತಮ್ಮ ಅಂತ್ಯದ ವರೆಗೆ ಕಾದಿರಿಸಿಕೊಳ್ಳುತ್ತಾರೆ. ಕೆಲವರದು ಸುಖಾಂತವಾದರೆ ಇನ್ನೂ ಎಷ್ಟೋ ದುಃಖಾಂತಗಳು.

ಮನುಷ್ಯ ಪ್ರಾಣಿಗೆ ಯಾವುದರ ಮೇಲೆ ನಿರ್ಬಂಧ ಹೇರಲಾಗುತ್ತೋ ಅದರ ಕಡೆ ಅವನು ವಾಲುವುದು ಜಾಸ್ತಿ. ಅದು ಚಟಗಾರರ ಇನ್ನೊಂದು ದೌರ್ಬಲ್ಯವೂ ಕೂಡ. ಹೀಗಾಗಿ ಅವರಿಗೆ ಪದೆ ಪದೆ ಇದು ಒಳ್ಳೆಯದಲ್ಲ ಮಾಡಬೇಡ ಎಂದು ಹೇಳುತ್ತಿದ್ದರೆ ಅವರು ಅದನ್ನು ಇನ್ನೂ ಹೆಚ್ಚು ಹೆಚ್ಚು ಮಾಡುತ್ತಾರೇನೋ! ಬಿಟ್ಟು ಬಿಡು ಅಂತ ಬೆನ್ನುಹತ್ತಿದರೆ ಅವರು ಚಟ ಬಿಡುತ್ತಾರೆಯೇ? ಖಂಡಿತ ಇಲ್ಲ. ಇಷ್ಟೊಂದು ಕಿರಿಕಿರಿಯಾದ ನಿಮ್ಮನ್ನು ಅವಾಯ್ಡ್ ಮಾಡಲು ತೊಡಗುತ್ತಾರೆ, ಸುಳ್ಳು ಹೇಳುತ್ತಾರೆ.

ತಾನು ಕಲಿತಿರುವ ಚಟ ತನ್ನ ಎಲ್ಲ ಚಟುವಟಿಕೆಗಳ ಮೂಲ ಅಂತ ನಂಬಿದ ಆ ಚಕ್ರವರ್ತಿಗೆ ಅದನ್ನು ಬಿಡಿಸುವುದು ಯಮನನ್ನು ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ! ಅದರಿಂದ ಹೊರಬರಲು ಅವನೇ ಮನಸ್ಸು ಮಾಡಬೇಕು. ಹಾಗಂತ ನನ್ನ ಎದುರೆ ಹೋಗೆ ಬಿಡು ಅಂತ ಹೇಳಲೂ ಸಾಧ್ಯವಿಲ್ಲ, ಅಲ್ಲವೇ?

ಸಮಾಜದ ಸ್ವಾಸ್ಥ್ಯದ ಬಗ್ಗೆ ನಿಜವಾದ ಕಾಳಜಿ ಸರಕಾರಗಳಿಗೆ ಇದ್ದರೆ, ಒಂದೋ ಚಟಕ್ಕೆ ಮೂಲವಾದ ವಸ್ತುಗಳು ಸಿಗದಂತೆ, ಕಣ್ಣಿಗೆ ಬೀಳದಂತೆ ಮಾಡಬೇಕು; ಇಲ್ಲವೇ ಅವನಿಗೆ ಎಲ್ಲಿ ಉಗುಳಬೇಕು, ಎಲ್ಲಿ ಹೊಗೆ ಬಿಡಬೇಕು ಎಂಬುದರ ಬಗ್ಗೆ ನಿರ್ದಿಷ್ಟ ಸ್ಥಳವನ್ನು ತೋರಿಸಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. “ಇಲ್ಲಿ ಉಗುಳಿರಿ” “ಇಲ್ಲಿ ಹೊಗೆ ಬಿಡಿ (ಹಾಕಿಸಿಕೊಳ್ಳಿ?!)” ಅನ್ನುವ ನಾಮಫಲಕಗಳು “ಇಲ್ಲಿ ಉಗುಳಬೇಡಿರಿ” ಅನ್ನುವುದಕ್ಕಿಂತ ಹೆಚ್ಚು ಸೂಕ್ತ. ಹಾಗಾದಾಗ ಬೇರೆಯವರಾದರೂ ನೆಮ್ಮದಿಯಿಂದ ಉಸಿರಾಡಬಹುದು, ಕೆಂಪಗಿನ ವರ್ಣರಂಜಿತ ಸ್ಥಳಗಳಿಲ್ಲದ ಬಸ್ ಸ್ಟಾಂಡ್ ಗಳಲ್ಲಿ, ಪಾರ್ಕ್ ಗಳಲ್ಲಿ ವಿಹರಿಸಬಹುದು! ಏನಂತೀರಿ?   

*ಲೇಖಕರ ಹಲವಾರು ಹಾಸ್ಯಬರಹಗಳು ಹಾಗೂ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎಲ್ಲರಂಥವನಲ್ಲ ನನ್ನಪ್ಪಹಾಗೂ ಅಪ್ಪರೂಪಸಂಪಾದಿಸಿದ ಕೃತಿಗಳು. ವೃತ್ತಿಯಲ್ಲಿ ಜಲಕೃಷಿ (ಹೈಡ್ರೋಪೋನಿಕ್ಸ್) ತಂತ್ರಜ್ಞರು ಹಾಗೂ ತರಬೇತುದಾರರು. 

Leave a Reply

Your email address will not be published.