ಚಾರಿತ್ರಿಕ ನಗರಿ ಗ್ವಾಲಿಯರ್‍ನಲ್ಲಿ ನೀನಾಸಂಗೆ ಪುರಸ್ಕಾರದ ಗರಿ

ಕವಲಕೋಡು ಕೆ. ವೆಂಕಟೇಶ

ವರ್ಷಕ್ಕೊಮ್ಮೆ ಒಂದು ವಾರ ಗ್ವಾಲಿಯರ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ತಾನ್ಸೇನ್ ಸಮಾರೋಹ್ದಲ್ಲಿ ದೇಶ ವಿದೇಶಗಳ ಪ್ರಸಿದ್ಧ ಕಲಾವಿದರು ಗಾಯನ, ಸಂಗೀತ, ನೃತ್ಯ ಕಾರ್ಯಕ್ರಮ ನೀಡುತ್ತಾರೆ.

ನಮ್ಮ ದೇಶದ ದೊಡ್ಡ ರಾಜ್ಯ ಮಧ್ಯಪ್ರದೇಶ. ಅಲ್ಲಿಯ ಸಂಸ್ಕøತಿ, ಸಾಹಿತ್ಯ, ಸಂಗೀತ, ನಾಟಕದ ಹಿರಿಮೆ ಅಪಾರ. ರಾಜಧಾನಿ ಭೂಪಾಲ್ನಲ್ಲಿ ಬಿ.ವಿ.ಕಾರಂತರು ಸ್ಥಾಪಿಸಿದ ಸಾಂಸ್ಕøತಿಕ ಕೇಂದ್ರ ಭಾರತ್ಭವನ ದೇಶಕ್ಕೇ ಒಂದು ಮಾದರಿ. ಅದರಿಂದ ಪ್ರೇರಣೆಗೊಂಡಿದ್ದೇ ಕರ್ನಾಟಕದ ರಂಗಾಯಣ. ಹೆಗ್ಗೋಡಿನ ನೀನಾಸಂ ಗೆ ಮಧ್ಯಪ್ರದೇಶ ಸರ್ಕಾರ ಪ್ರತಿಷ್ಠಿತ ರಾಜಾ ಮಾನ್ಸಿಂಗ್ ತೋಮರ್ ಪ್ರಶಸ್ತಿಯನ್ನು ಪ್ರಟಿಸಿತು. ಪ್ರಶಸ್ತಿ ಸ್ವೀಕರಿಸಲು ನೀನಾಸಂ ಕಾರ್ಯದರ್ಶಿ ನಾರಾಯಣ ಭಟ್ ಪುರಪ್ಪೆಮನೆ ಮತ್ತು ನಿರ್ದೇಶಕ ಮಂಡಳಿಯ ಸದಸ್ಯನಾದ ನಾನು ಗ್ವಾಲಿಯರ್ ತಲುಪಿದೆವು.

ಬೆಳಗ್ಗೆ ಎದ್ದು ತಾನ್ಸೇನ್ ಸಮಾರೋಹ್ ಉದ್ಘಾಟನಾ ಸ್ಥಳಕ್ಕೆ ಹೋದೆವು. ಅಲ್ಲಿ ತಾನ್ಸೇನ್ ಸಮಾಧಿಯನ್ನು ಪುಷ್ಪ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿ, ಹಿಂದೂ ಸಂಪ್ರದಾಯದಂತೆ ತಾನ್ಸೇನ್ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜಿಸಿ ಹಿರಿಯ ಕಲಾವಿದರು ಷಹನಾಯ್ ನುಡಿಸಿದರು. ತಾನ್ಸೇನ್ ಕುಟುಂಬದ ಹಿರಿಯರೊಬ್ಬರು ತಾನ್ಸೇನ್ ಧರಿಸಿದ್ದ ಎಲ್ಲ ವಡವೆ ವಸ್ತ್ರಗಳನ್ನು ಧರಿಸಿರುತ್ತಾರೆ. ಅವರು ಹರಿಕಥೆಯನ್ನು ಮಾಡುತ್ತಾರೆ. ಉಳಿದ ಕಲಾವಿದರೂ ಅದೇ ರೀತಿಯ ಪೋಷಾಕಿನಲ್ಲಿ ಕಾಣುವುದರಿಂದ ಎಲ್ಲೆಲ್ಲೂ ತಾನ್ಸೇನ್ರನ್ನೇ ಕಾಣುತ್ತಿದ್ದೆವು. ಇದು ಹಿಂದೂ ಮುಸ್ಲೀಂ ಸೇರಿ ನಡೆಸುವ ಅದ್ಭುತವಾದ ಕಾರ್ಯಕ್ರಮವಾಗಿದೆ.

ನನಗೆ ಆಶ್ಚರ್ಯವೇನೆಂದರೆ, ಸಾವಿರಾರು ಮುಸಲ್ಮಾನರ ಗೋರಿಗಳ ನಡುವೆ ಸುಂದರವಾದ 16ನೇ ಶತಮಾನದ ಮಹ್ಮಮದ್ ಗೌಸ್ ಅವರ ದೊಡ್ಡ ಸಮಾಧಿ ಮಂದಿರ, ಅದರ ಪಕ್ಕದಲ್ಲಿಯೇ ಸ್ವಲ್ಪ ಚಿಕ್ಕದಾದ ಹಿಂದೂ ಕಲಾವಿದ ತಾನ್ಸೇನ್ ಗೋರಿಯನ್ನು ಕಟ್ಟಿದ್ದಾರೆ. ಹೀಗಾಗಿ ನನಗೆ ಗೊಂದಲವಾಗಿ ಹಿರಿಯರೊಬ್ಬರಲ್ಲಿ ಮುಸ್ಲೀಂ ಗೋರಿಗಳ ಮಧ್ಯೆ ತಾನ್ಸೇನರ ಗೋರಿ ಹೇಗೆ ಎಂದು ಕೇಳಿದೆ. ಅದಕ್ಕೆ ಅವರು, ಹಿಂದೆ ರಾಜರ ಕಾಲದಲ್ಲಿ ಹಿಂದು ಮುಸ್ಲೀಮರ ಬಗ್ಗೆ ಭೇದವಿರಲಿಲ್ಲ. ಅಕ್ಬರನ ಆಸ್ಥಾನದಲ್ಲಿದ್ದ ತಾನ್ಸೇನ್ ಸಂಗೀತಕ್ಕೆ ಉತ್ತರ ಭಾರತವೇ ತಲೆದೂಗುವಂತಹ ದೊಡ್ಡ ಕಲಾವಿದನಾಗಿದ್ದ. ಹಾಗಾಗಿ ಅವರ ಗೌರವಾರ್ಥ ನಮ್ಮೆಲ್ಲರ ನಡುವೆಯೇ ಗೋರಿ ನಿರ್ಮಾಣವಾಗಿದೆ ಎಂಬ ಉತ್ತರ ಬಂತು.

ಅಲ್ಲಿಂದ ಕೂಗಳತೆ ದೂರದಲ್ಲಿಯೇ ಮಂಜಿನ ಮಧ್ಯೆ ಮಸುಕಾಗಿ ಕಾಣುತ್ತಿದ್ದ ಗೋಡೆಯ ಬಗ್ಗೆ ಕೇಳಿದಾಗಿ ಇದು ಗ್ವಾಲಿಯರ್ ಕೋಟೆ ಎಂದು ತಿಳಿದುಬಂತು. ಕೋಟೆಯ ವರೆಗೆ ಕಾರಿನಲ್ಲಿ ಹೋಗಿ ಎತ್ತರದ ಕೋಟೆಯನ್ನು ಏರಿದೆವು. ಅಲ್ಲಿಂದ ಇಡೀ ಗ್ವಾಲಿಯರ್ ನಗರವೇ ಗೋಚರವಾಗುತ್ತದೆ. ಕೋಟೆ ನೋಡುವಂಥದ್ದು; ಅತ್ಯಂತ ಸುಂದರವಾಗಿ ಕಿ.. 1508ರಲ್ಲಿ ರಾಜಾ ಮಾನ್ಸಿಂಗ್ ತೋಮರ್ ಕಟ್ಟಿಸಿದ್ದಾರೆ. ನಾಲ್ಕು ಮಹಡಿಗಳನ್ನು ಹೊಂದಿದೆ. ಪ್ರಸಿದ್ಧ ಹಿಂದೂ ವಾಸ್ತು ಶಿಲ್ಪವನ್ನೊಳಗೊಂಡಿದ್ದು, ರಾಜಾ ರಾಣಿಯರ ಕೊಠಡಿಗಳು ವಿವಿಧ ವರ್ಣದ ಹೊಳಪುಳ್ಳು ಟೈಲ್ಸ್ಗಳಿಂದ ನಿರ್ಮಿತವಾಗಿದೆ. ನಾಲ್ಕು ಗೋಪುರಗಳು ಅತ್ಯಂತ ಸುಂದರವಾಗಿವೆ. ಸುಂದರ ನೆಲಮಾಳಿಗೆಯನ್ನು ಹೊಂದಿದೆ. ಹೊರಗಡೆ ಗೋಡೆಯು 300 ಅಡಿ ಎತ್ತರಕ್ಕೆ ಕಟ್ಟಿದ್ದು ವಿಶೇಷ ವಾಸ್ತುಶಿಲ್ಪವಾಗಿದೆ. 16ನೇ ಶತಮಾನದಲ್ಲಿ ಮೊಘಲರು ಆಕ್ರಮಣ ಮಾಡಿ ಕೋಟೆಯನ್ನು ವಶಪಡಿಸಿಕೊಂಡು ಅದನ್ನು ಬಂದಿಖಾನೆಯನ್ನಾಗಿ ಪರಿವರ್ತಿಸಿಕೊಂಡಿದ್ದರು ಎಂದು ಅಲ್ಲಿನ ಬರಹವೊಂದು ತಿಳಿಸುತ್ತದೆ.

ಕೋಟೆಯ ಒಳಭಾಗದಲ್ಲಿ ಸರೋವರ, ವಸ್ತು ಸಂಗ್ರಹಾಲಯ, ವಿವಿಧ ವಾಸ್ತು ಶೈಲಿಯ ದೇವಾಲಯಗಳನ್ನು ನೋಡಬಹುದಾಗಿದೆ. ರಾಜಾ ಮಾನ್ಸಿಂಗ್ ತೋಮರ್ ಕ್ರಿ.. 1486 ರಿಂದ 1516 ವರೆಗೆ ಆಳ್ವಿಕೆ ಮಾಡಿದ್ದ. ನಂತರ ವಿಜಯರಾಜೇ ಸಿಂಧಿಯಾ ಕುಟುಂಬದವರು ಆಳ್ವಿಕೆ ಮಾಡಿದ ದೊಡ್ಡ ದೊಡ್ಡ ಅರಮನೆಗಳು, ಶಾಲಾ ಕಾಲೇಜುಗಳನ್ನೊಳಗೊಂಡ ಸಾವಿರಾರು ಎಕರೆ ವ್ಯಾಪ್ತಿ ಹೊಂದಿರುವ ಕೋಟೆಯು ನೋಡಲೇಬೇಕಾದ ತಾಣವಾಗಿದೆ. ಸದಾ ಪ್ರವಾಸಿಗರಿಂದ ತುಂಬಿರುವ ಪಟ್ಟಣವಿದು. ಅಕ್ಟೋಬರ್ ನವೆಂಬರ್ಗಳಲ್ಲಿ ಚಳಿ ಕಡಿಮೆ ಇರುವುದರಿಂದ ಪ್ರವಾಸಕ್ಕೆ ಯೋಗ್ಯ ಕಾಲವಾಗಿರುತ್ತದೆ.

ಮಧ್ಯಾಹ್ನ ಹೋಟೆಲ್ಗೆ ಬಂದು ಊಟ, ವಿಶ್ರಾಂತಿ ಪೂರೈಸಿ ಸಂಜೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅಣಿಯಾದೆವು. ತಾನ್ಸೇನ್ ಸಮಾಧಿಯ ಸನಿಹದಲ್ಲಿಯೇ ನಿರ್ಮಿಸಿರುವ ರಾಜಸಭೆಯನ್ನು ನೆನಪಿಸುವ ಭವ್ಯ ವೇದಿಕೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕಾರ್ಯಕ್ರಮದ ವೀಕ್ಷಕರಿಗೆ ಕುರ್ಚಿಗಳನ್ನು ಹಾಕದೆ ನೆಲದ ಮೇಲೆ ಮೆತ್ತನೆಯ ಥಡಿ ಹಾಗೂ ದಿಂಬುಗಳನ್ನು ಹಾಕಿ ಬೈಠಕ್ ಆಸನ ವ್ಯವಸ್ಥೆ ಮಾಡಲಾಗಿತ್ತು.

ನಮ್ಮನ್ನು ಗೌರವಾನ್ವಿತ ಅತಿಥಿಗಳೆಂದು ಬರಮಾಡಿಕೊಂಡರು. ನಮ್ಮನ್ನು ವೇದಿಕೆಗೆ ಕರೆದು ದೀಪ ಬೆಳಗಿಸಲು ಕೋರಿದರು. ಮುಖ್ಯ ವೇದಿಕೆಯಲ್ಲಿ ಕುಳ್ಳಿರಿಸಿ, ನೀನಾಸಂ ಸಂಸ್ಥೆಯ ಸಾಧನೆ ಹಾಗೂ ವೈಶಿಷ್ಟ್ಯಗಳನ್ನು ವಿವರಿಸಿದರು. ಮಧ್ಯಪ್ರದೇಶ ಸರ್ಕಾರ ಕೊಡಮಾಡುವ ಒಂದು ಲಕ್ಷ ರೂಪಾಯಿಗಳ ನಗದನ್ನೊಳಗೊಂಡ ಪ್ರತಿಷ್ಠಿತ ರಾಜಾ ಮಾನ್ಸಿಂಗ್ ತೋಮರ್ ಪ್ರಶಸ್ತಿಯನ್ನು ಅಲ್ಲಿನ ಸರ್ಕಾರದ ಸಂಸ್ಕøತಿ ಸಚಿವೆ ಡಾ.ವಿಜಯಲಕ್ಷ್ಮೀ ಸಾಗೆ ಅವರು ನಮಗೆ ಪ್ರದಾನ ಮಾಡಿದರು. 2002ರಲ್ಲಿ ಮಧ್ಯಪ್ರದೇಶ ಸರ್ಕಾರ ನಮ್ಮ ಸಂಸ್ಥೆಯ ರೂವಾರಿ ಕೆ.ವಿ.ಸುಬ್ಬಣ್ಣನವರಿಗೆ ಕಾಳಿದಾಸ ಸಮ್ಮಾನ್ ನೀಡಿದ್ದು ನೆನಪಾಯಿತು.

ವರ್ಷಕ್ಕೊಮ್ಮೆ ಒಂದು ವಾರ ನಡೆಯುವ ಅಂತಾರಾಷ್ಟ್ರೀಯ ತಾನ್ಸೇನ್ ಸಮಾರೋಹ್ದಲ್ಲಿ ದೇಶ ವಿದೇಶಗಳ ಪ್ರಸಿದ್ಧ ಕಲಾವಿದರು ಗಾಯನ, ಸಂಗೀತ, ನೃತ್ಯ ಕಾರ್ಯಕ್ರಮ ನೀಡುತ್ತಾರೆ. ಇಲ್ಲಿ ಕಾರ್ಯಕ್ರಮ ನೀಡುವುದು ಕಲಾವಿದರಿಗೆ ಪ್ರತಿಷ್ಠೆಯ ಸಂಕೇತ. ಸಭಾಂಗಣದ ಹೊರಗಡೆ ವಾತಾವರಣ 8ಡಿಗ್ರಿ ಸೆಂಟಿಗ್ರೇಡ್ಗೆ ಇಳಿದಿದ್ದರೂ ಕಲಾಸ್ತರು ಮಾತ್ರಾ ಸಾಗರೋಪಾದಿಯಲ್ಲಿ ಜಮಾಯಿಸಿ ಅತ್ಯಂತ ಶಿಸ್ತಾಗಿ, ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಸುಮಾರು ಮಧ್ಯರಾತ್ರಿಯ ವರೆಗೂ ನಡೆಯಿತು.

ಒಟ್ಟಾರ ಇನ್ನೊಂದು ಹೇಳಲೇಬೇಕಾದ ಸಂಗತಿ ಮಧ್ಯಪ್ರದೇಶ ಸರ್ಕಾರದ ಅಧಿಕಾರಿಗಳು, ಸಿಬ್ಬಂದಿಗಳು, ಉಳಿದುಕೊಂಡ ಹೋಟೆಲ್ ಸಿಬ್ಬಂದಿಗಳು ನೀಡಿದ ಗೌರವ, ವಿನಯಪೂರ್ವಕ ನಡವಳಿಕೆ ನಮ್ಮ ನೆನಪಿನಲ್ಲಿ ಉಳಿದಿದೆ.

Leave a Reply

Your email address will not be published.