ಚಿಂತನೆಗಳಿಗೆ ಸಂಕೇತವಾಗದ ಪ್ರತಿಮೆಗಳು

– ನಾ ದಿವಾಕರ

ಬಹುತೇಕ ಸಾಂಪ್ರದಾಯಿಕ ಸಮಾಜಗಳಲ್ಲಿ ಪ್ರತಿಮೆಗಳು ಚಿಂತನೆಗಳ ಸಂಕೇತವಾಗುವ ಬದಲು ಆರಾಧನೆಯ ಕೇಂದ್ರಗಳಾಗಿ ರೂಪುಗೊಂಡು ಒಂದು ಹಂತದಲ್ಲಿ ಸಂಸ್ಕೃತಿಕ ಅಧಿಪತ್ಯದ ಸಂಕೇತಗಳಾಗಿಬಿಡುತ್ತವೆ. ಇತ್ತೀಚೆಗೆ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನೂ ಇದೇ ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ.

ಪ್ರತಿಮೆ ಮತ್ತು ಸ್ಮಾರಕಗಳ ಮೂಲಕ ಗತಕಾಲದ ಮಹನೀಯರನ್ನು ನೆನೆಯುವ ಪರಂಪರೆ ಸಾರ್ವತ್ರಿಕವಾದದ್ದು ಮತ್ತು ಪ್ರಾಚೀನವಾದದ್ದು ಸಹ. ಬಹುಶಃ ಪ್ರಪಂಚದ ಯಾವುದೇ ದೇಶವೂ ಈ ಪರಂಪರೆಯಿಂದ ಹೊರತಾಗಿಲ್ಲ. ಪ್ರತಿಮೆ ಮತ್ತು ಸ್ಮಾರಕಗಳನ್ನು ಎರಡು ಮಜಲುಗಳಲ್ಲಿ ನೋಡಬಹುದು. ಮೊದಲನೆಯದಾಗಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶ ಅಥ ವಾ ನಿರ್ದಿಷ್ಟ ಮತ ಧಾರ್ಮಿಕ ಜನಸಮುದಾಯಗಳ ಅಭ್ಯುದಯದ ಹಾದಿಯಲ್ಲಿ ಮಹತ್ವದ ಕೊಡುಗೆ ಸಲ್ಲಿಸುವ ಮಹಾನ್ ನೇತಾರರನ್ನು ಪ್ರತಿಮೆಯ ರೂಪದಲ್ಲಿ, ಸ್ಮಾರಕದ ರೂಪದಲ್ಲಿ ಸ್ಥಾಪಿಸಿ ಗೌರವಿಸುವುದು ಕಾಲಾನುಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯ. ಇಲ್ಲಿ ಸ್ಥಾಪಿಸಲಾಗುವ ಪ್ರತಿಮೆ ಮತ್ತು ಸ್ಮಾರಕಗಳು ಆಯಾ ಜನಸಮುದಾಯಗಳ ಅಥವಾ ಭೌಗೋಳಿಕ ರಾಷ್ಟ್ರದ ಅಸ್ಮಿತೆಯಾಗಿಯೂ ಪರಿಣಮಿಸುವ ಸಾಧ್ಯತೆಗಳೇ ಹೆಚ್ಚು. ಭಾರತ ಅಥವಾ ಇತರ ಏಷಿಯಾ ಖಂಡದ ಸಾಂಪ್ರದಾಯಿಕ ರಾಷ್ಟ್ರಗಳಲ್ಲಿ ಮಾತ್ರವೇ ಅಲ್ಲದೆ ಪಾಶ್ಚಿಮಾತ್ಯ ಕಮ್ಯುನಿಸ್ಟ್ ರಾಷ್ಟ್ರಗಳಲ್ಲೂ ಪ್ರತಿಮೆ ಮತ್ತು ಸ್ಮಾರಕಗಳು ಗತ ಇತಿಹಾಸದ ಹೆಜ್ಜೆ ಗುರುತುಗಳನ್ನು ನೆನಪಿಸುವ ಸಂಕೇತಗಳಾಗಿ ಸ್ಥಾಪನೆಯಾಗಿರುವುದನ್ನು ಚರಿತ್ರೆಯ ವಿಭಿನ್ನ ಕಾಲಘಟ್ಟಗಳಲ್ಲಿ ಗುರುತಿಸಬಹುದು.

ಎರಡನೆಯದಾಗಿ ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಮಾರ್ಗದರ್ಶಕರಾಗಿ, ದಾರ್ಶನಿಕರಾಗಿ, ಸಂತರಾಗಿ ಸಮಾಜದ ಮುನ್ನಡೆಗೆ ತಮ್ಮದೇ ಆದ ಕೊಡುಗೆ ಸಲ್ಲಿಸುವ ಮಹನೀಯರು, ರಾಜಕೀಯ ನಾಯಕರು, ಸಾಂಸ್ಕೃತಿಕ ನೇತಾರರು, ಸಾಮಾಜಿಕ ಹೋರಾಟಗಾರರು ತಮ್ಮ ಜೀವಿತಾವಧಿಯ ನಂತರ ಪ್ರತಿಮೆಗಳ ರೂಪದಲ್ಲಿ, ಸ್ಮಾರಕಗಳ ರೂಪದಲ್ಲಿ ಜನಮಾನಸದಲ್ಲಿ ಬೇರೂರಿ ರುತ್ತಾರೆ. ಇಲ್ಲಿ ಪ್ರತಿಮೆ ಮತ್ತು ಸ್ಮಾರಕಗಳು ಸಾರ್ವತ್ರಿಕ ಮನ್ನಣೆ ಮತ್ತು ಲಕ್ಷಣಗಳನ್ನು ಹೊಂದಿದ್ದರೂ ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ತತ್ವ, ಸಿದ್ಧಾಂತ ಮತ್ತು ನೀತಿಗಳ ನೆಲೆಯಲ್ಲಿ ಪ್ರತ್ಯೇಕ ಅಸ್ಮಿತೆಯನ್ನು ಸಂಪಾದಿಸಿಕೊಳ್ಳುತ್ತವೆ. ಇಲ್ಲಿ ಪ್ರತಿಮೆ ಮತ್ತು ಸ್ಮಾರಕಗಳು ಅನೇಕ ಸಂದರ್ಭಗಳಲ್ಲಿ ಕೆಲವು ನಿರ್ಬಂಧಕ ಚೌಕಟ್ಟುಗಳಲ್ಲಿ ಬಂಧಿಸಲ್ಪಡುತ್ತವೆ. ಪ್ರತಿಮೆಯ ರೂಪದ ಮಹನೀಯರ ಮೂಲ ಆಶಯಗಳಿಗೂ ಧಕ್ಕೆ ಉಂಟಾಗುವ ರೀತಿಯಲ್ಲಿ ಬೆಳವಣಿಗೆಗಳನ್ನು ಕಾಣಬಹುದು.

ಪ್ರತಿಮೆ ಅಥವಾ ಸ್ಮಾರಕ ಒಂದು ದೃಷ್ಟಿಯಲ್ಲ್ಲಿ ಪ್ರೀತ್ಯಾದರ ಮತ್ತು ಗೌರವಗಳ ಕುರುಹಾದರೆ ಮತ್ತೊಂದು ದೃಷ್ಟಿಯಲ್ಲಿ ಗತ ಇತಿಹಾಸದ ಹೆಜ್ಜೆಗಳನ್ನು ಗುರುತಿಸುವ ಮೌನ ಅಭಿವ್ಯಕ್ತಿಯೂ ಆಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಪ್ರತಿಮೆಗಳು ಸ್ಥಾವರ ರೂಪದಲ್ಲೇ ತಮ್ಮ ಅಸ್ತಿತ್ವವನ್ನು ನಿರೂಪಿಸಿಕೊಳ್ಳುತ್ತವೆಯೇ ಹೊರತು ಜಂಗಮ ಸ್ವರೂಪವನ್ನಲ್ಲ. ಪ್ರತಿಮೆಯ ರೂಪದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಸ್ತಿತ್ವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಮಹಾನ್ ವ್ಯಕ್ತಿಗಳ ಚಿಂತನೆಗಳು ಜಂಗಮ ಸ್ವರೂಪಿಯಾದವು. ಈ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಬಯಸುವ ಯಾವುದೇ ಸಮಾಜ ಸ್ಥಾವರ ರೂಪಿ ಪ್ರತಿಮೆಯನ್ನು ಅಸ್ಮಿತೆಗಳ ಸರಳುಗಳಲ್ಲಿ ಬಂಧಿಸುವುದಿಲ್ಲ. ಹಾಗೊಮ್ಮೆ ಬಂಧಿಸಲ್ಪಟ್ಟರೆ ಪ್ರತಿಮೆಗಳು ತಮ್ಮ ಮೂಲ ಸತ್ವವನ್ನು ಕಳೆದುಕೊಂಡು ಜಂಗಮ ಸ್ವರೂಪಿ ಚಿಂತನೆಗಳು ಹಿಂಬದಿಗೆ ಸರಿಯುತ್ತವೆ. ಬಹುತೇಕ ಸಾಂಪ್ರದಾಯಿಕ ಸಮಾಜಗಳಲ್ಲಿ ಇದು ಸಂಭವಿಸುವ ಸಾಧ್ಯತೆ ಹೆಚ್ಚು. ಪ್ರತಿಮೆಗಳು ಚಿಂತನೆಗಳ ಸಂಕೇತವಾಗುವ ಬದಲು ಆರಾಧನೆಯ ಕೇಂದ್ರಗಳಾಗಿ ರೂಪುಗೊಂಡು ಒಂದು ಹಂತದಲ್ಲಿ ಸಂಸ್ಕೃತಿಕ ಅಧಿಪತ್ಯದ ಸಂಕೇತಗಳಾಗಿಬಿಡುತ್ತವೆ.

ಹರಿವ ಕಾವೇರಿಗೇಕೆ ಸ್ಥಾವರ ಶಿಲ್ಪ?

ನರೇಂದ್ರ ಮೋದಿ ಸರ್ಕಾರ ಗುಜರಾತ್‍ನ ನರ್ಮದಾ ಕಣಿವೆಯ ಆಕ್ರಂದನ ಮತ್ತು ಹೃದಯ ವೇದನೆಯನ್ನೂ ಗ್ರಹಿಸದೆ 190 ಮೀಟರ್ ಎತ್ತರದ ಸರ್ದಾರ ಪಟೇಲ್ ಪ್ರತಿಮೆಯನ್ನು ನಿರ್ಮಿಸಿದ ನಂತರ ಭಾರತದಲ್ಲಿ ಪ್ರತಿಮಾ ರಾಜಕಾರಣ ತನ್ನೆಲ್ಲಾ ಹೊಲಸನ್ನು ಹೊರಹಾಕುತ್ತಾ ಮುನ್ನಡೆಯುತ್ತಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಶ್ರೀರಾಮ, ಮಹಾರಾಷ್ಟ್ರದಲ್ಲಿ ಶಿವಾಜಿ, ಮತ್ತೊಂದೆಡೆ ಹನುಮಂತನ ಪ್ರತಿಮೆಗಳು ಸಿದ್ಧವಾಗುವಂತಿದೆ.

ಇತ್ತ ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟಿನ ಸಮೀಪ 350 ಅಡಿ ಎತ್ತರದ ಕಾವೇರಿ ಪ್ರತಿಮೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ 1200 ಕೋಟಿ ರೂಗಳ ಯೋಜನೆ ಮತ್ತು ನೀಲಿನಕ್ಷೆಯನ್ನು ಸಿದ್ಧಪಡಿಸಿದೆ. ಇದರ ಸಮೀಪದಲ್ಲೇ ಅಮೆರಿಕದ ಡಿಸ್ನಿಲ್ಯಾಂಡ್‍ನ ಪ್ರತಿರೂಪವನ್ನು ನಿರ್ಮಿಸಲೂ ಯೋಚಿಸಲಾಗುತ್ತಿದೆ. ಕಾವೇರಿ ಕಣಿವೆಯನ್ನು ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡಿ ಹಣ ಬಾಚಿಕೊಳ್ಳುವ ತವಕದಲ್ಲಿ ರಾಜ್ಯ ಸರ್ಕಾರ ರಾಜ್ಯದ ಅತಿ ದೊಡ್ಡ ಜನಸಂಪನ್ಮೂಲವನ್ನು ಪಣಕ್ಕಿಡುತ್ತಿದೆ.

ಕಬ್ಬಿನ ಬೆಳೆಗೆ ಉತ್ತಮ ಬೆಲೆಗಾಗಿ ಹೋರಾಡುತ್ತಿರುವ ರೈತ ಸಮುದಾಯವನ್ನು ಅಪಮಾನಗೊಳಿಸುವ ಸರ್ಕಾರಕ್ಕೆ ರೈತರ  ಜೀವನದಿಯಾಗಿರುವ ಕಾವೇರಿ ನದಿ ಮತ್ತು ಅಣೆಕಟ್ಟನ್ನು ಅತಿಕ್ರಮಿಸಲು ನೈತಿಕ ಹಕ್ಕು ಇದೆಯೇ ಎಂದು ಪ್ರಶ್ನಿಸಬೇಕಿದೆ. ಕೆಆರ್‍ಎಸ್ ಅಣೆಕಟ್ಟು ಈಗಾಗಲೇ ಸೂಕ್ಷ್ಮ ಪ್ರದೇಶದಲ್ಲಿದ್ದು ಈ ಅಣೆಕಟ್ಟಿನ ಸಮೀಪ 125 ಅಡಿ ಎತ್ತರದ ಪೀಠ ನಿರ್ಮಿಸಿ ಅದರ ಮೇಲೆ ಬೃಹದಾಕಾರದ ಗಗನಚುಂಬಿ ಕಾವೇರಿಯನ್ನು ನಿಲ್ಲಿಸುವುದು ಪರಿಸರ ರಕ್ಷಣೆಯ ದೃಷ್ಟಿಯಿಂದ ಮಾತ್ರವೇ ಅಲ್ಲ ಮಾನವೀಯ ದೃಷ್ಟಿಯಿಂದಲೂ ಅಕ್ಷಮ್ಯ. ಕಾವೇರಿ ಗಂಗೆಯಂತೆ ಸದಾ ತುಂಬಿಹರಿಯುವ ನದಿ ಅಲ್ಲ. ಕೃಷ್ಣರಾಜ ಸಾಗರ ಅಣೆಕಟ್ಟು ಬತ್ತಿ ಹೋದಂತಾಗುವ ಉದಾಹರಣೆಗಳೂ ನಮ್ಮ ಮುಂದಿವೆ. ಅಣೆಕಟ್ಟಿನಲ್ಲಿ ಶೇಖರಣೆಯಾಗಿರುವ ಹೂಳೆತ್ತಲು ಮುಂದಾಗದ ಸರ್ಕಾರ ಅಣೆಕಟ್ಟಿನ ಸಮಾಧಿ ನಿರ್ಮಿಸಲು ಮುಂದಾಗಿರುವುದು ದುರಂತ.

ಈಗಾಗಲೇ ಮಂಡ್ಯ ಜಿಲ್ಲೆಯ ಪರಿಸರ ಪ್ರೇಮಿಗಳು, ರೈತರು ಮತ್ತು ಪ್ರಗತಿಪರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಇಲ್ಲಿನ ರೈತಾಪಿಯ ಅಳಿವು ಉಳಿವಿನ ಪ್ರಶ್ನೆ. ಪ್ರವಾಸೋದ್ಯಮ ಬಂಡವಾಳಿಗರ, ಕಾರ್ಪೋರೇಟ್ ಉದ್ಯಮಿಗಳ ಜೇಬು ತುಂಬಿಸುತ್ತದೆ. ಆದರೆ ರೈತ ಸಮುದಾಯದ, ಶ್ರಮಜೀವಿಗಳ ಸಮಾಧಿಯ ಮೇಲೆ ಸುಂದರ ನಗರಿಯನ್ನು ನಿರ್ಮಿಸುತ್ತದೆ. ಈಗಾಗಲೇ ಧರ್ಮ, ಸಂಪ್ರದಾಯ, ಆಚರಣೆಗಳ ಹೆಸರಿನಲ್ಲಿ ಕಾವೇರಿಯ ಉಗಮಸ್ಥಾನವನ್ನು ಕಲುಷಿತಗೊಳಿಸಿ ಹಾಳುಮಾಡಲಾಗಿದೆ. ಇದು ಜೀವನದಿಯ ಜೀವದ ಪ್ರಶ್ನೆ. ಜೀವನದಿಯನ್ನು ನಂಬಿ ಬಾಳುವವರ ಬದುಕಿನ ಪ್ರಶ್ನೆ. ಹರಿವ ಕಾವೇರಿ ಜಂಗಮ ಸ್ವರೂಪಿ ಜೀವ ನಾಡಿ. ಅದಕ್ಕೆ ಸ್ಥಾವರ ರೂಪ ನೀಡಿ ಜೀವನ್ಮ ಕಳನ್ನಾಗಿ ಮಾಡುವುದು ಬೇಡ.

ಬಹುಶಃ ಭಾರತದ ಸಂದರ್ಭದಲ್ಲಿ ಈ ಪ್ರಕ್ರಿಯೆಯನ್ನು ನಾವು ಕಾಣುತ್ತಿದ್ದೇವೆ. ಇತ್ತೀಚೆಗೆ 3000 ಕೋಟಿ ರೂ ವೆಚ್ಚದಲ್ಲಿ ಗುಜರಾತ್‍ನ ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನೂ ಇದೇ ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ. ಪ್ರತಿಮೆಯ ನಿರ್ಮಾಣಕ್ಕಾಗಿ ತಗುಲಿರುವ ವೆಚ್ಚ ಮತ್ತು ಇಂತಹ ದುಂದು ವೆಚ್ಚಗಳನ್ನು ತಡೆಗಟ್ಟುವುದರ ಬಗ್ಗೆ ಮಾತನಾಡುವುದು ಭಾರತದ ಸಂದರ್ಭದಲ್ಲಿ ಅಸಂಬದ್ಧವೇನೋ ಎನಿಸುವಷ್ಟು ಮಟ್ಟಿಗೆ ನಾವು ಪ್ರತಿಮಾ ರಾಜಕಾರಣದ ಸೂಕ್ಷ್ಮಗಳಿಗೆ ಬಲಿಯಾಗಿಬಿಟ್ಟಿದ್ದೇವೆ. ಏಕೆಂದರೆ ಸ್ಥಾವರಗಳ ನಿರ್ಮಾಣದಲ್ಲಿ ಮತ್ತು ಜಂಗಮದ ವಿನಾಶದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿದೆ. ಮುಖ್ಯ ವಾಹಿನಿಯ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಧಿಪತ್ಯ ರಾಜಕಾರಣಕ್ಕೆ ಪ್ರತಿಮೆ ಮತ್ತು ಸ್ಮಾರಕಗಳನ್ನು ಬಳಸಿಕೊಂಡಿವೆ. ಜನ್ಮ ಸ್ಥಾನದಿಂದ ಸಮಾಧಿಯವರೆಗೂ ಈ ದೇಶದ ಮಹನೀಯರ ಬದುಕು ಮತ್ತು ಚಿಂತನೆಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿವೆ. ಹಾಗಾಗಿ ಈ ಮೊತ್ತದಲ್ಲಿ ಜನತೆಗೆ ಒಳಿತಾಗುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಬಹುದಿತ್ತು ಎಂದು ಹೇಳುವುದು ಪ್ರಾಮಾಣಿಕ ಎನಿಸುವುದೇ ಇಲ್ಲ. ಸಾರ್ವಜನಿಕ ಪ್ರಜ್ಞೆ ಈ ನಿಟ್ಟಿನಲ್ಲಿ ಜಾಗೃತವಾಗಿಲ್ಲದಿರುವುದು ಕಣ್ಣೆದುರಿನ ಸತ್ಯ.

ಸರ್ದಾರ್ ವಲ್ಲಭಾಯಿ ಪಟೇಲ್ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಯೋಧರೂ ಹೌದು, ನವ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದೂ ಹೌದು. ದೇಶಕ್ಕಾಗಿ ಹೋರಾಡಿದ ಹಲವಾರು ನಾಯಕರ ಸಾಲಿನಲ್ಲಿ ಪಟೇಲ್ ಅಜರಾಮರವಾಗಿ ನಿಲ್ಲುವುದೂ ಅಷ್ಟೇ ಸತ್ಯ. ದುರಂತ ಎಂದರೆ ಇಂದು ಭಾರತದ ಕಥನಕಾರರು ಸ್ವಾತಂತ್ರ್ಯ ಸಂಗ್ರಾಮವನ್ನು ಅಸ್ಮಿತೆಗಳ ನೆಲೆಯಲ್ಲಿ ವಿಶ್ಲೇಷಿಸುತ್ತಿರುವುದೇ ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್ ನಾಯಕರನ್ನು ತುಲನಾತ್ಮಕವಾಗಿ ನೋಡುವ ಮೂಲಕ ಬ್ರಿಟೀಷರಿಂದ ಸಾಧ್ಯವಾಗದ ಕೃತ್ಯವನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿ, ಸುಭಾಷ್ ಬೋಸ್ ಹಾಗೂ ನಂತರದಲ್ಲಿ ನೆಹರೂ, ಪಟೇಲ್ ಮುಂತಾದ ನಾಯಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಪ್ರಸ್ತುತ ಸಂದರ್ಭದ ರಾಜಕೀಯ ನೆಲೆಯಲ್ಲಿ ಚರ್ಚಿಸುವ ಮೂಲಕ ಪರಸ್ಪರ ಮುಖಾಮುಖಿಯಾಗಿಸಲು ಯತ್ನಿಸಲಾಗುತ್ತಿದೆ. ಇದು ಇತಿಹಾಸಕ್ಕೆ ಬಗೆಯುವ ದ್ರೋಹವಾದೀತು. ಗಾಂಧಿ ಮತ್ತು ಬೋಸ್, ನೆಹರೂ ಮತ್ತು ಪಟೇಲ್ ಇವರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಆಡಳಿತ ನಿರ್ವಹಣೆಗೆ ಮಾತ್ರವೇ ಸೀಮಿತವಾಗಿತ್ತೇ ಹೊರತು ವ್ಯಕ್ತಿಗತವಾಗಿರಲಿಲ್ಲ, ದೇಶದ ಐಕ್ಯತೆಗೆ ಅಡ್ಡಿಯಾಗುತ್ತಲೂ ಇರಲಿಲ್ಲ.

ಸ್ವತಂತ್ರ ಭಾರತದ 545 ರಾಜಪ್ರಭುತ್ವದ ಪ್ರಾಂತ್ಯಗಳನ್ನು ಭಾರತದಲ್ಲಿ ವಿಲೀನವಾಗುವಂತೆ ಮಾಡಲು ಪಟೇಲ್ ಪಟ್ಟ ಶ್ರಮದ ಹಿಂದೆ ನೆಹರೂ ಅವರ ಉತ್ತೇಜನ, ಉತ್ಸಾಹ ಮತ್ತು ಬದ್ಧತೆಯೂ ಇತ್ತು ಎಂಬುದನ್ನು ಪಟೇಲ್ ಸ್ವತಃ ಬಲ್ಲವರಾಗಿದ್ದರು. ಈ ಸಂದರ್ಭದಲ್ಲಿ ಕಾಶ್ಮೀರ, ಜುನಘಡ್, ಹೈದರಾಬಾದ್ ಮುಂತಾದ ಪ್ರಾಂತ್ಯಗಳ ಸಮಸ್ಯೆ ಎದುರಾದಾಗ ಇಬ್ಬರು ನಾಯಕರ ನಡುವೆ ಏರ್ಪಟ್ಟ ಭಿನ್ನಾಭಿಪ್ರಾಯಗಳು ಈ ಮಹಾನ್ ನಾಯಕರ ವೈಭವೀಕರಣ ಅಥವಾ ಚಾರಿತ್ರ್ಯವಧೆಯ ಸರಕುಗಳಾಗಿ ಪರಿಣಮಿಸಿರುವುದು ಈ ದೇಶದ ವಿದ್ವತ್ ವಲಯದ ದುರಂತ ಎಂದೇ ಹೇಳಬೇಕಾಗುತ್ತದೆ.

ಇನ್ನು ಸ್ವತಂತ್ರ ಭಾರತವನ್ನು ಸಮಗ್ರತೆ ಮತ್ತು ಐಕಮತ್ಯ ಸಾಧಿಸುವ ದೃಷ್ಟಿಯಿಂದ ಒಗ್ಗೂಡಿಸಿದ ಸರ್ದಾರ್ ಪಟೇಲ್ ಅವರ ಶ್ರಮ ಕೇವಲ ಭೌಗೋಳಿಕ ರಾಷ್ಟ್ರದ ಐಕ್ಯತೆಯಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಅಂದಿನ ಕಾಲಘಟ್ಟದ ರಾಷ್ಟ್ರೀಯವಾದಿ ಚಿಂತನೆ ಮತ್ತು ಭೌಗೋಳಿಕ ರಾಷ್ಟ್ರದ ಪರಿಕಲ್ಪನೆಯಲ್ಲಿಯೂ ಇಂದಿನಂತೆಯೇ ಬೌದ್ಧಿಕ ರಾಷ್ಟ್ರೀಯತೆಯನ್ನು ಕಾಣಲಾಗುತ್ತಿರಲಿಲ್ಲ. ಪಟೇಲ್ ಅವರ ಶ್ರಮ ಮತ್ತು ಸ್ಥೈರ್ಯ ಶ್ಲಾಘನೀಯವಾದರೂ ಈ ಕಾರಣಕ್ಕಾಗಿಯೇ ಅವರನ್ನು ಉಕ್ಕಿನ ಮನುಷ್ಯ ಎಂದು ಕರೆಯುವುದು ಎಲ್ಲೋ ಒಂದು ಕಡೆ ಪ್ರಭುತ್ವದ ಸೇನಾಬಲವನ್ನು ವೈಭವೀಕರಿಸಿದಂತೆಯೇ ಆಗುತ್ತದೆ. ಆಳುವ ವರ್ಗಗಳ ಭಾಷೆಯೇ ಜನಸಾಮಾನ್ಯರ ಪರಿಭಾಷೆಯಾದರೆ ಇಂತಹ ಅಪಭ್ರಂಶಗಳು ಸಂಭವಿಸುತ್ತವೆ. ಸರ್ದಾರ್ ಪಟೇಲ್ ಸೇನಾ ಬಲವನ್ನು ಬಳಸಿ ರಾಜರಾಳ್ವಿಕೆಯ ಪ್ರಾಂತ್ಯಗಳನ್ನು ಭಾರತದೊಡನೆ ವಿಲೀನಗೊಳಿಸಿದ್ದಕ್ಕಾಗಿ ಉಕ್ಕಿನ ಮನುಷ್ಯ ಎನಿಸಿಕೊಳ್ಳುತ್ತಾರೆ, ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಮತ್ತು ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆಯ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಉಕ್ಕಿನ ಮಹಿಳೆ, ದುರ್ಗಾ ಮಾತೆಯಾಗಿ ಕಾಣುತ್ತಾರೆ. ಅಂದ ರೆ ದೇಶದ ಪ್ರಗತಿಯ ಪಥದಲ್ಲಿ ಪ್ರಭುತ್ವದ ತೋಳ್ಬಲ ಅಥವಾ ಸೇನಾಬಲ ತನ್ನ ಸಾಮಥ್ರ್ಯ ಹಾಗೂ ಪ್ರಾಬಲ್ಯವನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಮಾತ್ರವೇ ನಾವು ನಾಯಕರನ್ನು ಪ್ರಬಲರೆಂದೋ ಬಲಾಢ್ಯರೆಂದೋ ಭಾವಿಸುತ್ತೇವೆ. ಈ ಚಿಂತನೆಯೇ 2002ರ ಗುಜರಾತ್ ಹಿಂಸಾಕಾಂಡದಿಂದ ಮತ್ತೊಬ್ಬ ಪ್ರಬಲ ನಾಯಕರ ಉದಯಕ್ಕೂ ಕಾರಣವಾಗಿರುವುದನ್ನು ಕಾಕತಾಳೀಯವಾಗಿ ಸ್ಮರಿಸ ಬಹುದು.

ಬಿಜೆಪಿ ಸರ್ಕಾರ ಮತ್ತು ಸಂಘಪರಿವಾರ ಸರ್ದಾರ್ ಪಟೇಲ್ ಪ್ರತಿಮೆಯನ್ನು ವೈಭವೀಕರಿಸುತ್ತಿರುವುದನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. ಸರ್ದಾರ್ ಪಟೇಲ್ ಎಂದ ಕೂಡಲೇ ವಿಲೀನದ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಗುಜರಾತ್‍ನ ರೈತ ಸಮುದಾಯಕ್ಕೆ ಅವರ ಕೊಡುಗೆ ನೇಪಥ್ಯಕ್ಕೆ ಸರಿಯುತ್ತದೆ. ಅವರ ಸ್ವಾತಂತ್ರ್ಯಪೂರ್ವ ಹೋರಾಟಗಳ ಪರ್ವ ಹಿನ್ನೆಲೆಗೆ ಸರಿಯುತ್ತದೆ. ಅವರ ಮೂಲ ವ್ಯಕ್ತಿತ್ವವೇ ನಗಣ್ಯವಾಗಿಬಿಡುತ್ತದೆ. ನೆಹರೂ ಮತ್ತು ಪಟೇಲ್ ನಡುವೆ ಇದ್ದ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಇಂದಿನ ಬಿಜೆಪಿ-ಕಾಂಗ್ರೆಸ್ ವೈಷಮ್ಯದೊಡನೆ ಸಮೀಕರಿಸುವ ವಿಕೃತ ಧೋರಣೆಯಿಂದ ಪಟೇಲರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವನ್ನು ಸಂಘಪರಿವಾರ ಮಾಡುತ್ತಿದೆ. ಇದು ಇತಿಹಾಸಕ್ಕೆ ಬಗೆದ ದ್ರೋಹ ಮಾತ್ರವಲ್ಲ ಪಟೇಲರ ವ್ಯಕ್ತಿತ್ವಕ್ಕೇ ಬಗೆದ ದ್ರೋಹವಾಗುತ್ತದೆ. ತಮ್ಮ ವ್ಯಕ್ತಿಗತ ಧಾರ್ಮಿಕ ನಿಲುವುಗಳ ಹೊರತಾಗಿಯೂ ದೇಶದ ಐಕ್ಯತೆಗಾಗಿ ಕೋಮು ಸೌಹಾರ್ದವನ್ನು ಕಾಪಾಡಿಕೊಳ್ಳುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ರಕ್ಷಿಸಿದ ನಾಯಕರನ್ನು ಇಂದಿನ ಕಾಲಘಟ್ಟದ ದ್ವೇಷ ರಾಜಕಾರಣದ ದಾಳಗಳನ್ನಾಗಿ ಬಳಸಿಕೊಳ್ಳುವುದು ವಿಪರ್ಯಾಸವೇ ಸರಿ.

ಅಖಂಡ ಭಾರತದ ಸ್ಥಾಪನೆ ಸ್ವಾತಂತ್ರ್ಯ ಪೂರ್ವ ನಾಯಕರ ಕನಸು ಮತ್ತು ಧ್ಯೇಯವಾಗಿತ್ತು. ಈ ಅಖಂಡತೆ ಕೇವಲ ಭೌಗೋಳಿಕವಾಗಿರಲಿಲ್ಲ ಎನ್ನುವುದನ್ನು ಪ್ರಸ್ತುತ ಸಂದರ್ಭದಲ್ಲಿ ಗಮನಿಸಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ ಐಕ್ಯತೆ ಮತ್ತು ಐಕ್ಯಮತ್ಯ ಸಾಧಿಸಬೇಕು ಎನ್ನುವ ಛಲದ ಹಿಂದೆ ಭಾರತದ ಬಹುಮುಖಿ ಸಂಸ್ಕೃತಿ, ಬಹುತ್ವದ ಚಿಂತನೆ ಮತ್ತು ಸಾಮಾಜಿಕ ಸೌಹಾರ್ದದ ಕನಸು ಸಹ ಇತ್ತು ಎನ್ನುವುದನ್ನು ಗಮನಿಸಬೇಕು. ಆದರೂ ನವ ಭಾರತದ ಪ್ರಭುತ್ವ ಶ್ರಮಜೀವಿಗಳ, ದುಡಿಮೆಗಾರರ ಕನಸುಗಳಿಗೆ ಮಾನವೀಯ ನೆಲೆಯಲ್ಲಿ ಸ್ಪಂದಿಸಲು ಸಿದ್ಧವಿರಲಿಲ್ಲ ಎನ್ನುವುದನ್ನೂ ಗಮನಿಸಬೇಕು. ಇವೆಲ್ಲವೂ ಚಾರಿ ತ್ರಿಕ ಸತ್ಯ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಸಂಸ್ಕೃತಿಚಿಂತನೆ ಯನ್ನೇ ಅಲ್ಲಗಳೆಯುವ ಸಂಸ್ಕೃತಿಕ-ರಾಜಕೀಯ ಶಕ್ತಿಗಳು ಸರ್ದಾರ್ ಪಟೇಲ್ ಅವರನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ಸಜ್ಜಾಗಿರುವುದು ಸ್ವತಂತ್ರ ಭಾರತದ ದುರಂತ. ಈ ದುರಂತದ ಛಾಯೆಯಲ್ಲೇ 182 ಮೀಟರ್ ಎತ್ತರದ ಪಟೇಲರ ಪ್ರತಿಮೆಯನ್ನು ನೋಡಬೇಕಾಗುತ್ತದೆ.

*ಲೇಖಕರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು; ಕೆನರಾಬ್ಯಾಂಕ್ ಉದ್ಯೋಗಿ, ಮಾಕ್ರ್ಸ್‍ವಾದಿ ಚಿಂತಕ, ಚಳವಳಿಗಳಲ್ಲಿ ಭಾಗಿ. 20ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಎಲ್.ಬಸವರಾಜು ದತ್ತಿ ಪ್ರಶಸ್ತಿ ಪುರಸ್ಕೃತರು . ಹಾಲಿ ಮೈಸೂರಿನಲ್ಲಿ ವಾಸ.

ಪಶ್ನಿಸಬೇಕಾದ ವೈಭವೀಕರಣ

ಪಟೇಲರ ಮುಗಿಲೆತ್ತರ ಪ್ರತಿಮೆಯನ್ನು ನೋಡಿದಾಗ ನರ್ಮದಾ ಕಣಿವೆಯ ಆದಿವಾಸಿಗಳು, ರೈತರು, ವನ್ಯಜಿವಿಗಳು, ಶ್ರಮಗಿವಿಗಳು ಮತ್ತು ಇವರ ತ್ಯಾಗ ಬಲಿದಾನ ನೆನಪಾಗುತ್ತದೆ. ಹಾಗೆಂದ ಮಾತ್ರಕ್ಕೆ ಸರ್ದಾರ್ ಪಟೇಲರ ಪ್ರತಿಮೆಯೇ ಬೇಕಿರಲಿಲ್ಲ ಎಂದು ಹೇಳಲಾಗದು. ಇನ್ನೂ ಎತ್ತರದ ಪ್ರತಿಮೆಯನ್ನೂ ನಿರ್ಮಿಸಬಹುದು. ಆದರೆ ಆ ಪ್ರತಿಮೆಯ ಹಿಂದಿನ ಕ್ಷುದ್ರ ರಾಜಕೀಯ ಚಿಂತನೆ ಮುಗಿಲೆತ್ತರದ ಪ್ರತಿಮೆಯನ್ನು ಬೌಧಿಕವಾಗಿ ಕುಬ್ಜವಾಗಿಸುವುದನು ಕಂಡಾಗ ಆದಿವಾಸಿಗಳ ಬಗ್ಗೆ ಮೂಡಿದಷ್ಟೇ ಅನುಕಂಪ ಪಟೇಲರ ಬಗ್ಗೆಯೂ ಮೂಡುತ್ತದೆ.

ಭಾರತದ ಭಾವುಗೋಳಿಕ ಐಕ್ಯತೆಗಾಗಿ ತಮ್ಮ ತನುಮನ ಅರ್ಪಿಸಿದ ಮಹಾನ್ ಸಾಂಗ್ರಾಮಿಯೂಬ್ಬರು ದೇಶದ ಸಮಗ್ರತೆ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನೇ ನಾಶಪಡಿಸುವವರ ಕೈಬಂಧಿ ಯಾಗುವುದು ಇತಿಹಾಸದ ವಿಡಂಬನೆಯಾಗಿ ಕಾಣುತ್ತದೆ. ರಝಾಕನ ಸೇನೆಯನ್ನು ಮಣಿಯಿಸಲು ಬಳಸಿದ ಸೇನೆಯನ್ನೇ ಶ್ರೀಕಾಕುಳಂ ಹೋರಾಟ ಗಾರರನ್ನು ದಮನಿಸಲೂಬಳಸಿದನ್ನು ಸ್ಮರಿಸಿದಾಗ ಪಟೇಲರ ವೈಭವೀಕರಣವನ್ನು ಪ್ರಶ್ನಿಸುವುದೂ ಅನಿವಾರ್ಯ ಎನಿಸುತ್ತದೆ.

Leave a Reply

Your email address will not be published.