ಚೀನಾದ ಆರ್ಥಿಕ ಪ್ರಾಬಲ್ಯ ಕೊನೆಗಾಣಿಸಲು ಭಾರತ ಏನು ಮಾಡಬೇಕು?

ಭಾರತ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದೆ. ಆದರೆ, ಇತರ ದೇಶಗಳು ಇನ್ನೂ ಹಾಗೆ ಮಾಡುತ್ತಿಲ್ಲ. ಇದರ ಫಲವಾಗಿ, ಚೀನಾದ ವಿರುದ್ಧ ಸಾಮೂಹಿಕ ಆರ್ಥಿಕ ಆಕ್ರಮಣವನ್ನು ಸಜ್ಜುಗೊಳಿಸಲು ಭಾರತಕ್ಕೆ ಕಷ್ಟವಾಗುತ್ತಿದೆ.

ಚೀನಾ ಗಡಿ ವಿಚಾರದಲ್ಲಿ ಭಾರತದ ಇತ್ತೀಚಿನ ನಿಲುವು, ದೇಶದಲ್ಲಿ ಚೀನಾ ವಿರೋಧಿ ಭಾವನೆಗಳನ್ನು ಉಲ್ಬಣಗೊಳಿಸಿದೆ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ನಿರಂತರ ಸಂಘರ್ಷದ ಹೊರತಾಗಿಯೂ, ತನ್ನ ಆಕ್ರಮಣಕಾರಿ ನೆರೆದೇಶಕ್ಕೆ ಪರಿಣಾಮಕಾರಿ ಪ್ರತಿಕ್ರಿಯೆ ನೀಡಲು ಭಾರತ ಪರದಾಡುತ್ತಿದೆ. ಪ್ರಸ್ತುತ, ಭಾರತದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕಾರ ಮತ್ತು ಬಂಡವಾಳ ಹೂಡಿಕೆಯನ್ನು ನಿಯಂತ್ರಿಸುವುದರಿAದ, ಆ ದೇಶಕ್ಕೆ ಆಗಬಹುದಾದ ಆರ್ಥಿಕ ನಷ್ಟದತ್ತ ಗಮನ ಕೇಂದ್ರೀಕರಿಸಲಾಗಿದೆ.

ಪ್ರಸ್ತುತ, ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಮತ್ತು ಬಂಡವಾಳ ನಿರ್ಬಂಧಿಸುವ ಕ್ರಮಗಳ ಹಿಂದೆ ಕೆಲವು ಮೂಲಭೂತ ಕಾಳಜಿಗಳಿವೆ. ಅವೇನೆಂದರೆ, ಟೆಲಿಕಾಂ ಕ್ಷೇತ್ರದಲ್ಲಿ ಚೀನಾದ ಆರ್ಥಿಕ ಹಿಡಿತವನ್ನು ನಿಯಂತ್ರಿಸುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವುದು ಮತ್ತು ಚೀನಾದ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದು. ಈ ಕ್ರಮಗಳಿಂದ, ಚೀನಾದ ಆಕ್ರಮಣಕಾರಿ ವರ್ತನೆಗೆ ಸರಿಯಾದ ಪಾಠ ಕಲಿಸಬಹುದೆಂದು ಸರಕಾರದ ಅನಿಸಿಕೆ. 

ನಾವಿದನ್ನು, ಭಾರತದ ಸುರಕ್ಷತಾ ಕಾಳಜಿಯೆಂದು ಸಮ್ಮತಿಸಬಹುದು. ಆದರೆ, ಈ ಆರ್ಥಿಕ ನಿರ್ಬಂಧದಿಂದ ಚೀನಾಕ್ಕೆ ತೊಂದರೆಯಾಗುವುದಿಲ್ಲ. ಬದಲಾಗಿ, ಭಾರತೀಯ ಆರ್ಥಿಕತೆಗೆ ಭವಿಷ್ಯದಲ್ಲಿ ಹಾನಿಯಾಗಬಹುದು. ಯಾಕೆಂದರೆ, ಚೀನಾದ ಅತಿದೊಡ್ಡ ಮಾರುಕಟ್ಟೆಗಳ ಪಟ್ಟಿಯಲ್ಲಿ ಭಾರತ ಇನ್ನೂ ಸ್ಥಾನ ಪಡೆದಿಲ್ಲ.  ಉದಾಹರಣೆಗೆ, ಚೀನಾ ದೇಶದ 2018ರ ಒಟ್ಟಾರೆ 2.5 ಟ್ರಿಲಿಯನ್ ರಫ್ತಿನಲ್ಲಿ, ಭಾರತದ ಪಾಲು ಸುಮಾರು 70 ಬಿಲಿಯನ್ ಮಾತ್ರ.  ಅಂದರೆ, ಒಟ್ಟು ರಫ್ತಿನ ಸರಿಸುಮಾರು 3%. ಹಾಗಾಗಿ, ಬಹಿಷ್ಕಾರ ಮತ್ತು ಆಮದು ತೆರಿಗೆಯ ಮೂಲಕ ಪಾಠ ಕಲಿಸುವ ಪ್ರಯತ್ನದಿಂದ ಚೀನಾಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.

ಪ್ರಸಕ್ತ, ಚೀನಾದ ಆಮದುಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ಭಾರತಕ್ಕೆ ಕಷ್ಟಕರವಾಗಬಹುದು. ಯಾಕೆಂದರೆ, ಚೀನಾದಿಂದ ಆಮದಾಗುವ ಬಹುತೇಕ ಉತ್ಪನ್ನಗಳು ದೇಶೀಯ ಉದ್ಯಮಗಳಿಗೆ ಅವಶ್ಯಕವಾಗಿದೆ. ಇವುಗಳಲ್ಲಿ ಮುಖ್ಯವಾಗಿ, ವಿದ್ಯುತ್ ಉಪಕರಣಗಳು, ಯಂತ್ರೋಪಕರಣಗಳು, ಸಂವಾಹಕ ಸಾಧನಗಳು, ರಸಗೊಬ್ಬರಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಕಲ್ಲಿದ್ದಲು, ವಾಹನದ ಬಿಡಿಭಾಗಗಳು, ಜವಳಿ ಉತ್ಪನ್ನಗಳು, ಯೋಜನಾ ಪರಿಕರಗಳು ಮತ್ತು ರೋಗ ನಿರೋಧಕಗಳು ಸೇರಿವೆ. ಹಲವಾರು ದಶಕಗಳಿಂದ, ಭಾರತೀಯ ಉದ್ಯಮಗಳು ಮತ್ತು ಪೂರೈಕೆ ಸರಪಳಿಗಳು ಈ ವಸ್ತುಗಳ ಆಮದನ್ನು ಅವಲಂಬಿಸಿವೆ.

ಖಂಡಿತವಾಗಿಯೂ, ಚೀನಾ ಈ ಉತ್ಪನ್ನಗಳ ಏಕೈಕ ಮೂಲವಲ್ಲ, ಆದರೆ, ಪ್ರಮುಖ ಮೂಲ. ಮಾತ್ರವಲ್ಲ, ಚೀನಾದಂತೆ ಸ್ಪರ್ಧಾತ್ಮಕ ಬೆಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮತ್ತು ತ್ವರಿತವಾಗಿ ಪೂರೈಸಲು ಬೇರೆ ಯಾವ ದೇಶಕ್ಕೂ ಸದ್ಯಕ್ಕೆ ಅಸಾಧ್ಯ.

ಈ ಹಿನ್ನೆಲೆಯಲ್ಲಿ, ಕೋವಿಡ್-19ನಿಂದಾಗಿ ವಿಶ್ವದಾದ್ಯಂತ ಕೈಗಾರಿಕಾ ವ್ಯವಸ್ಥೆಗಳು ತಮ್ಮ ಸಾಮರ್ಥ್ಯಕ್ಕಿಂತ ಕೆಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸ್ತುತತೆಯಲ್ಲಿ, ಭಾರತೀಯ ಉದ್ಯಮಗಳು ಚೀನಾದ ಆಮದನ್ನು ನಿಲ್ಲಿಸುವುದು ಅಸಾಧ್ಯ. ಈ ಕ್ರಮದಿಂದ, ಇತರ ದೇಶಗಳಿಂದ ಭಾರತ ಆಮದನ್ನು ಪಡೆಯುವ ಸಾಧ್ಯತೆಯನ್ನು ಸೀಮಿತಗೊಳಿಸುತ್ತದೆ. ಒಂದು ವೇಳೆ ಪಡೆದರೂ, ಈ ಆಮದಿನ ಮೇಲೆ ಭಾರತ ವಿಧಿಸುವ ತೆರಿಗೆಯಿಂದ, ದೇಶೀಯ ಉದ್ಯಮಕ್ಕೆ ಇನ್ನೂ ಹೆಚ್ಚಿನ ಹೊಡೆತ ಬೀಳುತ್ತದೆ.

ಪ್ರಸ್ತುತ, ಉದ್ಯಮಗಳು ತಮ್ಮ ಮಾರಾಟವನ್ನು ಪುನರುಜ್ಜೀವನಗೊಳಿಸಲು ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಹೆಣಗಾಡುತ್ತಿರುವಾಗ ಈ ಹೊಸ ಬೆಳವಣಿಗೆಗಳು ಹೆಚ್ಚಿನ ಆರ್ಥಿಕ ಸಂಕಷ್ಟ ತರುತ್ತವೆ. ಸದ್ಯ, ಕೋವಿಡ್-19ರ ವಿರುದ್ಧ ಹೋರಾಡಲು ಆಸ್ಪತ್ರೆ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಅತ್ಯಗತ್ಯವಾಗಿರುವ ಹ್ಯಾಂಡ್ ಸ್ಯಾನಿಟೈಸರ್, ಏಪ್ರನ್, ರಕ್ಷಣಾ ಉಡುಪು ಮತ್ತು ಕನ್ನಡಕ ಇತ್ಯಾದಿ ನಿರ್ಣಾಯಕ ಸರಕುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವುದು ಅಸಾಧ್ಯ. ಗಮನಾರ್ಹ ಅಂಶವೆಂದರೆ, ಈ ಎಲ್ಲಾ ಆಮದುಗಳಿಗೆ ಪ್ರಮುಖ ಮೂಲ ಚೀನಾ. ಆದರೆ, ಇವುಗಳ ಪೂರೈಕೆಯನ್ನು ಬಹಿಷ್ಕರಿಸಲು ಸಾಧ್ಯವಿಲ್ಲ, ಮಾತ್ರವಲ್ಲ, ಇವುಗಳ ಪೂರೈಕೆ ಕೈಗೆಟುಕುವಂತಿರಬೇಕು.

ವಿಶೇಷವೆAದರೆ, ಭಾರತದ ಬಂಡವಾಳ ಹೂಡಿಕೆಯಲ್ಲಿ ಚೀನಾ ಇನ್ನೂ ಪ್ರಮುಖ ಸ್ಥಾನ ಪಡೆದಿಲ್ಲ. ಏಷ್ಯಾದಲ್ಲಿ, ಚೀನಾ ಹೆಚ್ಚು ಹೂಡಿಕೆ ಮಾಡಿರುವುದು, ಸಿಂಗಾಪುರ ಮತ್ತು ಜಪಾನ್ ದೇಶಗಳಲ್ಲಿ. ಇತ್ತೀಚಿನ ವರ್ಷಗಳಲ್ಲಿ, ಮಲೇಷ್ಯಾ, ಶ್ರೀಲಂಕಾ ಮತ್ತು ಪಾಕಿಸ್ತಾನದಂತಹ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (ಬಿಆರ್‌ಐ) ಭಾಗವಾಗಿರುವ ಏಷ್ಯಾದ ದೇಶಗಳಲ್ಲಿ ಚೀನಾದ ಹೂಡಿಕೆ ಹೆಚ್ಚುತ್ತಿದೆ. ಭಾರತ ಇದರ ಭಾಗವಲ್ಲದ್ದರಿಂದ ಚೀನಾದಿಂದ ದೊಡ್ಡ ಪ್ರಮಾಣದ ಮೂಲಸೌಕರ್ಯ ನಿಧಿ ಹರಿದು ಬರುತ್ತಿಲ್ಲ.

ಆದ್ದರಿಂದ, ಭಾರತ ಚೀನಾದ ಬಂಡವಾಳ ಹೂಡಿಕೆಯ ವಿಷಯದಲ್ಲಿ ತೆಗೆದುಕೊಳ್ಳುವ ಕಠಿಣ ಕ್ರಮಗಳು, ಭವಿಷ್ಯವನ್ನು ಹೆಚ್ಚು ಹಾನಿಗೊಳಿಸಲಾರವು. ಆದಾಗ್ಯೂ, ಚೀನಾದ ಅಲಿಬಾಬಾ ಮತ್ತು ಟೆನ್‌ಸೆಂಟ್ ಸಮೂಹ ಸಂಸ್ಥೆಗಳು, ಭಾರತದ ಹಲವಾರು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ಅಪ್ ಕಂಪನಿಗಳಿಗೆ ಬಂಡವಾಳ ಒದಗಿಸಿವೆ. ಹಾಗಾಗಿ, ನಮ್ಮ ಕಠಿಣ ನಿಯಮಗಳಿಂದ ದೇಶದ ಸ್ಟಾರ್ಟ್ ಅಪ್ ಕಂಪನಿಗಳಿಗೆ ತೊಂದರೆಯಾಗಬಹುದು, ಅಥವಾ, ಚೀನಾದ ಬಂಡವಾಳವನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಅಸಾಧ್ಯವಾಗಬಹುದು. ಇದಕ್ಕೆ ಪರ್ಯಾಯವಾಗಿ, ಚೀನಾದ ಬಂಡವಾಳವನ್ನು ಇತರ ಜಾಗತಿಕ ಹೂಡಿಕೆ ಕೇಂದ್ರಗಳಾದ ಹಾಂಗ್ ಕಾಂಗ್ ಅಥವಾ ಕೇಮನ್ ದ್ವೀಪಗಳ ಮೂಲಕ ಪಡೆಯಬಹುದು.

ಪ್ರಸ್ತುತ, ಗಡಿಯಲ್ಲಿನ ಪ್ರಚೋದನೆ ಭಾರತಕ್ಕೆ ಚೀನಾದ ಸರಕುಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಿದೆ. ಆದರೆ, ಇಂತಹ ಬಹಿಷ್ಕಾರ ಕರೆಗಳು ಹಿಂದೆಯೂ ನಡೆದಿವೆ. ಈ ಪ್ರವೃತ್ತಿಯ ಹಿಂದೆ, ಚೀನಾದ ಬಗೆಗಿರುವ ಭೀತಿ, ಜೊತೆಗೆ ಆಮದಿನ ಬದಲಾಗಿ ಸ್ಥಳೀಯ ಉತ್ಪನ್ನಗಳ ಪ್ರೋತ್ಸಾಹಿಸುವ ಹೆಬ್ಬಯಕೆಯೂ ಇದೆ. ಇದು, ಆರ್‌ಸಿಇಪಿ ಅಂತಹ ಪ್ರಮುಖ ಪ್ರಾದೇಶಿಕ ವ್ಯಾಪಾರ ಒಪ್ಪಂದಗಳಿAದ ಭಾರತ ಹೊರನಡೆಯುವಂತೆ ಮಾಡಿದೆ. ಈ ಒಪ್ಪಂದವನ್ನು, ಹಲವಾರು ದೇಶೀಯ ಉದ್ಯಮ ಪ್ರತಿನಿಧಿಗಳು ಚೀನಾದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದ ಎಂದು ಬಣ್ಣಿಸಿದವು ಮತ್ತು ಅದರಿಂದ ಹೊರಗುಳಿಯುವಂತೆ ಒತ್ತಡ ಹೇರಿದ್ದವು.

ಆದರೆ, ಇದರಿಂದ ಹೊರಗುಳಿಯುವ ಮೂಲಕ, ವ್ಯಾಪಾರ ಒಪ್ಪಂದದ ಭಾಗವಾಗುವುದರ ಹೆಚ್ಚಿನ ಲಾಭವನ್ನು ಭಾರತ ಕಳೆದುಕೊಂಡಿತು. ಯಾಕೆಂದರೆ, ಈ ಒಪ್ಪಂದ ಕೆಲವು ಪೂರೈಕೆ ಸರಪಳಿಗಳನ್ನು ಮರುಜೋಡಿಸುವಲ್ಲಿ ಸಹಾಯ ಮಾಡಬಹುದಿತ್ತು. ಆರ್‌ಸಿಇಪಿ ಯಲ್ಲಿ ನಮ್ಮ ಹಲವಾರು ಮಿತ್ರ ರಾಷ್ಟ್ರಗಳಾದ ಜಪಾನ್, ಕೊರಿಯಾ, ಆಸ್ಟ್ರೇಲಿಯಾ, ವಿಯೆಟ್ನಾಂ, ಸಿಂಗಾಪುರ, ಇಂಡೋನೇಷ್ಯಾ ಸದಸ್ಯತ್ವ ಹೊಂದಿವೆ.

ಕೊನೆಯದಾಗಿ, ಬಹಿಷ್ಕಾರದಂತಹ ತಾತ್ಕಾಲಿಕ ಆರ್ಥಿಕ ಕ್ರಮಗಳು ಚೀನಾದ ಮೇಲೆ ಯಾವುದೇ ವಿಶೇಷ ಪರಿಣಾಮ ಬೀರುವುದಿಲ್ಲ. ಇದಕ್ಕೆ ಬದಲಾಗಿ, ಚೀನಾದ ಆರ್ಥಿಕ ಪ್ರಾಬಲ್ಯವನ್ನು ಮಣಿಸಲು ಭಾರತ ಇತರ ದೇಶಗಳೊಂದಿಗೆ ಸಮನ್ವಯತೆ ಸಾಧಿಸಬೇಕಿದೆ. ಆದರೆ, ವ್ಯಾಪಾರ ಒಪ್ಪಂದಗಳನ್ನು ತ್ಯಜಿಸಿ, ಆರ್ಥಿಕ ರಾಷ್ಟ್ರೀಯತೆಯತ್ತ ಹೆಜ್ಜೆಯಿಡುವ ಮೂಲಕ ಅಂತಹ ಸಾಧ್ಯತೆಯನ್ನು ಭಾರತ ಮೊಟಕುಗೊಳಿಸಿದೆ. ಸಧ್ಯ, ಭಾರತ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದೆ. ಆದರೆ, ಇತರ ದೇಶಗಳು ಇನ್ನೂ ಹಾಗೆ ಮಾಡುತ್ತಿಲ್ಲ. ಇದರ ಫಲವಾಗಿ, ಚೀನಾದ ವಿರುದ್ಧ ಸಾಮೂಹಿಕ ಆರ್ಥಿಕ ಆಕ್ರಮಣವನ್ನು ಸಜ್ಜುಗೊಳಿಸಲು ಭಾರತಕ್ಕೆ ಕಷ್ಟವಾಗುತ್ತಿದೆ.

 

*ಲೇಖಕರು ಸಿಂಗಪೂರ ರಾಷ್ಟ್ರೀಯ ವಿವಿಯ ದಕ್ಷಿಣ ಏಷಿಯಾ ಅಧ್ಯಯನ ಸಂಸ್ಥೆಯಲ್ಲಿ ವ್ಯಾಪಾರ ಮತ್ತು ಆರ್ಥಿಕತೆ ವಿಷಯದ ಹಿರಿಯ ಸಂಶೋಧಕರು.

ಅನು: ಡಾ.ಜ್ಯೋತಿ         ಕೃಪೆ: ಟೈಮ್ಸ್ ಆಫ್ ಇಂಡಿಯಾ

Leave a Reply

Your email address will not be published.