ಚೀನಾ ಗಡಿಯ ಗಾಲ್ವಾನ್ ದುರಂತ: ಭಾರತದ ಆಯ್ಕೆಗಳು…

ಜೂನ್ 15ರಂದು, ಗಾಲ್ವಾನ್ ಕಣಿವೆಯಲ್ಲಿ ನಿಜವಾಗಿ ನಡೆದದ್ದೇನು? ಅದರ ಮಹತ್ವವೇನು? ಮುಂದಿನ ದಿನಗಳಲ್ಲಿ, ಚೀನಾದೊಂದಿಗೆ ವ್ಯವಹಾರ ಸಾಧ್ಯವೇ?

ಭಾರತ, ತನ್ನ ಚೀನಾ ಗಡಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಕುರಿತು ಶೀಘ್ರದಲ್ಲಿ ಸ್ಪಷ್ಟೀಕರಣ ಹೊಂದುವುದರೊAದಿಗೆ, ದೇಶದ, ದಕ್ಷಿಣ ಏಷ್ಯಾ ನೀತಿಯ ಬಗ್ಗೆ ದೀರ್ಘಕಾಲಿಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕಿದೆ.

ಪ್ರಾಸ್ತಾವಿಕವಾಗಿ, 2020ರ ಜೂನ್ 15ನ್ನು, ಭಾರತದ ಇತಿಹಾಸ ಪುಟಗಳಲ್ಲಿ ‘ದುರಂತ ರಾತ್ರಿ’ಯೆಂದು ಪರಿಗಣಿಸಬೇಕಾಗುತ್ತದೆ. ಅಂದು, ಲಡಾಖಿನ ಗಾಲ್ವಾನ್ ಕಣಿವೆಯಲ್ಲಿ 16ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿAಗ್ ಆಫೀಸರ್ ಸೇರಿದಂತೆ, ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ, ಚೀನಾ ಸೈನ್ಯದೊಂದಿಗಿನ ಸಂಘರ್ಷದಲ್ಲಿ ತಮ್ಮ ಪ್ರಾಣ ಕಳೆದುಕೊಂಡರು. ಈ ಘಟನೆ, ಭಾರತ-ಚೀನಾ ಸಂಬAಧದ ಸಂಧಿಕಾಲವೆನ್ನಬಹುದು. ಯಾಕೆಂದರೆ, ಕಳೆದ 45 ವರ್ಷಗಳ ಇತಿಹಾಸದಲ್ಲಿ, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಯಾವುದೇ ಶಸ್ತçಸಜ್ಜಿತ ಮುಖಾಮುಖಿ ನಡೆದಿರಲಿಲ್ಲ. 1988ರ ಡಿಸೆಂಬರ್‌ನಲ್ಲಿ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ತನ್ನ ಚೀನಾ ಭೇಟಿ ಸಂದರ್ಭದಲ್ಲಿ ಉದ್ಘಾಟಿಸಿದ ದ್ವಿಪಕ್ಷೀಯ ಸಂಬAಧ ಸಹ, ಆ ಸೋಮವಾರ ರಾತ್ರಿಯ ಕತ್ತಲೆಯಲ್ಲಿ ಅಂತ್ಯಗೊAಡಿತು.

ಈ ಘಟನೆ, ರಾಷ್ಟçವನ್ನು ತೀವ್ರವಾಗಿ ನಡುಗಿಸಿದೆ. ಜೂನ್ 6ರಂದು ನಡೆದ ಭಾರತ-ಚೀನಾ ನಡುವಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಿಂದ ಪರಿಸ್ಥಿತಿ ಸುಧಾರಿಸುತ್ತದೆಯೆಂದು ತಿಳಿಯಲಾಗಿತ್ತು. ಆದರೆ, ತದ್ವಿರುದ್ಧವಾಗಿ ಪರಿಸ್ಥಿತಿ ಉಲ್ಬಣಗೊಂಡಿದೆಯೆAದು ಸ್ಪಷ್ಟವಾಗಿದೆ. ಜೂನ್ 15ರಂದು, ಗಾಲ್ವಾನ್ ಕಣಿವೆಯಲ್ಲಿ ನಿಜವಾಗಿ ನಡೆದದ್ದೇನು? ಅದರ ಮಹತ್ವವೇನು? ಮುಂದಿನ ದಿನಗಳಲ್ಲಿ, ಚೀನಾದೊಂದಿಗೆ ವ್ಯವಹಾರ ಸಾಧ್ಯವೇ? ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಅಸಂಭವವೆAದು ಕಾಣಿಸುತ್ತದೆ.

1959ರಿಂದ 2020ರವರೆಗೆ

ಈ ಪ್ರಮಾಣದ ಘರ್ಷಣೆ 1962ರ ಭಾರತ-ಚೀನಾ ಯುದ್ಧದ ಮೊದಲೂ ಆಗಿರಲಿಲ್ಲ. 1959ರ ಅಕ್ಟೋಬರನಲ್ಲಿ, ಕೊಂಗ್ಕಾ ಲಾ ಪ್ರದೇಶದಲ್ಲಿ ಭಾರತ-ಚೀನಾ ಪಡೆಗಳ ನಡುವೆ ಮುಖಾಮುಖಿಯಾಗಿತ್ತು. ಆಗ, ಒಂಬತ್ತು ಭಾರತೀಯ ಸೈನಿಕರು ಕೊಲ್ಲಲ್ಪಟ್ಟಿದ್ದರು. ಜೊತೆಗೆ, ನಾಯಕ ಕರಮ್ ಸಿಂಗ್ ಸೇರಿದಂತೆ ಮೂರು ಸೈನಿಕರನ್ನು ಬಂಧಿಸಲಾಗಿತ್ತು. ಬಿಡುಗಡೆಯ ನಂತರ ಕರಮ್ ಸಿಂಗ್, ತನ್ನನ್ನು ಮತ್ತು ತನ್ನ ಸಹೋದ್ಯೋಗಿಗಳನ್ನು, ಚೀನಾ ಹೇಗೆ ಕ್ರೂರವಾಗಿ ನಡೆಸಿಕೊಂಡಿತು ಎಂದು ಹೇಳಿಕೆಕೊಟ್ಟರು. ಹಾಗಾಗಿ, ಕೊಂಗ್ಕಾ ಲಾ ಘಟನೆಯ ನಂತರ, ದೇಶದ ಮನಸ್ಥಿತಿ ಚೀನಿಯರ ವಿರುದ್ಧ ಸಂಪೂರ್ಣವಾಗಿ ತಿರುಗಿತು.

ಅದೇ ವರ್ಷ ಮಾರ್ಚಿನಲ್ಲಿ ನಡೆದ ಟಿಬೆಟ್ ದಂಗೆ ಮತ್ತು ದಲೈ ಲಾಮಾರಿಗೆ ಭಾರತ ನೀಡಿದ ಆಶ್ರಯದಿಂದಾಗಿ ಪರಿಸ್ಥಿತಿ ಇನ್ನೂ ಜಟಿಲವಾಯಿತು. ಆದ್ದರಿಂದ, ಗಡಿ ಪ್ರಶ್ನೆಯ ಇತ್ಯರ್ಥಕ್ಕೆ ಉಭಯ ದೇಶಗಳ ನಡುವೆ ಒಂದು ತಾರ್ಕಿಕ ಮಾತುಕತೆಯ ಅವಕಾಶ ಬಹಳ ಕಡಿಮೆಯಾಯಿತು. ಆ ನಂತರ, 1962ರಲ್ಲಿ ನಡೆದ ಭಾರತ-ಚೀನಾ ಸಂಘರ್ಷ, ದೇಶದ ಸ್ವಾಭಿಮಾನ ಮತ್ತು ಪ್ರತಿಷ್ಠೆಯ ಮೇಲೆ ಆಳವಾದ ಗಾಯ ಮಾಡಿ, ಭಾರತ ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುವಂತೆ ಮಾಡಿತು.

ಇಂದು, ಭಾರತ ಅದೇ ಸ್ಥಿತಿಯಲ್ಲಿದೆಯೇ? ಖಂಡಿತ ಇಲ್ಲ. ಯಾಕೆಂದರೆ, 1959ರಿಂದ 2020ರ ಮಧ್ಯೆ ಉಭಯ ದೇಶಗಳು, ತಮ್ಮದೇ ದಾರಿಯಲ್ಲಿ ಸಾಕಷ್ಟು ಮುಂದೆ ಕ್ರಮಿಸಿವೆ. ಇಂದು ಭಾರತ-ಚೀನಾ ಎರಡೂ ವಿಭಿನ್ನ ರಾಷ್ಟçಗಳಾಗಿ, ಜಗತ್ತಿನ ನೆಲೆಯಲ್ಲಿ ತಮ್ಮದೇ ಸ್ಥಾನ ಪಡೆದಿವೆ. ವಿಶ್ವ ವೇದಿಕೆಯಲ್ಲಿ, ಎರಡೂ ರಾಷ್ಟçಗಳು ಅಪಾರ ಶಕ್ತಿ, ನಿಲುವು ಮತ್ತು ಸಂಬAಧಗಳನ್ನು ಹೊಂದಿವೆ. ಹಾಗಾಗಿ, 1950ರ ದಶಕದ ವಸ್ತುಸ್ಥಿತಿ ಈಗಿಲ್ಲ. ಪ್ರಸಕ್ತ, ಭಾರತ ಚೀನಾದೊಂದಿಗೆ ಒಂದು ಪೂರ್ಣಪ್ರಮಾಣದ ಸಂಘರ್ಷದತ್ತ ಚಲಿಸುತ್ತಿದೆಯೆಂದರೆ, ವಸ್ತುಸ್ಥಿತಿಯ ಸರಳೀಕರಣವಾಗಬಹುದು. ಈ ಘಟನೆಯ ನಂತರ ಎರಡು ರಾಜಧಾನಿಗಳು ನೀಡಿದ ಕಟು ಸಂದೇಶದ ಹೊರತಾಗಿಯೂ, ಯುದ್ಧ ಸನ್ನಿವೇಶವನ್ನು ನಿಲ್ಲಿಸಬೇಕಿದೆ. ಸಧ್ಯಕ್ಕೆ, ಎರಡೂ ದೇಶಗಳು ಪರಸ್ಪರ ಆರೋಪ ಹೊರಿಸುತ್ತವೆ ಮತ್ತು ದುರಂತದ ಹೊಣೆಯನ್ನು ನಿರಾಕರಿಸುತ್ತಿವೆ. ಒಟ್ಟಿನಲ್ಲಿ, ಪರಿಸ್ಥಿತಿ ತುಂಬಾ ಗಂಭೀರವಾಗಿದೆ.

ಆಯ್ಕೆಗಳಲ್ಲಿ ಎಚ್ಚರಿಕೆಯ ಅಗತ್ಯ

ಪ್ರಸ್ತುತ, ಭಾರತ ಸಮಾಧಾನದಿಂದ ಆಲೋಚಿಸಬೇಕಾದ ಅವಶ್ಯಕತೆ ಇದೆ. ಯಾಕೆಂದರೆ, ಸಧ್ಯದ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಹಲವಾರು ಸಮಸ್ಯೆಗಳು, ಸರ್ಕಾರದ ಸಂಪೂರ್ಣ ಗಮನವನ್ನು ಬಯಸುತ್ತಿವೆ: ಕೊರೊನ ಬಿಕ್ಕಟ್ಟು ಪರಿಹಾರ, ಕಳೆದ ಕೆಲವು ತಿಂಗಳುಗಳಿAದ ನಿಶ್ಚಲವಾಗಿದ್ದ ಆರ್ಥಿಕತೆಯ ಪುನರ್ ಚೇತನ, ಪಾಕಿಸ್ತಾನದೊಂದಿಗೆ ಮುಂದುವರೆದ ಉದ್ವಿಗ್ನತೆ, ಮತ್ತು ಲಿಪುಲೆಖ್ / ಕಲಾಪಾನಿಯಲ್ಲಿ ನೇಪಾಳದೊಂದಿಗಿನ ಭೂಪ್ರದೇಶ ವಿವಾದ, ಇತ್ಯಾದಿ. ಗಾಲ್ವಾನ್ ಕಣಿವೆಯಲ್ಲಾದ ಭಾರತೀಯ ಸಿಬ್ಬಂದಿಯ ಹತ್ಯೆಗೆ ಶೋಕಿಸೋಣ. ಆದರೆ, ನಮ್ಮ ರಾಷ್ಟçದ ಘನತೆ ಅಪಾಯದ ಅಂಚಿನಲ್ಲಿದೆಯೆAದು, ಕುರುಡಾಗಿ ಚೀನಾದೊಂದಿಗೆ ಯುದ್ಧ ಸಾರುವುದು ಸ್ವೀಕಾರ್ಹವಲ್ಲ. ನಮ್ಮ ಆಯ್ಕೆಯ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕಿದೆ. ‘ಕಣ್ಣಿಗೆ ಕಣ್ಣು’ ತೆಗೆಯುವ ನ್ಯಾಯ, ಕ್ಷಣಿಕ ತೃಪ್ತಿ ಕೊಡಬಹುದು, ಆದರೆ, ದೇಶದ ಹಿತಕ್ಕಾಗಿ ದೂರದೃಷ್ಟಿಯ ಚಿಂತನೆ ಮುಖ್ಯ.

ಸಧ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಬುದ್ಧ, ವಿವೇಚನಾಯುಕ್ತ, ಮತ್ತು ನಿಖರ ರಾಜಕೀಯ ಮುಂದಾಳತ್ವದ ಅಗತ್ಯವಿದೆ. ನಮ್ಮ ಸೈನ್ಯ, ಚೀನಿಯರನ್ನು ಹಿಮ್ಮೆಟ್ಟಿಸುವ ಯುದ್ಧತಂತ್ರ ಮಾಡಬಹುದು, ಆದರೆ, ಸಮಗ್ರ ಚೀನಾ ತಂತ್ರಗಾರಿಕೆ ಮತ್ತು ನಿರ್ಣಯವನ್ನು, ಈ ಹಿಂದೆ ಭಾರತ ಸರ್ಕಾರದ ರಾಷ್ಟಿಯ ಭದ್ರತಾ ನೀತಿ ನಿರೂಪಿಸಿದ ಅನುಭವವಿರುವ ರಕ್ಷಣಾತಜ್ಞರನ್ನು ಒಳಗೊಂಡ ಮಂಡಳಿ, ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ಕೈಗೊಳ್ಳಬೇಕಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸಿಕ್ಕಿಂ ಮತ್ತು ಲಡಾಖ್‌ನಲ್ಲಿ ನಡೆದ ಗಡಿ ಉಲ್ಲಂಘನೆಗಳ ಮಾಹಿತಿ ಸಂಗ್ರಹಿಸಿದರೆ, ಸಾರ್ವಜನಿಕ ಚರ್ಚೆಗೆ ಪೂರಕವಾಗುತ್ತದೆ. ಜೊತೆಗೆ, ಈ ಹಿಂದಿನ ಎಚ್ಚರಿಕೆಯ ಚಿಹ್ನೆಗಳನ್ನು ದೇಶದ ಮಿಲಿಟರಿ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟಗಳಲ್ಲಿ ಗಂಭೀರವಾಗಿ ಪರಿಗಣಿಸಿ ನಿಷ್ಕಿçಯಗೊಳಿಸಿದ್ದರೆ, ಈ ವಿಪತ್ತು ತಪ್ಪಿಸಬಹುದಿತ್ತೇ? ಒಟ್ಟಾರೆ, ನಮ್ಮ ಇಂದಿನ ಸರಿಯಾದ ನಿರ್ಧಾರ, ಭವಿಷ್ಯದಲ್ಲಿ ನಮಗೆ ಸಹಾಯ ಮಾಡುವಂತಿರಬೇಕು. ಮಾತ್ರವಲ್ಲ, ಈ ದೇಶರಕ್ಷಣೆಯ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು.

 

 

ಭವಿಷ್ಯದ ದೃಷ್ಟಿಕೋನ

ನಾವೀಗ ಭವಿಷ್ಯದತ್ತ ದೃಷ್ಟಿಹಾಯಿಸಬೇಕಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯ ಕುರಿತು ಭಾರತ ಶೀಘ್ರದಲ್ಲಿ ಸ್ಪಷ್ಟೀಕರಣ ಪಡೆಯಬೇಕಿದೆ. ನಮ್ಮ ದೇಶಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗ್ರಹಿಸಿ ಗುರುತಿಸಬೇಕಿದೆ. ಹಿಂದಿನಿAದಲೂ, ಈ ಗಡಿಪ್ರದೇಶಗಳನ್ನು ಎರಡೂ ಕಡೆಯಿಂದ ನಿಶಸ್ತಿಕರಣಗೊಳಿಸಲಾಗಿತ್ತು. ಆದರೆ, ಈ ಕುರಿತ ಜಂಟಿ ಒಪ್ಪಂದ ಇನ್ನೂ ಪೂರ್ಣಗೊಂಡಿಲ್ಲ. ಈ ಪ್ರಸ್ತುತತೆಯಲ್ಲಿ, ಭಾರತ ತನ್ನ ಗಡಿಯ ನಾಲ್ಕು ವಲಯಗಳ ಭೂಪ್ರದೇಶ ರಕ್ಷಣೆಗಾಗಿ ದೃಢನಿಶ್ಚಯ ತಳೆಯಬೇಕಿದೆ. ಎರಡು ಮಿಲಿಟರಿ ದೇಶಗಳ ನಡುವೆ ಜಂಟಿ ತರಬೇತಿ ಮತ್ತು ಹಿರಿಯ ಕಮಾಂಡರ್‌ಗಳ ಪರಸ್ಪರ ಭೇಟಿ ವಿನಿಮಯ ನಿರಂತರವಾಗಿ ನಡೆಯುತ್ತಲಿರಬೇಕು. ಸಧ್ಯಕ್ಕಂತೂ, ಈ ಗಡಿ ಇತ್ಯರ್ಥ ಪರಿಹಾರ ಕಾಣುವ ಸೂಚನೆ ಕಾಣಿಸುತ್ತಿಲ್ಲ. 

ಸಹಜವಾಗಿ, ಮುಂದಿನ ದಿನಗಳಲ್ಲಿ, ಇತರ ಕ್ಷೇತ್ರಗಳಲ್ಲಿ ಕೂಡ ದ್ವಿಪಕ್ಷೀಯ ಸಂಬAಧಗಳು ಸಾಕಷ್ಟು ಒತ್ತಡದಿಂದ ಕೂಡಿರುತ್ತವೆ. ಸಧ್ಯಕ್ಕಂತೂ, ಉನ್ನತ ಮಟ್ಟದ ನಾಯಕರ ನಡುವೆ ಸಮಾಲೋಚನೆ ಅಸಂಭವ. ಆದರೆ, ಉಳಿದ ರಾಜತಾಂತ್ರಿಕ ಸಂಪರ್ಕಗಳು ಮುಕ್ತವಾಗಿರಬೇಕು. ಏಕೆಂದರೆ, ಪರಿಸ್ಥಿತಿ ತಿಳಿಗೊಳಿಸಲು ಸುಗಮ ಕಾರ್ಯಾಚರಣೆ ಅತ್ಯಗತ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ. ಚೀನಾದಲ್ಲಿ ಭಾರತದ ವ್ಯವಹಾರಗಳು ಮತ್ತು ಭಾರತದಲ್ಲಿ ಚೀನಾದ ವ್ಯವಹಾರಗಳು ಮೊದಲಿಗಿಂತ ಕಠಿಣವಾಗಲಿವೆ. ಇದೇ ರೀತಿ, ಹೊಸ ಬಂಡವಾಳ ಹೂಡಿಕೆಗಳಲ್ಲಿ ಕೂಡ ಅಡೆತಡೆ ಎದುರಾಗಬಹುದು. ಇನ್ನು ಮುಂದೆ ಭಾರತದಲ್ಲಿ, ಯಾವುದೇ ಸಂದರ್ಭದಲ್ಲಿ ಅಥವಾ ಪ್ರದೇಶಗಳಲ್ಲಿ, ರಾಷ್ಟಿಯ ಭದ್ರತೆಗೆ ಲೋಪವಾಗುವಂತಹ ಸೈಬರ್ ಕ್ಷೇತ್ರ, ದೂರಸಂಪರ್ಕ, ಬೇಹುಗಾರಿಕೆ, ಇತ್ಯಾದಿ ಕಾವಲುಶಕ್ತಗೊಳಿಸುವ ತಂತ್ರಜ್ಞಾನಗಳಲ್ಲಿ (ಉದಾಹರಣೆಗೆ, 5ಜಿ) ಚೀನಾ ಕಂಪನಿಗಳ ಪ್ರವೇಶದ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ಅಥವಾ ನಿಷೇಧವನ್ನು ನಿರೀಕ್ಷಿಸಬಹುದು.

ದೂರದೃಷ್ಟಿಯ ನಿರ್ಧಾರ

ಕೊನೆಯದಾಗಿ, ಭಾರತ- ಚೀನಾ ಸಂಬAಧಗಳ ಮೀರಿ, ಹೊರಗಿನ ಜಗತ್ತೊಂದಿದೆ. ಇಲ್ಲಿ, ಭಾರತಕ್ಕಿರುವ ಲಾಭವೆಂದರೆ, ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತದ ಸಮತೋಲನ ಶಕ್ತಿ, ಬಲವಾದ ಪ್ರಜಾಪ್ರಭುತ್ವ, ಚಲನಶೀಲ ಆರ್ಥಿಕತೆ, ಬಹುತ್ವ, ಕಡಲ ಭೌಗೋಳಿಕತೆಯ ಪ್ರಯೋಜನ ಇತ್ಯಾದಿ. ಇಂತಹ ಕೆಲವು ಸ್ನೇಹಿ ರಾಷ್ಟಗಳನ್ನು ಜೊತೆಗೂಡಿಸಿ, ಚೀನಾದ ಸಾಗರ ಪ್ರವೇಶವನ್ನು ಪರಿಣಾಮಕಾರಿಯಾಗಿ ತಡೆಯಬೇಕಿದೆ.

ಗಾಲ್ವಾನ್ ಕಣಿವೆಯಲ್ಲಿನ ಘಟನೆ, ಅನೇಕ ದೇಶಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಏಷ್ಯಾದ ನಮ್ಮ ಸ್ನೇಹಿತರು ಹೆಚ್ಚಿನ ದೃಢತೆಯಿಂದ, ಚೀನಾದ ಆಕ್ರಮಣಶೀಲತೆಯನ್ನು ತಡೆಯಬೇಕಿದೆ.  ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಭಾರತಕ್ಕೆ ಇದೊಂದು ಉತ್ತಮ ಅವಕಾಶ. ಪ್ರಮುಖವಾಗಿ, ಅಮೆರಿಕಾ, ಜಪಾನ್, ಆಸ್ಟೆಲಿಯಾ ಮತ್ತು ಆಸಿಯಾನ್ (ಂSಇAಓ) ದೇಶಗಳೊಂದಿಗಿನ ಸಂಬAಧಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕಿದೆ. ಇದರೊಂದಿಗೆ, ಭಾರತ ಈಗ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (ಖಅಇP) ಸೇರ್ಪಡೆಗೊಳ್ಳಬೇಕಿದೆ.

ಭಾರತ, ಚೀನಾದೊಂದಿಗಿನ ಆರ್ಥಿಕ ಸಂಬAಧದ ಕುರಿತು ತನ್ನ ನಿಲುವನ್ನು ಮರುಪರಿಶೀಲಿಸುವುದಾದರೆ, ತನ್ನ ಉತ್ಪಾದನ ಸಾಮರ್ಥ್ಯ ಮತ್ತು ಸರಬರಾಜು ಸರಪಳಿ ಜಾಲದ ಸಾಮರ್ಥ್ಯಗಳನ್ನು ಹೆಚ್ಚಿಸಬೇಕಿದೆ. ಯಾವುದೇ ಅಲ್ಪಾವಧಿಯ ಕ್ರಮ ನಿಷ್ಪಯೋಜಕ. ಈ ನಿಟ್ಟಿನಲ್ಲಿ, ಒಂದು ದೂರದೃಷ್ಟಿಯ ಕ್ರಮವನ್ನು ಧೈರ್ಯದಿಂದ ತೆಗೆದುಕೊಳ್ಳುವ ಸಮಯವಿದು. ಜೊತೆಗೆ, ತನ್ನ ದಕ್ಷಿಣಏಷ್ಯಾ ನೀತಿಯನ್ನು ಮರುಪರಿಶೀಲಿಸಬೇಕಿದೆ. ಅಂತಿಮವಾಗಿ, ಯಾವುದೇ ದೇಶಕ್ಕೆ ಉತ್ತಮ ನೆರೆಹೊರೆಯ ಸಂಬAಧಗಳು ನಿರ್ಣಾಯಕ, ಮಾತ್ರವಲ್ಲ, ರಾಷ್ಟಿಯ ಭದ್ರತೆಗೆ ಅತ್ಯಗತ್ಯ.

 

ಮೂಲ: ದಿ ಹಿಂದೂ

*ಲೇಖಕರು ನಿವೃತ್ತ .ಎಫ್.ಎಸ್. ಅಧಿಕಾರಿ; ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕಾ, ಶ್ರೀಲಂಕಾ ಮತ್ತು ಚೀನಾ ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವಿ.

ಅನುವಾದ: ಡಾ.ಜ್ಯೋತಿ

Leave a Reply

Your email address will not be published.