ಚುಟುಕು ಸಂಭಾಷಣೆಯ ಸಂಗಾತಿ ಭಾವನೆ ತುಳುಕಿಸುವ ಇಮೋಜಿ

-ಪೂರ್ಣಿಮಾ ಮಾಳಗಿಮನಿ

ಇಮೋಜಿ ಹುಟ್ಟಿಗೆ ಸಮಯದ ಅಭಾವ ಅಥವಾ ಸೋಮಾರಿತನವೇ ಕಾರಣ ಇರಬಹುದು. ಆದರೆ ಅದನ್ನು ಉಪಯೋಗಿಸುವ ಮಂದಿ ಖಂಡಿತ ಸೋಮಾರಿ ಗಳಲ್ಲ. ಅವರು ನಿಜಕ್ಕೂ ಸೃಜನಶೀಲರು; ಕಡ್ಡಿ ಮುರಿದಂತೆ ಮಾತನಾಡಿ ಮನಸ್ಸು ಒಡೆಯುವ ಬದಲು ಇಮೋಜಿಗಳ ಉಪಯೋಗದಿಂದ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುವ ಸಹೃದಯರು.

ಇತ್ತೀಚೆಗೆ ತಮ್ಮ ಕಾವ್ಯಗಳಿಗೆ ನೊಬೆಲ್ ಪಾರಿತೋಷಕ ಪಡೆದುಕೊಂಡ ಎಪ್ಪತ್ತೇಳು ವರ್ಷದ ಕವಿಯತ್ರಿ ಲೂಯಿಸ್ ಗ್ಲಕ್ ಹೇಳಿದ್ದಾರೆ: Honour the words that enter and attach to your brain.  ಇದನ್ನು ಓದಿದಾಗ ನನಗೆ ನಾವು ಕೇಳಿಸಿಕೊಳ್ಳುವ ಒಂದು ವಾಕ್ಯದಲ್ಲಿರುವ ಎಲ್ಲಾ ಪದಗಳು ಅವಶ್ಯಕವೇ ಎಂದು ಅನುಮಾನವಾಗುವುದು. ಉದಾಹರಣೆಗೆ ಅಮ್ಮ ತನ್ನ ಮಕ್ಕಳಿಗೆ, “ಊಟದ ಸಮಯವಾಯಿತು, ಎಲ್ಲರೂ ಕೈ ತೊಳೆದುಕೊಂಡು ಅಡಿಗೆ ಮನೆಗೆ ಬನ್ನಿ’ ಎಂದು ಹೇಳಿದಾಗ ಊಟ ಎನ್ನುವ ಪದ ಬಿಟ್ಟು ಉಳಿದ ಯಾವ ಪದವೂ ಮುಖ್ಯವೇ ಅಲ್ಲ. ಅವು ಮಕ್ಕಳ ತಲೆಯೊಳಗೆ ಹೋಗುವುದೂ ಇಲ್ಲ ಅನಿಸುವುದಿಲ್ಲವೇ?

ಹೇಳಬೇಕಾದುದನ್ನು ಆದಷ್ಟು ಚಿಕ್ಕದಾಗಿ, ಚೊಕ್ಕದಾಗಿ, ಸೀದಾ ತಲೆಯೊಳಗೆ ಹೋಗುವ ಹಾಗೆ ಹೇಳಬೇಕು ಎನ್ನುವ ಹಠದಿಂದಲೋ, ಅಗತ್ಯದಿಂದಲೋ, ಕಡಿಮೆ ಸಮಯದಲ್ಲಿ ಪ್ರತ್ಯುತ್ತರ ನೀಡಬೇಕು ಎಂತಲೋ ಅಂತೂ ಇಮೋಜಿ ಎನ್ನುವ ದುಂಡು ಮುಖದ ಪುಟ್ಟ ಸಂಕೇತಗಳು ಹುಟ್ಟಿಕೊಂಡವು. ಬರೀ ಪದಗಳಲ್ಲಿ ಹೇಳಲಾಗದ, ಹೇಳದೇ ಇರಲಾಗದ ಆತ್ಮೀಯತೆ, ತುಂಟತನ, ಕೊಂಕು, ವ್ಯಂಗ್ಯ, ಗೋಳು, ಅಸಮಾಧಾನ ಮತ್ತು ಅಂತಹ ಎಷ್ಟೋ ಭಾವನೆಗಳನ್ನು ಇಮೋಜಿಗಳು ಸೇರಿಸುತ್ತವೆ. ಕಪ್ಪು ಬಿಳಿ ಸಂದೇಶಗಳಿಗೆ ರಂಗು ತುಂಬುತ್ತವೆ. ನಮ್ಮ ನೀರಸ ಸಂದೇಶಗಳಿಗೆ ಲವಲವಿಕೆಯ ವ್ಯಕ್ತಿತ್ವವನ್ನು, ಮನೋರಂಜನೆಯನ್ನೂ, ಹಾಸ್ಯ ಪ್ರಜ್ಞೆಯನ್ನೂ ಮತ್ತು ಕಲೆಯನ್ನೂ ಮಿಳಿತಗೊಳಿಸುತ್ತವೆ. ನೇರವಾಗಿ ಹೇಳಲಾಗದ ಮಾತುಗಳನ್ನು ಮೊಬೈಲ್ ಪರದೆಯ ಹಿಂದೆ ಬಚ್ಚಿಟ್ಟುಕೊಂಡು ಹೇಳಿಬಿಡಲು ಅನುಕೂಲವಾಗುತ್ತವೆ. ಈ ಸ್ಮೆöÊಲಿಗಳು ನಮ್ಮ ಕ್ಯಾಶುಯಲ್ ಸಂದೇಶಗಳನ್ನು ಕೂಡ ಸೀರಿಯಸ್ ಆಗಿ ತೆಗೆದುಕೊಳ್ಳುವಂತೆ ಮಾಡುತ್ತವೆ ಎನ್ನುವುದು ನನ್ನ ಅಭಿಪ್ರಾಯ.

ಇನ್ನೂ ಮೀರಿ ಹೇಳುವುದಾದರೆ `ಕಮ್ಯುನಿಕೇಷನ್ ಈಸ್ ದಿ ಕೀ’, ಮುಕ್ತವಾದ ಮಾತುಕತೆಯಿಂದ ಬಗೆಹರಿಯದ ಸಮಸ್ಯೆಗಳೇ ಇಲ್ಲ ಎಂದು ಅರಿತು ಈ ದಿಕ್ಕಿನಲ್ಲಿ ನಾವು ತೆರೆದುಕೊಂಡು ಹೋದಂತೆಲ್ಲಾ, ಸುಲಭವಾಗುವ ಅಭಿವ್ಯಕ್ತಿ, ಮತ್ತು ಇದಿರುಬದಿರು ಕುಳಿತು ಮಾತನಾಡುವಾಗ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಮಾತನಾಡದೆಯೂ ಹೇಳಿಬಿಡುವ, ಗ್ರಹಿಸಿಬಿಡುವ ಎಷ್ಟೋ ವಿಷಯಗಳನ್ನು ಬಿಟ್ಟು ಕೊಡುವ ನಮ್ಮ ಬಾಡಿ ಲ್ಯಾಂಗ್ವೇಜ್ ಅನ್ನು ಸೇರಿಸಿ ಮೆಸೇಜಿಂಗ್ ಅನ್ನು ಇನ್ನೊಂದು ಮಜಲಿಗೆ ತೆಗೆದುಕೊಂಡು ಹೋಗುವುದು ಇಮೋಜಿಗಳಿಂದ ಸಾಧ್ಯವಾಗುತ್ತದೆ.

ಅಸಲಿಗೆ ಇಮೋಜಿಯ ಹುಟ್ಟಿಗೆ ಕಾರಣ ಸಮಯದ ಅಭಾವ ಅಥವಾ ಸೋಮಾರಿತನವೇ ಇರಬಹುದು. ಆದರೆ ಅದು ಬೆಳೆದುಬಂದ ರೀತಿ, ಮತ್ತು ಸದ್ಯದ ಎಂತಹದೇ ಸನ್ನಿವೇಶಗಳಲ್ಲಿ ಅದನ್ನು ಉಪಯೋಗಿಸುವ ಟೆಕ್ಸಿ÷್ಟಂಗ್ ಮಂದಿ ಏನಿದ್ದಾರಲ್ಲ, ಅವರು ಖಂಡಿತ ಸೋಮಾರಿಗಳಲ್ಲ. ಬೇಕಾದರೆ ಅವರನ್ನು ನೀವು ಸೃಜನಶೀಲರು ಅಂತ ಕರೆಯಬಹುದು. ಅಥವಾ ಕಡ್ಡಿ ಮುರಿದ ಹಾಗೆ ಮಾತನಾಡಿ ಮನಸ್ಸು ಮುರಿಯುವ ಬದಲು ಇಮೋಜಿಗಳ ಉಪಯೋಗದಿಂದ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುವ ಸಹೃದಯರು ಎಂದೂ ಕರೆಯಬಹುದು.

ಒಟ್ಟಿನಲ್ಲಿ ಸ್ಮಾರ್ಟ್ ಫೋನ್ ಹಿಡಿದು ಟಕಟಕ ಎಂದು ಮೆಸೇಜು ಮಾಡುವವರಲ್ಲಿ ಈ ಇಮೋಜಿಗಳ ಪ್ರಭಾವಕ್ಕೆ ಒಳಗಾಗದೇ ಉಳಿದವರಿಲ್ಲ ಎಂದೇ ಹೇಳಬಹುದೇನೋ.

ಇಮೋಜಿಗಳೆಂದರೆ ಹೊರಗಿನ ಪ್ರಪಂಚಕ್ಕೆ ತಾವು ಬಹಳ ಇಂಟ್ರಾವೆರ್ಟ್ಸ್, ಮುಗ್ಧರು, ಸಾಧುಗಳು, ಮಿತಭಾಷಿಗಳು ಎಂದೆಲ್ಲಾ ತೋರಿಸಿಕೊಳ್ಳುತ್ತಾ, ಅದನ್ನು ನಂಬಿದವರನ್ನು ಒಳಗೊಳಗೇ ಅಣಕಿಸುವ ಶುದ್ಧ ತರಲೆಗಳು ಎನ್ನುವುದು ನನ್ನ ಭಾವನೆ. ಓದಿದವರಿಗೆಲ್ಲಾ ಸುಲಭವಾಗಿ ದಕ್ಕದ ಪದ್ಯ ಬರೆದು, ಬಿಸಾಕಿ, ಆರಾಮ ಕುರ್ಚಿಗೊರಗಿ ಕುಳಿತ ತುಂಟ ಕವಿ, ಅರ್ಥವಾಗದೇ ಅರ್ಥವಾಯಿತು ಎಂದು ಬೊಗಳೆ ಬಿಡುವವರಿಗೆ, ಅರ್ಥವಾಗಿಸಿಕೊಂಡವರಿಗೆ, ಅರ್ಥವಾಗಲಿಲ್ಲ ಎಂದು ಒಪ್ಪಿಕೊಂಡವರಿಗೆ, ಅರ್ಥವಾಗಿಸಿಕೊಳ್ಳುವ ಸಹನೆಯಿಲ್ಲದವರಿಗೆ, ಅರ್ಥವೇ ಇಲ್ಲದ ಪದ್ಯ ಇದು ಎಂದು ದಬಾಯಿಸುವವರಿಗೆ, ಎಲ್ಲರಿಗೂ ಸಮಾಧಾನಕರವಾದ ಉತ್ತರ ಕೊಡಬೇಕಾಗಿ ಬಂದಾಗ, ಪದಗಳಿಗೆ ತಡಕಾಡುವ ಬದಲು ಒಂದು ಮುಗುಳ್ನಗುತ್ತಿರುವ ಇಮೋಜಿ ತೂರಿಬಿಟ್ಟು ನಿರಾಳವಾಗಬಹುದು.

ಇಮೋಜಿಗಳ ಉದ್ದೇಶವೇನೋ ಮಿತಭಾಷಿಗಳನ್ನಾಗಿಸುವುದಿದ್ದಿರಬಹುದು. ಆದರೆ ವಾಸ್ತವದಲ್ಲಿ ಇವುಗಳ ಬಳಕೆಯಿಂದ ಸಂಭಾಷಣೆ ಮೊಟಕುಗೊಳ್ಳುವುದು ಎಂದು ನೀವು ತಿಳಿದಿದ್ದರೆ ಅದರಲ್ಲೂ ಗೊಂದಲವೇ. ಉದಾಹರಣೆಗೆ ಒಬ್ಬ ಹುಡುಗ, ಒಬ್ಬ ಹುಡುಗಿಯನ್ನು `ಸಿನಿಮಾಗೆ ಹೋಗೋಣ ಬರ್ತೀಯ?’ ಅಂತ ಕೇಳಿದ ಅಂತಿಟ್ಟುಕೊಳ್ಳಿ. ಆಗ ಹುಡುಗಿ ಹೂಂ ಅಥವಾ ಊಹೂಂ ಅಂತ ಟೈಪ್ ಮಾಡಿ ಒಂದೇ ಏಟಿಗೆ ಮಾತು ಮುಗಿಸಿ ಪ್ರೇಮಕತೆ ಶುರುವಾಗುವ ಮೊದಲೇ ಇತಿಶ್ರೀ ಹಾಡುವುದಿಲ್ಲ. ಬದಲಾಗಿ ನೂರಾರು ಇಮೋಜಿಗಳ ಖಜಾನೆಯನ್ನು ತೆರೆದು ಅದರಲ್ಲಿ ತಾನು ಹೇಳಬೇಕಿರುವ ಭಾವನೆಗೆ ಹೆಚ್ಚು ಸೂಕ್ತವಾದುದನ್ನು ಹುಡುಕಿ ಹುಡುಕಿ, ಟೈಪಿಸುತ್ತಾಳೆ. ಆಮೇಲೆ ಸರಿಯಿಲ್ಲ ಅನಿಸಿ, ಅದನ್ನು ಡಿಲೀಟ್ ಮಾಡಿ, ಇನ್ನೊಂದು ಇಮೋಜಿ ಹುಡುಕಿ, ಅದನ್ನೇ ಒತ್ತಿ ಹೇಳಬೇಕು ಎನಿಸಿದಾಗ ಒಂದೇ ಇಮೋಜಿಯನ್ನು ಎರಡೂ ಮೂರೋ ಬಾರಿ ಪಕ್ಕಪಕ್ಕ ನಿಲ್ಲಿಸಿ, ಕಳಿಸುತ್ತಾಳೆ. ಅದು ಕೆಲವೊಮ್ಮೆ ಸರಿಯಾಗಿ ಅರ್ಥವಾಗದೇ, ಅತ್ತಲಿನ ಹುಡುಗ ಏನಂದೆ, ಎಂದು ಕಿವಿ ನಿಮಿರಿಸಿ ಕೇಳಿದಾಗ, ತನ್ನ ಕ್ರಿಯೇಟಿವಿಟಿಗೆ ಸಿಗದ ಮನ್ನಣೆಗೆ ವಿಷಾದ ವ್ಯಕ್ತಪಡಿಸಲಾಗದೇ, ನೋಯುವ ಬೆರಳುಗಳನ್ನು ಒತ್ತಿ ಲಟ ಲಟ ನಟಿಗೆ ಮುರಿದು ಮತ್ತೆ ತೆಪ್ಪನೆ ಹೂಂ ಅಥವಾ ಊಹೂಂ ಅಂತ ಟೈಪ್ ಮಾಡುವುದು ಬಹಳ ಸಾಮಾನ್ಯವಾದ ದೃಶ್ಯ.

ಇನ್ನು ಕೆಲವು ಧಾರಾಳ ಮನಸ್ಸಿನವರು ಏನು ಮಾಡ್ತಾ ಇದೀರಿ ಅಂತ ಕೇಳಿದಾಗ, ಕಾಫೀ ಕುಡಿತಾ ಇದೀನಿ ಅಂತ ಟೈಪಿಸಿದ ಮೇಲೆಯೂ ಕಾಫೀ ಲೋಟ ಇರುವ ಇಮೋಜಿಯನ್ನು ಜೊತೆಯಲ್ಲಿ ಕಳಿಸುವರು.

ಇನ್ನೊಂದು ಗುಂಪಿನವರಿದ್ದಾರೆ, ಇವರು ಕೇಳಿದ್ದಕ್ಕೆಲ್ಲಾ ತಲೆ ಹಾಕುವ ಕೋಲೇ ಬಸವನಂತೆ, ಉಂಡ್ಯಾ ಬಸವಾ ಅಂದ್ರೂ ಒಂದೇ ಇಮೋಜಿ, ಉಣ್ಣಲಿಲ್ವಾ ಬಸವ ಅಂದ್ರೂ ಅದೇ ಇಮೋಜಿ ಹಾಕಿ ತುಟಿ ಬಿಚ್ಚದೇ, ದಿವ್ಯ ಮೌನ ಮೆರೆಯುತ್ತಾರೆ. ಮತ್ತೆ ಕೆಲವರು ಹೊಸದಾಗಿ ಮೆಸೇಜ್ ಮಾಡುವುದನ್ನು ಕಲಿತಿರುವವರು, ಇಮೋಜಿಯ ನಿಜವಾದ ಅರ್ಥವನ್ನು ತಿಳಿದುಕೊಳ್ಳುವ ಯಾವ ಪ್ರಯತ್ನವನ್ನೂ ಮಾಡದೇ, ಯಾರೋ ತೀರಿಕೊಂಡದ್ದಕ್ಕೆ ವಾಟ್ಸಪ್ಪ್ ಗುಂಪಿನಲ್ಲಿರುವವರೆಲ್ಲಾ ‘ರಿಪ್’ ಅಂತ ಬರೆದು ಕೈ ಜೋಡಿಸುವ ಇಮೋಜಿಗೆ ಉತ್ತರವಾಗಿ ಕೆನ್ನೆ ಕೆಂಪಾದ ಇಮೋಜಿಯನ್ನು ಹಾಕಿ ಮುಗ್ಧತೆ ಮೆರೆದು ಹಿಂಸೆ ಕೊಡುತ್ತಾರೆ.

ಇಮೋಜಿಗಳಷ್ಟೇ ಕುಖ್ಯಾತರಾದ ಮೊಟುಕುಗೊಳಿಸಿದ ಪದಗಳ ಬಗ್ಗೆ ಹೇಳುವುದಾದರೆ `ಟಾಕ್ ಟು ಯು ಲೇಟರ್’ ಅಂತ ಬರೆಯುವ ಬದಲು ಕೆಲವರು ಣಣಥಿಟ ಅಂತ ಬರೆಯುತ್ತಾರೆ. ಸಮಯ ಉಳಿಸುವುದರ ಜೊತೆಗೆ ಇದೂ ಒಂದು ರೀತಿ ತಾವು `ಕೂಲ್’, ಟ್ರೆಂಡಿ, ಫ್ಯಾಷನೇಬಲ್ ಅಂತ ಗುರುತಿಸಿಕೊಳ್ಳುವ ಇಚ್ಛೆ ಅನಿಸುತ್ತದೆ. ಅಲ್ಲದೆ ನನ್ನಂತೆ ಇಂಗ್ಲಿಷ್ ಪದಗಳನ್ನು ಬರೆಯುವಾಗ ಅವಸರದಿಂದಲೋ ಅಥವಾ ಅಜ್ಞಾನದಿಂದಲೋ ಆಗುವ ಸ್ಪೆಲ್ಲಿಂಗ್ ತಪ್ಪುಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುವ ಮಹದಾಸೆಯೂ ಇರಬಹುದು. ಉದಾಹರಣೆಗೆ behaviour ಪದದಲ್ಲಿ u ಇರಬೇಕೋ ಬೇಡವೋ ಎಂದೆಲ್ಲ ತಲೆಕೆಡಿಸಿಕೊಳ್ಳುವ ಬದಲು bhvr ಅಂತ ಬರೆದರೆ ಆಯಿತು. ಕಾರಣ ಏನೇ ಇರಲಿ ಒಟ್ಟಿನಲ್ಲಿ ಇಂತಹ ಮೆಸೇಜಿಂಗ್ ಶೈಲಿಯಿಂದ ಪದಗಳ ಜೋಡಣೆಗೆ ಅತ್ಯಗತ್ಯವಾಗಿದ್ದ ovals ಅಥವಾ ಸ್ವರಗಳ ಕೋಲ್ಡ್ ಬ್ಲಡೆಡ್ ಮರ್ಡರ್ ದಿನನಿತ್ಯ ನಡೆಯುತ್ತಿದೆ ಅನ್ನಬಹುದು.

ಹಾಗಂತ ಈ ಇಮೋಜಿಗಳನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಹಲವಾರು ರೆಕಾರ್ಡ್ ಗಳನ್ನು ಮುರಿದಿರುವ ಪ್ರಖ್ಯಾತ ಸಿನೆಮಾ ನಟ ರಜನೀಕಾಂತ್ ಚಿತ್ರ ಕಬಾಲಿ ಬಿಡುಗಡೆಯಾದಾಗ ಅದಕ್ಕಾಗಿಯೇ ಒಂದು ವಿಶಿಷ್ಟವಾದ ಇಮೋಜಿ ಸಿದ್ಧವಾಗಿ ವಾಟ್ಸಪ್ ಸಂದೇಶಗಳಲ್ಲಿ ರಾರಾಜಿಸಿತ್ತು. ಭಾಷಾತಜ್ಞರು, ಔಪಚಾರಿಕವಾದ ಭಾಷೆಯ ಬಳಕೆಗೆ ಒತ್ತು ಕೊಡುವವರು ಎಷ್ಟೇ ಪೇಚಾಡಿಕೊಂಡರೂ ಇಮೋಜಿಗಳ ಬಳಕೆ ಮತ್ತು ಹೊಸ ಹೊಸ ದುಂಡು ಮುಖಗಳ ಸೇರ್ಪಡೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ.

ಇಂತಹ ತರಲೆ ಇಮೋಜಿಗಳನ್ನು ಸೃಷ್ಟಿಸಿದ ಕೀರ್ತಿ ಜಪಾನಿನ ಡೊಕೊಮೊ ಸಂಸ್ಥೆಯಲ್ಲಿ 1990ರ ದಶಕದ ಕೊನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್‌ಟಿಟಿ ತಂಡದಲ್ಲಿದ್ದ ಶಿಗೇತಾಕ ಕುರಿಟಾ ಅವರಿಗೆ ಸಲ್ಲುತ್ತದೆ. 2013 ರಲ್ಲಿ ಆಕ್ಸಫರ್ಡ್ ಡಿಕ್ಷನರಿ ಇಮೋಜಿ ಎನ್ನುವ ಪದವನ್ನು ಸೇರಿಸಿತು. ಈ ಇಮೋಜಿಗಳ ಬಳಕೆ ಹೆಚ್ಚಾಗುವಂತೆ ಮಾಡಿದ್ದು ಡೊಕೋಮೋ ಮತ್ತು ವೊಡಾಫೋನ್ ನಂಥ ಕಂಪನಿಗಳು.

ಫೋನ್ ಮಾಡಿ ಮಾತನಾಡಲು ಹಿಂಜರಿಯುತ್ತಲೇ, ಯಾವಾಗಲೂ ಕನೆಕ್ಟೆಡ್ ಆಗಿರಲು ಬಯಸುವ ಜನರ ಈ ಮೆಸೇಜಿಂಗ್ ಕಾಲದಲ್ಲಿ ಹೊಸ ಹೊಸ ಭಾವನೆಗಳನ್ನು ವ್ಯಕ್ತ ಪಡಿಸುವ ಇಮೋಜಿಗಳಿಗಾಗಿ ಬೇಡಿಕೆ ಹೆಚ್ಚುತ್ತಲೇ ಇದ್ದು ಈಗಾಗಲೇ ಇಮೋಜಿಗಳ ಅಥವಾ ಗ್ರಾಫಿಕಲ್ ಸ್ಮೆöÊಲಿ ಗಳ ಸಂಖ್ಯೆ ಮೂರು ಸಾವಿರ ದಾಟಿದೆ. ಇಷ್ಟಕ್ಕೇ ನಿಲ್ಲದೆ ಮುಂದುವರೆಯುತ್ತಲೇ ಇವೆ. ಸಾಮಾನ್ಯವಾಗಿ ಇಷ್ಟೂ ಇಮೋಜಿಗಳು ಬಳಕೆಯಾಗುವುದಿಲ್ಲ ಮತ್ತು ಹಲವಾರು ಇಮೋಜಿಗಳ ಅವಶ್ಯಕತೆಯೂ ಇಲ್ಲ. ಕೆಲವೊಮ್ಮೆ ಎಲ್ಲಾ ವರ್ಗದವರನ್ನೂ ಖುಷಿ ಪಡಿಸುವ ಉದ್ದೇಶದಿಂದಲೂ ಇಮೋಜಿಗಳ ಸಂಖ್ಯೆ ಹೆಚ್ಚಿರಬಹುದು. ಚಾಟಿಂಗ್ ಮಾಡುವ ಎಲ್ಲಾ ವರ್ಗದವರಲ್ಲಿ ಹೆಚ್ಚು ಜನಪ್ರಿಯವಾದ ಇಮೋಜಿ ಎಂದರೆ ಆನಂದಬಾಷ್ಪ ತುಂಬಿದ ಸ್ಟೈಲಿ, ಕಣ್ಣಿನಲ್ಲೇ ಹೃದಯವನ್ನು ತೆರೆದಿಟ್ಟ ಸ್ಟೈಲಿ ಮತ್ತು ಕೆಂಪು ಹೃದಯ.

ಪ್ರೇಮಿಗಳಿಗಂತೂ ಪ್ರೀತಿ ತೋರಿಸಬೇಕಿರಲಿ ಅಥವಾ ಕೋಪ ಇರಲಿ ತಕ್ಷಣಕ್ಕೆ ಕೆಲಸಕ್ಕೆ ಬರುವುವೆಂದರೆ ಇವೇ ಇಮೋಜಿಗಳು. ಕೆಲಸದಲ್ಲಿ ಎಷ್ಟೇ ಬಿಜಿ ಇದ್ದರೂ, ಬಾಸ್ ಕೈಲಿ ಬೈಸಿಕೊಂಡು ಮುಖ ಊದಿಸಿಕೊಂಡು ಕುಳಿತಿದ್ದರೂ ಪ್ರೇಯಸಿಯ ಸಂದೇಶಕ್ಕೆ ನಗುನಗುತ್ತಲೇ ಉತ್ತರಿಸುವುದು ಈ ಇಮೋಜಿಗಳ ಸಹಾಯದಿಂದ ಮಾತ್ರವೇ ಸಾಧ್ಯ. ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವಂತೆ ಎಷ್ಟೇ ಬಡಕಲಾದ ಶಬ್ದ ಭಂಡಾರವಿರಲಿ, ಇಮೋಜಿಗಳ ಸಹಾಯದಿಂದ ಸಂದೇಶಗಳು ಮಾತ್ರ ಭಾವನೆಗಳಿಂದ ತುಂಬಿ ತುಳುಕುವಂತೆ ಮಾಡುವುದು ಸಾಧ್ಯ.

ಒಟ್ಟಿನಲ್ಲಿ ಇಮೋಜಿಗಳು ಚಾಟಿಂಗ್ ಅನುಭವದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಒಂದು ಭಾಷೆಯ ಮಾಂತ್ರಿಕತೆ, ಶಿಷ್ಟತೆ, ಗಂಭೀರತೆ, ಔಪಚಾರಿಕತೆ ಮತ್ತು ಸೌಂದರ್ಯಗಳನ್ನು ಹಾಳುಗೆಡವುತ್ತಿವೆ ಎಂದು ಯಾರು ಎಷ್ಟೇ ಕೂಗಾಡಿದರೂ ಇಮೋಜಿಗಳ ಇಂಚರದಿOದ ತಪ್ಪಿಸಿಕೊಳ್ಳುವುದು ಮಾತ್ರ ಸಾಧ್ಯವಿಲ್ಲ. ಮುಖವಾಡ ಹಾಕಿಕೊಂಡಿರುವುದು ಅನಿವಾರ್ಯವೇ ಆದಲ್ಲಿ ಸ್ಟೆಲಿಯ ಮುಖವಾಡವನ್ನು ಹಾಕಿಕೊಂಡು ಪ್ರೀತಿಪಾತ್ರರ ಮುಖದ ಮೇಲೆ ನಗುವೊಂದನ್ನು ಮೂಡಿಸಬಾರದೇಕೆ?

Leave a Reply

Your email address will not be published.