ಚುನಾವಣೆಗಳಲ್ಲಿ ಘೋಷವಾಕ್ಯಗಳ ಚಲಾವಣೆ

ಪ್ರಸ್ತುತ ಸನ್ನೀವೇಶದಲ್ಲಿ ಭಾರತೀಯರ ಮನಸ್ಸಿನಲ್ಲಿ ಚೌಕಿದಾರ ಎಂಬ ಶಬ್ದ ಕೇಳಿದರೆ ಥಟ್ಟನೆ ನೆನಪಿಗೆ ಬರುವುದು ‘ಮೋದಿ’ ಹೆಸರು. ಬಿಜೆಪಿ ಈಗ ಈ ಪದಸಂಬಂಧವನ್ನೇ ಬಂಡವಾಳ ಮಾಡಿಕೊಂಡು ‘ಮೇ ಭಿ ಚೌಕಿದಾರ್’ ಎಂಬ ಅಭಿಯಾನವನ್ನು ಆರಂಭಿಸಿದೆ. ಇದು ಮೋದಿ ವಿರುದ್ಧದ ‘ಚೌಕಿದಾರ್ ಚೋರ್ ಹೈ’ ಘೋಷಣೆಗೆ ಪ್ರತಿದಾಳಿ!

ಚುನಾವಣೆ ರಂಗು ಏರುತ್ತಿರುವಂತೆ ವಿವಿಧ ಪಕ್ಷಗಳು ತಮ್ಮ ಪ್ರಚಾರ ಕಾರ್ಯಕ್ರಮಗಳಿಗೆ ಹಾಗೂ ಜಾಹೀರಾತು ಪ್ರಚಾರಕ್ಕೆ (ಅಭಿಯಾನ) ಘೋಷಣಾ ವಾಕ್ಯಗಳನ್ನು ಹುಡುಕಲು ಆರಂಭಿಸುತ್ತವೆ. ಜನರ ಮನಸ್ಸಿನಲ್ಲಿ ನಿಲ್ಲಬಹುದಾದ ಎರಡು-ಮೂರು ಪದಗಳುಳ್ಳ ಆ ‘ಮಾಂತ್ರಿಕ ವಾಕ್ಯ’ ಚುನಾವಣಾ ಸಂದರ್ಭದ ಗ್ರಹಿಕೆ ಯುದ್ಧದಲ್ಲಿ ಬಹಳಷ್ಟು ಪ್ರಭಾವ ಬೀರುತ್ತದೆ. ಜಾಹೀರಾತು ಪ್ರಪಂಚದಲ್ಲಿ ಈ ವಾಕ್ಯಕ್ಕೆ ‘ಸ್ಲೋಗನ್’, ‘ಕ್ಯಾಚ್‍ಫ್ರೇಸ್’, ‘ಪೆÇಸಿಷನಿಂಗ್ ಸ್ಟೇಟ್‍ಮೆಂಟ್’, ‘ಬೇಸ್‍ಲೈನ್’ ಇತ್ಯಾದಿ ವ್ಯಾಖ್ಯಾನಗಳನ್ನು ನೀಡಲಾಗುತ್ತದೆ. ಘೋಷಣಾ ವಾಕ್ಯ ಸಂವಹನ ಅಭಿಯಾನದ ಮುಖ್ಯ ತಿರುಳಾಗಿ ಕೆಲವೊಮ್ಮೆ ಕೆಲಸ ಮಾಡುತ್ತದೆ.

ರಾಜಕೀಯ ಜಾಹೀರಾತು ಪ್ರಚಾರಕ್ಕೆ ದೊಡ್ಡ ಇತಿಹಾಸವಿದೆ. ಚುನಾವಣಾ ಸಮರಗಳಲ್ಲಿ ಕೆಲವೊಮ್ಮೆ ಸಂವಹನ ವ್ಯೂಹತಂತ್ರಗಳು ಒಂದು ಪಕ್ಷದ ಏಳು-ಬೀಳುಗಳನ್ನು ನಿರ್ಧರಿಸುತ್ತವೆ. ಬ್ರಿಟನ್‍ನ 1970ರ ದಶಕದ ಚುನಾವಣೆಯಲ್ಲಿ ಥ್ಯಾಚರ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವು ಲೇಬರ್ ಪಕ್ಷದ ವಿರುದ್ಧ ‘ಲೇಬರ್ ಇಸ್ ನಾಟ್ ವರ್ಕಿಂಗ್’(Labour is not working) ಎಂದು ಬಿಡುಗಡೆ ಮಾಡಿದ ಜಾಹೀರಾತು ಬಹಳ ಜನಪ್ರಿಯತೆ ಪಡೆಯಿತು. ಸಾಚಿ ಅಂಡ್ ಸಾಚಿ ಜಾಹೀರಾತು ಸಂಸ್ಥೆ ತಯಾರಿಸಿದ ಈ ಜಾಹೀರಾತು ಶೀರ್ಷಿಕೆ ದ್ವಂದ್ವಾರ್ಥದಿಂದ ಕೂಡಿತ್ತು. ಬ್ರಿಟನ್‍ನಲ್ಲಿ ಆಗ ಹೆಚ್ಚಾಗಿದ್ದ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ಹಿಡಿದಿದ್ದ ಈ ವಾಕ್ಯ ಲೇಬರ್ ಪಕ್ಷ ಕೆಲಸ ಮಾಡುತ್ತಿಲ್ಲ ಎಂಬ ಅರ್ಥವನ್ನು ಸಹ ನೀಡಿತ್ತು.

ಅಮೆರಿಕಾದಲ್ಲಂತೂ ಜಾಹೀರಾತು ಅಥವಾ ಸಂವಹನ ಸಮರ ಬಹಳ ದೊಡ್ಡದಾಗಿ ನಡೆಯುತ್ತದೆ. ಕೋಟ್ಯಂತರ ಡಾಲರ್‍ಗಳನ್ನು ಇದಕ್ಕಾಗಿ ಸುರಿಯುತ್ತಾರೆ. ಅಲ್ಲಿ ನಮ್ಮಲ್ಲಿಯಂತೆ ಮತಕ್ಷೇತ್ರಗಳಲ್ಲಿ ಹಣ ಹಂಚಿಕೆ ಮಾಡುವುದಿಲ್ಲ. ಅಲ್ಲಿನ ಚುನಾವಣಾ ಅಭ್ಯರ್ಥಿಗಳಿಗೆ ಹಣದ ಅವಶ್ಯಕತೆ ಮುಖ್ಯವಾಗಿ ಜಾಹೀರಾತು ಪ್ರಚಾರಕ್ಕೆ ಬೇಕಾಗಿರುತ್ತದೆ. ಇತ್ತೀಚೆಗಿನ ದಶಕಗಳಲ್ಲಿ ಭಾರತದಲ್ಲಿ ಸಹ ಜಾಹೀರಾತಿಗಾಗಿ ವೆಚ್ಚ ಮಾಡುವಲ್ಲಿ ಹಾಗೂ ಪ್ರಭಾವಶಾಲಿ ಜಾಹೀರಾತು ವ್ಯೂಹತಂತ್ರಗಳನ್ನು ಹೆಣೆಯುವಲ್ಲಿ ರಾಜಕೀಯ ಪಕ್ಷಗಳು ಹಿಂದೆ ಬಿದ್ದಿಲ್ಲ. ಭಾರತದಲ್ಲಿ ಮೊದಲ ಬಾರಿಗೆ ಭಾರಿ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆಗಾಗಿ ಜಾಹೀರಾತು ಪ್ರಚಾರವನ್ನು 1990ರ ಚುನಾವಣೆಯಲ್ಲಿ ಮಾಡುತ್ತದೆ. ಆಗ ದೇಶದ ಭದ್ರತೆ, ಐಕ್ಯತೆ ಹಾಗೂ ಸ್ಥಿರತೆ ವಿಷಯವನ್ನು ಮುಖ್ಯವಾಗಿರಿಸಿಕೊಂಡು ತನಗೆ ಏಕೆ ಮತ ನೀಡಬೇಕೆಂದು ಕಾಂಗ್ರೆಸ್ ಪಕ್ಷವು ತನ್ನ ವಿಚಾರವನ್ನು ಮಂಡಿಸಿತ್ತು. ಬೋಫೆರ್ಸ್ ಅಲೆಯಲ್ಲಿ ಕೊಚ್ಚಿಹೋದ ಕಾಂಗ್ರೆಸ್‍ಗೆ ಆ ಅಭಿಯಾನದಿಂದ ಸಹಾಯವಾಗಲಿಲ್ಲ.

ಎನ್.ಡಿ.ಎ. ‘ಇಂಡಿಯಾ ಶೈನಿಂಗ್’ ಸಂದೇಶವನ್ನು ಮುಂದಿಟ್ಟುಕೊಂಡು ತನ್ನ ಜಾಹೀರಾತು ಪ್ರಚಾರವನ್ನು ಮಾಡಿತ್ತು. ನಾಯಕತ್ವದ ಮೇಲೆ ಆ ಅಭಿಯಾನ ಕೇಂದ್ರೀಕೃತವಾಗಿರಲಿಲ್ಲ. ಆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ‘ಶೈನ್’ ಆಗಲಿಲ್ಲ.

ಜಾಹೀರಾತು ಪ್ರಚಾರಕ್ಕೆ ಸಂಬಂಧಿಸಿದ ಸಂವಹನ ಸಂದೇಶಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ನಿಲ್ಲಬಹುದಾದ, ಅವರ ಒಲವನ್ನು ತಮ್ಮೆಡೆಗೆ ತಿರುಗಿಸಿಕೊಳ್ಳಬಹುದಾದ ಘೋಷಣಾ ವಾಕ್ಯಕ್ಕಾಗಿ ಪಕ್ಷಗಳು ಅಹೋರಾತ್ರಿ ನಿದ್ದೆಗೆಡುತ್ತವೆ. ಅಮೆರಿಕಾದಲ್ಲಿ 1940ರ ಚುನಾವಣೆಯಲ್ಲಿ ಫ್ರಾಂಕ್ಲಿನ್ ರೂಸ್‍ವೆಲ್ಟ್ ತನ್ನ ವಿರುದ್ಧದ ಅಧ್ಯಕ್ಷೀಯ ಅಭ್ಯರ್ಥಿ ವೆಂಡಲ್ ವಿಲ್ಕಿ ವಿರುದ್ಧ ‘ವಿಲ್ಕಿ ಫಾರ್ ದಿ ಮಿಲಿಯನೇರ್ಸ್, ರೂಸ್‍ವೆಲ್ಟ್ ಫಾರ್ ದಿ ಮಿಲಿಯನ್ಸ್’ ((Willkie For The Millionaires Roosevelt For The Millions) ಸೃಷ್ಟಿಸಿದ ಘೋಷಣಾ ವಾಕ್ಯಕ್ಕೂ ಮೊನ್ನೆಮೊನ್ನೆ ತಾನೆ ಪ್ರಿಯಾಂಕ ಗಾಂಧಿ ‘ಮೋದಿ ಶ್ರೀಮಂತರ ಚೌಕಿದಾರ’ ಎಂಬ ಹೇಳಿಕೆಗೂ ಸಂಪರ್ಕ ಕಲ್ಪಿಸಬಹುದು.

1964ರ ಚುನಾವಣೆಯಲ್ಲಿ ಲಿಂಡನ್ ಬಿ ಜಾನ್ಸನ್ ವಿರುದ್ಧ ಅಧ್ಯಕ್ಷೀಯ ಅಭ್ಯರ್ಥಿ ಬ್ಯಾರಿ ಗೋಲ್ಡ್‍ವಾಟರ್ ‘ಇನ್ ಯುವರ್ ಹಾರ್ಟ್ ಯು ನೋ ಹಿ ಇಸ್ ರೈಟ್’ (In your heart you know he is right) ಎಂಬ ಘೋಷಣಾ ವಾಕ್ಯವನ್ನು ಉಪಯೋಗಿಸಿದಾಗ, ಜಾನ್ಸನ್ ಬೆಂಬಲಿಗರು ‘ಇನ್ ಯುವರ್ ಗಟ್ಸ್ ಯು ನೊ ಹಿ ಇಸ್ ನಟ್ಸ್’ (In your guts you know he is nuts) ಎಂಬ ಘೋಷಣಾ ವಾಕ್ಯದೊಂದಿಗೆ ಪ್ರತ್ಯುತ್ತರ ನೀಡುತ್ತಾರೆ.

ಇದರಲ್ಲಿ ಗಮನಿಸಬೇಕಾದ ಅಂಶವಿದೆ. ಕೆಲವು ಅಭಿಯಾನಗಳು ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದರೆ ಕೆಲವು ಅಭಿಯಾನಗಳು ವ್ಯಕ್ತಿಗಳ ಹಾಗೂ ಅವರ ಬಲ ಅಥವಾ ದುರ್ಬಲತೆಯ ಮೇಲೆ ಕೇಂದ್ರೀಕರಿಸುತ್ತವೆ. 2004ರಲ್ಲಿ ಎನ್.ಡಿ.ಎ. ‘ಇಂಡಿಯಾ ಶೈನಿಂಗ್’ ಸಂದೇಶವನ್ನು ಮುಂದಿಟ್ಟುಕೊಂಡು ತನ್ನ ಜಾಹೀರಾತು ಪ್ರಚಾರವನ್ನು ಮಾಡಿತ್ತು. ನಾಯಕತ್ವದ ಮೇಲೆ ಆ ಅಭಿಯಾನ ಕೇಂದ್ರೀಕೃತವಾಗಿರಲಿಲ್ಲ. ಆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ‘ಶೈನ್’ ಆಗಲಿಲ್ಲ.

ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವವರೆಲ್ಲರೂ ಚೌಕಿದಾರ ಎಂಬ ಸಂದೇಶವನ್ನು ನೀಡುತ್ತ ತಾವು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಹಾಗೂ ದೇಶ ಕಾಯುವ ಚೌಕಿದಾರ ಎಂಬ ಸಂದೇಶವನ್ನು ವ್ಯಾಪಕವಾಗಿ ‘ಅನುಭೂತಿಯ’ ಮೂಲಕ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ವ್ಯೂಹತಂತ್ರ ಬಿಜೆಪಿಗೆ ಅನುಕೂಲವಾಗಿ ಪರಿಣಮಿಸುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ರಾಹುಲ್ ಗಾಂಧಿ ಕಳೆದೆರಡು ವರ್ಷಗಳಿಂದ ಮೋದಿ ವಿರುದ್ಧ ‘ಚೌಕಿದಾರ್ ಚೋರ್ ಹೈ’ ಎಂಬ ಆರೋಪ ಮಾಡುತ್ತಿದ್ದಾರೆ. ‘ಚೌಕಿದಾರ’ ಪದ ಈಗಾಗಲೇ ಮೋದಿಯ ಹೆಸರಿನ ಜೊತೆ ತಗುಲಿಹಾಕಿಕೊಂಡಿದೆ. ಪ್ರಸ್ತುತ ಸನ್ನೀವೇಶದಲ್ಲಿ ಎಲ್ಲಾ ಭಾರತೀಯರ ಮನಸ್ಸಿನಲ್ಲಿ ಚೌಕಿದಾರ ಎಂಬ ಶಬ್ದ ಕೇಳಿದರೆ ಥಟ್ಟನೆ ಬರುವುದು ‘ಮೋದಿ’ಯ ಹೆಸರು. ಬಿಜೆಪಿ ಈಗ ಈ ಪದಸಂಬಂಧವನ್ನೇ ಬಂಡವಾಳ ಮಾಡಿಕೊಂಡು ‘ಮೇ ಭಿ ಚೌಕಿದಾರ್’ ಎಂಬ ಅಭಿಯಾನವನ್ನು ಆರಂಭಿಸಿದೆ.

ರಾಹುಲ್ ಗಾಂಧಿ ಮೋದಿಯನ್ನು ದೂಷಿಸಲು ನಕಾರಾತ್ಮಕವಾಗಿ ಬಳಸಿಕೊಂಡ ‘ಚೌಕಿದಾರ’ ಪದವನ್ನು ಮೋದಿ ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿದ್ದಾರೆ. ವೀಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‍ಟ್ಯಾಗ್ ಮೂಲಕ ಆರಂಭವಾಗಿರುವ ಈ ಅಭಿಯಾನ ಭಾವನಾತ್ಮಕ ಅಂಶಗಳಿಂದ ಕೂಡಿದ್ದು ಈಗಾಗಲೇ ದೊಡ್ಡ ಅಲೆಯನ್ನೆಬ್ಬಿಸಿದೆ. ಈಗಾಗಲೇ ಜನರ ಮನಸ್ಸಿನಲ್ಲಿ ‘ಚೌಕಿದಾರ್ ಚೋರ್ ಹೈ’ ಘೋಷಣಾ ವಾಕ್ಯ ನೆಲೆಮಾಡಿದ್ದು, ಮೋದಿ ತಮ್ಮ ‘ಮೇ ಬಿ ಚೌಕಿದಾರ್’ ಅಭಿಯಾನದ ಮೂಲಕ ಈ ಆರೋಪಕ್ಕೆ ಉತ್ತರ ಕೊಡುತ್ತಿದ್ದಾರೆ. ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವವರೆಲ್ಲರೂ ಚೌಕಿದಾರ ಎಂಬ ಸಂದೇಶವನ್ನು ನೀಡುತ್ತ ತಾವು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಹಾಗೂ ದೇಶ ಕಾಯುವ ಚೌಕಿದಾರ ಎಂಬ ಸಂದೇಶವನ್ನು ವ್ಯಾಪಕವಾಗಿ ‘ಅನುಭೂತಿಯ’ ಮೂಲಕ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ವ್ಯೂಹತಂತ್ರ ಬಿಜೆಪಿಗೆ ಅನುಕೂಲವಾಗಿ ಪರಿಣಮಿಸುತ್ತೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ಈಗ ಮತದಾರರು ‘ರಾಜಕೀಯ ಮಾರುಕಟ್ಟೆಯ’ ಗ್ರಾಹಕರಾಗುತ್ತಿದ್ದಾರೆ. ರಾಜಕೀಯ ಪಕ್ಷಗಳು ಯಾವುದೇ ಚುನಾವಣೆಗಾಗಿ ಸಂಬಂಧಿಸಿದ ಜಾಹೀರಾತು/ಸಂವಹನ ಪ್ರಚಾರವನ್ನು ಮಾಡುವ ಮುನ್ನ ಜನಸಂಖ್ಯಾಶಾಸ್ತ್ರವನ್ನು ಹಾಗೂ ಮಾನಸಿಕಶಾಸ್ತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವುಗಳ ಸಮಗ್ರ ಅಧ್ಯಯನ ಮಾಡಬೇಕಾಗುತ್ತದೆ ಹಾಗೂ ಸಂವಹನ ವ್ಯೂಹತಂತ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಈ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಮಾರಕವೋ ಪೂರಕವೋ ಎಂಬುದನ್ನು ಕಾಲ ಮಾತ್ರ ನಿರ್ಧರಿಸಲು ಸಾಧ್ಯ.

Leave a Reply

Your email address will not be published.