ಅಭ್ಯರ್ಥಿಗಳ ಖರ್ಚು – ವೆಚ್ಚ ನಿಯಂತ್ರಣ

ಚುನಾವಣಾ ಅಭ್ಯರ್ಥಿಗಳ ಖರ್ಚು-ವೆಚ್ಚ ನಿಯಂತ್ರಣ ಬೇಕೆ?

ದೇಶದ ಚುನಾವಣಾ ಕಾನೂನಿನ ಅನ್ವಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯೊಬ್ಬ ಕೇವಲ 18 ಲಕ್ಷ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಬಹುದು. ಇಂದಿನ ದಿನಗಳಲ್ಲಿ 18 ಲಕ್ಷ ರೂಪಾಯಿ ಅತ್ಯಂತ ದೊಡ್ಡ ಮೊತ್ತವೇನೂ ಅಲ್ಲ. ಆದರೂ ಎಲ್ಲಾ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಸುಲಭವಾಗಿ ಮುಂದೆ ಬರಲಾರರು. ರಾಜಕೀಯ ಅಧಿಕಾರ ಅನುಭವಿಸುತ್ತಿರುವ ಪಕ್ಷವೊಂದು ಅಭ್ಯರ್ಥಿಯ ಎಲ್ಲಾ ಖರ್ಚನ್ನು ಭರಿಸುತ್ತೇವೆಂದು ಆಶ್ವಾಸನೆ ನೀಡಿದರೂ ಉಮೇದುವಾರರಿಗೆ ಹುಡುಕಬೇಕಾದ ಸಮಸ್ಯೆಯಿದೆ.

ಬೆಂಗಳೂರಿನ ಸುತ್ತಮುತ್ತಲ ಯಾವುದೇ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳು ರೂ. 30 ರಿಂದ 40 ಕೋಟಿಗಳನ್ನು ಖರ್ಚು ಮಾಡಬೇಕಾಗಬಹುದು. ಉತ್ತರ ಕರ್ನಾಟಕದ ಹಿಂದುಳಿದ ಮೀಸಲು ಕ್ಷೇತ್ರದಲ್ಲಿಯೂ ಕೂಡ ಅಭ್ಯರ್ಥಿಗಳು ರೂ.5-6 ಕೋಟಿಗಳಿಗೆ ಕಡಿಮೆ ಇಲ್ಲದಂತೆ ಖರ್ಚು ಮಾಡುತ್ತಾರೆ. ಇತ್ತೀಚಿನ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷವೊಂದು ರೂ.70 ಕೋಟಿ ಖರ್ಚು ಮಾಡಿತ್ತಂತೆ. ಶಿವಮೊಗ್ಗದ ಉಪಚುನಾವಣೆಯಲ್ಲಿ ಎರಡೂ ಪಕ್ಷಗಳು ಸೇರಿ ರೂ.80 ಕೋಟಿ ಖರ್ಚು ಮಾಡಿದವಂತೆ. ರಾಜಕೀಯದ ಅಲ್ಪಸ್ವಲ್ಪ ಜ್ಞಾನವಿರುವ ಯಾರಾದರೂ ಸುಲಭವಾಗಿ ಕೇಳುವ ಈ ವರದಿಗಳು ಚುನಾವಣಾ ಆಯೋಗ ಹಾಗೂ ಚುನಾವಣಾ ಕಾನೂನಿನ ಗೇಲಿ ಮಾಡುತ್ತವೆ.

ಹಾಗಿದ್ದರೆ ಅಭ್ಯರ್ಥಿಗಳ ಚುನಾವಣಾ ಖರ್ಚು-ವೆಚ್ಚಗಳ ಮೇಲೆ ಈಗಿರುವ ಕೃತಕ ನಿಯಂತ್ರಣ ಬೇಕೆ? 1960ರ ದಶಕದ ಸಮಾಜವಾದಿ ಪಳೆಯುಳಿಕೆಯ ಈ ಕಾನೂನು 2018ರಲ್ಲಿ ನಮಗೆ ಅಗತ್ಯವಿದೆಯೇ?

ಹೇಗಿದ್ದರೂ ಈ ಕಾನೂನಿನ ಪಾಲನೆ ಆಗುತ್ತಿಲ್ಲ ಎಂದ ಮೇಲೆ ಈ ಕಾನೂನಿನ ಬದಲಾವಣೆ ಏಕೆ ಬೇಕೆಂದು ನೀವು ಕೇಳಬಹುದು. ಖರ್ಚು-ವೆಚ್ಚದ ಮೇಲಿನ ಈ ಮಿತಿ ಈಗಾಗಲೇ ಪ್ರಹಸನ ರೂಪ ಪಡೆದಿದೆಯಾದರೂ ಕಾನೂನಿನ ಪುಸ್ತಕದಲ್ಲಿ ಮುಂದುವರೆದಿರುವ ಈ ಕಟ್ಟಳೆಯಿಂದ ಪ್ರಜಾಪ್ರಭುತ್ವಕ್ಕೆ ಹಲವು ಅಪಾಯಗಳಿವೆ.

  • ವಿಧಾನಸಭಾ ಕ್ಷೇತ್ರವೊಂದರ ಎರಡು ಲಕ್ಷ ಮತದಾರರಿಗೆ ಒಂದೆರಡು ಪತ್ರ ಬರೆದು ತಲುಪಿಸಲೇ ಲಕ್ಷಾಂತರ ಖರ್ಚಾಗುತ್ತದೆ. ನ್ಯಾಯಯುತವಾಗಿ ರಾಜಕೀಯ ಕಾರ್ಯಕರ್ತರಿಗೆ ತರಬೇತಿ ನೀಡಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲು ಕಳಿಸಲೇ ಚುನಾವಣಾ ಖರ್ಚುವೆಚ್ಚದ ಕಾನೂನು ಮಿತಿ ಮೀರಿರುತ್ತದೆ. ಹೀಗಾಗಿ, ತನ್ನ ತೆರಿಗೆ ಕಟ್ಟಿದ ಹಣವನ್ನು ಖರ್ಚು ಮಾಡಿ ಚುನಾವಣೆ ಗೆಲ್ಲಲು ಬಯಸುವ ಪಕ್ಷರಹಿತ  ಸ್ವತಂತ್ರ ಅಭ್ಯರ್ಥಿಗೆ ಈ ಚುನಾವಣಾ ಮಿತಿ ಕಡಿವಾಣ ಹಾಕುತ್ತಿದೆ.
  • ಸ್ವತಂತ್ರ ಹಾಗೂ ಪಕ್ಷಗಳ ಅಭ್ಯರ್ಥಿಗಳೆಲ್ಲರೂ ಚುನಾವಣೆಯ ಸಮಯದಲ್ಲಿ ಬ್ಯಾಂಕಿನಲ್ಲಿಟ್ಟಿದ್ದ ತಮ್ಮ ಹಣವನ್ನು ಅನಿವಾರ್ಯವಾಗಿ
    ಕಪ್ಪು ಹಣವಾಗಿ ಪರಿವರ್ತನೆ ಮಾಡಬೇಕಾಗುತ್ತದೆ. ಎನ್.ಆರ್. ನಾರಾಯಣಮೂರ್ತಿಯವರು ಚುನಾವಣೆಯಲ್ಲಿ ಸ್ಪರ್ಧಿಸಬಯಸಿದರೆ ಮೊದಲು ಕಡಿಮೆಯೆಂದರೂ ರೂ.50 ಕೋಟಿಗಳನ್ನು ನಗದು ಕಪ್ಪು ಹಣವನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಹೊರತಾಗಿ ಚುನಾವಣೆ ಎದುರಿಸುವ ಮಾರ್ಗಗಳು ಇಲ್ಲ.
  •  ಅಭ್ಯರ್ಥಿಗಳು ಪಾರದರ್ಶಿಕವಾಗಿ ಚುನಾವಣೆ ಎದುರಿಸಲು ವೆಚ್ಚದ ಮೇಲಿನ ಮಿತಿ ಅಡ್ಡ ಬರುತ್ತಿದೆ. ಕಾರ್ಯಕರ್ತರನ್ನು ನೇಮಿಸಿಕೊಳ್ಳಲು, ಮಾಧ್ಯಮಗಳಲ್ಲಿ ಜಾಹೀರಾತು ನೀಡಲು, ಚುನಾವಣಾ ಪ್ರಚಾರ ಸಾಮಗ್ರಿ ಬಳಸಲು, ಸಭೆ-ಸಮಾರಂಭ ಆಯೋಜಿಸಲು ಹಾಗೂ ಬಳಕೆಗೆ ವಾಹನಗಳನ್ನು ಪಡೆಯಲು ಈ ಕೃತಕ ಮಿತಿ ಅಡ್ಡ ಬರುತ್ತಿದೆ. ಇದನ್ನು ಹೇಗಾದರೂ ಮಾಡಿ ತಪ್ಪಿಸಿ ಲಭ್ಯವಿರುವ 15 ದಿನಗಳಲ್ಲಿ ಚುನಾವಣಾ ಪ್ರಚಾರ ಮುಗಿಸುವವರೆಗೆ ಅಭ್ಯರ್ಥಿಯು ದೇಶದ ನೂರಾರು ಕಾನೂನುಗಳನ್ನು ಉಲ್ಲಂಘಿಸಿ ಹೊರಬರಬೇಕಾಗುತ್ತದೆ. ಗೆಲ್ಲುವ ಮತ್ತು ಸೋಲುವ ಅಭ್ಯರ್ಥಿಗಳೆಲ್ಲರನ್ನೂ ಸೇರಿ ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧಿಸುವ ಎಲ್ಲರೂ ಶಾಸಕರಾಗುವ ಮೊದಲು ಶಾಸನ ಮುರಿದು ಬದುಕುವ ಚಾಣಕ್ಯತೆಯನ್ನು ತೋರಬೇಕಾಗುತ್ತದೆ.

ಚುನಾವಣಾ ಖರ್ಚು-ವೆಚ್ಚದ ಮೇಲಿನ ಮಿತಿ ತೆಗೆದುಹಾಕಿದರೆ ಯಾರಿಗೆ ಅನ್ಯಾಯವಾಗಬಹುದು?

ಮತದಾರರಿಗಂತೂ ಅಲ್ಲ. ಬದಲಿಗೆ ನಗದು ರೂಪದಲ್ಲಿ ಭ್ರಷ್ಟಾಚಾರದ ಕಪ್ಪು ಹಣ ಹೊಂದಿರುವ ಸಿರಿವಂತ ಅಭ್ಯರ್ಥಿಗಳಿಗೆ ಮಾತ್ರ. ಇಂತಹ ಕಾಳಸಂತೆಯ ಧಣಿಗಳು ನ್ಯಾಯಯುತವಾಗಿ ಹಣಗಳಿಸಿ ತೆರಿಗೆ ಕಟ್ಟಿರುವ ವಿದ್ಯಾವಂತ ಧನಿಕರನ್ನು ಎದುರಿಸಬೇಕಾಗುತ್ತದೆ. ಭ್ರಷ್ಟ ರಾಜಕಾರಣಿಗಳನ್ನು ಸುತ್ತುವರಿದು ಅವರನ್ನು ಹದ್ದುಗಳಂತೆ ಕುಕ್ಕಿ ತಿನ್ನುವ ಮರಿ ಪುಡಾರಿಗಳಿಗೆ ಅನ್ಯಾಯವಾಗಿ, ಕಾನೂನುಬದ್ಧವಾಗಿ ಹಣ ಪಡೆದು ಕಾರ್ಯಕರ್ತರಾಗುವ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ತಪ್ಪುತ್ತದೆ. ಮಾಧ್ಯಮಗಳಿಗೆ ಸಲ್ಲುವ ಕಪ್ಪು ಹಣ ತಪ್ಪಿ ಹೋಗಿ ಪಾರದರ್ಶಕವಾಗಿ ತೆರಿಗೆ ಕಟ್ಟಬೇಕಿರುವ ಆದಾಯ ಮೂಲ ತೆರೆದುಕೊಳ್ಳುತ್ತದೆ.

ಚುನಾವಣಾ ವೆಚ್ಚದ ಮೇಲೆ ಕಾನೂನು ಮಿತಿ ಇದ್ದರೂ ಅಥ ವಾ ಇಲ್ಲದೇ ಹೋದರೂ ಚುನಾವಣೆಗಳಲ್ಲಿ ಕೇವಲ ಧನಿಕರಷ್ಟೇ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ ವೆಚ್ಚದ ಮೇಲಿನ ಮಿತಿ ಹೊರಟು ಹೋದರೆ ಚುನಾವಣೆಯು ಪಾರದರ್ಶಿಕವಾಗಿ ಉತ್ತಮ ಅಭ್ಯರ್ಥಿಯೊಬ್ಬ ಆಯ್ಕೆಯಾಗಲು ಸಾಧ್ಯವಾಗುತ್ತದೆ. ನಮ್ಮ ರಾಜಕೀಯ ಬೂಟಾಟಿಕೆಯೂ ಕಡಿಮೆಯಾಗುತ್ತದೆ.

Leave a Reply

Your email address will not be published.