ಲೆಕ್ಕಾಚಾರದ ಆಟ ಎಂಬ ಚೌಕಾಬಾರ

ನಮ್ಮ ಗ್ರಾಮೀಣ ಕ್ರೀಡೆಗಳ ಹಿಂದೆ ನಿಖರವಾದ ಉದ್ದೇಶವಿತ್ತು ಎನ್ನುವುದು ನಿಸ್ಸಂಶಯ. ಏಕೆಂದರೆ ಇಂದಿಗೂ ಕೆಲವು ಆಟಗಳು ಜೀವಂತಿಕೆ ಹೊಂದಿವೆ ಎನ್ನುವುದಕ್ಕೆ ಮನುಕುಲದ ಅನುಕೂಲಕ್ಕೆ ಅವುಗಳನ್ನು ಬಳಸಿಕೊಂಡಿರುವುದೇ ಸಾಕ್ಷಿ.

ಗ ಪರಿಚಯಿಸಲು ಹೊರಟಿರುವ ಆಟವನ್ನು ನಾವು ಬಾಲ್ಯದಲ್ಲಿ ಎಂದಾದರೊಮ್ಮೆ ಆಡಿರುತ್ತೇವೆ. ಹಬ್ಬಹರಿದಿನಗಳಲ್ಲಿ, ಬಿಡುವಿನ ವೇಳೆಯಲ್ಲಿ ಮೊದಲಿಗೆ ನೆನಪಿಗೆ ಬರುವ ಆಟವೇ ‘ಚೌಕಾಬಾರ’ ಅಥವಾ ಪಟ್ಟೆಮನೆ (ಕಟ್ಟೆಮನೆ). ವಿವಿಧ ಪ್ರದೇಶಗಳಲ್ಲಿ ಇದಕ್ಕೆ ಭಿನ್ನ ಹೆಸರುಗಳಿವೆ. ಆಟದಲ್ಲಿಯೂ ಕೊಂಚ ಭಿನ್ನತೆ ಇದೆ. ಬಳಸುವ ಕಾಯಿ ಹಾಗೂ ಆಡುವ ಲಟ್ಟುಗಳಕಲ್ಲೂ ವ್ಯತ್ಯಾಸವಿದೆ. ಇದಕ್ಕೆ ಬೇಕಿರುವುದು ಒಂದು ಆಯತಾಕಾರ ಬೋರ್ಡ್ ಅಥವಾ ನೆಲವಾದರೂ ಸರಿ. ಜೊತೆಗೆ ಇಬ್ಬರಿಂದ ನಾಲ್ಕು ಮಂದಿ ಆಟಗಾರರು. ಮತ್ತೇಕೆ ತಡ ಶುರು ಮಾಡೋಣ ಆಟವನ್ನು.

ಆಡುವುದು ಹೇಗೆ?

ಕಟ್ಟೆಮನೆ ಅಂದರೆ ಚೌಕಾಕಾರವಾಗಿ ಬರೆದುಕೊಳ್ಳುವ ಪಟ್ಟೆಗಳು. ಒಂದೊಂದು ಬದಿಗೆ ಐದೈದು ಖಾಲಿ ಮನೆಗಳು ಬರುವಂತೆ ಪಟ್ಟೆ ರಚಿಸಿಕೊಳ್ಳಬೇಕು. ಅದರಲ್ಲಿ ಮಧ್ಯೆ ಒಂದು ಕಟ್ಟೆಮನೆ ಇರಬೇಕು. ಒಟ್ಟು ಮೂರು ಸುತ್ತುಗಳಲ್ಲಿ ಆಟವಾಡುವ ರೀತಿಯಲ್ಲಿ ಈ ಪಟ್ಟೆ ತಯಾರಾಗಿರುತ್ತದೆ. ಪ್ರತೀ ಎರಡು ಖಾಲಿಮನೆ ನಡುವೆ ಒಂದು ಕಟ್ಟೆಮನೆ. ಇದು ಆಟದಲ್ಲಿ ಅತ್ಯಂತ ರಕ್ಷಣೆ ಒಸಗಿಸುವ ಜಾಗ. ಒಳ ಆವರಣದಲ್ಲಿಯೂ ಇದೇ ರೀತಿಯ ಪಟ್ಟೆಗಳಿರುತ್ತದೆ. ಅಲ್ಲಿಯೂ ರಕ್ಷಣೆಗೆ ಮನೆಗಳಿರುತ್ತವೆ. ಇವೆಲ್ಲವನ್ನು ಸುರಕ್ಷಿತವಾಗಿ ದಾಟಿ ಒಳಹೋಗಿ ಅಂತಿಮ ಮನೆಗೆ ಅವರವರ ಕಾಯಿಗಳನ್ನು ಸೇರಿಸಿದರೆ ಆತ ಗೆದ್ದಂತೆ.

ಬಳಸುವುದೇನು?

ಈ ಆಟಕ್ಕೆ ಇಬ್ಬರು ಅಥವಾ ನಾಲ್ಕು ಮಂದಿ ಕುಳಿತರೆ ಅದರ ಮಜಾನೇ ಬೇರೆ. ಅದರಲ್ಲೂ ಪರಿಣತರು ಆಟಕ್ಕೆ ಕುಳಿತರೆ ನೋಡುವುದೇ ಚೆಂದ. ಒಬ್ಬರು ತಲಾ 4 ಕಾಯಿಗಳನ್ನು ಹೊಂದಬಹುದು. ಅದಕ್ಕೆಂದೇ ನಿರ್ದಿಷ್ಟವಾಗಿ ಬಳಸುವ ಪದ್ಧತಿ ಇಲ್ಲ. ಸಣ್ಣ ಗಾತ್ರದ ಕಲ್ಲುಗಳನ್ನೋ ಅಥವಾ ಸಣ್ಣ ಕಾಳುಗಳನ್ನೋ ಬಳಸುವುದಿದೆ. ಒಬ್ಬೊಬ್ಬ ಸ್ಪರ್ಧಾಳು ಇಂತಹ ನಾಲ್ಕು ಕಾಯಿಗಳನ್ನು ಹೊಂದಿರುತ್ತಾನೆ. ಜೊತೆಗೆ ಆಟಕ್ಕೆ ಬಳಸುವ ಕವಡೆ (ಹುಣಸೆಬೀಜ ಸೀಳಿದ ಪಟ್ಟಿ) ಬಳಸುತ್ತಾರೆ. ಇದರಲ್ಲಿ ಒಂದು ಬದಿಗೆ ಇಂತಿಷ್ಟು ಎಂದು ಅಂಕೆ ನಿಗದಿಯಾಗಿರುತ್ತದೆ. ನಾಲ್ಕೂ ಬದಿಯು ಬಿಳಿ ಬಿದ್ದರೆ (ಹುಣಸೆಬೀಜ) 4 ಎಂದೂ, ಎಲ್ಲವೂ ತಿರುಗಿಬಿದ್ದರೆ 8 ಎಂದೂ ಪರಿಗಣಿಸಲಾಗುತ್ತದೆ. ಜೊತೆಗೆ ಇದರಲ್ಲಿ ಜೋಡಿ-ಒಂಟಿ ಎಂಬ ಸಂಖ್ಯೆಗಳೂ ಚಾಲ್ತಿಯಲ್ಲಿವೆ. ಒಟ್ಟು 24 ಆಂಕೆ ಬಿದ್ದರೆ ಒಬ್ಬ ಸ್ಪರ್ಧಾಳುವಿನ ಒಂದು ಕಾಯಿ ಹಣ್ಣಾದಂತೆ. ಅಂದರೆ ನಿಗದಿತ ಮನೆ ಸೇರಿದಂತೆ.

ವಿಶೇಷವೆಂದರೆ ಇದರಲ್ಲಿ ಎದುರಾಳಿಯ ಕಾಯಿಗಳನ್ನು ಹೊಡೆದುರುಳಿಸುವ ಅವಕಾಶವೂ ಸಿಗುತ್ತದೆ. ಕೆಲವರು ಗೆಲುವಿಗಿಂತ ಎದುರಾಳಿಗಳ ಕಾಯಿಗಳನ್ನು ಬೀಳಿಸುವುದರಲ್ಲಿಯೇ ಸಂತಸ ಪಡುವುದಿದೆ. ಆಟ ಸಾಗುವ ವೇಳೆ ಅಥವಾ ನಿಮಗೆ ಬಿದ್ದ ಸಂಖ್ಯೆಗಳನ್ನು ಮುನ್ನಡೆಸುವ ಸಂದರ್ಭ ನಿರ್ದಿಷ್ಟ ಮನೆಯಲ್ಲಿ ಎದುರಾಳಿಯ ಕಾಯಿಗಳಿದ್ದಲ್ಲಿ ಅವುಗಳನ್ನು ಹೊಡೆದು ಮತ್ತೆ ಒಂದನೇ ಮನೆಗೆ ತರುವುದು. ಆದರೆ ಸುರಕ್ಷಿತ ಕಟ್ಟೆಮನೆಯಲ್ಲಿದ್ದರೆ ಮಾತ್ರ ಎಲ್ಲರ ಕಾಯಿಗಳೂ ಸುರಕ್ಷಿತ. ಹಾಗಾಗಲೆಂದೇ ಕೆಲವರು ಪರಿಣತರು ಲೆಕ್ಕಾಚಾರದ ಆಟಕ್ಕೆ ತೊಡಗುವುದಿದೆ. ಯಾರು ತನ್ನೆಲ್ಲಾ ಕಾಯಿಗಳನ್ನು ವೇಗವಾಗಿ ಅಂತಿಮ ಮನೆಗೆ ಕಳುಹಿಸುತ್ತಾನೋ ಅವನು ಗೆದ್ದಂತೆ.

ಒಟ್ಟಾರೆ ಮನರಂಜನೆಯೇ ಈ ಚೌಕಾಬಾರ ಆಟದ ಮೂಲ ಉದ್ದೇಶ. ಜೊತೆಗೆ ಲೆಕ್ಕದಲ್ಲಿ ಚುರುಕುತನ ಮೂಡಲೂ ಇದು ಸಹಕಾರಿ.

ಇದರಲ್ಲಿಯೂ ಬಾಜಿ ಕಟ್ಟುವುದಿದೆ. ಅಥವಾ ಇಬ್ಬಿಬ್ಬರು ಒಟ್ಟಾಗಿ ಮತ್ತಿಬ್ಬರ ವಿರುದ್ಧ ಸೆಣಸುವುದಿದೆ. ಹೊಂದಾಣಿಕೆಯಿಂದ ಒಮ್ಮೊಮ್ಮೆ ಎದುರಾಳಿಯನ್ನೂ ಬಚಾವ್ ಮಾಡುವ ಪದ್ಧತಿಯೂ ಇದೆ. ಒಟ್ಟಾರೆ ಮನರಂಜನೆಯೇ ಈ ಚೌಕಾಬಾರ ಆಟದ ಮೂಲ ಉದ್ದೇಶ. ಜೊತೆಗೆ ಲೆಕ್ಕದಲ್ಲಿ ಚುರುಕುತನ ಮೂಡಲೂ ಇದು ಸಹಕಾರಿ.

ಕೆಲವು ಕಡೆಗಳಲ್ಲಿ 16 ಮನೆಯ ಆಟವೂ ಚಾಲ್ತಿಯಲ್ಲಿದೆ. ಇದರಲ್ಲಿ ಒಬ್ಬೊಬ್ಬರು ಆರು ಕಾಯಿಗಳನ್ನು ಹೊಂದಿರುತ್ತಾರೆ. ಆಡುವ ಮನೆಯೂ 32 ಮನೆಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಆರು ಮಂದಿ ಒಟ್ಟಾಗಿ ಆಡುವಂತಹ ವಿನೂತನ ಕಟ್ಟೆಮನೆ ತಯಾರಾಗಿದೆ. ಕೆಲವು ಹಳ್ಳಿಗಳಲ್ಲಿ ಪುರಾತನ ಕಾಲದಲ್ಲಿಯೇ ಮನೆ ನಿರ್ಮಿಸುವ ಸಂದರ್ಭವೇ ಈ ಕಟ್ಟೆಮನೆಯನ್ನು ತಮ್ಮ ಮನೆಯ ಹಜಾರ ಅಥವಾ ಮುಂದಿನ ಕಟ್ಟೆಯ ಮೇಲೆ ನಿರ್ಮಿಸುವುದಿದೆ. ಈಗಂತೂ ರೆಡಿಮೇಡ್ ಮನೆಗಳೇ ಬಂದಿವೆ. ಶಾಲಾದಿನಗಳಲ್ಲಿ ಒಂದು ಕಾರ್ಡ್‍ಬೋರ್ಡ್ ಮತ್ತು ಬಳಪ ಸಿಕ್ಕದರೆ ಕಟ್ಟೆಮನೆ ರೆಡಿಯಾಗಿರುತ್ತಿತ್ತು. ಆಟಕ್ಕೆ ಹುಣಸೇಬೀಜವೇ ಪಾನ್‍ಗಳು. ಐದರಿಂದ ಹತ್ತುಪೈಸೆ ಕಟ್ಟಿಕೊಂಡು ಆಡುತ್ತಿದ್ದ ನೆನಪು ಇನ್ನೂ ಹಲವರಿಗೆ ಇರಬಹುದು. ಆದರೆ ಪ್ರಸ್ತುತ ಪಟ್ಟೆಗೆ ಕಟ್ಟುವ ಬಾಜಿ ಮೊತ್ತ ದೊಡ್ಡದಾಗಿದೆ. ಆದರೆ ಆಟದ ಕಿಕ್ ಮಾತ್ರ ಕಮ್ಮಿಯಾಗಿಲ್ಲ.

ಇತ್ತೀಚೆಗಿನ ದಿನಗಳಲ್ಲಿ ಕ್ರಿಕೆಟ್‍ನಲ್ಲಿ ಟ್ವೆಂಟಿ ಟ್ವೆಂಟಿ ಬಂದಂತೆ ಇದರಲ್ಲಿಯೂ ಒಂಟಿ-ಜೋಡಿ ಬಂದಿದೆ. ವೇಗವಾಗಿ ಹಣ ಮಾಡುವ ಆಟವಾಗಿ ಮಾರ್ಪಟ್ಟಿದೆ. ಕೆಲವು ಹಬ್ಬ ಅಥವಾ ಬೇರೆ ಸಾಮೂಹಿಕ ಆಚರಣೆ ವೇಳೆ ಪಡ್ಡೆ ಹುಡುಗರ ಗುಂಪು ಈವತ್ತಿಗೂ ಈ ಒಂಟಿ-ಜೋಡಿಯಲ್ಲಿ ನಿರತವಾಗಿರುತ್ತದೆ. ಆಧುನಿಕತೆ ಬಂದಂತೆ ಜನಪದ ಕ್ರೀಡೆಗಳೂ ಮಾರ್ಪಾಡಾಗುತ್ತಿವೆ. ಒಟ್ಟಾರೆ ಗ್ರಾಮೀಣ ಭಾಗದ ಸಂಸ್ಕøತಿಯ ಅಂಗವೇ ಆಗಿಹೋಗಿರುವ ಕ್ರೀಡೆಗಳ ಉಳಿವು ನಮ್ಮ ಪರಂಪರೆಯನ್ನು ಭವಿಷ್ಯದ ಯುಗಕ್ಕೆ ಕೊಂಡೊಯ್ಯುತ್ತದೆ. ಆಟ ಬದಲಾದರು ಅದರ ಖದರ್ ಮಾತ್ರ ಹಾಗೇ ಇದೆ.

ಹೈಟೆಕ್ ಟಚ್‍ನ ಹಗ್ಗ ಜಿಗಿತ

ನಮ್ಮಲ್ಲಿನ ಪುರಾತನ ಕ್ರೀಡೆಗಳ ಆರಂಭ ಮತ್ತು ಶೋಧನೆ ಯಾವುದೇ ಆರ್ಕಿಮಿಡೀಸ್ ಸಂಶೋಧನೆಗಿಂತಲೂ ಸರ್ವಶ್ರೇಷ್ಟ. ಏಕೆಂದರೆ ಇಂತಹ ಆಟಗಳ ಆಧುನಿಕ ಸ್ಪರ್ಶದೊಂದಿಗೆ ಇಂದಿಗೂ ವಿಶ್ವದಾದ್ಯಂತ ಪ್ರಸಿದ್ಧಿಪಡೆದಿರುವುದೇ ಇದಕ್ಕೆ ನಿದರ್ಶನ. ಹತ್ತುಹಲವು ಗ್ರಾಮೀಣ ಕ್ರೀಡೆಗಳು ಯಾವುದೋ ನಿರ್ದಿಷ್ಟ ರೂಪು ಪಡೆದು ಖ್ಯಾತಿಯೊಂದಿಗೆ ಜನಮನ್ನಣೆಗೂ ಪಾತ್ರವಾಗುತ್ತವೆ. ಈ ರೀತಿಯ ಮನ್ನಣೆಯಷ್ಟೇ ಅಲ್ಲ ಈವತ್ತಿಗೂ ಜಗತ್ತಿನಾದ್ಯಂತ ವ್ಯಾಯಾಮ ಶಾಲೆಗಳಲ್ಲಿ ಅನಿವಾರ್ಯ ಎನಿಸಿರುವ ಜನಪದ ಕ್ರೀಡೆಯೇ ಹಗ್ಗಜಿಗಿತ ಅಥವಾ ಇಂಗ್ಲೀಷಿನ ಸ್ಕಿಪ್ಪಿಂಗ್.

ಅಪ್ಪಟ ಹಳ್ಳಿ ಆಟ

ಅಷ್ಟಕ್ಕೂ ಈ ಹಗ್ಗ ಜಿಗಿತ ಎನ್ನುವುದು ಅಪ್ಪಟ ಗ್ರಾಮೀಣ ಆಟ. ನಮ್ಮಲ್ಲಿ ಇಂದಿಗೂ ಪಡ್ಡೆಹುಡುಗ-ಹುಡುಗಿಯರು ಬಯಲಿನಲ್ಲಿ ಈ ಆಟ ಆಡುವುದಿದೆ. ಹುಡುಗರಿಗಿಂತ ಹುಡುಗಿಯರಿಗೇ ಹೆಚ್ಚು ಪ್ರೀತಿಪಾತ್ರವಾಗಿರುವ ಈ ಕ್ರೀಡೆಗೆ ಬೇಕಾಗಿರುವ ಸಲಕರಣೆಯೂ ಅತ್ಯಂತ ಸುಲಭವಾಗಿ ಸಿಗುವಂತಾದ್ದು. ಹಳ್ಳಿಗಾಡಿನಲ್ಲಾದರೆ ಇದಕ್ಕೆಂದೇ ಗ್ರಾಮ್ಯ ಭಾಷೆಯಲ್ಲಿ ‘ಬೊಂಬು’ ಅಥವಾ ಹಬ್ಬುವ ಬಳ್ಳಿಯ ಬೇರನ್ನೇ ಬಳಸಿ ಹಗ್ಗ ಜಿಗಿತ ಶುರುವಾಗುತ್ತದೆ. ಸುಮಾರು 3 ರಿಂದ 4 ಮೀಟರ್ ಉದ್ದದ ಹಗ್ಗವನ್ನು ಬಳಸಿ ಈ ಜಿಗಿತ ಆಡುವುದಿದೆ. ಹಬ್ಬಹರಿದಿನಗಳಲ್ಲಂತೂ ಈ ಆಟಕ್ಕೂ ಒಂದು ಕಳೆ ಬರುತ್ತದೆ.

ಆಡುವುದು ಹೇಗೆ?

ಒಬ್ಬರಿಂದ ಹಿಡಿದು ಏಕಕಾಲದಲ್ಲಿ 6 ಮಂದಿ ಆಡುವ ವಿವಿಧ ನಮೂನೆಯ ಆಟಗಳು ಈ ಹಗ್ಗ ಜಿಗಿತದಲ್ಲಿವೆ. ಇದಕ್ಕೆ ಬಳಸುವ ಹಗ್ಗದಲ್ಲಿಯೂ ಭಿನ್ನತೆಯಿರುತ್ತದೆ. ಒಬ್ಬರು ಟೈಂಪಾಸ್ ಅಥವಾ ದೈಹಿಕ ಕಸರತ್ತಿಗೆ ಈ ಜಿಗಿತವನ್ನು ಮಾಡಿದರೆ ಮತ್ತೆ ಕೆಲವರು ಸ್ಪರ್ಧಾ ಉದ್ದೇಶದಿಂದಲೇ ಆಡುವುದಿದೆ. ಒಬ್ಬರಿಗಿಂತ ಹೆಚ್ಚು ಜನರು ಪಾಲ್ಗೊಂಡಾಗ ಅದು ಅನಿವಾರ್ಯವಾಗಿ ಸ್ಪರ್ಧೆ ರೂಪ ಪಡೆಯುತ್ತದೆ. ಈ ಹಗ್ಗವನ್ನು ಅಂಗಾಲಿನ ಕೆಳಗಿರಿಸಿಕೊಂಡು ಹಾಗೆಯೇ ಬೆನ್ನಿನ ಹಿಂಬಂದಿಯಿಂದ ತೆಗೆದು ತಲೆಯ ಮೂಲಕ ಹಾದು ಮತ್ತೆ ಒಂದು ಸುತ್ತು ಅಂಗಾಲಿಗೆ ಯಾವುದೇ ಅಡ್ಡಿಯಿಲ್ಲದೆ ಬಂದರೆ ಒಂದು ಅಂಕಿಯ ಲೆಕ್ಕ. ಹೀಗೆ ಯಾರು ಹೆಚ್ಚು ಬಾರಿ ಸುತ್ತುತ್ತಾರೋ ಅವರು ಜಯಶಾಲಿಯಾದಂತೆ. ಜೊತೆಗೆ ಇದರಲ್ಲಿಯೇ ವೇಗವಾಗಿ ಸುತ್ತುವ ಪದ್ಧತಿಯೂ ಚಾಲ್ತಿಯಲ್ಲಿದೆ.

ದೈಹಿಕ ಸಾಮಥ್ರ್ಯಕ್ಕೂ ಸಾಟಿ

ಇದೇ ರೀತಿಯಲ್ಲಿ ಮತ್ತೊಂದು ಬಗೆಯದು ಅಂದರೆ ಆರುಮಂದಿ ಸೇರಿ ಆಡುವ ಆಟ. ತಲಾ ಮೂರು ಮಂದಿ ಒಂದೊಂದು ಕಡೆ ನಿಂತು ಹಗ್ಗವನ್ನು ತಿರುಗಿಸುತ್ತಾರೆ. ಇದರಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕ್ರಮವಾಗಿ ಸುತ್ತುವ ಹಗ್ಗಗಳ ನಡುವೆ ಹಾರಬೇಕು. ಇದು ಕ್ರಮೇಣ ವೇಗಗತಿ ಪಡೆದುಕೊಳ್ಳುತ್ತದೆ. ಈ ಸಂದರ್ಭ ಅವರೂ ತಮ್ಮ ವೇಗವನ್ನೂ ಹೆಚ್ಚಿಸಿಕೊಳ್ಳಬೇಕು. ಇದರಲ್ಲಿ ಯಾರು ಹೆಚ್ಚು ಹೊತ್ತು ತಪ್ಪಿಲ್ಲದೆ ಕ್ರಮವಾಗಿ ಹಾರುತ್ತಾರೋ ಅವರು ಗೆದ್ದಂತೆ. ಇದು ಸಾಮೂಹಿಕವಾಗಿ ಗೆಳೆಯರು ಸೇರಿದಾಗ ಸಹಜವಾಗಿಯೇ ಎಲ್ಲರನ್ನೂ ಖುಷಿಪಡಿಸುವ ಆಟವೂ ಹೌದು. ಇದಕ್ಕಾಗಿ ಸೆಣಬು ಅಥವಾ ನಾರಿನಿಂದ ಮಾಡಿದ ಹಗ್ಗವನ್ನು ಬಳಸುವುದಿದೆ. ಈ ಮಾದರಿಯ ಆಟಕ್ಕೆ ಸ್ವಲ್ಪ ಉದ್ದನೆಯ ಹಗ್ಗವನ್ನು ಬಳಸುವುದು ವಾಡಿಕೆ. ಹೆಜ್ಜೆ ತಪ್ಪದಂತೆ ಎಚ್ಚರವಹಿಸುವ ಜೊತೆಗೆ ದೈಹಿಕ ಸಾಮಥ್ರ್ಯವ ವೃದ್ಧಿಗೂ ಸಹಕಾರಿ.

ಜಿಮ್‍ನಲ್ಲೂ ಜಗ್ಗಾಟ

ಪ್ರಸ್ತುತ ಈ ಹಗ್ಗಜಿಗಿತ ಗ್ರಾಮೀಣ ಭಾಗಕ್ಕಿಂತ ನಗರಪ್ರದೇಶಗಳಲ್ಲಿಯೇ ಹೆಚ್ಚು ಕಾಣಬಹುದು. ಜೊತೆಗೆ ಜನರಲ್ಲಿ ಆರೋಗ್ಯ ಮತ್ತು ದೈಹಿಕ ಕಸರತ್ತಿನ ಬಗ್ಗೆ ಹೆಚ್ಚು ಆಸಕ್ತಿ ವ್ಯಕ್ತಗೊಳ್ಳುತ್ತಿರುವ ಬೆನ್ನಲ್ಲೇ ಎಲ್ಲ ವ್ಯಾಯಾಮಶಾಲೆ ಅಥವಾ ಜಿಮ್ ಕೇಂದ್ರಗಳಲ್ಲಿಯೂ ಈ ಹಗ್ಗಜಿಗಿತ ಇದೀಗ ಕಡ್ಡಾಯ ಎನ್ನುವಷ್ಟರಮಟ್ಟಿಗೆ ನಮ್ಮ ಜನಪದ ಕ್ರೀಡೆಯೊಂದು ವ್ಯಾಪಿಸಿದೆ. ಇಂದು ಇದಕ್ಕೆಂದೇ ರೆಡಿಮೇಡ್ ಹಗ್ಗಗಳೂ ಅಂಗಡಿಗಳಲ್ಲಿ ಲಭ್ಯ. ಹಗ್ಗದ ಎರಡೂ ಬದಿಯಲ್ಲಿ ಮರದ ಅಥವಾ ರಬ್ಬರ್‍ನ ಹಿಡಿಪುಗಳನ್ನು ಹೊಂದಿರುವ ಹಗ್ಗವನ್ನು ಜಿಮ್‍ಗಳಲ್ಲಿ ಬಳಸಲಾಗುತ್ತದೆ. ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಲು ಈ ಸ್ಕಿಪ್ಪಂಗ್ ಅತ್ಯಂತ ಉಪಯುಕ್ತ ವ್ಯಾಯಾಮ ಎನ್ನುವುದು ಈ ಕ್ರೀಡೆಯ ಜನಪ್ರಿಯತೆಗೆ ಸಾಕ್ಷಿ.

ಜಗತ್ತಿನ ಬಹುತೇಕ ದೇಶಗಳಲ್ಲಿ ಈ ಸ್ಕಿಪ್ಪಿಂಗ್ ಅರ್ಥಾತ್ ಹಗ್ಗಜಿಗಿತ ಫೇಮಸ್. ಜೊತೆಗೆ ಎಲ್ಲೆಂದರಲ್ಲಿ ಆಡಬಹುದಾದ ಮತ್ತು ಯಾವುದೇ ಬೆಲೆಬಾಳುವ ಸಲಕರಣೆಗಳ ಅಗತ್ಯವಿರದ ಈ ಹಗ್ಗಜಗ್ಗಾಟ ಹಲವು ಮಜಲುಗಳನ್ನು ಕಂಡುಕೊಂಡಿದೆ. ಇದರ ವ್ಯಾಪ್ತಿ ಪ್ರಸ್ತುತ ವಾರ್ಷಿಕ ಗ್ರಾಮೀಣ ಕ್ರೀಡಾಕೂಟಗಳಲ್ಲಿ ಈ ಹಗ್ಗಜಗ್ಗಾಟ ಹೆಚ್ಚಾಗಿ ಕಂಡುಬರುತ್ತಿದೆ. ಹಗ್ಗ ಜಗ್ಗಾಟ ಎಷ್ಟು ಕ್ರೇಜ್ ಹುಟ್ಟಿಸುತ್ತದೆ ಎನ್ನುವುದಕ್ಕೆ ಆಸ್ಟ್ರೇಲಿಯಾ ಬಾರ್ನೆಟ್ ಎಂಬ ಸ್ಕಿಪ್ಪಿಂಗ್ ಪಟು 4 ಗಂಟೆಗಳ ಅವಧಿಯಲ್ಲಿ ಸತತವಾಗಿ 11810 ಬಾರಿ ಹಗ್ಗಜಿಗಿತ ಮಾಡಿದ್ದು ಇಂದಿಗೂ ಜಾಗತಿಕ ದಾಖಲೆಯಾಗಿದೆ. ಇಂತಹ ಅಪ್ಪಟ ಗ್ರಾಮೀಣ ಆಟ ಹೈಟೆಕ್ ಟಚ್ ಪಡೆದಾದರೂ ಶಾಶ್ವತ ಸ್ಥಾನ ಗಿಟ್ಟಿಸಿರುವುದು ಸಂತಸದ ಸಂಗತಿ.

Leave a Reply

Your email address will not be published.