ಜಗತ್ತನ್ನು ಗೆಲ್ಲಹೊರಟವರನ್ನು ಕೊರೊನಾ ಗೆದ್ದೀತೆ?

ಅಚ್ಚರಿಯೇ ಆಗಬಾರದ ಸಂಗತಿ ಏನು ಗೊತ್ತೆ? ಜಗದ ವ್ಯಾಪಾರ ಹಿಂದಿನಂತೆಯೇ ನಾಳೆಯೂ ಮುಂದುವರೆಯಲಿದೆ… ನೋಡುತ್ತಿರಿ.

ಮನೆಯಿಂದ ಆಚೆ ಹೊರಟು ಇಡೀ ಜಗತ್ತನ್ನೇ ಗೆಲ್ಲುತ್ತೇನೆಂದು ಬೀಗುತ್ತ ಸಾಗುತ್ತಿದ್ದ ಮನುಷ್ಯ ಈಗ ಕೊರೊನಾ ಸುಂಟರಗಾಳಿಗೆ ಬೆದರಿ ಮನೆಗೆ ಮರಳಿ ಅವಿತು ಕೂತಿದ್ದಾನೆ. ಕೂತಲ್ಲೇ ಸುತ್ತಲಿನ ಅಚ್ಚರಿಗಳನ್ನು ನೋಡುತ್ತಿದ್ದಾನೆ. ನದಿ ಚೊಕ್ಕಟವಾಯ್ತು, ಗಾಳಿ ಚೊಕ್ಕಟವಾಯ್ತು, ವಾಹನಗಳ ಸದ್ದಡಗಿತು, ಪಕ್ಷಿಗಳ ಇಂಚರ ಕೇಳುವಂತಾಯ್ತು. ರಾತ್ರಿಯ ವೇಳೆಗೆ ನಗರದ ಆಕಾಶದಲ್ಲಿ ತಾರೆಗಳನ್ನೂ ನೋಡುವಂತಾಯ್ತು. ಜಲಂಧರದಿಂದ ಇನ್ನೂರು ಕಿಲೊಮೀಟರ್‌ದೂರದಲ್ಲಿರುವ ಹಿಮಪರ್ವತವೂ ಕಾಣುವಂತಾಯ್ತು. ಮನುಕುಲಕ್ಕೆ ಮತ್ತೊಮ್ಮೆ ದೂರದೃಷ್ಟಿ ಲಭಿಸುವಂತಾಯ್ತು… ಎಂದೆಲ್ಲ ಹೇಳುತ್ತಿದ್ದಾನೆ.

ದೂರದೃಷ್ಟಿ ಕುರಿತಂತೆ ನನಗೆ ಸಿಕ್ಕ ಅತ್ಯುತ್ತಮ ಕಣ್ಣೋಟ ಏನು ಗೊತ್ತೆ? ಅದ್ಯಾವುದೋ ಮಹಿಳೆಗೆ 2024ರ ಚುನಾವಣಾ ಫಲಿತಾಂಶವೂ ಕಾಣತೊಡಗಿದೆಯಂತೆ!

ಕರಾಳವೋ ಅಕರಾಳವೋ ಅಂತೂ ಭವಿಷ್ಯದ ದಿನಗಳು ಎಲ್ಲರಿಗೂ ಭಿನ್ನ ಭಿನ್ನ ರೀತಿಯಲ್ಲಿ ಕಾಣತೊಡಗಿದೆ. ಕೊರೊನಾ ಮಾರಿಯ ಸದ್ದಡಗಿದ ಮೇಲೆ ಏನಾದೀತೆಂಬುದು ಯಾರಿಗೂ ಸ್ಪಷ್ಟತೆಯಿಲ್ಲ. ಏಕೆಂದರೆ ಈ ವೈರಾಣುವಿನ ಸತ್ಯಚಿತ್ರಣವೇ ಇನ್ನೂ ಖಚಿತವಾಗಿ ಗೊತ್ತಾಗಿಲ್ಲ. ಮೇಲಾಗಿ ಭವಿಷ್ಯ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆಯೇ ಯಾರಿಗೂ ಇಲ್ಲವಲ್ಲ!

ದೇಶ-ದೇಶಗಳು ಒಂದಾಗಿ ಇಂಥ ಜಾಗತಿಕ ಸಂಕಟಗಳನ್ನು ನಿಭಾಯಿಸಲು ಕಲಿಯಬೇಕಿದೆ ಎಂದು ಒಂದಿಷ್ಟು ತಜ್ಞರು ಹೇಳುತ್ತಿದ್ದರೆ, ಇನ್ನೊಂದಿಷ್ಟು ತಜ್ಞರು ಅದಕ್ಕೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ: `ಇಲ್ಲ! ಪ್ರತಿ ದೇಶದಲ್ಲೂ ಸ್ವಾವಲಂಬನೆ ಹೆಚ್ಚಾಗಬೇಕು. ಸರಕು-ಸೇವೆಗಳಿಗಾಗಿ ಬೇರೆ ದೇಶಗಳ ನೆರವು ಕೋರಬಾರದು’ ಎನ್ನುತ್ತಿದ್ದಾರೆ. ಮೂರನೆಯ ಪಂಗಡದ ತಜ್ಞರು ಇವೆರಡರ ನಡುವಣ ಎಂಥದೋ ಅಸ್ಪಷ್ಟ ಸಮನ್ವಯದ ದಾರಿಯನ್ನು ಸೂಚಿಸುತ್ತಿದ್ದಾರೆ. ಅದು ಈಗಿಗಿಂತ ಹೇಗೆ ಭಿನ್ನವೊ ನನಗಂತೂ ಅರ್ಥವಾಗುತ್ತಿಲ್ಲ.

ಈಗಿನ ಬಿಕ್ಕಟ್ಟು ಜಗದ್ವಾ÷್ಯಪಿ ಆಗಿರುವುದರಿಂದ ಭವಿಷ್ಯವನ್ನು ಅಂತರರಾಷ್ಟಿಯ ನೆಲೆಯಲ್ಲಿಯೇ ನೋಡಬೇಕು ಅನ್ನಿ. ಅಲ್ಲಿ ದೊಡ್ಡಣ್ಣನಾಗಿ ಮೆರೆಯುತ್ತಿದ್ದ ಅಮೆರಿಕವೇ ಕುಸಿದು ಕೂತಿದೆ. ಐರೋಪ್ಯ ಸಂಘಟನೆಯಂತೂ ಬ್ರೆಕ್ಸಿಟ್ ಬಿರುಕಿನಿಂದಾಗಿ ದುರ್ಬಲವಾಗಿದೆ. ಮೇಲಾಗಿ ಕೊರೊನಾ ಹಾವಳಿಯಿಂದ ನಲುಗಿದೆ. ಹಾಗಾಗಿ ಸದ್ಯಕ್ಕಂತೂ ಜಾಗತಿಕ ದೊಡ್ಡಣ್ಣನ ಸ್ಥಾನ ಖಾಲಿ ಇದೆ. ಚೀನಾ ಆ ಸ್ಥಾನಕ್ಕೆ ತಾನೇ ಏರಿ ಕೂರಲು ಹವಣಿಸುತ್ತಿದೆ. ಆಗಲೇ ಏರಿ ಕೂತಂತೆ ನಟಿಸುತ್ತಿದೆ ಕೂಡ. ತನ್ನ ಸ್ವಂತದ ಸಂಕಟಗಳಿಂದ ಅದು ತ್ವರಿತವಾಗಿ ಚೇತರಿಸಿಕೊಂಡು ಇತರ ರಾಷ್ಟçಗಳಿಗೆ ತಾನೇ ಸಹಾಯ ಮಾಡುತ್ತೇನೆಂದು ಜ್ವರಪರೀಕ್ಷಾ ಸಲಕರಣೆಗಳನ್ನೂ ವೈದ್ಯಸಿಬ್ಬಂದಿಗೆ ಬೇಕಾದ ಭದ್ರತಾ ಕವಚಗಳನ್ನೂ ಪೂರೈಸಲು ಮುಂದಾಗಿದೆ. ಅಮೆರಿಕದ ನಂತರ ತನ್ನದೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯೆಂದು ಬೀಗುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅದರ ಸ್ಥಾನ ಭದ್ರವಾಗಿದೆ. ವಿಶ್ವ ಸ್ವಾಸ್ಥ÷್ಯ ಸಂಸ್ಥೆ ಮತ್ತಿತರ ಅಂತರರಾಷ್ಟಿಯ ಸಂಸ್ಥೆಗಳಲ್ಲೂ ಅದರದೇ ಬಿಗಿ ಹಿಡಿತವಿದೆ.

ಆದರೆ ಜಗತ್ತು ಚೀನಾವನ್ನು ನಂಬುವ ಸ್ಥಿತಿಯಲ್ಲಿಲ್ಲ. ಅದು ತಾನೇ ಏನೋ ಎಡವಟ್ಟು ಮಾಡಿಕೊಂಡು ಜಗತ್ತಿಗೆಲ್ಲ ಸಂಕಟವನ್ನು ವಿತರಿಸಿದೆ ಎಂಬ ಸಂಶಯ ಎಲ್ಲಡೆ ಹೊಗೆಯಾಡುತ್ತಿದೆ. ಮೇಲಾಗಿ ಅದು ಪೂರೈಸುತ್ತಿರುವ ರಕ್ಷಣಾ ಸರಂಜಾಮುಗಳಲ್ಲಿ ಸಾಕಷ್ಟು ಎಡವಟ್ಟುಗಳಾಗಿವೆ. ನಾಳಿನ ಜಗತ್ತಿಗೆ ಸಿಗಬೇಕಿದ್ದ ಯಾವ ಮಾದರಿಗಳೂ ಮಾರ್ಗಸೂತ್ರಗಳೂ ಅದರ ಬಳಿ ಇಲ್ಲ.

ಹಾಗಿದ್ದರೆ ನಾಯಕತ್ವದ ಪಟ್ಟಕ್ಕೆ ಬೇರೆ ಯಾರು? ಈಗ ಪ್ರಮುಖ ಐದು ಬಣಗಳ ನಾಳೆಗಳನ್ನು ಒಂದೊಂದಾಗಿ ನೋಡೋಣ

ನೀವು ಭಾಜಪಾದ ಬೆಂಬಲಿಗರಾಗಿದ್ದರೆ…

ನಿಮ್ಮೆದುರಿಗೆ ಉಜ್ವಲ ಭವಿಷ್ಯವೇ ಕಾಣುತ್ತದೆ. ಜಾಗತಿಕ ನಾಯಕತ್ವದ ಶೂನ್ಯವನ್ನು ತುಂಬಬಲ್ಲ ಸಮರ್ಥ ಮುಂದಾಳತ್ವ ನಮ್ಮಲ್ಲಿದೆ. ನಮ್ಮದು ಅತಿ ದೊಡ್ಡ ಜನಸಂಖ್ಯೆಯ ದೇಶ ಅಷ್ಟೇ ಅಲ್ಲ, ಸರಾಸರಿ ಆಯರ್ಮಾನದ ದೃಷ್ಟಿಯಿಂದ ಭಾರತವೇ ಜಗತ್ತಿನ ಅತ್ಯಂತ ಯುವ ದೇಶವೆನಿಸಿದೆ. ಅದಕ್ಕಿಂತ ಹೆಚ್ಚಿನದಾಗಿ, ಸುಶಿಕ್ಷಿತ ಭಾರತೀಯರು ಎಲ್ಲ ಶ್ರೀಮಂತ ದೇಶಗಳಿಗೂ ವಲಸೆ ಹೋಗಿದ್ದಾರೆ; ಕೆಲವರಂತೂ ಉನ್ನತ ಸ್ಥಾನಗಳಿಗೇರಿದ್ದಾರೆ.

ಸದ್ಯದ ಸಂಕಟವನ್ನು ಭಾರತೀಯರು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ವಿಶ್ವವೇ ಕಾದು ನೋಡುತ್ತಿದೆ ಏಕೆಂದರೆ ತಜ್ಞರ ಲೆಕ್ಕಾಚಾರದ ಪ್ರಕಾರ ಭಾರತದಲ್ಲೇ ಇತರೆಲ್ಲ ದೇಶಗಳಿಗಿಂತ ಹೆಚ್ಚಿನ ಸಾವು ಸಂಭವಿಸಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. ಇಷ್ಟು ದೊಡ್ಡ ದೇಶವಾಗಿದ್ದರೂ ಇಷ್ಟೊಂದು ಭಾರೀ ಸಂಖ್ಯೆಯ ಅನಕ್ಷರಸ್ಥರನ್ನೂ ಅರೆಹೊಟ್ಟೆಯ ಪ್ರಜೆಗಳನ್ನೂ ಹೊತ್ತಿದ್ದರೂ ಕೊರೊನಾ ಹಾವಳಿ ಇಲ್ಲಿ ನಗಣ್ಯವಾಗಿದೆ. ಶ್ರೀಮಂತ ರಾಷ್ಟçಗಳ ಒಂದೊಂದು ನಗರದಲ್ಲಿ ಸಂಭವಿಸಿದ ಸಾವಿಗಿಂತ ಕಡಿಮೆ ಸಾವು ಇಡೀ ದೇಶದಲ್ಲಿ ದಾಖಲಾಗುತ್ತಿದೆ. ಇದರ ಶ್ರೇಯವೆಲ್ಲವೂ ಇಲ್ಲಿನ ಇಂದಿನ ಸಮರ್ಥ ನಾಯಕನಿಗೇ ಹೋಗಬೇಕು.

ಅಮೆರಿಕಕ್ಕೇ ಔಷಧ ಒದಗಿಸಿದ್ದು, ಸಾರ್ಕ್ಸಭೆ ನಡೆಸಿದ್ದು, ಈಗ ಬ್ರಿಕ್ಸ್ಸಂಘಟನೆಯ ವಿಶ್ವಮೇಳವನ್ನು ಸಂಘಟಿಸಲು ಮುಂದಾಗಿದ್ದು ಇವೆಲ್ಲವೂ ಜಾಗತಿಕ ನಾಯಕತ್ವ ವಹಿಸಲು ಭಾರತವೇ ಪರಮಶ್ರೇಷ್ಠ ಎಂಬುದನ್ನು ಸಂಕೇತಿಸುತ್ತಿದೆ. ಈ ನಾಯಕತ್ವದಿಂದಾಗಿ ಭಾರತವೇ ವಿಶ್ವಗುರುವಾಗುವ ನಿಟ್ಟಿನಲ್ಲಿ ಸಾಗಲಿದೆ.

ನೀವು ಪ್ರತಿಪಕ್ಷಗಳ ಬೆಂಬಲಿಗರಾಗಿದ್ದರೆ…

ನಿರಂಕುಶ ಪ್ರಭುತ್ವವೊಂದರ ಕರಾಳ ನೆರಳು ಕವಿಯುತ್ತಿರುವಂತೆ ಕಾಣುತ್ತದೆ. ಜಾಗತಿಕವಾಗಿ ಭಾರತ ಪ್ರಕಾಶಿಸುತ್ತಿದೆ ಎಂಬ ಭ್ರಮೆಯನ್ನು ಹಬ್ಬಿಸುತ್ತ ಒಂದರಮೇಲೊಂದು ತಪ್ಪು ಹೆಜ್ಜೆಗಳಿಂದಾಗಿ ಆರ್ಥಿಕವಾಗಿ ಎಡವುತ್ತ, ತಡಕಾಡುತ್ತ ಸಾಗುತ್ತಿರುವ ದೇಶ ಇದಾಗಿದೆ. ಬೆಳವಣಿಗೆಯ ದರ ಕುಸಿಯುತ್ತ ಇನ್ನೇನು ಶೂನ್ಯದ ಸಮೀಪ ಬರಲಿದೆ. ಹಿಂದಿನ ತಪ್ಪುಗಳಿಂದಾಗಿ ನಿರುದ್ಯೋಗ ಸಮಸ್ಯೆ ಭೂತಾಕಾರ ತಾಳಿದೆ. ಪ್ರಜಾಪ್ರಭುತ್ವದ ಮೂರೂ ಸ್ತಂಭಗಳೂ ಒಬ್ಬ ನಾಯಕನ ಆದೇಶಕ್ಕೆ ಕಾಯುತ್ತಿರುವಂಥ ಮನೋಭೂಮಿಕೆ ಸಿದ್ಧವಾಗಿದೆ.

ಕೊರೊನಾ ಕಾರಣದಿಂದಾಗಿ ಕೂಲಿಕಾರ್ಮಿಕರು, ರೈತರು ಭಾರೀ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇವರು ಪ್ರಪಾತಕ್ಕೆ ಕುಸಿಯದಂತೆ ತಡೆಗಟ್ಟುವ ಯಾವ ವಿಶೇಷ ಕಾರ್ಯಕ್ರಮಗಳೂ ಕಾಣುತ್ತಿಲ್ಲ. ದೇಶದೊಳಗೆ ಈ ಪರಿಯ ಕೋಮುದ್ವೇಷ ಹರಡುತ್ತಿದ್ದರೂ ಬಾಯಿಮುಚ್ಚಿಕೊಂಡಿರುವ ವಾಕ್ಚತುರ ನಾಯಕನಿಗೆ ಜಾಗತಿಕ ಮುತ್ಸದ್ದಿತನ ಪಟ್ಟವಂತೂ ದೂರದ ಕನಸು. ಈಗಾಗಲೇ ಕೊಲ್ಲಿರಾಷ್ಟçಗಳಲ್ಲಿ ಗುಲ್ಲೆಬ್ಬಿದೆ. “ಜಾಗತಿಕ ರಂಗಕ್ಕೊಬ್ಬ ಗಾಂಧಿ ಬೇಕು, ಮಂಡೇಲಾ ಬೇಕು, ಆದರೆ ಇನ್ನೊಬ್ಬ ಹಿಟ್ಲರ್ ಸುತರಾಂ ಬೇಡ” ಎಂಬ ಮಾತುಗಳು ಅರಬ್‌ರಾಷ್ಟçಗಳಲ್ಲಿ ಓಡಾಡತೊಡಗಿವೆ.

ದೇಶದೊಳಗಿನ ಸುಶಿಕ್ಷಿತ, ಮಧ್ಯಮವರ್ಗದ ಜನರಂತೂ ಈಗಾಗಲೇ ಸಂವಿಧಾನದತ್ತ ಬಹುತೇಕ ಹಕ್ಕುಗಳನ್ನು ಅನಿವಾರ್ಯವಾಗಿ ಕಪಾಟಿನಲ್ಲಿ ಇಟ್ಟುಕೊಂಡು ಕೂತಿದ್ದಾರೆ. ಸುದ್ದಿ ಚಾನೆಲ್‌ಗಳ ಗಂಟೆಗಂಟೆಗಳ ಚೀತ್ಕಾರವನ್ನೇ ಕೇಳುತ್ತ ಪದೇ ಪದೇ ದಿಗಿಲುಬೀಳುತ್ತ, ವಾಟ್ಸಾಪ್ ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತ, ನಾಯಕಮಣಿಯ ಮುಂದಿನ ಟಾಸ್ಕ್ ಏನಿದ್ದೀತೆಂದು ಕಾತರದಿಂದ ನೋಡುತ್ತ ಕೂತಿದ್ದಾರೆ.

ಸಂವೇದನೆಗಳೆಲ್ಲ ಮರಗಟ್ಟಿ ಹೋದವರನ್ನು `’ಲಾಕ್‌ಡೌನ್ ಮುಗೀತು ಎದ್ದೇಳಿ” ಎಂದು ಎಚ್ಚರಿಸಿದರೂ ಏಳಲಾಗದಷ್ಟು ಜೋಭದ್ರ ಸ್ಥಿತಿಯಲ್ಲಿ ಪ್ರಜೆಗಳನ್ನು ಅದ್ದಿಡಲಾಗಿದೆ. ಜನರನ್ನು ಎಚ್ಚರಿಸಬೇಕಿದ್ದ ಮುದ್ರಣ ಮಾಧ್ಯಮಗಳೋ ನತಮಸ್ತಕವಾಗಿವೆ. ಅವು ಸುಲಭಕ್ಕೆ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಬಹುಪಾಲು ಚಾನೆಲ್ (ಬ್ರಾಡ್‌ಕಾಸ್ಟ್) ಮಾಧ್ಯಮಗಳು ಬಂಡವಾಳಶಾಹಿ ಉದ್ಯಮಿಗಳ ಮುಷ್ಟಿಗೆ ಸೇರಿದ್ದು ಈಗಾಗಲೇ ಅವು ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುವ “ಮಡಿಲೇರಿದ ಮೀಡಿಯಾ” ಎಂಬ ಖ್ಯಾತಿಯನ್ನು ಪಡೆದಿವೆ. ಅವು ನಮ್ಮೆಲ್ಲ ವೈಫಲ್ಯಗಳನ್ನೂ ಮುಚ್ಚಿ ಹಾಕುತ್ತ, ಕೊರೊನಾ ಭಯವನ್ನು ಮನೆಮನೆಗಳಲ್ಲಿ ಅತಿಶಯ ಗದ್ದಲದೊಂದಿಗೆ ಅಹೋರಾತ್ರಿ ಕುಣಿಸುತ್ತ ಭಾರತದ ಸಾಧನೆಯ ತಮ್ಮಟೆಯನ್ನು ಜೋರಾಗಿ ಬಡಿಯುತ್ತಿವೆ.

ನೀವು ಭಕ್ತಾಗ್ರೇಸರರಾಗಿದ್ದರೆ…

ನೀವು ಭಕ್ತಾಗ್ರೇಸರರಾಗಿದ್ದು ವಾಟ್ಸಾಪ್ ವಿವಿಯ ಪದವೀಧರರಾಗಿದ್ದರೆ ಇನ್ನೇನು ಸುಳ್ಳುಸುದ್ದಿಗಳ ಸುವರ್ಣಯುಗಕ್ಕೆ ಕಾಲಿಡುತ್ತೀರಿ. ಲಂಗುಲಗಾಮಿಲ್ಲದ ಸೋಶಿಯಲ್ ಮೀಡಿಯಾಗಳಲ್ಲಿ ದಂಡಿಯಾಗಿ ದಿನದಿನವೂ ಸುಳ್ಳುಸುದ್ದಿಗಳನ್ನೋ ಜೊಳ್ಳು ಜೋಕ್‌ಗಳನ್ನೋ ಪ್ರಭುತ್ವದ ಹೊಗಳುಬಿಂಬಗಳನ್ನೋ  ಹರಿಬಿಡುತ್ತಿದ್ದರೆ ಯಾವ ಸಮುದಾಯವನ್ನು ಬೇಕಾದರೂ ಅಟ್ಟಾಡಿಸುತ್ತ ಆಳುವ ಪಕ್ಷಕ್ಕೆ ಜೈಕಾರ ಹಾಕುತ್ತ  ಹಾಯಾಗಿರುತ್ತವೆ. ಕೆಲಸವಿಲ್ಲದ ಪಡ್ಡೆಹುಡುಗರು ತಮ್ಮ ನಿತ್ಯದ ಸಮಸ್ಯೆಗಳನ್ನು ಮರೆತು ನಿಮ್ಮ ನಕಲೀ ಸೃಷ್ಟಿಗಳನ್ನು ಫಾರ್ವರ್ಡ್ ಮಾಡುತ್ತ ಅಲ್ಲಿಷ್ಟು ಇಲ್ಲಿಷ್ಟು ಗದ್ದಲಗಳಿಗೆ ಕಾರಣವಾಗುತ್ತ ಪ್ರಭುತ್ವವನ್ನು ಹೀಗೇ ಆಗಾಗ ಮೆಚ್ಚಿಸುತ್ತ ವಿಜೃಂಭಿಸುತ್ತಿರುವ ಅವಕಾಶ ನಿಮ್ಮದಾಗಲಿದೆ.

ನೀವು ಸಾಫ್ಟ್ ವೇರ್ ತಜ್ಞರಾಗಿದ್ದರೆ…

ನೀವು ಪರಿಶ್ರಮಿ ಸಾಫ್ಟ್ವೇರ್ ತಜ್ಞರಾಗಿದ್ದರೆ ಕೊರೊನಾ ಸೋಂಕುಮಾರಿ ನಿಮಗಾಗಿ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿರುವಂತೆ ಕಾಣಬಹುದು. ಮನೆಯಲ್ಲಿ ಕೂತೇ ಕಚೇರಿಯ ಕೆಲಸಗಳನ್ನು ನಿಭಾಯಿಸುವುದು ಈಗ ಅಭ್ಯಾಸವಾಗುತ್ತಿದೆ. ಅಷ್ಟೇನೂ ತಜ್ಞರಲ್ಲದವರೂ ಮನೆಯಲ್ಲಿದ್ದೇ ಈಗ ಬ್ಯಾಂಕಿಂಗ್, ಆನ್‌ಲೈನ್ ಶಾಪಿಂಗ್, ಶೇರುಮಾರುಕಟ್ಟೆಯ ಕೆಲಸಗಳನ್ನು ನಿಭಾಯಿಸತೊಡಗಿದ್ದಾರೆ. ನಗದುರಹಿತ ವ್ಯವಹಾರಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಶಿಕ್ಷಣ ರಂಗದಲ್ಲೂ ಪಾಠ ಪ್ರವಚನಗಳು ಪರದೆಯ ಮೇಲೆ ಮೂಡಿಬರತೊಡಗಿವೆ.

ಕಲೆ, ಸಂಗೀತ, ಭಾಷಾ ಕಲಿಕೆ ಎಲ್ಲಕ್ಕೂ ದೂರಶಿಕ್ಷಣದ ಸಾಧ್ಯತೆಗಳು ಕಾಣತೊಡಗಿವೆ. ಅವಕ್ಕೆಲ್ಲ ಬೇಕಾದ ಹೊಸಹೊಸ ಸಾಫ್ಟ್ವೇರ್‌ಗಳನ್ನು, ಆಪ್‌ಗಳನ್ನು ಸೃಷ್ಟಿಸಬಲ್ಲ ನಿಪುಣರಿಗೆ ಬೇಡಿಕೆ ಹೆಚ್ಚಬಹುದು. ಹಿಂದೆ ಹೊಸ ಸಹಸ್ರಮಾನದ ಹೊಸ್ತಿಲಲ್ಲಿ `ವೈಟೂಕೆ’ ಎಂಬ ಭೂತಭಯ ಸೃಷ್ಟಿಯಾಗಿದ್ದರಿಂದಲೇ ಭಾರತದ ಯುವಕರಿಗೆ ಸಾಫ್ಟ್ವೇರ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಕುದುರಿತ್ತು. ಈಗಿನ ವೈರಾಣುಭಯ ಇನ್ನೊಂದು ಅಂಥದ್ದೇ ಅವಕಾಶವನ್ನು ಒಡ್ಡಬಹುದು.

ನೀವು ಔಷಧ ರಂಗದವರಾಗಿದ್ದರೆ…

ಔಷಧ ಉತ್ಪಾದನೆ, ಚಿಕಿತ್ಸಾ ಸಲಕರಣೆಗಳ ಪೂರೈಕೆ ಮತ್ತು ಆರೋಗ್ಯವಿಮೆಯಂಥ ರಂಗದಲ್ಲಿ ನೀವು ತೊಡಗಿದ್ದರೆ ಅಲ್ಲಿ ಮೇಲೇರುತ್ತ ಹೋಗಲು ಸುವರ್ಣಾವಕಾಶ ನಿಮ್ಮದಾಗಲಿದೆ. ಸದ್ಯಕ್ಕೇನೊ ಸುನಾಮಿಯಂತೆ, ಸುಂಟರಗಾಳಿಯಂತೆ ಬಂದೆರಗಿದ ಕೊರೊನಾ ನಾಲ್ಕಾರು ತಿಂಗಳಲ್ಲಿ ಕಣ್ಮರೆಯಾಗುವ ಸಂಭವ ಕಡಿಮೆ. ಡೆಂಗೇ, ಫ್ಲೂ, ಹೆಪಟೈಟಿಸ್, ಚಿಕೂನ್‌ಗುನ್ಯಗಳ ಹಾಗೆ ಶಾಶ್ವತವಾಗಿ ಆದರೆ ಮಂದ್ರವಾಗಿ ಠಿಕಾಣಿ ಹೂಡಬಹುದು.

ಈಗಿನ ಸುನಾಮಿಗೆಂದು ದಿಢೀರಾಗಿ ಟೆಸ್ಟಿಂಗ್‌ಕಿಟ್, ವೆಂಟಿಲೇಟರ್, ಮುಖವಾಡ, ಕಾಯಕವಚ, ಔಷಧ, ವ್ಯಾಕ್ಸೀನ್‌ಗಳ ಉತ್ಪಾದನೆಗೆ ಭಾರೀ ಬಂಡವಾಳ ಹೂಡಲಾಗುತ್ತಿದೆ. ಕೊರೊನಾ ಸುನಾಮಿ ಹೊರಟೇ ಹೋದರೆ ಅಂಥವರಿಗೆಲ್ಲ ದೊಡ್ಡ ಪ್ರಮಾಣದ ನಷ್ಟವುಂಟಾಗುತ್ತದೆ. ಸಾಧ್ಯವಾದಷ್ಟೂ ಅದು ಇಲ್ಲೇ ಠಳಾಯಿಸುತ್ತಿದ್ದರೆ ಮಾತ್ರ ಲಾಭಾಂಶ ನಿರಂತರವಾಗಿ ಬರುತ್ತಿರುತ್ತದೆ. ಅಂಥ ಉದ್ಯಮಗಳ ಕನಸು ಸಾಕಾರಗೊಳ್ಳುವುದು ಕಠಿಣವೇನಲ್ಲ.

ಸಾಮಾನ್ಯವಾಗಿ ಹೀಗೆ ಬಂದು ಹಾಗೆ ಹೋಗುತ್ತಿದ್ದ ನೆಗಡಿ, ನ್ಯೂಮೋನಿಯಾ ಕೂಡ ಇನ್ನುಮೇಲೆ ಬಡ್ತಿ ಪಡೆದು ಕೋವಿಡ್‌ಗಳೆಂದೇ ನಕಲೀ ಹಣೆಪಟ್ಟಿ ಧರಿಸಿ ಬರಬಹುದು. ನೀವು ಸೀನಿದರೂ ಭೂಕಂಪನವೇ ಆದಂತೆ ಗಾಬರಿಪಟ್ಟು ಅಲ್ಲೆಲ್ಲಿಂದಲೋ ಅಂಬುಲೆನ್ಸ್ ಧಾವಿಸಿ ಬರಬಹುದು. ಅಂತೂ ಔಷಧ, ಡಯಾಗ್ನೋಸ್ಟಿಕ್, ಮೆಡಿಕಲ್‌ಕ್ಷೇತ್ರಕ್ಕೆ ಬೂಸ್ಟರ್‌ಡೋಸ್ ಸಿಗುವ ಸಾಧ್ಯತೆಗಳು ಕಾಣುತ್ತವೆ. ಇಂದಿರಾ ಕ್ಯಾಂಟೀನ್‌ಗಳ ಹೆಸರು ಬದಲಿಸಿ ಪ್ರತಿ ಬಡಾವಣೆಯಲ್ಲೂ ಇಂದಿರಾ ಕ್ವಾರಂಟೀನ್‌ಗಳು ಬಂದರೆ ಅಚ್ಚರಿಯೇನಿಲ್ಲ.

ಇಷ್ಟಾಗಿ, ಅಚ್ಚರಿಯೇ ಆಗಬಾರದ ಸಂಗತಿ ಏನು ಗೊತ್ತೆ? ಜಗದ ವ್ಯಾಪಾರ ಹಿಂದಿನಂತೆಯೇ ನಾಳೆಯೂ ಮುಂದುವರೆಯಲಿದೆ ನೋಡುತ್ತಿರಿ.

ಇಂದಿನ ಈ ಶಾಂತತೆಯನ್ನು. ನಿರಭ್ರ ಆಕಾಶವನ್ನು, ಹೊಗೆರಹಿತ ಗಾಳಿಯನ್ನು ಹಾಡಿ ಹೊಗಳುತ್ತ ಕೂತಿದ್ದವರೆಲ್ಲ ಲಾಕ್‌ಡೌನ್ ಮುಗಿಯುತ್ತಲೇ ಎದೆಯುಬ್ಬಿಸಿ ಹೊರಡುತ್ತಾರೆ- ಹೊಗೆಯೆಬ್ಬಿಸುತ್ತ, ಹಾನ್ಬಾರಿಸುತ್ತ ಜಗತ್ತನ್ನು ಗೆಲ್ಲಲು.

*ಉತ್ತರ ಕನ್ನಡದ ಬಕ್ಕೆಮನೆ ಗ್ರಾಮದಲ್ಲಿ ಜನಿಸಿದ ಲೇಖಕರು ಖರಗ್‌ಪುರ ಐಐಟಿಯಲ್ಲಿ ಎಂಎಸ್ಸಿ, ನವದೆಹಲಿಯ ಜೆ.ಎನ್.ಯು.ದಲ್ಲಿ ಎಂ.ಫಿಲ್. ಮುಗಿಸಿದ್ದಾರೆ. ಅವರು ಪರಿಸರ ಅಧ್ಯಯನ, ಕಳಕಳಿ, ಬರವಣಿಗೆಗೆ ಬದ್ಧರು.

Leave a Reply

Your email address will not be published.