ಜಗತ್ತಿನ ತುರ್ತು ಅಗತ್ಯ ದಾರ್ಶನಿಕ ನಾಯಕತ್ವ

ಕೋವಿಡ್-19 ವೈರಸಿನಿಂದ ಸದ್ಯ ಪಾರಾದರೂ, ಮುಂದಿನ ದಿನಗಳಲ್ಲಿ ಹೊಸ ವೈರಸುಗಳು ಮನುಷ್ಯನ ನಿದ್ದೆ ಕೆಡಿಸಲಿವೆ. ಹಾಗಾಗಿ, ಇದು ಭೂಮಿ ನಮಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆಯ ಕರೆಗಂಟೆಯೆಂದೇ ಭಾವಿಸಬೇಕು.

ಹೆಸರಾಂತ ಗ್ರೀಕ್ ತತ್ವಶಾಸ್ತ್ರಜ್ಞ ಪ್ಲೇಟೋ ಹೇಳಿದಂತೆ, ರಾಜಕೀಯ ನಾಯಕತ್ವ ದಾರ್ಶನಿಕರ ಕೈಯಲ್ಲಿರಬೇಕು. ಯಾಕೆಂದರೆ, ಒಬ್ಬ ಉತ್ತಮ ದಾರ್ಶನಿಕನಲ್ಲಿ ಜ್ಞಾನ, ಬುದ್ಧಿವಂತಿಕೆ, ದೂರದೃಷ್ಟಿ, ಜೊತೆಗೆ ಸಂಯಮ ಅಂತರ್ಗತವಾಗಿರುತ್ತದೆ. ಇವೆಲ್ಲಾ ರಾಷ್ಟ್ರನಾಯಕರಲ್ಲಿ ಅತ್ಯಗತ್ಯವಾಗಿರಬೇಕಾದ ಲಕ್ಷಣಗಳು. ಪ್ರಸ್ತುತ, ಕೊರೊನ ವೈರಸ್ ದಾಳಿಯಿಂದ ಇಡೀ ವಿಶ್ವವೇ ತತ್ತರಿಸುತ್ತಿರುವಾಗ, ನಮ್ಮೆಲ್ಲಾ ನಾಗರಿಕ ವ್ಯವಸ್ಥೆಗಳು ದುರ್ಬಲವಾಗಿ ಕಾಣಿಸುತ್ತಿರುವುದಕ್ಕೆ, ವಿಶೇಷವಾಗಿ ಕಳೆದ ಎರಡು ಶತಮಾನಗಳಿಂದ ವಿಶ್ವದ ರಾಷ್ಟ್ರ ನಾಯಕರಲ್ಲಿಲ್ಲದ ದಾರ್ಶನಿಕತೆಯೇ ಮುಖ್ಯ ಕಾರಣ.

ಮೊದಲನೆಯದಾಗಿ, ರಾಷ್ಟ್ರನಾಯಕರು, ಆಡಳಿತ ವ್ಯವಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗದಂತೆ ದೂರ ಕಾಯ್ದುಕೊಳ್ಳುವುದು ಮುಖ್ಯ. ಹಾಗೆಯೇ, ಯಾವುದೋ ಒಂದು ಧರ್ಮ, ಜಾತಿ, ವರ್ಗ, ಲಿಂಗ ಇತ್ಯಾದಿ ಮಾನವ ನಿರ್ಮಿತ ಪರಿಧಿಗಳನ್ನು ಮೀರಿ, ಇನ್ನೂ ಮುಂದುವರಿದು, ತನ್ನ ಜವಾಬ್ದಾರಿ ಕೇವಲ ಮನುಷ್ಯ ಸಂರಕ್ಷಣೆ ಮಾತ್ರವಲ್ಲ, ತನ್ನ ಸಂಸ್ಥಾನದಲ್ಲಿರುವ ಎಲ್ಲ ಜೀವರಾಶಿಗಳ ಅಸ್ತಿತ್ವ ಗಮನದಲ್ಲಿಟ್ಟುಕೊಳ್ಳಬೇಕೆಂಬ ಪ್ರಜ್ಞೆ ಅಗತ್ಯ. ರಾಷ್ಟ್ರವನ್ನಾಳುವುದೆಂದರೆ, ಈ ಕ್ಷಣಕ್ಕೆ ಅನುಗುಣವಾಗುವಂತಹ ನಿರ್ಧಾರ ತೆಗೆದುಕೊಳ್ಳುವುದಲ್ಲ. ಬದಲಿಗೆ, ಪ್ರಸ್ತುತ ಎದುರಾದ ಸಮಸ್ಯೆಯ ಮೂಲ ಇತಿಹಾಸ ಅರಿತು, ವರ್ತಮಾನದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದಾಗುವ ಭವಿಷ್ಯದ ಸಾಧ್ಯತೆಗಳನ್ನು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ಸದ್ಯ ನಾವು ವಾಸಿಸುತ್ತಿರುವ ನೆಲವನ್ನು ಸುರಕ್ಷಿತವಾಗಿ ಮುಂದಿನ ಪೀಳಿಗೆಗಳಿಗೆ ದಾಟಿಸುವ ಜವಾಬ್ದಾರಿ ಪ್ರತಿಯೊಂದು ಪೀಳಿಗೆಗೂ ಇರುತ್ತದೆ. ಅದರ ಉಸ್ತುವಾರಿ ನೋಡಿಕೊಳ್ಳಬೇಕಾದುದು, ಆಯಾಯ ಕಾಲಘಟ್ಟದ ರಾಷ್ಟ್ರನಾಯಕರು. ಈ ದೂರದೃಷ್ಟಿಯ ಅರಿವನ್ನು ಮನುಷ್ಯನಿಗೆ ಪ್ರಕಟಿಸುವುದು, ತತ್ವಶಾಸ್ತ್ರ. ಹಾಗಾಗಿ ಪ್ರಸ್ತುತ ವೈರಸ್ ಸಮಸ್ಯೆ ರಾಷ್ಟ್ರ ನಾಯಕರ ದೂರದೃಷ್ಟಿ ಕೊರತೆಯ ಸತತ ವೈಫಲ್ಯವೆಂದೇ ಹೇಳಬಹುದು.

ವಿಶೇಷವಾಗಿ, ಕಳೆದೆರಡು ಶತಮಾನಗಳಿಂದ ಮನುಷ್ಯ ತಾನು ಸೃಷ್ಟಿಸಿದ ತಂತ್ರಜ್ಞಾನದಿಂದಾಗಿ, ಉಳಿದೆಲ್ಲಾ ಜೀವರಾಶಿಗಳನ್ನು ಹಿಂದಿಕ್ಕಿ ಪ್ರಾಬಲ್ಯದ ಮುಂಚೂಣಿಗೆ ಬಂದು ನಿಂತಿದ್ದಾನೆ. ಆದರೆ, ದುರಾದೃಷ್ಟವಷಾತ್ ಈ ತಂತ್ರಜ್ಞಾನವೆನ್ನುವುದು, ಜನಸಾಮಾನ್ಯರ ಕೈಯಲ್ಲಿ, ‘ಮಂಗನ ಕೈಯಲ್ಲಿ ಮಾಣಿಕ್ಯದಂತೆ’, ಕೇವಲ ಅವನನ್ನು ಆಲಸಿಯನ್ನಾಗಿಸುವ ಸಾಧನ ಮಾತ್ರವಲ್ಲ, ಅಪಾಯಕಾರಿ ಅಸ್ತ್ರವೂ ಆಗಿದೆ. ದುರಂತವೆಂದರೆ, ಕೆಲವೇ ಬುದ್ಧಿವಂತ ಮನುಷ್ಯರು ಮಾಡಿದ ವೈಜ್ಞಾನಿಕ ಆವಿಷ್ಕಾರಗಳು, ಬುದ್ಧಿಹೀನ, ಆದರೆ ಪ್ರಭಾವಿ ಅಧಿಕಾರ ವರ್ಗದ ಹಿಡಿತದಲ್ಲಿದೆ. ವಿಪರ್ಯಾಸವೆಂದರೆ, ಆವಿಷ್ಕರಿಸಿದ ವಿಜ್ಞಾನಿಗೆ ಅದನ್ನು ಹೇಗೆ ಉಪಯೋಗಿಸಬೇಕೆಂಬ ಜ್ಞಾನ, ಉಪಯೋಗ, ಅದರ ದುಷ್ಪರಿಣಾಮದ ಅರಿವು ಇರುತ್ತದೆ. ಆದರೆ, ಅದನ್ನು ಉಪಯೋಗಿಸುವ ಅಧಿಕಾರ ಪಡೆದ, ದೂರದೃಷ್ಟಿಯ ಹೆಬ್ಬೆಟ್ಟು ಗುರುತಿನ ವ್ಯವಸ್ಥೆಗೆ, ತಕ್ಷಣದ ಉಪಯೋಗ ಮತ್ತು ಲಾಭ ಮಾತ್ರ ಗೋಚರಿಸುತ್ತದೆ, ದುಷ್ಪರಿಣಾಮಗಳಲ್ಲ.

ಇದನ್ನು ಸ್ಪಷ್ಟೀಕರಿಸುವುದಾದರೆ, ವಿಜಾನಿಗಳು ಗುರುತಿಸಿದ; ಭೂಮಿಯೊಳಗಿನ ಖನಿಜ ಸಂಪತ್ತು, ಸಮುದ್ರದಾಳದಲ್ಲಿ ಶೇಖರವಾಗಿರುವ ತೈಲ, ಕಾಡಿನಲ್ಲಿರುವ ನೈಸರ್ಗಿಕ ಸಂಪನ್ಮೂಲ, ವಿವಿಧ ಸ್ಥಳಗಳಲ್ಲಿ ದೊರಕುವ ನೀರಿನ ಸೆಲೆ ಅಥವಾ ಸಂಶೋಧಿಸಿದ ಅಣ್ವಸ್ತ್ರಗಳು, ಫಲ ಹೆಚ್ಚಿಸಲು ಕಂಡುಹಿಡಿದ ಔಷದ ಪ್ರಯೋಗಗಳು… ಹೀಗೆ, ವಿಜ್ಞಾನಿಗಳ ಆವಿಷ್ಕಾರವನ್ನು ಅಧಿಕಾರದ ಮೂಲಕ ದೂರದೃಷ್ಟಿಯ ಕೊರತೆಯೊಂದಿಗೆ ದುರುಪಯೋಗಿಸಿಕೊಂಡು, ತಮ್ಮ ಸ್ವಾರ್ಥ ಸಾಧಿಸುತ್ತಿರುವವರು ಮಾತ್ರ, ವ್ಯವಸ್ಥೆಯ ಸೂತ್ರಧಾರರಾದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಅವರನ್ನು ತಮ್ಮ ಗುಲಾಮರನ್ನಾಗಿಸಿ ತಮಗಿಷ್ಟದಂತೆ ಸಹಿ ಹಾಕಿಸಿಕೊಳ್ಳುವ ಉದ್ಯಮ ವರ್ಗ.

ಪ್ರಸ್ತುತ, ನಮ್ಮ ಪರಿಸರ ಸಂಬಂಧಿ ಸಮಸ್ಯೆಗಳಾದ, ಭೂ, ಜಲ ಮತ್ತು ವಾಯುಮಾಲಿನ್ಯ, ಹವಾಮಾನ ವೈಪರೀತ್ಯ, ಸಂಪೂರ್ಣ ಅರಣ್ಯನಾಶ, ಜೀವ ಪ್ರಭೇದಗಳ ಕಣ್ಮರೆ, ಮರಳು ಅಥವಾ ಖನಿಜ ಸಂಪತ್ತಿನ ಅಕ್ರಮ ಗಣಿಗಾರಿಕೆ, ಅಂಕೆಯಿಲ್ಲದೆ ಹೆಚ್ಚಾಗುತ್ತಿರುವ ಜನಸಂಖ್ಯೆ ಮತ್ತು ಅದಕ್ಕೆ ಸಂಬಂಧಿತ ಸೌಕರ್ಯಗಳ ಸಮಸ್ಯೆ… ಇವುಗಳನ್ನು ಗಮನಿಸಿದರೆ, ಜಾಗತಿಕ ಮಟ್ಟದಲ್ಲಿ ದೂರದೃಷ್ಟಿಯ ನಾಯಕತ್ವದ ಕೊರತೆ ಎದ್ದು ಕಾಣಿಸುತ್ತದೆ. ನಮ್ಮೆಲ್ಲಾ ಚಟುವಟಿಕೆಗಳು ಕೇವಲ ಕ್ಷಣಿಕ ಸುಖಪ್ರಾಪ್ತಿಯತ್ತ ಗಮನ ಹರಿಸಿವೆಯೇ ಹೊರತು, ಈ ಭೂಮಿಯನ್ನು ಮುಂದಿನ ಜನಾಂಗಕ್ಕೆ ಸುರಕ್ಷಿತವಾಗಿ ಕೈಗೊಪ್ಪಿಸುವ ದೂರದೃಷ್ಟಿಯಿಲ್ಲ.

ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮನುಷ್ಯನಿಗೆ; ಅರಣ್ಯ ನಾಶಮಾಡಿ ವಾಣಿಜ್ಯ ಬೆಳೆ ಬೆಳೆಸುವಾಗ, ಕಾಡಿನ ಅವಶ್ಯಕತೆ ಗೊತ್ತಾಗಲಿಲ್ಲ; ಮೀಸಲು ಅರಣ್ಯದಲ್ಲಿ ರೆಸಾರ್ಟ್ ಸ್ಥಾಪಿಸುವಾಗ, ಪ್ರಾಣಿಗಳ ಜೀವನಶೈಲಿಯ ಅರಿವಾಗಲಿಲ್ಲ; ಮೃಗಾಲಯಗಳನ್ನು ಸ್ಥಾಪಿಸಿ, ಪ್ರಾಣಿಗಳನ್ನು ಗೊಂಬೆಗಳಂತೆ ಪಂಜರದಲ್ಲಿ ಪ್ರದರ್ಶನಕ್ಕಿಡುವಾಗ, ಅವುಗಳ ಸ್ವಾತಂತ್ರ್ಯಹರಣದ ಪ್ರಜ್ಞೆ ಮೂಡಲಿಲ್ಲ (ಕೊರೊನಾ ಸಂಬಂಧಿ ಕೆಲವೇ ದಿನಗಳ ಗೃಹಬಂಧನಕ್ಕೆ ಚಡಪಡಿಸುತ್ತೇವೆ); ನಮ್ಮ ಉದ್ಯಮಕ್ಕಾಗಿ ಕೃತಕ ಕಾಡ್ಗಿಚ್ಚು ಸೃಷ್ಟಿಸಿ ಮರಗಳ, ಅದರೊಳಗಿನ ಜೀವರಾಶಿಗಳ ಜೀವಂತ ಸುಡುವಾಗ ದಯೆ ಮೂಡಲಿಲ್ಲ; ಆರ್ಕ್ಟಿಕ್, ಅಂಟಾರ್ಟಿಕ್ ಪ್ರದೇಶಗಳ ಮಂಜುಗಡ್ಡೆ ಕರಗಿ ಹೋಗುತ್ತಿರುವಾಗ, ಪರಿಸ್ಥಿತಿಯ ಗಂಭೀರತೆ ಅರ್ಥವಾಗಲಿಲ್ಲ;  ಕಾಡಿನಲ್ಲಿರುವ ಅಲ್ಪಸ್ವಲ್ಪ ಜೀವರಾಶಿಗಳ ನಾಲಿಗೆಯ  ಕ್ಷಣಿಕ ರುಚಿಗಾಗಿ ಭಕ್ಷಿಸುವಾಗ, ವೈರಸ್ ಬರಬಹುದೆಂದು ಜ್ಞಾನ ಮೂಡಲಿಲ್ಲ… ಈ ಎಲ್ಲಾ ಪರಿಸರ ವಿರೋಧಿ ಚಟುವಟಿಕೆಗಳಿಗೆ ಪರವಾನಿಗೆ ಕೊಟ್ಟಿರುವುದು ದೂರದೃಷ್ಟಿ ಕೊರತೆಯ ವಿವಿಧ ರಾಷ್ಟ್ರಗಳ ರಾಜಕೀಯ ಮುಂದಾಳತ್ವ. 

ಆದರೆ, ಈ ‘ಅಭಿವೃದ್ಧಿ’ ನಾಗರಿಕತೆಯ ಅಬ್ಬರದ ನಡುವೆಯೂ ವಿಜ್ಞಾನಿಗಳ, ಸಂಶೋಧಕರ, ಪರಿಸರ ಪ್ರೇಮಿಗಳ ಒಂದು ಸಮೂಹ, ಸಣ್ಣ ಧ್ವನಿಯಲ್ಲಿ, ‘ಇದರಿಂದ ಮುಂದೆ ಸಮಸ್ಯೆಯಾಗುತ್ತದೆ’  ಎಂದು’ ಹೇಳುತ್ತಾ ಬಂದಿದೆ. ಆದರೆ, ಅವರ ಕೈಯಲ್ಲಿ ಅಧಿಕಾರವಿರಲಿಲ್ಲ. ಮಾತ್ರವಲ್ಲ, ನಾಗರಿಕತೆಯ ಸುಖ ಅನುಭವಿಸುತ್ತಿರುವ ನಮಗೆ, ಈ ಕಟುವಾಸ್ತವ ದರ್ಶನಗಳು ಬೇಕಿರಲಿಲ್ಲ.

ಆದರೆ, ವೈರಸ್ಸಿನಿಂದಾಗಿ ವಿಶ್ವಾದ್ಯಂತ ಮನುಷ್ಯನ ಅಸ್ತಿತ್ವಕ್ಕೆ ಆಘಾತಕಾರಿ ಹೊಡೆತಬಿದ್ದಿದೆ, ನಮಗೀಗ, ಶತಮಾನಗಳಿಂದ ಮುತುವರ್ಜಿಯಿಂದ ಕಟ್ಟಿದ ಧರ್ಮ, ಜಾತಿ, ವರ್ಗ, ಸಂಸ್ಕೃತಿ, ವರ್ಣ, ಸಂಪ್ರದಾಯ ಇತ್ಯಾದಿ ಶ್ರೇಣೀಕೃತ ಚೌಕಟ್ಟುಗಳು ಅರ್ಥಹೀನವೆನಿಸುತ್ತಿದೆ. ಮುಚ್ಚಿದ ಪ್ರಾರ್ಥನಾ ಮಂದಿರಗಳು, ಸಮಸ್ಯೆಗೆ ನಾವೇ ಹೊಣೆಗಾರರೆಂದು ಹೇಳಿದಂತಿದೆ. ಒಟ್ಟಿನಲ್ಲಿ, ಕಣ್ಣಿಗೆ ಕಾಣದ ವೈರಸ್ ಮರೆಯಲಾಗದ ಪಾಠ ಕಲಿಸುತ್ತಿದೆ. ವಿಜ್ಞಾನಿಗಳು ಹೇಳುವಂತೆ, ಕೋವಿಡ್-19 ವೈರಸಿನಿಂದ ಸದ್ಯ ಪಾರಾದರೂ, ಮುಂದಿನ ದಿನಗಳಲ್ಲಿ ಹೊಸ ವೈರಸುಗಳು ಮನುಷ್ಯನ ನಿದ್ದೆ ಕೆಡಿಸಲಿವೆ. ಹಾಗಾಗಿ, ಇದು ಭೂಮಿ ನಮಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆಯ ಕರೆಗಂಟೆಯೆಂದೇ ಹೇಳಬಹುದು.

ಇದಕ್ಕೆ ಪರಿಹಾರ? ಸಮಯ ಮೀರಿದೆಯೆನಿಸಿದರೂ, ಭೂಮಿಯ ಒಂದು ವೈಶಿಷ್ಟ್ಯ ನಮ್ಮನ್ನು ಕಾಪಾಡಬಹುದು. ಅದೇನೆಂದರೆ, ಭೂಮಿಗಿರುವ ಪುನಃ ಪುನಃ ಜೀವತಳೆಯುವ ಅಪ್ರತಿಮ ಇಚ್ಚಾಶಕ್ತಿ. ನಾವಿದಕ್ಕೆ ಸಮ್ಮತದಿಂದ ಕೈಜೋಡಿಸಬೇಕಷ್ಟೆ. ಈ ನಿಟ್ಟಿನಲ್ಲಿ ನಾವೀಗ, ಕಾಡಿಗೆ ಮರುಜೀವ ಕೊಡಬೇಕಿದೆ, ಅಂತರ್ಜಲ ಮಟ್ಟ ಏರಿಸಬೇಕಿದೆ ಹಾಗು ಸಂಪನ್ಮೂಲಗಳನ್ನು ಎಚ್ಚರಿಕೆಯಿಂದ ಬಳಸಬೇಕಿದೆ. ಇದರೊಂದಿಗೆ, ಅಕ್ರಮವಾಗಿ ದೋಚುತ್ತಿರುವ ಮರಳು, ಖನಿಜ, ಕಾಡು, ಸಮುದ್ರದ ಸಂಪತ್ತನ್ನು ಸಂರಕ್ಷಿಸಬೇಕಿದೆ. ನಮಗಿಂದು, ಉಳಿದ ಜೀವರಾಶಿಗಳು ಅನಗತ್ಯ ಸೃಷ್ಟಿಯಂತೆ ಕಂಡರೂ, ಪ್ರಕೃತಿಯ ಸಮತೋಲನಕ್ಕಾಗಿ ಭೂಮಿಗೆ ಅವುಗಳ ಅಗತ್ಯವಿದೆ, ಮಾತ್ರವಲ್ಲ, ಅವೆಲ್ಲಾ ಆಹಾರ ಸರಪಳಿಯ ಒಂದೊಂದು ಅನಿವಾರ್ಯ ಕೊಂಡಿಗಳಂತೆ. ಇದನ್ನು ಅಸ್ಥಿರಗೊಳಿಸುವ ಬದಲಾಗಿ, ಸಮತೋಲನ ಕಾಯ್ದುಕೊಳ್ಳಲು ನಮ್ಮ ಜನಸಂಖ್ಯೆ ನಿಯಂತ್ರಣ ಮಾಡಲೇಬೇಕಿದೆ. ಜನಸಂಖ್ಯೆ ಹೆಚ್ಚಿದಂತೆ, ಅಗತ್ಯಗಳ ಪೂರೈಕೆಗಾಗಿ ಹೆಚ್ಚೆಚ್ಚು ಪರಿಸರ ನಾಶವಾಗುತ್ತದೆ, ಅದರೊಂದಿಗೆ, ಉಳಿದ ಜೀವರಾಶಿಗಳ ಅಂತ್ಯವಾಗುತ್ತದೆ.

ಭೂಮಿಯ ಭವಿಷ್ಯಕ್ಕಾಗಿ, ಅದರ ಇತಿಹಾಸವನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಮೂಲತಃ ಪ್ರಕೃತಿಯ ಆರಾಧಕನಾಗಿದ್ದ ಮನುಷ್ಯ, ಕ್ರಮೇಣ ದೂರಸರಿದು, ವ್ಯವಸ್ಥಿತ ಧರ್ಮ, ಆಮೇಲೆ ವಿಜ್ಞಾನದ ವೈಭೋಗದಲ್ಲಿ ಬಂಧಿಯಾಗಿ, ಪ್ರಕೃತಿಯ ತರ್ಕವನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಕುವೆಂಪು ಮಾತಿನ ಧಾಟಿಯಲ್ಲಿ ಹೇಳುವುದಾದರೆ, ಇಲ್ಲಿ ಎಲ್ಲವೂ ಒಂದಕೊಂದು ಪೂರಕ, ಯಾವುದು ಮುಖ್ಯವಲ್ಲ, ಯಾವುದು ಅಮುಖ್ಯವೂ ಅಲ್ಲ.

ಈ ಸಂದರ್ಭದಲ್ಲಿ, 19ನೇ ಶತಮಾನದ ಬುಡಕಟ್ಟು ಜನಾಂಗದ ನಾಯಕ ಚೀಫ್ ಸಿಯಾಟಲ್, ಅಮೆರಿಕಾದ ಬಿಳಿ ವಸಾಹತುದಾರರಿಗೆ ಹೇಳಿದ ಮಾತು ಪ್ರತಿಧ್ವನಿಸಿದಂತಿದೆ, ‘ನೀವಿಂದು ಶಸ್ತ್ರಾಸ್ತ್ರಗಳ ನೆರವಿನಿಂದ ಪ್ರಾಣಿಗಳನ್ನು, ಪ್ರಕೃತಿಯನ್ನು, ಬುಡಕಟ್ಟು ಜನರನ್ನು ನಾಶಮಾಡಿ ಜಯ ಸಾಧಿಸಿರಬಹುದು. ಆದರೆ, ಮುಂದೊಂದು ದಿನ ನಿಮ್ಮ ಪ್ರಾಬಲ್ಯದ ಅಹಂಕಾರದಿಂದ ಹುಟ್ಟುಹಾಕಿದ ಪರಿಸರಮಾಲಿನ್ಯದಲ್ಲಿಯೇ ಉಸಿರುಗಟ್ಟಿ ಸಾಯಲಿದ್ದೀರಿ.’

ಈ ದೆಸೆಯಲ್ಲಿ, ಪ್ರಸ್ತುತ ಸಮಸ್ಯೆಗಳನ್ನು ಜಾಗತಿಕ ಮಟ್ಟದಲ್ಲಿ ನಿರ್ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ, ದೇಶಗಳು ಪರಿಸರ ಸಂರಕ್ಷಣೆಗೆ ಸಾಮೂಹಿಕ ರೂಪುರೇಷೆಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಸಮಸ್ಯೆ ಎಲ್ಲೇ ಆರಂಭವಾದರೂ, ಅದು ವಿಶ್ವವ್ಯಾಪಿ ಪಸರಿಸುವ ಕಾಲಘಟ್ಟವಿದು. ಸದ್ಯಕ್ಕೆ ವೈರಸ್ ಪ್ರವಾಹದ ಮೊದಲ ಅಲೆ ಅಪ್ಪಳಿಸಿದೆ. ಇದಕ್ಕೇನೆ ಸುಸ್ತಾಗಿದ್ದೇವೆ. ಲಕ್ಷಾಂತರ ಜನ ಪ್ರಾಣತೆತ್ತಿದ್ದಾರೆ. ಮುಂದಿನ ದಿನಗಳಲ್ಲಿ, ವೈರಸ್ ಸುನಾಮಿಗಳೇ ಕಾದಿವೆ. ಅದಾಗದಿರಲು, ನಾವು ಮಾಡಬೇಕಾದ ದುರಸ್ತಿ ಕೆಲಸ ಸಾಕಷ್ಟಿವೆ.

ಇಲ್ಲಿಯವರೆಗೆ, ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳು ದುಬಾರಿ ಅಣ್ವಸ್ತ್ರ ತಯಾರಿಯಲ್ಲಿ, ಅದಕ್ಕಾಗಿ ರಕ್ಷಣಾವೆಚ್ಚ ಏರಿಸುವುದರಲ್ಲಿ ಪೈಪೋಟಿ ಮಾಡುತ್ತಿದ್ದವು. ಮಾತ್ರವಲ್ಲ, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಖರ್ಚು ಮಾಡುತ್ತಿರಲಿಲ್ಲ. ಹಾಗಾಗಿಯೇ, ಕಣ್ಣಿಗೆ ಕಾಣದ ವೈರಸಿನ ಅಟ್ಟಹಾಸದ ಮುಂದೆ, ದೇಶದ ಗಡಿಗಳು, ಬೆಲೆಬಾಳುವ ಯುದ್ಧೋಪಕರಣಗಳು ನಿಶಸ್ತ್ರವಾದವು. ಮಾತ್ರವಲ್ಲ, ನಮ್ಮ ಆಯವ್ಯಯ ಆದ್ಯತೆಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು. ಇಲ್ಲಿಯವರೆಗೆ, ನಮಗೆ ಅಪಾಯವಿರುವುದು ಗಡಿಗಳಲ್ಲಿ, ನಮ್ಮಿಂದ ನಾಶವಾಗುತ್ತಿರುವ ಪ್ರಕೃತಿಯಿಂದಲ್ಲವೆಂದು ತಪ್ಪಾಗಿ ಗ್ರಹಿಸಿದ್ದೆವು. ಇನ್ನಾದರೂ, ಎಚ್ಚೆತ್ತು ಪರಿಸರ ಮತ್ತು ಆರೋಗ್ಯ ಸಂರಕ್ಷಣೆ ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ. ತತ್ತ್ವವಶಾಸ್ತ್ರಜ್ಞ ಯುವಾನ್ ನೋಹ ಹರಾರಿ ಹೇಳುವಂತೆ, ಈ ಭೂಮಿಯನ್ನು, ಜೊತೆಗೆ ನಮ್ಮನ್ನು ರಕ್ಷಿಸಲು, ಈಗ ಜಾಗತಿಕ ಮಟ್ಟದಲ್ಲಿ ಸಾಮೂಹಿಕ ನಾಯಕತ್ವದ ಜರೂರಿದೆ. ಇದನ್ನು ಅರ್ಥಮಾಡಿಕೊಂಡು ಕಾರ್ಯಗತಮಾಡಲು, ತುರ್ತಾಗಿ ಎಲ್ಲ ದೇಶಗಳಿಗಿಂದು ದೂರದೃಷ್ಟಿಯುಳ್ಳ ದಾರ್ಶನಿಕ ನಾಯಕತ್ವದ ಅಗತ್ಯವಿದೆ. 

 

*ಲೇಖಕರು ಸಹಾಯಕ ಪ್ರಾಧ್ಯಾಪಕರು, ಆಂಗ್ಲ ಭಾಷಾ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ.

Leave a Reply

Your email address will not be published.