ಜನಪದ ಆಟಗಳಲ್ಲಿ ಹೆಣ್ಣಿಗೆ ಪಾಠಗಳು

ಸಾಮಾನ್ಯವಾಗಿ ಒಳಾಂಗಣ ಆಟಗಳನ್ನು ಹೆಣ್ಣುಮಕ್ಕಳು, ಹೊರಾಂಗಣ ಆಟಗಳನ್ನು ಗಂಡುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಹೆಣ್ಣು ಮನೆಯ ಒಳಗಿದ್ದು ಕುಟುಂಬದ ಗೋಡೆಗಳನ್ನು ಭದ್ರಪಡಿಸಿಕೊಳ್ಳಬೇಕಾದ, ಗಂಡು ಮನೆಯ ಹೊರಗೆ ಹೋಗಿ ಯಶಸ್ಸು ಸಾಧಿಸಿ ಹಣ ಗಳಿಸಬೇಕಾದ ನಮ್ಮ ಸಾಮಾಜಿಕ ಸಂರಚನೆಯನ್ನು ಇದು ಸಂಕೇತಿಸುತ್ತದೆ.

ಮಂಜುಳಾ ಶೆಟ್ಟಿ

ಆಟವೆಂಬುದು ಸೃಷ್ಟಿಯ ಸಕಲ ಜೀವಗಳ ಜನ್ಮದತ್ತ ಪ್ರವೃತ್ತಿ. ಆಟವೆಂದರೆ ಅನುಭವದ ಒಳನೋಟ. ಸಮಯದ ಸದುಪಯೋಗ, ಮನರಂಜನೆ, ಬಾಂಧವ್ಯದ ಬೆಸುಗೆ, ಸಾಹಸಪರೀಕ್ಷೆ, ಸಹಬಾಳ್ವೆ, ಏಕತೆ, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ವರ್ಧಿಸುವುದಕ್ಕೆ ಸಹಕಾರಿ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಪಟ್ಟಿ ಮಾಡಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಕ್ರೀಡೆಯೆಂದರೆ ಅವಧಾನ, ಗಮ್ಯದೆಡೆಗಿನ ಧ್ಯಾನ, ಪಥನಿಷ್ಠವಾದ ಏಕಚಿತ್ತ. ಒಳಾಂಗಣ ಕ್ರೀಡೆಯಾಗಲಿ, ಹೊರಾಂಗಣದ್ದಾಗಿರಲಿ, ಆಡುವ-ಆಡಿಸುವ-ನೋಡುವ ಎಲ್ಲ ಕಣ್ಣುಗಳೂ ನೆಟ್ಟಿರುವುದು ಗೆಲುವಿನತ್ತ. ಅಲ್ಲಿ ಗೆಲುವಿನ ರೋಮಾಂಚದೊಂದಿಗೆ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಉಚಿತ ಪಾಠವೂ ಲಭ್ಯ. ಆಡುವವರು ಮತ್ತು ನೋಡುವವರ ಪ್ರಜ್ಞೆಗಳನ್ನು ಬೆಸೆವ ಸಮರಸ-ಸಮಭಾವ-ಸೌಹಾರ್ದವೂ ಅಲ್ಲಿದೆ.

ಔಪಚಾರಿಕ ಆಟಗಳು ನಾಗರಿಕತೆಯೊಂದಿಗೆ ರೂಪಾಂತರಗೊಳ್ಳುತ್ತ ಇವತ್ತು ವಿಶ್ವಾತ್ಮಕ ನೆಲೆಯನ್ನು ಪಡಕೊಂಡಿವೆ. ಏಶ್ಯಾಡ್, ಒಲಿಂಪಿಕ್ಸ್, ಕಾಮನ್‌ವೆಲ್ತ್, 20-20 ಆಟಗಳು ಜಾಗತಿಕ ಉನ್ಮಾದವನ್ನು, ಸಮೂಹ ಸನ್ನಿಯನ್ನು ಉಂಟುಮಾಡುವಷ್ಟರ ಮಟ್ಟಿಗೆ ಬೆಳೆದಿವೆ. ಈ ಲೇಖನದ ಕಾಳಜಿ ಇರುವುದು ಅನೌಪಚಾರಿಕ ಆಟಗಳ ಬಗ್ಗೆ.

ಮನೆಯ ಜಗಲಿ, ಅಂಗಳ, ಬಾವಿಕಟ್ಟೆ, ಕಾಲುಸಂಕದ ಬದಿಯಲ್ಲಿ, ಹಿತ್ತಲ ಮರದ ನೆರಳಲ್ಲಿ, ಶಾಲೆಯ ಪಾಠಗಳ ನಡುವಿನ ವಿರಾಮದಲ್ಲಿ… ಹೀಗೆ ಎಲ್ಲೆಂದರಲ್ಲಿ ಸಿಕ್ಕ ಸಣ್ಣ ಅವಕಾಶದಲ್ಲಿ, ಓರಗೆಯವರನ್ನು ಅನುಸರಿಸಿ, ಗೆಳೆಯರನ್ನು ಕಾಡಿ ಬೇಡಿ, ಅಣ್ಣ-ಅಕ್ಕಂದಿರನ್ನು ಓಲೈಸಿ ಕಲಿತು ಸಿದ್ಧಿಸಿಕೊಂಡ ಈ ಆಟಗಳು ನಮ್ಮ ಬಾಲ್ಯವನ್ನು ಮಾತ್ರವಲ್ಲ, ನಮ್ಮ ಇಡೀ ಬದುಕನ್ನೇ ರೂಪಿಸುವ ಶಕ್ತಿಯವು. ಕೆಲವನ್ನು ನೆನಪಿಸಿಕೊಳ್ಳೋಣ.

ನಮ್ಮ ಬಾಲ್ಯದಲ್ಲೊಂದು ಆಟವಿತ್ತು. ‘ಕಾಗೆ ಗಿಳಿ’ ಆಟವೆಂದು ಅದರ ಹೆಸರು. ಮುಟ್ಟಾಟ ಎಂಬುದು ರ‍್ಯಾಯ ಹೆಸರು. ಹೆಬ್ಬೆರಳು-ತೋರುಬೆರಳನ್ನು ವೃತ್ತ ರಚಿಸುವಂತೆ ಹಿಡಿದು, ತುಟಿಗಳಿಂದ ಅರ್ಧ ಅಡಿಯಷ್ಟು ದೂರದಲ್ಲಿಟ್ಟು ಆ ವೃತ್ತದೊಳಗಿಂದ ಉಗುಳುವುದು. ಒಂದಾದರೂ ಉಗುಳಹನಿ ಬೆರಳ ಮೇಲೆ ಸಿಡಿಯಿತೋ ಅವರು ಕಾಗೆಯಾದಂತೆ. ಉಗುಳು ತಾಗಿಸಿಕೊಳ್ಳದವರು ಗಿಳಿಗಳು. ಇಲ್ಲಿ ಎಂಜಲು ಮುಟ್ಟಿದ ತಪ್ಪಿಗೆ ಕಾಗೆಯಾದ ಮಗು ಗಿಳಿಗಳನ್ನು ಮುಟ್ಟಿ ಕಾಗೆ ಬಳಗಕ್ಕೆ ಸೇರಿಸಿಕೊಳ್ಳುತ್ತದೆ. ಗಿಳಿಗಳಿಗೆ ಕಾಗೆ ಹತ್ತಿರ ಬರುತ್ತಲೇ ದೂಂಪೆ ಅಥವಾ ಸೂಂಬೆ ಕುಳಿತುಕೊಳ್ಳುವ ಅಂದರೆ ಗಿಳಿ ಮುಟ್ಟದಂತೆ ನಿರ್ಬಂಧ ವಿಧಿಸುವ ಅವಕಾಶವಿದೆ. ಗಿಳಿಗಿರುವ ರಕ್ಷಣೆ ಕಾಗೆಗಿಲ್ಲ. ಕಾಗೆ ಗಿಳಿಯಾದಂತೆ, ಗಿಳಿ ಕಾಗೆಯಾಗುವ ಅವಕಾಶವೇ ಇಲ್ಲದ ಈ ಆಟಗಳನ್ನು ಆಡುವವರು ಹೆಣ್ಣುಮಕ್ಕಳು ಎಂಬುದು ಗಮನಿಸಬೇಕಾದ ಅಂಶ.

ಶೀಲ ಚಾರಿತ್ರ್ಯಗಳೆಂಬ ಶುದ್ಧ ಮೌಲ್ಯಗಳನ್ನು ಕಾಪಿಟ್ಟುಕೊಳ್ಳಬೇಕಾದ ಪಾಠವನ್ನು ಹೆಣ್ಣಿಗೆ ಎಳೆತನದಲ್ಲೇ ಕಲಿಸುವ, ಕಾಗೆ-ಗಿಳಿ ಆಟದ ಆಶಯವನ್ನೇ ಹೊಂದಿರುವಂಥ ಇನ್ನೊಂದು ಆಟ ‘ಕೆರೆದಡ’. ಇದು ಹೈಸ್ಕೂಲು ದಿನಗಳಲ್ಲಿ ನಮಗೆ ಬಲು ಮೆಚ್ಚಿನ ಆಟವಾಗಿತ್ತು. ಮಧ್ಯೆ ಗುಳಿ ಇರುವ ಎರಡು ದಂಡೆಗಳಂಥಾ ರಚನೆಗಳ ಮೇಲೆ ಎರಡೂ ಕಾಲುಗಳನ್ನು ಇಡುತ್ತ ಒಮ್ಮೆ ‘ಕೆರೆಬಾವಿ’, ಇನ್ನೊಮ್ಮೆ ‘ಕೆರೆದಡ’ ಮತ್ತೊಮ್ಮೆ ‘ದಡಬಾವಿ’ ಎಂದು ಚುರುಕಾಗಿ ಸ್ಥಳ ಬದಲಾಯಿಸಬೇಕಾದ ಈ ಆಟವಾದರೂ ಅಷ್ಟೇ.

ಸಮಾಜ-ಸಂಸ್ಕೃತಿ-ಕುಟುಂಬಗಳು ನಿರ್ದೇಶಿಸುವ ‘ದಡ’ದ ಮೇಲೇ ನಿಂತಿರುವ, ತನ್ನನ್ನು ನುಂಗಬಹುದಾದ ಬಾವಿಯೆಂಬ ಅಪಾಯದ ಕುರಿತು ಸದಾ ಎಚ್ಚರವಾಗಿರಿಸುವ ಈ ಆಟವನ್ನು ಹೆಣ್ಣುಮಕ್ಕಳೇ ಯಾಕೆ ಆಡುತ್ತಿದ್ದರು ಎಂಬ ಪ್ರಶ್ನೆಯ ಹಿಂದೆ ನಮ್ಮ ಸಮಾಜದ ಸ್ತ್ರೀ ನಿರ್ವಚನದ ವಿನ್ಯಾಸಗಳಿವೆ. ಪಾರಂಪರಿಕವಾಗಿ ಹೆಣ್ಣುಮಕ್ಕಳೇ ಆಡುತ್ತ ಬಂದಿರುವ ಕುಂಟಾಬಿಲ್ಲೆ, ಕಣ್ಣಾಮುಚ್ಚಾಲೆ, ಬಳೆ ಆಟ, ಲಡ್ಡು ಲಡ್ಡು ತಿಮ್ಮಯ್ಯ, ಹುಲಿದನ ಆಟ, ಚೌಕಾಭಾರ ಮುಂತಾದ ಆಟಗಳು ಹೆಣ್ಣುಮಗುವೊಂದನ್ನು ‘ಸ್ತ್ರೀಲಿಂಗಿ’ಯಾಗಿ, ಭವಿಷ್ಯದ ಅಮ್ಮ ಮತ್ತು ಹೆಂಡತಿಯ ಪಾತ್ರಗಳಿಗೆ ಹೊಂದುವಂತೆ ಬೆಳೆಸುವ ಉದ್ದೇಶವನ್ನೇ ಹೊಂದಿವೆ.

‘ಹುಲಿದನ’ ಆಟವನ್ನು ಹುಡುಗಿಯರೇ ಆಡುತ್ತಿದ್ದರೆ, ಕೋಟೆಯ ಹೊರಗಿದ್ದು ದನವನ್ನು ಹಿಡಿಯಲೆತ್ನಿಸುವ ಹುಲಿಯಾಗುವವಳು ಗುಂಪಿನಲ್ಲಿ ದೊಡ್ಡ ದೇಹವನ್ನು ಹೊಂದಿರುವ ಹೊಂದಿರುವ ಶಕ್ತಿವಂತ ಹುಡುಗಿ. ಕೋಟೆಯೊಳಗೆ ಅಡಗುವ ದನವಾಗಿ ರಕ್ಷಣೆ ಪಡೆವವಳು ತೆಳ್ಳನೆಯ ದೇಹದ ಚುರುಕಾಗಿ ಓಡಬಲ್ಲ ಹುಡುಗಿ. ಆಡುವ ಮಕ್ಕಳ ಗುಂಪಿನಲ್ಲಿ ಹುಡುಗರು ಲಭ್ಯರಿದ್ದಾರೆಂದರೆ ಖಂಡಿತವಾಗಿ ಅವರು ‘ಹುಲಿ’ಯೇ ಆಗುವವರು! ಕಣ್ಣಾಮುಚ್ಚಾಲೆ ಆಟದ ‘ಅಜ್ಜಿ’ ಯಾವಾಗಲೂ ಕುಳಿತಲ್ಲೇ ಕುಳಿತಿದ್ದು ಹರಿದ ಉಡುಪು ಹೊಲಿಯಲು ಸೂಜಿ ಹುಡುಕುತ್ತಿರುತ್ತಾಳೆ ಎಂಬುದನ್ನೂ ಗಮನಿಸಬೇಕು.

ಯಾವುದೇ ಸಮಾಜದ ಜನಪದ ಆಟಗಳನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅವು ಬರೇ ಮನರಂಜನೆಯ ಉದ್ದೇಶವನ್ನು ಹೊಂದಿ ರೂಪುಗೊಂಡವುಗಳಲ್ಲ. ಅಲ್ಲಿರುವುದು ಬದುಕಿನ ಪಾಠ.

ಮನೆಯ ದನ ಆಡುಗಳನ್ನು ಮೇಯಿಸುತ್ತ ಗುಡ್ಡಹತ್ತಿ ಮರಕೋತಿ-ಚಿನ್ನಿದಾಂಡು-ಲಗೋರಿಯಂಥ ‘ಗಂಡು’ ಆಟಗಳನ್ನು ಕರಗತ ಮಾಡಿಕೊಂಡು ಹುಡುಗರ ಗುಂಪಿನಲ್ಲಿ ಎಗ್ಗಿಲ್ಲದೆ ಆಡಿದ್ದಕ್ಕೆ, ಮಹಾನವಮಿ ಪ್ರಯುಕ್ತ ಹುಲಿವೇಷ ಹಾಕಿ ಮನೆಮನೆ ಅಂಗಳದಲ್ಲಿ ಕುಣಿದಿದ್ದಕ್ಕೆ, ತಮ್ಮನ ಪ್ಯಾಂಟು ಧರಿಸಿ ಸೈಕಲ್ ತುಳಿದಿದ್ದಕ್ಕೆ… ಹೀಗೆ ನಾನಾ ಕಾರಣಗಳಿಗಾಗಿ ಅಮ್ಮ ಅಜ್ಜಿಯಾದಿಯಾಗಿ ಊರ ಮಹಿಳೆಯರಿಂದ ‘ಗಂಡುಬೀರಿ’ ಎಂಬ ಬಿರುದನ್ನು ನಾನು ಪಡಕೊಂಡದ್ದು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಸದಾ ಹುಡುಗರ ಜೊತೆ ಆಡುತ್ತ ಒಡನಾಡುತ್ತ ಅವರೂ ನಮ್ಮಂತೆಯೇ ಬೇನೆ-ಬೇಸರ ಬಲ್ಲವರು, ಅವರ ಕಣ್ಣಲ್ಲೂ ನೀರು ಬರುತ್ತೆ ಎಂಬಂಥ ಸತ್ಯಗಳನ್ನು ತಿಳಿದುಕೊಳ್ಳುವುದೂ ಸಾಧ್ಯವಾಯಿತು.

ಸಾಮಾನ್ಯವಾಗಿ ಒಳಾಂಗಣ ಆಟಗಳನ್ನು ಹೆಣ್ಣುಮಕ್ಕಳು, ಹೊರಾಂಗಣ ಆಟಗಳನ್ನು ಗಂಡುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಹೆಣ್ಣು ಮನೆಯ ಒಳಗಿದ್ದು ಕುಟುಂಬದ ಗೋಡೆಗಳನ್ನು ಭದ್ರಪಡಿಸಿಕೊಳ್ಳಬೇಕಾದ, ಗಂಡು ಮನೆಯ ಹೊರಗೆ ಹೋಗಿ ಯಶಸ್ಸು ಸಾಧಿಸಿ ಹಣ ಗಳಿಸಬೇಕಾದ ನಮ್ಮ ಸಾಮಾಜಿಕ ಸಂರಚನೆಯನ್ನು ಇದು ಸಂಕೇತಿಸುತ್ತದೆ.

ಜಾತ್ರೆ-ಉತ್ಸವ-ಹಬ್ಬ-ಹರಿದಿನಗಳಲ್ಲಿ ಮಕ್ಕಳಿಗಾಗಿ ನಡೆವ ಆಟದ ಸ್ಪರ್ಧೆಗಳನ್ನು ಗಮನಿಸಿದರೆ, ಅಲ್ಲೂ ಕಟ್ಟುವ, ಬರೆಯುವ, ಹೆಣೆಯುವ, ನೇಯುವ, ಹಾಡುವ, ಒಪ್ಪವಾಗಿಸುವ ಕೈಚಳಕದ ಆಟಗಳನ್ನು ಹೆಣ್ಣುಮಕ್ಕಳಿಗಾಗಿ ಆಯೋಜಿಸಿರುತ್ತಾರೆ. ಮುಂದೆ ಸಮಾಜದಲ್ಲಿ, ಬದುಕಿನಲ್ಲಿ ಆಕೆ ಮಾಡಬೇಕಾದ ಕೆಲಸವಲ್ಲವೆ ಅದು? ಸಂಬಂಧಗಳನ್ನು ನವಿರಾಗಿ ಹೆಣೆದು, ಜೋಡಿಸಿ, ಓರಣವಾಗಿ ನಿಭಾಯಿಸುವುದು. ಗಂಡುಮಕ್ಕಳಿಗಾಗಿ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಸ ಶರ‍್ಯಗಳೇ ಪೌರುಷದ ಮುಖ್ಯ ಲಕ್ಷಣಗಳೆಂದು ಹುಡುಗರನ್ನು ನಂಬಿಸಲಾಗುತ್ತದೆ.

ಹೀಗೆ ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಆಟಗಳು ಬದುಕು ಹೀಗಿದೆ ಎಂದು ತೋರಿಸುತ್ತಲೇ, ಹೀಗಿರಬೇಕು ಎಂಬ ಮಾರ್ಗದರ್ಶನವನ್ನು ನೀಡುತ್ತವೆ. ಆ ಮೂಲಕ ನಿಜ ಬದುಕಿಗೆ ಬಹಳ ಅಗತ್ಯವಾದ ತರಬೇತಿಯನ್ನೂ ನಿರಾಯಾಸ ಒದಗಿಸುತ್ತವೆ. ಶಾಲೆಯಂಥಾ ಔಪಚಾರಿಕ ಸಂಸ್ಥೆಗಳ ಮುಖೇನ ಪಾಠದೊಂದಿಗೆ ಆಟಗಳೂ ಪಠ್ಯದ ಚಟುವಟಿಕೆಗಳಾಗಿ, ಮಗುವಿನ ವ್ಯಕ್ತಿತ್ವ ರೂಪಣೆಯಲ್ಲಿ ದುಡಿಯುತ್ತವೆ.

ಕಂಬಳ, ಕೋಳಿಅಂಕ, ತೆಂಗಿನಕಾಯಿ ಕುಟ್ಟುವ ತಪ್ಪಂಗಾಯಿ ಆಟ, ಅಕ್ಕಿಮುಡಿ ಎತ್ತುವುದು, ತೂಟೆದಾರ (ಉರಿವ ತೆಂಗಿನ ಸೋಗೆಯ ಕಟ್ಟಿಗೆ ಬೆಂಕಿ ಹಚ್ಚಿ ಪರಸ್ಪರರ ಮೇಲೆ ಎಸೆವ ಪ್ರಕ್ರಿಯೆ) ಮುಂತಾದ ಧಾರ್ಮಿಕ ನಿರ್ವಚನವುಳ್ಳ ಕ್ರೀಡೆಗಳ ಹಿಂದೆಯೂ ಜನಪದ ಬದುಕಿನ ಜೀವನಾವರ್ತನ ಮತ್ತು ವಾರ್ಷಿಕಾವರ್ತನದ ಸಮೃದ್ಧ ಗ್ರಹಿಕೆಗಳಿವೆ.

ಆಟಗಳ ವಿಶ್ಲೇಷಣೆಯ ಮೂಲಕ ಬದುಕಿನ ವಿಶ್ಲೇಷಣೆ ಸಾಧ್ಯವಾಗುವುದರಿಂದ ಆಟಗಳು ಏಕಕಾಲಕ್ಕೆ ಲೋಕದೃಷ್ಟಿಯ ಪ್ರತಿಬಿಂಬಗಳೂ ಗತಿಬಿಂಬಗಳೂ ಆಗಿ ಕಾಣಿಸಿಕೊಳ್ಳುತ್ತವೆ.

Leave a Reply

Your email address will not be published.