ಜನಪರ ಕಾಳಜಿಗಳಿಗೆ ಆದ್ಯತೆ

-ಪ್ರೊ.ಕಾಳೇಗೌಡ ನಾಗವಾರ

ಯಾವುದೇ ಸಂವೇದನಾಶೀಲ ವ್ಯಕ್ತಿಯ ಹದಿಹರೆಯದ ದಿನಗಳಲ್ಲಿ ಆಳವಾಗಿ ತನ್ನಂತರಂಗದಲ್ಲಿ ತುಂಬಿಕೊಂಡ ಆದರ್ಶಗಳು ಇಡೀ ಬದುಕಿನ ಉದ್ದಕ್ಕೂ ಜೀವಂತವಾಗಿದ್ದು ಎಚ್ಚರಿಸುತ್ತಿರುವ ಸಾಧ್ಯತೆಗಳು ಸಾಕಷ್ಟಿವೆ. ಈ ಎಚ್ಚರವು ನಮ್ಮನ್ನು ಸೂಕ್ಷ್ಮವೂ, ಪ್ರಾಮಾಣಿಕವೂ, ಜನಹಿತಕಾರಿಯೂ ಆದ ಪ್ರಯೋಗಗಳಿಗೆ ಸದಾಕಾಲವೂ ಒಡ್ಡಿಕೊಳ್ಳುವಂತೆ ಪ್ರೇರೇಪಿಸುತ್ತಿರುತ್ತದೆ; ಜೊತೆಗೆ ದಾರಿತಪ್ಪಿದಾಗ, ಆದರ್ಶಗಳಿಗೆ ಬೆನ್ನುತಿರುಗಿಸಿದಾಗ ನಮ್ಮಲ್ಲಿ ವಿವಿಧ ಪ್ರಮಾಣಗಳ ಪಾಪಪ್ರಜ್ಞೆ ಹಾಗೂ ನಡುಕ ಹುಟ್ಟಿಸುವ ಸಂದರ್ಭಗಳು ಸಹ ಇದ್ದೇ ಇರುತ್ತವೆ. ಹೀಗಾಗಿ ನಮ್ಮ ಹೊಸಸಾಂಸ್ಕøತಿಕ ಬದುಕನ್ನು ಹಸನಾಗಿಸುವ ಸಾಮೂಹಿಕ ಹೊಣೆಗಾರಿಕೆಯ ಬದ್ಧತೆಯ ಬಗ್ಗೆ ನಾವೆಲ್ಲ ಮೈಯೆಲ್ಲಾ ಕಣ್ಣಾಗಿರಬೇಕಾದ ತುರ್ತು ತುಂಬಾ ಅವಶ್ಯ.

ಹೊಸವರ್ಷದ ಬಾಗಿಲಿನಲ್ಲಿರುವ ನಾವು: ನಮ್ಮ ಮುಂದಿರುವ ಸುಡುಸಮಸ್ಯೆಗಳ ನಾನಾ ಮುಖಗಳನ್ನು ಅರ್ಥಮಾಡಿಕೊಳ್ಳುತ್ತಾ ಅವುಗಳನ್ನು ದಿಟ್ಟತನದಿಂದ ಎದುರಿಸುತ್ತಲೇ ಮುನ್ನುಗ್ಗಿ, ಮಾನವೀಯ ಘನತೆಗೆ ಪೂರಕವಾಗಿ ಬದುಕುವ ವಾತಾವರಣಕ್ಕಾಗಿ ಅಂತಃಕರಣದಿಂದ ಒಟ್ಟಾಗಿ ತುಡಿಯಬೇಕಾಗಿದೆ. ಈ ಹಿಂದೆ, ಇದೇ ಜನತಂತ್ರ ವ್ಯವಸ್ಥೆಯ ನಟ್ಟ ನಡುವೆಯೇ ದಿಢೀರನೆ ಇಡೀ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಹರಣವಾಗಿ ತುರ್ತುಪರಿಸ್ಥಿತಿಯ ಕಾಡ್ಗಿಚ್ಚು ಎಲ್ಲೆಡೆ ಪಸರಿಸಿದಾಗ ಜಯಪ್ರಕಾಶನಾರಾಯಣ ಅವರಂತಹ ಸಮರ್ಪಣಾ ಮನೋಭಾವದ ಹಿರಿಯರ ನೇತೃತ್ವದಲ್ಲಿ ಇಡೀ ರಾಷ್ಟ್ರ ಒಂದಾಗಿ ಪ್ರತಿಭಟಿಸಿತು.

ಆಗಿನ ಕೇಂದ್ರ ಸರ್ಕಾರವನ್ನೇ ಬದಲಿಸಿದ ಐತಿಹಾಸಿಕ ಸಂದರ್ಭವನ್ನು ಕಣ್ಣಾರೆ ಕಂಡಿದ್ದೇವೆ; ಜೊತೆಗೆ ನಮ್ಮ ನಮ್ಮ ಮಿತಿಗಳ ಚೌಕಟ್ಟಿನಲ್ಲಿಯೇ ಆ ಕಾಲದ ಜನವಿರೋಧಿ ಕ್ರಿಯೆಗಳನ್ನು ಪ್ರತಿಭಟಿಸಿದ್ದೇವೆ. ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿಯೇ ಸರ್ವಾಧಿಕಾರೀ ಆಡಳಿತ ರೂಪುಗೊಳ್ಳುವುದಾದಲ್ಲಿ- ‘ಆ ಸ್ಥಿತಿಯು ಕ್ರೂರವಾದ ಸರ್ವಾಧಿಕಾರಿಯ ಮುಖಕ್ಕೆ ಹೇಗೆ ಕನ್ನಡಿಯೋ ಹಾಗೆಯೇ ಅದನ್ನು ಪ್ರಶ್ನಿಸದ, ಚರ್ಚಿಸದ, ಪ್ರತಿಭಟಿಸದ ಅಲ್ಲಿನ ಜನಕೋಟಿಯ ಮತಿವಿಕಲ ಅವಿವೇಕ ಮತ್ತು ಹೊಣೆಗೇಡಿತನದ ಮುಖಕ್ಕೆ ಸಹ ನೇರವಾಗಿ ಹಿಡಿದಿರುವ ಕನ್ನಡಿಯೇ ಹೌದು’ ಎಂದು ನಾವೆಲ್ಲಾ ಆಗ ಭಾವಿಸಿದ್ದೆವು.

ಯಾವುದೇ ದೇಶದ ಇತಿಹಾಸ ವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿನ ಪುರೋಹಿತಶಾಹಿ ಮತ್ತು ರಾಜಶಾಹಿ ಕುಟಿಲವರ್ಗಗಳೇ ಒಟ್ಟು ಜನಸಮುದಾಯದ ಹಿತಕ್ಕೆ ಸದಾಕಾಲವೂ ಮಾರಕವಾಗಿರುವು ದನ್ನು ತುಂಬಾ ಸ್ಪಷ್ಟವಾಗಿ ಕಾಣುತ್ತಿದ್ದೇವೆ. ತಂತ್ರ-ಕುತಂತ್ರ-ವಂಚನೆ-ಮೌಢ್ಯಪ್ರಸಾರ ಮತ್ತು ಅಸಮಾನತೆಯ ಹರಿಕಾರರಾಗಿರುವ ಇವರು ಎಲ್ಲ ಕಾಲಕ್ಕೂ ಮುಗ್ಧಜನರ ಹಾಗೂ ಶ್ರಮಜೀವಿಗಳ ಋಣದ ಮಕ್ಕಳಾಗಿಯೇ ಬದುಕುತ್ತಿರುತ್ತಾರೆ.

ಆದರೆ, ತೀರ ಅಪರೂಪಕ್ಕೆ ಮಾತ್ರ ಪಂಚಭೂತಗಳ ವಂಚನೆರಹಿತ ಗುಣಧರ್ಮದ ಸಾಕ್ಷಾತ್ ಮಾದರಿಗಳಂತೆ ಭಾರತದ ಆಶ್ಚರ್ಯಕಾರಕ ಚರಿತ್ರೆಯಲ್ಲಿ ಎರಡೂವರೆ ಸಾವಿರ ವರ್ಷಗಳಷ್ಟು ಹಿಂದೆಯೇ, ಅದೇ ಅರಮನೆಯ ಅಂಗಳದಿಂದ ಬುದ್ಧ ನಿರ್ಲಿಪ್ತವಾಗಿ ಹೊರಬಂದು ಜನರ ನಡುವಣ ಸಾಧಾರಣ ಮಾನವನಾಗಿ ನಡೆದಾಡಿ ಪ್ರತಿಕ್ಷಣವೂ ತುಂಬುಹೃದಯದಿಂದ ಮಾಗುತ್ತಾ ಪರಿಪೂರ್ಣತೆಯ ಕಡೆಗೆ ಧಾವಿಸುತ್ತಾನೆ. ಹಾಗೆಯೇ ನಮ್ಮೆಲ್ಲರ ಅತ್ಯಾಶ್ಚರ್ಯಕರ ಹೆಮ್ಮೆಯ ಕನ್ನಡ ನೆಲದ ಹನ್ನೆರಡನೆಯ ಶತಮಾನದ ಬಸವಣ್ಣ ತನ್ನ ಉನ್ನತಕುಲದ ಕೊಳಕು ಅಹಂಕಾರವನ್ನು ಅಡಿಗಡಿಗೂ ತೊಳೆದುಕೊಳ್ಳುತ್ತಾ, ಅತ್ಯಂತ ಆರೋಗ್ಯಕರ ಮನಸ್ಸಿನ ಕರುಣಾಸಿಂಧುವಾಗಿ ಇನ್ನಿಲ್ಲದಂತೆ ನಮ್ಮೆಲ್ಲರ ಕಣ್ಣೆದುರೇ ಕಂಗೊಳಿಸಿದ ಅಸಂಖ್ಯ ಸೂಕ್ಷ್ಮಗಳ ಆನಂದಕರ ಚೋದ್ಯವನ್ನು ಸಹ ನಾವು ಕಂಡುಂಡಿದ್ದೇವೆ.

ಇದೀಗ ಬದಲಾದ ಭಾರತದ ಸಂದರ್ಭದಲ್ಲಿ ಮತ್ತೊಮ್ಮೆ ತುಂಬಾ ದೊಡ್ಡ ಪ್ರಮಾಣದಲ್ಲಿ ಜನಸಮುದಾಯದ ಹಿತಕ್ಕೆ, ಆರೋಗ್ಯಕರ ಬದುಕಿಗೆ ಸತತ ಧಕ್ಕೆ ತರುವ ಬೆಳವಣಿಗೆಗಳು ಹಳ್ಳಿಯಿಂದ ಡಿಳ್ಳಿಯತನಕ ಎಗ್ಗಿಲ್ಲದೆ ಸಾಗುತ್ತಿವೆ. ಪ್ರಭುಪ್ರಜೆಯ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರಭಾವದ ಸಹಜಾಶಯಗಳು ಕಣ್ಮರೆಯಾಗುತ್ತಿವೆ. ಸರ್ಕಾರಗಳು ರಾಕ್ಷಸಸ್ವರೂಪದ ಕಾರ್ಪೊರೇಟ್ ಧಣಿಗಳ ಅನಾಯಾಸ ಕಾವಲುನಾಯಿಗಳಾಗಿ ಮಾರ್ಪಟ್ಟಿವೆ. ರಾಷ್ಟ್ರಾದ್ಯಂತ ಅನ್ನದಾತರೈತನಿಗೆ ಆಗುತ್ತಿರುವ ಸಂಕಷ್ಟಗಳ ಸರಮಾಲೆಯ ವಿವರಗಳು ತುಂಬಾ ಭೀಕರವಾಗಿವೆ. ಅಸ್ಪøಶ್ಯ-ತಬ್ಬಲಿ ಜಾತಿಗಳು ಮತ್ತು ಮಹಿಳಾ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಜೊತೆಗೆ ಅಲ್ಪಸಂಖ್ಯಾತ ಧಾರ್ಮಿಕ ಪಂಗಡಗಳು ಮತ್ತು ಸಂವಿಧಾನದ ವಿರುದ್ಧ ನಿರಂತರ ವಿಷಕಾರುವ ವಿನಾಶಕಾರೀ ಉದ್ಧಟತನಗಳು ಪದೇ ಪದೇ ದಾಖಲಾಗುತ್ತಿರುವ ನರಕಸದೃಶ ವಾತಾವರಣ ಕಣ್ಣೀರು ತರಿಸುತ್ತಿದೆ.

ಈಗಿನ ಭಾರತದ ಉದ್ದಗಲಕ್ಕೂ ವ್ಯಾಪಿಸುತ್ತಿರುವ ಅನಿಷ್ಟಕಾರಕ ಸನಾತನಚಿಂತನೆಯ ರಾಜಾರೋಷದ ವಿಜೃಂಭಣೆಯು ಅಕ್ಷರಶಃ ಜನಸಮುದಾಯದ ಅಭಿವೃದ್ಧಿಗೆ ಪೂರಕವಾದ ಮಂಗಳಕರ ಬದುಕಿನ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ವರ್ಣ, ವರ್ಗ, ಜಾತಿ, ಅಸ್ಪøಶ್ಯತೆ, ಲಿಂಗಭೇದನೀತಿಯೇ ಮುಂತಾದ ವಿನಾಶಕಾರೀ ಪುರಾತನ ಚಿಂತನೆಯ ಭಾರತದ ಮೌಢ್ಯಪೂರಿತ ಚಟುವಟಿಕೆಗಳು ಎಲ್ಲೆಲ್ಲಿಯು ಹಬ್ಬುತ್ತಿರುವುದನ್ನು ಸ್ಪಷ್ಟವಾಗಿ ಕಾಣುತ್ತಿದ್ದೇವೆ. ನಮ್ಮೆಲ್ಲರ ಬುದ್ಧಿದಾರಿದ್ರ್ಯ ಮತ್ತು ಹೊಣೆಗೇಡಿತನದ ತಾರಕಸ್ಥಿತಿ ಇದೀಗ ಎದ್ದು ಕಾಣುತ್ತಿದೆ.

ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್ ರೀತಿಯ ಅಂತರಂಗಸರ್ವಸ್ವವನ್ನೂ ಸೂಕ್ಷ್ಮವಾಗಿ ವೀಕ್ಷಿಸುತ್ತಾ -ಸುತ್ತಲ ಸಕಲಕೊಳಕಿನ ಆಗರವನ್ನೂ ಶುದ್ಧಗೊಳಿಸುವ ಹಠದ, ಮನುಕುಲದ ಏಳಿಗೆಯ ದಿಕ್ಕಿನ ಸಮೃದ್ಧ ಬೆಳೆತೆಗೆವ ಎಲ್ಲಾ ಕಟಿಬದ್ಧ ಮೇಧಾವಿಗಳೂ ಕ್ರಮೇಣ ಒಗ್ಗೂಡಿ- ಈ ರಾಷ್ಟ್ರವನ್ನು ಸರ್ವಜನಾಂಗದ ಶಾಂತಿಯತೋಟವನ್ನಾಗಿಸುವ ಸಾರ್ಥಕ ಪ್ರಯತ್ನದಲ್ಲಿ ನಾವೆಲ್ಲಾ ಮುನ್ನುಗ್ಗೋಣ: ‘ಮೇಲು ಕೀಳಾಗುತೈತೆ -ಕೀಳು ಮೇಲಾಗುತೈತೆ/ಗೌಡಪ್ರಭುಗಳೆಲ್ಲಾ ತೌಡುತಿಂದು ಹೋಗುತಾರೆ’ ಎಂಬ ಕನ್ನಡದ ಪ್ರಬುದ್ಧ ತತ್ತ್ವಪದಸಾಧಕರ ಸದಾಶಯಗಳು ಈಡೇರುವ ಇತಿಹಾಸಚಕ್ರದ ಉರುಳುಗಳನ್ನು ಮುಕ್ತಮನಸ್ಸಿನ ಸಂಕಲ್ಪದಿಂದ ನಿರೀಕ್ಷಿಸೋಣ.

Leave a Reply

Your email address will not be published.