ಜನಪ್ರತಿನಿಧಿಗಳ ಅಶಿಸ್ತು ಮತ್ತು ಅತಿರೇಕ ಬಾರಾ ಖೂನ್ ಮಾಫ್

-ರಮಾನಂದ ಶರ್ಮಾ

ಸುಮಾರು ಎರಡು ವರ್ಷಗಳ ಹಿಂದೆ, ಒಬ್ಬ ಸಂಸದ ವೃತ್ತಿನಿರತ ವೈದ್ಯರು ತಮ್ಮವರಿಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿದರು. ಶಾಸಕರೊಬ್ಬರು ಇದೇ ರೀತಿ, ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅವರ ಮೇಲೆ ಹಲ್ಲೆ ನಡೆಸಿದರು. ಇನ್ನೊಬ್ಬ ಜನಪ್ರತಿನಿಧಿ ಸಾರ್ವಜನಿಕರೆದುರು ಸರ್ಕಾರಿ ನೌಕರನೊಬ್ಬನಿಗೆ 50 ಬೈಟಕ್ ಮಾಡುವ ಶಿಕ್ಷೆ ನೀಡಿ ಅಟ್ಟಹಾಸಗೈದರು.

ಉತ್ತರ ಪ್ರದೇಶದಲ್ಲಿ ಟೋಲ್ ನಾಕಾದಲ್ಲಿ ಟೋಲ್ ಕೇಳಿದ್ದಕ್ಕಾಗಿ ಟೋಲ್ ಸಿಬ್ಬಂದಿಗಳ ಮೇಲೆ ಜನಪ್ರತಿನಿಧಿಯೊಬ್ಬರು ಹಲ್ಲೆ ಮಾಡಿದರು. ಮಧ್ಯಪ್ರದೇಶದಲ್ಲಿ ಆಕಾಶ ವರ್ಗಿಯಾ ಎನ್ನುವ ಪ್ರಮುಖ ರಾಜಕಾರಣಿ ನಗರಸಭೆ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಿದ್ದರಿಂದ ಅವರನ್ನು ಬಂಧಿಸಲಾಗಿತ್ತು. ಆತ ಜಾಮೀನು ಪಡೆದು ಹೊರಗೆ ಬಂದಾಗ ಅವರ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.

ಮಹಾರಾಷ್ಟ್ರದಲ್ಲಿ ಮಾಜಿ ಮಂತ್ರಿಯೊಬ್ಬರ ಮಗ ನಗರಸಭೆ ಅಧಿಕಾರಿಯೊಬ್ಬರ ಮೈಮೇಲೆ ಕೆಸರು ಮಣ್ಣು ಸುರಿದು ಧಿಮಾಕು ತೋರಿಸಿದರು. ಇನ್ನೊಬ್ಬ ಜನಪ್ರತಿನಿದಿ ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಥಳಿಸಿದರು. ತಮ್ಮ ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ವಾಹನ ಸವಾರನೊಬ್ಬನನ್ನು ಶಾಸಕರೊಬ್ಬರು ಥಳಿಸಿದ ಉದಾಹರಣೆ ಇದೆ. ಟೋಲ್ ನಾಕಾದಲ್ಲಿ ಇವರ ಗಲಾಟೆ ತೀರಾಸಾಮಾನ್ಯ. ಇದು ಜನಸಾಮಾನ್ಯರು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಮತ್ತು ಅವರ ಹಿಂಬಾಲಕರು ದೈಹಿಕ ದಬ್ಬಾಳಿಕೆ ನಡೆಸುವ ವಿವರಗಳ ಪಟ್ಟಿಯ ಸಣ್ಣ ತುಣುಕು ಮಾತ್ರ.

ಈ ದಿನಗಳಲ್ಲಿ ಜನಪ್ರತಿನಿಧಿಗಳ ಅಶಿಸ್ತು, ಅತಿರೇಕ ಮತ್ತು ದೌರ್ಜನ್ಯ ಮಿತಿ ಮೀರಿದ್ದು, ಇತ್ತೀಚೆಗಿನ ಸಂಸದರ ಸಭೆಯಲ್ಲಿ ಪ್ರಧಾನಿ ನರೆಂದ್ರ ಮೋದಿಯವರು ಇದನ್ನು ಗಂಭೀರವಾಗಿ ಪ್ರಸ್ತಾಪಿಸಿದ್ದು, ಹೆಸರು ಹೇಳದೇ ಅವರನ್ನು ಟಾರ್ಗೆಟ್ ಮಾಡಿ ಎಚ್ಚರಿಸಿದ್ದಾರೆ. ಇಂಥವರನ್ನು ಮುಂದಿನ ಸಂಪುಟ ಪುನಾರಚನೆಯ ಸಮಯದಲ್ಲಿ ಮತ್ತು ಮುಂದಿನ ಚುನಾವಣೆಗಳಲ್ಲಿ ಟಿಕೆಟ್ ನೀಡುವಾಗ ನಿರ್ದಾಕ್ಷಿಣ್ಯವಾಗಿ ಪರಿಗಣಿಸುವುದಿಲ್ಲ ಎಂದು ನಿಚ್ಚಳವಾಗಿ ಹೇಳಿದ್ದಾರೆ. ಈ ರೀತಿಯ ನಡತೆ ಕೇವಲ ಒಂದು ರಾಷ್ಟ್ರೀಯ ಪಕ್ಷಕ್ಕೆ ಸೀಮಿತವಾಗಿರದೇ, ಪ್ರಾದೇಶಿಕ ಪಕ್ಷಗಳೂ ಸೇರಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿರುವುದರಿಂದ ಅವರ ಕೃತ್ಯಗಳು ಎದ್ದು ಕಾಣುತ್ತವೆ. ಇಂಥ ದುರ್ನಡತೆಗಳಿಗೆ ಈ ರೀತಿಯ ಎಚ್ಚರಿಕೆ ಸಾಕೇ?

ಅಪರಾಧ ಎಸಗುವುದು ಮನುಷ್ಯನ ದೌರ್ಬಲ್ಯಗಳಲ್ಲಿ ಒಂದು. ಪ್ರತಿ ಬಾರಿಯೂ ಇದು ಉದ್ದೇಶಪೂರ್ವವಾಗಿ ನಡೆಯುವುದಿಲ್ಲ. ಕೆಲವು ಬಾರಿ ಒಂದು `ಕೆಟ್ಟ ಘಳಿಗೆ’ ಯಲ್ಲಿ ಇಂಥವು ಆಗಿಹೋಗುತ್ತವೆ. ಇವರ  ಇಂಥ ಅತಿರೇಕದ ವರ್ತನೆಯ ಹಿಂದೆ ಸಾಕಷ್ಟು ಕಾರಣಗಳಿರಬಹುದು. ಆದರೆ, ಇದನ್ನು ಸರಿಗೊಳಿಸುವ ಮಾರ್ಗಗಳೂ ಇರುತ್ತವೆ. ಕಾನೂನನ್ನು ಕೈಗೆತೆಗೆದುಕೊಳ್ಳುವುದು ನಾಗರಿಕ ಲಕ್ಷಣವಲ್ಲ ಮತ್ತು ಮುಖ್ಯವಾಗಿ ಜನಪ್ರತಿನಿಧಿಗಳಿಗೆ ಇದು ಶೋಭಿಸುವುದಿಲ್ಲ. ತಪ್ಪೆಸಗಿದವನು ವಿಷಾದ ವ್ಯಕ್ತ ಮಾಡಿದರೆ, ಇಂಥ ಘಟನೆಗಳು ತೂಕ ಕಳೆದುಕೊಳ್ಳುತ್ತವೆ. ಅದರೆ, ಇವರೆಲ್ಲರೂ ತಮ್ಮ ಘನಕಾರ್ಯವನ್ನು ಸಮರ್ಥಿಸಿಕೊಳ್ಳುವುದು ದುರಂತ.

ಇಂಥವರನ್ನು ಪಕ್ಷ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸದೇ, ಮೌನವಾಗಿ ಇರುವುದು, ಪರೋಕ್ಷವಾಗಿ ಸಮರ್ಥಿಸಿಕೊಳ್ಳುವುದು ಅಕ್ಷಮ್ಯ. ಯಾವ ರಾಜಕೀಯ ಪಕ್ಷವೂ ಇಂಥ ದುವರ್ತನೆಗಾಗಿ ತನ್ನ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಉದಾಹರಣೆಗಳು ಇಲ್ಲ. ಇಂಗ್ಲೆಂಡಿನಲ್ಲಿ `ರಾಜನು ತಪ್ಪು ಮಾಡುವುದಿಲ್ಲ’ (King Can Do No Wrong) ಎನ್ನುವಂತೆ ನಮ್ಮಲ್ಲಿ ಜನಪ್ರತಿನಿಧಿಗಳು ತಪ್ಪು ಎಸಗುವುದಿಲ್ಲ ಎನ್ನುವ ಅಲಿಖಿತ ನಿಯಮಾವಳಿ ಇದ್ದು, ಅವರ ವಿರುದ್ಧ ಅಷ್ಟು ಸುಲಭವಾಗಿ ಪ್ರಕರಣಗಳು ದಾಖಲಾಗುವುದಿಲ್ಲ ಮತ್ತು ಅವರು ಇಂಥವುಗಳಿಂದ ನುಣುಚಿಕೊಳ್ಳುವದರಲ್ಲಿ ಸಿದ್ಧಹಸ್ತರು ಕೂಡಾ. ಇಂತಹ ಕೃತ್ಯಗಳು ಇದೇ ಹಾದಿ ತುಳಿಯುವಂತೆ ಬೇರೆಯವರನ್ನು ಪ್ರೇರೇಪಿಸುತ್ತವೆ. ವಿಪರ್ಯಾಸವೆಂದರೆ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿದವರೊಬ್ಬರನ್ನು ಮಂತ್ರಿಯನ್ನಾಗಿ ಮಾಡಲಾಗಿತ್ತು ಮತ್ತು ಮುಂದಿನ ಚುನಾವಣೆಯಲ್ಲಿ ಟಿಕೆಟನ್ನೂ ನೀಡಲಾಗಿತ್ತು.

ಪಂಚಾಯತ್ ಇರಬಹುದು ಅಥವಾ ಪಾರ್ಲಿಮೆಂಟ್ ಇರಬಹುದು, ಒಮ್ಮೆ ಆಯ್ಕೆಯಾದರೆ, ಅವರು ಬೇರೆಯವರಿಗಿಂತ ಭಿನ್ನ ಎಂದು ಭಾವಿಸುತ್ತಾರೆ ಮತ್ತು ತಮ್ಮನ್ನು ಬೇರೆ ರೀತಿಯಲ್ಲಿ ನಡೆಸಿಕೊಳ್ಳಬೇಕೆನ್ನುತ್ತಾರೆ. ತಮ್ಮನ್ನು 24×7 ವಿಐಪಿ ಯಂತೆ ಕಾಣಬೇಕು ಎನ್ನುತ್ತಾರೆ. ದೇಶದಲ್ಲಿ ಸಮಾಜವಾದಿ ವ್ಯವಸ್ಥೆಗಾಗಿ ಇಂದಿರಾಗಾಂಧಿಯವರು ರಾಜಧನವನ್ನು ರದ್ದತಿ ಮಾಡಿ ‘ರಾಜಾತಿಥ್ಯಕ್ಕೆ’ ಇತಿಶ್ರೀ ಹಾಡಿದರು. ಅವರು ಹೀಗೆ ಮಾಡುವಾಗ ‘ಜನಪ್ರತಿನಿಧಿಗಳು’ ಎನ್ನುವ ಹೊಸ ಮಹಾರಾಜರು ಹಿಂದಿನ ಬಾಗಿಲಿನಿಂದ ಈ ರೀತಿ ದೇಶದಲ್ಲಿ ಒಕ್ಕರಿಸುತ್ತಾರೆ ಎಂದು ತಮ್ಮ ಕೆಟ್ಟ ಕನಸಿನಲ್ಲೂ ಎಣಿಸಿರಲಿಲ್ಲವೇನೋ?

ಇಂಗ್ಲಿಷರ ಆಡಳಿತದಲ್ಲಿ ದೇಶದಲ್ಲಿ ಕೆಲವರಿಗೆ ಏನು ತಪ್ಪು ಮಾಡಿದರೂ ‘ಕ್ಷಮೆ’ ಇತ್ತು, ಅವರನ್ನು ‘ಬಾರಾಖೂನ್ ಮಾಫ್’ ಮಹನೀಯರು ಎನ್ನುತ್ತಿದ್ದರಂತೆ. ಈಗ ನಮ್ಮ ಕೆಲವು ಜನಪ್ರತಿನಿಧಿಗಳು ಕೂಡಾ ಇದನ್ನು ಅನುಭವಿಸುತ್ತಿರುವಂತೆ ಕಾಣುತ್ತದೆ. ಜನಪ್ರತಿನಿಧಿಗಳಿಗೆ ನೀಡುವ ಸೌಲಭ್ಯ ಮತ್ತು ವಿನಾಯಿತಿಗಳ ಬಗೆಗೆ ಜನಸಾಮಾನ್ಯರಲ್ಲಿ ಸಾಕಷ್ಟು ಆಕ್ರೋಶ ಇದೆ. ಈಗ ಅವರ ಅನಿಯಂತ್ರಿತ ದುರ್ನಡತೆ ಕೂಡಾ ಇದಕ್ಕೆ ಜೊತೆಯಾಗಿದೆ.

Leave a Reply

Your email address will not be published.