ಜನಸಂಖ್ಯಾ ಸ್ಫೋಟ: ಬೇಕು ಸ್ಪಷ್ಟ ನೀತಿಯ ಮುನ್ನೋಟ

ಭಾರತದ ಜನಸಂಖ್ಯೆ 2061 ರ ವೇಳೆಗೆ 165 ಕೋಟಿ ತಲುಪಲಿದ್ದು ಅನಂತರ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ ಇಳಿಮುಖವಾಗಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗವು ಅಂದಾಜು ಮಾಡಿದೆ. ಫಲವತ್ತತೆ ಸೂಚ್ಯಂಕವು ಇದಕ್ಕೆ ಕಾರಣ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜನಸಂಖ್ಯಾ ಸ್ಫೋಟದ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದು ಜನಸಂಖ್ಯಾ ಬೆಳವಣಿಗೆ ಹಾಗೂ ಕುಟುಂಬ ಯೋಜನೆ ಕುರಿತ ಚರ್ಚೆಗೆ ಹೊಸ ದಿಕ್ಕು ಮತ್ತು ಹೊಳಹು ನೀಡಿದೆ. ಈ ಭಾಷಣಕ್ಕೆ ಬಂದಿರುವ ಪ್ರತಿಕ್ರಿಯೆ ಬೇರೆ ಬೇರೆ ತೆರನಾಗಿದೆ. ಕುಟುಂಬದ ಗಾತ್ರದ ಮೇಲೆ ಮಿತಿ ಹಾಕಬೇಕು ಎಂಬುದು ಕೆಲವರ ಅಭಿಪ್ರಾಯ. ನಾನಾ ಬಗೆಯ ಪ್ರೋತ್ಸಾಹಧನಗಳನ್ನು ದೊಡ್ಡ ಕುಟುಂಬಗಳಿಗೆ ತೆಗೆದುಹಾಕಬೇಕು ಎಂಬುದು ಇನ್ನು ಕೆಲವರ ಅನಿಸಿಕೆಯಾಗಿದೆ. ಈ ಸಮಸ್ಯೆ ಕೆಲವು ನಿರ್ದಿಷ್ಟ ಸಮುದಾಯಕ್ಕೆ ಸಿಮಿತವಾದುದು ಮತ್ತು ಅಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿಶ್ಲೇಷಿಸುವವರೂ ಇದ್ದಾರೆ.

ಅದೇನೇ ಇರಲಿ. ಜನಸಂಖ್ಯಾ ಸ್ಫೋಟ ತಡೆಗೆ ಸೂಕ್ತ ಪರಿಹಾರ ಕಂಡುಹಿಡಿಯಲು ಜನಸಂಖ್ಯಾ ಬೆಳವಣಿಗೆಯ ಆಯಾಮಗಳ ಬಗ್ಗೆ ತಿಳಿವಳಿಕೆ ಹೊಂದಬೇಕಾಗುತ್ತದೆ. ಜನಸಂಖ್ಯೆ ಈ ಪ್ರಮಾಣದಲ್ಲಿ ಅನಿಯಂತ್ರಿತವಾಗಿ ಹೆಚ್ಚುತ್ತಿರುವುದಕ್ಕೆ ಎರಡು ಪ್ರಮುಖ ಅಂಶಗಳು ಕಾರಣವಾಗಿವೆ:

ಮೊದಲನೆಯದಾಗಿ, ದೇಶದ ಸದ್ಯದ ಫಲವತ್ತತೆ ಪ್ರಮಾಣ ಸೂಚ್ಯಂಕ 2.1. ಆದರೆ ಬಹುತೇಕ ಕುಟುಂಬಗಳು ಈ ಪ್ರಮಾಣ ಮೀರಿ ದೊಡ್ಡ ಕುಟುಂಬವನ್ನು ಹೊಂದಲು ಬಯಸುತ್ತವೆ. ಇದು ತಾಯಿ, ನಂತರ ಮಗಳಿಗೆ ವರ್ಗಾವಣೆಯಾಗುವಂಥದ್ದು.

ಎರಡನೆಯದಾಗಿ, ಸಂತಾನೋತ್ಪತ್ತಿ ಸಾಮಥ್ರ್ಯವಿರುವ 15-49ರ ವಯೋಮಾನದ ಗುಂಪಿಗೆ ದೊಡ್ಡ ಪ್ರಮಾಣದಲ್ಲಿ ಜನರು ಸೇರ್ಪಡೆಯಾಗುತ್ತಿದ್ದಾರೆ. ಈ ಗುಂಪಿನಿಂದ ಹೊರಬೀಳುತ್ತಿರುವ, ಅಂದರೆ, ಇದಕ್ಕಿಂತ ಹೆಚ್ಚಿನ ವಯೋಮಾನದವರಿಗಿಂತ ಇವರ ಸಂಖ್ಯೆ ಅಧಿಕವಾಗಿದೆ. ಅತ್ಯಧಿಕ ಫಲವತ್ತತೆ ಪ್ರಮಾಣಕ್ಕೆ ಈ ವಯೋಮಾನದ ಪರಿಗಣನೆಯು ಮಹತ್ವದ ಪಾತ್ರ ವಹಿಸುತ್ತದೆ.

2018ರ ಆರ್ಥಿಕ ಸಮೀಕ್ಷೆಯ ಪ್ರಕಾರ ಎಲ್ಲ ಕಡೆ ಹಾಗೂ ಎಲ್ಲ ಸಮುದಾಯಗಳಲ್ಲಿ ಫಲವತ್ತೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕುಸಿತದ ದರದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಅಷ್ಟೇ. 2016 ರಲ್ಲಿ ದೇಶದ ಫಲವತ್ತತೆಯ ಪ್ರಮಾಣವು 2.2 ರಷ್ಟಿತ್ತು. ಇದು ಜನಸಂಖ್ಯಾ ಮಟ್ಟವನ್ನು ಕಾಪಾಡುವ (ರಿಪ್ಲೇಸ್‍ಮೆಂಟ್ ಲೆವೆಲ್) ಮಟ್ಟದ ಸನಿಹವಿದ್ದು 2021ರ ವೇಳೆಗೆ ಅದನ್ನು ಸರಿಗಟ್ಟಬಹುದು. ಆದರೆ ಕೆಲವು ರಾಜ್ಯಗಳು ಈ ಮಟ್ಟಕ್ಕಿಂತ ಹೆಚ್ಚಿನ ದರವನ್ನು ಹೊಂದಿವೆ. ಉದಾಹರಣೆಗೆ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಇದು ಕ್ರಮವಾಗಿ 2.74 ಮತ್ತು 3.41 ಆಗಿದೆ. 1990ರ ದಶಕದಲ್ಲಿ ಉತ್ತರಪ್ರದೇಶದಲ್ಲಿ ಇದು ಹೆಚ್ಚಾಗಿತ್ತು. ಆದರೀಗ ಅದು ಬಿಹಾರಕ್ಕೆ ಹೋಲಿಸಿದರೆ ತ್ವರಿತಗತಿಯಲ್ಲಿ ಕುಸಿತ ಕಂಡಿದ್ದರಿಂದ ಬಿಹಾರವು ಅದನ್ನು ಹಿಂದಿಕ್ಕಿದೆ. ಉತ್ತರಪ್ರದೇಶದಲ್ಲಿ 2021 ಹಾಗೂ ಬಿಹಾರದಲ್ಲಿ 2031ರ ಹೊತ್ತಿಗೆ ರಿಪ್ಲೇಸ್‍ಮೆಂಟ್ ಮಟ್ಟ ತಲುಪುವ ಅಂದಾಜನ್ನು ಆರ್ಥಿಕ ಸಮೀಕ್ಷೆ ಮಾಡಿದ್ದು ಇದು ಆಶಾದಾಯಕ ಬೆಳವಣಿಗೆಯಾಗಿದೆ.

ಫಲವತ್ತತೆಯ ಪ್ರಮಾಣದ ಕುಸಿದಷ್ಟೂ ಜನಸಂಖ್ಯೆ ಅದೇ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಆದರೆ ಅನಪೇಕ್ಷಿತ ಜನನವನ್ನು ತಡೆಗಟ್ಟಿದರೆ ಜನಸಂಖ್ಯಾ ಬೆಳವಣಿಗೆಯನ್ನು ಇನ್ನಷ್ಟು ಕುಂಠಿತಗೊಳಿಸಬಹುದು. ಕುಟುಂಬ ಯೋಜನಾ ಕಾರ್ಯಕ್ರಮಗಳ ಸಮರ್ಥ ಬಳಕೆಯಿಂದ ಇದು ಸಾಧ್ಯವಾಗುತ್ತದೆ. ಮನೋಭಾವವನ್ನು ಬದಲಾಯಿಸಬಲ್ಲಂಥ ಸಂವಹನ, ಗರ್ಭನಿರೋಧಕದ ಆಯ್ಕೆ ಹಾಗೂ ಗರ್ಭನಿರೊಧಕಗಳನ್ನು ಬಳಸುವವರ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ-ಇವೆಲ್ಲ ಅಂಶಗಳು ಇಲ್ಲಿ ಪ್ರಭಾವ ಬೀರುತ್ತವೆ. ‘ಮಿಷನ್ ಪರಿವಾರ್ ವಿಕಾಸ್ ಜಿಲ್ಲೆಗಳು’ ಯೋಜನೆಯಡಿ, ಅತ್ಯಧಿಕ ಫಲವತ್ತತೆ ಹೊಂದಿರುವ 145 ಜಿಲ್ಲೆಗಳನ್ನು ಸರಕಾರ ಗುರುತಿಸಿದೆ. ಸಂತಾನಶಕ್ತಿ ನಿಯಂತ್ರಣ ಯೋಜನೆಗೆ ಒಳಗಾಗುವ ಜನರಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತು ಈ ಜಿಲ್ಲೆಗಳಲ್ಲಿ ಕುಟುಂಬ ಯೋಜನೆಯ ಕ್ರಮಗಳನ್ನು ಬಲಗೊಳಿಸಲು ಉದ್ದೇಶಿಸಿದೆ. ಮೂರನೇ ಎರಡು ಭಾಗದಷ್ಟು ಈ ಜಿಲ್ಲೆಗಳು ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೇ ಇರುವುದು ಗಮನಾರ್ಹ.

ಹಾಗಾದರೆ ಕೆಲವು ಸಮುದಾಯಗಳಲ್ಲಿ ಫಲವತ್ತತೆಯ ಪ್ರಮಾಣ ಇತರರಿಗಿಂತ ಅಧಿಕವಾಗಿದೆಯೇ? 2015-16ರಲ್ಲಿ ಮುಸ್ಲಿಮರಲ್ಲಿ ಒಟ್ಟು ಫಲವತ್ತತೆಯ ದರವು 2.62 ಆಗಿತ್ತು. ಹಿಂದೂಗಳಲ್ಲಿ ಇದು 2005-06ರಲ್ಲಿ 2.59 ಆಗಿತ್ತು. ಅಂದರೆ ಇಬ್ಬರ ನಡುವೆ ಸುಮಾರು ಒಂದು ದಶಕದ ಅಂತರವಿದೆ. ಹಾಗೆಂದು ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಫಲವತ್ತತೆಯ ದರ ಕಳೆದ ದಶಕದಲ್ಲಿ ಕುಸಿದಿದೆ. ಅಲ್ಲದೆ ಅಂತರ ಕಡಿಮೆಯಾಗುತ್ತಲೇ ಬರುತ್ತಿದೆ. ಹಿಂದೂ ಸಮುದಾಯಗಳಲ್ಲಿ ಫಲವತ್ತತೆಯು ಹೆಚ್ಚೂಕಡಿಮೆ ರಿಪ್ಲೇಸ್‍ಮೆಂಟ್ ದರದ ಸನಿಹ ಬಂದಿದೆ. ಕುಟುಂಬ ಯೋಜನಾ ಸೇವೆಗಳ ಸುಧಾರಣೆಯ ಜತೆಗೆ ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸುವುದು ಹಾಗೂ ಸಾಮಾಜಿಕ-ಆರ್ಥಿಕ ಅಂಶಗಳ ಆಧಾರದಲ್ಲಿ 2025ರ ವೇಳೆಗೆ ಮುಸ್ಲಿಮರಲ್ಲಿ ಫಲವತ್ತತೆಯ ಪ್ರಮಾಣ ಅಪೇಕ್ಷಿತ ದರ ತಲುಪಬಹುದು.

ಒಂದೊಮ್ಮೆ ಫಲವತ್ತತೆಯು ರಿಪ್ಲೇಸ್‍ಮೆಂಟ್‍ಮಟ್ಟವನ್ನು ತಲುಪಿದ ಬಳಿಕ ಜನಸಂಖ್ಯಾ ಬೆಳವಣಿಗೆ ನಿಂತುಹೋಗುತ್ತದೆ ಎಂಬ ಭಾವನೆ ಹಲವರಲ್ಲಿದೆ. ಆದರೆ ಇದು ನಿಜವಲ್ಲ. ಏಕೆಂದರೆ ಫಲವತ್ತತೆ ಪ್ರಮಾಣ ಕಡಿಮೆಯಾದರೂ, ಆಯುಷ್ಯ ಹೆಚ್ಚಳದಿಂದಾಗಿ ಜನಸಂಖ್ಯೆಯಲ್ಲಿ ಸಾಕಷ್ಟು ಏರಿಕೆ ಕಂಡುಬರುತ್ತದೆ. ಉದಾಹರಣೆಗೆ ತಮಿಳುನಾಡಿನಲ್ಲಿ 2000ರಲ್ಲೇ ರಿಪ್ಲೇಸ್‍ಮೆಂಟ್ ಮಟ್ಟ ತಲುಪಿದ್ದರೂ 2017ರಲ್ಲಿ ಜನಸಂಖ್ಯಾ ಬೆಳವಣಿಗೆಯ ಪ್ರಮಾಣವು ವಾರ್ಷಿಕ ಶೇ.0.83ರ ದರದಲ್ಲೇ ಇದೆ. ಗಮನಿಸಬೇಕಾದುದೇನೆಂದರೆ, ಜನನ ಮತ್ತು ಮರಣ ಪ್ರಮಾಣವು ಕ್ರಮವಾಗಿ ಶೇ.1.49 ಹಾಗೂ 0.66 (ಪ್ರತಿ ಸಾವಿರಕ್ಕೆ)ರಷ್ಟಿದೆ.

ಫಲವತ್ತೆತಯ ದರವು ಶೇ.2.9 ರಷ್ಟು ಅಧಿಕ ಪ್ರಮಾಣದಲ್ಲಿರುವುದರಿಂದ ಆತಂಕಗೊಂಡ ಚೀನಾ ದೇಶವು ‘ಒಂದು ಕುಟುಂಬಕ್ಕೆ ಒಂದೇ ಮಗು’ ಎಂಬ ನೀತಿಯನ್ನು ಜಾರಿಗೆ ತಂದಿತು. ಇದರಿಂದಾಗಿ 1991ರಲ್ಲಿ ರಿಪ್ಲೇಸ್‍ಮೆಂಟ್ ಮಟ್ಟವನ್ನು ಬಹುತೇಕವಾಗಿ ತಲುಪಿತು. ಆಗ ಜನಸಂಖ್ಯೆ 115 ಕೋಟಿ ಇತ್ತು. ಆದರೆ ಜನಸಂಖ್ಯಾ ಬೆಳವಣಿಗೆ ಅಬಾಧಿತವಾಗಿ ಮುಂದುವರಿದಿದ್ದು ಅದೀಗ 140 ಕೋಟಿಯ ಹತ್ತಿರಕ್ಕೆ ಬಂದು ನಿಂತಿದೆ. ಇದು ಮೂರು ದಶಕಗಳಲ್ಲಾದ ಬೆಳವಣಿಗೆ. ಆದರೆ ಇನ್ನು ಅದು ಇಳಿಮುಖವಾಗಲಿದೆ. ಆದರೆ ಇಲ್ಲಿ ಒಂದು ಅಂಶ ಗಮನಾರ್ಹ. ಅಪೇಕ್ಷಿತ ಮಟ್ಟಕ್ಕಿಂತ ಕಡಿಮೆದರಕ್ಕೆ ಫಲವತ್ತತೆ ಕುಸಿದರೆ, ಆ ಕುಸಿತದ ಲಕ್ಷಣಗಳನ್ನು ತಡೆಗಟ್ಟುವುದು ಅಸಾಧ್ಯ. ಚೀನಾ ದೇಶವು ಇತ್ತೀಚೆಗೆ ಒಂದು ಮಗು ನೀತಿಯನ್ನು ಸಡಿಲಿಸಿದೆ. ಆದರೆ ಫಲವತ್ತತೆಯ ದರದಲ್ಲಿ ಕುಸಿತ ನಿಂತಿತೆ ಎಂದು ಹೇಳುವುದು ಕಷ್ಟ.

ಯುವ ದಂಪತಿಯನ್ನು ಸಂಪರ್ಕಿಸಿ ಅವರಿಗೆ ಸೂಕ್ತ ತಿಳಿವಳಿಕೆ, ಮಾರ್ಗದರ್ಶನ ನೀಡಬೇಕಾಗುತ್ತದೆ. ಮಗು ಪಡೆಯುವುದನ್ನು ಸೂಕ್ತವಾಗಿ ಯೋಜಿಸುವಂತೆ ಅವರ ಮನವೊಲಿಸಿ ಪ್ರೋತ್ಸಾಹಿಸಬೇಕಾಗುತ್ತದೆ. ಇದಕ್ಕೆ ವಿಶೇಷ ಗಮನ ಅಗತ್ಯ.

ಹಾಗಾದರೆ ಜನಸಂಖ್ಯಾ ಬೆಳವಣಿಗೆಯ ನಾಗಾಲೋಟವನ್ನು ನಿಲ್ಲಿಸುವುದು ಹೇಗೆ? ಹೇಗೆಂದರೆ ಮಕ್ಕಳನ್ನು ಪಡೆಯುವ ಅವಧಿಯನ್ನು ದಂಪತಿ ವಿಳಂಬ ಮಾಡುವುದು. ಅಂದರೆ ಮೊದಲ ಮಗುವನ್ನು ಪಡೆಯುವ ಸಮಯವನ್ನು ಮುಂದೂಡುವ ಹಾಗೂ ಒಂದು ಮತ್ತು ಎರಡನೇ ಮಗುವಿನ ನಡುವೆ ಅಂತರ ಇರುವಂತೆ ನೋಡಿಕೊಳ್ಳುವುದು. ಇದಕ್ಕಾಗಿ ಯುವ ದಂಪತಿಯನ್ನು ಸಂಪರ್ಕಿಸಿ ಅವರಿಗೆ ಸೂಕ್ತ ತಿಳಿವಳಿಕೆ, ಮಾರ್ಗದರ್ಶನ ನೀಡಬೇಕಾಗುತ್ತದೆ. ಮಗು ಪಡೆಯುವುದನ್ನು ಸೂಕ್ತವಾಗಿ ಯೋಜಿಸುವಂತೆ ಅವರ ಮನವೊಲಿಸಿ ಪ್ರೋತ್ಸಾಹಿಸಬೇಕಾಗುತ್ತದೆ. ಇದಕ್ಕೆ ವಿಶೇಷ ಗಮನ ಅಗತ್ಯ.

ಇದಕ್ಕಾಗಿ ಸರ್ಕಾರ ಎರಡು ಯೋಜನೆಗಳನ್ನು ರೂಪಿಸಿದೆ. ಮಗು ಹೊಂದುವುದನ್ನು ಮುಂದೂಡುವುದು ಈ ಪೈಕಿ ಒಂದು. ಈ ಯೋಜನೆಯಡಿ ಆಶಾ ಕಾರ್ಯಕರ್ತೆಯರು ನವದಂಪತಿಗಳನ್ನು ಸಂಪರ್ಕಿಸಿ ಅವರಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಾರೆ. ಮದುವೆಯಾದ ಎರಡು ವರ್ಷಗಳವರೆಗೆ ಮಗು ಬೇಡ ಹಾಗೂ ಎರಡು ಮಗುವಿನ ನಡುವೆ ಕನಿಷ್ಠ ಮೂರು ವರ್ಷಗಳ ಅಂತರವಿರಲಿ ಎಂಬ ಅಂಶವನ್ನು ಅವರಿಗೆ ಮನವರಿಕೆ ಮಾಡಿಕೊಡುತ್ತಾರೆ. ಈ ಯೋಜನೆಯು 18 ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಹಾಗೆಯೇ ಉಳಿದ ರಾಜ್ಯಗಳಿಗೆ ವಿಸ್ತರಿಸಲಾಗುತ್ತಿದೆ. ಹೀಗೆ ಮಗು ಹೊಂದುವುದನ್ನು ಮುಂದೂಡುವಂತೆ ದಂಪತಿಯ ಮನವೊಲಿಸಿ ಅದರಲ್ಲಿ ಯಶಸ್ವಿಯಾಗುವ ಆಶಾ ಕಾರ್ಯಕರ್ತೆಗೆ 500 ರೂ. ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಮೊದಲ ಮಗು ಹಾಗೂ ಎರಡನೇ ಮಗು ಎರಡಕ್ಕೂ ಈ ಪ್ರೋತ್ಸಾಹಧನ ಉಂಟು. ಈ ಉದ್ದೇಶಕ್ಕಾಗಿ 2018-19ರಲ್ಲಿ ರಾಷ್ಟ್ರೀಯ ಆರೋಗ್ಯ ಮಿಶನ್ ಯೋಜನೆಗೆ ಬಜೆಟ್‍ನಲ್ಲಿ ಹಣ ಮೀಸಲಿರಿಸಲಾಗಿತ್ತು. ಆದರೆ 10 ಲಕ್ಷ ಕುಟುಂಬಗಳನ್ನು ಒಳಗೊಳ್ಳಲು ಮಾತ್ರ ಈ ಹಣ ಸಾಕಾಗುತ್ತಿತ್ತು. ಆ ವರ್ಷ ಅಂದಾಜು 2.5 ಕೋಟಿ ಮಕ್ಕಳು ಜನಿಸಿದ್ದನ್ನು ನೋಡಿದರೆ ಈ ಹಣ ಮತ್ತು ಗುರಿ ಅತಿ ಕಡಿಮೆ.

ಫಲವತ್ತತೆಯ ಪ್ರಮಾಣ ಅಲ್ಲಿ ಅಧಿಕವಾಗಿರುವ ಕಾರಣ ಅದನ್ನು ನಿಯಂತ್ರಿಸಲು ಈ ಕ್ರಮ ಅತ್ಯವಶ್ಯ. ಭಾರತವು ಕುಟುಂಬ ಯೋಜನೆಯಲ್ಲಿ ಈಗಾಗಲೇ ಸಾಕಷ್ಟು ಅನುಭವ ಗಳಿಸಿದ್ದು ಆ ಅನುಭವವನ್ನು ಸಂಪೂರ್ಣವಾಗಿ ಧಾರೆ ಎರೆಯಬೇಕು.

ಭಾರತದಲ್ಲಿ ಇನ್ನುಮುಂದೆ ಮಧ್ಯಮ ಪ್ರಮಾಣದ ಫಲವತ್ತತೆ ದರ ಇರಲಿದ್ದು, ಇದರಿಂದಾಗಿ 2061 ರ ವೇಳೆಗೆ ಜನಸಂಖ್ಯೆಯು 165 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗವು ಅಂದಾಜುಮಾಡಿದೆ. ಆನಂತರ ಅದು ಕುಸಿಯಲಿದೆ. ಇದಕ್ಕೆ ಹೋಲಿಸಿದರೆ ಫಲವತ್ತತೆಯ ಪ್ರಮಾಣ ಕಡಿಮೆಯಾದ ಪಕ್ಷದಲ್ಲಿ 2041ರಲ್ಲಿ 150 ಕೋಟಿ ಆಗಲಿದೆ. ಇದು ಶೇ.9ರ ಇಳಿಕೆ.

ಹಾಗಾದರೆ, ಭವಿಷ್ಯದಲ್ಲಿ ಈ ವಿಚಾರದಲ್ಲಿ ಯಾವ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಬೇಕು? ಮೊತ್ತಮೊದಲನೆಯದಾಗಿ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳತ್ತ ವಿಶೇಷ ಗಮನ ಹರಿಸಬೇಕು. ಫಲವತ್ತತೆಯ ಪ್ರಮಾಣ ಅಲ್ಲಿ ಅಧಿಕವಾಗಿರುವ ಕಾರಣ ಅದನ್ನು ನಿಯಂತ್ರಿಸಲು ಈ ಕ್ರಮ ಅತ್ಯವಶ್ಯ. ಭಾರತವು ಕುಟುಂಬ ಯೋಜನೆಯಲ್ಲಿ ಈಗಾಗಲೇ ಸಾಕಷ್ಟು ಅನುಭವ ಗಳಿಸಿದ್ದು ಆ ಅನುಭವವನ್ನು ಸಂಪೂರ್ಣವಾಗಿ ಧಾರೆ ಎರೆಯಬೇಕು. ಎರಡನೆಯ ವಿಶೇಷ ಕ್ರಮ ಎಂದರೆ ಎರಡು ಮಕ್ಕಳ ನಡುವೆ ಅಂತರ ಇರುವಂತೆ ನೋಡಿಕೊಳ್ಳುವುದು. ಇದು ಜನಸಂಖ್ಯಾ ಬೆಳವಣಿಗೆಯ ಪ್ರಮಾಣವನ್ನು ನಿಯಂತ್ರಿಸಲಿದೆ.

ರಿಪ್ಲೇಸ್‍ಮೆಂಟ್ ಮಟ್ಟವನ್ನು ಈಗಾಗಲೇ ತಲುಪಿರುವ ರಾಜ್ಯಗಳಿಗೆ ಇದು ಹೆಚ್ಚು ಸೂಕ್ತ. ಹಾಗೆಂದು ಕಾನೂನು ಕ್ರಮ, ಪ್ರೋತ್ಸಾಹಧನ ಕಡಿತ ಇತ್ಯಾದಿ ಕಠಿಣ ಕ್ರಮಗಳನ್ನು ಒಮ್ಮೆಲೇ ಜಾರಿಗೆ ತರಕೂಡದು. ಇದು ದೀರ್ಘ ಕಾಲದಲ್ಲಿ ದುಷ್ಪರಿಣಾಮ ಬೀರಲೂಬಹುದು. ಸದ್ಯದ ಮಟ್ಟಿಗಂತೂ ಇಂಥದೊಂದು ಆಲೋಚನೆ ಮಾಡದಿರುವುದೇ ಒಳಿತು.

*ರಂಗರಾಜನ್ ಅವರು ಆರ್‍ಬಿಯನ ಮಾಜಿ ಗವರ್ನರ್. ಸಾತಿಯಾ ಅವರು ಗಾಂಧಿನಗರದ ಐಐಪಿಎಚ್‍ನಲ್ಲಿ ಪ್ರೊಫೆಸರ್ ಎಮಿರೆಟಸ್.

ಕೃಪೆ: ದಿ ಇಂಡಿಯನ್ ಎಕ್ಸ್‍ಪ್ರೆಸ್

Leave a Reply

Your email address will not be published.