ಜಪಾನ ಹಕ್ಕಿ ಹಾರಿಬಂತು ಕನ್ನಡ ಹಕ್ಕಲಕ್ಕೆ!

-ಪ್ರೊ.ಜಿ.ಎಚ್.ಹನ್ನೆರಡುಮಠ

ಆ ಫಾರೆಸ್ಟ್ ಆಫೀಸರು ಜಿಲ್ಲಾ ಪಕ್ಷಿಸರ್ಜನ್ ಮತ್ತು ಗಾರ್ಡುಗಳೊಂದಿಗೆ ಬಂದ. ಅದರ ಮೆಡಿಕಲ್ ಟೆಸ್ಟ್ ಆತು. ಆ ಸರ್ಜನ್ ದಿಲ್ಲಿಗೆ ಅದನ್ನು ಸಾಗಿಸಲು ಯಸ್ ರಿಪೋರ್ಟು ಕೊಟ್ಟ. ಕಡೆಗೆ ಆ ಪಕ್ಷಿಯನ್ನು ದರ್ಗಾ ಕಮೀಟಿಯವರು ಫಾರೆಸ್ಟ್ ಆಫೀಸರರಿಗೆ ಹ್ಯಾಂಡ್ ಓವರ್ ಮಾಡುವಾಗ ಎಲ್ಲರ ಕಣ್ಣುಗಳು ಒದ್ದೆಯಾದವು.

 

ನಮ್ಮೂರಿನ ಗುಡ್ಡಗಳು ಕಥೆ ಹೇಳುತ್ತವೆ…

ಕಾಡುಗಳು ಇತಿಹಾಸ ಬಚ್ಚಿಟ್ಟಿವೆ…

ಎರೆಮಣ್ಣಿನ ಕನ್ನಡದ ಹೊಳೆ, ಹಳ್ಳ, ಹಳ್ಳಿ, ಹಳುವು, ಕಣಿವೆ, ಕೊನ್ನಾರುಗಳು ಅಸಂಖ್ಯ ರಹಸ್ಯ ಮುಚ್ಚಿಟ್ಟಿವೆ!

ಈ ಸತ್ಯ ನಾಲ್ವತ್ತು ವರ್ಷಗಳಾಚೆ ಪವಾಡ ಸದೃಶವಾಗಿ ನಡೆದು…. ಇಂದಿಗೂ ಹಚ್ಚಹಸಿರಾಗಿ ನೆನಪಾಗುತ್ತಿದೆ… ಯಾಕೆ ಗೊತ್ತೆ?

ಇಲಕಲ್ಲಿನ ಸುರಸುಂದರ ಮುರ್ತುಜಾ ಶಾಹ ಖಾದರಿ ದರ್ಗಾದ ದೊಡ್ಡ ಗುಮ್ಮಟ ಸುತ್ತು ಹತ್ತೂರುಗಳಿಗೆ ಕಾಣುವ ಕಮ್ಮಟ. ಬಯಲ ಶಾಂತಿ- ಬೇವಿನ ಮರಗಳ ಶೀತಲತೆ! ಈ ಪವಿತ್ರ ದರ್ಗಾದ ಗುಮ್ಮಟದ ಮೇಲೆ ಒಂದಲ್ಲ…. ಎರಡಲ್ಲ…. ಸಾವಿರಾರು ಪಾರಿವಾಳಗಳು ಇಂದಿಗೂ ನಿರಂತರ ಆಡುತ್ತವೆ, ಹಾಡುತ್ತವೆ, ಮಜಾಮಾಡುತ್ತವೆ!

ಈ ಬಾನಂಗಳದ ಹಕ್ಕಿಗಳ ಸುದ್ದಿ ಕೇಳಿ ಸಾವಿರಾರು ಜನ ಬೆಚ್ಚಿಬಿದ್ದರು! ವಿಚಿತ್ರ! ಆಕಾಶದಿಂದ ಹಾರಿಬಂದ ಆ ಹಕ್ಕಿಯೊಂದರ ಕಾಲಿನಲ್ಲಿ ಒಂದು ಉಂಗುರು ಇತ್ತು! ಎಲ್ಲಿಂದ ಬಂತು ಈ ಉಂಗುರದ ಹಕ್ಕಿ?

ಕ್ಷಣಾರ್ಧದಲ್ಲಿ ಸುದ್ದಿ ಹರಡಿತು… ದೇವಲೋಕದಿಂದ ಭೂಲೋಕಕ್ಕೆ ಇಳಿದು ಬಂತು ಹಕ್ಕಿ! ಅದರ ಕಾಲಲ್ಲಿ ದೇವರ ಸಂದೇಶವಿದೆ! ಅಸಂಖ್ಯ ಭಕ್ತರು ಹಕ್ಕಿಯ ದರ್ಶನ ಪಡೆಯಲು ನುಗ್ಗಿ ಬರತೊಡಗಿದರು! ಹಕ್ಕಿಯಾಯಿತು ಬಾನಂಗಳದಿAದ ಭುವನಕ್ಕೆ ಹಾರಿಬಂದ ಭಾಗ್ಯದ ದೇವತೆ!

ಆಗಲೇ ಪಕ್ಷಿಗಳ ಇತಿಹಾಸ… ಅವುಗಳ ಅಂರ‍್ರಾಷ್ಟಿçÃಯ ವಲಸೆಯ ರೋಮಾಂಚಕ ವೃತ್ತಾಂತದ ಬಗ್ಗೆ ಕುತೂಹಲದಿಂದ ಓದಿಕೊಂಡವ ನಾನು! ಲಂಡನ್ನಿನ ವರ್ಲ್ಡ್ ಅಟ್ಲಾಸಿನಲ್ಲಿ ಪಕ್ಷಿಗಳು ಪ್ರತಿವರ್ಷ ಭೂಮಿ- ಸಾಗರ- ಖಂಡಗಳನ್ನು ದಾಟಿ ವಲಸೆಹೋಗುವ ರೂಟಮ್ಯಾಪ ಇದ್ದು ಅದು ನನ್ನನ್ನು ಮೋಡಿಮಾಡಿತ್ತು. ಅಂದು ನನ್ನ ಜೀವನದ ಪ್ರತ್ಯಕ್ಷ ಅನುಭವ. ಎಲ್ಲರೂ ಹೇಳಿದರು… “ಸರ್… ದೇವಲೋಕದಿಂದ ಕೈಲಾಸದ ಹಕ್ಕಿ ಭೂಲೋಕಕ್ಕೆ ಬಂದಿದೆ. ಹೋಗಿ ದರ್ಶನ ತೊಗೊಳ್ರಿ…”

ತಕ್ಷಣ ನಾನು ಕುತೂಹಲದಿಂದ ಇಲಕಲ್ಲಿನ ಪೂರ್ವದಿಬ್ಬದ ಮೇಲಿರುವ ಆ ಭವ್ಯ ಪೂಜ್ಯ ಮುರ್ತೂಜಾ ಸಾಹೇಬ ತಾತನವರ ದರ್ಶನಕ್ಕೆ ಓಡಿಹೋದೆ. ಆ ದರ್ಗಾದ ಮುಲ್ಲಾಸಾಬಣ್ಣನಿಗೆ ನನ್ನ ಮೇಲೆ ಅಪಾರ ಪ್ರೀತಿ. ದರ್ಗಾದ ಕಣಕಣವನ್ನೂ ಆತ ನನಗೆ ವಿವರಿಸಿ ಹೇಳುತ್ತಿದ್ದ. ಶಾಂತ ಪ್ರಶಾಂತ ತಪೋವನವಾದ ಆ ದರ್ಗಾದ ಹೂದೋಟದೊಂದಿಗೆ ನಾನು ಎಷ್ಟೊಂದು ಹೊಂದಿಕೊAಡಿದ್ದೆನೆOದರೆ… ಒಮ್ಮೆ ನಾನು ಆ ದರ್ಗಾದ ಹಿಂದಿನ ಹಿತ್ತಲದ ಹಳೇಕಟ್ಟಿಗೆಯ ಬಾಗಿಲು ತೆರೆದು ಹೋಗುವಾಗ ಆ ಬಾಗಿಲಿನ ಮೇಲಿನ ಕೀಲದ ಕಿರಣಿಯ ಗುಂಡಿಯಲ್ಲಿದ್ದ ದೊಡ್ಡದೊಂದು ಹಾವು ನೇರವಾಗಿ ನನ್ನ ತಲೆಮೇಲೆ ಲ್ಯಾಂಡಿAಗ ಮಾಡಿ, ತಲೆಯಿಂದ ಹೆಗಲ ಮೇಲೆ ಇಳಿದು, ಹೆಗಲಮೇಲಿಂದ ನನ್ನ ಕೈಗುಂಟ ಮೆಲ್ಲನೆ ಇಳಿದು ಹರಿದು ಹೋದದ್ದು ನಾನು ಈ ಜೀವನದಲ್ಲಿ ಹೆಂಗ ಮರೆಯಲಿ?

ನಾನು ಹೋದತಕ್ಷಣ ಆ ಮುಲ್ಲಾಸಾಬಣ್ಣ ಆ ಪಾರಿವಾಳದ ಪಂಜರ ತಂದು ಮುಂದಿಟ್ಟ. “ನೋಡಿರಿ ಸ ರ‍್ರೇ… ದೇವರ ಪವಾಡವೋ ಏನೋ! ಎಂಥಾ ಅದ್ಭುತ!” ಅಂದ. ಆತ ತುಂಬಾತುAಬಾ ಭಾವಜೀವಿ… ಸಂತ. ಅವನ ನರನಾಡಿಗಳಲ್ಲಿ ದರ್ಗಾದ ಭಕ್ತಿ ತುಂಬಿತ್ತು. ಮೆಲ್ಲನೇ ಆ ಪಾರಿವಾಳವನ್ನು ಆ ಪಂಜರದಿAದ ಹೂವು ತೆಗೆದಂತೆ ತೆಗೆದು, ನನ್ನ ಮುಂದೆ ಹಿಡಿದ. ಎಲ್ಲರೂ ಕೈಮುಗಿದು ನಿಂತರು.

ಆ ಹಕ್ಕಿಯ ಕಾಲಲ್ಲಿ ಒಂದು ಉಂಗುರ ಇತ್ತು! ಪ್ಲಾಸ್ಟಿಕ್ ತರಹ ಇದ್ದ ಆ ಹಗುರ ಉಂಗುರವನ್ನು ಆತ ಭಗವಂತನನ್ನು ನೆನೆದು ಮೆಲ್ಲನೆ ಬಿಚ್ಚಿ ನನಗೆ ತೋರಿಸಿದ.

ಅಬ್ಬಬ್ಬಾ! ಅದ್ಭುತ! ಅತ್ಯದ್ಭುತ! ಆ ಉಂಗುರದಲ್ಲಿ ಜಪಾನೀ ಚಿತ್ರಲಿಪಿಯಲ್ಲಿ ಏನನ್ನೋ ಬರೆದಿದ್ದರು. ಆ ಅಕ್ಷರ ಸ್ಪಷ್ಟವಾಗಿತ್ತು. ನನಗೆ ಆ ಲಿಪಿ ಓದಲು ಬರತ್ತಿರಲಿಲ್ಲ. ನನ್ನ ಕುತೂಹಲಕ್ಕೆ ಕರದಂಟು ತಿನಿಸಿದಂತೆ ಆ ಜಪಾನಿ ಭಾಷೆಯ ಚಿತ್ರಲಿಪಿಯ ಕೆಳಗೆ ಸಣ್ಣದಾಗಿ ಇಂಗ್ಲೀಷಿನಲ್ಲಿ “ಕ್ಯೂಟೊ-70” ಅಂತ ಬರೆಯಲಾಗಿತ್ತು. ತಕ್ಷಣ ನಾನು ಜಾಗೃತನಾದೆ. ದೂರದ ಜಪಾನಿನ ವಾಣಿಜ್ಯನಗರಿ ಕ್ಯೂಟೋದಿಂದ ಈ ಹಕ್ಕಿ ಕನ್ನಡದ, ಬಾಗಲಕೋಟ ಜಿಲ್ಲೆಯ, ಕೃಷ್ಣಾ-ಮಲಪ್ರಭಾ ತೀರದ ಇಲಕಲ್ಲಿಗೆ ಹೇಗೆ ಬಂತು? ಪವಾಡಕ್ಕಿಂತಲೂ ದೊಡ್ಡ ಪವಾಡ ಬಾನಂಗಳದಿAದ ಹಾರಿಬಂದು ತೋರಿತ್ತು!

ತಕ್ಷಣ ನಾನು ಒಂದು ಜಾಣತನ ಮಾಡಿದೆ. ನನ್ನ ಕಿಸೆಯಿಂದ ಬಿಳಿಹಾಳಿ ತೆಗೆದು ಆ ಜಪಾನಿ ಭಾಷೆಯ ಚಿತ್ರಲಿಪಿಯನ್ನು ಅದು ಹೇಗಿತ್ತೋ ಹಾಗೆಯೇ ಕಾಪಿಮಾಡಿದೆ. ಅದರ ಕೆಳಗಿನ ಕ್ಯೂಟೊ-70 ಎಂಬ ಇಂಗ್ಲಿಷ್ ಬರಹವನ್ನೂ ಬರಕೊಂಡೆ.

ಆಯ್ತು! ಆದಿನ ಬೆಳತನಕ ನನಗೆ ನಿದ್ದಿ ಹತ್ತಲಿಲ್ಲ. ಆ ಹಕ್ಕಿ ಆಗಾಗ ನನ್ನ ಕನಸಿನಲ್ಲಿ ಬಂದು… “ಗೆಳೆಯಾ… ಈ ನಿನ್ನ ಬಯಲುಸೀಮೆಯ ಕನ್ನಡ ಎಂಥಾ ಚಂದ! ಇಲ್ಲಿಯ ಬಿಳಿಜೋಳದ ಬೆಳಸಿ, ಹಸೀಸೇಂಗಾ, ಹಸಿಕಡಲಿ ತಿನ್ನಲು ನನಗೆ ಬ್ಹಾಳ ಖುಶಿ ಗೆಳೆಯಾ!” ಎಂದಿತು.

ಮರುದಿವಸ ಬೆಳಿಗ್ಗೆ ಎದ್ದವನೇ ನಾನೊಂದು ಪತ್ರವನ್ನು …ನನ್ನ ಹುಚ್ಚುಗೇಡಿ ತಿಳಿಗೇಡಿ ಬುದ್ಧಿ ಉಪಯೋಗಿಸಿ; ದಿಲ್ಲಿಯ ಜಪಾನಿನ ಎಂಬೆಸಿಯ ಅಂಬ್ಯಾಸಿಡರನಿಗೆ ಬರೆದೆ. ಅವನಿಗೆ ಜಪಾನಿ ಭಾಷೆಯ ಚಿತ್ರಲಿಪಿ ಇರುವ ಪ್ಲಾಸ್ಟಿಕ್ ಕಾಲುಂಗುರದ ಪಾರಿವಾಳ ಇಲಕಲ್ಲಿನ ಪವಿತ್ರ ದರ್ಗಾದ ಗುಮ್ಮಟದ ಮೇಲೆ ಪತ್ತೇಯಾಗಿದೆ ಎಂದು ಬರೆದು; ಆ ಜಪಾನಿ ಚಿತ್ರಲಿಪಿ ನನಗೆ ಅರ್ಥವಾಗದಿದ್ದರೂ ಅದನ್ನು ಆ ಪತ್ರದಲ್ಲಿ ಇದ್ದಂತೆಯೇ ಕಾಪಿಮಾಡಿದೆ. ಅದರ ಕೆಳಗೆ “ಕ್ಯೂಟೋ-70” ಅಂತ ಇಂಗ್ಲಿಷಿನಲ್ಲಿ ಬರೆದೆ.

ಆಯ್ತು, ನನ್ನ ಕೆಲಸ ಮುಗಿಯಿತು ಅಂತ ನಾಲ್ಕುದಿನ ನಿದ್ದಿ ಮಾಡಿದೆ. ಆದರೆ ನನ್ನ ಫಜೀತಿ ಏನಾಯಿತು ಗೊತ್ತೇ? ಆ ಅಂಬ್ಯಾಸಿಡರ್ ಪುಣ್ಯಾತ್ಮಾ ಜಪಾನಿನ ಎಲ್ಲ ದಿನಪತ್ರಿಕೆಗಳಲ್ಲಿ, ಜಪಾನ ರೆಡಿಯೊ-ಟೀವಿಯಲ್ಲಿ ಹಾಗೂ ಜಪಾನ ದೇಶದ ಎಲ್ಲ ಸೈಂಟಿಫಿಕ್ ಮ್ಯಾಗ್ಝಿನ್‌ಗಳಲ್ಲಿ ಆ ನನ್ನ ಪತ್ರ ಪ್ರಚಾರಮಾಡಿಬಿಟ್ಟ! ಇಲಕಲ್ಲಿನ ಹಕ್ಕಿಯ ಸುದ್ದಿ ಜಪಾನಿನ ತುಂಬ ಧೂಂಧಾA ಹಬ್ಬಿ ಜಪಾನತುಂಬ ಅಲ್ಲೋಲ ಕಲ್ಲೋಲ ಮಾಡಿತು!

ಆಗ ಏನಾಯಿತು ಗೊತ್ತೇ? ಜಪಾನಿನಿಂದ ನನಗೆ ಪತ್ರಗಳು ಬರತೊಡಗಿದವು. ಒಂದು ಕುತೂಹಲದ ಅಂಶವೆAದರೆ ಪಕ್ಷಿಪ್ರಿಯಳಾದ ಒಬ್ಬ ಹುಡುಗಿ ಟೋಕಿಯೋದಿಂದ ನನಗೆ ನೇರವಾಗಿ ಒಂದು ಪತ್ರ ಬರೆದು, ಅದರಲ್ಲಿ ಆ ಹಕ್ಕಿಗೆ ಹಣ್ಣು ತಿನಿಸಬೇಕೆಂದು ಹೇಳಿ ಒಂದು ಡಾಲರ ನೋಟು ಇಟ್ಟು ಕಳಿಸಿದಳು! ಆ ಹುಡುಗಿಯ ಪತ್ರ ಓದಿ ನಾನು ಗದಗುಟ್ಟಿ ನಡುಗಿದೆ. ಮರುದಿನವೇ ಆ ಪಕ್ಷಿಯನ್ನು ಹಾರಿಬಿಟ್ಟ ಕ್ಯೂಟೋ ನಗರದ ಪಕ್ಷಿಸಂಘದವರು ನನಗೆ ವಾರ್ನಿಂಗ್ ಲೆಟರ್ ಬರೆದಂತೆ ಪತ್ರ ಬರೆದರು-

“ಗೆಳೆಯರೇ… ಆ ಪಾರಿವಾಳವನ್ನು ಹಾರಿಬಿಟ್ಟವರು ನಾವೇ, ಈಗ ಆ ಹಕ್ಕಿ ನಿಮ್ಮ ರಕ್ಷಣೆಯಲ್ಲಿರುವದರಿಂದ ಅದರ ರಕ್ಷಣೆ ಮಾಡುವ ಜವಾಬ್ದಾರಿ ಸಂಪೂರ್ಣ ನಿಮ್ಮದೇ ಆಗಿದೆ…”

ನಾನು ದಾರಿಗೆ ಹೋಗುವ ದೆವ್ವವನ್ನು ಮನೆಗೆ ಕರಕೊಂಡAತೆ ಆಯಿತು. ಥರಥರ ನಡುಗಿದೆ. ಆದರೆ ನನ್ನ ಹಣೇಬರಹ ಇಷ್ಟಕ್ಕೇ ನಿಲ್ಲಲಿಲ್ಲ. ಪೊಲೀಸರೆಂದರೆ ಅಂಜಿ ಅಡಗಿಕೊಳ್ಳುವ ನನ್ನ ಮನೆಗೆ ಬಾಗಲಕೋಟೆಯ ಡಿಸ್ಟಿçಕ್ಟ ಫಾರೆಸ್ಟ ಆಫೀಸರ್ ಹತ್ತುಜನ ಪೊಲೀಸರನ್ನು ಕರಕೊಂಡು, ನನ್ನ ಮನೆಮುಂದೆ ಜೀಪು ನಿಲ್ಲಿಸಿ, ಒಳಗೆ ಬಂದು ತೇಕುತ್ತ ಕಮಾಂಡ್ ಕೊಡುವ ಶೈಲಿಯಲ್ಲಿ ಹೇಳಿದ-

“ಎಲ್ಲಿ… ಎಲ್ಲಿ… ಆ ಹಕ್ಕಿ ಎಲ್ಲಿ…? ನಾನು ಈ ಜಿಲ್ಲೆಯ ಫಾರೆಸ್ಟ ಆಫೀಸರ್. ಇಲ್ಲಿಯ ಪಶು- ಪಕ್ಷಿ- ಪ್ರಾಣಿ ನನ್ನ ಕಮಾಂಡ್ ಮೀರತಕ್ಕದ್ದಲ್ಲ. ಎಲ್ಲಿ… ಎಲ್ಲಿ… ಆ ಹಕ್ಕಿ ಎಲ್ಲಿಟ್ಟೀರಿ…? ನನಗೆ ದಿಲ್ಲಿಯಿಂದ ಅರ್ಜಂಟ್ ಆರ್ಡರ ಬಂದಿದೆ… ದಿಲ್ಲಿಯವರಿಗೆ ಜಪಾನ ಸರಕಾರದಿಂದ ಆರ್ಡರ ಬಂದಿದೆ. ಇದು ತುಂಬಾ ಸೂಕ್ಷö್ಮವಾದ ಇಂಟನ್ಯಾಶನಲ್ ಕೇಸ್… ಗೊತ್ತೇ?” ಅಂದ. ಅವನ ಗಂಭೀರ ಮಾತಿಗೆ ನಾನು ಅಂಜಿ ಚಡ್ಡಿಯಲ್ಲೇ ಹನಿಹನಿ ಕಾರಂಜಿ ಬಿಟ್ಟೆ!

ನಮ್ಮ ಮನೆಬಾಗಿಲಿಗೆ ಅವನು ಕರೆತಂದ ಫಾರೆಸ್ಟ್ ಗಾರ್ಡುಗಳು ಸಮವಸ್ತçದಲ್ಲಿ ಹಾಜರ ಆಗಿ ನಿಂತಿದ್ದರು. ನಮ್ಮ ಓಣಿಯವರು ನಾನೇನಾದರೂ ಕಳವು ಮಾಡಿದ ಪ್ರಕರಣದಲ್ಲಿ ಸಿಕ್ಕುಹಾಕಿಕೊಂಡೆನೋ ಎಂದು ಕುತೂಹಲಿಗಳಾಗಿ ನಿಂತಿದ್ದರು.

ಅನಿವಾರ್ಯವಾಗಿ ನಾನು ಅವನು ತಂದ ಜೀಪಿನಲ್ಲೇ ಗುಬ್ಬೀಮರಿಯಾಗಿ ಕುಂತು ದರ್ಗಾದ ಗುಮ್ಮಟಕ್ಕೆ ಹೋದೆ. ಆತ ದರ್ಗಾದ ಭಕ್ತರಿಗೆ ಆ ಪಕ್ಷಿ ತನ್ನ ವಶಕ್ಕೆ ಕೊಡಬೇಕೆಂದು ವಾದಿಸಿದ. ದರ್ಗಾದ ಭಕ್ತರು… “ಆ ಹಕ್ಕಿ ನಮ್ಮಬಳಿ ಬಂದಿದೆ… ನಾವು ಆ ಹಕ್ಕಿ ಕೊಡುವದಿಲ್ಲಾ…” ಅಂತ ಖಡಾಖಂಡಿತ ಹೇಳಿದರು. ದರ್ಗಾ ಕಮೀಟಿಯ ಚೇರಮನ್ನರು ಹಿಂದುಗಳಾದರೂ ಆ ದರ್ಗಾದ ಪರಮ ಭಕ್ತರು. ಅವರಿಗೂ ತಮ್ಮ ಹಕ್ಕಿಯನ್ನು ಸರಕಾರದ ವಶಕ್ಕೆ ಕೊಡಲು ಮನಸು ಇರಲಿಲ್ಲ. ಕಡೆಗೆ ನಾನೇ ಕಾಯಿದೇ ಪಂಡಿತನAತೆ ಪೋಜು ಕೊಟ್ಟು, ನನಗೆ ಚುಂಗುಚೂರು ಗೊತ್ತಿರದಿದ್ದರೂ ಅವರಿಗೆ ದೊಡ್ಡ ಪಂಡಿತನAತೆ ಹೇಳಿದೆ… “ಚೇರಮನ್ನರೇ… ಇದು ಫಾರೆಸ್ಟ ಆಫೀಸರ್ ಪ್ರಾಪರ್ಟಿ. ಅದು ಅವರ ಲೀಗಲ್ ಹಕ್ಕು. ನಿಮಗೆ ಹಕ್ಕಿ ಮೇಲೆ ಪ್ರೀತಿ ಇದ್ದರೆ ಅದಕ್ಕೆ ಯಾಡ್ಡು ದ್ರಾಕ್ಷಿಹಣ್ಣು ತಿನಿಸ್ರೀ. ಫಾರೆಸ್ಟ ಪ್ರಾಣಿ-ಪಕ್ಷಿಗಳನ್ನು ಪರವಾನಿಗೆ ಇಲ್ಲದೇ ಇಟ್ಟುಕೊಳ್ಳುವದು ಇಲ್ಲೀಗಲ್….”

ಮಾನ್ಯ ಚೇರಮನ್ನರು ತುಂಬಾ ಧರ್ಮಬೀರುಗಳು. ನನಗೆ ಮೊದಲಿನಿಂದಲೂ ಪರಿಚಯ. ನನ್ನ ಮಾತಿಗೆ ಒಪ್ಪಿದರು. ಆ ಆಫೀಸರ್ ಇಷ್ಟಕ್ಕೇ ಬಿಡಲಿಲ್ಲ:

“ಈ ಪಕ್ಷಿ ಇದೇ ಪಂಜರದಲ್ಲಿ ಈ ರಾತ್ರಿ ಇಲ್ಲಿಯೇ ಇರಲಿ. ನಾಳೆ ನಾನು ವಿಜಾಪುರದಿಂದ ಒಂದು ಸ್ಪೇಶಲ್ ಪಂಜರದೊAದಿಗೆ ಬರುವೆ. ಅಲ್ಲದೇ ಜಿಲ್ಲೆಯ ಪಕ್ಷಿತಜ್ಞ ಸರ್ಜನ್ ಕರಕೊಂಡುಬರುವೆ. ಆ ಸರ್ಜನ್ ಈ ಪಕ್ಷಿಯ ಹಿಕ್ಕಿ- ರಕ್ತ- ಮೂತ್ರಗಳ ಮೆಡಿಕಲ್ ಟೆಸ್ಟ್ ಮಾಡುತ್ತಾನೆ. ನಂತರ ಇದನ್ನು ಜೀಪಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಾಗಿಸುತ್ತೇವೆ. ನಂತರ ಭಾರತ ಸರಕಾರ ಇದನ್ನು ಜಪಾನ ಸರಕಾರಕ್ಕೆ ಹ್ಯಾಂಡ ಓವರ್ ಮಾಡುತ್ತದೆ. ಆನಂತರ ಜಪಾನ ಸರಕಾರದವರು ಇದನ್ನು ಸ್ಪೇಶಲ್ ವಿಮಾನಿನಲ್ಲಿ ಟೋಕಿಯೋಕ್ಕೆ ಒಯ್ದು, ಅಲ್ಲಿಂದ ಕ್ಯೂಟೋದ ಆ ಪಕ್ಷಿಸಂಘಕ್ಕೇ ಹ್ಯಾಂಡೋವರ್ ಮಾಡುತ್ತಾರೆ….”

ನಾವೆಲ್ಲರೂ ಆ ಮಾತು ಕೇಳಿ ಪ್ಯಾಪ್ಯಾ ಅಂದೆವು! ಇದು ದೇವಲೋಕದ ಹಕ್ಕಿಯೇ ನಿಜ ಅಂತ ನಮಗೆ ಖಾತ್ರಿ ಆಯಿತು. ಯಾಕೆಂದರೆ ಓಡಾಡಲು ಚಕ್ಕಡಿಯೂ ಇಲ್ಲದ ನಮಗೆ ಇದರ ವಿಮಾನಿನಲ್ಲಿ ಪಯಣಿಸುವ ಯೋಗ ಅಚ್ಚರಿ ತರಿಸಿತು!

ಮರುದಿನ ಆ ಫಾರೆಸ್ಟ ಆಫೀಸರ ಜಿಲ್ಲಾ ಪಕ್ಷಿಸರ್ಜನ್‌ನೊಂದಿಗೆ, ಫಾರೆಸ್ಟ ಗಾರ್ಡಗಳೊಂದಿಗೆ ಬಂದ. ಅದರ ಮೆಡಿಕಲ್ ಟೆಸ್ಟ್ ಆತು. ಆ ಸರ್ಜನ್ ದಿಲ್ಲಿಗೆ ಅದನ್ನು ಸಾಗಿಸಲು ಯಸ್ ರಿಪೋರ್ಟು ಕೊಟ್ಟ, ಕಡೆಗೆ ಆ ಪಕ್ಷಿಯನ್ನು ದರ್ಗಾ ಕಮೀಟಿಯವರು ಫಾರೆಸ್ಟ ಗಾರ್ಡ ಅವರಿಗೆ ಹ್ಯಾಂಡ ಓವರ್ ಮಾಡುವಾಗ ಎಲ್ಲರ ಕಣ್ಣುಗಳು ಒದ್ದೆಯಾದವು. ನಮ್ಮ ಬಳಗದ ಗೆಳೆಯನನ್ನು ಬೀಳ್ಕೊಡುವ ವಿಯೋಗ. ನಮ್ಮ ಫೋಟೊಗ್ರಾಫರ್ ಆ ಪಕ್ಷಿಯನ್ನು ಹಸ್ತಾಂತರಿಸುವ ಫೋಟೊ ಹೊಡಕೊಂಡ. ಆ ಸುದ್ದಿ ಸಂಯುಕ್ತ ಕರ್ನಾಟಕ ಪತ್ರಿಕೆ, ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಫೋಟೊಸಹಿತ ಪ್ರಕಟವಾದವು.

ಆ ಪಕ್ಷಿ ಕನ್ನಡ ನಾಡಿನ ಬೆಲ್ಲ-ಬೆಳಸಿ- ಬೆಳದಿಂಗಳ ಸವಿಯುಂಡು ಜಪಾನಿನತ್ತ ವಿಮಾನದಲ್ಲಿ ಪಯಣಿಸಿತು!!

ನನ್ನ ಹೆಂಡತಿ ಹೇಳಿದಳು- “ನೋಡ್ರಿ… ನಮ್ಮ ದೇಶದಾಗ ದಾರಿಮ್ಯಾಲೆ ಮನಿಸ್ಯಾ ದಿಕ್ಕಿಲ್ಲರ‍್ದ ಸತ್ರೂ ಯಾರೂ ಯಾಕಂತ ಕೇಳಂಗಿಲ್ಲಾ. ಆ ದೇಶದಾಗ ಹುಟ್ಟಿದ ಒಂದು ಹಕ್ಕಿ ಸಲುವಾಗಿ ಎಷ್ಟ ಕಾಳಜಿ ತೊಗೊಂತಾರ ನೋಡ್ರಿ…”

Leave a Reply

Your email address will not be published.