ಜಾಗತಿಕ ನೆಲೆಯ ತಾತ್ವಿಕತೆ ಅಗತ್ಯವಿದೆ

ಇಡೀ ಜಗತ್ತಿನಲ್ಲಿಯೇ ಬಲಪಂಥೀಯ ಚಿಂತನೆ ಹಾಗೂ ರಾಜಕೀಯಗಳು ಪ್ರಬಲವಾಗುತ್ತಿರುವ ಸಂದರ್ಭದಲ್ಲಿಟ್ಟು ನಮ್ಮ ದಲಿತ ಚಿಂತನೆಯ ಓರೆಕೋರೆಗಳನ್ನು ಚರ್ಚಿಸಬೇಕು. ದಲಿತ ಚಳವಳಿಯ ನಾಯಕರನ್ನು ದೂಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ದಲಿತ ಚಳವಳಿ ಮಾತ್ರವಲ್ಲ ಎಲ್ಲಾ ಪ್ರಜಾಪ್ರಭುತ್ವವಾದಿ ಚಳವಳಿಗಳು ಸೋಲುತ್ತಿವೆ ಎನ್ನುವುದು ನಮ್ಮ ಮರುಚಿಂತನೆಯ ಆರಂಭದ ಮೆಟ್ಟಿಲಾಗಿರಬೇಕು. 

ಸ್ವಾತಂತ್ರ್ಯದ ನಂತರ ಅನೇಕ ದಶಕಗಳವರೆಗೆ ಅಂಬೇಡ್ಕರ್ ಮತ್ತು ಅವರ ಚಿಂತನೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಮಹಾರಾಷ್ಟ್ರದಲ್ಲಿ ಕೂಡ ದಲಿತರಿಗೆ ಭೂಮಿ ಹಂಚಿಕೆಯನ್ನು ಒತ್ತಾಯಿಸಿ ನಡೆದ ಚಳವಳಿಯನ್ನು ಬಿಟ್ಟರೆ ಅಂಬೇಡ್ಕರ್ ಚಿಂತನೆಯನ್ನು ಬೆಳೆಸುವ ಪ್ರಯತ್ನಗಳು ನಡೆಯಲಿಲ್ಲ. ಹೀಗಾಗಿ ಅಂಬೇಡ್ಕರ್ ಪೂರ್ವ ಕಾಲದಿಂದಲೇ ಆರಂಭವಾಗಿದ್ದ ಸತ್ಯಶೋಧಕ ಚಳವಳಿ, ಬ್ರಾಹ್ಮಣವಿರೋಧಿ ಹೋರಾಟಗಳು ಇವುಗಳ ದೊಡ್ಡ ಪರಂಪರೆಯೊಂದು ಮಸಕಾಗಿಬಿಟ್ಟಿತು. ಅಂದು ಬಲಿಷ್ಠವಾಗಿದ್ದ ಕಾಂಗ್ರೆಸ್ ರಾಜಕೀಯವು ದಲಿತ ನಾಯಕರನ್ನು, ದಲಿತ ಹೋರಾಟಗಳನ್ನು ನುಂಗಿಹಾಕಿತು. ಈ ಸ್ಥಿತಿಯ ವಿರುದ್ಧವೇ 1970ರ ದಶಕದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಆರಂಭವಾಯಿತು. ಅದು ಆಧುನಿಕ ಭಾರತದ ಚರಿತ್ರೆಯಲ್ಲಿ ನಡೆದ ಅತ್ಯಂತ ಅರ್ಥಪೂರ್ಣ ಚಳವಳಿ. ಅದ್ಭುತವಾದ ಕ್ರಿಯಾಶೀಲತೆ ಹಾಗೂ ಹೋರಾಟದ ಕಿಚ್ಚು, ಸಾಹಿತ್ಯ ಸಂಸ್ಕೃತಿಗಳ ಆಮೂಲಾಗ್ರ ಮರುರಚನೆ ಇವು ಈ ಚಳವಳಿಯ ಶಕ್ತಿಯಾಗಿದ್ದವು.

ಅಂಬೇಡ್ಕರ್ ಚಿಂತನೆಗೆ ರಾಜಕೀಯ ಹೋರಾಟದ ಸ್ವರೂಪವನ್ನು ತಂದುಕೊಟ್ಟರೂ ಅದರೊಂದಿಗೆ ಆಳವಾದ ಸಂವಾದ ನಡೆಸಿತು ಎಂದು ಅನ್ನಿಸುವುದಿಲ್ಲ ಮತ್ತು ದೀರ್ಘಕಾಲೀನ ಹೋರಾಟದ ತಳಹದಿಯಾಗಬಲ್ಲ ಕ್ರಿಯೆಗಳನ್ನೂ ಅದು ರೂಪಿಸಿಕೊಳ್ಳಲಿಲ್ಲ. ಚಿಂತಕ ಗ್ರಾಮ್ಶಿಯ ಮಾತಿನಲ್ಲಿ ಹೇಳುವುದಾದರೆ ಸುಸ್ಥಿರವಾದ ಬಲಶಾಲಿ ದಲಿತ ಹೋರಾಟಕ್ಕೆ ಬೇಕಾಗಿರುವುದು ಶಿಕ್ಷಣ, ರಾಜಕೀಯ, ಚಿಂತನೆ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲಿ ದಲಿತಪರವಾದ ಸಂಕಥನಗಳ ಮೂಲಕ ಸಿದ್ಧಾಂತಗಳ ಮೂಲಕ ಬದಲಾವಣೆಗೆ ಪೂರಕವಾದ ಸ್ಥಿತಿಯನ್ನು ನಿರ್ಮಿಸುವುದಾಗಿದೆ. ದಲಿತ ಪ್ಯಾಂಥರ್ಸ್ ಚಳವಳಿಗೆ ಇದು ಸಾಧ್ಯವಾಗಲಿಲ್ಲ. ಹೀಗಾಗಿಯೇ ಅದು ನಾಯಕ ಕೇಂದ್ರಿತವಾಗಿಬಿಟ್ಟು ನಾಯಕರ ಸೋಲಿನೊಂದಿಗೆ ತಾನೂ ಸೋತುಹೋಯಿತು.

ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಾಮಥ್ರ್ಯವಂತೂ ಹೋಲಿಕೆಯೇ ಇಲ್ಲದಷ್ಟು ಪ್ರಬಲವಾಗಿತ್ತು. ಆದರೆ ಕ್ರಮೇಣವಾಗಿ ಈ ಚಳವಳಿ ತನ್ನ ಚಿಂತನೆಯ ವಿಸ್ತಾರವನ್ನು ಕಳೆದುಕೊಂಡು ತನ್ನನ್ನು ಕೇವಲ ಒಂದು ಒತ್ತಡ ಗುಂಪಿನ ಮಟ್ಟಕ್ಕೆ ತಂದುಕೊಂಡಿತು. ಅಂಬೇಡ್ಕರ್ ಚಿಂತನೆಯ ಮೂಲ ಆಧಾರಗಳಾದ ಹಿಂದೂ ಧರ್ಮದ ತಿರಸ್ಕರಣ ಹಾಗೂ ಜಾತಿವಿನಾಶಗಳನ್ನು ಚಳವಳಿ ಮರೆತುಬಿಟ್ಟಿತು.

ಕರ್ನಾಟಕದ ದಲಿತ ಚಳವಳಿಯು ಅಸಾಮಾನ್ಯವಾದ ಚಳವಳಿ. ಆರಂಭದ ಕಾಲದಿಂದಲೂ ಅದು ಜಾತಿ ವಿನಾಶ, ಭೂಮಿಯ ಪ್ರಶ್ನೆ ಇತರ ಪ್ರಗತಿಪರ ಹೋರಾಟಗಳೊಂದಿಗೆ ಬಾಂಧವ್ಯ -ಇವುಗಳನ್ನು ಮುಖ್ಯವಾಗಿರಿಸಿಕೊಂಡಿತು. ಹೀಗಾಗಿಯೇ ಇಲ್ಲಿ ದಲಿತ ಹೋರಾಟಗಳಿಗೆ ಇಡೀ ಸಮಾಜದ ಹೋರಾಟಗಳಾಗುವ ಸಾಧ್ಯತೆ ಇತ್ತು. ಅಂಬೇಡ್ಕರ್ ಚಿಂತನೆಯನ್ನು ಸಮಕಾಲೀನ ಸಂದರ್ಭದ ಅವಶ್ಯಕತೆಗಳಿಗೆ ತಕ್ಕಹಾಗೆ ನಿರೂಪಿಸುವ ಪ್ರತಿಭೆಯುಳ್ಳ ಬಿ.ಕೃಷ್ಣಪ್ಪ ಹಾಗೂ ದೇವನೂರ ಮಹಾದೇವರಂಥ ಚಿಂತಕರು ಈ ಚಳವಳಿಯಲ್ಲಿದ್ದರು. ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಾಮಥ್ರ್ಯವಂತೂ ಹೋಲಿಕೆಯೇ ಇಲ್ಲದಷ್ಟು ಪ್ರಬಲವಾಗಿತ್ತು. ಆದರೆ ಕ್ರಮೇಣವಾಗಿ ಈ ಚಳವಳಿ ತನ್ನ ಚಿಂತನೆಯ ವಿಸ್ತಾರವನ್ನು ಕಳೆದುಕೊಂಡು ತನ್ನನ್ನು ಕೇವಲ ಒಂದು ಒತ್ತಡ ಗುಂಪಿನ ಮಟ್ಟಕ್ಕೆ ತಂದುಕೊಂಡಿತು. ಅಂಬೇಡ್ಕರ್ ಚಿಂತನೆಯ ಮೂಲ ಆಧಾರಗಳಾದ ಹಿಂದೂ ಧರ್ಮದ ತಿರಸ್ಕರಣ ಹಾಗೂ ಜಾತಿವಿನಾಶಗಳನ್ನು ಚಳವಳಿ ಮರೆತುಬಿಟ್ಟಿತು. ಹೀಗಾಗಿ ಮೀಸಲಾತಿಯ ಹೊರತಾಗಿ ಇನ್ನಾವ ಯೋಜನೆಯೂ ಉಳಿಯಲಿಲ್ಲ.

ಭಾರತೀಯ ಮಟ್ಟದಲ್ಲಿ ಕಳೆದ ಕೆಲವು ದಶಕಗಳಲ್ಲಿ ಅಂಬೇಡ್ಕರ್ ಚಿಂತನೆಯ ಚರ್ಚೆ ಹಾಗೂ ಮರುನಿರೂಪಣೆಗಳು ಅಗಾಧವಾಗಿ ಬೆಳೆದಿವೆ. ಅಮೂಲ್ಯವಾದ ಸಂಶೋಧನೆಗಳು ನಡೆದಿವೆ. ಆದರೆ ಇದಕ್ಕೆ ಕರ್ನಾಟಕದ ಕೊಡುಗೆ ಹೆಚ್ಚೇನು ಇಲ್ಲ. ಅಲ್ಲಲ್ಲಿ ಚದುರಿದಂತೆ ಒಂದಿಷ್ಟು ಚರ್ಚೆಗಳ ನಡೆಯುತ್ತಿವೆ. ‘ಸಂವಾದ’ ಪತ್ರಿಕೆಯ ಹೊರತಾಗಿ ಹೊಸ ಚಿಂತನೆಗೆ ಮಾಧ್ಯಮಗಳೂ ಇಲ್ಲದಂತಾಗಿದೆ. ಇನ್ನು ಸಂಘಟನೆಯ ಮಟ್ಟದಲ್ಲಿ ಹೇಳುವುದಕ್ಕೆ ಏನೂ ಇಲ್ಲ. ಕರ್ನಾಟಕದ ದಲಿತ ಹೋರಾಟಗಳ ಆರಂಭಕಾಲದ ಶಕ್ತಿ ಇದ್ದದ್ದು ಅವುಗಳ ವಿಸ್ತಾರದಲ್ಲಿ. ಅವು ಇಡೀ ಸಮಾಜದ ಅನೇಕ ಅಸಮಾನತೆಗಳ ವಿರುದ್ಧ ತಮ್ಮನ್ನು ನಿರೂಪಿಸಿಕೊಂಡಿದ್ದವು.

ವಿಪರ್ಯಾಸವೆಂದರೆ ಅಂಬೇಡ್ಕರ್ ಚಿಂತನೆಯ ವೈಶಾಲ್ಯ ಮತ್ತು ಸಮಗ್ರತೆಯ ಅರಿವು ಜಗತ್ತಿನಲ್ಲಿಯೆ ಅಗಾಧವಾಗಿ ಬೆಳೆಯುತ್ತಿರುವಾಗ ಕರ್ನಾಟಕದ ದಲಿತ ಚಿಂತನೆ ವಿರುದ್ಧ ದೆಸೆಯಲ್ಲಿ ಸಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ದಲಿತ ಸಂಘಟನೆಗಳು ಎಷ್ಟು ಸಂಕುಚಿತಗೊಂಡಿವೆಯೆಂದರೆ ಪರಿಸರ ಹೋರಾಟಗಳು, ಜಾಗತೀಕರಣದ ವಿರುದ್ಧದ ಹೋರಾಟಗಳು, ಕೋಮುವಾದದ ವಿರುದ್ಧದ ಹೋರಾಟಗಳು ದಲಿತ ಹೋರಾಟಗಳೇ ಅಲ್ಲವೆನ್ನುವ ಹಾಗೆ ಅಪಾಯಕಾರಿ ಬೆಳವಣಿಗೆಗಳಾಗಿವೆ. ಅದೇ ರೀತಿ ಭಾಷೆಯ ಬಗ್ಗೆ, ಕಲಿಕೆಯ ಮಾಧ್ಯಮದ ಬಗ್ಗೆ ಕೂಡಾ. ಇದರ ಪರಿಣಾಮವಾಗಿ ದಲಿತ ನೋಟಕ್ರಮವೊಂದು (Perspective) ಇಂದು ಕರ್ನಾ ಟಕದ ಚಿಂತನೆಯಲ್ಲೂ ಇಲ್ಲ, ರಾಜಕೀಯದಲ್ಲಿಯೂ ಇಲ್ಲ. ವಿಪರ್ಯಾಸವೆಂದರೆ ಅಂಬೇಡ್ಕರ್ ಚಿಂತನೆಯ ವೈಶಾಲ್ಯ ಮತ್ತು ಸಮಗ್ರತೆಯ ಅರಿವು ಜಗತ್ತಿನಲ್ಲಿಯೆ ಅಗಾಧವಾಗಿ ಬೆಳೆಯುತ್ತಿರುವಾಗ ಕರ್ನಾಟಕದ ದಲಿತ ಚಿಂತನೆ ವಿರುದ್ಧ ದೆಸೆಯಲ್ಲಿ ಸಾಗುತ್ತಿದೆ. ಹೀಗಾಗಿ ಇಂದಿನ ಸಂದರ್ಭದಲ್ಲಿ ಜಾತಿವ್ಯವಸ್ಥೆಯು ಪಡೆದುಕೊಂಡಿರುವ ಸ್ವರೂಪ, ಜಾಗತೀಕರಣದಿಂದಾಗಿ ದಲಿತ ಸಮುದಾಯಗಳು ವಿನಾಶವಾಗುತ್ತಿರುವುದರ ಬಗ್ಗೆ ತುರ್ತಾಗಿ ಆಗಬೇಕಾದ ಚಿಂತನೆ ಹಾಗೂ ಕ್ರಿಯೆಗಳು ಆಗುತ್ತಿಲ್ಲ.

ಇದು ಎಂಥ ದುರಂತವೆಂದರೆ ಯೋಚಿಸಲೂ ಭೀಕರವಾಗಿದೆ. ಭಾರತದಲ್ಲಿ ಸದ್ಯದ ಪರಿಸ್ಥಿತಿಯೆಂದರೆ ದಲಿತ, ಮುಸ್ಲಿಮ್ ದ್ವೇಷಿಯಾದ ಮನುವಾದಿ ಚಿಂತನೆಯ ಪ್ರತಿನಿಧಿಯಾದ ಬಲಪಂಥೀಯ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಭಾರತದ ಬಂಡವಾಳಶಾಹಿಯ ಜೊತೆಗೆ ಅತ್ಯಂತ ಪ್ರಬಲವಾದ ಹೊಂದಾಣಿಕೆ ಮಾಡಿಕೊಂಡಿವೆ. ಆಧುನಿಕ ಬಂಡವಾಳಶಾಹಿಯು ಅಪಾರ ಹಣ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮಾಧ್ಯಮಗಳು ಇವುಗಳ ಮೇಲಿನ ತನ್ನ ಸಂಪೂರ್ಣ ಹಿಡಿತದಿಂದ ಬಲಪಂಥೀಯ ರಾಜಕೀಯಕ್ಕೆ ಚುನಾವಣೆಯಲ್ಲಿ ಅಪೂರ್ವವಾದ ವಿಜಯವನ್ನು ತಂದುಕೊಟ್ಟಿದೆ. ಅಂಬೇಡ್ಕರ್ ಕರಾರುವಾಕ್ಕಾಗಿ ವಿವ ರಿಸಿದಂತೆ ಭಾರತೀಯ ಬಂಡವಾಳಶಾಹಿಗೆ ಪಶ್ಚಿಮದ ಬಂಡವಾಳಶಾಹಿಯ “ಸೆಕ್ಯೂಲರ್” ಸ್ವಭಾವವೇ ಇಲ್ಲ. ಅದು ಜಾತಿವ್ಯವಸ್ಥೆ, ದಲಿತ-ಮುಸ್ಲಿಮ್ ದ್ವೇಷ, ಆಕ್ರಮಣಶಾಲಿ ಹಿಂದುತ್ವವನ್ನು ಸಂಪೂರ್ಣವಾಗಿ ಸ್ವೀಕರಿಸಿದ ಬನಿಯಾಗಳ ಹಿಡಿತದಲ್ಲಿದೆ. ಇದರ ಪರಿಣಾಮಗಳು ಹೀಗಿವೆ:

ಇನ್ನು ಅಧಿಕಾರಶಾಹಿಯಲ್ಲಿ ದಲಿತರಿಗೆ ಅವಕಾಶಗಳು ಇರುವುದಿಲ್ಲ. ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಮೀಸಲಾತಿ ತರುವುದರ ಮುಖಾಂತರ ದಲಿತ ಯುವಕರ ಅವಕಾಶಗಳನ್ನು ಮುಗಿಸಿಬಿಡಲಾಗುತ್ತಿದೆ. ಈಗಾಗಲೇ ಕೇಂದ್ರ ಸರಕಾರ, ಯುಜಿಸಿಗಳಿಂದ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಎಲ್ಲಾ ಖಾಲಿ ಹುದ್ದೆಗಳನ್ನು ಕೆಲವೇ ತಿಂಗಳುಗಳಲ್ಲಿ ಭರ್ತಿಮಾಡಬೇಕೆಂಬ ಆದೇಶಗಳು ಬಂದಿವೆ.

1. ಖಾಸಗೀಕರಣದಿಂದಾಗಿ ಮೀಸಲಾತಿಯು ಅಪ್ರಸ್ತುತವಾಗಿದೆ. ಉದ್ಯೋಗಗಳೇ ಇಲ್ಲದಂತೆ ಮಾಡಿ ಮೀಸಲಾತಿಯು ನಿರುಪಯುಕ್ತವಾಗುವಂತೆ ಮಾಡಲಾಗುತ್ತಿದೆ. ಅಲ್ಲದೆ ತಮ್ಮ ನಿರುದ್ಯೋಗಕ್ಕೆ ದಲಿತ ಮೀಸಲಾತಿಯೇ ಕಾರಣವೆನ್ನುವಂತೆ ಬಿಂಬಿಸಿ ಮಧ್ಯಮ ವರ್ಗದ ಯುವಜನರನ್ನು ದಲಿತ ವಿರೋಧಿಗಳನ್ನಾಗಿ ಪರಿವರ್ತಿಸಲಾಗಿದೆ. ಇಂದು ಕೆಲವು ಸರಕಾರಿ ಕಾಲೇಜುಗಳನ್ನು ಬಿಟ್ಟರೆ ಇನ್ನಾವುದೇ ಶಿಕ್ಷಣ ಸಂಸ್ಥೆಯಲ್ಲಿ ಮೀಸಲಾತಿಯ ಪರವಾಗಿ ಮಾತನಾಡುವುದೇ ಅಸಾಧ್ಯವಾಗಿದೆ.

2. ಹುಸಿರಾಷ್ಟ್ರೀಯತೆ ಹಾಗೂ ಹಿಂದುತ್ವದ ಮೊದಲ ಬಲಿಪಶುಗಳು ದಲಿತ ಯುವಜನತೆ ಹಾಗೂ ದಲಿತರಲ್ಲೇ ಹಿಂದುಳಿದ ಸಮುದಾಯಗಳೇ ಆಗುತ್ತವೆ ಎನ್ನುವುದನ್ನು ಇಲ್ಲಿಯ ದಲಿತ ಚಿಂತನೆ ಗ್ರಹಿಸಲೇ ಇಲ್ಲ. ಹೀಗಾಗಿ ಏನೇ ಇದ್ದರೂ ಮೇಲ್ಜಾತಿಯವರು ಮಾತ್ರ ಬಲಪಂಥೀಯರ ಬೆಂಬಲಿಗರಾಗಿದ್ದಾರೆ ಎನ್ನುವ ಭ್ರಮೆಯಲ್ಲಿ ದಲಿತ ಚಿಂತನೆ ದುರಂತಕಾರಿ ತಪ್ಪನ್ನು ಮಾಡಿತು.

3. ವೈಚಾರಿಕವಾಗಿ ಈಗಲೂ ಗಟ್ಟಿಯಾಗಿರುವ ಕೆಲವು ಪತ್ರಿಕೆಗಳ ವಸ್ತುನಿಷ್ಠ ವರದಿಗಳಿಂದ ನಾನಂತೂ ತುಂಬಾ ಆತಂಕಿತನಾಗಿದ್ದೇನೆ. ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು ಕಡಿಮೆಮಾಡಿ ನೇರ ನೇಮಕಾತಿಗಳ ಮೂಲಕ ಬ್ರಾಹ್ಮಣ ಬುದ್ಧಿಯುಳ್ಳ ಬಂಡವಾಳಶಾಹಿ ಪರವಾಗಿರುವ ಖಾಸಗಿ ಕ್ಷೇತ್ರಗಳಿಂದ ಅಧಿಕಾರಿಗಳನ್ನು ತರಲಾಗುತ್ತಿದೆ. ಇನ್ನು ಅಧಿಕಾರಶಾಹಿಯಲ್ಲಿ ದಲಿತರಿಗೆ ಅವಕಾಶಗಳು ಇರುವುದಿಲ್ಲ. ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಮೀಸಲಾತಿ ತರುವುದರ ಮುಖಾಂತರ ದಲಿತ ಯುವಕರ ಅವಕಾಶಗಳನ್ನು ಮುಗಿಸಿಬಿಡಲಾಗುತ್ತಿದೆ. ಈಗಾಗಲೇ ಕೇಂದ್ರ ಸರಕಾರ, ಯುಜಿಸಿಗಳಿಂದ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಎಲ್ಲಾ ಖಾಲಿ ಹುದ್ದೆಗಳನ್ನು ಕೆಲವೇ ತಿಂಗಳುಗಳಲ್ಲಿ ಭರ್ತಿಮಾಡಬೇಕೆಂಬ ಆದೇಶಗಳು ಬಂದಿವೆ. ಅಂದರೆ ಇನ್ನು ವಿದ್ಯಾಸಂಸ್ಥೆಗಳಲ್ಲಿ ಯಾವ ಧೋರಣೆಯ ಶಿಕ್ಷಕರು ನೇಮಕ ವಾಗುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಈಗಾಗಲೇ ಜೆ.ಎನ್.ಯು ಸೇರಿದಂತೆ ಪ್ರಜ್ಞಾವಂತ ಶಿಕ್ಷಣ ಸಂಸ್ಥೆಗಳಲ್ಲಿ ಆರ್.ಎಸ್.ಎಸ್. ಮನೋಭಾವದ ಕುಲಪತಿಗಳನ್ನು ನೇಮಿಸಿ ಪ್ರತಿಭಟನೆಯ ಶಕ್ತಿಯನ್ನು ಹತ್ತಿಕ್ಕಲಾಗಿದೆ. ದಲಿತಪರ ಚಿಂತನೆ ಹಾಗೂ ಕ್ರಿಯೆಗಳಿಗೆ ಇನ್ನುಮೇಲೆ ನಮ್ಮ ಶಿಕ್ಷಣಸಂಸ್ಥೆಗಳಲ್ಲಿ ಅವಕಾಶವೇ ಇಲ್ಲ. ಜೊತೆಗೆ ನಮ್ಮ ಶಿಕ್ಷಣವ್ಯವಸ್ಥೆಯನ್ನು ದುರ್ಬಲಗೊಳಿಸಿ ಬ್ರಾಹ್ಮಣ ಹಾಗೂ ಶ್ರೀಮಂತ ವರ್ಗಗಳು ಉನ್ನತ ಶಿಕ್ಷಣವನ್ನು ವಿದೇಶಗಳಲ್ಲಿ ಪಡೆಯುವಂತೆ ಮಾಡಿ ಜಾಗತೀಕರಣದ ಲಾಭಗಳು ಕೇವಲ ಈ ವರ್ಗಗಳಿಗೆ ಲಭಿಸುವಂತೆ ಮಾಡಲಾಗುತ್ತಿದೆ.

4. ಬಲಪಂಥೀಯ ಧೋರಣೆಯ ನ್ಯಾಯಧೀಶರು ಹಾಗೂ ಜನದ್ರೋಹಿ ಪೋಲಿಸರಿಂದಾಗಿ ದಲಿತರ ಸಾರ್ವಜನಿಕ ಕೊಲೆಗಳಿಗೆ ಶಿಕ್ಷೆ ಆಗದಿರುವಂಥ ವ್ಯವಸ್ಥೆ ಈಗ ನಿರ್ಮಾಣವಾಗಿದೆ. ಇದರಿಂದಾಗಿ ಸಂವಿಧಾನ ಹಾಗೂ ಕಾನೂನುಗಳ ರಕ್ಷಣೆಯು ದಲಿತರಿಗೆ ಇನ್ನು ಮುಂದೆ ದೊರೆಯುವಂತಿಲ್ಲ.

ಇಂಥ ಕರಾಳಸ್ಥಿತಿಯ ಪರಿಣಾಮವೆಂದರೆ ಅಂಬೇಡ್ಕರ್ ಚಿಂತನೆ ಹಾಗೂ ಹೋರಾಟಗಳು ತಂದಿದ್ದ ಬದಲಾವಣೆಗಳು ಮುಕ್ತಾಯಗೊಂಡು ಕ್ರೂರವಾದ ಮನುವಾದಿ ರಾಷ್ಟ್ರವೊಂದು ಉದಯವಾಗಿದೆ. ಇದು ನಮ್ಮ ದಲಿತ ಚಿಂತನೆಗೆ ಈವರೆಗೂ ಮುಖ್ಯವಾದಂತೆ ಕಂಡಿಲ್ಲ. ನಾನು ಹೇಳುತ್ತಿರುವುದು ಸಮಾಜದಲ್ಲಿ ಅದರ ಮೂಲರಚನೆಯಲ್ಲಿ ಬದಲಾವಣೆಯನ್ನು ತರಬಲ್ಲ ಚಿಂತನೆಯ ಬಗ್ಗೆ.

ದಲಿತ ಚಳವಳಿಯ ನಾಯಕರನ್ನು ದೂಷಿಸುವುದ ರಿಂದ ಯಾವ ಪ್ರಯೋಜನವೂ ಇಲ್ಲ. ದಲಿತ ಚಳವಳಿ ಮಾತ್ರವಲ್ಲ ಎಲ್ಲಾ ಪ್ರಜಾಪ್ರಭುತ್ವವಾದಿ ಚಳವಳಿಗಳು ಸೋಲುತ್ತಿವೆ ಎನ್ನುವುದು ನಮ್ಮ ಮರುಚಿಂತನೆಯ ಆರಂಭದ ಮೆಟ್ಟಿಲಾಗಿರಬೇಕು.

ಅತ್ಯಂತ ಮುಖ್ಯವಿಚಾರವೆಂದರೆ ಇಡೀ ಜಗತ್ತಿನಲ್ಲಿಯೇ ಬಲಪಂಥೀಯ ಚಿಂತನೆ ಹಾಗೂ ರಾಜಕೀಯಗಳು ಪ್ರಬಲವಾಗುತ್ತಿರುವ ಸಂದರ್ಭದಲ್ಲಿಟ್ಟು ನಮ್ಮ ದಲಿತಚಿಂತನೆಯ ಓರೆಕೋರೆಗಳನ್ನು ಚರ್ಚಿಸಬೇಕು. ದಲಿತ ಚಳವಳಿಯ ನಾಯಕರನ್ನು ದೂಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ದಲಿತ ಚಳವಳಿ ಮಾತ್ರವಲ್ಲ ಎಲ್ಲಾ ಪ್ರಜಾಪ್ರಭುತ್ವವಾದಿ ಚಳವಳಿಗಳು ಸೋಲುತ್ತಿವೆ ಎನ್ನುವುದು ನಮ್ಮ ಮರುಚಿಂತನೆಯ ಆರಂಭದ ಮೆಟ್ಟಿಲಾಗಿರಬೇಕು.

ಅಂಬೇಡ್ಕರ್ ಚಿಂತನೆಯಲ್ಲಿ ಪರಸ್ಪರ ಸಂಬಂಧವುಳ್ಳ ಎರಡು ಎಳೆಗಳಿದ್ದವು. ಒಂದು, ಜಾತಿಗ್ರಸ್ತ ಸಮಾಜವನ್ನು ವಿಶ್ಲೇಶಿಸುವುದು. ಈ ಪ್ರಯತ್ನದಿಂದ ಅವರು ಕಂಡುಕೊಂಡಿದ್ದೆಂದರೆ ಈ ಸಮಾಜದಲ್ಲಿ ದಲಿತರಿಗೆ ಎಂದಿಗೂ ಪ್ರವೇಶವಿಲ್ಲ. ಏಕೆಂದರೆ ಅದು ಕಠೋರವಾದ ಅಸಮಾನತೆಗಳ ಸಮಾಜ. ಇನ್ನೊಂದು ಎಳೆಯೆಂದರೆ ಆಧುನಿಕ ಪ್ರಜಾಪ್ರಭುತ್ವವಾದ ರಾಷ್ಟ್ರವೊಂದರಲ್ಲಿ ಸಮಾನ ನಾಗರಿಕ ಹಕ್ಕುಗಳ ಮೂಲಕ ಸಂವಿಧಾನದ ಮೂಲಕ ದಲಿತರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದು. ಈ ಎರಡನೇ ಎಳೆಯು ಇಲ್ಲಿಯವರೆಗೆ ತಕ್ಕಮಟ್ಟಿಗಿನ ಯಶಸ್ಸು ಪಡೆದಿತ್ತು. ಈಗ ಸಂವಿಧಾನದ ಈ ಆಶಯಗಳನ್ನೇ ಮುಗಿಸುವ ಪ್ರಯತ್ನಗಳು ನಡೆದಿವೆ. ಆದ್ದರಿಂದ ಪ್ರಜಾಪ್ರಭುತ್ವವಾದಿ ಹೋರಾಟಗಳು ಅಂತಿಮವಾಗಿ ದಲಿತಪರ ಹೋರಾಟಗಳೇ ಎನ್ನುವುದು ನಮ್ಮ ಚಿಂತನೆಯ ಭಾಗವಾಗಬೇಕಿದೆ.

ಜಾಗತೀಕರಣವು ಬಂಡವಾಳಶಾಹಿಯ ಇತ್ತೀಚಿನ ಹಂತವಾಗಿದೆ. ಈಗಿರುವ ಸ್ಥಿತಿಯಲ್ಲಿ ಅದನ್ನು ಸೋಲಿಸುವುದು ಅಸಾಧ್ಯವೇ ಸರಿ. ಆದರೆ ಜಗತ್ತಿನ ಅನೇಕ ಮೂಲೆಗಳಲ್ಲಿ ಈ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳು ಗಾಂಧಿ, ಅಂಬೇಡ್ಕರ್, ಕಾರ್ಲ್‍ ಮಾರ್ಕ್ಸ್ ಎಲ್ಲರ ಒಳನೋಟಗಳನ್ನು ಬಯಸುತ್ತವೆ. ಗಾಂಧಿ ವಿರುದ್ಧ ಅಂಬೇಡ್ಕರ್, ಅಂಬೇ ಡ್ಕರ್ ವಿರುದ್ಧ ಮಾರ್ಕ್ಸ್ ಇವೇ ಮುಂತಾದ ಪ್ರಹಸನಗಳನ್ನು ಆಚೆಗಿಟ್ಟು ವಿಶ್ವದ ಅನೇಕ ನೆಲೆಗಳಲ್ಲಿ ಜಾಗತೀಕರಣದ ವಿರುದ್ಧ ನಡೆಯುತ್ತಿರುವ ಪ್ರಯತ್ನಗಳ ಹಿಂದಿರುವ ತಾತ್ವಿಕತೆಯನ್ನು ದಲಿತ ಚಿಂತನೆ ಸ್ವೀಕರಿಸಬೇಕಿದೆ.

*ಲೇಖಕರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಈಗ ಶಿವಮೊಗ್ಗೆಯ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕರು.

Leave a Reply

Your email address will not be published.