ಜಾಗತೀಕರಣವೂ ಬೇಕು ಸ್ವಾವಲಂಬನೆಯೂ ಬೇಕು

ಇಂಗ್ಲೆಂಡ್, ಅಮೆರಿಕಾ ಗಲ್ಲಿ ಕ್ರಿಕೆಟ್ ಆಟದಲ್ಲಿ ಮೋಸ ಮಾಡುವ ಬಲಿಷ್ಠ ಹುಡುಗನಂತೆ. ಏನೇ ಆದರೂ ಬ್ಯಾಟಿಂಗ್ ಮಾತ್ರ ತಾನು ಮಾಡುತ್ತಿರಬೇಕು ಎಂಬ ದುರಾಸೆ. ಈ ದೇಶಗಳು ತಾವೇ ಶುರು ಮಾಡಿದ ಜಾಗತೀಕರಣ ಇಂದು ಜಗತ್ತಿನ ಆರ್ಥಿಕ ಸಂಕಷ್ಟದ ಮೂಲ ಎಂದು ತಮ್ಮ ಜನರನ್ನು ನಂಬಿಸಿವೆ.

ತೊಂಬತ್ತರ ದಶಕದಲ್ಲಿ ಜಾಗತೀಕರಣ ಅರ್ಥಾತ್ ಗ್ಲೋಬಲೈಸಷನ್ ಹೆಚ್ಚು ಬಳಸಲ್ಪಟ್ಟ ಪದ. ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ ಸಿಂಗ್ ಅವರ ನೇತೃತ್ವದ್ದಲ್ಲಿ ಭಾರತದ ಬಾಗಿಲನ್ನು ವಿಶ್ವಕ್ಕೆ ತೆರೆದದ್ದು, ನಂತರದ ದಿನಗಳಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ವೇಗ ಪಡೆದುಕೊಂಡು ಸುಧಾರಿಸಿದ್ದು ಈಗ ಇತಿಹಾಸ. ಮೇಲೆ ಹೋದದ್ದು ಕೆಳಗೆ ಬರಲೇಬೇಕು ಎನ್ನುತ್ತದೆ ಒಂದು ಗಾದೆ. ಇದೀಗ ಎಲ್ಲಡೆ ಮತ್ತೆ ಗ್ಲೋಬಲೈಸಷನ್ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಈ ಬಾರಿ ಇದಕ್ಕೆ ವಿರುದ್ಧವಾಗಿ.

ಜಗತ್ತಿನ ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿಗೆ ಜಾಗತೀಕರಣವೇ ಕಾರಣ ಎನ್ನುವುದು ಈಗ ಹೆಚ್ಚು ಬಲ ಪಡೆದುಕೊಳ್ಳುತ್ತಿರುವ ಕೂಗು. ನಾವಾಯ್ತು ನಮ್ಮ ದೇಶವಾಯ್ತು, ಮೊದಲು ನಾವು, ನಮ್ಮ ದೇಶ, ನಂತರ ಉಳಿದದ್ದು ಎನ್ನುವ ರಾಷ್ಟ್ರೀಯವಾದ ಎಲ್ಲೆಡೆ ಮನ್ನಣೆ ಪಡೆಯುತ್ತಿದೆ. ಹಾಗೆ ನೋಡಿದರೆ ಭಾರತದಲ್ಲಿ ಮೋದಿ ಅವರಿಗೆ ಸಿಕ್ಕ ಜಯ ಕೂಡ ರಾಷ್ಟ್ರೀಯತೆ ಆಧಾರದಲ್ಲೇ. ಅಮೆರಿಕಾದ ಟ್ರಂಪ್, ಇಂಗ್ಲೆಂಡ್‌ನ ಥೇರೆಸಾ ಮೇ ಅವರು ತೀವ್ರ ಬಲಪಂಥೀಯ ವಿಚಾರಧಾರೆಯಿಂದ ಅಧಿಕಾರ ಹಿಡಿದವರು. ಇವೆಲ್ಲಾ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳು. ಇಂತಹ ಬದಲಾವಣೆಗಳ ನೇರ ಪ್ರಭಾವ ದೇಶದ ಆರ್ಥಿಕತೆಯ ಮೇಲೆ ಆಗುತ್ತದೆ. ಅಲ್ಲಿನ ಪ್ರಜೆಗಳ ಜೀವನ ಕೂಡ ಸಾಕಷ್ಟು ಬದಲಾವಣೆ ಕಾಣುತ್ತದೆ.

ಜಾಗತೀಕರಣದ ಅಂತ್ಯ?

1990-2007 -ಜಾಗತೀಕರಣ ಎನ್ನುವ ಹೊಸ ಸಮೀಕರಣ ಶುರುವಾದದ್ದು ಈ ಸಮಯದಲ್ಲಿ. ಅಮೆರಿಕಾ ಸಮಾಜ ಹೇಗಾಗಿತ್ತು ಅಂದರೆ ಉತ್ಪತ್ತಿ (ಪ್ರೊಡಕ್ಷನ್) ಮಾಡುತ್ತಿರಬೇಕು ಮತ್ತು ಜನ ಅಥವಾ ಗ್ರಾಹಕ ಅದನ್ನ ಕೊಳ್ಳುತ್ತಿರಬೇಕು. ಇವೆರಡರಲ್ಲಿ ಒಂದು ತಪ್ಪಿದರೂ ಆ ಸಮಾಜ ಕುಸಿಯುತಿತ್ತು. ಹಾಗೆ ನೋಡಲು ಹೋದರೆ ಹೊಸ ಆಟಗಳು ಶುರುವಾಗಿದ್ದು ಹಳೆಯ ಆಟದಲ್ಲಿನ ಸೋಲುಗಳಿಂದ. ಪ್ರತಿ ಹೊಸ ಪ್ರಯೋಗ ಜಾಗತಿಕ ಕುಸಿತ, ಹಣಕಾಸು ಏರುಪೇರು ಉಂಟುಮಾಡಿವೆ. ಆಗೆಲ್ಲಾ ತನ್ನ ಜನರನ್ನು ನಂಬಿಸಲು ಹೊಸ ಆಟಿಕೆ ತಯಾರಾಗುತ್ತದೆ.

ಜಾಗತೀಕರಣ ಅಂದಿನ ದಿನಗಳಲ್ಲಿ ತಯಾರಾದ ಹೊಸ ಆಟಿಕೆ. ಅದನ್ನು ತಯಾರಿಸಿದವರಿಗೂ ಅದರ ಆಯಸ್ಸು ಕಡಿಮೆ ಎನ್ನುವುದರ ಅರಿವು ಇದ್ದೇ ಇತ್ತು. ಆದರೇನು ಅಂದಿನ ದಿನದ ಬದುಕು ಮುಖ್ಯ. ನಾಳಿನ ಸಮಸ್ಯೆ ನಾಳೆಗೆ. ಅಮೆರಿಕಾ ತನ್ನ ವಸ್ತುವಿಗೆ ಜಗತ್ತೇ ಮಾರುಕಟ್ಟೆ ಮಾಡಿಕೊಳ್ಳುವ ಘನ ಉದ್ದೇಶದಿಂದ ಜಾಗತೀಕರಣ ಸೃಷ್ಟಿಸಿತು. ಚೀನಾ ಆಟದಲ್ಲಿ ಎಲ್ಲೂ ಕಾಣದಂತೆ ಇದ್ದು ದಿಢೀರನೆ ಪ್ರಬುದ್ಧಮಾನಕ್ಕೆ ಬಂದು ಜಾಗತೀಕರಣದ ಎಲ್ಲಾ ಲಾಭವನ್ನ ನುಂಗಿ ನೀರು ಕುಡಿಯಿತು. ಚೀನಾ ಜಗತ್ತಿನ ಕಾರ್ಖಾನೆಯಾಗಿ ಮಾರ್ಪಟ್ಟಿತು.

ಚೀನಾದ ಬೆಲೆ ಮುಂದೆ ಹೋರಾಡಲಾರದೆ ಒಂದೊಂದೇ ದೇಶಗಳು ತಲೆ ಬಾಗಿಸತೊಡಗಿದವು. ಯೂರೋಪಿನ ಹಲವು ರಾಷ್ಟ್ರಗಳು ಸದ್ದಿಲ್ಲದೇ ಚೀನಾದ ಹೂಡಿಕೆಯ ಕಪಿ ಮುಷ್ಟಿಯಲ್ಲಿ ಸಿಲುಕಿದವು. ಇಂಗ್ಲಿಷ್ ಬಲ್ಲ ಭಾರತೀಯ ನಾಗರಿಕರು ಜಗತ್ತಿನ ಮೂಲೆ ಮೂಲೆ ತಲುಪಿದರು. ಹೆಚ್ಚು ಸದ್ದು ಮಾಡದೆ ಅಮೆರಿಕಾದ ಕಾರ್ಪೊರೇಟ್ ವಲಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಆಯಕಟ್ಟಿನ ಜಾಗದಲ್ಲಿ ಆಸೀನರಾದರು.

ತಾವು ಶುರು ಮಾಡಿದ ಆಟದಲ್ಲಿ ತಮಗೇ ಸೋಲು? ಯಾರು ತಾನೇ ಸಹಿಸಿಯಾರು?

ಪ್ರತಿ ಸಲದಂತೆ ಆರ್ಥಿಕ ಕುಸಿತ ಶುರುವಾಗುತ್ತದೆ. ಇಂತಹ ಮಹಾನ್ ಆರ್ಥಿಕ ಕುಸಿತಕ್ಕೆ ಕೊರೊನ ಎನ್ನುವ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಯನ್ನು ಕಾರಣ ಎಂದು ತೋರಿಸಲಾಗಿದೆ. ನಾವು ಜಾಗತೀಕರಣ ಬೇಡ ಎನ್ನಬಹದು. ಆದರೆ ನಾವು ಇಂದು ಅದರ ಬಲೆಯಲ್ಲಿ ಬಹಳವಾಗಿ ಸಿಲುಕಿದ್ದೇವೆ. ಕೊರೊನೋತ್ತರದಲ್ಲಿ ಜಾಗತೀಕರಣ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಭಾರತ ಮಾತ್ರವಲ್ಲ ಜಗತ್ತಿನ ಎಲ್ಲಾ ದೇಶಗಳೂ ಇಂದು ರಾಷ್ಟ್ರೀಯತೆಯತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಆದರೆ ಇಂದು ಜಗತ್ತಿನಲ್ಲಿ ಜಾಗತೀಕರಣದ ಮೂಲಕ ಸೃಷ್ಟಿಯಾಗಿರುವ ಅವಲಂಬನೆಯನ್ನು ಅಷ್ಟು ಸುಲಭವಾಗಿ ಕಡಿದುಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಅವಲಂಬನೆಯನ್ನು ತಪ್ಪಿಸಬಹುದು. ಸದ್ಯಕ್ಕೆ ಸೃಷಿಯಾಗಿರುವ ಅವಲಂಬನೆ ದೂರ ಮಾಡಲು ಸಮಯ ಬೇಕು. ಕೊರೊನೋತ್ತರ ಸಮೀಕರಣ ಬದಲಾದರೆ ಜಾಗತೀಕರಣ ಮೊದಲಿನಂತೆ ಸಾಗುತ್ತದೆ. ಆದರೆ ಅದರ ವೇಗಕ್ಕೆ ಖಂಡಿತ ಬ್ರೇಕ್ ಬೀಳಲಿದೆ.

ಜಾಗತೀಕರಣ ಭಾರತಕ್ಕೆ ಮಾರಕವೇ?

ಮೊದಲೇ ಹೇಳಿದಂತೆ ಪ್ರತಿ ಬಾರಿಯೂ ಆಟ ತನ್ನಿಷ್ಟದಂತೆ ನಡೆಯಲಿಲ್ಲ ಎಂದರೆ ಆರ್ಥಿಕ ಕುಸಿತ ಗ್ಯಾರಂಟಿ. ಇತಿಹಾಸವನ್ನು ತೆಗೆದು ನೋಡುತ್ತಾ ಬನ್ನಿ, ಯಾವಾಗ ಅಮೆರಿಕಾ ಅಥವಾ ಇಂಗ್ಲೆಂಡಿಗೆ ನಡೆಯುತ್ತಿರುವ ದಾರಿ ತಮಗೆ ಲಾಭದಾಯಕವಲ್ಲ ಅನ್ನಿಸಿತ್ತೋ ಆಗೆಲ್ಲಾ ಜಗತ್ತು ಹಣಕಾಸು ಕುಸಿತಕ್ಕೆ ಒಳಗಾಗಿದೆ. ಗ್ಲೋಬಲೈಸಷನ್ ನಿಂದ ಈ ಎರಡೂ ದೇಶಗಳು ತಮಗೆ ಲಾಭಕ್ಕಿಂತ ಹೆಚ್ಚು ನಷ್ಟ ಅನ್ನುವುದನ್ನು ಅರಿತವು. ಒಂದು ಕಡೆ ಚೀನಾ ಪ್ರೊಡಕ್ಷನ್ ನಲ್ಲಿ ಯಾರೂ ತನ್ನ ಹತ್ತಿರ ಬರದಂತೆ ರಾಕ್ಷಸ ರೀತಿಯಲ್ಲಿ ಕೆಲಸ ಮಾಡಹತ್ತಿತು. ಭಾರತ, ಬ್ರೆಜಿಲ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಸದ್ದಿಲ್ಲದೇ ಇಂಗ್ಲೆಂಡ್ ಮತ್ತು ಅಮೆರಿಕಾ ಆರ್ಥಿಕತೆಯ ಒಂದು ಭಾಗವನ್ನು ಕಸಿದುಕೊಂಡವು.

ಅಮೆರಿಕಾ ಆರ್ಥಿಕತೆ 2007ರಲ್ಲಿ ಕುಸಿಯುತ್ತದೆ. ಯೂರೋಪ್ ನಂತರ ಇಡೀ ಜಗತ್ತು ಗ್ರೇಟ್ ಡಿಪ್ರೆಶನ್ ಅಡಿಯಲ್ಲಿ ನಲುಗುತ್ತದೆ. ಯಾವ ಕೋನದಿಂದ ನೋಡಿದರೂ ಜಾಗತೀಕರಣದಿಂದ ಭಾರತಕ್ಕೆ ನಷ್ಟವಿಲ್ಲ. ವಿಷಯ ಯಾವುದೇ ಇರಲಿ ಅದು ನಮಗೆ ಎಲ್ಲವೂ ಪೂರಕವಾಗಿ ಇರುವುದಿಲ್ಲ. ಲಾಭ ನಷ್ಟಗಳ ಅಳೆದು ನೋಡಿದಾಗ ನಷ್ಟಕ್ಕಿಂತ ಭಾರತಕ್ಕೆ ಲಾಭವೇ ಜಾಸ್ತಿ. ನಮ್ಮಲ್ಲಿ ಸಾಧ್ಯವಾಗುವ ವಸ್ತುಗಳನ್ನು ತಯಾರಿ ಮಾಡಿಕೊಳ್ಳುವುರಲ್ಲಿ ಯಾವುದೇ ತಪ್ಪಿಲ್ಲ. ಸಾಧ್ಯವಾದಷ್ಟು ಮಟ್ಟದ ಸ್ವಾವಲಂಬನೆ ಅವಶ್ಯಕವಾಗಿ ಬೇಕು. ಯಾವುದಾದರೂ ವಿಷಮ ಪರಿಸ್ಥಿತಿ ಬಂದಾಗ ಗೋಳಾಡುವುದಕ್ಕಿಂತ ನಿತ್ಯವೂ ಒಂದಷ್ಟು ಸ್ವಾವಲಂಬನೆ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ವಸ್ತುಸ್ಥಿತಿ ಹೀಗಿದ್ದಾಗ ಪ್ರಧಾನಿಯವರು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ಎನ್ನುವ ಕರೆ ಏಕೆ ಕೊಡಬೇಕಿತ್ತು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.

ಹೌದು ಸದ್ಯದ ಮಟ್ಟಿಗೆ ಪೂರ್ಣ ಸ್ವಾವಲಂಬಿ ಭಾರತದ ನಿರ್ಮಾಣ ಕಷ್ಟಸಾಧ್ಯ. ಪ್ರಧಾನಿಯವರ ಈ ಹೇಳಿಕೆಯನ್ನ ಎಲ್ಲರೂ ಅವರವರ ಮೂಗಿನ ನೇರಕ್ಕೆ ವಿಮರ್ಶಿಸಿಕೊಂಡರು. ಇವತ್ತಿನ ಸ್ಥಿತಿಯಲ್ಲಿ ಪ್ರಾಥಮಿಕ ಶಾಲೆಯ ಮಗು ಕೂಡ ಹೇಳುತ್ತದೆ- ಚೀನಾದ ವಸ್ತುಗಳ ಸಹಾಯವಿಲ್ಲದೆ ಭಾರತದ ಆರ್ಥಿಕತೆ ಕುಸಿಯುತ್ತದೆ ಎಂದು. ದೇಶದ ಮತ್ತು ಜಗತ್ತಿನ ಆಗುಹೋಗುಗಳ ಅರಿವಿರುವ ಪ್ರಧಾನಿಗಳು ಇಂತಹ ಹೇಳಿಕೆಯನ್ನ ಸುಮ್ಮನೆ ಕೊಟ್ಟಿರಲು ಸಾಧ್ಯವಿಲ್ಲ. ಇದನ್ನು ಸಾವಧಾನವಾಗಿ ನೋಡಿದಾಗ ತಿಳಿಯುವುದು, ಒಬ್ಬ ಸಾಮಾನ್ಯ ಪ್ರಜೆಯಿಂದ, ಒಂದು ದೈತ್ಯ ಸಂಸ್ಥೆಯವರೆಗೆ ಎಷ್ಟು ಸಾಧ್ಯ ಅಷ್ಟು ಬೇರೆಯವರ ಮೇಲೆ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು, ಬರುವ ದಿನಗಳಲ್ಲಿ ಪೂರ್ಣ ಪ್ರಮಾಣದ ಆತ್ಮನಿರ್ಭರತೆ ಸಾಧಿಸುವುದು ಎನ್ನುವ ಅರ್ಥ ಕೊಡುತ್ತದೆ.

ಜಾಗತೀಕರಣದ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ಅದು ಸೃಷ್ಟಿಸಿದ ಅವಲಂಬನೆ. ಹೀಗಾಗಿ ಅದು ಷೇರು ಮಾರುಕಟ್ಟೆಯಿರಬಹುದು ಅಥವಾ ಆರ್ಥಿಕತೆಗೆ ಸಂಬಂಧಿಸಿದ ಇತರೆ ನಿರ್ಧಾರಗಳಿರಬಹದು ಅವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುವ ಬದಲಾವಣೆಗೆ ನೇರವಾಗಿ ಬೆಸೆದುಕೊಂಡಿವೆ. ದೂರದ ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಮೇಲೆ ಆಕ್ರಮಣ ಮಾಡಿದರೆ ಭಾರತದ ಷೇರು ಮಾರುಕಟ್ಟೆ ಅಲುಗಾಡುತ್ತದೆ. ಇಂತಹ ಸನ್ನಿವೇಶ ಸೃಷ್ಟಿಯಾಗಿದ್ದು ವಿದೇಶಿ ಬಂಡವಾಳ ಹೂಡಿಕೆಯಿಂದ. ಇಂದು ಪರಿಸ್ಥಿತಿ ಹೇಗಾಗಿದೆ ಎಂದರೆ ಅಲ್ಲೆಲ್ಲೋ ಏನೋ ಆಯ್ತು ನಮಗೇನು? ಎನ್ನುವಂತೆ ಕೂರುವಂತಿಲ್ಲ. ಇದು ನಮಗೆ ಮಾತ್ರ ಅಂತ ಅಲ್ಲ. ಗಮನಿಸಿ: ಭಾರತ-ಪಾಕಿಸ್ತಾನದ ನಡುವೆ ಗಡಿ ವಿವಾದ ಜೋರಾದರೆ ಸಾಕು ಅಮೆರಿಕಾದಲ್ಲಿನ ಹೂಡಿಕೆದಾರರಿಗೆ ತಲ್ಲಣ ಶುರುವಾಗುತ್ತದೆ.

ಇವೆಲ್ಲುವುಗಳ ಅರಿವಿದ್ದೇ ಪ್ರಧಾನಿಯವರು ಅವಲಂಬನೆ ತಗ್ಗಿಸಬೇಕು ಎನ್ನುವ ಮಾತು ಆಡಿದ್ದಾರೆ. ಬೆಳಿಗ್ಗೆ ತಿಂದ ತಿಂಡಿ ಅರಗಲು ನಾಲ್ಕು ತಾಸು ಬೇಕು ಎನ್ನುವ ಸಾಮಾನ್ಯಜ್ಞಾನ ಇರದ ನಾಗರಿಕರು ಪ್ರಧಾನಿ ಹೇಳಿಕೆಯನ್ನ ಇಂದಿನಿಂದಲೇ ಎಂದು ಅರ್ಥೈಸಿಕೊಂಡದ್ದು ಸಮಸ್ಯೆ ಸೃಷ್ಟಿಸಿತು. ಹೌದು ಭಾರತ ಆತ್ಮನಿರ್ಭರತೆ ಸಾಧಿಸಬೇಕು. ಅದಕ್ಕೆ ಸಮಯಬೇಕು, ಸರಳ ರೇಖೆಯಲ್ಲಿ ನಿಲ್ಲದ ಗುರಿಯೆಡೆಗೆ ನಮ್ಮ ನಡೆಯಿರಬೇಕು.

ಸರಿ, ಆತ್ಮನಿರ್ಭರತೆ ಅಥವಾ ಸ್ವಾವಲಂಬನೆ ಒಳ್ಳೆಯದು. ಆದರೆ ಭಾರತ ದೇಶದ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಈ ಸ್ವಾವಲಂಬನೆ ಬಗೆಹರಿಸಲು ಸಾಧ್ಯವೇ? ಎನ್ನುವಂತಹ ನೈಜ ಪ್ರಶ್ನೆಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಗಮನಿಸಿ: ಸಮಸ್ಯೆ ಜೊತೆಜೊತೆಗೆ ಉತ್ತರ ಕೂಡ ಹಿಂದೆಯೇ ಬರುತ್ತದೆ. ಉತ್ತರವಿಲ್ಲದ ಪ್ರಶ್ನೆಗಳು ಇಲ್ಲ ಎನ್ನುತ್ತದೆ ಒಂದು ನಾಣ್ನುಡಿ. ಉತ್ತರಗಳು ಸಲೀಸಾಗಿ ಸಿಕ್ಕುವುದಿಲ್ಲ. ಪ್ರಶ್ನೆಗಳು ಮಾತ್ರ ಎದಿರು ಬಂದು ನಿಂತುಬಿಡುತ್ತವೆ. ಇವತ್ತಿನ ಸನ್ನಿವೇಶ ಗಮನಿಸಿದಾಗ ಕೆಲವು ಸಾಧ್ಯತೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಅವುಗಳಲ್ಲಿ ಪ್ರಮುಖವಾಗಿ…

  1. ಕುಸಿದ ಬಡ್ಡಿ ದರ ಉದ್ಯಮಗಳಿಗೆ ವರದಾನವಾಗಲಿದೆ. ಇದು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವ ಸಾಧ್ಯತೆ ಕೂಡ ಇದೆ.
  2. ಜಗತ್ತಿಗೆ ಚೀನಾದ ಕುತಂತ್ರ ಅರಿವಾಗಿದೆ. ಹೀಗಾಗಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಾವು ವಿಶ್ವಕ್ಕೆ ಬೇಕಾದ ಎಲ್ಲವನ್ನೂ ತಯಾರಿಸಿ ಮಾರುವ ಅವಕಾಶವಿದೆ. ಈಗಾಗಲೇ ಕೊರೊನ ವೈರಸ್ ನಿಂದ ರಕ್ಷಿಸಿಕೊಳ್ಳಲು ಇರುವ ಕಿಟ್‌ಗಳನ್ನು ಭಾರತ ತಯಾರಿಸುತ್ತಿದೆ. ಇಂತಹ ಕಿಟ್‌ಗಳನ್ನು ಜಗತ್ತಿಗೆ ಮಾರುವ ಕ್ಷಮತೆಯನ್ನು ಆಗಲೇ ತೋರಿಸಿದ್ದೇವೆ. ಇದೊಂದು ಉದಾಹರಣೆ ಮಾತ್ರ. ಇಂತಹ ಹಲವು ಹತ್ತು ಉತ್ಪನ್ನಗಳನ್ನ ನಾವು ತಯಾರಿಸಬಹುದು.
  3. ಅಮೆರಿಕಾ, ಇಂಗ್ಲೆಂಡ್ ಮತ್ತು ಯೂರೋಪಿನಿಂದ ಭಾರತೀಯರು ಮರಳಿ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಅವರ ನೈಪುಣ್ಯ ಬಳಸಿಕೊಂಡು ನಮ್ಮ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳುವ ಅವಕಾಶ ನಮ್ಮ ಮುಂದಿದೆ. ಅಮೆರಿಕಾ ದೇಶದಲ್ಲಿ ಈಗಾಗಲೇ ಎಚ್1ಬಿ ವೀಸಾ ನಿರಾಕರಣೆ ಕೂಗು ಜೋರಾಗಿದೆ. ಹೀಗಾಗಿ ಲಕ್ಷಾಂತರ ಭಾರತೀಯರು ಮರಳಿ ಭಾರತಕ್ಕೆ ಬಂದರೆ ಒಂದು ಹೊಸ ಬಲ ಬಂದAತಾಗುತ್ತದೆ.
  4. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು-ಹೆಚ್ಚಿನ ಸಂಶೋಧನೆ ನಡೆಸುವ ಸಾಧ್ಯತೆಗಳು ನಮ್ಮ ಮುಂದಿವೆ.
  5. ತೈಲ ಬೆಲೆಯನ್ನು ನಮ್ಮ ಅನುಕೂಲಕ್ಕೆ ಬಳಸಿಕೊಂಡು ಹಣದುಬ್ಬರ ತಡೆಯಬಹುದು. ಇದು ಜನಸಾಮಾನ್ಯನಿಗೆ ಅನುಕೂಲ ಮಾಡಿಕೊಡುತ್ತದೆ.
  6. ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಹೆಚ್ಚಿನ ಮಹತ್ವ ಪಡೆಯಲಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬದಲಾಣೆ ತರುವ ಸಾಧ್ಯತೆಯಿದೆ.
  7. ಇವೆಲ್ಲವುಗಳ ಜೊತೆಯಲ್ಲಿ ಸಣ್ಣ ಸಣ್ಣ ವಿಷಯಗಳಾದ ಚೀನಾ ಆಪ್ ಗಳನ್ನು ಬಳಸದಿರುವುದು, ಚೀನಿ ಡಿಜಿಟಲ್ ವಾಲೆಟ್ ಬಳಸದಿರುವುದು ಕೂಡ ಮಾಡಬೇಕು. ನೀವು ಚೀನಿ ಫೋನ್ ಅನ್ನು ಏಕೆ ಬಳಸುತ್ತೀರಿ? ಎನ್ನುವ ಜನರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ನಿಧಾನವಾಗಿ ಅದನ್ನೂ ದೂರ ಮಾಡುವ ಕೆಲಸವಾಗಬೇಕಿದೆ. ಇಂತಹ ಕಾರ್ಯಕ್ಷೇತ್ರದಲ್ಲಿ ಸ್ಥಳೀಯ ಹೂಡಿಕೆ, ಸ್ಥಳೀಯ ಪ್ರತಿಭೆಗಳು ಮುಂಚೂಣಿಗೆ ಬರುವ ಕೆಲಸ ಮಾಡಬೇಕಿದೆ.
  8. ಕೃಷಿ ಕ್ಷೇತ್ರವನ್ನ ಇನ್ನಷ್ಟು ಆಕರ್ಷಕವಾಗಿ ಮಾಡಿದರೆ ನಿರುದ್ಯೋಗ ಸಮಸ್ಯೆಯ ಹೆಸರೇ ಇರುವುದಿಲ್ಲ.

ಸಾಧ್ಯತೆಗಳು ಬಹಳ ಇವೆ. ಹೀಗಾಗಿ ಭಾರತದ ನಿರುದ್ಯೋಗ ಸಮಸ್ಯೆ, ಬಡತನದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಬದ್ಧತೆಯಿಂದ ಕೆಲಸ ಮಾಡುವ ಅವಶ್ಯಕತೆ ಮಾತ್ರ ಹಿಂದಿಗಿಂತ ಇಂದು ಹೆಚ್ಚಾಗಿದೆ.

ಮುಂದೇನು?

ನಾವು ಚಿಕ್ಕವರಿದ್ದಾಗ ಗಲ್ಲಿ ಕ್ರಿಕೆಟ್ ಆಡಿದ್ದೇವೆ ಅಲ್ಲವೇ? ಬ್ಯಾಟಿಂಗ್ ಮಾಡುತ್ತಾ ಔಟ್ ಆದರೆ ನಮ್ಮ ನಡುವೆ ತಾಕತ್ತಾಗಿದ್ದ ಹುಡುಗ ಔಟ್ ಆಗಿಲ್ಲ ಅಂತ ಮೋಸ ಮಾಡುತ್ತಿದ್ದುದು ನೆನಪಿದೆ ಅಲ್ಲವೇ. ಇಂಗ್ಲೆಂಡ್, ಅಮೆರಿಕಾ ಆ ಮೋಸಗಾರ ಬಲಿಷ್ಠ ಹುಡುಗನಂತೆ. ಯಾವುದು ಏನೇ ಇರಲಿ ಬ್ಯಾಟಿಂಗ್ ಮಾತ್ರ ಅವರು ಮಾಡುತ್ತಿರಬೇಕು. ತಾವೇ ಶುರು ಮಾಡಿದ ಜಾಗತೀಕರಣ ಇಂದು ಜಗತ್ತಿನ ಆರ್ಥಿಕ ಸಂಕಷ್ಟದ ರೂವಾರಿ ಎಂದು ತಮ್ಮ ಜನರನ್ನು ನಂಬಿಸಿದ್ದಾರೆ. ಹೀಗಾಗಿ ಇಂದು ಎಲ್ಲೆಡೆ ಜಾಗತೀಕರಣದ ವಿರುದ್ಧ ಧ್ವನಿ ಜೋರಾಗಿದೆ.

ವಿಷಯ ಯಾವುದೇ ಇರಲಿ ಅದನ್ನು ಸಮಸ್ಥಿತಿಯಲ್ಲಿ ಕಾಯ್ದು ಕೊಂಡರೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತನ್ನು ಕೇಳುತ್ತಾ ಬೆಳೆದವರು ನಾವೆಲ್ಲಾ. ಹೀಗಾಗಿ ಜಾಗತೀಕರಣವೂ ಬೇಕು, ಸ್ವಾವಲಂಬನೆಯೂ ಬೇಕು. ಎರಡರಲ್ಲಿ ಒಂದು ಮಾತ್ರ ಬೇಕು ಇನ್ನೊಂದು ಬೇಡವೇ ಬೇಡ ಎನ್ನುವ ಮಾತು ಅತಿರೇಕ ಎನ್ನಿಸುತ್ತದೆ. ನೆನಪಿರಲಿ ಯಾವುದೇ ಅತಿರೇಕಗಳಿಗೆ ಇದು ಸಕಾಲವಲ್ಲ.

*ಲೇಖಕರು ಆಂತರಿಕ ಲೆಕ್ಕ ಪರಿಶೋಧಕರಾಗಿ ದುಬೈ ಮತ್ತು ಯೂರೋಪಿನ ವಿತ್ತ ಪ್ರಪಂಚ ಕಂಡಿದ್ದಾರೆ; ಐವತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ಯೂರೋಪ್, ಮಧ್ಯಪ್ರಾಚ್ಯ, ಏಷ್ಯಾ, ಅಮೆರಿಕಾ ಮತ್ತು ಇತರ ದೇಶಗಳಲ್ಲಿ ಆರ್ಥಿಕ ಸಲಹೆಗಾರರಾಗಿ ಹಲವು ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಸೇವೆ ನೀಡುತ್ತಿದ್ದಾರೆ.

Leave a Reply

Your email address will not be published.