ಜಾಗತೀಕರಣವೇ ಬಡತನಕ್ಕೆ ಮದ್ದು ನಿರುದ್ಯೋಗಕ್ಕೆ ಗುದ್ದು

ಸೂಕ್ತ ರೀತಿಯಲ್ಲಿ ಹಾಗೂ ವಿಶದವಾಗಿ ಹೇಳದೇ ಹೋದರೂ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತಾತ್ಪರ್ಯವು ಮುಂದಿನ ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಆದ ಕಾರಣ ಆತ್ಮನಿರ್ಭರತೆಯ ಈ ಹೊಸನೀತಿಯನ್ನು ನಾವು ತಾರ್ಕಿಕ ಹಾಗೂ ಆರ್ಥಿಕ ವಿಶ್ಲೇಷಣೆಗೆ ಒಳಪಡಿಸಲೇ ಬೇಕಾಗುತ್ತದೆ.

2020ರ ಮೇ 12 ರಂದು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣದಲ್ಲಿ ‘ಆತ್ಮನಿರ್ಭರತೆ’ಯೇ (ಸ್ವಾವಲಂಬನೆ) ಮುಂದಿನ ದಿನಗಳಲ್ಲಿ ನಮ್ಮ ಆರ್ಥಿಕತೆಗೆ ಸರಿದಾರಿಯೆಂದು ಹೇಳಿದರು. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿ ಸರಕು-ಸೇವೆಗಳಿಗೆ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸ್ವಾವಲಂಬನೆ ಹೊಂದುವುದೇ ದೇಶದ ಮುಂದಿರುವ ಗುರಿಯೆಂದು ಪ್ರತಿಪಾದಿಸಿದರು. ಎಂದಿನಂತೆ ರಾಷ್ಟ್ರದ ಮುಖ್ಯ ಮಾಧ್ಯಮ ಸಮೂಹಗಳು ಭೋಪರಾಕ್ ಹೇಳುತ್ತಾ ಪ್ರಧಾನಿಯವರನ್ನು ಪ್ರವಾದಿಯೆಂದು ಘೋಷಿಸುವ ಮಟ್ಟಕ್ಕೆ ತಮ್ಮ ಪತ್ರಿಕೋದ್ಯಮದ ‘ನಿರ್ಭೀತ’ ಮುಖವನ್ನೂ ಪ್ರದರ್ಶಿಸಿದ್ದವು.

ಆದರೆ ಈ ಸ್ವಾವಲಂಬನೆಯ ಕೂಗು ಮಾಧ್ಯಮಗಳ ಮುಖ್ಯಧಾರೆಯಲ್ಲಿ ವೈಚಾರಿಕವಾಗಿ ಚರ್ಚೆಯಾಗಲೇ ಇಲ್ಲ. ಇದೇ ಭಾಷಣದಲ್ಲಿ ಪ್ರಧಾನಿಯವರು ದೇಶದ ಆರ್ಥಿಕತೆಯ ಪುನರುಜ್ಜೀವನಕ್ಕೆ ಘೋಷಣೆ ಮಾಡಿದ ರೂ.20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಒಳಗಾದ ಚರ್ಚೆಗೆ ಹೋಲಿಕೆಯಲ್ಲಿ ಎಳ್ಳಷ್ಟೂ ಚರ್ಚೆಗೆ ಬರಲಿಲ್ಲ. ದೇಶದ ಆರ್ಥಿಕತೆಯ ಹೆದ್ದಾರಿಯನ್ನೇ ಗುರುತಿಸುವ ಮತ್ತು ಅತ್ಯಂತ ತೀವ್ರತಮ ಪರಿಣಾಮವುಳ್ಳ ಈ ಹೇಳಿಕೆಯನ್ನು ಬಹಳಷ್ಟು ಮಾಧ್ಯಮಗಳು ಗಂಭೀರವಾಗಿ ಗಣನೆಗೇ ತೆಗೆದುಕೊಳ್ಳಲಿಲ್ಲ. ಇದೊಂದು ಸಾಮಾನ್ಯ ಹೇಳಿಕೆಯೆಂಬಂತೆ ಪ್ರಕಟಿಸಿ ಸುಮ್ಮನಾಗಿಬಿಟ್ಟವು. 1991 ರಿಂದ ದೇಶ ನಿರ್ಣಾಯಕವಾಗಿ ತೆಗೆದುಕೊಂಡ ದಿಟ್ಟ ಹೆಜ್ಜೆಗಳನ್ನು ಈ ಘೋಷಣೆ ತಿರಸ್ಕರಿಸುತ್ತದೆ ಎಂಬ ಗ್ರಹಿಕೆಯನ್ನೂ ಓದುಗ-ನೋಡುಗರಿಗೆ ನೀಡುವ ಪ್ರಯತ್ನ ಮಾಡಲಿಲ್ಲ.

ಆದರೆ ಈ ಹೇಳಿಕೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ದಪ್ಪಕ್ಷರಗಳಲ್ಲಿ ವರದಿಯಾಗಿತ್ತು. ಭಾರತವು ಮತ್ತೆ ನಿಯಂತ್ರಿತ-ರಾಷ್ಟ್ರೀಕೃತ-ಆಯಾತಕ್ಕೆ ಪರ್ಯಾಯ ಹುಡುಕುವ ಆರ್ಥಿಕತೆ ಆಗಬಯಸುವುದೇನೋ ಎಂದು ಈ ಮಾಧ್ಯಮಗಳು ಸಂದೇಹ ವ್ಯಕ್ತಪಡಿಸಿದ್ದವು. ತಕ್ಷಣ ಎಚ್ಚರಗೊಂಡ ಪ್ರಧಾನಿ ಕಾರ್ಯಾಲಯವು ಸ್ಪಷ್ಟೀಕರಣವೊಂದನ್ನು ನೀಡಿ ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ಇನ್ನೂ ಹೆಚ್ಚು ತೊಡಗಿಸಿಕೊಳ್ಳುವುದು ಎಂದು ಹೇಳಿಕೆ ನೀಡಿತ್ತು. ಆದರೆ ಈ ಹೇಳಿಕೆ ಪ್ರಧಾನಿಯವರಿಂದ ಬಂದಿದ್ದರೆ ಚೆನ್ನಾಗಿತ್ತು. ಕಛೇರಿ ಮೂಲಗಳಿಂದ ಬಂದ ಈ ಹೇಳಿಕೆಯನ್ನು ಸಹಜವಾಗಿ ಮಾಧ್ಯಮಗಳು ಒಳಪುಟದ ಮೂಲೆಗೆ ತಳ್ಳಿದ್ದವು.

ಪ್ರಧಾನಿ ನರೇಂದ್ರ ಮೋದಿಯವರು ಐವತ್ತು ವರ್ಷಗಳ ಸಾರ್ವಜನಿಕ ಜೀವನ ಮತ್ತು ಅಗಾಧ ಪರಿಶ್ರಮದಲ್ಲಿ ವಿವೇಕ ಮೂಡಿಸಿಕೊಂಡವರು. ಸುದೀರ್ಘ ರಾಜಕೀಯ ಜೀವನದಲ್ಲಿ ಏಳುಬೀಳುಗಳನ್ನು ಕಂಡವರು. 12 ವರ್ಷಗಳ ಕಾಲ ಗುಜರಾತದ ಮುಖ್ಯಮಂತ್ರಿ ಹಾಗೂ ಇದೀಗ ಆರು ವರ್ಷಗಳ ಕಾಲ ಪ್ರಧಾನಿಯಾದ ಅನುಭವವುಳ್ಳವರು. ಆದರೆ ಅವರು ಅರ್ಥಶಾಸ್ತ್ರಜ್ಞರೇನಲ್ಲ. ಆನ್‌ಲೈನ್ ಪದವಿಯೊಂದನ್ನು ಪಡೆದವರು. ವಿಶ್ವವಿದ್ಯಾನಿಲಯಗಳು ಹಾಗೂ ಗಂಭೀರ ಶಾಸ್ತ್ರೀಯ ಅಧ್ಯಯನದ ಸಂಪರ್ಕ ಇಲ್ಲದೇ ಹೋದವರು. ಮೇಲಾಗಿ ಅವರು ಓದಿದ ಬಹಳಷ್ಟು ಸಾಹಿತ್ಯ-ಮಾಹಿತಿಗಳು ಗುಜರಾತ್-ಹಿಂದಿಯಲ್ಲಷ್ಟೇ ಇರುವ ಸಾಧ್ಯತೆಯಿದೆ. ಇಂಗ್ಲೀಷಿನಲ್ಲಿ ಆಗುವ ಗುಣಮಟ್ಟದ ಚರ್ಚೆಗಳು ಅವರಿಗೆ ಪರಿಚಯ ಇಲ್ಲದೇ ಇರಬಹುದು.

ಆದರೆ ಅವರ ಕಛೇರಿಯಲ್ಲಿ ಕೆಲಸ ಮಾಡುವ ಸರಿಸುಮಾರು 450 ಅಧಿಕಾರಿಗಳಿಗಾದರೂ ಈ ವಿಷಯ ಗೊತ್ತಿರಬೇಕಿತ್ತು. ದೇಶದ ಆರ್ಥಿಕತೆಯ ದಿಕ್ಕುದೆಶೆ ಮತ್ತು ವೇಗಸರಾಗಗಳನ್ನು ನಿರ್ಧರಿಸುವ ಆರ್ಥಿಕ ವಿಚಾರಧಾರೆಗಳು ಇವರಿಗೆ ಪರಿಚಯವಿರಬೇಕಿತ್ತು. ಪ್ರಧಾನಿಯವರ ಭಾಷಣವನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿತ್ತು. ಆದರೆ ಭಾಷಣದಲ್ಲಿ ಯಾವುದೇ ತಪ್ಪು ಮೂಡಿದೆ ಎಂದು ಇದುವರೆಗೆ ಯಾರೂ ಹೇಳಿಲ್ಲದ ಕಾರಣ ಭಾಷಣದ ಸಾಲುಗಳನ್ನು ಉದ್ದೇಶಪೂರ್ವಕವಾಗಿಯೇ ಹೇಳಲಾಗಿದೆಯೆಂದು ನಾವು ಭಾವಿಸಬೇಕಾಗುತ್ತದೆ. ಸೂಕ್ತ ರೀತಿಯಲ್ಲಿ ಹಾಗೂ ವಿಶದವಾಗಿ ಹೇಳದೇ ಹೋದರೂ ಭಾಷಣದ ತಾತ್ಪರ್ಯವು ಮುಂದಿನ ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಆದಕಾರಣ ಆತ್ಮನಿರ್ಭರತೆಯ ಈ ಹೊಸನೀತಿಯನ್ನು ನಾವು ತಾರ್ಕಿಕ ಹಾಗೂ ಆರ್ಥಿಕ ವಿಶ್ಲೇಷಣೆಗೆ ಒಳಪಡಿಸಲೇ ಬೇಕಾಗುತ್ತದೆ.

 1. ಸ್ವಾವಲಂಬನೆಯ ಘೋಷಣೆಯನ್ನು ಮೊದಲಿಗೆ 50 ರ ದಶಕದಲ್ಲಿ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಕೊಟ್ಟಿದ್ದರು. ಇದು ಸ್ವಾತಂತ್ರö್ಯ ಸಂಗ್ರಾಮದ ಮುಂದುವರೆದ ಭಾಗವೇ ಆಗಿತ್ತು. ಇಂಗ್ಲೆಂಡಿನಿಂದ ಆವಶ್ಯಕ ಹಾಗೂ ದುಬಾರಿ ವಸ್ತುಗಳನ್ನು ಆಯಾತ ಮಾಡಿಕೊಳ್ಳುವುದರ ವಿರುದ್ಧ ಹೋರಾಡಿದ ಇತಿಹಾಸದ ಹಿನ್ನೆಲೆಯಲ್ಲಿ ಈ ಸ್ವಾವಲಂಬನೆಯ ದಾರಿ ಕಂಡಿತ್ತು. ಹೇಗೆ ನಾವು ರಾಜಕೀಯವಾಗಿ ಸ್ವಾತಂತ್ರ್ಯರಾಗಿದ್ದೇವೆಯೋ ಅದೇ ರೀತಿಯಲ್ಲಿ ಆರ್ಥಿಕವಾಗಿ ಕೂಡಾ ಸ್ವಾವಲಂಬನೆ ಸಾಧಿಸಬೇಕು ಎನ್ನುವುದು ಅಂದಿನ ಗುರಿಯಾಗಿತ್ತು. ಇದಕ್ಕೆ ತಕ್ಕಂತೆ ಅಂದಿನ ಉದ್ಯಮಿಗಳು ‘ಆಮದು ಪರ್ಯಾಯ’ಕ್ಕೆ ಮುಂದಾದರು. ವಿದೇಶದಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದ ಎಲ್ಲ ವಸ್ತುಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುವುದು ಹಾಗೂ ಅವುಗಳಿಗೆ ಪರ್ಯಾಯ ವಸ್ತುಗಳನ್ನು ಹುಡುಕುವ ಪರಿಪಾಠ ಬೆಳೆಯಿತು.

ಇದರ ಜೊತೆಯಲ್ಲಿಯೇ ನೆಹರೂ ನೇತೃತ್ವದಲ್ಲಿ ಹಲವಾರು ಯೋಜನೆಗಳೂ ಜಾರಿಗೆ ಬಂದವು. ದೇಶದ ಆರ್ಥಿಕತೆ ಅಂತರ್ಮುಖಿಯಾಯಿತು. ಮೊದಲಿಗೆ ಅಮೆರಿಕ-ಯೂರೋಪುಗಳ ಹಾಗೂ ನಂತರದಲ್ಲಿ ಜಪಾನ್ ರಾಷ್ಟ್ರವು ಅಗಾಧ ಆರ್ಥಿಕ ಪ್ರಗತಿ ಕಂಡರೆ ಒಳಮುಖಿಯಾದ ಭಾರತ ತನ್ನ ಉದ್ದಿಮೆಯನ್ನು ಆಧುನೀಕರಿಸಲಿಲ್ಲ. 50 ರ ದಶಕದ ಬಜಾಜ್ ಚೇತಕ್ ಹಾಗೂ ಅಂಬಾಸಿಡಾರ್ ಕಾರಿನ ಮಾದರಿ 90 ರ ದಶಕದವರೆಗೂ ಮುಂದುವರೆದಿತ್ತು. ಈ ನಾಲ್ಕು ದಶಕಗಳಲ್ಲಿ ವಿಶ್ವದ ಆರ್ಥಿಕತೆ ನಾಗಾಲೋಟ ಹಾಕಿದ್ದರೆ ಭಾರತದ ಆರ್ಥಿಕತೆ ಲೈಸೆನ್ಸ್-ಪರ್ಮಿಟ್ ಆಡಳಿತದಲ್ಲಿ ನಲುಗಿತ್ತು. ಉದ್ಯಮಶೀಲತೆ ಮತ್ತು ಆವಿಷ್ಕಾರಗಳಿಲ್ಲದೆ ಸೊರಗಿತ್ತು.

 1. ‘ಆಮದು ಪರ್ಯಾಯ’ ಹುಡುಕುವ ಬದಲು 50 ರ ದಶಕದಿಂದಲೇ ನಾವು ರಫ್ತು ಕೇಂದ್ರಿತ ಆರ್ಥಿಕತೆಗೆ ಒತ್ತು ನೀಡಿದ್ದರೆ ವಿಜ್ಞಾನ ಹಾಗೂ ತಂತ್ರಜ್ಞಾನಗಳಿಗೆ ಹೆಚ್ಚಿನ ಪ್ರಾಮುಖ್ಯ ದೊರೆಯುತ್ತಿತ್ತು. ದುಬಾರಿ ಹಾಗೂ ಐಷಾರಾಮಿ ವಸ್ತುಗಳನ್ನು ಬಳಸುವುದೇ ಅನೈತಿಕವೆಂದು ಭಾವಿಸಿದ ದಶಕಗಳಲ್ಲಿ ಈ ವಸ್ತುಗಳನ್ನು ಬಳಸುವ, ಉತ್ಪಾದಿಸುವ ಹಾಗೂ ರಫ್ತು ಮಾಡುವ ಅವಕಾಶಗಳೇ ಇಲ್ಲವಾದಂತಾದವು. ಕೇಂದ್ರೀಕೃತ ಹಾಗೂ ನಿಯಂತ್ರಿತ ಮಾರುಕಟ್ಟೆಯ ನಿಯಮಗಳು ಭಾರತೀಯರ ಉದ್ಯಮಶೀಲತೆಯನ್ನು ಚಿವುಟಿಹಾಕಿದ್ದವು. ಮುಕ್ತಸ್ಪರ್ಧೆ ಹಾಗೂ ಮಾರುಕಟ್ಟೆ ನಿಯಮಗಳನ್ನು ನಿರ್ಲಕ್ಷಿಸಿದ ಈ ಸರ್ಕಾರಗಳು 80 ರ ಕೊನೆ ಹಾಗೂ 1991 ರವರೆಗೂ ಮುಂದುವರೆದಿದ್ದವು.

91 ರಲ್ಲಿ ಅಧಿಕಾರಕ್ಕೆ ಬಂದ ನರಸಿಂಹರಾವ್ ಸರ್ಕಾರ ಈ ವಿಚಾರಧಾರೆಯನ್ನು ನಯವಾಗಿ ತಿರಸ್ಕರಿಸಿ ಖಾಸಗೀಕರಣ ಹಾಗೂ ಜಾಗತೀಕರಣ ನೀತಿಗಳಿಗೆ ಬೆಂಬಲ ನೀಡಿತ್ತು. ಅಲ್ಲಿಯವರೆಗೆ ಕೇವಲ ಶೇಕಡಾ 4 ರವರೆಗೆ ಬೆಳೆಯುತ್ತಿದ್ದ ಭಾರತೀಯ ಜಿಡಿಪಿ 90 ರ ದಶಕದಲ್ಲಿ ಶೇಕಡಾ 6 ರಿಂದ 8 ರವರೆಗೆ ಬೆಳೆಯಲು ಪ್ರಾರಂಭಿಸಿತ್ತು. ರಫ್ತು ಹಾಗೂ ಆಮದುಗಳೆರಡಕ್ಕೂ ಪ್ರೋತ್ಸಾಹ ಸಿಕ್ಕು, ದೇಶವು ಜಾಗತಿಕ ಉತ್ಪಾದನೆ ಹಾಗೂ ಪೂರೈಕೆಯ ಸರಪಳಿಯಲ್ಲಿನ ಕೊಂಡಿಯಾಗಬಯಸಿತು. ದೇಶದ ಮಾಹಿತಿ ತಂತ್ರಜ್ಞಾನದ ಬೆಂಬಲವೂ ದೊರೆತು 2000 ದಿಂದೀಚೆಗೆ ದೇಶದ ಜಿಡಿಪಿ ಶೇಕಡಾ 8 ರಿಂದ 9 ರವರೆಗೆ ಬೆಳೆಯುವ ಹಂತಕ್ಕೆ ಹೋಗಿತ್ತು. ಬೆಂಗಳೂರು, ಚೆನ್ನೈ, ಹೈದರಾಬಾದ್ ಮುಂತಾದ ಮಹಾನಗರಗಳಲ್ಲಿ ಲಕ್ಷಗಟ್ಟಲೆ ಹೊಸ ಉದ್ಯೋಗಗಳ ಸೃಷ್ಟಿಯಾಗಿ ಬಳಕೆದಾರರ ಹೊಸ ಆರ್ಥಿಕತೆಯೊಂದು ಸೃಷ್ಟಿಯಾಗಿತ್ತು. ಸೇವೆಗಳ ನಿರ್ಯಾತದಲ್ಲಿ ಭಾರತದ ‘ಬ್ಯಾಲೆನ್ಸ್ ಆಫ್ ಪೇಮೆಂಟ್ಸ್’ ಪರಿಸ್ಥಿತಿ ಕೂಡಾ ಸುಧಾರಿತವಾಗಿತ್ತು.

 1. 1991 ರಿಂದ ಶುರುವಾದ ಈ ಮುಕ್ತ ಆರ್ಥಿಕತೆಯೆಡೆಗಿನ ಪಯಣದಲ್ಲಿ ಭಾರತ ಸಿದ್ದ ಪದಾರ್ಥಗಳ ಹಾಗೂ ಬಿಡಿಭಾಗಗಳೆರಡನ್ನೂ ಆಮದು ಮಾಡಿಕೊಂಡಿತ್ತು. ನಾಲ್ಕು ದಶಕಗಳ ನಂತರದಲ್ಲಿ ಭಾರತದ ಬಳಕೆದಾರರು ಆಧುನಿಕ ಕಾರು, ಮೋಟಾರ್ ಬೈಕುಗಳು, ಸ್ಕೂಟರುಗಳು, ಮೊಬೈಲ್ ಫೋನುಗಳು, ಟಿವಿ ಮತ್ತಿತರ ಮನರಂಜನೆಯ ಸಾಧನಗಳನ್ನು ಪಡೆದುಕೊಂಡಿದ್ದರು. ಭಾರತೀಯ ಮಾರುಕಟ್ಟೆಯ ಅಗಾಧ ಗಾತ್ರದ ಕಾರಣದಿಂದ ವಿದೇಶದ ಬಹಳಷ್ಟು ತಯಾರಿಕೆದಾರರು ಇಲ್ಲಿಯೇ ಕಾರ್ಖಾನೆಗಳನ್ನು ತೆಗೆದು ಉತ್ಪಾದನೆ ಮಾಡಲು ಪ್ರಾರಂಭಿಸಿದರು.

ಮೊದಲು ಮಾರುತಿ ಸುಜುಕಿಯಿಂದ ಶುರುವಾದ ಈ ಕ್ರಾಂತಿ ನಂತರ ಟೊಯೊಟಾ, ಹೊಂಡಾ, ಹ್ಯುಂಡೈ, ಫೋರ್ಡ್, ಫೋಕ್ಸ್ವ್ಯಾಗನ್ ಮತ್ತಿತರ ಕಾರು ಕಂಪನಿಗಳು, ನೋಕಿಯಾ, ಸ್ಯಾಂಸಂಗ್ ಮತ್ತಿತರ ಫೋನ್ ಕಂಪನಿಗಳು ನಮ್ಮಲ್ಲಿಯೇ ಉತ್ಪಾದನೆ ಮಾಡಲು ಪ್ರಾರಂಬಿಸಿದ್ದವು. ಮೊದಮೊದಲು ಬಹಳಷ್ಟು ಬಿಡಿಭಾಗಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಈ ಕಂಪನಿಗಳು ನಂತರದಲ್ಲಿ ಎಲ್ಲ ಬಿಡಿಭಾಗಗಳನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಲು ಪ್ರಾರಂಭಿಸಿದ್ದವು. ಇದರ ಫಲಶ್ರುತಿಯಾಗಿ ಅನೇಕ ಭಾರತೀಯ ಕಂಪನಿಗಳೂ ಸಹಾ ಬಿಡಿಭಾಗಗಳನ್ನು ತಯಾರಿಕೆ ಮಾಡಲಾರಂಭಿಸಿ ಇಂದು ಭಾರತವೊಂದು ಅತಿಮುಖ್ಯ ಮೋಟಾರು ವಾಹನಗಳ ಬಿಡಿಭಾಗ ತಯಾರಿಕಾ ದೇಶವಾಗಿ ಹೊರಹೊಮ್ಮಿದೆ. ಈ ತೆರನಾಗಿ ಭಾರತವೂ ಕೂಡಾ ‘ಜಾಗತಿಕ ಉತ್ಪಾದನೆ-ಪೂರೈಕೆಯ ಸರಪಳಿ’ಯ ಅವಿಭಾಜ್ಯ ಅಂಗವಾಗಿ ಬೆಳೆಯಿತು.

ಇಂದು ಯೂರೋಪಿನಲ್ಲಿ ಅಥವಾ ಅಮೆರಿಕದಲ್ಲಿ ತಯಾರಾಗುವ ಮೋಟಾರು ವಾಹನವೊಂದಕ್ಕೆ ಪ್ರಪಂಚದ ಹಲವಾರು ದೇಶಗಳಲ್ಲಿ ತಯಾರಾದ ಬಿಡಿಭಾಗಗಳು ಬಳಕೆಯಾಗುತ್ತಿವೆ. ಜಪಾನಿನ ‘ಜಸ್ಟ್ ಇನ್ ಟೈಮ್’ ತಾಂತ್ರಿಕತೆಯಲ್ಲಿ ಎಲ್ಲ ತಯಾರಕರು ಪರಸ್ಪರ ಅವಲಂಬನೆಯ ದಾರಿಯಲ್ಲಿ ಅತ್ಯಂತ ದಕ್ಷ ಮತ್ತು ಕಡಿಮೆ ಖರ್ಚಿನಲ್ಲಿ ಬಳಕೆದಾರರಿಗೆ ಅತಿಮೌಲ್ಯದ ವಸ್ತು ಪೂರೈಕೆಯಲ್ಲಿ ತೊಡಗಿದ್ದಾರೆ. ಈ ‘ಪೂರೈಕೆ ಸರಪಳಿ’ಯೇ ಇಂದು ಜಾಗತೀಕರಣದ ಬೆನ್ನೆಲುಬಾಗಿದೆ. ಎಲ್ಲ ದೇಶಗಳ ಎಲ್ಲ ಉತ್ಪಾದಕರ ಪರಸ್ಪರ ಅವಲಂಬನೆಯಲ್ಲಿ ದೇಶಗಳ ನಡುವಿನ ಬಾಂಧವ್ಯದ ಕೊಂಡಿ ಭದ್ರವಾಗುತ್ತಿದೆ.

 1. ಇದರ ಜೊತೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಭಾರತದ ಮಾಹಿತಿ ತಂತ್ರಜ್ಞಾನದ ಸಾಮರ್ಥ್ಯವೂ ಬೆಳೆದಿದೆ. ಇನ್‌ಫೋಸಿಸ್, ವಿಪ್ರೋಗಳಿಂದ ಶುರುವಾದ ಈ ಕ್ರಾಂತಿ ಅನೇಕ ಮಧ್ಯ ಹಾಗೂ ಸಣ್ಣಗಾತ್ರದ ಭಾರತೀಯ ಕಂಪನಿಗಳು ದೇಶದ ಎಲ್ಲಾ ಮಹಾನಗರಗಳಲ್ಲಿ ತಮ್ಮ ಶಾಖೆ ತೆರೆಯುವಂತಾಗಿದೆ. ದೇಶದ ಎಂಜಿನಿಯರುಗಳು ಶೇಕಡಾ 90ರಷ್ಟು ಫಾರ್ಚೂನ್-500 ಕಂಪನಿಗಳ ಮಾಹಿತಿ ತಂತ್ರಜ್ಞಾನದ ಸೌಲಭ್ಯವನ್ನು ನಡೆಸುತ್ತಿದ್ದಾರೆ. ವಿದೇಶದ ಈ ಫಾರ್ಚೂನ್-500 ಕಂಪನಿಗಳು ಕೂಡಾ ನಮ್ಮ ನಗರಗಳಲ್ಲಿ ತಮ್ಮ ಶಾಖೆಯನ್ನು ತೆರೆದು ಭಾರತೀಯ ಎಂಜಿನಿಯರುಗಳನ್ನು ತಾವೇ ನೇರವಾಗಿ ಕೆಲಸಕ್ಕೆ ತೆಗೆದುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.

ಇದರ ಜೊತೆಗೆ ಭಾರತೀಯ ಸಂಜಾತ ಎಂಜಿನಿಯರುಗಳು ಅಮೆರಿಕದಲ್ಲಿ ಕೆಲಸಕ್ಕೆ ಸೇರಿ ಈ ದೈತ್ಯ ಕಂಪನಿಗಳ ನೇತೃತ್ವವನ್ನೂ ಪಡೆಯುವಂತಾಗಿದ್ದಾರೆ. ಇಂದು ಮೈಕ್ರೋಸಾಫ್ಟ್, ಗೂಗಲ್, ಅಡೋಬ್ ಮತ್ತಿತರ ಜಾಗತಿಕ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಭಾರತೀಯ ಸಂಜಾತರಿದ್ದಾರೆ. ಹೀಗೆ ಭಾರತ ಈ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ‘ಪವರ್‌ಹೌಸ್’ ಆಗಿದೆ ಎಂದರೆ ಆಶ್ಚರ್ಯವಿಲ್ಲ.

 1. ಕಳೆದ ದಶಕಗಳಲ್ಲಿ ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದರೆ ಚೀನಾ ಭೌತಿಕ ವಸ್ತು ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿತ್ತು. ಅತ್ಯಂತ ತ್ವರಿತವಾಗಿ ಕಾರ್ಖಾನೆಗಳನ್ನು ಸ್ಥಾಪಿಸುವ ಹಾಗೂ ಬೃಹತ್ ಉತ್ಪಾದಕ ಸಾಮರ್ಥ್ಯವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಯಶಸ್ಸು ಸಾಧಿಸಿತ್ತು. ಯೂರೋಪ್ ಹಾಗೂ ಅಮೆರಿಕದ ಬಹುತೇಕ ಎಲ್ಲ ಉತ್ಪಾದಕ ಕಂಪನಿಗಳು ತಮ್ಮ ದೇಶೀಯ ಕಾರ್ಖಾನೆಗಳನ್ನು ಮುಚ್ಚಿ ಅದರ ಅರ್ಧದ ಖರ್ಚಿನಲ್ಲಿ ಚೀನಾದಲ್ಲಿ ಉತ್ಪಾದನೆ ಮಾಡಲಾರಂಭಿಸಿದರು. ಕೆಲವರು ತಾವೇ ಚೀನಾದಲ್ಲಿ ಕಾರ್ಖಾನೆ ತೆರೆದರೆ ಬಹುತೇಕರು ಚೀನಾದ ಕಂಪನಿಗಳಿಗೆ ಗುತ್ತಿಗೆ ನೀಡಿದ್ದರು. ಈ ರೀತಿಯಲ್ಲಿ ಪಡೆದ ಸಾಮರ್ಥ್ಯವನ್ನು ಚೀನಾ ಎಲ್ಲ ಪದಾರ್ಥಗಳ ಅಗ್ಗದ ಉತ್ಪಾದನೆಗೆ ಬಳಸಿತ್ತು.

ನಾವು ಈಗ ಭಾರತದಲ್ಲಿ ತಯಾರಿಸಲಾಗುವ ಯಾವುದೇ ವಸ್ತುವಿನ ಶೇಕಡಾ 50 ರ ಖರ್ಚಿನಲ್ಲಿ ಅದನ್ನು ಚೀನಾ ತಯಾರಿಸಬಲ್ಲುದಾಯಿತು. ಈ ವಸ್ತುಗಳ ಮೇಲೆ ನೀವು ಶೇಕಡಾ 10-20 ರಷ್ಟು ಕಸ್ಟಂಮ್ಸ್ ಸುಂಕ ವಿಧಿಸಿದರೂ ಕೂಡಾ ಈ ವಸ್ತುಗಳು ದೇಶಿ ಮಾರುಕಟ್ಟೆಯಲ್ಲಿ ಉತ್ಪಾದಿತವಾದ ವಸ್ತುಗಳಿಗಿಂತ ಅಗ್ಗದ ವಸ್ತುಗಳಾದವು. ಇದರಿಂದ ಹಲವಾರು ಯಾಂತ್ರಿಕ, ಎಲೆಕ್ಟ್ರಾನಿಕ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಭಾರಿ ಸಂಖ್ಯೆಯಲ್ಲಿ ಭಾರತವೂ ಆಮದು ಮಾಡಿಕೊಳ್ಳಲಾರಂಭಿಸಿತು. ಸಹಜವಾಗಿ ಚೀನಾಗೆ ಭಾರತದ ರಫ್ತು ಮೌಲ್ಯ ಕುಗ್ಗಿ ಆಮದು ಮೌಲ್ಯ ಹಿಗ್ಗಲಾರಂಭಿಸಿತು.

 1. ಇದೀಗ ಭಾರತ ರಫ್ತು ಮತ್ತು ಆಮದು ಮಾಡಿಕೊಳ್ಳುತ್ತಿರುವ ಮೊದಲ 5 ಪದಾರ್ಥಗಳ ಪಟ್ಟಿ ನೋಡೋಣ.

ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದಲ್ಲಿ

ಪದಾರ್ಥ ರಫ್ತು   ಪದಾರ್ಥ ಆಮದು
ಸಂಸ್ಕರಿಸಿದ ಪೆಟ್ರೋಲಿಯಮ್  41.5 ಕಚ್ಚಾ ಪೆಟ್ರೋಲಿಯಮ್   101.0
ಸಂಸ್ಕರಿಸಿದ ವಜ್ರ   26.3 ಚಿನ್ನ     32.8
ಔಷಧಿ ಪದಾರ್ಥಗಳು   14.0 ಕಲ್ಲಿದ್ದಲು        27.2
ಆಭರಣಗಳು    12.4 ಕಚ್ಚಾ ವಜ್ರ        24.9
ಅಕ್ಕಿ      7.47 ಪೆಟ್ರೊಲಿಯಮ್ ಗ್ಯಾಸ್         16.9

ಅದೇ ರೀತಿಯಲ್ಲಿ ಭಾರತ ಯಾವ ದೇಶಗಳಿಗೆ ರಫ್ತು ಹಾಗೂ ಯಾವ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆಯೆಂಬುದನ್ನೂ ನೋಡೋಣ.

ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದಲ್ಲಿ

ದೇಶಕ್ಕೆ ರಫ್ತು   ದೇಶದಿಂದ ಆಮದು
ಯು.ಎಸ್.ಎ.  52.0 ಚೀನಾ  75.5
ಯು.ಎ.ಇ.    27.1 ಯು.ಎಸ್.ಎ.     31.6
ಚೀನಾ   16.6 ಸೌದಿ ಅರೇಬಿಯಾ        26.3
ಹಾಂಗ್‌ಕಾಂಗ್      12.8 ಯು.ಎ.ಇ.        23.8
 ಆರ್ಮನಿ    9.6 ಇರಾಖ್         20.8

 

 1. ಕಚ್ಚಾ ಪೆಟ್ರೋಲಿಯಮ್ ಹಾಗೂ ವಜ್ರದ ಹರಳುಗಳ ಹೊರತಾಗಿ ಭಾರತ ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ವಸ್ತುಗಳಲ್ಲಿ ಚಿನ್ನ, ಪಾಮ್ ಆಯಿಲ್, ಯಾಂತ್ರಿಕ-ಎಲೆಕ್ಟ್ರಾನಿಕ್ ವಸ್ತುಗಳು, ಕಲ್ಲಿದ್ದಲು ಹಾಗೂ ರಾಸಾಯನಿಕ ವಸ್ತುಗಳು ಮುಖ್ಯವಾದವು. ಚಿನ್ನ, ಕಲ್ಲಿದ್ದಲು ಹಾಗೂ ಪಾಮ್ ಆಯಿಲ್‌ಗಳನ್ನು ದೇಶೀಯವಾಗಿಯೇ ಬಳಕೆ ಮಾಡುತ್ತಿದ್ದರೆ ಪೆಟ್ರೋಲಿಯಮ್, ವಜ್ರದ ಹರಳುಗಳು, ರಾಸಾಯನಿಕ ವಸ್ತುಗಳು ಹಾಗೂ ಯಾಂತ್ರಿಕ ವಸ್ತುಗಳು ನಂತರದ ಸಿದ್ಧಪದಾರ್ಥಗಳ ಕಚ್ಚಾ ವಸ್ತು-ಬಿಡಿಭಾಗಗಳಿಗಾಗಿ ಉಪಯೋಗವಾಗುತ್ತಿದೆ. ಈ ಪದಾರ್ಥಗಳ ಪ್ರತ್ಯೇಕ ಆಮದು ಪರ್ಯಾಯ ಸಾಧ್ಯತೆಯ ವಿವರಣೆ ಹೀಗಿದೆ.

ಕಚ್ಚಾ ಪಟ್ರೋಲಿಯಮ್: ದೇಶದ ಒಟ್ಟು ಪೆಟ್ರೋಲಿಯಮ್ ಬಳಕೆಯ ಶೇಕಡಾ 25 ರಷ್ಟು ಮಾತ್ರ ದೇಶೀಯವಾಗಿ ಉತ್ಪಾದನೆಯಾಗುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರದಲ್ಲಿನ ಈ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಮುಂದಿನ ದಶಕದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ರೈಲು ಜಾಲ ಹಾಗೂ ಎಲೆಕ್ಟ್ರಿಕ್ ಮೋಟಾರು ವಾಹನಗಳು ಈ ಬೇಡಿಕೆಯನ್ನು ಕಡಿಮೆ ಮಾಡಬಹುದು. ಅಲ್ಲಿಯವರೆಗೆ ಇದನ್ನು ತಗ್ಗಿಸಲಾಗದು.

ಚಿನ್ನ: ದೇಶೀಯ ಚಿನ್ನದ ಬೇಡಿಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಜನರ ಆದಾಯ-ಉಳಿತಾಯ ಹೆಚ್ಚಿದಂತೆ ಚಿನ್ನದ ಬೇಡಿಕೆ ಹೆಚ್ಚುತ್ತಲೇ ಇದ್ದು ಇದನ್ನು ಕುಗ್ಗಿಸಲು ಮಾಡಿದ ಎಲ್ಲ ಪ್ರಯತ್ನಗಳು ಇದುವರೆಗೆ ಸೋತಿವೆ.

ಪಾಮ್ ಆಯಿಲ್: ಬೆಳೆಯುತ್ತಿರುವ ದೇಶದ ಆಹಾರ ಬೇಡಿಕೆಯ ಪ್ರಮುಖ ಪದಾರ್ಥವಾಗಿ ಈ ಪಾಮ್ ಆಯಿಲ್ ಅಗತ್ಯ ಬೆಳೆಯುತ್ತಲೇ ಇದೆ. ಮಲೇಶಿಯಾ, ಇಂಡೀನೇಷಿಯಾಗಳಿಂದ ಆಮದಾಗುವ ಈ ಎಣ್ಣೆಯ ಬಳಕೆ-ಬೇಡಿಕೆ ಸದ್ಯಕ್ಕೆ ಕುಗ್ಗುವ ಹಾಗೆ ಕಾಣುತ್ತಿಲ್ಲ.

ಕಲ್ಲಿದ್ದಲು: ನಮ್ಮ ಹಲವಾರು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಆಮದಾಗುವ ಕಲ್ಲಿದ್ದಲಿನ ಮೇಲೆ ನಿರ್ಭರವಾಗಿವೆ. ಅಣುವಿದ್ಯುತ್ ಹಾಗೂ ಸೌರ-ವಾಯು ವಿದ್ಯುತ್ ಪೂರೈಕೆಯಿಂದ ಮುಂದಿನ ದಶಕಗಳಲ್ಲಿ ಇದರ ಅಗತ್ಯ ನೀಗಿಸಬಹುದು.

ಯಾಂತ್ರಿಕ-ಎಲೆಕ್ಟ್ರಾನಿಕ್ ಬಿಡಿಭಾಗಗಳು: ಇವುಗಳನ್ನು ದೇಶೀಯವಾಗಿ ಉತ್ಪಾದನೆ ಮಾಡಬಹುದಾದರೂ ಇವುಗಳಲ್ಲಿ ಅನೇಕವು ರಫ್ತಾಗುವ ಸಿದ್ಧ ಪದಾರ್ಥಗಳ ಬಿಡಿಭಾಗಗಳಾಗಿವೆ.

ರಾಸಾಯನಿಕಗಳು: ಹಲವಾರು ರಾಸಾಯನಿಕಗಳು ಭಾರತದಲ್ಲಿ ಲಭ್ಯವಿಲ್ಲ. ದೇಶದ ಪರಿಸರ ನಿಯಂತ್ರಣ ಲಾಬಿ ದೇಶದಲ್ಲಿ ಈ ರಾಸಾಯನಿಕ ಕಾರ್ಖಾನೆಗಳು ಹಾಗೂ ಉತ್ಪಾದನೆಗೆ ಅವಕಾಶ ನೀಡಿಲ್ಲ. ಈ ರಾಸಾಯನಿಕಗಳು ದೇಶೀಯ ಬೇಡಿಕೆಯ ರಸಗೊಬ್ಬರ ಹಾಗೂ ಔಷಧಿ ತಯಾರಿಕೆಯಲ್ಲಿ ಅತ್ಯಗತ್ಯವಾಗಿವೆ.

ವಜ್ರ: ಕಚ್ಚಾ ವಜ್ರದಿಂದ ಸಂಸ್ಕರಿಸಿದ ವಜ್ರದ ಆಭರಣಗಳು ಬಹುತೇಕ ರಫ್ತಾಗುತ್ತಿವೆ. ಇದರ ಆಮದು ತಡೆಯುವಂತಿಲ್ಲ.

 

 • ಹೀಗೆ ನಾವು ಆಮದು ಪರ್ಯಾಯ ಮಾಡುವ ರಸ್ತೆ ಕಠಿಣವಾಗಿದೆ. ಪ್ರಧಾನಿಯವರು ಸ್ವಾವಲಂಬನೆಯ ಮಾತುಗಳನ್ನು ಆಡಿರಬಹುದು. ಆದರೆ ಯಾವ ವಿಷಯದಲ್ಲಿ ನಾವು ಸ್ವಾವಲಂಬಿಗಳಾಗಬೇಕು ಹಾಗೂ ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳೇನು ಎಂಬುದನ್ನೂ ಹೇಳಬೇಕಿತ್ತು. ಈ ಸ್ವಾವಲಂಬನೆಯ ಅಸ್ತ್ರ ಕೇವಲ ಚೀನಾದಿಂದ ಆಮದಾಗುವ ಪದಾರ್ಥಗಳ ಮೇಲೆ ಎಂದು ಕೆಲವರು ಪ್ರತಿಪಾದಿಸಿದ್ದಾರೆ. ಹಾಗಾದರೆ ಸದ್ಯಕ್ಕೆ ಚೀನಾದಿಂದ ಆಮದಾಗುವ ಪದಾರ್ಥಗಳ ಪಟ್ಟಿ-ಮೌಲ್ಯವನ್ನು ನೋಡೋಣ.

ರೂ. ಸಾವಿರ ಕೋಟಿಗಳಲ್ಲಿ.

ಪದಾರ್ಥ 17-18   18-19
ಯಾಂತ್ರಿಕ ಎಲೆಕ್ಟ್ರಾನಿಕ್    184.8 144.4   
ಯಾಂತ್ರಿಕ ಇತ್ಯಾದಿ    87.3 93.6  
ರಾಸಾಯನಿಕಗಳು      45.7 60.1  
ರಸಗೊಬ್ಬರಗಳು         6.9 14.4  
ಪ್ಲಾಸ್ಟಿಕ್ ಪದಾರ್ಥಗಳು           15.2 19.0  
ಕಬ್ಬಿಣ ಮತ್ತು ಉಕ್ಕು      10.4 10.0  
 ಗಾಜು  ಕನ್ನಡಕ ಕ್ಯಾಮೆರಾ ಲೆನ್ಸ್    10.7 11.1  
 ಉಕ್ಕಿನ ಸಾಮಾನುಗಳು    9.5 12.2  
 ಮೋಟಾರು ಬಿಡಿಭಾಗಗಳು     9.4 10.6  
 ಉಳಿಕೆ ರಾಸಾಯನಿಕಗಳು     8.7 9.0  
 • ಅದೇ ರೀತಿಯಲ್ಲಿ ನಮ್ಮ ದೇಶಕ್ಕೆ ಆಮದಾಗುವ ಹಾಗೂ ದೇಶದಿಂದ ರಫ್ತಾಗುವ ವಸ್ತುಗಳು ಯಾವ ರೀತಿಯವು ಎಂಬುದನ್ನೂ ಗಮನಿಸೋಣ. ಇವುಗಳಲ್ಲಿ ಆಮದಾಗುವ ಬಹಳಷ್ಟು ಪದಾರ್ಥಗಳು ಬಳಕೆದಾರರಿಂದ ಅಲ್ಲದೆ ಉತ್ಪಾದಕ ಕಾರ್ಖಾನೆಗಳಿಂದ ಆಮದಾಗುತ್ತಿವೆ ಎಂಬುದನ್ನು ಗಮನಿಸೋಣ.

2018 / ಶೇಕಡಾವಾರು

ಕ್ಯಾಪಿಟಲ್ (ಉತ್ಪಾದಕ) ವಸ್ತುಗಳ   ಕನ್ಸೂಮರ್ (ಬಳಕೆಯ) ವಸ್ತುಗಳು  (ಇಂಟರ್ ಮಿಡಿಯೆಟ್) ಬಿಡಿಭಾಗಗಳು ಕಚ್ಚಾ ವಸ್ತುಗಳ
ರಫ್ತು  15.0 44.9  32.6 7.4
ಆಮದು   21.3 11.5  30.7 36.0
 • ಮೇಲಿನ ಕೋಷ್ಟಕದಲ್ಲಿ ನೀಡಿರುವಂತೆ ನಾವು ಆಮದು ಪರ್ಯಾಯ ಹುಡುಕುವ ವಸ್ತುಗಳು ಕೇವಲ ಶೇಕಡಾ 11.5 ರಷ್ಟಿವೆ. ಉಳಿದ ವಸ್ತುಗಳು ಉತ್ಪಾದಕ-ಕ್ಯಾಪಿಟಲ್ ವಸ್ತುಗಳು ಅಥವಾ ಕಚ್ಚಾ-ಬಿಡಿಭಾಗಗಳಾಗಿವೆ. ಮೇಲಾಗಿ ಕಳೆದ ಐವತ್ತು ವರ್ಷಗಳಲ್ಲಿ ಭಾರತ ಬಹುತೇಕ ಸ್ವಾವಲಂಬಿಯಾಗಿದೆ. ದೇಶದಲ್ಲಿ ಬಳಕೆಯಾಗುವ ಬಹುತೇಕ ವಸ್ತುಗಳು ದೇಶದಲ್ಲಿಯೇ ಉತ್ಪತ್ತಿಯಾಗುತ್ತಿವೆ. ಅತಿಹೆಚ್ಚಿನ ಸುಂಕ ದರದ ಹೆದರಿಕೆಯಲ್ಲಿ ಹಾಗೂ ನಂತರದಲ್ಲಿ ರಿಪೇರಿ-ಬಿಡಿಭಾಗಗಳು ಲಭ್ಯವಿಲ್ಲದ ಕಾರಣ ಮೋಟಾರು ವಾಹನಗಳ ಆಮದು ಬಹುತೇಕ ನಿಂತುಹೋಗಿದೆ.

ಕಲ್ಲಿದ್ದಲಿನ ಆಮದು ಪ್ರಮಾಣ ಕೂಡ ಕಡಿಮೆಯಾಗಿದೆ. ದೇಶವು ಹೊಸದಾಗಿ ಯಾವುದೇ ಕಲ್ಲಿದ್ದಲು-ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆಗೆ ಅನುಮತಿ ನೀಡುತ್ತಿಲ್ಲ. ನ್ಯಾಚುರಲ್ ಗ್ಯಾಸ್ ಆಧಾರಿತ ವಿದ್ಯುತ್ ಪೂರೈಕೆಗೆ ಬೆಂಬಲ ನೀಡಲಾಗುತ್ತಿದೆ. ಚಿನ್ನ ಹಾಗು ಪಾಮ್ ಆಯಿಲ್ ಹೊರತಾಗಿ ಅನವಶ್ಯಯಕವಾಗಿ ಆಮದಾಗುತ್ತಿರುವ ಬಹುತೇಕ ಪದಾರ್ಥಗಳು ಕೂಡಾ ಇಂಟರ್‌ಮೀಡಿಯೆಟ್ ಹಾಗೂ ಕಚ್ಚಾ ಪದಾರ್ಥಗಳಾಗಿದ್ದು ಇವುಗಳ ಆಮದು ಪರ್ಯಾಯ ಕಷ್ಟಸಾಧ್ಯವಾಗಿದೆ. ದೇಶದ ರಸಗೊಬ್ಬರ ಹಾಗೂ ರಾಸಾಯನಿಕ ಔಷಧಿ ಉದ್ಯಮವು ಚೀನಾದಿಂದ ಆಮದಾಗುವ ರಾಸಾಯನಿಕಗಳ ಮೇಲೆ ನಿರ್ಭರವಾಗಿದೆ. ಈ ರಾಸಾಯನಿಕಗಳು ಸ್ಥಳೀಯವಾಗಿ ಲಭ್ಯವಿಲ್ಲ. ತಾಮ್ರ ಮತ್ತಿತರ ಲೋಹ ಉದ್ಯಮಗಳನ್ನು ದೇಶದಲ್ಲಿ ಬೆಳೆಯಲು ಬಿಡುತ್ತಿಲ್ಲ. ಇದಕ್ಕೆ ಉದಾಹರಣೆಯಾಗಿ ತೂತುಕುಡಿಯಲ್ಲಿ ಸ್ಟರ್ಲೈಟ್ ಕಾರ್ಖಾನೆ ಮುಚ್ಚಿದ ಘಟನೆಯನ್ನು ಗಮನಿಸಬಹುದು.

 • ಆಮದು ಮತ್ತು ರಫ್ತು ಪರಸ್ಪರ ಅವಲಂಬಿತ ಹಾಗೂ ಹೊಂದಾಣಿಕೆಯ ವಿಷಯಗಳು. ಯಾವುದೇ ದೇಶವೂ ಇನ್ನೊಂದು ದೇಶದಿಂದ ಕೇವಲ ಆಮದು ಬಯಸುವುದಿಲ್ಲ. ತಾನು ಆಮದು ಮಾಡಿಕೊಳ್ಳುವ ವಸ್ತುಗಳ ಮೌಲ್ಯದಷ್ಟು ರಫ್ತು ಮಾಡಲೂ ಬಯಸುತ್ತದೆ. ಇಲ್ಲದೇ ಹೋದರೆ ಆ ದೇಶದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನೇ ಕಡಿಮೆ ಮಾಡುತ್ತದೆ. ಸರಕು ಹಾಗೂ ಸೇವೆಗಳನ್ನು ಭಾರತದಿಂದ ಆಮದು ಪಡೆಯುವ ಅಮೆರಿಕ, ಭಾರತದ ಮೇಲೆ ತನ್ನ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಪ್ರಭಾವ ಬೀರುತ್ತದೆ. ಈ ಕಾರಣದಿಂದಲೇ ಭಾರತವು ಅಮೆರಿಕಾದಿಂದ ಶೆಲ್ ಕಚ್ಚಾತೈಲ ಹಾಗೂ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಬೇಕಿದೆ. ಭಾರತವು ಚೀನಾದಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಹೊಂದಿದೆ. ಈ ಆಮದು ಪ್ರಮಾಣವನ್ನು ಕಾಲಕ್ರಮೇಣ ಕಡಿಮೆ ಮಾಡಬಹುದು. ಅದಕ್ಕೆ ಕೇವಲ ಘೋಷಣೆ ಸಾಲುವುದಿಲ್ಲ. ನಮ್ಮ ದೇಶದಲ್ಲಿ ಉತ್ಪಾದನೆ ಪೂರಕ ವಾತಾವರಣ ಬೇಕು. ದೇಶದಲ್ಲಿ ಉದ್ದಿಮೆ ಮಾಡುವ ಸುಲಭ ಸಾಧ್ಯತೆ ಬೇಕು. ಸ್ವಲ್ಪ ಮಟ್ಟಿಗೆ ನಾವು ‘ಪರಿಸರ ಕಾಳಜಿ’ಯನ್ನೂ ಮರೆಮಾಚಬೇಕಾಗುತ್ತದೆ. ಇಲ್ಲವಾದಲ್ಲಿ ರಾಸಾಯನಿಕ, ತಾಮ್ರ ಮತ್ತಿತರ ಕಚ್ಚಾ ಪದಾರ್ಥಗಳನ್ನು ನಮ್ಮ ದೇಶದಲ್ಲಿ ತಯಾರಿಕೆ ಮಾಡುವುದು ಸುಲಭವಲ್ಲ.
 • ಈ ಮಧ್ಯೆ ಚೀನಾದೊಡನೆ ತನ್ನ ವ್ಯಾಪಾರಿ ವಹಿವಾಟಿನಲ್ಲಿ ಅಮೆರಿಕ ಮಾಡಿದ ತಪ್ಪುಗಳನ್ನೂ ಗಮನಿಸೋಣ. ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕದ ಕಂಪನಿಗಳು ದೇಶಿ ನೆಲದಲ್ಲಿ ತಮ್ಮ ಉತ್ಪಾದಕ ಸಾಮರ್ಥ್ಯವನ್ನು ಕಡಿತಗೊಳಿಸಿ ಚೀನಾದಲ್ಲಿ ತಮ್ಮ ಪದಾರ್ಥಗಳನ್ನು ಉತ್ಪಾದನೆ ಮಾಡುವುದು ಕಲಿತವು. ಐಫೋನ್‌ನಿಂದ ಹಿಡಿದು ಬಹುತೇಕ ಫೋನ್ ತಯಾರಕರು ಹಾಗೂ ಉಳಿದೆಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ತಯಾರಕರು ಕೇವಲ ಚೀನಾದಿಂದ ತಮ್ಮ ವಸ್ತುಗಳನ್ನು ಆಮದು ಮಾಡಿಕೊಳ್ಳಲಾರಂಭಿಸಿದರು. ಹೀಗೆ ಅಮೆರಿಕ ತನ್ನ ಉದ್ಯೋಗ ಸೃಷ್ಟಿ ಕಡಿಮೆ ಮಾಡಿ ಚೀನಾದ ಮೇಲೆ ಅವಲಂಬಿತವಾಯಿತು. ಈಗ ಅದೇ ಚೀನಾ ಅಮೆರಿಕದ ಬಾಬತ್ತಿನಲ್ಲಿ ಆದಾಯ ಗಳಿಸಿ ಸೆಡ್ಡು ಹೊಡೆಯುತ್ತಿದೆ. ಮಿಲಿಟರಿ ಮತ್ತು ಆರ್ಥಿಕ ಶಕ್ತಿಯಾಗಿ ಬೆಳೆದು ಅಮೆರಿಕದ ಯಜಮಾನಿಕೆಗೆ ಸವಾಲು ಹಾಕಿದೆ.

ಇದಕ್ಕೆ ಕಾರಣವಾದ ತಪ್ಪುಗಳು ಹೀಗಿವೆ. (ಅ)ಅಮೆರಿಕದಲ್ಲಿ ಆಮದಾಗುವ ವಸ್ತುಗಳ ಮೇಲಿನ ಸುಂಕವನ್ನು ಬಹುತೇಕ ತೆಗೆದುಹಾಕಿದ್ದು. (ಆ)ದೇಶೀ ಉದ್ಯಮಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿದ್ದು, ಹಾಗೂ (ಇ)ಕೆಲವು ಅತ್ಯವಶ್ಯಕ ದಿನಬಳಕೆಯ ವಸ್ತುಗಳ ಆಮದಿನ ಮೇಲೆ ನಿರ್ಬಂಧ ವಿಧಿಸದೇ ಇರುವುದು. ಈ ತಪ್ಪುಗಳಿಂದ ಇಂದು ಅಮೆರಿಕ ಟಾಯ್‌ಲೆಟ್ ಪೇಪರ್ ಕೂಡಾ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ಬಂದಿದೆ.

 • ಅಮೆರಿಕ ಮಾಡಿದ ತಪ್ಪುಗಳನ್ನು ನಾವು ಮಾಡಬೇಕಿಲ್ಲ. ಆದರೆ ಆತ್ಮನಿರ್ಭರತೆಯ ಈ ಘೋಷಣೆ ಆರ್ಥಿಕವಾಗಿ ಹಾಗೂ ತಾರ್ಕಿಕವಾಗಿ ಇಂದು ಸಲ್ಲದ ಕೂಗು. ಅತ್ಯವಶ್ಯಕ ವಸ್ತುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ನಾವು ದೇಶೀಯವಾಗಿ ಉತ್ಪನ್ನ ಮಾಡಿಕೊಳ್ಳಲೇಬೇಕು. ಆದರೆ ಇದಕ್ಕೆ ಹೊರತಾಗಿ ರಫ್ತು-ಆಮದು ಪರಸ್ಪರ ಅವಲಂಬನೆ ಅತ್ಯಗತ್ಯ. ಹಲವಾರು ಕಚ್ಚಾ ಪದಾರ್ಥಗಳು ಹಾಗೂ ಬಿಡಿಭಾಗಗಳನ್ನು ನಾವು ಆಮದು ಮಾಡಿಕೊಳ್ಳಲೇಬೇಕು.

ಅದೇ ರೀತಿಯಲ್ಲಿ ಭಾರತದಲ್ಲಿ ದೊರಕುವ ಕೆಲವು ಕಚ್ಚಾಪದಾರ್ಥಗಳು / ಆಹಾರ ಪದಾರ್ಥಗಳನ್ನು ಬೇರೆಯವರು ಆಮದು ಮಾಡಿಕೊಳ್ಳಲೇಬೇಕು. ಇದಕ್ಕೆ ಹೊರತಾಗಿ ಪ್ರತಿಯೊಂದು ದೇಶವು ಈ ಮೌಲ್ಯವರ್ಧಿತ ಉತ್ಪಾದಕ ಶ್ರೇಣಿಯಲ್ಲಿ ಮೇಲು ಮೇಲಕ್ಕೆ ಹೋಗಲು ಪ್ರಯತ್ನಿಸುತ್ತಿರುತ್ತದೆ. ಸೆಣಬಿನ ನಾರಿನ ಚೀಲ ನೇಯ್ಗೆ ಮಾಡಲು ಅಥವಾ ಅಗ್ಗದ ಬಟ್ಟೆ ಹೊಲಿಯಲು ಮುಂದುವರೆದ ರಾಷ್ಟ್ರಗಳು ಮುಂದೆ ಬರುವುದಿಲ್ಲ. ಈ ಕೆಲಸ ಸಹಜವಾಗಿ ಭಾರತ, ಬಾಂಗ್ಲಾದೇಶ, ವಿಯೆಟ್ನಾಂಗಳಿಗೆ ಸಿಗುತ್ತದೆ. ಅತ್ಯಾಧುನಿಕ ಯಂತ್ರಗಳ ಹಾಗೂ ಕ್ಯಾಪಿಟಲ್ (ಉತ್ಪಾದಕ ಫ್ಯಾಕ್ಟರಿಗಳು) ಸಾಮಾನುಗಳನ್ನು ಕೇವಲ ಮುಂದುವರಿದ ದೇಶಗಳು ತಯಾರಿಸಬಲ್ಲುವು. ಇವು ಸದ್ಯಕ್ಕೆ ಭಾರತದಲ್ಲಿ ಲಭ್ಯವಿಲ್ಲ. ಈ ಕ್ಯಾಪಿಟಲ್ ಸಾಮಾನುಗಳನ್ನು ನಾವು ಆಮದು ಮಾಡಿಕೊಳ್ಳಲೇಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ನಾವು ಸ್ಪರ್ಧೆ ಮಾಡಲೇ ಬೇಕಿದ್ದರೆ ಈ ರೀತಿಯ ಕೊಡು-ಕೊಳ್ಳುವ ಸಂಬಂಧ ಅತ್ಯಗತ್ಯ ಹಾಗೂ ಅನಿವಾರ್ಯ.

 • ಆತ್ಮನಿರ್ಭರತೆಯ ಹೆಸರಿನಲ್ಲಿ ನಾವು ಆಮದು ಮಾಡುವುದನ್ನು ನಿಲ್ಲಿಸಿದರೆ ನಮ್ಮ ಉತ್ಪಾದಕ ಸಾಮರ್ಥ್ಯದ ಸ್ಪರ್ಧಾತ್ಮಕತೆ ಕುಂಠಿತವಾಗಬಹುದು. ಜಾಗತಿಕ ಸ್ಪರ್ಧೆಯಲ್ಲಿ ಗುಣಮಟ್ಟದ ಖಾಯಂ ಗ್ಯಾರಂಟಿ ನೀಡದೆ ಉಳಿಯುವುದು ಸಾಧ್ಯವಿಲ್ಲ. ಆಮದು ನಿಲ್ಲಿಸಿ ಕೇವಲ ದೇಶೀಯ ಉತ್ಪನ್ನಗಳನ್ನೇ ಬಳಸಬೇಕು ಎಂದಾದರೆ ನಮ್ಮ ಪದಾರ್ಥಗಳ ಗುಣಮಟ್ಟ ಇಳಿಯುವುದು ಖಂಡಿತ. ಉತ್ತಮ ಗುಣಮಟ್ಟದ ವಸ್ತುಗಳ ಆಮದಿನ ಹೆದರಿಕೆಯಲ್ಲಿ ದೇಶೀಯ ಉತ್ಪಾದಕರು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿರಬೇಕು. ಇದು ಸ್ಪರ್ಧಾತ್ಮಕ ಜಗತ್ತಿನ ಅನಿವಾರ್ಯತೆ. ಯಾವುದೇ ಮುಂದುವರಿದ ದೇಶದಲ್ಲಿ ಲಭ್ಯವಾಗುವ ಯಾವುದೇ ವಸ್ತುವು ನಮ್ಮ ದೇಶದಲ್ಲಿ ಕೂಡಾ ಲಭ್ಯವಾಗುವ ಸನ್ನಿವೇಶ ಅಗತ್ಯವಾಗಿದೆ. ಬೇಕಿದ್ದರೆ ನಾವು ಸ್ವಲ್ಪಮಟ್ಟಿಗೆ (ಶೇಕಡಾ 10 ರಿಂದ 20 ರಷ್ಟು) ಸೀಮಾಶುಲ್ಕ ವಿಧಿಸಬಹುದು. ಆದರೆ ಈ ವಸ್ತುಗಳ ಆಮದನ್ನು ನಿಲ್ಲಿಸಬಾರದು.
 • ಅದೇ ರೀತಿಯಲ್ಲಿ ಬೇರೆ ದೇಶಗಳು ನಮ್ಮ ದೇಶದಿಂದ ರಫ್ತಾಗುವ ವಸ್ತುಗಳನ್ನು ನಿರ್ಬಂಧಿಸಬಹುದು. ಅದನ್ನು ತಡೆಯಬೇಕೆಂದಿದ್ದರೆ ನಾವು ಆ ದೇಶದಿಂದ ಪರ್ಯಾಯ ವಸ್ತುಗಳನ್ನು ಆಮದು ಮಾಡಿಕೊಳ್ಳಲೇಬೇಕು. ಯಾವ ದೇಶವೂ ಬೇರೊಂದು ದೇಶದಿಂದ ಕೇವಲ ಆಮದು ಬಯಸುವುದಿಲ್ಲ. ರಫ್ತು ಬೇಕೆಂದರೆ ಆಮದು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಇದು ತಾತ್ಕಾಲಿಕವಾಗಿ ಏರುಪೇರಾಗಬಹುದು. ಆದರೆ ದೀರ್ಘಕಾಲದಲ್ಲಿ ನಮ್ಮ ರಫ್ತು ಮತ್ತು ಆಮದು ಪ್ರಮಾಣ ಸಮನ್ವಯತೆ ಸಾಧಿಸಲೇಬೇಕು. ಇಲ್ಲವೆಂದರೆ ಉಳಿದೆಲ್ಲಾ ದೇಶಗಳು ಕೇವಲ ರಫ್ತು ಬಯಸುವ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಿ ಬಹಿಷ್ಕಾರ ಹಾಕುವುದು ಸಹಜ ಸಾಮಾನ್ಯ.
 • ಆತ್ಮನಿರ್ಭರತೆ 1950ರ ದಶಕದಲ್ಲಿ ಅಗತ್ಯವಿದ್ದ ಘೋಷಣೆ. ಆ ಸಮಯದಲ್ಲಿ ಕೂಡಾ ಈ ಘೋಷಣೆಯ ಮಹತ್ವ ಸೀಮಿತವಾದದ್ದು. ಅಂದಿನಿಂದಲೇ ಕೇವಲ ಸ್ವಾವಲಂಬನೆಯ ಹಾದಿ ತೊರೆದು ‘ರಫ್ತು ಆಧಾರಿತ’ ಉದ್ದಿಮೆದಾರಿಕೆಯನ್ನು ನಾವು ಕೈಗೆತ್ತಿಕೊಂಡಿದ್ದರೆ ಬಹುಶಃ ಇಂದಿನ ನಿರುದ್ಯೋಗ ಕಾರಣಿತ ಬಡತನ ನಮ್ಮಲ್ಲಿ ಇರುತ್ತಿರಲಿಲ್ಲ. ಸ್ವಾವಲಂಬನೆಯ ಹಾದಿಯಲ್ಲಿ ದೇಶಿ ಉದ್ಯಮಗಳು ಪಟ್ಟಭದ್ರರಾಗುವುದಕ್ಕೆ ನಾವು ಅವಕಾಶ ನೀಡಿದ್ದೆವು. ಈ ಹಿತಾಸಕ್ತಿಗಳು ಸರ್ಕಾರಿ ಶಕ್ತಿಗಳ ಒಡಗೂಡಿ ದೇಶವನ್ನು ಕಳಪೆ ಗುಣಮಟ್ಟದ ತಯಾರಿಕೆಯ ವಲಯವಾಗಿಸಿದ್ದವು.

ನಮ್ಮ ಆಮದು ಮೌಲ್ಯ ಕಡಿಮೆಯಿದ್ದ ಈ ಸ್ವಾವಲಂಬನೆಯ ಹಾದಿ ಹೆಚ್ಚು ಕಷ್ಟಕರವಾಗಿರಲಿಲ್ಲ. ಆದರೆ 70ರ ದಶಕದ ಮಧ್ಯದಲ್ಲಿ ಕಚ್ಚಾತೈಲದರ ಏರಿಕೆಯಾದ ನಂತರದಲ್ಲಿ ಇದು ನಮ್ಮ ಆರ್ಥಿಕತೆಗೆ ಮಗ್ಗುಲ ಮುಳ್ಳಾಗತೊಡಗಿತು. 80ರ ದಶಕದ ಕೊನೆಯ ಹೊತ್ತಿಗೆ ದೇಶ ದಿವಾಳಿಯಾಗುವ ಸ್ಥಿತಿಗೆ ಬಂದು ಚಿನ್ನವನ್ನು ಅಡವಿಟ್ಟು ನಾವು ಸಾಲ ತಂದು ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಬೆಲೆ ತೆರಬೇಕಾಗಿತ್ತು. ಅದೇ ರೀತಿಯಲ್ಲಿ ಆಮದು ಪರ್ಯಾಯ ಹುಡುಕುವ ಸ್ವಾವಲಂಬನೆಯ ಹಾದಿ ನಮ್ಮ ಉದ್ಯಮಶೀಲತೆ ಹಾಗೂ ವೃತ್ತಿಪರತೆಯನ್ನು ಕುಂಠಿತಗೊಳಿಸಿತ್ತು. ದೇಶದಲ್ಲಿ ಉದ್ಯೋಗಸೃಷ್ಟಿ ಕಡಿಮೆಯಾಗಿ ಎಲ್ಲೆಡೆ ನಿರುದ್ಯೋಗ ಸಮಸ್ಯೆ ಮತ್ತು ಸಾಮಾಜಿಕ-ರಾಜಕೀಯ ಕೋಲಾಹಲದ ಸ್ಥಿತಿ ಉಂಟಾಗಿತ್ತು. 90ರ ದಶಕದ ನಂತರದಲ್ಲಿ ಮತ್ತು ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಸಮಸ್ಯೆ ಕಡಿಮೆಯಾದರೂ ಒಟ್ಟು ಸಂಕಟದಿಂದ ನಾವು ಇನ್ನೂ ದೂರವಾಗಿಲ್ಲ.

 • ನಾವು ನಮ್ಮ ದೇಶದಲ್ಲಿ ಸುಲಭವಾಗಿ ಒದಗಿಬಂದಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಉಳಿದ ದೇಶಗಳ ಜನರಿಗೆ ಅಗತ್ಯ ಸೇವೆ-ಸರಕುಗಳನ್ನು ಒದಗಿಸಲು ಪ್ರಯತ್ನಿಸಬೇಕು. ಇದರಿಂದ ನಮ್ಮ ಸಂಪನ್ಮೂಲಗಳ (ಮಾನವ ಸಂಪನ್ಮೂಲ ಸೇರಿದಂತೆ) ಸದ್ಬಳಕೆ ಹಾಗೂ ಸೂಕ್ತ ಮೌಲ್ಯ ದೊರೆಯುತ್ತದೆ. ಸ್ವಾವಲಂಬನೆಯ ಹಾದಿಯಲ್ಲಿ ಸಂಪನ್ಮೂಲಗಳ ಸೀಮಿತ ಬಳಕೆ ಹಾಗೂ ಅಪಮೌಲ್ಯವಾಗುತ್ತದೆ. ಜಾಗತೀಕರಣದಲ್ಲಿ ನಮ್ಮಲ್ಲಿನ ಹೇರಳ ಮತ್ತು ಅಗ್ಗದ ಸಂಪನ್ಮೂಲಗಳಿಗೆ ಮಾರುಕಟ್ಟೆ ದರದಲ್ಲಿ ಸೂಕ್ತ ಬೆಲೆ ಸಿಗುತ್ತದೆ. ದೇಶದಲ್ಲಿ ರಫ್ತು ಆಧಾರಿತ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಿಗೆ ಸಿಗುವ ಸಂಬಳದರವೇ ಇದಕ್ಕೆ ಸಾಕ್ಷಿ. ಇದಕ್ಕೆ ಹೊರತಾಗಿ ಕೂಡಾ ಬೇರೆಲ್ಲಾ ರಫ್ತು ಆಧಾರಿತ ಉದ್ದಿಮಗಳಿಂದ ಹೇರಳವಾಗಿ ಉದ್ಯೋಗ ಸೃಷ್ಟಿಯಾಗಿದೆ. ದೇಶದಲ್ಲಿನ ಮಾನವ ಸಂಪನ್ಮೂಲ ಸದ್ಬಳಕೆಯಾಗುತ್ತಿದೆ. ಮೊದಲ ಪೀಳಿಗೆಯ ಉದ್ಯೋಗಿಗಳು ತಮ್ಮ ಮಕ್ಕಳಿಗೆ ಅಗತ್ಯ ಪೌಷ್ಟಿಕ ಆಹಾರ ಮತ್ತು ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಕಾಳಜಿ ವಹಿಸುತ್ತಿದ್ದಾರೆ. ಇದುವೇ ಅಭಿವೃದ್ಧಿಯ ಹಾದಿ. ಮುಂದಿನ ದಿನಗಳಲ್ಲಿ ರಫ್ತು ಆಧಾರಿತ ಉದ್ದಿಮೆಗಳ ಉದ್ಯೋಗಿಗಳ ಸಂಖ್ಯೆಯೂ ಕಡಿಮೆಯಾಗಬಹುದು. ಸಹಜವಾಗಿ ಈ ಉದ್ಯೋಗಿಗಳ ಸಂಬಳವೂ ಹೆಚ್ಚಿ ಅವರ ಜೀವನ ಮೌಲ್ಯವೂ ಸುಧಾರಣೆಯಾಗುವ ಸಾಧ್ಯತೆಯಿದೆ.
 • ಕೇವಲ ಕೃಷಿ ಮತ್ತು ದೇಶಿ ಉದ್ದಿಮೆದಾರಿಕೆಯ ಅವಲಂಬನೆಯಲ್ಲಿ ದೇಶದ ಬಡತನ ನೀಗದು. ಸ್ವಾವಲಂಬನೆಯ ಹಾದಿಯಲ್ಲಿ ದೇಶೀಯ ಸಂಪನ್ಮೂಲಗಳ ದುಂದು ವ್ಯಯವಾಗುತ್ತದೆ. ವಿಶೇ಼ಷವಾಗಿ ಮಾನವ ಸಂಪನ್ಮೂಲಕ್ಕೆ ಅಗ್ಗದ ಬೆಲೆ ಸಿಗುತ್ತದೆ. ಒಟ್ಟು ಉದ್ಯೋಗ ಸೃಷ್ಟಿಯೇ ಕಡಿಮೆಯಾಗಿ ಮತ್ತೊಮ್ಮೆ ನಿರುದ್ಯೋಗ ಸಮಸ್ಯೆ ತಾಂಡವವಾಡಬಹುದು. ಇಲ್ಲಿಯವರೆಗೆ ಕ್ಷಿಪ್ರ ಅಭಿವೃಧ್ಧಿ ಕಂಡಿರುವ ಎಲ್ಲಾ ದೇಶಗಳೂ ರಫ್ತು ಆಧಾರಿತ ಕೈಗಾರಿಕೆಗಳಿಂದಲೇ ತಮ್ಮ ಹಿಂದುಳಿದಿರುವಿಕೆ ತೊಡಗಿಸಿಕೊಂಡಿದ್ದು ನಿಚ್ಚಳವಾಗಿ ಕಂಡುಬರುತ್ತದೆ.

ಅದೇ ರೀತಿಯಲ್ಲಿ ರಫ್ತು ಆಧಾರಿತ ಆರ್ಥಿಕತೆಯಲ್ಲಿ ನಾವು ಗಳಿಸಬಹುದಾದ ಬೇಡಿಕೆ ಹಾಗೂ ಮಾಡಬೇಕಾದ ಉದ್ಯಮಗಳಿಗೆ ಕೊನೆಯಿಲ್ಲ. ಪ್ರಪಂಚದ ಎಲ್ಲ ದೇಶಗಳ ಎಲ್ಲ ಅಗತ್ಯಗಳನ್ನು ನಾವು ನಮ್ಮ ದೇಶದಿಂದಲೇ ಪೂರೈಸಬಹುದು. ಬೇರೆ ದೇಶಗಳ ಹೋಲಿಕೆಯಲ್ಲಿ ನಮ್ಮ ಮಾನವ ಸಂಪನ್ಮೂಲ ಅಗ್ಗವಾಗಿರುವವರೆಗೆ ನಮ್ಮ ಸಂಪನ್ಮೂಲಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಇದನ್ನು ಬಳಸಿಕೊಂಡು ನಾವು ಅಭಿವೃದ್ಧಿಯ ಹಾದಿಯಲ್ಲಿ ದಾಪುಗಾಲು ಹಾಕಬಹುದು. ನಮ್ಮ ಬಡತನಕ್ಕೆ ಮದ್ದು ಹಾಗೂ ನಿರುದ್ಯೋಗಕ್ಕೆ ಗುದ್ದು ನೀಡಬಹುದು.

Leave a Reply

Your email address will not be published.