ಜಾತಕದ ಅಪದ್ಧ ಮೀರಿ ಪುರುಷೋತ್ತಮನಾಗಿ ಬೆಳೆದ ರೋಯ್ತಾ!

ಡಾ.ಪುರುಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’ ಆತ್ಮಚರಿತ್ರೆಯ ಪೂರ್ವಾರ್ಧ ಕೋಮು ರಾಜಕಾರಣದೊಂದಿಗಿನ ಪಯಣದಂತೆ ಕಂಡರೆ, ಉತ್ತರಾರ್ಧ ಪ್ರವಾಸ ಕಥನದಂತೆಯೂ, ಸಂಶೋಧನಾ ಪ್ರಬಂಧದಂತೆಯೂ ಭಾಸವಾಗುತ್ತದೆ.

 – ಸದಾನಂದ ಗಂಗನಬೀಡು 

 

ಕಾಗೆ ಮುಟ್ಟಿದ ನೀರು

ಡಾ.ಪುರುಷೋತ್ತಮ ಬಿಳಿಮಲೆ

ಪುಟ: 304  ಬೆಲೆ: ರೂ.300

ಅಹರ್ನಿಶಿ ಪ್ರಕಾಶನ

ಶಿವಮೊಗ್ಗ

ದೂ: 94491 74662

ಸಿನಿಮಾ ಪ್ರಿಯರಿಗೆ ಈ ಸಂಗತಿ ಬಹಳ ಚೆನ್ನಾಗಿ ತಿಳಿದಿರುತ್ತದೆ. ನಟ ಅಂಬರೀಶ್ ಅಮರನಾಥ ಮಾತ್ರ ಆಗಿದ್ದಾಗ ತಮ್ಮ ಕಾಲೇಜು ದಿನಗಳಲ್ಲಿ ಬಹಳ ತುಂಟರಾಗಿದ್ದರು. ಕಾಲೇಜಿನಲ್ಲಿ ತರಗತಿ ನಡೆಯುವಾಗಲೇ ಎದ್ದು ಹೊರ ನಡೆದುಬಿಡುವುದು ಅವರ ಚಾಳಿಯಾಗಿತ್ತು. ಹೀಗೇ ಒಂದು ದಿನ ಅವರು ಅದನ್ನೇ ಮುಂದುವರಿಸಿದಾಗ, ಸಿಟ್ಟಿಗೆದ್ದ ಅಧ್ಯಾಪಕರು, ‘ಅಮರನಾಥ, ನೀನು ಜೀವನದಲ್ಲಿ ಖಂಡಿತ ಉದ್ಧಾರವಾಗುವುದಿಲ್ಲ’ ಎಂದು ಶಾಪ ಹಾಕುತ್ತಾರೆ. ಆ ಅಮರನಾಥನೇ ಮುಂದೆ ಅಂಬರೀಶ್ ಆಗಿ ಸಿನಿಪ್ರಿಯರ ಹೃದಯದಲ್ಲಿ ಅಮರವಾಗಿ ನೆಲೆ ನಿಲ್ಲುತ್ತಾರೆ.

ಈ ಕತೆ ನೆನಪಿಸಿಕೊಳ್ಳಲು ಕಾರಣವಾದದ್ದು, ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟಿದ ನೀರು’ ಆತ್ಮಕತೆ.

“ನಾನು ಹುಟ್ಟುವಾಗ ಅವರಿಬ್ಬರಲ್ಲಿದ್ದುದು ಕಡು ಬಡತನದ ದಾರುಣ ದಿನಗಳು ಮಾತ್ರ. ಅಂಥ ಕೆಟ್ಟ ಕಾಲದಲ್ಲಿ ನಾನು, ಆಟಿತಿಂಗಳ ಒಂದು ಆದಿತ್ಯವಾರ, ಅಮಾವಾಸ್ಯೆಯ ದಿವಸ ರಣರಣ ಮಧ್ಯಾಹ್ನ ಜನಿಸಿದೆನಂತೆ. ನನ್ನ ತಂದೆ-ತಾಯಿಯವರಿಗೆ ನಾನು ಮೂರನೆಯ ಮಗು. ಮೊದಲನೆಯದೆರಡು ಗಂಡಾಗಿದ್ದುದರಿಂದ ಮೂರನೆಯದು ಹೆಣ್ಣಾಗಬೇಕೆಂಬ ಆಸೆ ಸಹಜವಾಗಿ ಅವರಿಗೆ ಇದ್ದಿರಲೇಬೇಕು. ಆದರೆ, ಅವರ ನಿರೀಕ್ಷೆಗೂ ಮೀರಿ, ಬಡತನಕ್ಕೆ ಇನ್ನಷ್ಟು ಕಳೆಯೇರಿಸುವಂತೆ, ಅದೂ ಆಟಿ ಅಮಾವಾಸ್ಯೆಯ ದಿನ ನಡು ಮಧ್ಯಾಹ್ನ ನಾನು ಯಾರಿಗೂ ಅರ್ಜಿ ಹಾಕದೆ, ರಾಹುಕಾಲ, ಗುಳಿಕಕಾಲ ನೋಡದೆ ಹುಟ್ಟಿಬಿಟ್ಟೆ. ಹಾಗೆ ಹುಟ್ಟುವಾಗ ಅಪ್ಪ ಅಮ್ಮನಿಗೆ ಅವರದ್ದೇ ಆದ ನೆಲ, ಮನೆ, ಬದುಕು ಯಾವುದೂ ಇರಲಿಲ್ಲ. ಕರ್‍ರ್ರಗೆ, ಕುಳ್ಳಗೆ, ಕುರೂಪದಲ್ಲಿ ಎಲ್ಲರನ್ನೂ ಮೀರಿಸುವಂತಿದ್ದ ನಾನು ತಂದೆ ತಾಯಿಯರ ವಿಷಾದವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದಿರಲೇಬೇಕು. ಕರೆಯಲು ಸುಲಭವಾಗುವಂತೆ ರೋಯಿತ ಅಂತ ಹೆಸರಿಟ್ಟರು. ನೋಡಿದವರು ಮುಖ ಸಿಂಡಿರಿಸಿಕೊಂಡು ಏನೇನೋ ಪಿಸುಗುಡುತ್ತಿದ್ದುದನ್ನೂ, ಮಣ್ಣಿನ ನೆಲದಲ್ಲಿ ಮಲಗಿದ್ದ ನನ್ನನ್ನು ಹಾಗೇ ದಾಟಿಕೊಂಡು ಹೋಗುತ್ತಿದ್ದುದನ್ನೂ ಅಮ್ಮ ಕೊನೆವರೆಗೂ ಬೇಸರ ಮತ್ತು ಸಿಟ್ಟಿನಿಂದ ಹೇಳುತ್ತಿದ್ದರು.”

ಹೀಗೆ ಶುರುವಾಗುವ ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಜನನ ಸಂಕಟ, ನಂತರ ಜ್ಯೋತಿಷಿಯೊಬ್ಬನ ಜಾತಕದಿಂದ ಮತ್ತಷ್ಟು ಹೈರಾಣಾಗುತ್ತದೆ. ಆತನ ಪ್ರಕಾರ ಪುರುಷೋತ್ತಮ ಬಿಳಿಮಲೆ ಅವರಿಗೆ ವಿದ್ಯಾಯೋಗವಿರುವುದಿಲ್ಲ. ಮೇಲಾಗಿ ಜಾತಕದ ಐದನೆಯ ಮನೆಯಲ್ಲಿ ಕೇತು ಎಂಬ ಗ್ರಹ ಕೂತಿರುವುದರಿಂದ ಇವನು ಪಿತೃದ್ವೇಷಿಯಾಗುತ್ತಾನೆ ಎಂದು ಷರಾ  ಬರೆದುಬಿಡುತ್ತಾನೆ. ಮೊದಲೇ ಜಾತಕ, ಪಂಚಾಂಗಗಳನ್ನು ಅತೀವವಾಗಿ ನಂಬುವ ಪುರುಷೋತ್ತಮ ಬಿಳಿಮಲೆ ಅವರ ತಂದೆ ಏನಾದರೂ ಭಿನ್ನಾಭಿಪ್ರಾಯ ಬಂದರೆ, ‘ನಿನ್ನ ಜಾತಕದಲ್ಲಿಯೇ ಹಾಗಿದೆ’ ಎಂದು ವಾದವನ್ನು ಮೊಟಕುಗೊಳಿಸತೊಡಗುತ್ತಾರೆ.

ಇಂತಹ ಹುಟ್ಟಿನಿಂದಲೇ ಶಾಪಗ್ರಸ್ತನಾದ ರೋಯ್ತಾ ದೆಹಲಿಯ ಕನ್ನಡ ಅಧ್ಯಯನ ಪೀಠದ ನಿರ್ದೇಶಕ ಸ್ಥಾನಕ್ಕೇರುವುದು, ದೇಶ-ವಿದೇಶಗಳನ್ನು ಸುತ್ತುವುದು ಜ್ಯೋತಿಷ್ಯ, ಜಾತಕಗಳ ಟೊಳ್ಳುತನವನ್ನು ಬಟ್ಟಂಬಯಲು ಮಾಡುತ್ತವೆ. ಈ ಅಂಶ ಪುರುಷೋತ್ತಮ ಬಿಳಿಮಲೆ ಅವರ ಮೇಲೂ ಸಕಾರಾತ್ಮಕ ಪರಿಣಾಮ ಬೀರಿ, ಅವರು ಜಾತಿ ವಿನಾಶ, ಮೂಢನಂಬಿಕೆ ವಿರೋಧಿ ಪ್ರತಿಭಟನೆಗಳಲ್ಲಿ ತೊಡಗುವುದನ್ನು ಕೃತಿ ಆಪ್ತವಾಗಿ ಕಟ್ಟಿಕೊಡುತ್ತದೆ.

ದೆಹಲಿಯ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿರುವಾಗ ದೇವಮಾನವರೊಬ್ಬರು ಅವರ ಚೇಂಬರ್‌ಗೆ ಧಾವಿಸಿ, ತನ್ನ ಮೇಲೆ ವಸಿಷ್ಠನ ಆವಾಹನೆಯಾಗಿದೆ ಎಂದು ಹೇಳಿಕೊಂಡಾಗ ಅವರು ಅಕ್ಷರಶಃ ಕೆಂಡಾಮಂಡಲವಾಗುತ್ತಾರೆ. ವಸಿಷ್ಠ-ವಿಶ್ವಾಮಿತ್ರ ಜಗಳವನ್ನು ಆಳವಾಗಿ ತಿಳಿದುಕೊಂಡಿರುವ ಲೇಖಕ ಡಾ.ಪುರುಷೋತ್ತಮ ಬಿಳಿಮಲೆ ಅವರು, ‘ನನ್ನ ಕನಸಿನಲ್ಲಿ ವಿಶ್ವಾಮಿತ್ರ ಬಂದಿದ್ದರು. ವಸಿಷ್ಠರು ಬಂದರೆ ಖಂಡಿತಾ ಸೇರಿಸಬೇಡ ಎಂದಿದ್ದಾರೆ, ಹಾಗಾಗಿ ಬೇಗ ಜಾಗ ಖಾಲಿ ಮಾಡಿ’ ಎಂದು ಸಿಟ್ಟಾಗುತ್ತಾರೆ. ಪುರಾಣಗಳನ್ನು ಪುರಾಣಗಳ ಚೌಕಟ್ಟಿನಲ್ಲಿಯೇ ಓದಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಎಂದು ನಂಬಿರುವ ಪುರುಷೋತ್ತಮ ಬಿಳಿಮಲೆ ಅವರ ಸಿಟ್ಟು ಸಕಾರಣವಾದುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಗ್ರಾಮೀಣ ಪರಿಸರದಲ್ಲಿ ಪ್ರೇಮವಿವಾಹಗಳು ಅದೆಷ್ಟು ಸಹಜ ಎಂಬುದನ್ನು ತಮ್ಮ ತಂದೆ-ತಾಯಿಯ ವಿವಾಹದ ಮೂಲಕವೇ ಡಾ.ಪುರುಷೋತ್ತಮ ಬಿಳಿಮಲೆ ನಿರೂಪಿಸುತ್ತಾರೆ. “ನಾನು ಹುಟ್ಟುವ ಹೊತ್ತಿಗೆ ನನ್ನ ಅಪ್ಪನು ಅಜ್ಜನ ಮನೆಯಿದ್ದ ಕಳ್ಮಕಾರಿನಲ್ಲಿರದೆ, ಬಳ್ಪದ ಸಮೀಪದ ಹೊಪ್ಪಳೆ ಎಂಬಲ್ಲಿದ್ದರು. ಗುತ್ತಿಗಾರಿನ ಸಮೀಪದ ಕಮಿಲದ ತುಪ್ಪದ ಮನೆಯಿಂದ ಅವರು ಮದುವೆಯಾಗಿದ್ದರು. ಒಮ್ಮೆ ಅಪ್ಪನನ್ನು ಕೇಳಿದೆ- ‘ಈ ಅಮ್ಮ ನಿನಗೆ ಸಿಕ್ಕಿದ್ದು ಹೇಗೆ?’ ಅಂತ. ಅಪ್ಪ ಹೇಳಿದ್ದು- ‘ನಾನು ಗುತ್ತಿಗಾರಿನಲ್ಲಿ ಸ್ವಲ್ಪಕಾಲ ಟೈಲರ್ ಆಗಿದ್ದೆ. ಆಗ ಇವಳು ರವಿಕೆಗೆ ಗುಬ್ಬಿ ಹಾಕಿಸಲು ಬರುತ್ತಿದ್ದಳು’. ಈ ಗುಬ್ಬಿಯ ಕತೆಯು ಅಪ್ಪ ಅಮ್ಮನ ಮುಖದಲ್ಲಿ ಸದಾ ಮಂದಹಾಸ ಮೂಡಿಸುವ ಘಟನೆಯಾಗಿ ಕೊನೆತನಕ ಉಳಿದು ಬಂದಿತ್ತು” ಎಂದು ದಾಖಲಿಸುತ್ತಾರೆ. ಇಂತಹ ಆಹ್ಲಾದಕರ ಪ್ರೇಮ ವಿವಾಹಗಳು ನಮ್ಮ ಗ್ರಾಮೀಣ ಭಾಗಗಳಲ್ಲಿ ಯಥೇಚ್ಛವಾಗಿ ಸಿಗುತ್ತವೆ. ಅವಕ್ಕೆ ಜಾತಿ-ಮತದ ಹಂಗಿರುವುದಿಲ್ಲ. ಪ್ರೇಮವೊಂದೇ ವಿವಾಹದ ಬಂಧನವಾಗಿರುತ್ತದೆ.

ಇಂದು ಕರಾವಳಿ ಭಾಗ ಸಂಪೂರ್ಣವಾಗಿ ಕೋಮು ಧ್ರುವೀಕರಣಕ್ಕೆ ತುತ್ತಾಗಿದೆ. ಮೊದಲಿಗೆ ಅಲ್ಲಿದ್ದ ಹಿಂದೂ-ಮುಸ್ಲಿಂ ಸೌಹಾರ್ದದ ಜಾಗದಲ್ಲಿ ಹಿಂದೂ-ಮುಸ್ಲಿಂ ವಿರಸ ಘನೀಕೃತಗೊಂಡಿದೆ. ಪುರುಷೋತ್ತಮ ಬಿಳಿಮಲೆ ಅವರ ಬಾಲ್ಯ ಕಾಲದ ಕುಟ್ಟ ಬ್ಯಾರಿಯನ್ನು ಅವರು ಹೀಗೆ ವಿವರಿಸಿದ್ದಾರೆ:

“ಗಂಟೆಗಟ್ಲೆ ಮಾತಾಡಿದ ಆನಂತರ ಕುಟ್ಟಿ ಬ್ಯಾರಿ ವಿಷಯಕ್ಕೆ ಬರುತ್ತಿದ್ದ. ಏನಾದರೂ ಇದ್ರೆ ಕೊಡಿ ಅಂತ ದುಂಬಾಲು ಬೀಳುತ್ತಿದ್ದ. ಏನೂ ಇಲ್ಲ ಅಂದ್ರೂ ಕೇಳುತ್ತಿರಲಿಲ್ಲ. ಕೊನೆಗೆ ಅಪ್ಪ ‘ಸ್ವಲ್ಪ ಅಡಿಕೆ ಇದೆ, ಎಷ್ಟು ಕೊಡ್ತೀ?’ ಅಂದರೆ ಸಾಕು, ಮತ್ತರ್ಧ ಗಂಟೆ ರೇಟಿನ ಬಗ್ಗೆ ಚರ್ಚೆ. ಒಂದು ಹಂತದಲ್ಲಿ ಚರ್ಚೆ ನಿಲ್ಲಿಸುವ ಕುಟ್ಟ ಬ್ಯಾರಿ, ಗೋಣಿ ಚೀಲ ತಲೆಗೇರಿಸಿ ಹೊರಟೇ ಬಿಡುತ್ತಿದ್ದ. ಹೋದರೆ ಹೋಗಲಿ, ಅಂತ ಅಪ್ಪ ಹುಸಿ ಕೋಪ ಮಾಡಿಕೊಂಡು ಕುಳಿತರೆ, ಆತ ಮತ್ತ ಹಿಂದಿರುಗಿ ಬಂದು ಅಡಿಕೆಗೆ ಕೈ ಹಾಕುತ್ತಿದ್ದ. ಕೊನೆಗೆ ಕೆಲವು ರೂಪಾಯಿಗಳನ್ನು ಅಪ್ಪನ ಕೈಗಿತ್ತು- ‘ನೋಡಿ ಸಾಮೀ, ಇಷ್ಟು ಕಡಿಮೆ ಅಡಿಕೆ ಹೊತ್ತುಕೊಂಡು ಊರು ಸುತ್ತಲಿಕ್ಕೆ ಆಗ್ತದಾ? ಅದಕ್ಕೆ ಇದು ಇಲ್ಲಿಯೇ ಅಂಗಳದಲ್ಲಿ ಒಣಗಲಿ, ಮುಂದಿನ ಬಾರಿ ಕೊಂಡು ಹೋಗುತ್ತೇನೆ’ ಎಂದು ಹೇಳಿ ಅಡಿಕೆಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದ. ವಾದ-ವಿವಾದಗಳು ಸೌಹಾರ್ದಯುತವಾಗಿ ಪರಿಹಾರಗೊಂಡ ಸಂತೋಷ ನನಗೆ. ಆದರೆ, ಅಪ್ಪನಿಗೀಗ ಕುಟ್ಟಿ ಬ್ಯಾರಿಯ ಅಡಿಕೆ ಕಾಯುವ ಕೆಲಸ ಆರಂಭವಾಯಿತು. ನೆಂಟರು ಬಂದಾಗ ಎಲೆ ಅಡಿಕೆ ತಿನ್ನಲು ಅದರಿಂದ ಒಂದಡಿಕೆ ತೆಗೆದರೂ ಅಪ್ಪ ಗದರಿಸುತ್ತಿದ್ದರು- ‘ಅದು ಕುಟ್ಟಿ ಬ್ಯಾರಿಯ ಅಡಿಕೆಯಾ, ತೆಗೀಬರ‍್ದು ಅಂತ ಗೊತ್ತಾದುಲೆ?’

ತಾನು ಅಂಗಳದಲ್ಲಿ ಬಿಟ್ಟು ಹೋದ ಅಡಿಕೆಯನ್ನು ಯಜಮಾನರು ತೆಗೆಯಲಾರರೆಂಬ ವಿಶ್ವಾಸವು ಕುಟ್ಟ ಬ್ಯಾರಿಯಲ್ಲಿಯೂ, ಕುಟ್ಟ ಬ್ಯಾರಿ ಅಂಗಳದಲ್ಲಿ ಬಿಟ್ಟು ಹೋದ ಅಡಿಕೆಯನ್ನು ತೆಗೆಯಬಾರದೆಂಬ ಪ್ರಜ್ಞೆ ಅಪ್ಪನಲ್ಲಿಯೂ ಇದ್ದ ಕಾಲವದು. ಒಮ್ಮೊಮ್ಮೆ ಅಪ್ಪನಲ್ಲಿ ಕೊಡಲು ಏನೂ ಇಲ್ಲದಿದ್ದರೂ ಕುಟ್ಟ ಬ್ಯಾರಿಗೇನೂ ಬೇಸರವಾಗುತ್ತಿರಲಿಲ್ಲ. ಅಪ್ಪ ತುಂಬ ಕಷ್ಟ ಹೇಳಿಕೊಂಡರೆ, ಒಂದೈದು ರೂಪಾಯಿ ಅವರ ಕೈಗಿತ್ತು, ‘ಇರಲಿ ಯಜಮಾನ್ರೇ, ಮುಂದೆ ನೋಡೋಣ’ ಅಂತ ಹೇಳಿ ಅಪ್ಪನನ್ನೇ ಸಮಾಧಾನಪಡಿಸುತ್ತಿದ್ದ.”

ಇಂತಹ ದಕ್ಷಿಣ ಕನ್ನಡ ಕೋಮು ಧ್ರುವೀಕರಣಕ್ಕೆ ತುತ್ತಾದ ಬಗ್ಗೆ ಲೇಖಕರಿಗೆ ಆಳದಲ್ಲಿ ತೀವ್ರ ವಿಷಾದವಿದೆ. ಆದರೆ, ಶೈವ ಸಂಸ್ಕೃತಿ ನೆಲೆಯಾದ ದಕ್ಷಿಣ ಕನ್ನಡವನ್ನು ವೈದಿಕರ ದೈವ ರಾಮ ಆಕ್ರಮಿಸಿಕೊಂಡ ಬಗ್ಗೆ ಯಾವುದೇ ಒಳನೋಟ ನೀಡುವಲ್ಲಿ ವಿಫಲರಾಗುತ್ತಾರೆ. (ತುಳುವರ ಭೂತ, ದೈವಗಳು ಅಪ್ಪಟ ಶೈವ ಮೂಲದವು. ಹಾಗೆಯೇ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಇರುವುದು ಶೈವ ದೇವಾಲಯಗಳಾದ

ಶ್ರೀ ಗೋಕರ್ಣೇಶ್ವರ ದೇವಾಲಯ, ಶ್ರೀ ಸೌತಡ್ಕ ದೇವಾಲಯ,

ಶ್ರೀ ಚಂದ್ರಮೌಳೇಶ್ವರ ದೇವಾಲಯ, ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ, ಶ್ರೀ ಸೋಮನಾಥೇಶ್ವರ ದೇವಾಲಯ, ಶ್ರೀ ಮಂಜುನಾಥ ದೇವಾಲಯ (ಧರ್ಮಸ್ಥಳ), ಕುಕ್ಕೆ ಸುಬ್ರಹ್ಮಣ್ಯ ದೇವಾಲಯ,

ಶ್ರೀ ಮಹಾಗಣಪತಿ ದೇವಾಲಯ, ಶ್ರೀ ಮೂಕಾಂಬಿಕಾ ದೇವಾಲಯ, ಶ್ರೀ ವಿಶ್ವನಾಥ ದೇವಾಲಯ ಇತ್ಯಾದಿ)

ಸಂಶೋಧಕರೂ ಆದ ಲೇಖಕ ಡಾ.ಪುರುಷೋತ್ತಮ ಬಿಳಿಮಲೆ ಅವರು ಗುಜರಾತ್‌ನಲ್ಲಿ ಶುರುವಾದ ಹಿಂದೂ-ಮುಸ್ಲಿಂ ಕೋಮು ಧ್ರುವೀಕರಣ ರಾಜಕಾರಣದತ್ತ ಕಣ್ಣು ಹಾಯಿಸಿದ್ದರೂ ಸಾಕಿತ್ತು; ಉತ್ತರ ದೊರೆತು ಬಿಡುತ್ತಿತ್ತು. ಗುಜರಾತ್ ಹೇಳಿ ಕೇಳಿ ವ್ಯಾಪಾರಿ ಹಾಗೂ ಔದ್ಯಮಿಕ ನಗರ. ಅಲ್ಲಿ ಹಿಂದೂ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳಷ್ಟೆ ಮುಸ್ಲಿಂ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳೂ ಬಲಿಷ್ಠರು. ಮುಸ್ಲಿಮರಿಂದ ಅವರ ವ್ಯಾಪಾರ ವಹಿವಾಟುಗಳನ್ನು ಕಸಿದುಕೊಳ್ಳುವ ಭಾಗವಾಗಿಯೇ ಅಲ್ಲಿ ಕೋಮು ಧ್ರುವೀಕರಣ ಶುರುವಾಗಿದ್ದು. ಗುಜರಾತ್‌ನ ಪಡಿಯಚ್ಚಿನಂತಿರುವುದು ದಕ್ಷಿಣ ಕನ್ನಡ. ಭಟ್ಕಳ, ಮಂಗಳೂರು ನಗರ, ಮಂಗಳೂರು ಬಂದರು ಸೇರಿದಂತೆ ದಕ್ಷಿಣ ಕನ್ನಡದ ಬಹುತೇಕ ಕಡೆ ವ್ಯಾಪಾರ ವಹಿವಾಟುಗಳಲ್ಲಿ ಹಿಂದೂಗಳಷ್ಟೆ ಹಿಡಿತ ಸಾಧಿಸಿರುವವರು ಮುಸ್ಲಿಮರು.

ಕೆಲ ವರ್ಷಗಳ ಹಿಂದೆ ಮಂಗಳೂರು ಬಂದರಿನಲ್ಲಿ ಮುಸ್ಲಿಂ ಮೀನು ವ್ಯಾಪಾರಿಗಳಿಂದ ಮೀನು ಖರೀದಿಸಬಾರದು ಎಂಬ ಘೋಷಣೆ ಹೊರಟಿದ್ದನ್ನು ಇದೇ ನೆಲೆಯಲ್ಲಿ ಗ್ರಹಿಸಬೇಕು. ಈ ವ್ಯಾಪಾರ ಹಿತಾಸಕ್ತಿಯ ಪೈಪೋಟಿಯನ್ನು ಲೇಖಕರು ಸೂಕ್ಷ್ಮವಾಗಿ ಗಮನಿಸಿದ್ದರೆ ದಕ್ಷಿಣ ಕನ್ನಡ ಕೇಸರಿಮಯವಾಗಿರುವುದಕ್ಕೆ ಕಾರಣ ಕಂಡುಕೊಳ್ಳಬಹುದಿತ್ತು. ಹಾಗೆಯೇ ಅವರ ಸಂಶೋಧನಾ ಮನಸ್ಸಿಗೆ ಒಂದು ಉತ್ತಮ ವಿಷಯವೂ ಆಗುತ್ತಿತ್ತು. ಆದರೆ, ಅಂತಹ ಭಾರದಿಂದ ಲೇಖಕರು ತಪ್ಪಿಸಿಕೊಂಡಂತೆ ಭಾಸವಾಗುತ್ತದೆ.

ಡಾ.ಪುರುಷೋತ್ತಮ ಬಿಳಿಮಲೆ ಅವರ ಆತ್ಮಚರಿತ್ರೆಯ ಪೂರ್ವಾರ್ಧ ಕೋಮು ರಾಜಕಾರಣದೊಂದಿಗಿನ ಪಯಣದಂತೆ ಕಂಡರೆ, ಉತ್ತರಾರ್ಧ ಪ್ರವಾಸ ಕಥನದಂತೆಯೂ, ಸಂಶೋಧನಾ ಪ್ರಬಂಧದಂತೆಯೂ ಭಾಸವಾಗುತ್ತದೆ. ಹೀಗಿದ್ದೂ ಕಂಬಾರರಂಥ ಹಿರಿಯ ಸಾಹಿತಿ ಬಗ್ಗೆ ಬರೆಯುವ ಮಾತುಗಳು ಅವರೆಂಥ ಸೂಕ್ಷ್ಮ ಲೇಖಕ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ:

“ಕಂಬಾರರ ರಾಜಕೀಯದ ಪಟ್ಟುಗಳು ನನಗೆ ಏನೂ ಅರ್ಥವಾಗಲಿಲ್ಲ. ಅವರ ಮುಖದೊಳಗಿಂದ ಅಕರಾಳ ವಿಕರಾಳವಾಗಿ ಕೋರೆ ಹಲ್ಲುಗಳು ಮೂಡಿ ಬರಲಾರಂಭಿಸಿದವು… ಕಂಬಾರರ ನಾಟಕಗಳ ಎಲ್ಲ ಪಾತ್ರಗಳೂ ಅವರೊಳಗಿಂದ ಹೊರಬಂದು ಕುಣಿಯಲಾರಂಭಿಸಿದವು…”

ಡಾ.ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಸಾಮೀಪ್ಯಕ್ಕೆ ಬಂದ ವ್ಯಕ್ತಿಗಳ ಪೈಕಿ ಕಂಬಾರರ ಬಗ್ಗೆ ಮಾತ್ರ ಇಷ್ಟು ಕಟುವಾಗಿ ಬರೆದಿದ್ದಾರೆ. ಉಳಿದಂತೆ ಅವರು ನುಂಗಿಕೊಂಡಿರುವ ವ್ಯಕ್ತಿತ್ವಗಳೇ ಹೆಚ್ಚು ಎಂಬುದಕ್ಕೆ ದಿನೇಶ್ ಅಮೀನ್ ಮಟ್ಟು ಅವರ ಮುನ್ನುಡಿಯಲ್ಲಿ ನಿದರ್ಶನ ದೊರೆಯುತ್ತದೆ.

‘ಕಾಗೆ ಮುಟ್ಟಿದ ನೀರು’ ಎಂದರೆ ಮೈಲಿಗೆ ನೀರು. ಇಂತಹ ಮೈಲಿಗೆ ನೀರಿನಂಥ ವ್ಯಕ್ತಿತ್ವದ ‘ರೋಯ್ತಾ’ ಬಿಳಿಮಲೆಯಿಂದ ದೆಹಲಿಗೆ ಮುಟ್ಟುವ ವೇಳೆಗೆ ಪುರುಷೋತ್ತಮನಾಗಿ ಬೆಳೆದ ಪರಿ ಬೆಳೆಯಲೇಬೇಕು ಎಂಬ ಹಂಬಲವಿರುವ ಎಲ್ಲ ಮಕ್ಕಳಿಗೂ ಆದರ್ಶಪ್ರಾಯವಾಗಿದೆ. ಅವರು ತಮ್ಮ ಕೃತಿಯನ್ನು ಕೊನೆಗೊಳಿಸುವ ಪರಿಯೂ ಅನನ್ಯವಾಗಿದೆ: “…ದೇಹವನ್ನು ಕೊಂಡೊಯ್ಯುವ ವಾಹನ ಯಾವಾಗ ಬರುತ್ತದೆಯೋ ಗೊತ್ತಿಲ್ಲ! ಹಾಗಂತ ನಾನೇನೂ ಅದಕ್ಕೆ ಕಾದು ಕುಳಿತಿಲ್ಲ. ಮಾಡಬೇಕಾದ ಕೆಲಸಗಳು ಹಲವಿವೆ. ಬರೆಯಬೇಕಾದ ಪುಸ್ತಕಗಳೂ ಕೆಲವಿವೆ.’’

ಕೊನೆಯ ಮಾತು:

ಡಾ.ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಪ್ರಾಧ್ಯಾಪಕರು. ಅವರು ಬರೆದಿರುವ ಕೃತಿಯನ್ನು ಭಾಷಾ ತಜ್ಞರೂ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂಬುದು ಅವರಿಗೆ ತಿಳಿಯದ ಸಂಗತಿಯೇನಲ್ಲ. ಆದರೆ, ಕೃತಿಯಲ್ಲಿ ನುಸುಳಿರುವ ಕಾಗುಣಿತ ದೋಷಗಳು ಮೊಸರಿನಲ್ಲಿ ಕಲ್ಲು ಸಿಕ್ಕಂತಹ ಅನುಭವ ನೀಡುತ್ತವೆ. ಬಲವಂತವಾಗಿ ಕನ್ನಡೀಕರಣ ಮಾಡಿರುವ ಕೆಲವು ಪದಗಳ ಬಳಕೆ (ಉದಾ: ದಶಂಬರ, ನವೆಂಬರ, ಸೆಪ್ಟಂಬರ) ಅನಗತ್ಯವಾಗಿತ್ತು ಎನ್ನಿಸುತ್ತದೆ. ಮುಂದಿನ ಆವೃತ್ತಿ ಈ ಎಲ್ಲ ದೋಷಗಳಿಂದ ಮುಕ್ತವಾಗಿರಲಿ ಎಂದು ಆಶಿಸುತ್ತೇನೆ.           

*ಲೇಖಕರು ಪತ್ರಿಕೋದ್ಯಮದ ಸೆಳೆತದಿಂದ ಕಾರ್ಪೊರೇಟ್ ಕಂಪನಿ ತೊರೆದು `ಅಗ್ನಿ’ ವಾರಪತ್ರಿಕೆಯೊಂದಿಗೆ ಪತ್ರಕರ್ತ ಬದುಕು ಶುರು ಮಾಡಿದವರು; ಕತೆಗಾರರು, ಲೇಖಕರು, `ಮಾಸ್ಟೀಕರು’ ಸಂಶೋಧನಾ ಕೃತಿ ಪ್ರಕಟಗೊಂಡಿದೆ.

Leave a Reply

Your email address will not be published.