ಜಾತಿಗಳಿಗೆ ಜೋತುಬಿದ್ದ ಮೂರೂ ರಾಜಕೀಯ ಪಕ್ಷಗಳು!

-ನೀರಕಲ್ಲು ಶಿವಕುಮಾರ್

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಲ್ಲಿ ‘ಮನೆಯೊಂದು ಮೂರು ಬಾಗಿಲು’ ಎಂಬAತಹ ಪರಿಸ್ಥಿತಿ. ರಾಜ್ಯದ ಪ್ರಬಲ ಅಹಿಂದ, ಒಕ್ಕಲಿಗ, ಲಿಂಗಾಯತ ಸಮುದಾಯಗಳ ರಾಜಕೀಯ ಚಲನೆಯಲ್ಲಿ ಮಹತ್ವದ ಬದಲಾವಣೆ ಹತ್ತಿರವಾಗುತ್ತಿರುವ ಸಂಕೇತಗಳು ಗೋಚರಿಸುತ್ತಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲಗಾಮು ಹಾಕಿರುವ ಬಿಜೆಪಿ ಹೈಕಮಾಂಡ್ ಬಿ.ಎಲ್.ಸಂತೋಷ್ ಪಟ್ಟಾಭಿಷೇಕಕ್ಕೆ ವೇದಿಕೆ ಸಜ್ಜುಗೊಳಿಸುವ ಕಾರ್ಯವನ್ನು ವೇಗವಾಗಿ ಮಾಡುತ್ತಿದೆ. ಕೊರೊನಾ ಕಂಟಕ ನಿವಾರಣೆ ಬಳಿಕ ಯಡಿಯೂರಪ್ಪ ಅವರನ್ನು ಗೌರವಪೂರ್ವಕವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಬೀಳ್ಕೊಡುವ ಯೋಜನೆ ಸಿದ್ಧವಾಗಿದೆ. ಹುದ್ದೆ ಬಿಡಲು ಒಪ್ಪದೆ ಪ್ರತಿರೋಧ ತೋರಿದರೆ ಹೇಗೆ ಅವರನ್ನು ಅರಗಿಸಿಕೊಳ್ಳಬೇಕು, ಡ್ಯಾಮೇಜ್ ಕಂಟ್ರೋಲ್ ಮಾಡಲು ಅನುಸರಿಸಬೇಕಾದ ಮಾರ್ಗಗಳು ಯಾವುವು, ಪ್ಲಾನ್‌ಗಳ ಅನುಷ್ಠಾನ ಯಾವ ರೀತಿ ಕರಾರುವಾಕ್ಕಾಗಿ ನಡೆಯಬೇಕು ಎಂಬುದರ ಸಂಪೂರ್ಣ ನೀಲನಕ್ಷೆ ಈಗಾಗಲೇ ರೂಪಿತವಾಗಿದ್ದು ದೆಹಲಿಯ ಬಿಜೆಪಿ ಥಿಂಕ್ ಟ್ಯಾಂಕ್ ಅದನ್ನಿಟ್ಟುಕೊಂಡು ವರ್ಕ್ ಔಟ್ ಮಾಡುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ 80+ ವಯಸ್ಸಿನ ನಾಯಕನ ಬದಿಗೆ ಸರಿಸಿದರೆ ಪಕ್ಷದ ಬೇರು ಸಡಿಲವಾಗದಂತೆ ತಡೆಯುವ ಪರ್ಯಾಯ ನಾಯ ಕತ್ವಕ್ಕೆ ನೀರೆರೆಯಲಾಗುತ್ತಿದೆ. ಬಿಜೆಪಿಯ ರಾಜಕೀಯ ದಿಕ್ಕನ್ನು ಬದಲಿಸಿ, ಏಕವ್ಯಕ್ತಿ ಪ್ರಾಬಲ್ಯವನ್ನು ಕೊನೆಗಾಣಿಸಿ ಸಂಪೂರ್ಣ ಸ್ವಂತಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವುದರ ಮೂಲಕ ಕರ್ನಾಟಕದ ಸಾಂಪ್ರದಾಯಿಕ ಶೈಲಿಯ ಜಾತಿ ರಾಜಕಾರಣದ ಬುಡ ಕಿತ್ತೊಗೆಯಬೇಕು ಎಂಬಲ್ಲಿಯವರಿಗೆ ಥಿಂಕ್ ಟ್ಯಾಂಕ್‌ನಲ್ಲಿರುವವರು ಓವರ್ ಥಿಂಕ್ ಮಾಡಿದ್ದಾರೆ ಎನ್ನುತ್ತವೆ ಮೂಲಗಳು.

ಇನ್ನು ಅಧಿಕೃತ ವಿಪಕ್ಷ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಿನದಿಂದ ದಿನಕ್ಕೆ ಪ್ರಬಲವಾಗುತ್ತ ಸಾಗುತ್ತಿರುವುದು ಸಿದ್ಧರಾಮಯ್ಯ ಬಣದ ನಿದ್ದೆ ಕಸಿದಿದೆ. ಇದು ‘ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆಸಿದರು’ ಎಂಬAತೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುವ ಹಂತ ಮುಟ್ಟತೊಡಗಿದೆ. ಮುಂದೆ ಜಿಲ್ಲಾ ಪಂಚಾಯ್ತಿ ಚುನಾವಣೆ ವೇಳೆಗೆ ಸಿದ್ದು-ಡಿಕೆಶಿ ನಡುವೆ ಹೊತ್ತಿಕೊಳ್ಳುವ ಬೆಂಕಿ ನಂದಿಸಲು ಆ ಪಕ್ಷದ ಹೈಕಮಾಂಡ್ ಹರಸಾಹಸವನ್ನೇ ಪಡಬೇಕಾದೀತು.

ಇದರ ನಡುವೆ ರಾಷ್ಟಿçÃಯ ಪಕ್ಷಗಳ ಎದುರು ಅಸ್ತಿತ್ವಕ್ಕೆ ಹೋರಾಡುತ್ತಿರುವ ಜೆಡಿಎಸ್ ಪಕ್ಷ ಮೈತ್ರಿ ಸರ್ಕಾರ ಪತನದ ಬಳಿಕ ಕಳಾಹೀನವಾಗಿದೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಸಂಸತ್ ಚುನಾವಣೆ ಸೋಲು ಜೀರ್ಣಿಸಿಕೊಳ್ಳಲು ಹೆಣಗಾಡುತ್ತಿರುವುದರ ಮಧ್ಯೆಯೇ ಬಂದ ಆಪರೇಷನ್ ಕಮಲ ಶಾಸಕರ ಕ್ಷೇತ್ರಗಳ ಉಪಚುನಾವಣೆಯ ಸೋಲು ಆ ಪಕ್ಷವನ್ನು ನಿಸ್ತೇಜಗೊಳಿಸಿದೆ. ಡಿ.ಕೆ.ಶಿವಕುಮಾರ್ ಕೈಗೆ ರಾಜ್ಯ ಕಾಂಗ್ರೆಸ್ ಸಾರಥ್ಯ ಬಂದ ನಂತರ ಒಕ್ಕಲಿಗ ಸಮುದಾಯದ ಮೇಲಿನ ಹಿಡಿತ ಕೈತಪ್ಪುವ ಭೀತಿ ದಳಪತಿಗಳನ್ನು ಕಾಡತೊಡಗಿದೆ.

ಬಿಜೆಪಿಯ ಒಳಮನೆ ಜಪ

ಕರ್ನಾಟಕದ ಬಿಜೆಪಿ ಪಾಲಿನ ಭೀಷ್ಮ ಪಿತಾಮಹ ಯಡಿಯೂರಪ್ಪ ನಾಯಕತ್ವ ಬದಲಾವಣೆ ಜಪ ಪಕ್ಷದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದಕ್ಕಾಗಿ ದೆಹಲಿಯಲ್ಲಿ ರಾಷ್ಟಿçÃಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳ ಅಖಂಡ ತಪಸ್ಸು ನಡೆಯುತ್ತಿದೆ. ಆ ತಪಸ್ಸಿನ ಶಕ್ತಿಯಿಂದ ಯಡಿಯೂರಪ್ಪ ಸುತ್ತ ಕೋಟೆಯೊಂದನ್ನು ಕಟ್ಟಿ ಅವರ ಬಲ ಕುಂದಿಸುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನದ ನಂತರ ಅಧಿಕಾರಕ್ಕೇರಿದ ಯಡಿಯೂರಪ್ಪ ಕೈಗಳನ್ನು ಕಟ್ಟಿಹಾಕಿ ಬಲಹೀನಗೊಳಿಸಲಾಗಿದೆ.

ಅದೇ ಕಾಲಕ್ಕೆ ಲಿಂಗಾಯತ ಸಮುದಾಯದಲ್ಲಿ ಪರ್ಯಾಯ ನಾಯಕತ್ವ ಹುಟ್ಟುಹಾಕುವ ಕೆಲಸ ನಡೆದಿದೆ. ಮತ್ತೊಂದು ಕಡೆ ಬಿ.ಎಲ್.ಸಂತೋಷ್ ತಮ್ಮದೇ ಪಡೆಯೊಂದನ್ನು ಕಟ್ಟುತ್ತ ಹೈಕಮಾಂಡ್ ಮೂಲಕ ಉರುಳಿಸುತ್ತಿರುವ ದಾಳಗಳಿಗೆ ಯಡಿಯೂರಪ್ಪ ನಿರುತ್ತರರಾಗಿದ್ದಾರೆ. ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿ ಸವದಿ ಅವರಿಗೆ (ಸೋತಿದ್ದರೂ) ಉಪಮುಖ್ಯಮಂತ್ರಿ ಹುದ್ದೆ ಕೊಡಿಸುವ ಮೂಲಕ ತಮ್ಮ ಶಕ್ತಿ ಏನೆಂಬುದರ ಸ್ಯಾಂಪಲ್ ತೋರಿಸಿದ ಸಂತೋಷ್, ಆನಂತರ ಸಂಪುಟ ರಚನೆ, ರಾಜ್ಯಸಭೆ, ವಿಧಾನ ಪರಿಷತ್, ಪಕ್ಷದೊಳಗಿನ ನೇಮಕಾತಿಯಲ್ಲೂ ಬಲಪ್ರದರ್ಶಿಸಿದರು. ತಮ್ಮ ಕಟ್ಟಾ ಬೆಂಬಲಿಗ ಸಿ.ಟಿ.ರವಿ ಅವರನ್ನು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ, ತೇಜಸ್ವಿ ಸೂರ್ಯಗೆ ಯುವ ಮೋರ್ಚಾ ರಾಷ್ಟಿçÃಯ ಅಧ್ಯಕ್ಷ ಹುದ್ದೆಗೆ ಏರಿಸುವ ಮೂಲಕ ಪಕ್ಷದಲ್ಲಿ ತಮ್ಮ ಹಿಡಿತ ಎಂತಹದ್ದು ಎಂಬುದನ್ನು ತೋರಿಸಿದ್ದಾರೆ. ಜೊತೆಗೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನೂ ಸದ್ದಿಲ್ಲದೆ ಆರಂಭಿಸಿದ್ದಾರೆ.

ಆದರೆ ಸಿಡಿದೆದ್ದ ಯಡಿಯೂರಪ್ಪ 2013ರ ಚುನಾವಣೆಯಲ್ಲಿ ಬಿಜೆಪಿಗೆ ಕೊಟ್ಟ ಏಟಿನ ಪರಿಣಾಮ ಚೆನ್ನಾಗಿಯೇ ಬಲ್ಲ ಬಿಜೆಪಿ ನಾಯಕರು ಯಡಿಯೂರಪ್ಪ ಅವರ ಮನವೊಲಿಸಿ, ಅಧಿಕಾರ ತ್ಯಾಗಕ್ಕೆ ಒಪ್ಪಿಸುವ ಪ್ಲಾನ್ `ಎ’ ಹಾಕಿಕೊಂಡಿದ್ದಾರೆ. ಯಡಿಯೂರಪ್ಪ ಹುದ್ದೆ ಬಿಡಲು ಒಪ್ಪದಿದ್ದರೆ ಲಿಂಗಾಯತ ಸಮುದಾಯದ ನಾಯಕರೊಬ್ಬರಿಗೇ ಸಿಎಂ ಹುದ್ದೆ ನೀಡಿ ಮುಂದಿನ ಚುನಾವಣೆಗೆ ನೆಲ ಹದ ಮಾಡಿಕೊಳ್ಳುವ ಚಿಂತನೆಯೂ ವರಿಷ್ಠರಲ್ಲಿದೆ. ಯಾರು ಏನೇ ಹೇಳಿದರೂ ವರ್ತಮಾನದಲ್ಲಿ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರಾಗಿಯೇ ಉಳಿದಿರುವ ಯಡಿಯೂರಪ್ಪ ನಾಯಕತ್ವ ಬದಲಾವಣೆಯಾದರೆ ಆ ಸಮುದಾಯ ಹೇಗೆ ವರ್ತಿಸಲಿದೆ? ಈವರೆಗೂ ಒಂದು ಬಾರಿಯೂ 113 ಸೀಟು ಗೆದ್ದು ಅಧಿಕಾರ ಹಿಡಿಯದ ಕಮಲ ಪಕ್ಷ ಭವಿಷ್ಯದಲ್ಲಿ ಪ್ರಬಲ ಸಮುದಾಯಗಳ ಬೆಂಬಲ ಗಳಿಸಲು ಸಾಧ್ಯವೇ? ಪರ್ಯಾಯ ನಾಯಕತ್ವ ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಎಂಬುದಕ್ಕೆ ಕಾಲವೇ ಉತ್ತರ ಕೊಡಬೇಕಾಗಿದೆ.

ಸಿದ್ಧು-ಡಿಕೆಶಿ ಕಾಳಗ

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಗಾದಿಗೇರಿದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಹುಮ್ಮಸ್ಸು, ಉತ್ಸಾಹ ಮೂಡಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ಕನಸಿಗೆ ರೆಕ್ಕೆ ಪುಕ್ಕ ಬಂದಿದೆ. ಇದರ ನಡುವೆಯೇ ಎರಡು ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಪ್ರಸ್ತಾಪ ಆಗುವ ಮೂಲಕ ಹೊಸ ಬಣ ಗುದ್ದಾಟಕ್ಕೆ ಚಾಲನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಾಯಕತ್ವಕ್ಕಾಗಿ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆಗಳನ್ನು ಹುಟ್ಟಿಹಾಕಿದೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ತಮಗೆ ಮತ್ತೊಂದು ಅವಕಾಶ ತಾನಾಗಿಯೇ ಒಲಿದುಬರಲಿದೆ; ಡಿ.ಕೆ.ಶಿವಕುಮಾರ್ ಐಟಿ, ಇಡಿ, ಸಿಬಿಐ ಬಲೆಯಿಂದ ಬಿಡಿಸಿಕೊಳ್ಳದೆ ಮುಖ್ಯಮಂತ್ರಿ ಹುದ್ದೆ ಕನಸು ಕಾಣಲು ಸಾಧ್ಯವಿಲ್ಲ, ಪಕ್ಷದ ಮೇಲೆ ಹಿಡಿತವಿಟ್ಟುಕೊಂಡರೆ ಡಿಕೆಶಿ ಹಿಮ್ಮೆಟ್ಟಿಸುವುದು ಅಸಾಧ್ಯವಲ್ಲ ಎಂಬುದು ಸಿದ್ಧರಾಮಯ್ಯ ಅವರ ಈವರೆಗೆನ ಲೆಕ್ಕಾಚಾರವಾಗಿತ್ತು. ಆದರೆ ದಿನದಿಂದ ದಿನಕ್ಕೆ ಡಿಕೆಶಿ ಪ್ರಬಲಗೊಳ್ಳುತ್ತ ಒಕ್ಕಲಿಗ ಸಮುದಾಯದ ಬೆಂಬಲ ಗಳಿಸುತ್ತ ಸಾಗುತ್ತಿರುವುದು ಸಿದ್ಧು ಲೆಕ್ಕಾಚಾರವನ್ನು ಉಲ್ಟಾ ಮಾಡುವಂತಿದೆ.

ಶಿರಾ-ರಾಜರಾಜೇಶ್ವರಿ ಉಪಚುನಾವಣೆ ಘೋಷಣೆಯಾದ ನಂತರ ಡಿಕೆಶಿ ಪರ ಅಬ್ಬರ ಹೆಚ್ಚಾಗುತ್ತಿರುವುದು ಸಿದ್ಧು ಸಿಡಿಮಿಡಿಗೂ ಕಾರಣವಾಗಿದೆ. ಈ ಅಸಮಾಧಾನ ಅವರ ಆಪ್ತ ಶಾಸಕ ಜಮೀರ್ ಅಹಮದ್ ಬಾಯಿ ಮೂಲಕ ಹೊರಬಿದ್ದಿದೆ. `ಮುಂದಿನ ಬಾರಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಜಮೀರ್ ಹೇಳಿಕೆ ನೀಡಿದ ಬೆನ್ನಿಗೇ ಡಿಕೆಶಿ ಬೆಂಬಲಿಗ ಶಾಸಕಿ ಸೌಮ್ಯರೆಡ್ಡಿ `ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ’ ಎಂದು ತಿರುಗೇಟು ನೀಡಿದ್ದಾರೆ. ಜಮೀರ್ ಅವರದು ಭಾವನಾತ್ಮಕ ಹೇಳಿಕೆ ಎಂದು ಡಿಕೆಶಿ `ಮುಂದಿನ ಮುಖ್ಯಮಂತ್ರಿ’ ವಿಚಾರಕ್ಕೆ ತೆರೆ ಎಳೆದರೂ ಪಕ್ಷದ ಮೇಲೆ ಹಿಡಿತ ಸಾಧಿಸುವ ಪಟ್ಟುಗಳು ಆರಂಭವಾಗುವುದು ಖಚಿತವಾಗಿದೆ.

ಡಿಕೆಶಿ ಒಕ್ಕಲಿಗ ಸಮುದಾಯದ ಬೆಂಬಲ ಪಡೆದು ಶಕ್ತಿ ಸಂಪಾದನೆಗೆ ಹೊರಟರೆ ಸಿದ್ಧರಾಮಯ್ಯ ಮತ್ತೆ ಅಹಿಂದ ಸಮುದಾಯಗಳನ್ನು ಒಟ್ಟುಗೂಡಿಸಿ ರಾಜಕೀಯ ಕಸುವು ಹೆಚ್ಚಿಸಿಕೊಳ್ಳುವ ಹಾದಿ ಹಿಡಿದಿದ್ದಾರೆ. ಇಬ್ಬರು ನಾಯಕರ ಶಕ್ತಿ ಸಂಪಾದನೆ ಪಕ್ಷಕ್ಕೆ ಅಧಿಕಾರ ತಂದರೆ ಅಡ್ಡಿಯಿಲ್ಲ. ಆದರೆ ಬಣ ಗುದ್ದಾಟ ಹೆಚ್ಚಿಸಿದರೆ ಪಕ್ಷ ಬಡವಾಗಲಿದೆ ಎಂಬುದು ಕಾರ್ಯಕರ್ತರ ಅಳಲು.

ಜೆಡಿಎಸ್ ಕೋಟೆಯಲ್ಲಿ ಕಂಪನ

ಒಕ್ಕಲಿಗರ ಮತ ಬ್ಯಾಂಕ್ ನಿಂದ ಹಳೇ ಮೈಸೂರು ಪ್ರಾಂತ್ಯದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವ ಜಾತ್ಯತೀತ ಜನತಾ ದಳ ಪಕ್ಷಕ್ಕೆ ಕಳೆದ ಸಂಸತ್ ಚುನಾವಣೆ ಅಕ್ಷರಶಃ ಶಾಕ್ ನೀಡಿತ್ತು. ಒಕ್ಕಲಿಗರ ಹಾರ್ಟ್ ಲ್ಯಾಂಡ್ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರಾಭವಗೊಂಡರೆ, ತುಮಕೂರಿನಲ್ಲಿ ಎಚ್.ಡಿ.ದೇವೇಗೌಡರೇ ಸೋಲಪ್ಪಿದ್ದರು. ಒಕ್ಕಲಿಗರೂ ಜೆಡಿಎಸ್‌ನಿಂದ ವಿಮುಖರಾಗುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಸಂಸತ್ ಚುನಾವಣೆ ಫಲಿತಾಂಶ ಮೂಡಿಸಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ದಳದ ಭದ್ರಕೋಟೆಗಳಾದ ಕೆ.ಆರ್.ಪೇಟೆ ಬಿಜೆಪಿ ವಶವಾಗಿತ್ತು. ಹುಣಸೂರು, ಮಹಾಲಕ್ಷ್ಮಿ ಲೇಔಟ್ ಕೂಡಾ ಕೈತಪ್ಪಿ ಹೋಗಿತ್ತು.

ಈ ಅಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಕಾಂಗ್ರೆಸ್ ಪಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಿದ್ದು ದಳಪತಿಗಳ ನೆಮ್ಮದಿ ಕೆಡಿಸಿದೆ. ಡಿಕೆಶಿ ನಾಯಕತ್ವ ವಹಿಸಿಕೊಂಡ ನಂತರ ಒಕ್ಕಲಿಗ ಸಮುದಾಯ ಅವರ ವಿಚಾರದಲ್ಲಿ ಸಹಾನುಭೂತಿಯಿಂದ ವರ್ತಿಸುತ್ತಿರುವ ರೀತಿ ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರಲ್ಲಿ ಕಸಿವಿಸಿ ಉಂಟು ಮಾಡಿದೆ. ಒಕ್ಕಲಿಗ ನಾಯಕತ್ವಕ್ಕಾಗಿ ಪೈಪೋಟಿ ಆರಂಭವಾಗಿದೆ. ಜಾರಿ ನಿರ್ದೇಶನಾಲಯ (ಇಡಿ) ಡಿಕೆಶಿ ಬಂಧಿಸಿದಾಗ ಒಕ್ಕಲಿಗರು ಪ್ರತಿಭಟಿಸಿದರು. ಇತ್ತೀಚಿನ ಸಿಬಿಐ ದಾಳಿ ನಂತರ ಸಮುದಾಯ ಹಾಗೂ ಸಮಾಜದ ಮಠಾಧೀಶರು ಡಿಕೆಶಿ ಬೆನ್ನಿಗೆ ಬಲವಾಗಿ ನಿಂತಿದೆ.

ಒAದೂವರೆ ದಶಕದ ನಂತರ ಕಾಂಗ್ರೆಸ್ ಸಾರಥ್ಯ ಒಕ್ಕಲಿಗರ ಕೈಗೆ ಸಿಕ್ಕಿದೆ. ಈ ಹಂತದಲ್ಲಿ ಡಿಕೆಶಿ ಅವರಿಗೆ ಬಲ ತುಂಬುವುದು ಸಮುದಾಯದ ಹಿತದೃಷ್ಟಿಯಿಂದ ಒಳ್ಳೆಯದು ಎಂಬ ಮಾತುಗಳು ಒಕ್ಕಲಿಗರ ನಡುವೆ ಕೇಳಿಬರುತ್ತಿರುವುದು ಜೆಡಿಎಸ್ ನಾಯಕರು ವಿಚಲಿತವಾಗಲು ಕಾರಣವಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಹಳೇ ಮೈಸೂರು ಭಾಗದ ಹಲವಾರು ಜೆಡಿಎಸ್ ಒಕ್ಕಲಿಗ ಶಾಸಕರು ಡಿಕೆಶಿ ಜೊತೆ ಕೈಜೋಡಿಸಿ ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದ್ದಾರೆ. ಒಕ್ಕಲಿಗರ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್‌ನತ್ತ ಶಿಫ್ಟ್ ಆಗುವ ಸಾಧ್ಯತೆ ಅರಿತೇ ಶಾಸಕರು ಈ ಹಾದಿ ಹಿಡಿದಿದ್ದಾರೆ.

Leave a Reply

Your email address will not be published.