ಜಾತಿ ಪ್ರಜಾಪ್ರಭುತ್ವದ ಕಾರ್ಪೋರೇಟ್ ಹಿಂದೂ ರಾಜಕಾರಣ

-ಡಾ.ಮೊಗಳ್ಳಿ ಗಣೇಶ್

ಮೊದಲಿಗೆ ಮೀಸಲಾತಿ ವ್ಯವಸ್ಥೆ ದಮನಿತರ ಕೈ ಹಿಡಿಯುವ ಅಂತಃಕರಣವಾಗಿತ್ತು. ಈಗ ಅದು ಕೆಟ್ಟ ವ್ಯಾಪಾರವಾಗಿದೆ. ಭಾರತ ತನ್ನ ದೇಶದ ತಳಪಾಯದ ಪ್ರಜೆಗಳನ್ನೇ ಮೀಸಲಾತಿ ತಂತ್ರಗಳಲ್ಲಿ ರಾಜಕೀಯವಾಗಿ ಖರೀದಿ ಮಾಡುತ್ತಿದೆ. ಅಸಹಾಯಕ ಜಾತಿಗಳನ್ನು ಗುಲಾಮಗಿರಿಗೆ ಅಳವಡಿಸುವ ಸವಿಯಾದ ಉಪಾಯವಿದು!

ಜಾತಿವ್ಯವಸ್ಥೆಯು ಮತೀಯ ರಾಜಕಾರಣದ ಸನಾತನ ಉದ್ಯಮವಾಗಿದೆ. ಇದು ಸಾವಿರಾರು ವರ್ಷಗಳಿಂದಲೂ ನಡೆದು ಬಂದಿದೆ. ಹಾಗೆಯೇ ಅದರ ವಿರುದ್ಧ ಸೌಮ್ಯವಾದ ಆಧ್ಯಾತ್ಮದ ಮಾನವೀಯ ದಂಗೆಗಳೂ ನಡೆದಿವೆ. ಬೌದ್ಧ ಧರ್ಮವು ಜಾತಿ ವ್ಯವಸ್ಥೆ ಹಾಗೂ ಅಮಾನವೀಯ ಹಿಂದುತ್ವದ ವಿರುದ್ಧ ರೂಪುಗೊಂಡಿದ್ದ ದಮನಿತರ ದುಃಖದ ಅಹಿಂಸೆಯ ಪ್ರತಿರೋಧವಾಗಿತ್ತು. ಅಹಿಂಸೆಯ ಜೈನ ಧರ್ಮ ಹಿಂದೂ ಧರ್ಮದ ಜೊತೆ ಮುನಿಸಿಕೊಂಡಿತ್ತು.

ಶೈವ, ವೈಷ್ಣವ ಪರಂಪರೆಯ ಜಾತಿಗಳಿಗೆ ಮಧ್ಯಕಾಲೀನ ಆಳರಸರು ಅವರವರ ದೇಗುಲಗಳನ್ನು ಕಟ್ಟಿಸಿಕೊಳ್ಳಲು ಉದಾರವಾಗಿ ರಾಜಧನ ನೀಡುತ್ತಿದ್ದರು. ಪಾಳೆಯಗಾರರು ಅದನ್ನೇ ಅನುಸರಿಸುತ್ತಿದ್ದರು. ದಾನದತ್ತಿ ಉಡುಗೊರೆಗಳು ಆ ಕಾಲದ ನಿಗಮ ಮಂಡಳಿ, ವರ್ಗ, ಪ್ರವರ್ಗ, ಒಳ ಮೀಸಲಾತಿಯಂತದ್ದೇ ಆಮಿಷಗಳಾಗಿದ್ದವು. ಆಗಂತು ಮಠಗಳಿಗೆ ಬೇಕಾದಷ್ಟು ಸಂಪತ್ತನ್ನು ನೀಡಲಾಗುತ್ತಿತ್ತು. ಹಾಗೆಯೆ ಅವು ಧಾರ್ಮಿಕ ಆಡಳಿತವನ್ನು ಸರ್ವಾಧಿಕಾರಿ ರೀತಿಯಲ್ಲಿ ನೆರವೇರಿಸುತ್ತಿದ್ದವು. ಇವತ್ತಿನ ಮತೀಯ ಧಾರ್ಮಿಕ ರಾಜಕಾರಣಕ್ಕೂ, ಜಾತಿಗಳನ್ನು ಓಲೈಸುವುದಕ್ಕೂ ಚರಿತ್ರೆಯಲ್ಲಿ ಬಹಳಷ್ಟು ಶಾಸನಗಳಿವೆ. ಅಂತಹ ಟಿಪ್ಪುಸುಲ್ತಾನ್ ಕೂಡ ಶಂಕರಾಚಾರ್ಯರು ಕಟ್ಟಿಸಿದ ಮಠಗಳಿಗೆ ಧಾರಾಳವಾಗಿ ದಾನದತ್ತಿಗಳ ನೀಡಿದ್ದಾನೆ.

ಮಠಗಳು ಧರ್ಮಾಧಿಕಾರಿಯಾಗಿ ಪರ್ಯಾಯ ಶಕ್ತಿಗಳಾಗಿದ್ದವು. ಆ ಪಳೆಯುಳಿಕೆಯಲ್ಲಿಯೇ ಈಗಲೂ ಮುಂದುವರೆದಿರುವುದು. ಮಧ್ಯಕಾಲೀನ ಸಮಾಜದಲ್ಲಿ ಅಂದರೆ ಭಕ್ತಿ ಪಂಥ ಚಳವಳಿ ಪ್ರವರ್ಧಮಾನಕ್ಕೆ ಬಂದಾಗ, ಮಠಗಳು ತಮ್ಮ ‘ಮತ’ಗಳ ಮೂಲಕ ಸಾಮಾಜಿಕವಾಗಿ ಸಮುದಾಯಗಳನ್ನು ಭಿನ್ನ ಭಿನ್ನವಾಗಿ ವಿಂಗಡಿಸಿಕೊAಡರು. ರಾಜರಿಗೆ ಪರ್ಯಾಯವಾಗಿದ್ದ ಮಠಗಳ ಧರ್ಮಗುರುಗಳು ತಮ್ಮ ಜಾತಿಗಳ ಮೂಲಕ ಆಗಲೂ ಬೆದರಿಕೆ ಒಡ್ಡುವಷ್ಟು ಬಲಿಷ್ಠವಾಗಿದ್ದರು. ಇದು ನಿನ್ನೆಮೊನ್ನೆಯ ಜಾತಿ ವ್ಯವಸ್ಥೆಯ ರಾಜಕೀಯ ಪಗಡೆಯಾಟವಲ್ಲ.

ಅದಕ್ಕಾಗಿಯೇ ಅಂಬೇಡ್ಕರ್ ಧರ್ಮ ಜಾತಿ ಜನಾಂಗ ಲಿಂಗ ನಿರಪೇಕ್ಷ ಮಾನವೀಯ ಸ್ವಾತಂತ್ರö್ಯದ, ಜಾತ್ಯಾತೀತ ರಾಷ್ಟçದ ಕಲ್ಪನೆಯಲ್ಲಿ ಸಂವಿಧಾನವನ್ನು ರೂಪಿಸಿದ್ದು. ಇವತ್ತಿನ ರಾಜಕಾರಣ ಬಹುಪಾಲು ಜಾತಿನಿಷ್ಠವಾಗಿದೆ. ಜಾತಿಗಳ ಬಲಾಬಲ ಚುನಾವಣೆಯ ಮತಗಳ ಬಲಾಬಲವಾಗಿ ಪ್ರಜಾಪ್ರಭುತ್ವದ ಅಧಿಕಾರವನ್ನು ಹಿಡಿಯುವ ಶಕ್ತಿಯಾಗಿದೆ. ಜಾತಿಗಳ ಚಿಲ್ಲರೆ ಮತಗಳು ಕೂಡ ನಿರ್ಣಾಯಕ ಪಾತ್ರ ವಹಿಸುತ್ತವೆ. ಜಾತಿ ರಾಜಕಾರಣ ಬೃಹತ್ ಬಂಡವಾಳಶಾಹಿಯಾಗಿದೆ. ಇದರ ಮಹಿಮೆ ಅರಿತೇ ಎಲ್ಲ ಜಾತಿಯ ಮಠಗಳು ತಮ್ಮ ಜಾತಿಗಳ ಉದ್ಧಾರದ ನೆಪದಲ್ಲಿ ಕೋಟಿಗಟ್ಟಲೆ ಅನುದಾನ ಪಡೆದು ಬೀಗುತ್ತಿರುವುದು. ಚಿಲ್ಲರೆ ಸ್ವಾಮೀಜಿಗಳು ಗೂಂಡಾ ವರ್ತನೆ ಮಾಡುತ್ತಿರುವುದು…

ಇದು ಅಧಾರ್ಮಿಕ ಅಪರಾಧಿ ನಡವಳಿಕೆ. ಅಂತಹ ಉದ್ದಟ ಸ್ವಾಮೀಜಿಗಳನ್ನು ಜೈಲಿಗೆ ಅಟ್ಟಬೇಕು. ಎಂತಹ ವಿಪರ್ಯಾಸ! ಅಂತಹ ಸ್ವಾಮೀಜಿಗಳ ಆಶೀರ್ವಾದಕ್ಕಾಗಿ ದೊಡ್ಡ ರಾಜಕಾರಣಿಗಳು ಅಡ್ಡಬಿದ್ದು ಪ್ರಜಾಪ್ರಭುತ್ವವನ್ನು ಮಾರಿಕೊಳ್ಳುವರಲ್ಲಾ… ಸಂವಿಧಾನದ ದರ್ಶನವೇ ಇವತ್ತಿನ ಯಾವ ರಾಜಕೀಯ ಪಕ್ಷಗಳಿಗೂ ಇಲ್ಲವಲ್ಲಾ… ಸಮುದಾಯಗಳಿಗೂ ಬೇಕಾಗಿಲ್ಲವಲ್ಲಾ… ಇಡೀ ದೇಶವನ್ನು ಖಾಸಗೀಕರಣಗೊಳಿಸಿ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರಿ ದಾರಿಗೆ ತಂದುಕೊಳ್ಳುತ್ತಿರುವ ನಿಗೂಢ ನಿಶ್ಶಬ್ದ ಒಳಸಂಚಿನ ನೂರೆಂಟು ಕಾಯಿದೆಗಳ ತಿದ್ದುಪಡಿಯ ಮೂಲಕ ಸಮಾಜಗಳನ್ನು ‘ಸೀಜ್’ ಮಾಡುವ ಸೌಮ್ಯ ಸರ್ವಾಧಿಕಾರಿ ಉಪಾಯಗಳು ಬಲವರ್ಧನೆಗೊಳ್ಳುತ್ತಿವೆಯಲ್ಲಾ…

ಈ ಬಗೆಯ ಹುನ್ನಾರಗಳ ನಡುವೆ ಇಡೀ ದೇಶದ ತುಂಬ ಮೊದಲಿಗೆ ತಳಜಾತಿಗಳನ್ನು ಹಿಂದೂ ಸೈನಿಕ ಸಮಾಜವನ್ನಾಗಿ ಪರಿವರ್ತಿಸಲು ಅವರು ‘ರಾಮ’ಬಾಣ ಹೂಡಿದರು. ಅನಂತರ ಅಂತಹ ಎಷ್ಟೋ ಮಾಯದ ಅಮಲಿನ ಪ್ರಸಾದ ತಿನ್ನಿಸಿ ಹನುಮನ ಭಕ್ತರನ್ನಾಗಿಸಿ ಮುಕ್ಕೋಟಿ ದೇವಾಲಯಗಳ ಜೀರ್ಣೋದ್ಧಾರ ಮಾಡಿಸಿ ಬ್ರಾಹ್ಮಣ್ಯಕ್ಕೆ ಮತಾಂತರಿಸಿದರು. ಹಿಂದೂ ಧರ್ಮ ಧರ್ಮ ಅಲ್ಲ. ಅದೊಂದು ವಿರಾಟ್ ಪರಂಪರೆಗಳ ಸಂಗಮ, ಸಂಯೋಗ ಸಂಸ್ಕೃತಿಗಳ ಬಿಡಿಬಿಡಿ ಅನನ್ಯತೆ. ಭಾರತದಲ್ಲಿ ಅಖಂಡ ಧರ್ಮ ಒಂದು ಯಾಕೆ ರೂಪುಗೊಳ್ಳಲಿಲ್ಲ ಎಂದರೆ; ಅಪಾರ ಸಂಖ್ಯೆಯ ಅವೈದಿಕ ಸಮುದಾಯಗಳು ಬಿಡಿಯಾಗಿಯೂ ಇಡೀಯಾಗಿಯೂ ಇದ್ದವು. ಒಂದು ಅರ್ಥದಲ್ಲಿ ದ್ರಾವಿಡ ಸಮುದಾಯಗಳು ಛಿದ್ರವಾಗಿ ಚಿಕ್ಕ ಚಿಕ್ಕ ಕನ್ನಡಿಗಳಲ್ಲಿ ತಮ್ಮ ಕುಟುಂಬ ರೂಪಗಳನ್ನು ಮಾತ್ರ ಕಂಡು ಬದುಕಿ ಉಳಿಯಲು ಪರದಾಡುತ್ತಿದ್ದವು.

ಈಗ ಜಾಗತೀಕರಣದ ಕನ್ನಡಿಯ ಮುಂದೆ ತಬ್ಬಲಿಯದ ಸಮುದಾಯಗಳು ಹಳ್ಳಿ ಬಿಟ್ಟು ನಗರದ ಸ್ಲಮ್ಮುಗಳ ಸೇರಿ ಕನಿಷ್ಠ ಸೇವಾ ವಲಯದಲ್ಲಿ ತೊಡಗಿ ಹೊಸ ಬಗೆಯ ಪಂಜರಗಳಲ್ಲಿ ಜಗತ್ತಿನ ರಂಗಿನ ಲೋಕವನ್ನು ನೋಡುತ್ತಿವೆ. ಅತ್ತ ಈ ದೇಶವನ್ನು ಹೇಗೆ ಸನಾತನ ಮಾಡುವುದು ಎಂಬ ಚಿಂತೆ ಈ ದೇಶವನ್ನು ಆಳುವ ಕೆಲವರಿಗಿದೆ. ಅದನ್ನು ಖಾಸಗೀ ವಲಯದ ಶ್ರೀಮಂತ ಉದ್ಯಮಿಗಳ ಸಹಕಾರದಿಂದ; ಅಂದರೆ ಕಾರ್ಪೋರೇಟ್ ಜಗತ್ತಿನ ಸಹಯೋಗದಿಂದ ಹೇಗೆ ಹಿಂದೂ ಜಾತಿ ಸರ್ವಾಧಿಕಾರವನ್ನು ಸ್ಥಾಪಿಸಬಹುದು ಎಂಬ ಮರೆ ಮೋಸದ ಉಪಾಯಗಳೂ ಕೂಡ ನಡೆದಿವೆ ಎಂಬ ದಟ್ಟ ಗುಮಾನಿಗಳಿವೆ. ಕಾರ್ಪೋರೇಟ್ ಸರ್ವಾಧಿಕಾರ ಈಗಾಗಲೇ ಮೌನವಾಗಿ ಹಬ್ಬಿದೆ. ಇದರ ಬಲದಲ್ಲೇ ಈಗ ಭಾರತದಲ್ಲಿ ಬೃಹತ್ ವಲಯವಾದ ಉತ್ಪಾದಕ ಸಮುದಾಯಗಳನ್ನು ಖಾಸಗಿಯವರಿಗೆ ಪರೋಕ್ಷವಾಗಿ ಮಾರಿಬಿಡುವ ರೈತ ಕಾಯ್ದೆಗಳ ಮಸೂದೆಗಳು ಬಿಗಡಾಯಿಸಿವೆ.

ಬಸವಣ್ಣ ಸ್ಥಾವರಕ್ಕಳಿವುಂಟು; ಜಂಗಮಕ್ಕಲ್ಲ ಎಂದಿದ್ದರು. ಕಾಯಕವೇ ಕೈಲಾಸ ಎಂಬ ಜೀವನ ವಿಧಾನಗಳ ಉತ್ಪಾದನಾ ಮಾನವೀಯತೆಯ ಅರ್ಥಶಾಸ್ತç ಎಲ್ಲಿ; ಇವತ್ತಿನ ಕಾರ್ಪೋರೇಟ್ ಎಕಾನಮಿಯ ಡೆಮಾಕ್ರಸಿ ಎಲ್ಲಿ? ಜಾತಿಗಳಿಗಾಗಿ ಮೀಸಲಿಡುವ ಹಣದ ರಾಜಕಾರಣ ಎಲ್ಲಿ? ಹಣ ಅಲ್ಲ ಆದಾಯದ ಪ್ರಮಾಣ. ಅದಲ್ಲ ಅಭಿವೃದ್ಧಿ. ಎಲ್ಲೆಲ್ಲಿ ಹಣ ಮತ್ತು ಅಧಿಕಾರಗಳು ಎಲ್ಲೆ ಮೀರಿ ಬೆಳೆಯುತ್ತವೊ ಅಲ್ಲೆಲ್ಲ ವಿಪರೀತ ಲಂಚ, ಭ್ರಷ್ಟಾಚಾರ, ಅಕ್ರಮಗಳು ಆಡಳಿತಶಾಹಿಯ ಜೊತೆ ಬೆರೆತು ಜಾತಿ ಜಾತಿಗಳನ್ನು ಮತ್ತೂ ವಿಂಗಡಿಸಿ ಕತ್ತರಿಸಿ ಒಳಮೀಸಲಾತಿಯ ನಾಟಕ ಮಾಡಿ ಆಳುವ ಸರ್ಕಾರಗಳು ಸಮುದಾಯಗಳ ಕಣ್ಣಿಗೆ ಪಟ್ಟಿ ಕಟ್ಟಿ ಅವುಗಳ ಮೇಲೆ ಕುಳಿತು ಮೆರವಣಿಗೆಯ ಸವಿಯಲ್ಲಿರುತ್ತವೆ. ಇದು ಯಾಕೆ ದಮನಿತ ತಳಜಾತಿಗಳ ನಾಯಕರಿಗೆ ಗೊತ್ತಾಗುವುದಿಲ್ಲ!

ಮೀಸಲಾತಿಯೇ ಒಂದು ಕೆಟ್ಟ ನಂಬಿಕೆ. ಅದೊಂದು ಶಾಶ್ವತ ಪರಿಹಾರ ಅಲ್ಲ. ಅಂಬೇಡ್ಕರ್ ಇದನ್ನೇ ಹೇಳಿದ್ದರು. ದಮನಿತರಿಗೆ ಮೀಸಲಾತಿ ಬೇಡ ಎಂಬುದಲ್ಲ ನನ್ನ ಇಂಗಿತ. ಆದರೆ ಮೀಸಲಾತಿಯ ಹೆಸರಲ್ಲಿ ಅಮಾಯಕ ಸಮುದಾಯಗಳನ್ನು ಓಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುವ ರಾಜಕಾರಣ ಬಹಳ ಅಪಾಯಕಾರಿಯಾದುದು. ಗೆಲ್ಲಲು ಬೇಕಾದಷ್ಟು ಮತಜಾತಿಗಳ ಖರೀದಿಸಿದ ನಂತರ ಇತರೆ ಮುಸ್ಲಿಂ ಮತಗಳು ಅವರಿಗೆ ಅಗತ್ಯ ಇರುವುದಿಲ್ಲ. ದಲಿತರೂ ಬೇಕಿರುವುದಿಲ್ಲ. ಆಗ ಇಂತಹ ಅನೇಕರ ಮತಗಳು ಸೋತುಹೋಗುತ್ತಿವೆ. ಅದಕ್ಕಾಗಿಯೇ ಆಯಕಟ್ಟಿನ ಎಲ್ಲ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ರಾಜಕೀಯ ಯುದ್ಧ ಆರಂಭವಾಗಿದೆ.

ರಾಜರ ಕಾಲದಲ್ಲಿ ಪ್ರದೇಶಗಳನ್ನು ವಿಸ್ತರಿಸಿ ಸಾಮ್ರಾಜ್ಯ ಕಟ್ಟಲಾಗುತ್ತಿತ್ತು. ಈಗ ಮತದಾರರ ವಲಯಗಳನ್ನು ಆಮಿಷಗಳಿಂದ, ಖಾಸಗೀ ಉದ್ಯಮಿಗಳ ಸಹಭಾಗಿತ್ವದಲ್ಲಿ ವಶಪಡಿಸಿಕೊಂಡರೆ ಸಾಕೂ… ಸರ್ಕಾರ ಸುಭದ್ರ; ಹಾಗೆಯೇ ಶ್ರೀಮಂತ ಖಾಸಗೀ ವಲಯ ಸಂರಕ್ಷಿತ.

ಮೇಲ್ಮಟ್ಟದಲ್ಲಿ ಇಡೀ ದೇಶದ ಸಾರ್ವಭೌಮತ್ವವು ಸಂವಿಧಾನದ ತಿದ್ದುಪಡಿಗಳ ಮೂಲಕ ಬಹುರಾಷ್ಟಿçÃಕರಣಗೊಳ್ಳುತ್ತ, ಸ್ಥಳೀಯವಾಗಿ ಪ್ರಬಲ ಜಾತಿ ಉದ್ಯಮಿಗಳಿಗೆ ಖಾಸಗೀಕರಣಗೊಳ್ಳುತ್ತಿರುವಲ್ಲಿ ನಮ್ಮ ಊರು ಕೇರಿ ದೇಶ ಎಲ್ಲಿದೆ ಎಂದು ಗೂಗಲ್ ಮ್ಯಾಪಲ್ಲಿ ಹುಡುಕಬೇಕಾಗಿದೆ. ನಮ್ಮ ಊರು ಕೇರಿ ದೇಶವೇ ನಮ್ಮ ಪಾಲಿಗೆ ಕಳೆದುಹೋಗಿದೆ ಎನಿಸಿದೆ. ನಮ್ಮ ದೇಶದ ಅಮಾಯಕ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಎಲ್ಲಿದೆ ರಕ್ಷಣೆ? ನಮ್ಮ ಗಡಿಗಳಿಗೆ ಎಲ್ಲಿದೆ ಎಚ್ಚರ? ಸೇವಾವಲಯದ ಕೋಟಿಗಟ್ಟಲೆ ಜನರಿಗೆ ಈ ಸರ್ಕಾರಗಳು ಯಾವ ನ್ಯಾಯ ಒದಗಿಸಿವೆ? ಇಷ್ಟೆಲ್ಲ ಅಬಲೆ ಮಹಿಳೆಯರಿಗೆ ಏನು ಮಾಡಿದೆ ಸರ್ಕಾರ? ಅಸ್ಪೃಶ್ಯರ ಮೇಲಿನ ಹಲ್ಲೆ ಕೊಲೆಗಳಿಗೆ ಶಿಕ್ಷೆಯೇ ಆಗಿಲ್ಲವಲ್ಲಾ?

ಇಂತಹ ಬರ್ಬರತೆಯಲ್ಲಿ ಇಡೀ ದೇಶ ತುಂಬ ತಬ್ಬಲಿ ಜಾತಿಗಳಿಗೆ ಮಾಯಾ ಜಾಲದ ಕನಸಿನ ಕನ್ನಡ ಕೊಡಿಸುವ ಕಾರ್ಯಕ್ರಮಗಳನ್ನು ಇವತ್ತಿನ ಸರ್ಕಾರಗಳು ಮಾಡುತ್ತಿವೆ. ಇಲ್ಲೇ ತಳಜಾತಿಗಳಿಗೆ ಜ್ಞಾನೋದಯ ಆಗಬೇಕು. ಬಡವರ ಬೇಡಿಕೆಯ ಕನಸಿನ ಕನ್ನಡಿಗಳ ಮೂಲಕವೇ ವಂಚಿಸುವ ಸರ್ಕಾರಗಳು ಲಂಚದ ಯೋಜನೆಗಳ ಮೂಲಕ ಮರುಳು ಮಾಡುತ್ತಿವೆ. ನಮ್ಮ ನಮ್ಮ ಜಾತಿಗಳಿಗೆ ಇಷ್ಟಿಷ್ಟು ಮಾಡಿಕೊಡಿ ಎಂದು ಕೇಳುವುದೇ ಜಾತ್ಯಾತೀತತೆಗೆ ಮಾಡುವ ಅಪಮಾನ. ಜಾತಿಗಳು ನಾಶವಾಗುವ ಮುನ್ನವೇ ನಮಗೆ ಸ್ವಾತಂತ್ರö್ಯ ಬಂದುಬಿಟ್ಟಿತು. ಶತಮಾನಗಳ ಗುಲಾಮಗಿರಿಯ ಸ್ವಭಾವ ಜಾತಿ ವ್ಯವಸ್ಥೆಯಲ್ಲಿ ಹಾಗೇ ಉಳಿದುಬಂದಿದೆ ಮತ್ತು ಆಳುವ ಜಾತಿಗಳು ಆಳುತ್ತಲೆ ಸಾಗಿವೆ.

ಸಂವಿಧಾನದಿAದಾಗಿ ದಮನಿತ ಜಾತಿಗಳು ಮೀಸಲಾತಿ ಪಡೆದು ಬದುಕಿ ಉಳಿದ ಸಂಗತಿ ಮೌನ ಹಾಗೂ ಅವ್ಯಕ್ತ ಕ್ರಾಂತಿಗೆ ಸಮ. ಇದರ ನೇತಾರ ಅಂಬೇಡ್ಕರ್ ಅವರು ಎಲ್ಲೆಲ್ಲಿಯೂ ಜಾತಿ ವ್ಯವಸ್ಥೆಗೆ ಮಣೆ ಹಾಕುವ ಸಾಂವಿಧಾನಿಕ ದಾರಿಗಳನ್ನು ತೋರಲಿಲ್ಲ. ಅಖಂಡ ಸಾಮಾಜಿಕ ಮಾನವೀಯ ನ್ಯಾಯವನ್ನು ಅಂಬೇಡ್ಕರ್ ಸಂವಿಧಾನದ ಪ್ರಸ್ತಾವನೆಯಲ್ಲಿ ಸಾರಿಬಿಟ್ಟಿದ್ದಾರೆ. ಅದನ್ನು ತಿರುಚುತ್ತ, ಮುರಿಯುತ್ತ, ಮತೀಯ ರಾಜಕಾರಣಕ್ಕಾಗಿ; ಅಂಬೇಡ್ಕರ್ ದೃಷ್ಟಿಕೋನದ ಭ್ರಾತೃತ್ವ, ಸಮಾನತೆ, ಸ್ವಾತಂತ್ರö್ಯವನ್ನು ಛಿದ್ರಗೊಳಿಸುವ ಹುನ್ನಾರಗಳನ್ನು ಎಲ್ಲ ಸರ್ಕಾರಗಳು ಸಮನಾಗಿ ಮಾಡಿಕೊಂಡು ಬಂದಿವೆ.

ದೇವರಾಜ ಅರಸು ಅಲಕ್ಷಿತ ಜಾತಿಗಳನ್ನು ಸಂಘಟಿಸುವ ರಾಜಕಾರಣ ಮಾಡುವ ಮೂಲಕ ಆ ಸಮುದಾಯದವರನ್ನು ರಾಜಕೀಯಕ್ಕೆ ಕರೆತಂದರು. ಒಳ್ಳೆಯ ಉದ್ದೇಶ ಎಂದೇ ನಂಬುವ. ಮೀಸಲಾತಿ ನ್ಯಾಯಕ್ಕಾಗಿ ಹಾವನೂರು ವರದಿಯನ್ನು ಸದುದ್ದೇಶದಿಂದಲೇ ಜಾರಿಗೆ ತಂದರೇ? ಅದರಲ್ಲು ಅವತ್ತಿನ ಮತ ರಾಜಕಾರಣವಿತ್ತು. ಕಾಂಗ್ರೆಸ್‌ಗೆ ಆಗ ಅದು ದೊಡ್ಡ ಆಯುಧವಾಗಿತ್ತು. ಆವರೆಗೆ ಅತಿ ದುರ್ಬಲ ಜಾತಿಗಳು ತಮಗೂ ಮೀಸಲಾತಿ ಎಂದು ಸಂಭ್ರಮಿಸಿದವು. ಆ ಮೊದಲು ಮೀಸಲಾತಿಯನ್ನು ಜಾತಿ ವ್ಯವಸ್ಥೆಯ ಅತ್ಯಂತ ಕೆಳಗಿನ ಅಸ್ಪೃಶ್ಯರ ಹಿನ್ನೆಲೆಯಲ್ಲಿ ಅಂಬೇಡ್ಕರ್ ತಾತ್ಕಾಲಿಕ ಮೀಸಲಾತಿಯನ್ನು ಸೂಚಿಸಿದ್ದರು.

ಅತ್ಯಂತ ತಳ ಅಸ್ಪೃಶ್ಯ ಹೊಲೆ ಮಾದಿಗರ ಪಾಲಿನ ಮೀಸಲಾತಿಯನ್ನು ಅದು ನೂರಾ ಒಂದು ಇತರೆ ಜಾತಿಗಳ ಜೊತೆ ಸಮೀಕರಿಸಿ; ಶೇಕಡಾ 15 ಎಸ್.ಸಿ. ಜಾತಿಗಳಿಗೂ, ಶೇಕಡಾ 3 ಅನ್ನು ಎಸ್.ಟಿ.ಗಳಿಗೂ ಅಸಮಾನವಾಗಿ, ಅಸಾಮಾಜಿಕವಾಗಿ ವಿಂಗಡಿಸಿ ಹಂಚಲಾಯಿತು. ಎಸ್.ಟಿ. ಜಾತಿಗಳ ಪಟ್ಟಿಯಲ್ಲಿರಬೇಕಾದ ಎಷ್ಟೋ ಜಾತಿಗಳನ್ನು ಯಾಕೆ ಅಸ್ಪೃಶ್ಯ ಜಾತಿಗಳ ಪಟ್ಟಿಗೆ ತಂದು ತುರುಕಿ ಒಂದೇ ತಟ್ಟೆಯ ಹೊಲೆ ಮಾದಿಗರ ಅನ್ನಕ್ಕೆ ತೊಂಬತ್ತೆAಟು ಜಾತಿಗಳ ಬಲಯುತ ಕೈಗಳನ್ನು ಹಾಕಿಸಿದರು? ಇದು ಕ್ರಾಂತಿಕಾರಿ ಸಾಮಾಜಿಕ ನ್ಯಾಯವೇ? ಜಾತಿಗಳಿಗೆ ಮೀಸಲಾತಿ ಕೊಡುವ ಮೂಲಕ ಜಾತಿ ಒಳಜಾತಿಗಳ ಸಂಬAಧಗಳನ್ನು ಭಗ್ನಗೊಳಿಸಿ ಜಾತಿಗಳನ್ನು ಮತೀಯ ಹಿಂದುತ್ವಕ್ಕೆ ಸಿಲುಕಿಸುವುದು ಜಾತ್ಯಾತೀತವೆ?

ಮೀಸಲಾತಿಯಿಂದಲೇ ಜಾತಿ ವ್ಯವಸ್ಥೆ ಈಗ ಇನ್ನಷ್ಟು ಬಲಿಷ್ಠಗೊಳ್ಳುತ್ತಿದೆ. ಅದಕ್ಕೆ ‘ಪ್ರಜಾಪ್ರಭುತ್ವದ’ ಮತೀಯ ಪ್ರಮಾಣಗಳ ಬೆಂಬಲ ಸಿಕ್ಕಿಬಿಟ್ಟಿದೆ. ಹಾವನೂರು ವರದಿ ಈಗ ಅನೇಕ ಅಪವ್ಯಾಖ್ಯಾನಗಳಿಗೆ ದಾರಿ ಮಾಡಿದೆ. ಸಾಕಷ್ಟು ವರದಿಗಳು ಬಂದು ನಿಂತಿವೆ. ಸದಾಶಿವ ಆಯೋಗದ ರಾಜಕಾರಣವೂ ನ್ಯಾಯ ನೀಡಲಾರದು. ಈ ನಡುವೆ ಮುಂದುವರಿದ ಜಾತಿಗಳು ಮೀಸಲಾತಿಯನ್ನು ಕೇಳುತ್ತಿವೆ. ಒಂದು ಕಾಲಕ್ಕೆ ಮೀಸಲಾತಿ ಎಂದರೆ ಹೊಲೆ ಮಾದಿಗರ ಬಿಟ್ಟಿ ಪಾಲು ಎನಿಸಿತ್ತು. ಸಂವಿಧಾನ ಎಲ್ಲರಿಗೂ ಇಂತಿಷ್ಟು ಎಂದು ಮೀಸಲಾತಿ ವಿಂಗಡಿಸಿ ನೀಡಿತ್ತು. ಅದರಲ್ಲಿ ಹದಿನೆಂಟು ಪರ್ಸೆಂಟೇಜ್ ಎಸ್ಸಿ ಎಸ್ಟಿ ಜಾತಿಗಳಿಗೆಂದು ಸೂಚಿಸಲಾಗಿತ್ತು. ಜಾತಿ ಜನಗಣತಿಯಲ್ಲೂ ತಪ್ಪಾಗಿದೆ. ಮೀಸಲಾತಿಗೆ ಯಾವ ಯಾವ ಜಾತಿಗಳನ್ನು ಎಸ್ಸಿ ಎಸ್ಟಿಗಳಿಗೆ ಸೇರಿಸಬೇಕು ಎಂಬುದರಲ್ಲೂ ದೊಡ್ಡ ತಪ್ಪುಗಳಾಗಿವೆ. ಹೀಗಾಗಿಯೇ; ಇಂದು ಮುಂದುವರಿದ ಲಿಂಗಾಯಿತರೂ, ಗೌಡರೂ ನಮಗೂ ಮೀಸಲಾತಿ ಪ್ರತ್ಯೇಕವಾಗಿ ಬೇಕೆಂದು ಬೇಡುತ್ತಿದ್ದಾರೆ.

ಈ ಮೀಸಲಾತಿ ವ್ಯವಸ್ಥೆಯೇ ಈಗ ವಂಚನೆಯ ರಾಜಕೀಯ ಜಾಲ ಆಗಿದೆ. ಮೊದಲಿಗೆ ಅದು ದಮನಿತರ ಕೈ ಹಿಡಿವ ಅಂತಃಕರಣವಾಗಿತ್ತು. ಈಗ ಅದು ಕೆಟ್ಟ ವ್ಯಾಪಾರವಾಗಿದೆ. ಕಪ್ಪು ವರ್ಣೀಯರನ್ನು ಜಗತ್ತಿಗೆ ಮಾರುವ ಒಂದು ವ್ಯಾಪಾರ ಕಾಲವಿತ್ತು. ಈಗ ಭಾರತ ತನ್ನ ದೇಶದ ತಳಪಾಯದ ಪ್ರಜೆಗಳನ್ನೇ ಮೀಸಲಾತಿ ತಂತ್ರಗಳಲ್ಲಿ ರಾಜಕೀಯವಾಗಿ ಖರೀದಿ ಮಾಡುತ್ತಿದೆ. ಗುಲಾಮಗಿರಿಗೆ ಅಸಹಾಯಕ ಜಾತಿಗಳನ್ನು ಅಳವಡಿಸುವ ಸವಿಯಾದ ಉಪಾಯವಿದು. ಇದರ ಮೂಲಕ ರಾಜಕೀಯ ಪಕ್ಷಗಳು ಬಲಗೊಳ್ಳಲು ಅಧಿಕಾರ ಹಿಡಿಯಲು ಸದಾ ಪೈಪೋಟಿ ಮಾಡುತ್ತಿವೆ.

ಇಂತವರನ್ನು ಹೇಗೆ ತಡೆಯುವುದು? ಜಾತಿನಿಷ್ಟ ದೇಶದ ಪ್ರಜಾಪ್ರಭುತ್ವವನ್ನು ಮುರಿದು ಕಟ್ಟುವುದು ಈಗ ಸಾಧ್ಯವೇ? ಪಳಗಿದ ವಿಕೃತ ಜಾತಿ ರಾಜಕಾರಣದಿಂದಲೇ ಇಡೀ ದೇಶದ ರಾಜಕೀಯ ವ್ಯವಸ್ಥೆ ಜಾತಿ ಪ್ರಜಾಪ್ರಭುತ್ವ ಆಗಿದೆ. ಅದನ್ನೇ ಹಿಂದುತ್ವ ಬಲೆ ಬೀಸಿ ಹಿಡಿದು ಮತೀಯ ಸರ್ವಾಧಿಕಾರವನ್ನು ಜಾರಿಗೆ ತಂದಿದೆ. ಹಾಗಾಗಿಯೇ ತಳ ಜಾತಿಗಳನ್ನು ದೇಶಾದ್ಯಂತ ಮರುಳುಗೊಳಿಸಲು ನೂರಾರು ಯೋಜನೆಗಳನ್ನು ತಂದಿದೆ. ನಿಗಮ ಮಂಡಳಿ ಇತ್ಯಾದಿ ಆಯಾ ರಾಜ್ಯಗಳ ಸ್ಥಳೀಯ ತಂತ್ರಗಳಾಗಿವೆ. ಹಾತೊರೆದು ನಿಂತಿರುವ ಆಯಾ ನಾಯಕರು, ಮಠಾಧೀಶರೂ ನಾಳಿನ ದುರಂತ ಪ್ರಜ್ಞೆ ಇಲ್ಲದೆ ಗೂಂಡಾಗಿರಿಯಾಗಿ ವರ್ತಿಸುವುದು ಮಾನವ ಸಭ್ಯತೆಯೇ? ಬೌದ್ಧ ಧರ್ಮದ ನಂತರ ಲಿಂಗಾಯಿತರು ಮಾನವೀಯ ಧರ್ಮವನ್ನು ಶರಣ ಚಳವಳಿ ಮೂಲಕ ಸಾರಿ ಸಾಧಿಸಿದ್ದರು. ಅಂತಹ ಮಹೋನ್ನತ ಬಸವಾದಿ ಕ್ರಾಂತಿಯ ಸಮುದಾಯ ಮೀಸಲಾತಿಗಾಗಿ; ಸನಾತನಗೊಂಡು ಚಿಲ್ಲರೆ ಸೌಲಭ್ಯಗಳಿಗಾಗಿ ಅಂಗಲಾಚಬೇಕೇ? ಇಂತಹ ಮೇಲ್ಜಾತಿಗಳನ್ನೂ ಸುಲಭ ಬೆಲೆಗೆ ಖರೀದಿಸುವಷ್ಟು ಬಲಿಷ್ಠವಾಗಿದೆಯಲ್ಲ ಇಂದಿನ ರಾಜಕೀಯ…

ರಾಜಕೀಯ ಪಕ್ಷಗಳೆಲ್ಲ ಪ್ರಜಾಪ್ರಭುತ್ವದ ನೆಪದಲ್ಲಿ ದೇಶವನ್ನೆ ಸುಲಿಗೆ ಮಾಡುತ್ತ ಬಂದಿವೆ. ಮಾಧ್ಯಮಗಳು ಇವನ್ನೆಲ್ಲ ಬಯಲು ಮಾಡಬೇಕಿತ್ತು. ಆಗ ಪ್ರಜಾಪ್ರಭುತ್ವ ಬೇರೆ ಆಗಿರುತ್ತಿತ್ತು. ಮುಗ್ಧ ಮತದಾರರೂ ಕಣ್ಣು ತೆರೆಯುತ್ತಿದ್ದರು. ಮೌನ ಮಧ್ಯಮ ಸಮಾಜ ಯಾವತ್ತೂ ಹೊಣೆಗೇಡಿಯಾದದ್ದು. ಅದೇ ಸರ್ಕಾರಕ್ಕೆ ಹೆಚ್ಚು ತೆರಿಗೆ ಕಟ್ಟುವುದು. ಅದು ತನ್ನ ಪಾಲಿನ ಸಾರ್ವಜನಿಕ ಮಾತನ್ನು ಎಂದೂ ಆಡುವುದಿಲ್ಲ. ಚಳವಳಿಯ ಭಾಷೆಯಿಂದ ಬಹಳ ದೂರ ಇರುತ್ತದೆ. ಇದರಿಂದ ಅಖಂಡ ರಾಷ್ಟಿçÃಯ ರಾಜಕೀಯ, ಆರ್ಥಿಕ, ಸಾಮಾಜಿಕ ಸಂಬAಧಗಳಿಗೆ ಎಷ್ಟೊಂದು ಸ್ವಯಂ ಸಂಬAಧ, ಅಧಿಕಾರ ಇದೆ ಎಂಬುದೇ ತುಂಡಾಗಿರುತ್ತದೆ. ಇಂತಲ್ಲಿ ತಳಜಾತಿಗಳ ಉದ್ಧಾರದ ಮೀಸಲಾತಿ ತಪ್ಪಲ್ಲ; ಅದನ್ನು ಬಳಸುವ, ನಿರ್ವಹಿಸುವ ರೀತಿ ನೀತಿಗಳು ಬಹಳ ಭ್ರಷ್ಟಗೊಂಡಿವೆ ಹಾಗೂ ಅವೆಲ್ಲ ಮಲಿನ ರಾಜಕೀಯವನ್ನು ಉಸಿರಾಡುತ್ತಿವೆ.

ಸದ್ಯದ ಕರ್ನಾಟಕದ ಜಾತಿವಾರು ನಿಗಮ ಮಂಡಳಿ ಪ್ರಾತಿನಿಧ್ಯ ಇತ್ಯಾದಿ ಕೃಪಾಪೋಷಿತ ನಾಟಕಗಳು ತಾತ್ಕಾಲಿಕ. ಚರಿತ್ರೆಯಲ್ಲಿ ಇಂತವೆಲ್ಲ ನಡೆದು ಮಣ್ಣಾಗಿ ಬಹಳ ಕಾಲವಾಗಿದೆ. ರಾಜಕೀಯ ವ್ಯಕ್ತಿಗಳು, ಪಕ್ಷಗಳು ಇನ್ನು ಮುಂದಿನ ಚುನಾವಣೆಗಳಲ್ಲಿ ಇಂತಹ ನಾಟಕಗಳನ್ನೆಲ್ಲ ಆಡಲು ಸಾಧ್ಯವಿಲ್ಲ. ಹೊಸ ಮತದಾರ ಯುವಕರು ಮತೀಯವಾದಿಗಳು ಆಗದಂತೆ ನೋಡಿಕೊಂಡ ರಾಜಕೀಯ ಪಕ್ಷಗಳಿಗೆ ಹೊಸ ರಾಜಕೀಯವಿದೆ. ಯಾವತ್ತೂ ಹೊಸ ಕಾಲದ ಸಮುದಾಯಗಳು ಮತೀಯತೆಗೊ, ಮೀಸಲಾತಿಗೊ ಕುರುಡಾಗಿ ಕೂತಿರುವುದಿಲ್ಲ. ಅಂತಹ ಹೊಸಕಾಲ ಬರುತ್ತದೆ ಎಂಬ ಗಾಢವಾದ ವಿಶ್ವಾಸ ನನ್ನದು.

*ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು, ಖ್ಯಾತ ಕಥೆಗಾರರು, ಚಿಂತಕರು.

Leave a Reply

Your email address will not be published.