ಜಾತಿ ವೈಷಮ್ಯ ಅನಾವರಣಗೊಳಿಸುವ ಪರಿಯೇರುಂ ಪೆರುಮಾಳ್

ನಿರ್ದೇಶಕರಾಗಿ ಮಾರಿ ಸೆಲ್ವರಾಜ್ ತಮ್ಮ ಚೊಚ್ಚಲ ಚಲನಚಿತ್ರದಲ್ಲಿ ಶೋಷಿತರು ಜಾಗೃತರಾಗುವಲ್ಲಿ ಶಿಕ್ಷಣಕ್ಕಿರುವ ಮಹತ್ವದ ಪಾತ್ರವನ್ನು ಪ್ರಬಲವಾಗಿ ದಾಟಿಸಿದ್ದಾರೆ.

ಮ ಶ್ರೀ ಮುರಳಿ ಕೃಷ್ಣ

ಜಾತಿ ಮತ್ತು ಮತ ಮಾನವತೆಯ ವಿರೋಧಿ ಎಂಬ ಸಾಲು ಮಾರಿ ಸೆಲ್ವರಾಜ್ ನಿರ್ದೇಶನದ ‘ಪರಿಯೇರುಂ ಪೆರುಮಾಳ್’ (ಕುದುರೆಯ ಮೇಲಿನ ದೇವರು ಎಂದರ್ಥ) ಚಲನಚಿತ್ರದ ಪ್ರಾರಂಭದಲ್ಲೇ ವೀಕ್ಷಕರ ಗಮನವನ್ನು ಸೆಳೆಯುತ್ತದೆ. ಹೀಗಾಗಿ ಇದೊಂದು ಜಾತಿ/ಮತದ ಸುತ್ತ ಗಿರಕಿ ಹೊಡೆಯುವ ಚಲನಚಿತ್ರ ಎಂಬ ಸುಳಿವು ವೀಕ್ಷಕರ ಮನಸ್ಸಿನಲ್ಲಿ ಮೂಡಬಹುದು. ಅಂತ್ಯದಲ್ಲಿ ಇದು ಬರೀ ಜಾತಿಯ ಬಗೆಗೆ ಮಾತ್ರ ಅಭಿವ್ಯಕ್ತಿಗೊಳಿಸಿದೆಯೇ ಅಥವಾ ಇತರ ವಿಷಯಗಳನ್ನು ಹೊಂದಿದೆಯೇ ಎಂಬುದು ವೇದ್ಯವಾಗುತ್ತದೆ.

ಸಮಯ 2005.  ತಮಿಳುನಾಡಿನ ಸಣ್ಣ ಹಳ್ಳಿಯೊಂದರ ಪರಿಯೇರುಂ ಪೆರುಮಾಳ್ (ಈತನನ್ನು ಪರಿಯನ್ ಎಂದೇ ಕರೆಯುತ್ತಿರುತ್ತಾರೆ) ಎಂಬ ಕೆಳಜಾತಿಯ ಯುವಕ (ನಟ ಕದಿರ್) ತಿರುನೆಲ್ವೇಲಿಯ ಸರ್ಕಾರಿ ಕಾನೂನು ಕಾಲೇಜಿಗೆ ಸೇರ್ಪಡೆಯಾಗುತ್ತಾನೆ. ಆತ ನೀರಿನಿಂದ ತೆಗೆದ ಮೀನಿನಂತಹ ಪರಿಸ್ಥಿಗೆ ಒಳಗಾಗುತ್ತಾನೆ. ಆತನಿಗೆ ಜ್ಯೋತಿ ಮಹಾಲಕ್ಷ್ಮಿ (ನಟಿ ಆನಂದಿ) ಅಥವಾ ಹ್ರಸ್ವವಾಗಿ ಜೋ ಎಂದು ಕರೆಯಲ್ಪಡುವ ಉಚ್ಚ ಜಾತಿಯ ಸಹಪಾಠಿ ಹತ್ತಿರವಾಗುತ್ತಾಳೆ; ಆತನಿಗೆ ಆಂಗ್ಲ ಭಾಷೆಯನ್ನು ಕಲಿಸಲು ಮುಂದಾಗುತ್ತಾಳೆ. ನಂತರ ಆಕೆಗೆ ಪರಿಯನ್‍ನ ಮೇಲೆ ಅನುರಾಗ ಬೆಳೆಯುತ್ತದೆ.

ಜೋ ತನ್ನ ಅಕ್ಕನ ಮದುವೆಗೆ ಪರಿಯನ್‍ನನ್ನು ಮಾತ್ರ ಆಹ್ವಾನಿಸುತ್ತಾಳೆ. ಅದು ಆಕೆಯ ಹೆಸರಿರುವ ಕಲ್ಯಾಣ ಮಂಟಪದಲ್ಲಿ ಜರಗುತ್ತದೆ! ಅಲ್ಲಿಗೆ ಹೋಗುವ ಪರಿಯನ್‍ನನ್ನು ಜೋಳ ತಂದೆ (ನಟ ಮಾರಿಮುತ್ತು) ಒಂದು ರೂಮಿಗೆ ಕರೆದುಕೊಂಡು ಹೋಗುತ್ತಾನೆ. ನಂತರ ಏನಾಗುತ್ತದೆ ಎಂಬುದು ಇಂತಹ ಸಿನಿಮಾ ಹಿಡಿಯುವ ಹಾದಿಯ ಜಾಡನ್ನು ಬಲ್ಲ ವೀಕ್ಷಕರ ಎಲ್ಲ ನಿರೀಕ್ಷೆಗಳು ಎಣಿಸಿದಂತೆ ಮೂರ್ತವಾಗುವುದಿಲ್ಲ! ಕೊನೆಗೆ ಪರಿಯನ್ ಮತ್ತು ಜೋರ ಕಥೆ ಯಾವ ಹಂತ ತಲುಪುತ್ತದೆ ಎಂಬುದನ್ನು ಅಂತಿಮ ದೃಶ್ಯ ಹೊರಗೆಡಹುತ್ತದೆ!

ಚಲನಚಿತ್ರದ ಪ್ರಥಮ ದೃಶ್ಯದಲ್ಲಿ ಬೆಂಗಾಡು ಎಂದು ಕರೆಯಬಹುದಾದ ಪ್ರದೇಶವೊಂದರ ನೀರು ನಿಂತಿರುವ ಸ್ಥಳದಲ್ಲಿ ಕೆಲವು ಯುವಕರು ಒಂದು ನಾಯಿಗೆ ಜಳಕ ಮಾಡಿಸುತ್ತಿರುತ್ತಾರೆ. ಅವರತ್ತ ಇನ್ನೊಂದು ಗುಂಪಿನ ಉಚ್ಚ ಜಾತಿಯ ಯುವಕರು ಗತ್ತಿನಿಂದ ಹೆಜ್ಜೆ ಹಾಕುತ್ತ ಬರುತ್ತಾರೆ. ಇದನ್ನು ಕಂಡ ಪರಿಯನ್ ತನ್ನ ಸ್ನೇಹಿತರಿಗೆ ಜಾಗ ಖಾಲಿ ಮಾಡಲು ತಿಳಿಸುತ್ತ ತಾನು ಅಲ್ಲಿಂದ ಕಾಲು ಕೀಳಲು ಬಯಸುತ್ತಾನೆ! ಇದು ಆತನ ಕೆಲವು ಗೆಳೆಯರಿಗೆ ಇಷ್ಟವಾಗುವುದಿಲ್ಲ. ಈ ಘಟ್ಟದಲ್ಲಿ ಒಂದು ಏರಿಯಲ್ ಶಾಟ್‍ನಲ್ಲಿ (ಬಡ್ರ್ಸ್ ಐ ವ್ಯೂ ಶಾಟ್ ಎಂತಲೂ ಕರೆಯುತ್ತಾರೆ) ಎರಡು ಗುಂಪಿನ ಯುವಕರನ್ನು ಕುಬ್ಜರನ್ನಾಗಿ ತೋರಿಸಲಾಗಿದೆ. ಇದು ಧ್ವನಿಸುವ ಅರ್ಥ ಮಾರ್ಮಿಕವಾಗಿದೆ.

ತಿರುನೆಲ್ವೇಲಿಯ ಕಾನೂನು ಕಾಲೇಜಿನಲ್ಲಿ ಸೇರುವಾಗ “ನಾನು ಡಾಕ್ಟರ್ ಆಗಬೇಕು..” ಎಂದು ಪರಿಯನ್ ತಿಳಿಸುತ್ತಾನೆ. ಆಗ ಪ್ರಿನ್ಸಿಪಾಲ್, “ಇದು ವೈದ್ಯಕೀಯ ಕಾಲೇಜಲ್ಲ, ಕಾನೂನು ಕಾಲೇಜು..” ಎಂದು ಜ್ಞಾಪಿಸುತ್ತಾರೆ! ಇದಕ್ಕೆ ಪ್ರತಿಕ್ರಿಯಿಸುತ್ತ ಪರಿಯನ್ “ನಾನು ಅಂಬೇಡ್ಕರ್ ಅಂತೆ ಡಾಕ್ಟರ್ ಆಗಬೇಕು..” ಎಂದು ಉತ್ತರಿಸುತ್ತಾನೆ! ತಾನು ಶಿಕ್ಷಣವನ್ನು ಪಡೆದು ಅಂಬೇಡ್ಕರ್‍ರಂತೆ ಸಾಮಾಜಿಕ ವೈದ್ಯನಾಗಬೇಕೆಂಬ ಸ್ಪಷ್ಟ ಉದ್ದೇಶವನ್ನು ಪರಿಯನ್ ಹೊಂದಿರುವುದರ ಹಿಂದೆ ಆತ ಜಾತಿ ಶ್ರೇಣೀಕರಣದ ನೋವುಗಳಿಂದ ಎಷ್ಟೊಂದು ಬಾಧಿತನಾಗಿದ್ದ ಎಂಬುದು ತಿಳಿಯುತ್ತದೆ. ಮುಂದೆ ತೊಂದರೆಯಾಗದಿರಲಿ ಎಂದು ಪರಿಯನ್‍ನ ಫೈಲಿನಲ್ಲಿ ಆತನ ಈ ಮಾತನ್ನು ದಾಖಲಿಸಲಾಗುತ್ತದೆ!

ಬುದ್ಧಿವಂತನಾದ ಪರಿಯನ್ ಆಂಗ್ಲ ಭಾಷೆಯನ್ನು ಬಳಸಲು ಪಡುವ ಪಡಿಪಾಟಲುಗಳು, ದೇಶೀಯ ಭಾಷೆಗಳ ಮೇಲೆ ಈ ಭಾಷೆ ಹೇಗೆ ಸವಾರಿ ಮಾಡುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ವೀಕ್ಷಕರಿಗೆ ತಲುಪಿಸಲಾಗಿದೆ. ಇವು, ಪ್ರತಿಭೆಯಿದ್ದರೂ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಆಂಗ್ಲ ಭಾಷೆಯನ್ನು ಕಲಿಯಲು ಪಡುವ ಬವಣೆಗಳನ್ನು, ಭಾಷಾ ರಾಜಕೀಯದ ಸುಳಿಗಳನ್ನು ನೆನಪಿಸುತ್ತವೆ. ಒಬ್ಬ ಅಧ್ಯಾಪಕ ಪರಿಯನ್‍ನನ್ನು ನೇರವಾಗಿ ತೇಜೋವಧೆ ಮಾಡಿದರೇ, ಇನ್ನೊರ್ವ ಅಧ್ಯಾಪಕಿ ಮೊದಲು ಮೂದಲಿಸಿದರೂ ನಂತರ ಆತನಿಗೆ ಬೆಂಗಾವಲಾಗಿ ನಿಲ್ಲುತ್ತಾಳೆ! ಹೀಗೆ ಕಂದು ವರ್ಣದ ಪಾತ್ರ ಪೋಷಣೆ ಈ ಚಲನಚಿತ್ರದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.

ಪರಿಯನ್ ಜೋಳ ಅಕ್ಕನ ಮದುವೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಜೋಳ ತಂದೆ ಆತನನ್ನು ಒಂದು ರೂಮಿಗೆ ಕರೆದುಕೊಂಡು ಹೋಗಿ “ಜೋಳನ್ನು ಮರೆತು ಬಿಡು.. ನನ್ನ ಜಾತಿಯವರು ನಿನ್ನನ್ನು ಏನು ಬೇಕಾದರೂ ಮಾಡಬಹುದು..” ಎಂದು ಹೇಳುತ್ತಿರುವಂತೆ ಆತನ ಹತ್ತಿರದ ಯುವ ಸಂಬಂಧಿ ಮತ್ತು ಆತನ ಸ್ನೇಹಿತರು ರೂಮಿಗೆ ನುಗ್ಗಿ ಪರಿಯನ್‍ನನ್ನು ಥಳಿಸುತ್ತಾರೆ; ಆತನ ಮೇಲೆ ಮೂತ್ರವನ್ನು ಮಾಡುತ್ತಾರೆ! ಈ ಘಟ್ಟದಲ್ಲಿ ಜೋಳ ತಂದೆಯ ಅಸಹಾಯಕ ಪರಿಸ್ಥಿತಿಗೆ ಒತ್ತನ್ನು ನಿರ್ದೇಶಕರು ನೀಡಿದ್ದಾರೆ ಎಂದೆನಿಸುತ್ತದೆ.  ಹೀಗಾಗಿ, ಅದು ಸಂಪೂರ್ಣ ಕಪ್ಪು ಪಾತ್ರವಾಗುವುದಿಲ್ಲ. ಆದರೆ ಕೊನೆಗೆ ಪರಿಯನ್‍ನನ್ನು ಮುಗಿಸಬೇಕೆಂದು ಜೋಳ ಹತ್ತಿರದ ಸಂಬಂಧಿ ಪಟ್ಟು ಹಿಡಿದಾಗ, ಆಕೆಯ ತಂದೆ ಒಪ್ಪುತ್ತಾನೆ! ಇದು ಸಂಕೀರ್ಣ ಪಾತ್ರ ಕಟ್ಟೋಣವನ್ನು ತೋರಿಸುತ್ತದೆ.

ಕಾಲೇಜಿನಲ್ಲಿ ಪರಿಯನ್‍ಗೆ ಗೆಳೆಯನಾಗುವ ಸಹಪಾಠಿ ಆನಂದ್ (ಹಾಸ್ಯನಟ ಯೋಗಿ ಬಾಬು) ಕೂಡ ಉಚ್ಚಜಾತಿಯವನಾಗಿದ್ದರೂ ಜಾತೀಯತೆಯನ್ನು ಮೀರಿ ಆತನಿಗೆ ಬೆಂಬಲವನ್ನು ನೀಡುತ್ತಿರುತ್ತಾನೆ. ಅಂದರೆ ಇಲ್ಲಿ ಚರ್ವಿತಚರ್ವಣವಾದ ಕಪ್ಪು-ಬಿಳುಪು ಪಾತ್ರ ಕಟ್ಟೋಣದ ಸೂತ್ರವನ್ನು ಮೀರಲಾಗಿದೆ ಎನ್ನಬಹುದು.

ಚಲನಚಿತ್ರದಲ್ಲಿ ಪರಿಯನ್ ತುಂಬ ಪ್ರೀತಿಸುವ ಹೆಣ್ಣು ನಾಯಿ ಕರುಪ್ಪಿಯನ್ನು ಜಾತಿ ವೈಷಮ್ಯದ ಕಾರಣದಿಂದ ದಾರುಣವಾಗಿ ಕೊಲ್ಲಲಾಗುತ್ತದೆ. ಕೆಲವು ದೃಶ್ಯಗಳಲ್ಲಿ ಕರುಪ್ಪಿ ನೀಲಿ ವರ್ಣವನ್ನು ಹೊಂದಿದ್ದು, ಅದು ಓಡುವಂತೆ, ಪರಿಯನ್‍ನನ್ನು ರೈಲ್ವೆ ಕಂಬಿಗೆ ಕಟ್ಟಿಹಾಕಿದಾಗ ಅದನ್ನು ನೆನೆದು, ಆತ ಕಷ್ಟಪಟ್ಟು ಬಂಧನದಿಂದ ಬಿಡಿಸಿಕೊಂಡು ಸಾವಿನಿಂದ ವಿಮುಖನಾದವನಂತೆ ಬಿಂಬಿಸಲಾಗಿದೆ. ಇದೊಂದು ಪ್ರಬಲ ರೂಪಕವಾಗಿ ಹೊರಹೊಮ್ಮಿದೆ. ಭಾರತದ ರಾಜಕಾರಣದ ಬಗೆಗೆ ಸೂಕ್ಷ್ಮಮತಿಯಾಗಿರುವವರಿಗೆ ನೀಲಿ ಬಣ್ಣ ಏನನ್ನು ಸಂಕೇತಿಸುತ್ತದೆ ಎಂಬುದು ತಿಳಿದೇ ಇರುತ್ತದೆ. ಈ ವಿಷಯದಲ್ಲಿ ಈ ಚಲನಚಿತ್ರದ ನಿರ್ಮಾಪಕರಾದ ಪ ರಂಜಿತರ ಬಣ್ಣಗಳ ವಿನ್ಯಾಸಗಳ ಜಾಡು ಇಲ್ಲೂ ಪ್ರದರ್ಶನಗೊಂಡಿದೆ ಎಂದು ಹೇಳಬಹುದು.

ಪ ರಂಜಿತ್ ನಿರ್ದೇಶಿಸಿದ ರಜನೀಕಾಂತ್ ನಾಯಕನಟನಾಗಿದ್ದ ‘ಕಾಳಾ’ ತಮಿಳು ಚಲನಚಿತ್ರದ ಕೊನೆಯ ದೃಶ್ಯದಲ್ಲಿ ಕೆಂಪು, ಕಪ್ಪು, ಹಸಿರು ಮತ್ತು ನೀಲಿ ಬಣ್ಣಗಳು ರಾರಾಜಿಸಿರುವುದನ್ನು ನೆನಪಿಸಿಕೊಳ್ಳಬಹುದು. ‘ಪರಿಯೇರುಂ ಪೆರುಮಾಳ್’ ಚಲನಚಿತ್ರದ ಇನ್ನೊಂದು ದೃಶ್ಯದಲ್ಲಿ ‘ಕೆಂಪು ಬಣ್ಣಕ್ಕೆ ಹಲವು ಅರ್ಥಗಳಿವೆ, ಯುವಜನತೆ ಅದನ್ನು ಹೆಚ್ಚು ಅರ್ಥಪೂರ್ಣವಾಗಿಸಬಹುದು’ ಎಂಬ ಗೋಡೆ ಬರಹವನ್ನು ನಿರ್ದೇಶಕರು ಕಾಣಿಸಿದ್ದಾರೆ. ಹೀಗೆ ಚಲನಚಿತ್ರದಲ್ಲಿ ರಾಜಕೀಯ ಅಂಶಗಳನ್ನು ಸೂಕ್ಷ್ಮವಾಗಿ ರವಾನಿಸಲಾಗಿದೆ.

ದೃಶ್ಯಗಳು ಸಾಗಿದಂತೆ, ಶೋಷಿತರು ಪ್ರತಿರೋಧವನ್ನು ಒಡ್ಡಬೇಕಾಗುತ್ತದೆ ಎಂಬ ಸೂಚನೆ ಢಾಳಾಗಿ ಹಾದುಬರುತ್ತದೆ. ಒಂದು ದೃಶ್ಯದಲ್ಲಿ ಪರಿಯನ್‍ನ ಅಧ್ಯಾಪಕಿ ಆತ ಹಿಂಸಾಪ್ರವೃತ್ತಿಯವನಾಗಬಹುದೆಂದು ಪ್ರಿನ್ಸಿಪಾಲರ ಬಳಿ ತನ್ನ ಆತಂಕವನ್ನು ತೋಡಿಕೊಂಡಾಗ, ಜಾತಿ ಶೋಷಣೆಯನ್ನು ಸ್ವತಃ ಅನುಭವಿಸಿದ್ದ ಪ್ರಿನ್ಸಿಪಾಲ್, “ರೂಂನಲ್ಲಿ ನೇಣು ಹಾಕಿಕೊಂಡು ಸಾಯುವುದಕ್ಕಿಂತ ಹೋರಾಟ (ಜಗಳ) ಮಾಡಿ ಸಾಯಲಿ..” ಎಂದು ಹೇಳುತ್ತಾರೆ!

ಕೆಳಜಾತಿಯವರನ್ನು ಅವರ ಜಾತಿಯ ಕಾರಣಕ್ಕಾಗಿಯೇ ಕೊಲೆಗೈಯಲು ಹೇಸದ ವೃದ್ಧ ಮೇಸ್ತ್ರಿ, ತೆರುಕೂತ್ತು ಜಾನಪದ ನೃತ್ಯ ಕಲಾವಿದನಾದ, ಹೆಣ್ಣಿಗನಂತೆ ಕಾಣುವ ಪರಿಯನ್‍ನ ತಂದೆಯ ಪಂಚೆಯನ್ನು ಕಾಲೇಜಿನ ಆವರಣದಲ್ಲೇ ಕಳಚಿ ನಗ್ನನನ್ನಾಗಿಸುವ, ಅಸಹ್ಯ ವರ್ತನೆಯ ಉಚ್ಚಜಾತಿಯ ವಿದ್ಯಾರ್ಥಿ ಗುಂಪು, ಮೊದಲು ತನ್ನ ನೈಜ ತಂದೆಯನ್ನು ಕರೆದುಕೊಂಡು ಬರಲು ಹಿಂಜರಿಯುವ ಪರಿಯನ್ ಇನ್ಯಾರನ್ನೋ ತಂದೆಯೆಂದು ಪ್ರಿನ್ಸಿಪಾಲ್ ಮುಂದೆ ಹಾಜರುಪಡಿಸಬೇಕಾದ ದೈನೇಸಿ ಪರಿಸ್ಥಿತಿ, ಜಾತಿಯ ಕಾರಣದಿಂದಾದ ಕೊಲೆಗಳನ್ನು ಮರೆಮಾಚಿ, ಸಹಜ ಸಾವಾಯಿತು ಎಂಬಂತೆ ಬಿಂಬಿಸುವ ಸುದ್ದಿ ಪೋಸ್ಟರ್‍ಗಳು ಇತ್ಯಾದಿ ಸಂಗತಿಗಳು ಚಲನಚಿತ್ರದ ವಿಷಣ್ಣತೆಯನ್ನು ವೃದ್ಧಿಸುತ್ತವೆ.

ಕೊನೆಯ ದೃಶ್ಯದಲ್ಲಿ ಪರಿಯನ್ ಮತ್ತು ಜೋಳ ತಂದೆಯ ನಡುವೆ ಜರುಗುವ ಸಂಭಾಷಣೆ ವೀಕ್ಷಕರನ್ನು ಭಿನ್ನ ಅನುಭವಕ್ಕೆ ಈಡಾಗುವಂತೆ ಮಾಡುತ್ತದೆ. ಇಲ್ಲಿನ ಒಂದು ರೂಪಕವು ಗಮನೀಯವಾಗಿದೆ; ಅರ್ಥಸಂಪತ್ಭರಿತವಾಗಿದೆ. ಜೋ ತನ್ನ ತಂದೆಗೆ ಹಾಲು ಬೆರೆಸಿದ ಚಹಾ ಮತ್ತು ಪರಿಯನ್‍ಗೆ ಹಾಲಿಲ್ಲದ ಚಹಾವನ್ನು (ಬ್ಲ್ಯಾಕ್ ಟೀ) ಅವರ ಇಷ್ಟಕ್ಕೆ ಅನುಸಾರವಾಗಿ ತಂದುಕೊಡುತ್ತಾಳೆ. ಕ್ಯಾಮರಾ ಝೂಮ್ ಇನ್ ಆದಾಗ ಜೋಳ ತಂದೆಯ ಗಾಜಿನ ಲೋಟದಲ್ಲಿರುವ ಚಹಾದ ಪ್ರಮಾಣ ಜಾಸ್ತಿಯಿರುವುದು ಗೋಚರಿಸುತ್ತದೆ. ಆಕೆ ಲೋಟಗಳನ್ನು ಹಿಡಿದುಕೊಂಡು ಬರುವಾಗ ಅವುಗಳ ಮಧ್ಯೆ ಒಂದು ಹೂ ಕೂಡ ಇರುತ್ತದೆ. ಕೊನೆಯ ಶಾಟ್‍ನಲ್ಲಿ ಪರಿಯನ್, ಜೋ ಮತ್ತು ಆಕೆಯ ತಂದೆ ಒಟ್ಟಿಗೆ ಹೋಗುವ ಫ್ರೇಮ್ ಇತ್ಯಾತ್ಮಕವಾದ ಸಂದೇಶವನ್ನು ರವಾನಿಸುತ್ತದೆ.

ಸಂತೋಷ್ ನಾರಾಯಣನ್‍ರ ಸಂಗೀತ ಅಬ್ಬರದಿಂದ ಕೂಡಿದ್ದರೂ, ಸಿನಿಮಾದ ಮೂಡ್‍ಗೆ ಹೊಂದಿಕೊಳ್ಳುತ್ತದೆ. ಹಾಗೆಯೇ ಶ್ರೀಧರರ ಸಿನಿಮಟೋಗ್ರಫಿ ಸಹ. ಕಲಾ ನಿರ್ದೇಶಕರ ನೈಪುಣ್ಯ ಗಮನಿಸುವಂತಿದೆ (ಒಂದು ಹಾಡಿನಲ್ಲಿ ಗೋಡೆಯ ಮೇಲಿನ ಕಲಾಕೃತಿಗಳು ಒಳನೋಟಗಳನ್ನು ನೀಡುತ್ತವೆ). ಜೋಳ ಪಾತ್ರ ಮುಗ್ಧತೆಯಿಂದ ಕೂಡಿದೆ. ಆಕೆಯನ್ನು ದೇವತೆ ಎಂದು ಪರಿಯನ್ ಕರೆಯುತ್ತಿರುತ್ತಾನೆ.  ಆಕೆಗೆ ಜಾತಿತಾರತಮ್ಯದ ಪರಿಜ್ಞಾನ ಸ್ವಲ್ಪವೂ ಇರಲಿಲ್ಲವೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡುವ ಸಾಧ್ಯತೆಗಳಿವೆ. ನಟ ಕದಿರ್ ತಮಗೆ ಒದಗಿರುವ ಸದಾವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಒಟ್ಟಿನಲ್ಲಿ ನಿರ್ದೇಶಕರಾಗಿ ಮಾರಿ ಸೆಲ್ವರಾಜ್ ತಮ್ಮ 2 ಗಂಟೆ 34 ನಿಮಿಷಗಳ ಚೊಚ್ಚಲ ಚಲನಚಿತ್ರದಲ್ಲಿ ಶೋಷಿತರು ಜಾಗೃತರಾಗುವಲ್ಲಿ ಶಿಕ್ಷಣಕ್ಕಿರುವ ಮಹತ್ವದ ಪಾತ್ರವನ್ನು ಪ್ರಬಲವಾಗಿ ದಾಟಿಸಿದ್ದಾರೆ. ಇಂತಹ ಕಥಾವಸ್ತುವನ್ನು ಹೊಂದಿರುವ ಅನೇಕ ಮುಖ್ಯವಾಹಿನಿಯ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಜೀವನಕ್ಕಿಂತ ಮಿಗಿಲಾಗಿರುವ ಪಾತ್ರಗಳನ್ನು ಸೃಷ್ಟಿಸಿ, ಅರಣ್ಯ ನ್ಯಾಯವನ್ನು ಎತ್ತಿ ಹಿಡಿಯುವುದೇ ಜಾಸ್ತಿ. ಆದರೆ ‘ಪರಿಯೇರುಂ ಪೆರುಮಾಳ್’ ಈ ಪರಿಗೆ ವ್ಯತಿರಿಕ್ತವಾಗಿದೆ. ಈ ಚಲನಚಿತ್ರದಲ್ಲಿ ಅಬ್ಬರ ಇದೆ ಎಂದು ಅನೇಕ ವೀಕ್ಷಕರಿಗೆ ಎನಿಸಬಹುದು. ಆದರೆ ಅದು ಸಹಜ ಕೂಡ. ಏಕೆಂದರೆ ಶೋಷಿತರು ಜಾಗೃತರಾದಾಗ ಅವರ ಧ್ವನಿ ಅಬ್ಬರದಿಂದ ಕೂಡಿರುವ ಸಂದರ್ಭಗಳೇ ಅಧಿಕ.

ಕನ್ನಡ ಚಲನಚಿತ್ರ ನಿರ್ದೇಶಕರಾದ ಬಿ.ಎಂ.ಗಿರಿರಾಜ್ ನಿರ್ದೇಶಿಸಿದ ‘ಅಮರಾವತಿ’ ಮತ್ತು ‘ಜಟ್ಟ’ ಚಲನಚಿತ್ರಗಳು ಅಬ್ಬರದಿಂದ ಕೂಡಿರುವುದನ್ನು ಸ್ಮರಿಸಬಹುದು. ಈ ಚಲನಚಿತ್ರ 2018ರಲ್ಲಿ ಗೋವಾದಲ್ಲಿ ಜರುಗಿದ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾದ ಪನೊರಮ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು. ಇದು ವೀಕ್ಷಣೆಗೆ ಅಮೇಝಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.

One Response to " ಜಾತಿ ವೈಷಮ್ಯ ಅನಾವರಣಗೊಳಿಸುವ ಪರಿಯೇರುಂ ಪೆರುಮಾಳ್

ಮ ಶ್ರೀ ಮುರಳಿ ಕೃಷ್ಣ

"

Leave a Reply

Your email address will not be published.