ಜಾತ್ಯತೀತ ಸರಿಯಾದ ಪದ

ಕಳೆದ ಸಂಚಿಕೆಯಲ್ಲಿ ಟಿ.ಆರ್.ಅನಂತರಾಮು ಅವರ ‘ಜಾತ್ಯಾತೀತ’ ಅಲ್ಲ -ಅದು ‘ಜಾತ್ಯತೀತ’ ಎಂಬ ವಿನಯಪೂರ್ವಕ ಸೂಚನೆ ಗಮನಿಸಿದೆ. `ಜಾತ್ಯಾತೀತ’ ಎಂಬುದೇ ಸರಿಯಾದ ಬಳಕೆ ಎಂಬುದು ನನ್ನ ಅನಿಸಿಕೆ.  ಜಾತಿ + ಅತೀತ = ಜಾತ್ಯಾತೀತ -> ಆಗಮ ಸಂಧಿ. ಇದು ನನ್ನ ಅನಿಸಿಕೆಯಷ್ಟೇ. ಪ್ರಾಜ್ಞರು ತಿಳಿಸಿದರೆ, ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತೇನೆ.

.ವಿ.ಮುರಳೀಧರ, ಬೆಂಗಳೂರು.

ನನ್ನ ಈ ಹಿಂದಿನ `ಜಾತ್ಯಾತೀತ’ ದ ಬಗೆಗಿನ ಪತ್ರದ ಮುಂದುವರಿಕೆ: ಇತ್ತೀಚೆಗೆ ಎಲ್.ಎಸ್.ಶೇಷಗಿರಿರಾಯರ ಒಂದು ಬರಹ ಓದಿದಾಗ `ಜಾತ್ಯತೀತ’ ಪದ ಬಳಕೆಯೇ ಸಮಂಜಸ ಎಂದು ನನಗೀಗ ಮನವರಿಕೆಯಾಗಿದೆ.  ಅದರಲ್ಲಿ ಶ್ರೀಯುತರು ಸುಮಾರು 15 ಸಾರಿ ಈ ಪದ ಪ್ರಯೋಗ ಮಾಡಿದ್ದಾರೆ. ಎಲ್ಲೂ `ಜಾತ್ಯಾತೀತ’ ಎಂದು ಬಳಸಿಲ್ಲ, ಹಾಗೂ `ಜಾತ್ಯತೀತ’ ಎಂದೇ ಬರೆದಿದ್ದಾರೆ.  ದೊಡ್ಡವರನ್ನು ಅಲ್ಲಗೆಳೆಯುವ ದಾಷ್ಟ್ರ್ಯ ನನಗಿಲ್ಲ. ಹೀಗೆ ನನ್ನನ್ನು ನಾನೇ ತಿದ್ದಿಕೊಳ್ಳುವುದು ಒಳಿತು ಎಂದು ಭಾವಿಸುತ್ತೇನೆ.

.ವಿ.ಮುರಳೀಧರ, ಬೆಂಗಳೂರು.

  1. ಜಾತಿ ಮತ್ತು ಅತೀತ ಎರಡೂ ಸಂಸ್ಕೃತ ಪದಗಳು. ಕನ್ನಡ ಸಂಧಿಯ ನಿಯಮಗಳು ಇಲ್ಲಿ ಅನ್ವಯವಾಗುವುದಿಲ್ಲ. ಆದ್ದರಿಂದ ಲೋಪ, ಆಗಮ ಅಥವಾ ಆದೇಶಸಂಧಿ ಆಗುವುದಿಲ್ಲ.
  2. ಜಾತಿ+ಅತೀತ ಎನ್ನುವಲ್ಲಿ ಪೂರ್ವಪದದ ಕೊನೆಯ ಇಕಾರದ ಮುಂದೆ ಅಕಾರ ಬಂದಿದೆ. ಇ+ಅ ಬರುವಾಗ ಇಕಾರದ ಬದಲಿಗೆ ಯಕಾರ ಬರುತ್ತದೆ. ಇದು ಯಣ್ ಸಂಧಿ.
  3. ಕನ್ನಡದ ಆಗಮಸಂಧಿಯಲ್ಲಿ ಯಾವ ಅಕ್ಷರವೂ ಲೋಪವಾಗುವುದಿಲ್ಲ. ಸಂಧಿಯಾಗುವಾಗ ಎರಡು ಸ್ವರಗಳ ನಡುವೆ ಯಕಾರ ಹೊಸದಾಗಿ ಸೇರುತ್ತದೆ. ಉದಾ: ಮನೆ+ಅಲ್ಲಿ = ಮನೆಯಲ್ಲಿ. ಸಂಸ್ಕೃತದ ಯಣ್ ಸಂಧಿಯಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗಿ ಯಕಾರ/ವಕಾರ ಬರುತ್ತದೆ. ಉದಾ: ಇತಿ+ಆದಿ = ಇತ್ಯಾದಿ.
  4. ಜಾತಿ+ಅತೀತ ಸಂಧಿಯಾಗುವಾಗ ಪ್ರಕ್ರಿಯೆಯಲ್ಲಿ ಪೂರ್ವಪದದ ಕೊನೆಯ ಸ್ವರ ಇಕಾರದ ಸ್ಥಾನದಲ್ಲಿ ಯಕಾರ ಬರುತ್ತದೆ. ಪರಪದದ ಅಕಾರ ಇದ್ದಹಾಗೆಯೇ ಇರುತ್ತದೆ. ದೀರ್ಘವಾಗಲು ಕಾರಣವಿಲ್ಲ. ಆದ್ದರಿಂದ ಜಾತ್ಯತೀತ ಎನ್ನುವುದೇ ಸರಿ.

‘ತ್ಯಾ’ ಎನ್ನುವುದು ತಪ್ಪು.

ಪ್ರೊ.ಟಿ.ಎಸ್.ಗೋಪಾಲ್, ಬೆಂಗಳೂರು.

Leave a Reply

Your email address will not be published.