ಜಾದೂಗಾರ ಮೋದಿ ಸರ್ಕಾರ ವೈಫಲ್ಯಗಳ ಆಗರ

ಮೋದಿಯವರಿಗೆ ಸಮಾಲೋಚನೆಗಳಲ್ಲಿ ನಂಬಿಕೆಯಿಲ್ಲ. ಎಲ್ಲದಕ್ಕೂ ತಲೆಯಾಡಿಸುವ ಕೆಲವು ಜನರಿಂದ ಸರ್ಕಾರ ನಡೆಯುತ್ತಿದೆ. ಮೋದಿಯವರು ಇದ್ದಕ್ಕಿದ್ದಂತೆ ಟೋಪಿಯಿಂದ ಮೊಲ ತೆಗೆದು ಚಮಾತ್ಕಾರ ಮಾಡುವ ಜಾದೂಗಾರರಂತೆ ಕಾಣಿಸಿಕೊಳ್ಳಲು ಬಯಸುತ್ತಾರೆ!

ಜುಲೈ 17 ರಂದು ಯುನೈಟೆಡ್ ನೇಷನ್ಸ್ನ ಆರ್ಥಿಕ ಹಾಗೂ ಸಾಮಾಜಿಕ ಸಮಿತಿ ಅಧಿವೇಶನದಲ್ಲಿ ಮಾತನಾಡುತ್ತ ಭಾರತದಲ್ಲಿ ಕ್ಷಯರೋಗವನ್ನು (ಟಿಬಿ) 2025ರೊಳಗೆ ನಿರ್ಮೂಲನೆ ಮಾಡುವ ಗುರಿಯಿದ್ದು ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಮೋದಿಯವರು ಹೆಮ್ಮೆಯಿಂದ ಹೇಳಿದರು. ವಾಸ್ತವಕ್ಕೆ ಬಂದರೆ ಸದ್ಯ ಭಾರತದಲ್ಲಿ ಟಿಬಿ ವಾರ್ಷಿಕವಾಗಿ ಸುಮಾರು ಶೇಕಡ 2ರ ಮಟ್ಟದಲ್ಲಿ ಕಡಿಮೆಯಾಗುತ್ತಿದೆ. 2025ರೊಳಗೆ ನಾವು ಟಿಬಿ ನಿರ್ಮೂಲನೆ ಮಾಡಬೇಕೆಂದರೆ ವಾರ್ಷಿಕ ಇಳಿಕೆಯ ಮಟ್ಟ ಶೇಕಡ 15ರಿಂದ 20ರಷ್ಟು ಇರಬೇಕಾಗುತ್ತದೆ. ಅಂದರೆ ಈಗಿರುವ ಇಳಿಕೆಯ ಮಟ್ಟದಲ್ಲಿ ನಾವು 2050ರೊಳಗೆ ಸಹ ಟಿಬಿ ತೊಡೆದುಹಾಕಲು ಸಾಧ್ಯವಿಲ್ಲ.

2017ರಲ್ಲಿ ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 204 ಕ್ಷಯರೋಗಿಗಳಿದ್ದು, ಅದು 2018ರಲ್ಲಿ 199ಕ್ಕಿಳಿದಿದೆ. ಅಂದರೆ ಲಕ್ಷಕ್ಕೆ ಕೇವಲ 5 ರೋಗಿಗಳು ಮಾತ್ರ ಕಡಿಮೆಯಾಗಿದ್ದಾರೆ. 10 ಲಕ್ಷ ಜನಸಂಖ್ಯೆಯಲ್ಲಿ ಒಬ್ಬರಿಗೆ ಮಾತ್ರ ಟಿಬಿಯಿದ್ದಾಗ ಅದು ಟಿಬಿ ನಿರ್ಮೂಲನೆ ಎಂದಾಗುತ್ತದೆ. ಅಂತಹದೊಂದು ಹೇಳಿಕೆ ನೀಡುವಾಗ ಮೋದಿಯವರಿಗೆ ಸತ್ಯತೆಯ ಅರಿವಿತ್ತೇ? ಈಗ ಮೇಲೆ ಉದಾಹರಣೆ ನೀಡಿದ ಟಿಬಿ ಕುರಿತ ಹೇಳಿಕೆಗಳು ಇತರ ವಿಷಯಗಳಿಗೂ ಏಕೆ ಅನ್ವಯವಾಗುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಕೇಂದ್ರದ ಪ್ರತಿಕ್ರಿಯೆ ಚುರುಕಾಗಿತ್ತೇ?

ಚೀನಾದಲ್ಲಿ ಕೋವಿಡ್19 ನವೆಂಬರ್ ತಿಂಗಳ ಮಧ್ಯದಲ್ಲಿ ಮೊದಲು ಕಾಣಿಸಿಕೊಳ್ಳುತ್ತದೆ. ಡಿಸೆಂಬರ್‌ನಲ್ಲಿ ಸಹ ಚೀನಾ ಸರ್ಕಾರ ಕೋವಿಡ್-19 ಹರಡುತ್ತಿದೆ ಎಂದು ದೃಢಪಡಿಸುವುದಿಲ್ಲ. ಆದರೆ ಜನವರಿಯಲ್ಲಿ ಕೋವಿಡ್-19 ಹರಡುತ್ತಿದೆ ಎಂದು ಹೇಳುವ ಹೊತ್ತಿಗೆ ಪ್ರಪಂಚದ ಕೆಲವೆಡೆ ಹರಡಲು ಆರಂಭಿಸಿರುತ್ತದೆ. ಭಾರತದಲ್ಲಿ ಮೊದಲ ಕೋವಿಡ್-19 ಪ್ರಕರಣ ಜನವರಿ 30ರಂದು ವರದಿಯಾಗುತ್ತದೆ. ಆದರೆ ಸರ್ಕಾರ ಅದು ಏಕಮಾತ್ರ ಪ್ರಕರಣ ಎಂದು ನಿರ್ಲಕ್ಷ್ಯ ತೋರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಫೆಬ್ರವರಿ 17 ರಂದು ಜಾಗತಿಕ ಸರಬರಾಜು ಸರಪಳಿಗಳಲ್ಲಿ ಅಡಚಣೆಯಾಗುವುದೆಂದು ಹಾಗೂ ಆ ಕಾರಣಗಳಿಂದ ವಿವಿಧ ದೇಶಗಳು ತಮಗೆ ಬೇಕಾದ ವೈಯಕ್ತಿಕ ಸಂರಕ್ಷಣಾ ಸಾಧನಗಳನ್ನು ಶೇಖರಿಸಿಟ್ಟುಕೊಳ್ಳಬೇಕೆಂದು ಎಚ್ಚರಿಕೆ ನೀಡುತ್ತದೆ. ಆದರೆ ಭಾರತದಿಂದ ಹೊರದೇಶಗಳಿಗೆ ಹೋಗುತ್ತಿದ್ದ ವೈಯಕ್ತಿಕ ಸಂರಕ್ಷಣಾ ಸಾಧನಗಳ ರಫ್ತನ್ನು ನಿಷೇಧಿಸಲು ಮಾರ್ಚ್ 19ರವರೆಗೆ ಸಮಯ ತೆಗೆದುಕೊಳ್ಳುತ್ತದೆ. ಇದಾದ ಐದು-ದಿನಗಳ ಬಳಿಕವಷ್ಟೇ ಉಸಿರಾಟಕ್ಕೆ ಸಂಬಂಧಿಸಿದ ಉಪಕರಣಗಳ ರಫ್ತನ್ನು ನಿಷೇಧಿಸುತ್ತದೆ.

ಕೋವಿಡ್-19 ಒಂದು ದೊಡ್ಡ ಪಿಡುಗಾಗಬಹುದೆಂಬ ಗ್ರಹಿಕೆಯೇ ಆರಂಭದ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಫೆಬ್ರವರಿಯ ಅಂತ್ಯದಲ್ಲಾಗಲೇ ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ ಕೋವಿಡ್-19 ತನ್ನ ಕರಾಳ ಸ್ವರೂಪವನ್ನು ತೋರಲಾರಂಭಿಸಿತ್ತು. 1.3 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಹಾಗೂ ಮೂರನೇ ದರ್ಜೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ನಮಗೆ ಅದರ ಕೆನ್ನಾಲಿಗೆಗಳು ನಮ್ಮನ್ನು ತಲುಪಿದರೆ ಆಗುವ ಅನಾಹುತದ ಬಗ್ಗೆ ಕಲ್ಪನೆಯೇ ಇರಲಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ.

ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರಮನನ್ ಲಕ್ಷ್ಮೀನಾರಾಯಣ ಇದಕ್ಕೊಂದು ಉತ್ತಮ ಸಾದೃಶ್ಯ ನೀಡುತ್ತಾರೆ, “ನೀವು ಕಡಲ ತೀರದಲ್ಲಿದ್ದೀರಾ ಹಾಗೂ ಸುನಾಮಿಯೊಂದು ಬರುತ್ತಿದೆ ಎಂದುಕೊಳ್ಳಿ. ನೀವು ಅಲ್ಲೇ ನಿಂತು ಸುನಾಮಿ ನೋಡುತ್ತಿದ್ದರೆ ನಿಮ್ಮ ಕಥೆ ಮುಗಿಯುತ್ತದೆ. ಎಷ್ಟು ಸಾಧ್ಯವಾಗುತ್ತದೋ, ಅಷ್ಟು ವೇಗವಾಗಿ ಓಡಿದರೆ, ನೀವು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.”

ಲಾಕ್‌ಡೌನ್ ಘೋಷಿಸಿದ ಮಾರ್ಚ್ 22ಕ್ಕೂ ಮುನ್ನವೇ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಸ್ಕ್ರೀನಿಂಗ್ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದೂ ಭಾರತ ಸರ್ಕಾರ ಹೇಳಿಕೆ ನೀಡಿತ್ತು. ಆದರೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಅನುಭವ ಬೇರೆಯೇ ಆಗಿದೆ. ಅಲ್ಲದೇ ಸುಮಾರು 80ರಷ್ಟು ಸೋಂಕಿತರಲ್ಲಿ ಕೋವಿಡ್-19 ಲಕ್ಷಣರಹಿತವಾಗಿರುವುದರಿಂದ ವಿಮಾನ ನಿಲ್ದಾಣಗಳಲ್ಲಿ ತೆಗೆದುಕೊಂಡ ಸ್ಕ್ರೀನಿಂಗ್ ಕ್ರಮದಿಂದ ಸೋಂಕು ಭಾರತದೊಳಗೆ ಪ್ರವೇಶಿಸುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ.

ಸರ್ಕಾರಕ್ಕೆ ಕೋವಿಡ್-19 ಅತೀವ ಸೋಂಕಿನ ರೋಗ ಎಂಬುದರ ಅರಿವಿತ್ತು. ಆದರೂ ವಿದೇಶಿಯರು ಹಾಗೂ ವಿದೇಶಕ್ಕೆ ಭೇಟಿ ನೀಡಿದವರನ್ನು ಭಾರತದೊಳಗೆ ಪ್ರವೇಶಿಸಿದಂತೆ ತಡೆಗಟ್ಟಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮಾರ್ಚ್ 25ರಂದು ವಿಮಾನ ಹಾಗೂ ರೈಲು ಪ್ರಯಾಣವನ್ನು ನಿಷೇಧಿಸಲಾಯಿತು. ಆದರೆ ಅದು ಸಾಕಷ್ಟು ವಿಳಂಬದ ನಿರ್ಧಾರವಾಗಿತ್ತು ಹಾಗೂ ಕೋವಿಡ್-19 ದೇಶವ್ಯಾಪ್ತಿ ಹಬ್ಬಿತ್ತು. ಹಲವು ಸಾರ್ವಜನಿಕ ಆರೋಗ್ಯ ತಜ್ಞರ ಪ್ರಕಾರ ಭಾರತ ಲಾಕ್‌ಡೌನ್ ಘೋಷಿಸಲು 44 ದಿನಗಳ ವಿಳಂಬ ಮಾಡಿತ್ತು.

ಚಮಾತ್ಕಾರ ಮಾಡುವ ಜಾದೂಗಾರ!

ಮೋದಿಯವರಿಗೆ ಸಮಾಲೋಚನೆಗಳಲ್ಲಿ ನಂಬಿಕೆಯಿಲ್ಲ, ಎಲ್ಲಕ್ಕೂ ತಲೆಯಾಡಿಸುವ ಕೆಲವು ಜನರಿಂದ ಸರ್ಕಾರ ನಡೆಯುತ್ತಿದೆ ಎಂದು ಭಾರತ ಸರ್ಕಾರದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಜವಾಹರ್ ಸರ್ಕಾರ್ ಸುದ್ದಿತಾಣವೊಂದರಲ್ಲಿ ಆಪಾದಿಸಿದ್ದಾರೆ. ಮೋದಿಯವರು ಇದ್ದಕ್ಕಿದ್ದಂತೆ ಟೋಪಿಯಿಂದ ಮೊಲ ತೆಗೆದು ಚಮಾತ್ಕಾರ ಮಾಡುವ ಜಾದೂಗಾರರಂತೆ ಕಾಣಿಸಿಕೊಳ್ಳಲು ಬಯಸುತ್ತಾರೆ ಎಂದು ಹೇಳುತ್ತಾರೆ. ಆಗಸ್ಟ್ 15ಕ್ಕೆ ಕೋವಿಡ್ ಲಸಿಕೆ ಬರುವುದೆಂಬ ಸುದ್ದಿ ಹಬ್ಬಿದಾಗ ಇದರ ಹಿಂದೆ ಈ ಜಾದುಗಾರರಿದ್ದಾರಾ ಎಂಬ ಸಂದೇಹ ಬಹಳ ಜನರಿಗೆ ಕಾಡಿರಬಹುದು. 

ಮಾರ್ಚ್ 22 ರಂದು ಏಕಾಏಕಿ ಲಾಕ್‌ಡೌನ್ ಘೋಷಿಸಿದಾಗ ಅದರ ಹಿಂದೆ ವಿವಿಧ ಕ್ಷೇತ್ರಗಳ ಪರಿಣಿತರೊಡನೆ ಸಮಾಲೋಚನೆಗಳು ನಡೆದಿತ್ತೇ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಲಾಕ್‌ಡೌನ್ ಘೋಷಣೆಗೂ ಮುನ್ನ ದೇಶವನ್ನುದ್ದೇಶಿಸಿ ಮಾಡುವ ಭಾಷಣದಲ್ಲಿ ಮೋದಿಯವರು ಕುರುಕ್ಷೇತ್ರ ಯುದ್ಧ ಹದಿನೆಂಟು ದಿನಗಳು ನಡೆಯಿತು, ನಾವು ಕೋವಿಡ್-19 ಅನ್ನು 21 ದಿನಗಳಲ್ಲಿ ಸೋಲಿಸೋಣ ಎಂದು ಕರೆ ನೀಡುತ್ತಾರೆ. ಮೋದಿಯವರ ಸಾದೃಶ್ಯಗಳು ಹಾಗೂ ಸಂಕೇತಗಳಿಗೆ ನೀಡುವ ಪ್ರಾಶಸ್ತ್ಯವನ್ನು ವಾಸ್ತವಿಕತೆಯ ಅರಿವಿಗೆ ಹಾಗೂ ಸಮಾಲೋಚನೆಗಳಿಗೆ ನೀಡಬೇಕಾಗಿತ್ತು.

ಲಾಕ್‌ಡೌನ್‌ಗೂ ಮುನ್ನ ಕಾರ್ಮಿಕ ವಲಯವೂ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ದೀರ್ಘ ಸಮಾಲೋಚನೆಗಳನ್ನು ನಡೆಸಿದ್ದರೆ ದೇಶ ನಂತರದ ದಿನಗಳಲ್ಲಿ ಎದುರಿಸಿದ ವಿವಿಧ ಸಮಸ್ಯೆಗಳನ್ನು ಅದರಲ್ಲೂ ವಲಸಿಗರ ದಾರುಣ ಪರಿಸ್ಥಿತಿಯನ್ನು, ಬಹಳ ಮಟ್ಟಿಗೆ ತಡೆಗಟ್ಟಬಹುದಿತ್ತು. ಆದರೆ ಸಮಾಲೋಚನೆಗಳಿಗೆ ಅಷ್ಟೇನೂ ಪ್ರಾಮುಖ್ಯತೆಯನ್ನು ನೀಡದವರಂತೆ ಕಂಡುಬರುವ ಮೋದಿಯವರು ಜನರಿಗೆ ಆಶ್ಚರ್ಯವನ್ನು ನೀಡಲು ಹಾಗೂ ಅನುಕೂಲಕರ ಸನ್ನಿವೇಶಗಳಿಂದ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಬಯಸುತ್ತಾರೆ. ಇದರಿಂದ ದೇಶ ತೆರುತ್ತಿರುವ ಬೆಲೆ ಆಪಾರವಾದದ್ದಾಗಿದೆ.

ರೇಟಿಂಗ್ ಡೌನ್‌ಗ್ರೇಡಿಂಗ್

ರಘುನಾಥ್ ರಾಮನ್, ಅಭಿಜಿತ್ ಬ್ಯಾನರ್ಜಿ ಆದಿಯಾಗಿ ಬಹುತೇಕ ಆರ್ಥಿಕ ತಜ್ಞರು ಬೇಡಿಕೆ ಉತ್ತೇಜಿಸಲು ಕ್ರಮಗಳನ್ನು ಘೋಷಿಸಬೇಕೆಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಪೂರೈಕೆ ಭಾಗವನ್ನು ಪುನಃಶ್ಚೇತನಗೊಳಿಸಲು ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಂತಹದೊAದು ಮಟ್ಟದಲ್ಲಿ ಸಾಮಾಜಿಕ ನೈತಿಕತೆಗೆ ಸಂಬಂಧಿಸಿದಂತೆ ದೇಶ ಈ ಬಗೆಯಲ್ಲಿ ಸೋತಿರಲಿಲ್ಲ. ವಲಸೆಗಾರರ ದುರ್ದೆಸೆಯ ಚಿತ್ರಗಳು, ಅನುಕಂಪದ ಜೊತೆಗೆ, ವ್ಯವಸ್ಥೆಯ ಬಗ್ಗೆ ಧಿಕ್ಕಾರವನ್ನು ಹುಟ್ಟುಹಾಕುತ್ತ ನಮ್ಮ ಸೋಗಲಾಡಿತವನ್ನು ಬಯಲು ಮಾಡಿವೆ.

ಈಗಾಗಲೇ ಸ್ಥಿರಾಸ್ತಿ ವಲಯವೂ ಸೇರಿದಂತೆ ಹಲಾವಾರು ಪ್ರಮುಖ ಉದ್ದಿಮೆ ವಲಯಗಳು ಕುಸಿದಿವೆ. ಪ್ರವಾಸೋದ್ಯಮ, ಹೋಟೆಲ್ ಉದ್ದಿಮೆಗಳೂ ತಳ ಕಚ್ಚುತ್ತಿವೆ. ಈಗಾಗಲೇ ಹೊರಬರುತ್ತಿರುವ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 13 ಕೋಟಿ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಮೋದಿಯವರು ಜನರನ್ನು ಆಶ್ಚರ್ಯಚಕಿತಗೊಳಿಸುವ ತಮ್ಮ ಮತ್ತೊಂದು ಜಾದೂ ಭಾಷಣದಲ್ಲಿ ಕೋವಿಡ್-19 ಎದುರಿಸಲು 20 ಲಕ್ಷ ಕೋಟಿ ಪ್ಯಾಕೇಜನ್ನು ಘೋಷಿಸಿದರು. ಜನ ಬಾಯಿಬಿಟ್ಟುಕೊಂಡು ಕಾಯುತ್ತಾ ಕುಳಿತರು. ಆದರೆ ಈ ಮೊತ್ತದ ಸುಮಾರು 10ನೇ ಒಂದು ಭಾಗ ಮಾತ್ರ ಉತ್ತೇಜಕ ಪ್ಯಾಕೇಜ್ (ಬಡವರಿಗೆ ನೇರ ಪರಿಹಾರವೂ ಸೇರಿದಂತೆ) ಆಗಿದ್ದು, ಉಳಿದದ್ದು ಸುಧಾರಕ ಪ್ಯಾಕೇಜ್ ಆಗಿದೆ. ಸಂದರ್ಶನವೊಂದರಲ್ಲಿ ಈ ಸೀಮಿತ ಉತ್ತೇಜಕ ಪ್ಯಾಕೇಜನ್ನು ಸಮರ್ಥಿಸಿಕೊಂಡ ಆರ್ಥಿಕ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೆಚ್ಚು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿದರೆ ಅದರಿಂದಾಗುವ ರೇಟಿಂಗ್ ಡೌನ್‌ಗ್ರೇಡಿಂಗ್ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಹೆಚ್ಚು ಉತ್ತೇಜಕ ಪ್ಯಾಕೇಜ್‌ಗಳನ್ನು ಘೋಷಿಸಿರುವ ದೇಶಗಳ ರೇಟಿಂಗ್ ಚೆನ್ನಾಗಿದೆ ಎಂದು ಹೇಳಿರುವುದು ಅರ್ಧ ಸತ್ಯವಾಗಿದೆ.

ಭಾರತದಷ್ಟೇ ಇರುವ ಹಾಗೂ ಕಡಿಮೆ ರೇಟಿಂಗ್ ಇರುವ ಹಲವಾರು ದೇಶಗಳೂ ಭಾರತಕ್ಕಿಂತ ಕೋವಿಡ್-19 ಪರಿಹಾರ ವಿಷಯದಲ್ಲಿ ಹೆಚ್ಚು ಔದಾರ್ಯ ತೋರಿವೆ. ದೇಶದ ಜನ ದುಸ್ಥಿತಿಯಲ್ಲಿರುವಾಗ ಅವರ ಯೋಗಕ್ಷೇಮದ ಬಗ್ಗೆ ಮೊದಲು ಕಾಳಜಿ ವಹಿಸಿ ರೇಟಿಂಗ್ ಬಗ್ಗೆ ಆಮೇಲೆ ನೋಡಿಕೊಳ್ಳೋಣ ಎಂದು ವಿರೋಧ ಪಕ್ಷದ ಕೆಲವು ದಿಗ್ಗಜರು ಸರ್ಕಾರವನ್ನು ಚುಚ್ಚಿದ್ದಾರೆ. ಅಲ್ಲದೇ ಕೆಲವು ಆರ್ಥಿಕ ತಜ್ಞರ ಪ್ರಕಾರ ರೇಟಿಂಗ್ ಸಂಸ್ಥೆಗಳಿಗೆ ಪ್ರತಿಯೊಂದು ದೇಶವೂ ತೀವ್ರ ಬಿಕ್ಕಟ್ಟನ್ನು ಎದುರಿಸ್ತುತಿರುವುದು ಗೊತ್ತಿದೆ. ಈ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಶಿಸ್ತನ್ನು ಪಾಲಿಸದಿರುವುದು ತಾತ್ಕಾಲಿಕ ಅಡ್ಡಸರಿಕೆಯಾಗಿದ್ದು, ನಂತರ ಆರ್ಥಿಕ ಶಿಸ್ತಿಗೆ ಹಿಂತಿರುವುಗುವುದಾಗಿ ರೇಟಿಂಗ್ ಸಂಸ್ಥೆಗಳಿಗೆ ಮನವರಿಕೆ ಮಾಡಿದರೆ ಯಾವುದೇ ನಕಾರಾತ್ಮಕ ರೇಟಿಂಗ್ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಈ ಸನ್ನಿವೇಶಗಳೇನೆ ಇರಲಿ ದೇಶದಲ್ಲಿ ಈಗಾಗಲೇ ನಿಶ್ಚಿತ ಭವಿಷ್ಯ ಹೊಂದಿರದ ಹಾಗೂ ದುರ್ದೆಸೆಯಲ್ಲಿರುವ ಕೋಟ್ಯಾಂತರ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ನೈತಿಕ ಹೊಣೆ ಸರ್ಕಾರದ ಮೇಲಿದೆ. ಅದೇ ರೀತಿ ಮುಳುಗುತ್ತಿರುವ ಉದ್ದಿಮೆಗಳಿಗೆ ಬೆಂಬಲವಾಗಿ ನಿಲ್ಲಬೇಕಾದ ಜವಾಬ್ದಾರಿಯಿಂದಲೂ ಸರ್ಕಾರ ತಪ್ಪಿಸಿಕೊಳ್ಳಲು ಯಾವುದೇ ಆಸ್ಪದವಿಲ್ಲ. ಈಗ ಘೋಷಿಸಿರುವ ಉತ್ತೇಜಕ ಪ್ಯಾಕೇಜ್‌ನ ಬಹುತೇಕ ಅಂಶಗಳು ಸದ್ಯದ ಮಟ್ಟಿಗೆ ಕನ್ನಡಿಯ ಗಂಟಾಗಿದೆ. ಸರ್ಕಾರದ ದೀರ್ಘಕಾಲಿಕ ಆಶಯಗಳೂ ಮೆಚ್ಚುವಂತಹದಾದ್ದರೂ, ಇಂದೇ ಪರಿಹಾರ, ನೆರವು ನಿರೀಕ್ಷಿಸುತ್ತಿರುವ ವಿವಿಧ ಜನ ಸಮುದಾಯಗಳು ಹಾಗೂ ಉದ್ದಿಮೆ, ವಲಯಗಳ ನೆರವಿಗೆ ಸರ್ಕಾರ ಮಾನವೀಯವಾಗಿ ನಿಲ್ಲಬೇಕಾಗಿದೆ.

ಆರೋಗ್ಯ ವಲಯದ ಸಬಲೀಕರಣ

ಲಾಕ್‌ಡೌನ್ ನಮಗೆ ಎರಡು ಅವಕಾಶಗಳನ್ನು ನೀಡಿತ್ತು. ಒಂದು ಸೋಂಕಿನ ವೇಗವನ್ನು ತಡೆಗಟ್ಟುವುದು ಹಾಗೂ ಮತ್ತೊಂದು ಸೋಂಕಿನ ತೀವ್ರತೆ ಹೆಚ್ಚಾದಾಗ ಅದನ್ನು ಎದುರಿಸಲು ಬೇಕಾದ ಸಾರ್ವಜನಿಕ ಆಡಳಿತ ಹಾಗೂ ಆರೋಗ್ಯ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳುವುದು. ಬೆಂಗಳೂರಿನ ಉದಾಹರಣೆಯನ್ನು ಗಮನಿಸಿ. ಇಲ್ಲಿ ದಿನ ನಿತ್ಯ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದು, ಕೆಲವರು ಆಸ್ಪತ್ರೆಗಳಲ್ಲಿ ಪ್ರವೇಶ ಸಿಗದೆ ಮನೆಗಳಲ್ಲೇ ಪ್ರಾಣ ಕಳೆದುಕೊಂಡಿದ್ದರೆ, ಇನ್ನೂ ಕೆಲವರಿಗೆ ತಡವಾಗಿ ಪ್ರವೇಶ ದೊರೆತಿದ್ದು, ವಿಳಂಬದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಸಾವಿರಾರು ಪ್ರಕರಣಗಳು ಈಗಾಗಲೇ ಹೊರಬಂದಿವೆ.

ಆರೋಗ್ಯ ಬಿಕ್ಕಟ್ಟುಗಳನ್ನು ನಿರ್ವಹಿಸುವ ಸಾಮರ್ಥ್ಯದ ಆಧಾರದ ಮೇಲೆ ಕೋವಿಡ್-19 ನಂತಹ ಪಿಡುಗುಗಳನ್ನು ಎದುರಿಸಲು ಬೇಕಾದ ಸಿದ್ಧತೆಯನ್ನು ಅಳೆಯುವ 2019ರ ಜಾಗತಿಕ ಆರೋಗ್ಯ ಭದ್ರತೆ ಸೂಚ್ಯಂಕದ ಪ್ರಕಾರ ಭಾರತ 57ನೇ ಸ್ಥಾನದಲ್ಲಿದೆ. ಈ ಸೂಚ್ಯಂಕದಲ್ಲಿ ಯು.ಎಸ್. ಮೊದಲನೇ ಸ್ಥಾನದಲ್ಲಿದೆ. ಇದರರ್ಥ ಭಾರತವು ಸಾಂಕ್ರಾಮಿಕ ಪಿಡುಗುಗಳನ್ನು ಎದುರಿಸಲು ಈಗಾಗಲೇ ಹೆಚ್ಚಿನ ಮಟ್ಟದ ಕೋವಿಡ್-19 ಸಾವುಗಳನ್ನು ಅನುಭವಿಸಿರುವ ದೇಶಗಳಿಗಿಂತ ದುರ್ಬಲವಾಗಿದೆ. ತನ್ನ ಜಿಡಿಪಿಯ ಕೇವಲ ಶೇಕಡ 1.3 ರಷ್ಟು ಮೊತ್ತವನ್ನು ಆರೋಗ್ಯಕ್ಕೆ ವಿನಿಯೋಗಿಸುವ ನಮ್ಮ ಈ ವ್ಯವಸ್ಥೆಯಿಂದ ಏನು ನಿರೀಕ್ಷಿಸಲು ಸಾಧ್ಯ? ಮತ್ತೊಂದು ಅಭಿವೃದ್ಧಿಶೀಲ ದೇಶ ಬ್ರೆಜಿಲ್ ತನ್ನ ಜಿಡಿಪಿಯ ಶೇಕಡ 7.5 ರಷ್ಟನ್ನು ಆರೋಗ್ಯ ವಲಯದಲ್ಲಿ ಹೂಡುತ್ತಿದೆ. ಕೋವಿಡ್-19 ಪಿಡುಗಿನ ಪ್ರಸ್ತುತ ಸಂದರ್ಭದಲ್ಲಿ ಕೋವಿಡ್-19 ಸೋಂಕಿಲ್ಲದ ಆದರೆ ಇತರೆ ರೋಗಗಳಿಂದ ಬಳಲುತ್ತಿರುವ ರೋಗಿಗಳು ಸರಿಯಾದ ಚಿಕಿತ್ಸಾ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ಪ್ರಧಾನಿಯವರು ಮಾತ್ರ ತಮ್ಮ ಭಾಷಣಗಳಲ್ಲಿ ತಮಗೆ ಸೂಕ್ತವೆನಿಸುವ ಅಂಶಗಳನ್ನು ಪ್ರಸ್ತಾಪಿಸಿ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಹಿಗ್ಗುತ್ತಾರೆ.

ಕೋವಿಡ್-19 ಪರೀಕ್ಷೆಯ ವಿಷಯದಲ್ಲಿ ನಾವು ಬಹಳಷ್ಟು ಹಿನ್ನಡೆ ಅನುಭವಿಸಿದೆವು. ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಕೇವಲ 6,500 ಮಾದರಿಗಳನ್ನು ಮಾತ್ರ ಪರೀಕ್ಷಿಸಲಾಗಿತ್ತು. ನಂತರದ ದಿನಗಳಲ್ಲಿ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿಸಲಾಯಿತಾದರೂ ಸಹ ಅದು ಜಾಗತಿಕ ಸರಾಸರಿಗೆ ಹೋಲಿಸಿದರೆ ಬಹಳ ಕಡಿಮೆಯಿತ್ತು. ಜೂನ್ 14 ರಂದು ಹೊರಬಿದ್ದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೇವಲ 4,100 ಜನರನ್ನು ಮಾತ್ರ ಮಾಡಲಾಗುತ್ತಿತ್ತು. ಈ ವಿಷಯದಲ್ಲಿ ಜಾಗತಿಕ ಸರಾಸರಿ ಪ್ರತಿ ಮಿಲಿಯನ್‌ಗೆ 29,000 ಪರೀಕ್ಷೆಗಳಾಗಿತ್ತು. ಜುಲೈ 7ರ ಹೊತ್ತಿಗೆ ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 7,400 ಪರೀಕ್ಷೆಗಳನ್ನು ಮಾಡಲಾಗುತಿತ್ತು. ಆದರೆ ಅದೇ ಸಮಯದಲ್ಲಿ ಚೀನಾದಲ್ಲಿ 62,814 ಪರೀಕ್ಷೆಗಳನ್ನು ಹಾಗೂ ಯುಎಸ್‌ನಲ್ಲಿ 115,449 ಪರೀಕ್ಷೆಗಳನ್ನು ಮಾಡಲಾಗಿತ್ತು.

ಸರ್ಕಾರ ಭಾರತದ ಅಧಿಕ ಜನಸಂಖ್ಯೆಯ ಹಿನ್ನೆಲೆಯಲ್ಲಿ ಅಷ್ಟೊಂದು ಪರೀಕ್ಷೆಗಳನ್ನು ಮಾಡುವುದು ಕಾರ್ಯರೂಪದಲ್ಲಿ ಸಾಧ್ಯವಿಲ್ಲ ಎಂದಿತ್ತು. ಆದರೆ ನಮಗಿಂತ ಹೆಚ್ಚು ಜನಸಂಖ್ಯೆಯಿರುವ ಚೈನಾ ನಮಗಿಂತ ಒಂಭತ್ತು ಪಟ್ಟು ಹೆಚ್ಚಿನ ಪರೀಕ್ಷೆಗಳನ್ನು ಮಾಡಿದೆ. ಸೋಂಕಿತರನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲು ಪರೀಕ್ಷೆಗಳು ಮುಖ್ಯವಾಗುತ್ತದೆ. ಅಲ್ಲದೇ ಹೆಚ್ಚು ಪರೀಕ್ಷೆಗಳನ್ನು ಮಾಡಿದಷ್ಟು ಅದು ಸೋಂಕು ಹರಡುವಿಕೆ ಸಂಬಂಧಿಸಿದಂತೆ ದೊಡ್ಡ ಚಿತ್ರಣವನ್ನು ಒದಗಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.

ಮುಂದಿರುವ ಸವಾಲುಗಳು

ಕೋವಿಡ್-19 ಸುನಾಮಿ ಮುಗಿದು ಅಂಕಿ-ಅಂಶಗಳು ಹೊರಬಂದಾಗ ಮುಖ್ಯವಾಗುವ ವಿಷಯಗಳು ಕೋವಿಡ್-19ನಿಂದ ಆರ್ಥಿಕತೆಯ ಮೇಲಾಗಿರುವ ಪರಿಣಾಮವೇನು? ಎಷ್ಟು ಜನ ಉದ್ಯೋಗ ಕಳೆದುಕೊಂಡರು? ಎಷ್ಟು ಕಂಪನಿಗಳು, ಅಂಗಡಿ-ಮುಗ್ಗಟ್ಟುಗಳು ಬಾಗಿಲು ಮುಚ್ಚಿದವು? ಎಷ್ಟು ಜನ ಬಡತನದ ರೇಖೆಯ ಕೆಳಗೆ ಸಾಗಿದರು? ಎಂಬುದಾಗಿರುತ್ತದೆ. ಈಗಾಗಲೇ ಲಭ್ಯವಿರುವ ವರದಿಗಳ ಪ್ರಕಾರ ಕೋವಿಡ್-19ಕ್ಕೆ ಮುನ್ನ ಶೇಕಡ 7 ರಷ್ಟಿದ್ದ ನಿರುದ್ಯೋಗದ ಮಟ್ಟ ಶೇಕಡ 35 ರಷ್ಟು ತಲುಪುವ ಸಾಧ್ಯತೆಯಿದೆ. ಸುಮಾರು 12 ಕೋಟಿ ಜನ ಬಡತನ ರೇಖೆಯ ಕೆಳಗೆ ಬರಲಿದ್ದಾರೆ. 2020-21 ರಲ್ಲಿ ನಮ್ಮ ಜಿಡಿಪಿ ಶೇಕಡ 10.8 ರಷ್ಟು ಸಂಕುಚಿತವಾಗಲಿದೆ. 2021-2022ರಲ್ಲಿ ನಮ್ಮ ಜಿಡಿಪಿ ಕೇವಲ 0.8ರಷ್ಟು ಹೆಚ್ಚಳವನ್ನು ಮಾತ್ರ ಕಾಣಲಿದೆ.

ಕುಸಿದುಹೋಗುವ ಆರ್ಥಿಕತೆಯನ್ನು ಮತ್ತೆ ಪುನಃಶ್ಚೇತನಗೊಳಿಸುವ, ಕಳೆದುಹೋಗುವ ಉದ್ಯೋಗಗಳನ್ನು ಮತ್ತೆ ಸೃಷ್ಟಿಸುವ ಹಾಗೂ ಬಡತನದ ರೇಖೆಯ ಕೆಳಗೆ ಜಾರಿಹೋಗುವ ಕೋಟ್ಯಾಂತರ ಜನರನ್ನು ಮತ್ತೆ ಆಚೆಗೆ ತರುವ, ಮುಂದೊಮ್ಮೆ ಬರಬಹುದಾದ ಯಾವುದೇ ಪಿಡುಗನ್ನು ಆಥವಾ ಬೇರಾವುದೋ ಬೃಹತ್ ಆರೋಗ್ಯದ ಸವಾಲನ್ನು ಎದುರಿಸಲು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸಬಲಗೊಳಿಸಬೇಕಾದ ಬೃಹತ್ ಸವಾಲುಗಳು ಮೋದಿಯವರ ಮುಂದಿರುತ್ತವೆ. ವಾಸ್ತವಿಕತೆಯನ್ನು ಅರ್ಥಮಾಡಿಕೊಂಡು ಅದನ್ನು ಎದುರಿಸಲು ಪ್ರಧಾನಿಯವರು ಸಜ್ಜಾಗಲಿ.

Leave a Reply

Your email address will not be published.