ಜಾನಪದದಲ್ಲಿ ಸಾಂಕ್ರಾಮಿಕ ರೋಗಗಳು

ಯಾವುದೇ ತಂತ್ರಜ್ಞಾನ, ವೈಜ್ಞಾನಿಕತೆ ಆವಿಷ್ಕಾರಗೊಂಡಿಲ್ಲದ ಕಾಲಘಟ್ಟದಲ್ಲಿಯೇ ಜನಪದರು ತಮ್ಮ ಬದುಕಿಗೆ ಕಂಟಕಪ್ರಾಯವಾಗಿದ್ದ ಗಂಟು, ಪ್ಲೇಗು, ಸಿಡುಬು, ಕಾಲರಾ, ದಡಾರದಂತಹ ದೊಡ್ಡ ರೋಗಗಳಿಗೆ ಮುಖಾಮುಖಿಯಾಗಿದ್ದರು.

ಜನಪದರು ರೋಗಗಳು ಬರುವ ಮುಂಚೆ ಹಾಗೂ ಬಂದನಂತರ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಸಹಜ ಜೀವನದಲ್ಲಿಯೇ ರೂಢಿಸಿಕೊಂಡಿದ್ದರು. ಅವುಗಳ ಮೌಖಿಕ ಜಾಡು ಹಿಡಿದು ಎಚ್ಚರಿಕೆಯಿಂದ ವಿಶ್ಲೇಷಿಸಿಕೊಳ್ಳುವುದು ಅತ್ಯಗತ್ಯ.  ಮನುಕುಲವನ್ನು ಕಾಡಿದ ಮಾರಕ ರೋಗಕ್ಕೆ ಜನಪದ ಮನಸ್ಸು ಮೌಖಿಕ ಪರಂಪರೆಯಲ್ಲಿ ಕಲ್ಪಿಸಿಕೊಂಡಿದ್ದ ವಿಧಾನ, ನಿದಾನ, ನಂಬಿಕೆ, ಆಚರಣೆ, ಐತಿಹ್ಯ, ಸಾಹಿತ್ಯ, ಬೈಗುಳ ಮುಂತಾದ ಮಾಹಿತಿಗಳು ಮುಖ್ಯ. ಆಧುನಿಕ, ವೈಜ್ಞಾನಿಕ ಹಿನ್ನೆಲೆ ಇಲ್ಲದಿದ್ದ ಸಂದರ್ಭದಲ್ಲಿ ಅದಿದ್ದರೂ ಅದನ್ನು ಅಷ್ಟಾಗಿ ಅನುಸರಿಸದ ಕಾಲದಲ್ಲಿಯೂ ಸಾಂಪ್ರದಾಯಿಕ ಮನಸ್ಸು ಈ ಬಗ್ಗೆ ಚಿತ್ತ ಹರಿಸಿದೆ.  ಇದು ಒಂದು ಕಾಲದ ಆಗಿಹೋದ ಮಾಹಿತಿಯಷ್ಟೇ ಅಲ್ಲ, ಪ್ರಸ್ತುತ ಸಂದರ್ಭದ ಚಿಂತನೆಯೊಡನೆಯೂ ತಳುಕು ಹಾಕಿಕೊಂಡಿರುತ್ತದೆ. 

ಜನಪದರ ಪರಿಕಲ್ಪನೆಯಲ್ಲಿ ರೋಗ ರುಜಿನಗಳು ಒಂದು ದೃಷ್ಟಿಯಲ್ಲಿ ಸಹಜ ಕ್ರಿಯೆಗಳಾದರೆ ಮತ್ತೊಂದೆಡೆ ಸಹಜವೆನಿಸದೆ ತನ್ನ ಅಥವಾ ತನ್ನ ಗುಂಪಿನ ಯಾವುದೊ ವಿಚಿತ್ರ ನಡವಳಿಕೆಯಿಂದ ಸೋಂಕು ತಟ್ಟಿರಬಹುದೆಂದು ತಿಳಿದಿದ್ದಾರೆ. ಇವುಗಳ ಉಪಶಮನಕ್ಕಾಗಿ ತನ್ನ ಪರಿಸರದಲ್ಲಿರುವ ಗಿಡಮೂಲಿಕೆ ಔಷಧಿಗಳು, ಮಾಟ-ಮಂತ್ರ-ತಂತ್ರ, ದೇವರು-ದಿಂಡರು, ಭೂತ-ಪ್ರೇತ-ಪಿಶಾಚಿಗಳಿಗೆ ಮೊರೆ ಹೋಗಿರುವುದು ಕಂಡುಬರುತ್ತದೆ.

ಒಂದೊಂದು ರೋಗಕ್ಕೂ ಒಂದೊಂದು ದೇವರು ತಳುಕು ಹಾಕಿಕೊಂಡಿವೆ. ಪ್ಲೇಗಿಗೆ ಪ್ಲೇಗಮ್ಮ, ಸಿಡುಬಿಗೆ ಸಿಡುಬಮ್ಮ, ಹುಚ್ಚಿನ ಹೆಸರಿನಲ್ಲಿ ಹುಚ್ಚಮ್ಮ, ಕಾಲರಾದ ಹೆಸರಿನಲ್ಲಿ ಕಾಲರಾದಮ್ಮ ಇತ್ತೀಚೆಗೆ ಏಡ್ಸ್-ಅಮ್ಮ, ಪ್ರಸ್ತುತ ಕೊರೊನಾದ ಹೆಸರಿನಲ್ಲಿ ಕೊರೊನಾದಮ್ಮಸೃಷ್ಟಿಯಾದರೂ ಆಶ್ರ‍್ಯವಿಲ್ಲ… ಹೀಗೆ ರೋಗಗಳ ಹೆಸರಿನಲ್ಲಿ ದೇವತೆಗಳು ಸೃಷ್ಟಿಯಾಗಿ ಅವುಗಳಿಗೆ ಗುಡಿಗೋಪುರ ಕಟ್ಟಿ ಕ್ರಮಬದ್ಧವಾಗಿ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಅದರಲ್ಲೂ ಎಲ್ಲಾ ರೋಗದ ದೇವತೆಗಳಿಗೂ ಸ್ತ್ರೀರೂಪ, ಸ್ತ್ರೀನಾಮವೇ ರೂಢಿಗೆ ಬಂದಿರುವುದು ಇನ್ನೂ ವಿಚಿತ್ರವಾಗಿದೆ. 

ಹೆಚ್ಚು ಕಡಿಮೆ ಎಲ್ಲಾ ಗ್ರಾಮ ದೇವತೆಗಳೂ ರೋಗ ನಿವಾರಣೆಗಾಗಿಯೇ ಹುಟ್ಟಿಕೊಂಡವುಗಳಾಗಿವೆ ಎಂದರೆ ತಪ್ಪಾಗಲಾರದು. ಅದರಲ್ಲೂ ರೋಗಗಳ ಹೆಸರಿನಲ್ಲಿಯೇ ಆಚರಣೆಗಳಿರುವುದನ್ನು ಕಾಣಬಹುದು.  ಪ್ಲೇಗಿನಮಾರಿ, ಕಾಲರಾಮಾರಿ, ಸಿಡುಬಿನ ಮಾರಿಯರಿಗೆ ಆಚರಣೆಗಳು ಹುಟ್ಟಿಕೊಂಡಿವೆ. ಮಾರಿಎನ್ನುವುದಕ್ಕೆ ರೋಗಎಂಬ ಅರ್ಥ ಜನಮಾನಸದಲ್ಲಿ ರೂಢಿಯಲ್ಲಿದೆ. ಹಾಗಾಗಿಯೇ ಸಿಡುಬು, ಕಾಲರಾ, ಪ್ಲೇಗು ಮುಂತಾದ ರೋಗಗಳನ್ನು ಮಾರಿರೋಗಎಂದೇ ಕರೆಯುವುದು ಚಾಲ್ತಿಯಲ್ಲಿದೆ. ಈ ರೋಗಗಳು ಉಂಟಾಗಲು ಯಾವುದೋ ಗ್ರಾಮದೇವತೆಯೇ ಕಾರಣ, ಹಾಗಾಗಿ ಆಕೆಯ ಕೋಪವನ್ನು ಶಮನಮಾಡಿ, ಅವಳಿಗೆ ಬಲಿ ಅರ್ಪಿಸಿ, ಮಾರಿಹಬ್ಬ ಆಚರಿಸಿದರೆ, ರೋಗಗಳು ನಿವಾರಣೆಯಾಗುತ್ತವೆ ಎಂಬುದು ಜನಪದರ ನಂಬಿಕೆಯಾಗಿತ್ತು. 

ಮೇಲೆ ಹೆಸರಿಸಿರುವ ಸಾಂಕ್ರಾಮಿಕ ರೋಗಗಳು ಹರಡಿದಾಗ ಗಡಿಮಾರಿಯನ್ನು ಪೂಜಿಸಿ ಊರಿನ ಗಡಿದಾಟಿಸುವ ಆಚರಣೆ ಕರ್ನಾಟಕದ ಬಹುಭಾಗಗಳಲ್ಲಿ ವರ್ಷಕ್ಕೊಮ್ಮೆ ಇಂದಿಗೂ ನಡೆಯುತ್ತದೆ. ಈ ಗಡಿಮಾರಿ ತನ್ನ ಜೊತೆಯಲ್ಲಿ ಎಲ್ಲಾ ರೋಗಗಳನ್ನು ಹೊತ್ತೊಯ್ಯುತ್ತಾಳೆಂಬ ನಂಬಿಕೆ ರೂಢಿಯಲ್ಲಿದೆ.  ಇದಕ್ಕೆ ಸೋಂಕು ತೆಗೆಯುವುದು ಎಂಬ ಹೆಸರೂ ಸಹ ಪ್ರಚಲಿತದಲ್ಲಿದೆ.

ಸೋಂಕು ಕಳಿಸುವುದು ಎಂದರೆ ಹಳೆಯ ಮೊರದಲ್ಲಿ ಹಳೆಯ ಪೊರಕೆ ಮೊದಲಾದವುಗಳನ್ನು ಶಾಸ್ತ್ರೋಕ್ತವಾಗಿ ಊರಿನವರೆಲ್ಲ ಮೊದಲೇ ಗೊತ್ತು ಮಾಡಿದ ದಿನದಂದು ವಾದ್ಯ ಸಮೇತ ತೆಗೆದುಕೊಂಡು ಹೋಗಿ ತಮ್ಮೂರಿನ ಗಡಿಯನ್ನು ದಾಟಿ ಅವುಗಳನ್ನು ಎಸೆದು ಬರುವುದು. ಇದೇ ರೀತಿ ಗಡಿಯಿಂದ ಗಡಿಗೆ ಬಿಡಲಾಗುತ್ತದೆ. ಹೀಗೆ ಸುಮಾರು ಏಳು ಊರುಗಳು ದಾಟಿ ಹೋದ ಬಳಿಕ ಕಡೆಯ ಊರಿನವರು ಗಡಿಮಾರಿಯನ್ನು ಹರಿಯುವ ನದಿಗೋ ಅಥವಾ ಕೆರೆಗೋ ಕೊಂಡೊಯ್ದು ಪೂಜೆ ಸಲ್ಲಿಸಿ ವಿಸರ್ಜಿಸುತ್ತಾರೆ.  ಹೀಗೆ ಗಡಿಮಾರಿ ಊರಿನ ರೋಗ ರುಜಿನಗಳನ್ನು ನಿವಾರಿಸುವ ವೈದ್ಯ ದೇವತೆಯಾಗಿ ಜನಮಾನಸದಲ್ಲಿ ಮೌಲ್ಯ ತುಂಬಿಕೊಂಡಿದ್ದಾಳೆ.

ಹೀಗೆ ದೈವಗಳಿಂದ ಉಂಟಾಗುವ ಸೋಂಕುಗಳಿಗೆ ಆಚರಣೆಯ ಮೂಲಕ ಪರಿಹಾರೋಪಾಯಗಳನ್ನು ಕಂಡುಕೊಂಡಿದ್ದರೆ, ದೆವ್ವ-ಗಾಳಿಗಳಿಂದ ಉಂಟಾಗುವ ರೋಗಗಳನ್ನು ನಿವಾರಿಸಿಕೊಳ್ಳಲು ಎಳನೀರುಸೋಂಕು, ಅನ್ನದಸೋಂಕು, ಕೋಳಿಸೋಂಕು, ಗಳಾಸುಸೋಂಕು, ಚೊಂಬುಸೋಂಕು, ಚೌರಿಗೆಸೋಂಕು, ತಾಂಬಾಳೆಸೋಂಕು, ಎಕ್ಕದಸೋಂಕು, ಕೆಂಡದಸೋಂಕು, ಬಿದ್ದಬೀಳು ತೆಗೆಯುವುದು, ಧೂಪ ಹಾಕಿಸುವುದು, ಗೊಂಬೆ ಮಾಡುವುದು ಮುಂತಾದ ಆಚರಣೆಗಳನ್ನು ಆಚರಿಸುತ್ತಾರೆ. ಸೋಂಕು ತಗುಲಿದವರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೆವ್ವ ಬಿಡಿಸುವುದೂ ಉಂಟು. ದೆವ್ವದ ಇರುವಿಕೆಯ ಬಗ್ಗೆ ನಂಬಿಕೆ ಇಲ್ಲದವರು ಮತ್ತು ಮನೋವಿಜ್ಞಾನಿಗಳು ಇದನ್ನು ಅದುಮಿಟ್ಟ ಅತೃಪ್ತ ಭಾವನೆಗಳಿಂದ ಮೂಡಿದ ಮಾನಸಿಕ ಸ್ಥಿತಿ ಎಂದು ಹೇಳುತ್ತಾರೆ. ಆದರೆ ದೆವ್ವ ಹಿಡಿದವರ ಮಾತುಕತೆಗಳನ್ನು ಕೇಳಿದವರಿಗೆ, ಕಣ್ಣಾರೆ ನೋಡಿದವರಿಗೆ ವಿಜ್ಞಾನ ಒದಗಿಸುವ ಕಾರಣಗಳಲ್ಲಿ ಅಷ್ಟಾಗಿ ನಂಬಿಕೆ ಇರುವುದಿಲ್ಲ. ಹಾಗಾಗಿ ಇದು ಅವರವರ ನಂಬಿಕೆಯ ಪ್ರಶ್ನೆಯಾಗಿದೆ. ಈ ಬಗ್ಗೆ ಮನೋವೈಜ್ಞಾನಿಕ ನೆಲೆಯಲ್ಲಿ ಹೆಚ್ಚು ಸಂಶೋಧನೆಗಳಾಗಬೇಕು.

ಅದೇನೇಯಿರಲಿ ಈ ಲೋಕದ ಮಹಾಮಾರಿಗಳೆಲ್ಲ ಜನಬದುಕನ್ನು ಬಾಧಿಸಿ ಕಣ್ಮರೆಯಾಗಿರುವುದುಂಟು. ಕೆಲವು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದುಂಟು. ಹಿಂದೆಯಾದರೆ ಜನಸಂಖ್ಯೆ ಕಡಿಮೆ ಇತ್ತು, ಕಾಯಿಲೆಗಳೂ ಕಡಿಮೆ ಇದ್ದವು. ಇಂತಹ ಕಾಯಿಲೆಗಳು ಬಂದೆರಗಿದಾಗ ಜನರು ತಾವಿದ್ದ ಸ್ಥಳ ತೊರೆದು ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹೊಸ ಜಾಗದಲ್ಲಿ ಮನೆಮಠ ಕಟ್ಟಿಕೊಂಡು ವಾಸಿಸಲಾರಂಭಿಸುತ್ತಿದ್ದರು.  ಅದೇ ಮುಂದೆ ಹೊಸೂರು (ಹೊಸ ಊರು) ಗಳಾದವು. ಈ ಹೆಸರಿನ ಊರುಗಳ ಇತಿಹಾಸ ಕೆದಕಿದರೆ ರೋಗದ ಕಾರಣಕ್ಕಾಗಿಯೇ ಹೊಸದಾಗಿ ನಿರ್ಮಾಣ ಗೊಂಡಿರುವುದು ತಿಳಿದು ಬರುತ್ತದೆ. ಇಂತಹ ಮಾಯಾರೋಗಗಳು ಮನುಷ್ಯನಿಗೆ ಸ್ಪರ್ಶಿಸಿರುವಂತೆಯೇ ರೋಗಗಳಿಗೆ ಜಾನಪದ ಸ್ಪಂದಿಸಿದೆಸ್ಪರ್ಶಿಸಿದೆ.

ರೋಗ ಸಂಬಂಧಿ ಬೈಗಳುಗಳನ್ನು ಪರಿಶೀಲಿಸುವುದಾದರೆ…

1.ನಿನ್‌ಕಣ್ ಹಿಂಗ್‌ಹೋಗ. 2. ನಿನ್‌ಗಂಟ್ಲ್ ಸೇದೋಗ 3. ನಿನ್ಗೆ ಗಂಟು ಬಂದು ನೆಗೆದು ನೆಲ್ಲಿಕಾಯಾಗ 4. ನಿನ್ಗೆ ವಾಂತಿಬೇಧಿ ಬಂದು ವಾಲಾಲ್ಕೊಂಡು ತಕ್ಕೊಂಡೋಗ 5. ನಿನ್ಗೆ ಕ್ವಾಷ್ಟ ಹತ್ತ 6. ನಿನಗೆ ಸಿಡುಬು ಬಡಿದು ಸರೋತ್ನಲ್ಲಿ ಹೊತ್ಕೊಂಡೋಗ 7. ನಿನ್‌ಗಂಟಲಿಗೆ ಗಂಡಾಮಾಲೆ ಏಳ 8. ನಿನ್ ತಲೆ ಸಿಡಿಯ 9. ನಿನ್ಗೆ ತೊಳ್ಳೆರೋಗ ಬರಾ 10. ನಿನ್ಗೆ ಮೊಲ್ಲಾಗರ ಬಂದು ಕಿಳ್ಳೆಗಿಡಿಯಾ 11. ನಿನಗೆ ದೊಡ್ಡ ರೋಗ ಬಂದು ನಾಕಾಳ್ ಮೇಲೆ ಕಾಕಾಕೊಂಡು ಹೊತ್ಕೊಂಡೋಗ 12. ನಿನ್ ಹೊಟ್ಯಾಗ ಗಂಟಏಳಲಿ 13. ನಿನ್ಗೆ ಬೇಧಿ ರೋಗ ಬಂದು ಬೀದಿಗೆ ಎಳಿಯ 14. ನಿನ್ಗೆ ಹಿಂದು ಮುಂದು ಆಗ 15. ನಿನ್ಗೆ ಚಯ(ಕ್ಷಯ) ಬಂದು ವಂಶ ನಾಶ್‌ನಾಗ 16. ನಿನ್ಗೆ ಚಯ ಬಂದು ರಕ್ತ ಕರ‍್ಕಂಡು ಸಾಯ 17. ನಿನ್ಗೆ ಕಾಮಾಲೆ ರೋಗ ಬಂದು ಕಾಕಾಕೊಂಡು ತಕ್ಕೊಂಡೋಗ.

ಹೀಗೆ ತನಗಾಗದವರಿಗೆ ಬಯ್ಯುವುದು ಶಾಪ ಹಾಕುವುದು ಸಹಜ. ಈ ಬೈಗುಳಗಳಲ್ಲಿ ರೋಗಗಳು ಬಳಕೆಯಾಗಿರುವುದನ್ನು ಕಾಣಬಹುದು. ಇಲ್ಲೆಲ್ಲ ರೋಗ ಬಂದರೆ ಮನುಷ್ಯ ಸತ್ತೇ ಸಾಯುತ್ತಾರೆ ಎನ್ನುವ ದೃಢತೆ ಇದ್ದಂತಿದೆ. ಹಾಗಾಗಿಯೇ ವೈರಿಗೆ ರೋಗ ಬಂದು ಸಾವನ್ನಪ್ಪಲಿ ಎಂಬ ಆಶಯವೇ ಎಡತಾಕಿದೆ.  ಈಗಲೂ ರೋಗದ ಬಗೆಗಿನ ಬೈಗುಳಗಳು ಬಳಕೆಯಾಗುತ್ತಿರಬೇಕಾದರೆ ಅವು ಎಷ್ಟು ಭಯಂಕರವಾಗಿ ಮನುಷ್ಯನನ್ನು ಕಾಡಿರಬಹುದು ಎಂಬುದನ್ನು ಊಹಿಸಬಹುದು. ಜನಪದರ ಬದುಕಿನ ಜೊತೆಯಲ್ಲೇ ಅನೇಕ ರೋಗಗಳು ಬದುಕಿದ್ದು ತಮ್ಮ ದೀರ್ಘ ಇತಿಹಾಸವನ್ನು ದಾಖಲಿಸಿವೆ.

ಜನಪದ ಗಾದೆಗಳಲ್ಲಿ ರೋಗಗಳ ಕಾರಣ, ಅವು ಬರದಿರುವಂತೆ ಮುನ್ನೆಚ್ಚರಿಕೆ ಕ್ರಮ, ಗುಣ, ಪರಿಹಾರವನ್ನು ಸೂಚಿಸಲಾಗಿದೆ.

1.ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ 2. ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ 3. ಕುಂತು ಕುಂಡಿ ತುರುಸಿಕೊಂಡು ಹುಣ್ಣ ಮಾಡಿಕೊಂಡ್ರಂತ 4. ಆಳು ನೋಡುದ್ರೆ ಅಲಂಕಾರ, ತಾಳು ನೋಡುದ್ರೆ ಸೋಗೆ ರೋಗ 5. ಗುಂಡ್ಗೆ ರೋಗಕ್ಕೆ ಗುಂಡೇ ಮದ್ದು 6. ಬಾಯಿಗೆ ರುಚಿ ತಿಕ ಪಜೀತಿ 7. ರಾಗಿ ಇದ್ರೆ ರಾಗ, ರಾಗಿ ಇಲ್ದಿದ್ರೆ ರೋಗ 8. ರೋಗದ ಕೋಳಿತಿಂದಿ, ಕಿಳ್ಳೇಲಿ ಉಚ್ಚಾಟ 9. ಸೋಸುಣ್ಣೊರ‍್ಗೆ ಸ್ವಾಲೆರೋಗ 10. ಅಂಗೇ ಉಣ್ಣೊರ‍್ಗೆ ಅಂಕ ಪಂಕ್ಲರೋಗ 11. ವಪ್ಪತ್ತುಂಡೋನು ಯೋಗಿ, ಎರಡೊತ್ತುಂಡೋನು ಭೋಗಿ, ಮೂರೊತ್ತುಂಡೋನು ರೋಗಿ, ನಾಲ್ಕೊತ್ತುಂಡೋನ ಹೊತ್ಕೊಂಡೋಗಿ… 12. ಚಯ(ಕ್ಷಯ) ಬಂದೋನ ಮನೆಹಾಳು, ಚೌಳು ತುಂಬಿದ ಹೊಲಹಾಳು 13. ಆಚೆ ಬೀದೀಲಿ ಕ್ಷಯ ಈಚೆ ಬೀದೀಲಿ ಭಯ 14. ಕ್ಷಯ ಬಂದೋಳಿಗೆ ಕೆಮ್ಮದು ಕಲಿಸಿದಂತೆ 15. ಕಾಮಾಲೆ ರೋಗದವರಿಗೆ ಜಗತ್ತೆಲ್ಲಾ ಹಳದಿ 16. ಅಂಗೈ ಹುಣ್ಗೆ ಕನ್ನಡಿ ಬೇಕಾ?

ಯಾವ ಕಾಲದ ಮನುಷ್ಯನಾದರೂ ಆರೋಗ್ಯದಿಂದಿರಲು ಹವಣಿಸುತ್ತಾನೆ. ಒಡಲು ರೋಗದ ಆಗರವಾದಾಗ ಬೇರೆ ಬೇರೆ ನೆಲೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾನೆ.  ಈ ಹಿನ್ನೆಲೆಯಲ್ಲಿ ಜನಪದ ನಂಬಿಕೆಗಳಲ್ಲಿ ರೋಗದ ಮುನ್ನೆಚ್ಚರಿಕೆ ಕ್ರಮಗಳನ್ನು ಮನಗಾಣಬಹುದು: 

ಉಗುರನ್ನು ಹಲ್ಲಿನಿಂದ ಕಡಿಯಬಾರದು (ಉಗುರಿನಲ್ಲಿ ವಿಷವಿರುತ್ತದೆ), ಉಂಡಕೂಡಲೆ ಮಲಗಬಾರದು (ಅಜೀರ್ಣವಾಗುತ್ತದೆ), ಸೆಗಣಿ-ಗಂಜಳದಿಂದ ಮನೆಸಾರಿಸಬೇಕು (ಸೊಳ್ಳೆ ನಾಶವಾಗಿ ರೋಗ ಬರುವುದಿಲ್ಲ), ಕಳ್ಳಿ ಗಿಡವನ್ನು ಮನೆಯಲ್ಲಿ ತೂಗು ಹಾಕಬೇಕು (ಸೂರಜು ನಾಶವಾಗಿ ರೋಗ ಬರುವುದಿಲ್ಲ), ಹೊತ್ತು ಮುಳುಗಿದ ಕೂಡಲೆ ಶ್ರೀಗಂಧದ ಧೂಪ ಹಾಕಬೇಕು (ರೋಗಾಣುಗಳು ನಾಶವಾಗುತ್ತವೆ), ಮಂತ್ರ-ಯಂತ್ರ-ತಂತ್ರ ಮಾಡಿಸಿಕೊಂಡಿರಬೇಕು (ರೋಗಿಗೆ ಮಾನಸಿಕ ನೆಮ್ಮದಿ), ಕಸಬರಿಗೆಯಿಂದ ಹೊಡೆಯಬಾರದು (ರೋಗ ಬರುತ್ತದೆಂಬ ನಂಬಿಕೆ)ಊಟಕ್ಕೆ ಕೂತರೆ ಎಲೆ ಸುತ್ತ ನೀರು ಚೆಲ್ಲಬೇಕು ಇತ್ಯಾದಿ… ಹಲವಾರು ನಂಬಿಕೆಗಳನ್ನು ರೋಗಬಾರದಿರಲೆಂದು ಮುನ್ನೆಚ್ಚರಿಕೆ ಕ್ರಮವಾಗಿ ಜನಪದರು ಆಚರಿಸುತ್ತ ಬಂದಿದ್ದಾರೆ. 

ಇನ್ನು ಜನಪದರ ಆಹಾರ ಪದ್ಧತಿಯಲ್ಲಿ ಅನೇಕ ಕಟ್ಟುಪಾಡು ನಂಬಿಕೆ ನಿಷೇಧಗಳಿದ್ದವು. ಅವರಿಗೆ ಆಹಾರವೇ ಔಷಧವಾಗಿತ್ತು. ಅವರ ಊಟೋಪಚಾರಗಳಲ್ಲಿ ಮನುಷ್ಯನ ದೇಹಕ್ಕೆ ಷಡ್ರಸಗಳು ಲಭ್ಯವಾಗುವಂತಹ ಸೂಕ್ಷ್ಮ ಚಿಂತನೆ ಇತ್ತು. ಪೋಷಕಾಂಶ ಭರಿತ, ಆರೋಗ್ಯ ಸಂರಕ್ಷಿಸುವಂತಹ ಔಷಧಿಯ ಗುಣವುಳ್ಳ ಆಹಾರ ಕ್ರಮವಿತ್ತು. 

ಈ ಆಹಾರ ಪದ್ಧತಿಯು ವೈಜ್ಞಾನಿಕತೆಯಿಂದ ಕೂಡಿದ್ದು ಯಾವ ಆಹಾರವನ್ನು, ಯಾವ ಕಾಲಮಾನದಲ್ಲಿ, ಯಾರು ಸೇವಿಸಬೇಕು ಎಂಬುದರ ಜೊತೆಗೆ ತಮ್ಮ ದೇಹಾರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅರಿವು ಹೊಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಪ್ರಭಾವದಿಂದ ಸಾಂಪ್ರದಾಯಿಕ ಆಹಾರ ಪದ್ಧತಿಯೂ ಬದಲಾಗುತ್ತಿದ್ದು ಜೀವನಶೈಲಿಯೇ ಪಲ್ಲಟಗೊಂಡಿದೆ.  ಇದರಿಂದ ಔಷಧಿಯೇ ಆಹಾರವಾಗಿ ಪರಿಣಮಿಸಿರುವುದು ದುರದೃಷ್ಟಕರ. 

*ಲೇಖಕಿ ಮೈಸೂರು ವಿವಿ ಮಹಾರಾಜ ಕಾಲೇಜಿನ ಜಾನಪದ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು; ಕವಿ ಮತ್ತು ಜಾನಪದ ಗಾಯಕರು.         

 

Leave a Reply

Your email address will not be published.