ಜಿ7 ಒಕ್ಕೂಟಕ್ಕೆ ಬೈಡೆನ್ ನಾಯಕತ್ವ

ಎರಡು ವರ್ಷಗಳ ನಂತರ ನಡೆದ ಜಿ7 ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತೆ ಅಮೆರಿಕದ ನಾಯಕತ್ವ ಸ್ಥಾಪನೆ ಮಾಡಿದ್ದಾರೆ. ಬ್ರಿಟನ್ನಿನ ಕಾರ್ನ್‍ವಾಲ್‍ನಲ್ಲಿ 2021 ರ ಜೂನ್ ಎರಡನೇ ವಾರದಲ್ಲಿ ನಡೆದ ಈ ಸಭೆಯಲ್ಲಿ ಕೋವಿಡ್ ನಂತರದ ಹಾಗೂ ಟ್ರಂಪ್ ನಿರ್ಗಮನದ ನಂತರದ ಸಂದರ್ಭದಲ್ಲಿ ವಿಶ್ವದ ಏಳು ಬಲಾಢ್ಯ ಪ್ರಜಾಪ್ರಭುತ್ವದ ರಾಷ್ಟ್ರಗಳಿಗೆ ಮತ್ತೆ ಅಮೆರಿಕದ ಮುಂದಾಳತ್ವ ದೊರಕಿದೆ. ರಷ್ಯಾ ಮತ್ತು ಚೀನಾಗಳ ವಿರುದ್ಧ ಈ ಶೃಂಗಸಭೆ ಅತ್ಯಂತ ಸ್ಪಷ್ಟ ಮತ್ತು ಕಠಿಣ ನಿರ್ಣಯಗಳನ್ನು ಕೈಗೊಂಡು ವಿಶ್ವÀಕ್ಕೆ ಡೆಮಾಕ್ರೆಟಿಕ್ ರಾಷ್ಟ್ರಗಳ ಪರವಾಗಿ ನಿಲ್ಲುವ ಸೂಚನೆ ನೀಡಿದೆ.

ಈ ಮೊದಲು ಜಿ8 ಆಗಿದ್ದ ಈ ಒಕ್ಕೂಟ ಕ್ರಿಮಿಯಾ ಮೇಲೆ ದಾಳಿಯ ನಂತರ ರಷ್ಯಾವನ್ನು ಹೊರಗಿಟ್ಟು ಕೇವಲ ಜಿ7 ಆಗಿತ್ತು. ಅಮೆರಿಕ್, ಕೆನಡ, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಜಪಾನ್‍ಗಳ ಜೊತೆಗೆ ಐರೋಪ್ಯ ಒಕ್ಕೂಟ ಈ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳಾಗಿ ಭಾಗವಹಿಸಿದ್ದುವು. ಈ ಬಾರಿ ಶೃಂಗಸಭೆಗೆ ಭಾರತ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಕೂಡಾ ಆಮಂತ್ರಿಸಲಾಗಿತ್ತು. ಈ ನಾಲ್ಕು ದೇಶಗಳ ಮುಖಂಡರು ನೇರ/ವರ್ಚುಯಲ್ ಆಗಿ ಭಾಗವಹಿಸಿದ್ದರು. ಇಂಗ್ಲೆಂಡ್‍ನ ಆತಿಥ್ಯದಲ್ಲಿ ನಡೆದ ಈ ಶೃಂಗಸಭೆ ಜೋ ಬೈಡೆನ್‍ರವರ ವರ್ಚಸ್ಸನ್ನು ಹೆಚ್ಚಿಸಲು ಕೂಡಾ ಸಹಕಾರಿಯಾಗಿತ್ತು.

ಶೃಂಗಸಭೆಯಲ್ಲಿ ರಷ್ಯಾದ ವಿಸ್ತರಣವಾದಿ ನಡವಳಿಕೆಯನ್ನು ಹಾಗೂ ಕ್ರಿಮಿಯಾ ಆಕ್ರಮಣವನ್ನು ಕಟುವಾಗಿ ಟೀಕಿಸಲಾಯಿತು. ಜೊತೆಗೆ ಚೀನಾದ ದಮನಕಾರಿ ನೀತಿಯನ್ನು ಮತ್ತು ಕ್ಸಿನ್‍ಜಿಯಾಂಗ್ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿನ ಆಕ್ರಮಣಕಾರಿ ನೀತಿಯನ್ನು ವಿರೋಧಿಸಲಾಯಿತು. ಚೀನಾದ ಬೆಲ್ಟ್ ಮತ್ತು ರೋಡ್ ಇನಿಷಿಯೇಟಿವ್‍ಗೆ ಪರ್ಯಾಯವಾಗಿ ‘ಬಿಲ್ಡ್ ಬ್ಯಾಕ್ ಬೆಟರ್ ವಲ್ರ್ಡ್’ (ಬಿ3ಡಬ್ಲ್ಯು) ಮೂಲಭೂತ ಸೌಲಭ್ಯ ಯೋಜನೆಯನ್ನು ಘೋಷಿಸಲಾಯಿತು. ಜಿ7 ನ ನಿರ್ಣಯವನ್ನು ವಿರೋಧಿಸಿದ ಚೀನಾ ಸರ್ಕಾರ ಯೂರೋಪಿನ ಕೆಲವು ರಾಷ್ಟ್ರಗಳು ವಿಶ್ವದ ಆಗುಹೋಗುಗಳನ್ನು ನಿರ್ಧರಿಸುವ ಕಾಲ ಮುಗಿದಿದೆ ಎಂದು ಪ್ರಬಲವಾಗಿ ಪ್ರತಿಪಾದಿಸಿದೆ.

ಇರಾನ್ನಲ್ಲಿ ಹೊಸ ಅಧ್ಯಕ್ಷ ಎಬ್ರಹಾಮ್ ರೈಸಿ

ಇರಾನ್‍ನಲ್ಲಿ ಇದುವೆಗೆ ಹಸನ್ ರೂಹಾನಿ ಎಂಬ ಅಧ್ಯಕ್ಷ ಇದ್ದರೆಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ. ಏಕೆಂದರೆ ಅಧ್ಯಕ್ಷ ಪದವಿ ಕೇವಲ ಪ್ರಜಾಪ್ರಭುತ್ವ ಸರ್ಕಾರವೆಂದು ತೋರುವ ಅಲಂಕಾರಕ್ಕೆ ಸೀಮಿತವಾಗಿತ್ತು. ನಿಜವಾದ ಅಧಿಕಾರ ಪರಮೋಚ್ಛ ನಾಯಕ ಅಲಿ ಖಮೇನಿಯವರ ಬಳಿಯೇ ಇದೆ. ಆದರೆ ಖಮೇನಿಯವರಿಗೆ ಈಗಾಗಲೇ 84 ವರ್ಷಗಳಾಗಿದೆ. ಅವರು ಇನ್ನೆಷ್ಟು ವರ್ಷ ಬದುಕಬಲ್ಲರು ಎಂಬ ಖಾತ್ರಿಯಿಲ್ಲ. ಈ ಹಿನ್ನೆಲೆಯಲ್ಲಿ 2021 ರ ಈ ಇರಾನ್ ಅಧ್ಯಕ್ಷೀಯ ಚುನಾವಣೆ ಪ್ರಾಮುಖ್ಯತೆ ಪಡೆದಿದೆ. ಈಗ ಅಧ್ಯಕ್ಷರಾಗಿ ಚುನಾಯಿತರಾಗಿರುವ ಎಬ್ರಹಾಮ್ ರೈಸಿ ಮುಂದೆ ಇರಾನ್‍ನ ಪರಮೋಚ್ಛ ನಾಯಕ ಕೂಡಾ ಆಗುವ ಸಾಧ್ಯತೆಯಿದೆ.

ಎಬ್ರಹಾಮ್ ರೈಸಿಯವರ ಇತಿಹಾಸ ಕರಾಳವಾಗಿದೆ. 1988ಕ್ಕೂ ಮೊದಲಿನಿಂದ ರೈಸಿಯವರು ಇರಾನ್‍ನ ಇಸ್ಲಾಮಿಕ್ ನ್ಯಾಯ ಪದ್ಧತಿಯಲ್ಲಿ ಒಂದಲ್ಲಾ ಒಂದು ರೀತಿಯ ನ್ಯಾಯಧೀಶರಾಗಿದ್ದಾರೆ. 1988ರಲ್ಲಿ ಇರಾನ್‍ನ 5,000 ಎಡಪಂಥೀಯ ಹಾಗೂ ಉದಾರವಾದಿ ನಾಯಕರನ್ನು ಗಲ್ಲಿಗೆ ಹಾಕಿಸಿದ ಕುಖ್ಯಾತಿ ರೈಸಿಯವರಿಗಿದೆ. ಅನಂತರದ ಸಮಯದಲ್ಲಿಯೂ ಕೂಡಾ ರೈಸಿಯವರು ಖೊಮೇನಿ ಮತ್ತು ಖಮೇನಿಯವರ ಪರವಾಗಿ ಇರಾನ್‍ನಲ್ಲಿ ಇಸ್ಲಾಂ ಆಡಳಿತದ ಕತ್ತಿಯ ಅಲುಗಿನ ಚೂಪಾಗಿ ಇಸ್ಲಾಂ ಆಡಳಿತದ ವಿರೋಧಿಗಳನ್ನು ಗಲ್ಲಿಗೇರಿಸುವ ಹೊಣೆ ಹೊತ್ತಂತೆ ಕಾರ್ಯವಹಿಸಿ ಖ್ಯಾತರಾಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸರ್ವೋಚ್ಛ ನಾಯಕ ಖಮೇನಿಯವರು ರೈಸಿಯವರನ್ನು ತಮ್ಮ ಉತ್ತರಾಧಿಕಾರಿಯಂತೆಯೇ ಬೆಳೆಸಿ ಮುಂದೆ ತಂದಿದ್ದಾರೆ.

ಈ 2021ರ ಚುನಾವಣೆಯಲ್ಲಿ ಇರಾನ್‍ನ ಗಾರ್ಡಿಯನ್ ಕೌನ್ಸಿಲ್ ಹಲವು ಅಭ್ಯರ್ಥಿಗಳನ್ನು ಚುನಾವಣೆಯಿಂದಲೇ ಬಹಿಷ್ಕರಿಸಿತ್ತು. ಬಹುತೇಕ ಉದಾರವಾದಿಗಳು ಹಾಗೂ ಕೆಲವು ಕಟ್ಟರ್‍ವಾದಿಗಳನ್ನು ಸಹಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿತ್ತು. ಚುನಾವಣೆ ನಡೆಯುವಷ್ಟರ ಹೊತ್ತಿಗೆ ಎಬ್ರಹಾಮ್ ರೈಸಿಯವರಿಗೆ ಯಾವುದೇ ಹಾಗೂ ಯಾರದೇ ವಿರೋಧ ಇಲ್ಲದಂತಾಗಿ ಅವರ ಆಯ್ಕೆ ಪೂರ್ವ ನಿರ್ಧಾರಿತವಾಗಿತ್ತು. ಈ ಕಾರಣದಿಂದಲೇ ಏನೋ ಇರಾನಿನ ಜನರು ಈ ಚುನಾವಣೆಯನ್ನು ಬಹಿಷ್ಕರಿಸಿದಂತೆ ಕಂಡರು. ಶೇಕಡಾ 50ಕ್ಕೂ ಕಡಿಮೆ ಮತದಾನವಾದರೆ 35 ಲಕ್ಷಕ್ಕೂ ಹೆಚ್ಚು ಮತದಾರರು ಖಾಲಿ ಮತ ಚಲಾಯಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಎಬ್ರಹಿಮ್ ರೈಸಿಯವರೊಡನೆ ಈಗ ಅಮೆರಿಕ ಕೂಡಾ ವ್ಯವಹರಿಸಬೇಕಾದ ಪರಿಸ್ಥಿತಿಯಿದೆ. ಇರಾನ್ ಹಾಗೂ ಅಮೆರಿಕದ ನಡುವಿನ ಅಣ್ವಸ್ತ್ರ ಒಪ್ಪಂದವನ್ನು ಬೈಡೆನ್ ಪುನರ್ ವಿಮರ್ಶಿಸಲು ಉತ್ಸುಕರಾಗಿದ್ದಾರೆ. ಮತ್ತೊಮ್ಮೆ ಇರಾನ್ ಸರ್ಕಾರವನ್ನು ಅಣ್ವಸ್ತ್ರ ನಿಷೇಧಕ್ಕೆ ಒಳಪಡಿಸಿ ಕೊಲ್ಲಿ ಭಾಗದಲ್ಲಿ ಶಾಂತಿಸ್ಥಾಪನೆ ಮಾಡುವ ಇರಾದೆಯಿದೆ. ಆದರೆ ಕಟ್ಟರ್ ನಾಯಕರಲ್ಲಿಯೇ ಕಟ್ಟರ್ ಸಂಪ್ರದಾಯವಾದಿಯಾಗಿರುವ ಈ ಎಬ್ರಹಾಮ್ ರೈಸಿಯವರೊಡನೆ ಹೇಗೆ ಅಮೆರಿಕ ರಾಜತಾಂತ್ರಿಕ ಸಂಬಂಧ ಬೆಳೆಸಬಲ್ಲುದು ಎಂಬುದನ್ನು ಇನ್ನು ಮುಂದೆ ನೋಡಬೇಕಿದೆ.

 

ಕಡೆಗೂ ಇಸ್ರೇಲ್ನಲ್ಲಿ ಹೊಸ ಸರ್ಕಾರ

2021 ರ ಏಪ್ರಿಲ್‍ನಲ್ಲಿ ನಡೆದ ಇಸ್ರೇಲಿ ಚುನಾವಣೆಯ ತಿಂಗಳುಗಳ ನಂತರ ಇದೀಗ ಇಸ್ರೇಲಿನಲ್ಲಿ ನಫ್ತಾಲಿ ಬೆನೆಟ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಿಂದಿನ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಏಕಮೇವ ಉದ್ದೇಶದಲ್ಲಿ ನೆತನ್ಯಾಹುರವರ ಎಲ್ಲ ವಿರೋಧಿಗಳು ಒಂದುಗೂಡಿ ಹದಿಮೂರು ಪಕ್ಷಗಳ ಸರ್ಕಾರವನ್ನು ರಚಿಸಿದ್ದಾರೆ. ಇದರಂತೆ ನಫ್ತಾಲಿ ಬೆನೆಟ್ ಎರಡು ವರ್ಷಗಳವರೆಗೆ ಪ್ರಧಾನಿಯಾದರೆ 2023 ರಿಂದ ಯಾರ್ ಲಿಪಿಡ್‍ರವರು ಪ್ರಧಾನಿಯಾಗಲಿದ್ದಾರೆ.

ಬೆನೆಟ್‍ರವರು ಇಸ್ರೇಲಿನ ಯಾಮಿನ ಪಕ್ಷದ ಮುಖ್ಯಸ್ಥರಾಗಿದ್ದಾರೆ. 2006 ರಲ್ಲಿ ನೆತನ್ಯಾಹುರವರ ಕಚೇರಿ ನಿರ್ವಾಹಕನಾಗಿ ರಾಜಕೀಯ ಪ್ರವೇಶ ಮಾಡಿದ್ದ ಬೆನೆಟ್ 2013 ರಿಂದ 2020ರವರೆಗೆ ಇಸ್ರೇಲಿನ ಸಚಿವರಾಗಿದ್ದರು. 2019 ರಿಂ 2020 ರವರೆಗೆ ರಕ್ಷಣಾ ಸಚಿವರೂ ಆಗಿದ್ದರು. ಬಲಪಂಥೀಯ ಯೆಹೂದಿ ಪಕ್ಷದ ಬೆನೆಟ್ ಮುಂದಿನ ದಿನಗಳಲ್ಲಿ ಇದುವರೆಗಿನ ಇಸ್ರೇಲಿ ನೀತಿಯನ್ನು ಮುಂದುವರೆಸುವ ಸಾಧ್ಯತೆಯಿದೆ.

ಮೊದಲ ಬಾರಿಗೆ ಇಸ್ರೇಲ್ ಸರ್ಕಾರದಲ್ಲಿ ಅರಬ್ ಪಕ್ಷವೊಂದು ಪಾಲುದಾರನಾಗಿದೆ. ಇಸ್ರೇಲಿ ಸಂಸತ್ತು ನೆಸ್ಸೆಟ್‍ನಲ್ಲಿ ನಾಲ್ಕು ಮಂದಿ ಸಂಸದರನ್ನು ಹೊಂದಿರುವ ಯುನೈಟೆಡ್ ಅರಬ್ ಲಿಸ್ಟ್ ಕೂಡಾ ಈ ಹೊಸ ಸರ್ಕಾರದಲ್ಲಿ ಪಾಲುದಾರನಾಗಿದೆ. 2023ರಲ್ಲಿ ಎರಡನೇ ದೊಡ್ಡ ಪಕ್ಷ ಯೆಷ್ ಅಟಿದ್‍ನ ಮುಖಂಡ ಯಾರ್ ಲಿಪಿಡ್ ರವರು ಮುಂದಿನ ಪ್ರಧಾನಿಯಾಗಲಿದ್ದಾರೆ.

ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ 100 ವರ್ಷ

ಇದೇ ಜುಲೈ ಒಂದರಂದು ಚೀನಾದ ಕಮ್ಯನಿಸ್ಟ್ ಪಕ್ಷಕ್ಕೆ 100 ವರ್ಷಗಳ ಸಂಭ್ರಮದ ಆಚರಣೆಯಿದೆ. 1921 ರಲ್ಲಿ ರಷ್ಯಾದ ಬೊಲ್ಷೇವಿಕ್ ಕಮ್ಯುನಿಸ್ಟ್ ಪಕ್ಷದ ಸಹಾಯದಿಂದ ಶುರುವಾದ ಚೀನಾದ ಕಮ್ಯುನಿಸ್ಟ್ ಪಕ್ಷ 1927 ರಿಂದ 1949 ರವರೆಗೆ ಚಿಯಾಂಗ್ ಕೈಶೇಕ್ ರವರ ಕುವೋಮಿಂಟಾಂಗ್ ಜೊತೆಗೆ ಯುದ್ಧದಲ್ಲಿ ನಿರತವಾಗಿತ್ತು. ಎರಡನೇ ಮಹಾಯುದ್ಧದಲ್ಲಿ ಕೆಲಕಾಲ ಆಕ್ರಮಣದ ವಿರುದ್ಧ ಜಪಾನಿ ಆಡಳಿತದೊಂದಿಗೆ ಸಹಕರಿಸಿದ್ದರೂ ನಂತರದಲ್ಲಿ ಮತ್ತೊಮ್ಮೆ ತನ್ನ ಆಡಳಿತವಿರೋಧಿ ಚಟುವಟಿಕೆ ಮುಂದುವರೆಸಿತ್ತು. 1949 ರಲ್ಲಿನ ಕ್ಷಿಪ್ರಕ್ರಾಂತಿಯಲ್ಲಿ ಮಾವೋ ಜೆಡಾಂಗ್ ನೇತೃತ್ವದಲ್ಲಿ ಚೀನಾ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆಡಳಿತಾರೂಢ ಕುವೋಮಿಂಟಾಂಗ್ ಸರ್ಕಾರ ಪಕ್ಕದ ಟೈವಾನ್‍ಗೆ ತನ್ನ ನೆಲೆ ಬದಲಾಯಿಸಿತ್ತು. 1949 ರಿಂದ ಇಲ್ಲಿಯವರೆಗೂ ಚೀನಾದ ಮೇಲೆ ಕಮ್ಯುನಿಸ್ಟ್ ಪಕ್ಷ ತನ್ನ ಕಬಂಧ ಬಾಹು ಹರಡಿಕೊಂಡಿದೆ.

ಜುಲೈ ಒಂದರಿಂದ ಚೀನಾ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ತಮ್ಮ ಪಕ್ಷದ ನೂರು ವರ್ಷಗಳ ಸಂಭ್ರಮಾಚರಣೆ ಪ್ರಾರಂಭ ಮಾಡಲಿದ್ದಾರೆ. ಸೇನಾ ಅಧಿಕಾರಿಗಳು ಸೇರಿದಂತೆ ಹಲವರಿಗೆ ಜುಲೈ ಒಂದರ ಮೆಡಲ್ ನೀಡಲಿದ್ದು ಚೀನಾದಾದ್ಯಂತ ಕಡ್ಡಾಯದ ಸಂಭ್ರಮಾಚರಣೆಗೆ ಆದೇಶ ನೀಡಲಿದ್ದಾರೆ.

Leave a Reply

Your email address will not be published.