ಜೀನ್ ಎಡಿಟಿಂಗ್ ಅಪಾಯಕಾರಿ ಅನ್ವೇಷಣೆ!

ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಏಡ್ಸ್ ಮುಂತಾದವುಗಳನ್ನು ನಿರ್ನಾಮ ಮಾಡಲು, ಆಯಾ ರೋಗಕ್ಕೆ ಕಾರಣವಾಗುವ ವರ್ಣತಂತುವಿನ ಭಾಗವನ್ನೇ ಕತ್ತರಿಸಿ ಹಾಕುವ ಮಟ್ಟಿಗೆ ಜೀನ್ ಎಡಿಟಿಂಗ್ ಮಾಡಲು ಒಪ್ಪಿಗೆ ನೀಡಬೇಕು ಎಂಬ ಅಭಿಪ್ರಾಯ ಬಹುಪಾಲು ಜೀವ ವಿಜ್ಞಾನಿಗಳು ಹಾಗೂ ವೈದ್ಯರದ್ದಾಗಿದೆ.

ಎಲ್.ಪಿ.ಕುಲಕರ್ಣಿ ಬಾದಾಮಿ

ಕೋಡುಗಳಿಲ್ಲದ ಹಸುಗಳು, ಬಲಿಯದ ಹಂದಿಗಳು (ಹಂದಿಗಳು ಬಲಿತರೆ ಅದರ ಮಾಂಸವು ದುರ್ವಾಸನೆಯಿಂದ ಕೂಡಿರುತ್ತದೆ), ಕೊಕ್ಕಿಲ್ಲದ, ಕಾಲುಗಳಲ್ಲಿ ಉಗುರುಗಳಿಲ್ಲದ ಕೋಳಿಗಳು, ಎಷ್ಟು ಉಷ್ಣತೆ ಬೇಕಾದರೂ ಅದನ್ನು ತಾಳಿಕೊಂಡು ಬದುಕುವ ಜೀವಿಗಳು (ಇತ್ತೀಚೆಗೆ ಬಿಹಾರದಲ್ಲಿ ಬಿಸಿಲಿನ ತಾಪ ತಾಳಲಾರದೆ 77 ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು, ಆದರೆ ಈ ಜೀವಿಗಳಿಗೆ ಅಂತಹ ಬಿರುಬಿಸಿಲಿನಿಂದ ತೊಂದರೆಯೇನು ಆಗದು), ಅಲ್ಲದೇ ಸಸ್ಯಗಳಲ್ಲಿ; ತೆಳುವಾದ ಸಿಪ್ಪೆಯ ಬಾದಾಮಿ, ಓಟೆ (ಗೊಪ್ಪ) ಇಲ್ಲದ ಮಾವಿನ ಹಣ್ಣು, ಎಳೆನೀರಿನಲ್ಲಿ ಚಿಪ್ಪು ಸಪೂರ ಮಾಡಿ ನೀರು ಹೆಚ್ಚಿಸುವುದು… ಇನ್ನೂ ಮುಂತಾದವುಗಳನ್ನು ಪ್ರಯೋಗ ಶಾಲೆಯಲ್ಲಿ ಸೃಷ್ಟಿಸಿದರೆ ಹೇಗಿರುತ್ತದಲ್ಲವೇ!

ಎಸ್..! ಇದು ಖಂಡಿತಾ ಸಾಧ್ಯ. ಆಯಾ ಪ್ರಾಣಿಗಳ ಡಿ.ಎನ್.ಎ. ಕತ್ತರಿಸಿ ಇಂತಹವುಗಳನ್ನು ಸೃಷ್ಟಿಸಬಹುದು. ಮನುಷ್ಯನ ಡಿ.ಎನ್.ಎ. ಎಡಿಟ್ ಮಾಡುವುದಕ್ಕೆ ವಿರೋಧವಿರುವಂತೆ ಸಸ್ಯ ಅಥವಾ ಪ್ರಾಣಿಗಳ ಡಿ.ಎನ್.ಎ. ಎಡಿಟ್ ಮಾಡುವುದಕ್ಕೆ ದೊಡ್ಡ ವಿರೋಧವೇನು ಇಲ್ಲ. ಹೀಗಾಗಿ ಅಮೆರಿಕಾದ ‘ರೀಕಂಬೆನೆಟಿಕ್ಸ್’ ಎಂಬ ಸಂಸ್ಥೆ ಮುಂದಿನ ವರ್ಷ ಡಿ.ಎನ್.ಎ. ಎಡಿಟ್ ಮಾಡಿದ ಕೃಷಿ ಉತ್ಪನ್ನಗಳನ್ನೂ ಪ್ರಾಣಿಗಳ ತಳಿಗಳನ್ನೂ ಬಿಡುಗಡೆ ಮಾಡಲು ತಯಾರಿ ನಡೆಸಿದೆ.

ಕಳೆದ ವರ್ಷ ಚೀನಾದ ಖಾಸಗಿ ಪ್ರಯೋಗಾಲಯದಲ್ಲಿ ರಹಸ್ಯವಾಗಿ ಕೆಲಸ ಮಾಡುತ್ತಿದ್ದ ಒಬ್ಬ ಜೀವಶಾಸ್ತ್ರಜ್ಞ ದಿಢೀರನೆ ಮಾಧ್ಯಮಗಳ ಮುಂದೆ ಬಂದು, ‘ನಾನು ಡಿ.ಎನ್.ಎ. (ಜೀನ್, ವಂಶವಾಹಿನಿ ಅಥವಾ ವರ್ಣತಂತು) ಎಡಿಟ್ ಮಾಡಿದ ಭ್ರೂಣದಿಂದ ಅವಳಿ ಹೆಣ್ಣು ಮಕ್ಕಳನ್ನು ಹುಟ್ಟಿಸಿದ್ದೇನೆ. ಅವು ಬೇರೆಲ್ಲ ಮಕ್ಕಳಂತೆ ನಾರ್ಮಲ್ ಆಗಿವೆ. ಆ ಮಕ್ಕಳಿಗೆ ಯಾವತ್ತೂ ಎಚ್.ಐ.ವಿ. ಏಡ್ಸ್ ಸೋಂಕು ತಗುಲದಂತೆ ವರ್ಣತಂತುಗಳನ್ನು ಕತ್ತರಿಸಿದ್ದೇನೆ’ ಎಂದು ಹೇಳಿಕೆ ನೀಡಿದ. ಈ ರೀತಿ ಹೇಳಿದ ಆ ಮಹಾನ್ ವಿಜ್ಞಾನಿ ಬೇರಾರೂ ಅಲ್ಲ, ಚೀನಾದ ‘ಸದರ್ನ್ ಯುನಿವರ್ಸಿಟಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ’ ಎಂಬ ವಿಶ್ವವಿದ್ಯಾಲಯದಲ್ಲಿ ಸಂಶೋಧಕನಾಗಿ ಕಾರ್ಯನಿರ್ವಹಿಸುತ್ತಿದ್ದ ‘ಹೀ ಜಿಯಾಂಕಿ’.

ಪ್ರಮಾಣೀಕೃತ ವಿಶ್ವವಿದ್ಯಾಲಯದಲ್ಲಿ ಈ ಪ್ರಯೋಗ ಮಾಡದೇ, ಅದನ್ನು ರಹಸ್ಯವಾಗಿಡಲು ಖಾಸಗಿ ಪ್ರಯೋಗಶಾಲೆಯನ್ನು ಅವಲಂಬಿಸಿದ್ದ ಹೀ ಜಿಯಾಂಕಿ ಮಾಡಿದ ಪ್ರಯೋಗ ಅಸಾಧಾರಣವಾದುದೇನೋ ನಿಜ. ಆದರೆ, ಅವನು ಮಾಡಿದ್ದು ಅನೈತಿಕ ಕೆಲಸವೆಂದೂ, ಮನುಷ್ಯನ ಡಿ.ಎನ್.ಎ. ಎಡಿಟ್ ಮಾಡಬಾರದೆಂಬ ವಿಜ್ಞಾನಿಗಳ ವಲಯದಲ್ಲಿರುವ ಅಲಿಖಿತ ಒಪ್ಪಂದದ ಉಲ್ಲಂಘನೆಯೆಂದೂ ಆಕ್ಷೇಪ ವ್ಯಕ್ತವಾಯಿತು. ನಂತರ ಚೀನಾ ಸರ್ಕಾರ ಆತನ ಪ್ರಯೋಗ ಶಾಲೆಯನ್ನು ಮುಚ್ಚಿಹಾಕಿ, ಅವನನ್ನು ದೀರ್ಘಕಾಲಿಕ ರಜೆಯ ಮೇಲೆ ಕಳಿಸಿತು.

ಜಗತ್ತಿನಲ್ಲೇ ಮೊದಲ ಬಾರಿ ವಂಶವಾಹಿಯನ್ನೇ ಬದಲಾಯಿಸಿ ಅವಳಿ ಮಕ್ಕಳನ್ನು ಸೃಷ್ಟಿಸಲಾಗಿದೆ ಎಂದು ಘೋಷಿಸಿದ್ದ ಈ ವಿಜ್ಞಾನಿಗೆ ಸದ್ಯ, ಚೀನಾದ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಂಶವಾಹಿ ಸಂಕಲನದ (ಜೀನ್ ಎಡಿಟಿಂಗ್) ಈ ತಂತ್ರಜ್ಞಾನ ಕಾನೂನುಬಾಹಿರ ವೈದ್ಯಕೀಯ ಪದ್ಧತಿಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಿಜ್ಞಾನಿಗೆ 30 ಲಕ್ಷ ಯುವಾನ್ (ರೂ.3.06ಕೋಟಿ) ದಂಡವನ್ನು ವಿಧಿಸಲಾಗಿದೆ. ಹೀ ಜಿಯಾಂಕಿ ಶಿಕ್ಷೆಗೊಳಗಾದ ವಿಜ್ಞಾನಿ. ವಂಶವಾಹಿ ಅಂಶಗಳನ್ನು ಬದಲಾಯಿಸುವ ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಮಹಿಳೆಗೆ ಅವಳಿ ಹೆಣ್ಣು ಮಕ್ಕಳು ಜನಿಸಿವೆ. ಇದು ತಮ್ಮ ಸಂಶೋಧನೆಯ ಫಲ ಎಂದು ಹೀ ಕಳೆದ ವರ್ಷ ಘೋಷಿಸಿದ್ದರು. ಎಚ್‍ಐವಿ ಸೋಂಕಿಗೆ ತುತ್ತಾಗದಂತೆ ವಂಶವಾಹಿಯನ್ನೇ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದರು. ಇದರಿಂದ, ವೈಜ್ಞಾನಿಕ ಸಮುದಾಯ ಅಚ್ಚರಿ ವ್ಯಕ್ತಪಡಿಸಿತ್ತು.

ಹೀ ಜತೆಗಿದ್ದ ಇಬ್ಬರು ಸಂಶೋಧಕರು ಸಹ ಶಿಕ್ಷೆಗೆ ಒಳಗಾಗಿದ್ದಾರೆ: ಝಾಂಗ್‍ರೆನ್ಲಿ ಎನ್ನುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ಯುವಾನ್(ರೂ.1ಕೋಟಿ) ಹಾಗೂ ಇನ್ನೊಬ್ಬ ಸಂಶೋಧಕ ಖ್ವಿನ್‍ಜಿಂಝಾಹೌಗೆ 18 ತಿಂಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ಯುವಾನ್ (ರೂ.51 ಲಕ್ಷ) ದಂಡ ವಿಧಿಸಲಾಗಿದೆ.

‘ಈ ಮೂವರು ವೈದ್ಯರಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅರ್ಹತೆಯನ್ನು ಹೊಂದಿಲ್ಲ. ಜತೆಗೆ, ಉದ್ದೇಶಪೂರ್ವಕವಾಗಿ ಚೀನಾದ ನಿಯಮಗಳು ಮತ್ತು ನೈತಿಕತೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಶೆಂಝೆನ್ ನ್ಯಾಯಾಲಯ ಹೇಳಿದೆ. ‘ವೈಯಕ್ತಿಕವಾಗಿ ಹೆಸರು ಗಳಿಸಲು ಮತ್ತು ಲಾಭ ಪಡೆಯುವ ಉದ್ದೇಶದಿಂದ ಇವರು ಈ ರೀತಿಯ ಕೃತ್ಯ ಮಾಡಿದ್ದಾರೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೂ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮೂವರು ಜೀನ್ ಎಡಿಟಿಂಗ್ ಪ್ರಯೋಗಕ್ಕಾಗಿ ದಂಪತಿಯನ್ನು ನೇಮಿಸಿಕೊಂಡಿದ್ದರು. ಇವರಲ್ಲಿ ಪತಿ ಎಚ್‍ಐವಿ ಸೋಂಕಿಗೆ ಒಳಗಾಗಿದ್ದರು. ರಹಸ್ಯವಾಗಿ ಈ ಪ್ರಯೋಗ ಕೈಗೊಳ್ಳಲಾಗಿತ್ತು. ಎಚ್‍ಐವಿ ಸೋಂಕು ತಗುಲದಂತೆ ವಂಶವಾಹಿಯ ಕೆಲವು ಅಂಶಗಳನ್ನು `ಸಿಆರ್‍ಐಎಸ್‍ಪಿಆರ್’ ತಾಂತ್ರಿಕತೆಯಿಂದ ತೆಗೆದುಹಾಕಲಾಯಿತು. ಜತೆಗೆ, ಅವಳಿ ಮಕ್ಕಳ ಡಿಎನ್‍ಎ ಮಾರ್ಪಾಡು ಮಾಡಲಾಯಿತು. ಇದರಿಂದ, ಎಚ್‍ಐವಿ ನಿರೋಧಕ ಹೆಣ್ಣುಮಕ್ಕಳು ಜನಿಸಿವೆ ಎಂದು ಹೀ ಜಿಯಾಂಕಿ ಕಳೆದ ವರ್ಷ ನವೆಂಬರ್‍ನಲ್ಲಿ ಘೋಷಿಸಿದ್ದರು. ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ, ಚೀನಾ ಸರ್ಕಾರ ತನಿಖೆಗೆ ಆದೇಶಿಸಿ ಸಂಶೋಧನಾ ಕಾರ್ಯಕ್ಕೆ ತಡೆ ನೀಡಿತು.

ಚೀನಾದ ವಿಶ್ವವಿದ್ಯಾಲಯದಿಂದಲೂ ಹೀ ಜಿಯಾಂಕಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಬಹುತೇಕ ದೇಶಗಳಲ್ಲಿ ಜೀನ್ ಎಡಿಟಿಂಗ್ ನಿಷೆಧಿಸಲಾಗಿದೆ. ಚೀನಾದ ಆರೋಗ್ಯ ಸಚಿವಾಲಯ 2003ರಲ್ಲಿ ಮಾನವ ಅಂಡಾಶಯದ ಜೀನ್ ಎಡಿಟಿಂಗ್ ನಿಷೆಧಿಸಿತು. 2015ರಲ್ಲಿ ವಿಶ್ವಸಂಸ್ಥೆಯ ನೀತಿ ಸಂಹಿತೆ ಸಮಿತಿ ಸಹ ಮಾನವ ಅಂಡಾಶಯದ ಜೀನ್ ಎಡಿಟಿಂಗ್ ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಜಗತ್ತಿನಲ್ಲೇ ಮೊದಲ ಬಾರಿ ವಂಶವಾಹಿಯನ್ನೇ ಬದಲಾಯಿಸಿ ಅವಳಿ ಮಕ್ಕಳನ್ನು ಸೃಷ್ಟಿಸಲಾಗಿದೆ ಎಂದು ಘೋಷಿಸಿದ್ದ ಈ ವಿಜ್ಞಾನಿಗೆ ಸದ್ಯ, ಚೀನಾದ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜೀನ್ ಅಥವಾ ಡಿಎನ್‍ಎ ಎಡಿಟಿಂಗ್‍ಎಂದರೇನು?

ಯಾವುದೇ ಜೀವಿಯಲ್ಲಿರುವ ವಂಶವಾಹಿಯ ಡಿಎನ್‍ಎಯನ್ನು ತಮಗೆ ಬೇಕಾದಂತೆ ಮಾರ್ಪಡಿಸುವುದು ಅಥವಾ ತಿದ್ದುವುದನ್ನು `ಜೀನ್ ಎಡಿಟಿಂಗ್’ ಎನ್ನಲಾಗುತ್ತದೆ. ಈ ಕ್ರಿಯೆಯನ್ನು ಸರಳವಾಗಿ ಹೇಳಬಹುದಾದರೆ, ಒಂದು ಲೇಖನ ಅಥವಾ ಸುದ್ದಿ ಬರೆದಾಗ ಮೊದಲ ಬರಹದ ಕರಡು ಪ್ರತಿಯಲ್ಲಿ ಸಾಕಷ್ಟು ತಪ್ಪುಗಳಿರುತ್ತವೆ. ಆ ತಪ್ಪುಗಳನ್ನು ತಿದ್ದಿ ಸರಿಪಡಿಸುವುದಕ್ಕೆ `ಎಡಿಟಿಂಗ್’ ಎಂದು ಕರೆಯಲಾಗುತ್ತದೆ. ಅದೇ ರೀತಿ ಜೀನ್‍ನಲ್ಲಿ ಇರಬಹುದಾದ ದೋಷಗಳನ್ನು ಸರಿಪಡಿಸುವ ಅಥವಾ ಅಲ್ಲಿ ದೋಷ ಮುಕ್ತ ಜೀನ್ ಸೇರಿಸುವ ಕ್ರಿಯೆ ಇದಾಗಿದೆ.

ನಮ್ಮ ಜೀವಕೋಶದಲ್ಲಿ 23 ಜೊತೆ ವರ್ಣತಂತುಗಳಿರುತ್ತವೆ. ಇವು ವಿಶಿಷ್ಟ ರಾಸಾಯನಿಕಗಳ ಮಿಶ್ರಣಗಳು. ಈ ವರ್ಣತಂತುಗಳಲ್ಲಿ ನಮ್ಮ ದೇಹದ ರಚನೆಯ ಸೂತ್ರ ಅಡಗಿದೆ. ಮನುಷ್ಯ, ಪ್ರಾಣಿ, ಪಕ್ಷಿ,ಮರ-ಗಿಡ ಹೀಗೆ ಪ್ರತಿಯೊಂದು ಜೀವಿಯ ಜೀವಕೋಶದಲ್ಲೂ ಡಿಎನ್‍ಎ ಇರುತ್ತದೆ. ಆ ಡಿಎನ್‍ಎ ಜೋಡಣೆಯಲ್ಲಿನ ವಿಭಿನ್ನತೆಯಿಂದಾಗಿಯೇ ಮನುಷ್ಯ ಮನುಷ್ಯನಾಗಿದ್ದಾನೆ, ಪ್ರಾಣಿಯು ಪ್ರಾಣಿಯಾಗಿದೆ ಮತ್ತು ಪಕ್ಷಿ ಪಕ್ಷಿಯಾಗಿದೆ.

ಒಂದು ಕುಟುಂಬದಲ್ಲಿ ವಂಶಪಾರಂಪರ್ಯವಾಗಿ ಮಧುಮೇಹ, ಕ್ಯಾನ್ಸರ್, ಅಂಧತ್ವದಂತಹ ಕಾಯಿಲೆಗಳು ಹರಿದು ಬರುತ್ತವೆ. ಇದನ್ನು ತಡೆಯಲು ಆ ಕುಟುಂಬದ ಮಹಿಳೆಯ ಅಂಡಾಣುವಿನಲ್ಲಿರುವ ಜೀನ್ ತೆಗೆದು ಬದಲಿ ಆರೋಗ್ಯವಂತ ಜೀನ್ ಅಳವಡಿಸಬಹುದು’ ಇಲ್ಲವೆ, ಜೀನ್‍ನಲ್ಲಿ ರೋಗ ತರುವ ಅಂಶವನ್ನು ತೆಗೆದು ಹಾಕಬಹುದು ಎಂಬುದು ವಿಜ್ಞಾನಿಗಳ ವಾದ.

ಜೀನ್ ಎಡಿಟಿಂಗ್ ನ ಉದ್ದೇಶಗಳೇನು?

• ವಂಶವಾಹಿ ಮಾರ್ಪಾಟು ಸಂಶೋಧನೆ ಮತ್ತು ಸಾಮಥ್ರ್ಯವನ್ನು ಹೆಚ್ಚಿಸುವುದು.

• ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಲ್ಲದೇ, ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ.

•ಅಮೆರಿಕ ಮತ್ತು ಇತರ ದೇಶಗಳ ಸಂಶೋಧಕರನ್ನು ಭಾರತಕ್ಕೆ ಆಹ್ವಾನಿಸಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ.

ವರ್ಣತಂತುಗಳಲ್ಲಿ ಜೀವಿಯ ಶರೀರಕ್ಕೆ ಸಂಬಂಧಿಸಿದ ಆಗಾಧ ಪ್ರಮಾಣದ ಮಾಹಿತಿಯಿರುತ್ತದೆ. ಈ ಮಾಹಿತಿಯು ಅಪ್ಪ- ಅಮ್ಮನಿಂದ ಮಕ್ಕಳಿಗೆ ವರ್ಗಾವಣೆಯಾಗುತ್ತಾ ಹೋಗುತ್ತದೆ. ಇಂತಹ ವರ್ಣತಂತುಗಳಲ್ಲಿ ಮಾರ್ಪಾಡು ಮಾಡುವುದೇ ಡಿಎನ್‍ಎ ಎಡಿಟಿಂಗ್. ಮಕ್ಕಳಿಲ್ಲದವರಿಗಾಗಿ ಪ್ರಯೋಗಾಲಯದಲ್ಲಿ ಗಂಡನ ವೀರ್ಯಾಣು ಹಾಗೂ ಹೆಂಡತಿಯ ಅಂಡಾಣುವನ್ನು ಸೇರಿಸಿ, ಭ್ರೂಣವನ್ನು ಸೃಷ್ಟಿಸಿ,ಅದನ್ನು ಮಹಿಳೆಯ ಗರ್ಭಕೋಶದೊಳಗೆ ಇರಿಸುವ ಪದ್ಧತಿ ಇದೆಯಷ್ಠೆ. ಇದನ್ನು ಪ್ರಣಾಳ ಶಿಶು ತಂತ್ರಜ್ಞಾನ ಅಥವಾ ಐವಿಎಫ್ ಎನ್ನುವರು. ಹೀಗೆ ವೀರ್ಯಾಣು ಮತ್ತು ಅಂಡಾಣುವನ್ನು ಸೇರಿಸುವ ಮುನ್ನ ಅವುಗಳಲ್ಲಿರುವ ಜೀವಕೋಶದಿಂದ ಡಿಎನ್‍ಎ ಯನ್ನು ಬೇಕಾದಂತೆ ಕತ್ತರಿಸಿ ತೆಗೆದು, ಮಿಕ್ಕುಳಿದ ಭಾಗವನ್ನು ಹಾಗೇ ಇರಿಸಿ ಭ್ರೂಣವನ್ನು ಬೆಳೆಸಬಹುದು.

ಚೀನಾ ವಿಜ್ಞಾನಿ ‘ಹಿ ಜೈಂಕುಯಿ’ ಏಡ್ಸ್ ಬಾರದಂತೆ ಡಿಎನ್‍ಎ ಎಡಿಟ್ ಮಾಡಿದ್ದಾನೆ. ಅದು ಒಳ್ಳೆಯದೇನೋ ನಿಜ, ಆದರೆ, ಮನುಷ್ಯನ ಡಿಎನ್‍ಎ ಎಡಿಟ್ ಮಾಡುವುದನ್ನು ಸದ್ಯದ ವೈದ್ಯಲೋಕ ಇನ್ನೂ ಒಪ್ಪಿಕೊಂಡಿಲ್ಲ.

ಚೀನಾ ವಿಜ್ಞಾನಿ ‘ಹಿ ಜೈಂಕುಯಿ’ ಏಡ್ಸ್ ಸೋಂಕು ಮನುಷ್ಯನಿಗೆ ಅಂಟಿಕೊಳ್ಳಲು ಸಹಕರಿಸುವ ಡಿಎನ್‍ಎ ಭಾಗವನ್ನು ಕತ್ತರಿಸಿ ತೆಗೆದಿದ್ದ. ಈ ರೀತಿ ಎಡಿಟ್ ಮಾಡಲು ‘ಕ್ರಿಸ್ಟರ್’ ಎಂಬ ತಂತ್ರಜ್ಞಾನ ಬಳಸಿದ್ದನಾತ. ಇಂತಹುದೇ ತಂತ್ರಜ್ಞಾನ ಬಳಸಿ 2017 ರಲ್ಲಿ ಅಮೆರಿಕದ ‘ಒರೆಗಾನ್ ಹೆಲ್ತ್ ಆಂಡ್ ಸೈನ್ಸ್ ಯುನಿವರ್ಸಿಟಿ’ ಯಲ್ಲಿ 100ಕ್ಕೂ ಹೆಚ್ಚು ಮಾನವ ಭ್ರೂಣಗಳ ಡಿಎನ್‍ಎ ಎಡಿಟ್ ಮಾಡಲಾಗಿತ್ತು. ಅದು ಅಷ್ಠೆoದು ದೊಡ್ಡ ಸುದ್ದಿಯಾಗಲಿಲ್ಲ. ಕಾರಣ, ಆ ಭ್ರೂಣಗಳನ್ನು ಬಳಸಿ ಮಕ್ಕಳನ್ನು ಹುಟ್ಟಿಸಲಿಲ್ಲ. ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಾಗಿ ಅಂತಹ ಪ್ರಯೋಗ ಕೈಗೊಳ್ಳಲಾಗಿತ್ತು.

ವಿಜ್ಞಾನಿ ‘ಹಿ ಜೈಂಕುಯಿ’ ಏಡ್ಸ್ ಸೋಂಕು ಮನುಷ್ಯನಿಗೆ ಅಂಟಿಕೊಳ್ಳಲು ಸಹಕರಿಸುವ ಡಿಎನ್‍ಎ ಭಾಗವನ್ನು ಕತ್ತರಿಸಿ ತೆಗೆದಂತೆ ಡಿಎನ್‍ಎ ಯ ಯಾವ ಭಾಗವನ್ನು ಬೇಕಾದರೂ ಭವಿಷ್ಯದಲ್ಲಿ ಕತ್ತರಿಸಿ ತೆಗೆದು ಮಕ್ಕಳನ್ನು ಹುಟ್ಟಿಸಲು ಸಾಧ್ಯವಿದೆ. ಉದಾಹರಣೆಗೆ: ಕಿವಿ ಹೇಗೆ ಕೆಲಸ ಮಾಡಬೇಕು ಎಂಬ ಮಾಹಿತಿ ಡಿಎನ್‍ಎ ಯಲ್ಲಿ ಇರುತ್ತದೆ. ಆ ಭಾಗವನ್ನು ಕತ್ತರಿಸಿ ಮಗು ಹುಟ್ಟಿಸಿದರೆ ಅದಕ್ಕೆ ಕಿವಿಗಳೇ ಇರುವುದಿಲ್ಲ ಅಥವಾ ಆ ಕಿವಿಗಳಿಗೆ ಶಬ್ದ ಗ್ರಹಿಸುವ ಶಕ್ತಿ ಇರುವುದಿಲ್ಲ! ಆ ಮಗು ದೊಡ್ಡವನಾಗಿ ಅವನಿಗೆ ಮಗು ಜನಿಸಿದರೆ ಆ ಮಗುವಿಗೂ ಕಿವಿಗಳಿರುವುದಿಲ್ಲ ಅಥವಾ ಶ್ರಾವ್ಯ ಶಕ್ತಿ ಇರುವುದಿಲ್ಲ! ಸಾವಿರಾರು ವರ್ಷಕಳೆದರೂ ಅವನ ಸಂತಾನಗಳು ಹೀಗೇ ಮುಂದುವರಿಯುತ್ತವೆ! ಆದಕಾರಣ ಜೀನ್ ಎಡಿಟಿಂಗ್ ಚಾಲ್ತಿಗೆ ಬಂದರೆ ಭವಿಷ್ಯದಲ್ಲಿ ಒಂದೊಂದು ರೂಪದ ಚಿತ್ರಚಿಚಿತ್ರ ವಿಕಾರ ಮನುಷ್ಯರು ಜನಿಸಬಹುದು ಎಂಬ ಆತಂಕ ವಿಜ್ಞಾನಿಗಳಲ್ಲಿದೆ.

ಇದುವರೆಗೂ, ಜಗತ್ತಿನಲ್ಲಿ ಏಡ್ಸ್ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಕಾರಣ, ಚೀನಾ ವಿಜ್ಞಾನಿ ‘ಹಿ ಜೈಂಕುಯಿ’ ಏಡ್ಸ್ ಬಾರದಂತೆ ಡಿಎನ್‍ಎ ಎಡಿಟ್ ಮಾಡಿದ್ದಾನೆ. ಅದು ಒಳ್ಳೆಯದೇನೋ ನಿಜ, ಆದರೆ, ಮನುಷ್ಯನ ಡಿಎನ್‍ಎ ಎಡಿಟ್ ಮಾಡುವುದನ್ನು ಸದ್ಯದ ವೈದ್ಯಲೋಕ ಇನ್ನೂ ಒಪ್ಪಿಕೊಂಡಿಲ್ಲ. ಅದನ್ನು ಪ್ರಯೋಗಾಲಯದ ಮಟ್ಟಿಗೆ ಮಾತ್ರ ಸೀಮಿತಗೊಳಿಸಬೇಕು, ಯಾವುದೇ ಕಾರಣಕ್ಕೂ ಮನುಷ್ಯರಲ್ಲಿ ಗರ್ಭಧಾರಣೆಯವರೆಗೆ ತರಬಾರದು ಎಂದು ಅಮೆರಿಕವೂ ಸೇರಿದಂತೆ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ದೇಶದ ವಿಜ್ಞಾನಿಗಳು ಕಳೆದ ವರ್ಷ, ಅಂದರೆ 2016 ರಲ್ಲಿ ಸಮಾವೇಶವೊಂದರಲ್ಲಿ ತೀರ್ಮಾನಿಸಿದ್ದಾರೆ.

ಸದ್ಯ, ಮಾರಣಾಂತಿಕ ರೋಗಗಳಾದ ಕ್ಯಾನ್ಸರ್, ಏಡ್ಸ್ ಮುಂತಾದವುಗಳನ್ನು ನಿರ್ನಾಮ ಮಾಡಲು, ಆಯಾ ರೋಗಕ್ಕೆ ಕಾರಣವಾಗುವ ವರ್ಣತಂತುವಿನ ಭಾಗವನ್ನೇ ಕತ್ತರಿಸಿ ಹಾಕುವ ಮಟ್ಟಿಗೆ ಜೀನ್ ಎಡಿಟಿಂಗ್ ಮಾಡಲು ಒಪ್ಪಿಗೆ ನೀಡಬೇಕು ಎಂಬ ಅಭಿಪ್ರಾಯ ಬಹುಪಾಲು ಜೀವ ವಿಜ್ಞಾನಿಗಳು ಹಾಗೂ ವೈದ್ಯರದ್ದಾಗಿದೆ. ಒಂದು ವೇಳೆ ಈ ಕಾರ್ಯ ಸಾಧುವಾದರೆ, ಎಷ್ಠೆ ಮಾರಣಾಂತಿಕ ರೋಗಗಳನ್ನು ಭೂಮಂಡಲದಿಂದ ಹೊಡೆದು ಹಾಕಬಹುದು. ಅಲ್ಲದೇ ನಮಗೆ ಇಷ್ಟವಾಗುವ ಮಕ್ಕಳನ್ನೂ ಸಹ ಈ ಜೀನ್ ಎಡಿಟಿಂಗ್ ನಿಂದ ಪಡೆಯಬಹುದು. ಅಂದರೆ, ನೀಲಿ ಕಣ್ಣುಗಳಿರುವ, ಕೆಂಪು ಕೂದಲಿನ, ನೇರವಾದ ಮೂಗಿರುವ… ಇನ್ನೂ ಮುಂತಾದ ಸೌಂದರ್ಯಗಳಿಂದ ಕೂಡಿದ ಮಗು. ಆದರೆ ಅಂತಹ ಸಂದರ್ಭಕ್ಕೆ ಸಮಾಜ ಸಿದ್ಧಗೊಂಡಿಲ್ಲ.

Leave a Reply

Your email address will not be published.