ಜೀವಸಂಬೋಧನಂ ವಸಂತತಿಲಕೆಯ ಕಥೆ

-ಡಾ.ಚಂದ್ರಕಲಾ ಹೆಚ್.ಆರ್.

ಇದು ಶಾಸ್ತ್ರಗ್ರಂಥವಾಗಿದ್ದರೂ ಕಾವ್ಯಲಕ್ಷಣಗಳನ್ನು ಪ್ರತಿಧ್ವನಿಸುತ್ತದೆ. ಗಾದೆ, ಉಪಮೆಗಳು, ಒಗಟು ಯಥೇಚ್ಛವಾಗಿವೆ. ಜೈನ ಮತೀಯ ಗ್ರಂಥವಾದರೂ ಪರಮತ ಸಹಿಷ್ಣುತೆ, ವಿಶಾಲದೃಷ್ಟಿ ಕಂಡುಬರುತ್ತದೆ. ವೃತ್ತ, ಕಂದ, ಗದ್ಯ, ರಗಳೆ ರಚನೆಯಲ್ಲಿದೆ. ಗಾದೆಗಳು, ಪಡೆನುಡಿಗಳು ಬೆರೆತ ಕಾವ್ಯಶೈಲಿಯಿದೆ.

ಹನ್ನೆರಡನೆಯ ಶತಮಾನವನ್ನು ಸುವರ್ಣ ಕಾಲಘಟ್ಟವೆಂದು ಪರಿಭಾವಿಸುವುದಕ್ಕೆ ಶಿವಶರಣರ ವಚನ ಸಾಹಿತ್ಯವು ಸಾಮಾಜಿಕ ಮತ್ತು ಸಾಂಸ್ಕøತಿಕ ಪಲ್ಲಟಗಳನ್ನು ಕನ್ನಡನಾಡಿನ ಬದುಕಿನಲ್ಲಿ ದಾಖಲಿಸಿದ ಕಾರಣ ಮತ್ತು ಧರ್ಮದ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಬರೆದ ಕಾರಣವೂ ಆಗಿದೆ. ವೀರಶೈವಧರ್ಮ ಜನಸಾಮಾನ್ಯರನ್ನು ಎಲ್ಲಾ ತಾರತಮ್ಯಗಳಿಂದ ಬಿಡುಗಡೆಗೊಳಿಸಲು ವೇದಿಕೆಯೊಂದನ್ನು ನಿರ್ಮಿಸಿದ ಕಾರಣವೂ ಆಗಿದೆ.

ಇಂತಹ ಸಂದÀರ್ಭದಲ್ಲಿ ಬಂದ ಜೈನ ಕೃತಿಗಳನ್ನು ಧಾರ್ಮಿಕ ಉದಾರವಾದದ ದೃಷ್ಟಿಯಿಂದ ಗಮನಿಸಿದಾಗ ಕುಂದಕುಂದಾಚಾರ್ಯರ ತತ್ವಗಳನ್ನು ಕನ್ನಡ ಜಿನಸಮಾಜಕ್ಕೆ ಸರಳವಾದ ಸುಗಮ ಮಾಧ್ಯಮಗಳಲ್ಲಿ ಸಂವಹನ ಮಾಡುವ ಉದ್ದೇಶದಿಂದ ಹುಟ್ಟಿದ ಕೃತಿಗಳಲ್ಲಿ ಬಂಧುವರ್ಮನ ಜೀವಸಂಬೋಧನೆಯೂ ಒಂದು. ಜೀವವನ್ನು ಸಂಬೋಧಿಸಿ, ಜೈನದ್ವಾದಶಾನುಪ್ರೇಕ್ಷೆಗಳನ್ನು ಬೋಧಿಸುವ ಕ್ಲಿಷ್ಟಕರ ಸವಾಲನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ ಮುಖ್ಯ ಕೃತಿಯಾಗಿದೆ.

ಜೈನ ಪುರಾಣಗಳಲ್ಲಿ ಘನವಾಗಿ ಚರ್ಚಿಸುವ ಭವಾವಳಿಗಳ ಸ್ವರೂಪಗಳನ್ನು ಸರಳವಾಗಿ ನೇರವಾಗಿ ಈ ಕೃತಿಯಲ್ಲಿ ಮಂಡಿಸಲಾಗಿದ್ದು ದೇಹ ಮತ್ತು ಜೀವಗಳು ಬದಲಾಗುವುದರ ಮೂಲಕ ಸಂಸಾರದ ಸಂಬಂಧಗಳು ಅಸಂಗತವಾಗುವುದಿದೆ. ತಾಯಿ, ಅಕ್ಕ, ತಂಗಿಯರು ಪತ್ನಿಯರಾಗುವ, ತಂದೆ ಹಾಗೂ ಅಣ್ಣ ತಮ್ಮಂದಿರು ಗಂಡಂದಿರಾಗುವ ಸಂಸಾರದ ವಿಚಿತ್ರ ಸನ್ನಿವೇಶವನ್ನು ದೇಹ ಮತ್ತು ಜೀವಸಂಬಂಧದ ನೆಲೆಯಲ್ಲಿ ಚರ್ಚಿಸಲಾಗಿದೆ. ತನು ಧನಗಳು ಜೀವಕ್ಕಿಂತ ಹೊರಗಿನವೆಂದು, ಕರ್ಮನಿವಾರಣೆ ಮಾಡಿಕೊಂಡು ದಿವ್ಯ ಸುಖವನ್ನು ಪಡೆಯುವ ಮಾರ್ಗವೆಂದು ಹೇಳುತ್ತಾ ಮೋಕ್ಷದ ಕಲ್ಪನೆಯನ್ನು ಕತೆಗಳ ನಿದರ್ಶನದೊಂದಿಗೆ ಹೇಳುತ್ತಾ ಕಾವ್ಯ ಸಾಗಿದೆ.

ಬಂಧುವರ್ಮ ಕ್ರಿ.ಶ. ಸು. 1200ರ ಆಸುಪಾಸಿನಲ್ಲಿದ್ದು ಉಪೇಕ್ಷೆಗೆ ಗುರಿಯಾದ ಕವಿ, ಹರಿವಂಶಾಭ್ಯುದಯ  ಮತ್ತು ಜೀವಸಂಬೋಧನೆ ಎಂಬ ಎರಡು ಕಾವ್ಯಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಹೆಗ್ಗಳಿಕೆ ಈತನದು.  ಹರಿವಂಶಾಭ್ಯುದಯವು ನೇಮಿನಾಥ ಪುರಾಣವಾಗಿದ್ದು 14 ಆಶ್ವಾಸಗಳ ಚಂಪೂಕಾವ್ಯವಾಗಿದೆ. ಜೀವಸಂಬೋಧನೆ ಜೀವ, ಆತ್ಮವೇ ನಾಯಕನಾಗಿರುವ ವಿಶಿಷ್ಟ ಕೃತಿ. ಎಲ್ಲಾ ಕಾವ್ಯಗಳಿಗಿಂತ ಭಿನ್ನ ಕಾವ್ಯವೆನ್ನಬಹುದಾದ ಲಕ್ಷಣಗಳಿವೆ.  ಧರ್ಮ- ಕಾವ್ಯಧರ್ಮದ ಜೊತೆಗೆ ಮಾನವಧರ್ಮವನ್ನು ಕಾವ್ಯದ ಜೀವಸಂಬೋಧನೆಯಾಗಿ ಇಟ್ಟುಕೊಂಡಿದ್ದಾನೆ.

ಬಂಧುವರ್ಮನ ಮೂರನೆಯ ಕೃತಿ ಸತಿಧರ್ಮಸಾರವೂ ದೊರೆತಿದೆ. ಈತನು ತನ್ನ ಪೂರ್ವಕವಿಗಳನ್ನು ಸ್ಮರಿಸಿಲ್ಲ ಮತ್ತು ತನ್ನ ವಿವರಗಳನ್ನು ಎಲ್ಲೂ ಹೇಳಿಕೊಂಡಿಲ್ಲ. ಈತನನ್ನು ಕ್ರಿ.ಶ. 1235 ರಲ್ಲಿದ್ದ  ಕಮಲಭವ ತನ್ನ ಪುರಾಣದಲ್ಲಿ ‘ಜಿನಸಮಯ ಪ್ರಕಾಶಕೃತ ಸತ್ಕವಿ ಪಂಪನ ಪೆಂಪುವೆತ್ತ ಪೊನ್ನನ ಕವಿ ನಾಗಚಂದ್ರನ ನೆಗಳ್ತೆಯ ರನ್ನನ ಸಂದ ಬಂಧುವರ್ಮನ’ ಎಂದು ಉಲ್ಲೇಖವಾಗಿರುವುದರಿಂದ ಪಂಪ ಪೊನ್ನಾದಿಗಳ ಸರಿಸಮವಾಗಿದ್ದನೆಂದು ತಿಳಿದುಬರುತ್ತದೆ.

ಬಂಧುವರ್ಮನ ಜೀವ ಸಂಬೋಧನಂಗಿಂತ ಹಿಂದೆಯೇ ಸಂಸ್ಕøತ ಅಥವಾ ಪ್ರಾಕೃತದಲ್ಲಿ ಜೀವಸಂಬೋಧನೆ ಎಂಬ ಕೃತಿಯಿದ್ದಿರಬಹುದಾಗಿದೆ. ಇದು ದ್ವಾದಶಾನುಪ್ರೇಕ್ಷಗಳ ಕೃತಿಯಾಗಿದೆ. ಅಧ್ರುವಾನುಪ್ರೇಕ್ಷೆ, ಅಶರಣಾನುಪ್ರೇಕ್ಷೆ, ಏಕತ್ವಾನು ಪ್ರೇಕ್ಷೆ, ಅನ್ಯತ್ವಾನುಪ್ರೇಕ್ಷೆ, ಸಂಸಾರಾನುಪ್ರೇಕ್ಷೆ, ಲೋಕಾನುಪ್ರೇಕ್ಷೆ, ಅಶುಚಿತ್ವಾನುಪ್ರೇಕ್ಷೆ, ಅಸ್ರವಾನು ಪ್ರೇಕ್ಷೆ, ಸಂವರಾನುಪ್ರೇಕ್ಷೆ, ನಿರ್ಜರಾನುಪ್ರೇಕ್ಷೆ, ಬೋಧಿದುರ್ಲಭಾನು ಪ್ರೇಕ್ಷೆ, ಧರ್ಮಾನುಪ್ರೇಕ್ಷೆಗಳಲ್ಲಿ ಕ್ರಮವಾಗಿ ಮುಂಡಕೌಶಿಕನ ಕಥೆ, ವರಾಂಗನ ಕಥೆ, ರಾವಣನಚರಿತ್ರೆ, ವಸಂತತಿಲಕೆಯೆಂಬ ವೇಶ್ಯೆಯಕಥೆ, ಸುಭೌಮರಾಜನ ಕಥೆ, ರೋಷಕಷಾಯ-ದೀಪಾಯನನ ಕಥೆ, ಮಾನಕಷಾಯ-ಬಾಹುಬಲಿಯ ಕಥೆ, ಮಾಯಕಷಾಯ-ಪುಷ್ಪದಂತ  ಕಂತಿಯರ ಕಥೆ, ಲೋಭಕಷಾಯ-ಪಟಹಸ್ತನ ಕಥೆ, ಧನ್ಯಕುಮಾರಚರಿತ್ರೆ, ಸೋಮಿಲನ ಕಥೆ, ಧನಪತಿಯ ಕಥೆ, ಉದ್ಧಾಯನನ ಪ್ರಭಾವತಿ ಕಥೆ, ಧನದತ್ತನÀ ಕಥೆಗಳಿವೆ. ಇಲ್ಲೆಲ್ಲ ಕಂಡುಬರುವುದು ಕವಿಯ ಹೃದಯಪರಿಪಕ್ವತೆ. ಜೈನಧರ್ಮದಲ್ಲಿ ನೆಲೆಗೊಂಡ ಕವಿಮನಸಿಗೆ ಮಾನವಧರ್ಮ ಅಪ್ಯಾಯಮಾನವಾಗಿರುವುದು ಆಶ್ಚರ್ಯವನ್ನುಂಟುಮಾಡುತ್ತದೆ. ಮೇಲ್ನೋಟಕ್ಕೆ ಶಾಸ್ತ್ರಗ್ರಂಥವೆನಿಸಿದರೂ ಉತ್ತಮ   ಕಾವ್ಯಲಕ್ಷಣಗಳನ್ನೊಳಗೊಂಡ ಕೃತಿಯಾಗಿದೆ.

ಈ ಕೃತಿಯಲ್ಲಿ ಅನುಶೀಲನಕ್ಕೆ ಅಗತ್ಯವಾದ 12 ತೆರನಾದ ಅನುಪ್ರೇಕ್ಷೆಗಳಿವೆ. ಈ ಹನ್ನೆರಡು ಅನುಪ್ರೇಕ್ಷೆಗಳಲ್ಲಿ ಅಡಗಿರುವ ತತ್ವವಾದರೂ ಹೆಂಡತಿ, ಮಕ್ಕಳು, ಸಂಪತ್ತು, ಶರೀರಾದಿಗಳೆಲ್ಲವೂ ಕ್ಷಣಿಕವಾದುದು. ಏನೇ ಸಂಸಾರ ವೈಭೋಗವಿದ್ದರೂ ಒಂದಲ್ಲ ಒಂದು ದಿನ ಬಿಡಬೇಕಲ್ಲವೇ? ಎಂಬ ಜುಗುಪ್ಸೆಯನ್ನೂ, ಮಾನವಜನ್ಮವೆಂಬುದು ಪೂರ್ವಜನ್ಮದ ಪುಣ್ಯಫಲವಾದ್ದರಿಂದ ಪಾಪಕರ್ಮಗಳಲ್ಲಿ ನಿರತರಾಗದೆ ಮೋಹಪಾಶದಿಂದ ಮುಕ್ತವಾಗುವ ತಿಳಿವಳಿಕೆಯಿದೆ. ಈ ಜೀವವು ಹಲವು ಅವಸ್ಥೆಗಳನ್ನು ದಾಟಿ ತಾಯಿ, ಅಕ್ಕ, ತಂಗಿಯರೇ ಪತ್ನಿಯಾದರೆ ಹೇಗೆಂಬ, ತಂದೆ, ಅಣ್ಣ, ತಮ್ಮಂದಿರೇ ಗಂಡನಾದರೆ ಹೇಗೆಂಬ ಜುಗುಪ್ಸೆ ಹುಟ್ಟಿಸುತ್ತದೆ.

ವಿಚಿತ್ರ ಪರಿಸ್ಥಿತಿಯಲ್ಲಿ ತಪಸ್ವಿಗಳನ್ನು ಕಾಡುವ ಪಾಪಸ್ರವವು ಸಂಸಾರಿಗಳನ್ನು ಕಾಡುತ್ತದೆ. ಶರೀರವು ದುಃಖದಿಂದ ಮುಕ್ತನಾಗಿ ಸುಖವನ್ನು ಪಡೆಯಬೇಕಾದರೆ ಧರ್ಮದತ್ತ ನಡೆಯಬೇಕೆಂಬುದಿದೆ. ಶರೀರ ಸುಖ ಪಡೆದ ಎಲ್ಲಾ ವಸ್ತುಗಳು ಕೆಡುತ್ತಲೇ ಜೀವನದಲ್ಲಿರುವಾಗಲೇ ತಪೋಮಾರ್ಗವನ್ನು ಪಡೆಯಬೇಕೆಂಬುದನ್ನು ವಿದಿತಪಡಿಸುತ್ತಾರೆ. ಉತ್ತಮಫಲಪ್ರಾಪ್ತಿಗಾಗಿ ಧರ್ಮದಿಂದ ನಡೆಯುವುದೇ ಉತ್ತಮ ಮಾರ್ಗವೆಂದು ಸಾರುತ್ತದೆ.

ರೂಪು, ಆಯ, ಗೂಣ, ಶಕ್ತಿ, ತೇಜಸ್ಸು, ವಿನಯ, ಚಾತುರ್ಯ, ಶೌರ್ಯ, ಸೌಂದರ್ಯ, ಧೈರ್ಯ ಲಕ್ಷಿಸಿ ಹೆಂಡತಿ ಮಗಳು. ಹಣ, ಆಸ್ತಿಗಳು ಲಭಿಸುವುದರಲ್ಲಿ ಏನು ಸುಖ ಲಭಿಸಲಾರದು, ಮದುವೆ ಮಕ್ಕಳಿಂದ ತಾತ್ಕಾಲಿಕ ಸುಖದಲ್ಲಿದ್ದರೂ, ಈ ಜೀವಕ್ಕೆ ಸುಖವಿಲ್ಲ. ಶರೀರವನ್ನು ನಂಬಿ ಬಾಳಬಾರದು. ಶರೀರವೆಂಬುದು ಕ್ಷಣಿಕಸುಖ ಪಡೆಯುವ ಸಾಧನವಾಗಿದೆ. ಅಶಾಶ್ವತ ಬದುಕಿನ ಮರ್ಮವನ್ನು ಅರಿಯಲು ಭವರೋಗದಿಂದ ಮುಕ್ತರಾಗಿ ಎಂಬುದೇ ಜೀವಸಂಬೋಧನೆಯ ಕಥೆ.

ಸುರಧನುವೆಂತುಂಟಂತೆ ವಿಳಸಜ್ಜಳಮಿದ್ಬುದವೆಂತುಟಂತೆ

ಪೆರ್ದರೆಯಿದವೆಂತುಟಂತೆ ಸಂಜೆಯ ರಂಜನೆಯೆಂತುಟಂತೆ

ಭೂಧರನದಿಯೆಂತುಟಂತೆ ಮುಗಿಲೊಡ್ಡಣದಾಕೃತಿಯೆಂತುಂಟಂತೆ

ಮರ್ತೃರ ತನುವುಂ ಕಳತ್ರಜನಮಂ ಧನಮಂ ಬಗೆದೆಂತು ನೋವಿಲ್ದಾಡಂ

ನೀರಮೇಲಣ ಗುಳ್ಳೆಯಂತೆ, ಇಂದ್ರಧನಸ್ಸಿನಂತೆ, ಮಿಂಚಿನಂತೆ, ಸಂಜೆಯ ರಂಜನೆ, ಭೂಧರನದಿ ಇವಾವುದೂ ಶಾಶ್ವತವಲ್ಲ ಮನುಷ್ಯನ ಮೂಲ ಪ್ರವೃತ್ತಿಗಳಲ್ಲಿ ಹಸಿವು, ನಿದ್ದೆ, ಮೈಥುನ ಎಷ್ಟು ಪ್ರಾಮುಖ್ಯವಾಗುತ್ತದೆ ಎಂಬುದನ್ನು, ಮನುಷ್ಯ ಸಂಬಂಧಗಳು ಹೇಗೆ ಕಾಮವಿಕಾರಗಳಿಂದ ಮಾನವತೆಯ ಸಂಬಂಧಗಳನ್ನು ಮೀರಿ ಕಾಮವೊಂದೇ ಗೆದ್ದು, ಅದರ ತೃಪ್ತಿಗಾಗಿ ಮನುಷ್ಯ ಸಂಬಂಧಗಳು ಭಾವನಾತ್ಮಕ ವಲಯದಿಂದ ಹೊರನಿಲ್ಲುವುದನ್ನು ಕಾಣಬಹುದಾಗಿದೆ.

ಸಾರಂ ಸಂಸಾರಕ್ಕಾ

ಧಾರಂ ಸಲೆ ದೇಹಿಗೆಂತುಮೋರೊಂದೆಡೆಯೊಳ್

ನೀರುಂ ಕೂಳುಂ ಕೊಲ್ವೊಡೆ

ಬಾರಿಪರಾರಾನೆಗೊಲೆಯನುಗ್ರಾಂತಕನಾ

ಸಾರಮಣಮಿಲ್ಲದೀ ಸಂ

ಸಾರದೊಳತಿಘೋರದೊಳ್ ಗಭೀರದೊಳುಗ್ರಾ

ಕಾರದೊಳುಂಟೊಂದೆನಗಾ

ಧಾರಂ ಜಿನಧರ್ಮಮೊಂದೆ ಬಗೆ ನೀಂ ಜೀವಾ

ತೀರ್ಥಂಕರರ ಚರಿತ್ರಯಾಧಾರಿತ ಜೈನಕಾವ್ಯಗಳು ಆರಂಭದಲ್ಲಿ ವೈಭೋಗದ ಜೇವನವನ್ನು, ನಂತರದಿ ವೈರಾಗ್ಯದ ಜೀವನವನ್ನು, ಮೋಕ್ಷತುಡಿತಮಾರ್ಗಗಳನ್ನು ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಂತೆ ಚಿತ್ರಿಸಿರುವುದನಂತರದಲ್ಲಿ ಜೀವವನ್ನೆ ಕಥೆಯ ನಾಯಕನನ್ನಾಗಿಸಿಕೊಂಡು ಜೀವಧರ್ಮದನ್ವಯ ಸಾರವಿದ್ದರೆ ಸಂಸಾರ. ಆಹಾರ, ನೀರು ಇತ್ಯಾದಿಗಳನ್ನು ದೇಹ ಆಶ್ರಯಿಸಿಕೊಂಡಿರುತ್ತದೆ. ಇವುಗಳನ್ನು ಕೊಂದು ಬದುಕುವುದೊಂದು ಪಾರಮಾರ್ಥಿಕತೆಯೆ ವ್ಯಾಖ್ಯಾನವೆಂದು ಜೀವವಿರುವ ತನಕ ಕಾಮತೃಷೆಯಸಾಗರದಲ್ಲಿ ಮಿಂದೇಳುವುದನ್ನು ಇಲ್ಲಿನ ಕಥೆಗಳು ನಿರೂಪಿಸಿವೆ. ಅಂತಹ ಒಂದು ಕತೆಯೇ ವಸಂತತಿಲಕೆಯೆಂಬ ವೇಶ್ಯೆಯ ಕಥೆ.

ವಸಂತತಿಲಕೆ ವೇಶ್ಯೆಯ ಕಥೆ

ಉಜ್ಜಯಿನಿ ನಗರದಲ್ಲಿ ವಸಂತತಿಲಕೆ ಎಂಬ ವೇಶ್ಯೆ ಇದ್ದಳು. ತರುಣಿಯಾಗಿದ್ದಾಗಲೇ ಬಸುರಿಯಾದಳು. ನಾನಾ ವಿಧದ ರೋಗಕ್ಕೆ ಈಡಾಗಿ ದುರ್ವಾಸನೆಯಿಂದ ನಾರತೊಡಗಿದಳು. ಗರ್ಭದ ಬಗೆಗೆ ದ್ವೇಷ ಹುಟ್ಟಿತು. ಇಬ್ಬರು ಮಕ್ಕಳು ಗಂಡು, ಹೆಣ್ಣು ಇಬ್ಬರು ದಾಸಿಯರನ್ನು ಕರೆದು ಬೇರೆ ಬೇರೆ ದಿಕ್ಕಿನಲ್ಲಿ ಎಸೆಯವಂತೆ ಆಜ್ಞೆಮಾಡಿದಳು. ಪೂರ್ವಕ್ಕೆ, ಪಶ್ಚಿಮಕ್ಕೆ ಮಗುವನ್ನು ಎಸೆದು ಬಂದಾಗ ಪೂರ್ವದಿಕ್ಕಿನಲ್ಲಿ ಎಸೆದಿದ್ದ ಮಗುವನ್ನು ಕುಬೇರಕಾಂತನೆಂಬ ಸೆಟ್ಟಿಯ ಸೇವಕರು ಹೆಣ್ಣು ಮಗುವನ್ನು ಎತ್ತೊಯ್ದು ಕಮಲೆ ಎಂದು ಹೆಸರಿಟ್ಟು ಬೆಳೆಸಿದನು. ಪಶ್ಚಿಮದಲ್ಲಿ ಎಸೆಯಲಾಗಿದ್ದ ಗಂಡು ಮಗುವನ್ನು ನರದೇವನೆಂಬ ಸೆಟ್ಟಿಯು ಸಾಕಿ ಧನದೇವನೆಂದು ಹೆಸರಿಟ್ಟನು.

ಈತ ಯುವಕನಾದ ಮೇಲೆ ಅವನಿಗೆ ಕಮಲೆಯನ್ನು ಕೊಟ್ಟು ದೈಭವದಿಂದ ಮದುವೆ ಮಾಡಿ ಸುಖದಿಂದ ಜೀವಿಸುತ್ತಿರಲು ನರದೇವನು ತೀರ್ಥಯಾತ್ರೆಗೆ ಹೋದನು. ತಂದೆಯ ಆಸ್ತಿ ಕರಗಲಾಗಿ ಕಮಲೆಗೆ ದೇಶ ತಿರುಗಿ ವ್ಯಾಪಾರಮಾಡಿ ಹಣ ಗಳಿಸುತ್ತೇನೆಂದು ಹೇಳಿ ಮನೆಬಿಟ್ಟು ತೆರಳುತ್ತಾನೆ. ಉಜ್ವಯಿನಿಗೆ ಬರುತ್ತಾನೆ. ವ್ಯಾಪಾರ ಹೆಚ್ಚಾಗಿ ಲಾಭಗಳಿಸಿ ಶ್ರೀಮಂತನಾಗುತ್ತಾನೆ.  ಶ್ರೀಮಂತಿಕೆ ಹೆಚ್ಚಾದಷ್ಟು ಸುಖಾಪೇಕ್ಷೆ ಹೆಚ್ಚಾಗುತ್ತದೆ. ಸೂಳೆಗೇರಿಯಲ್ಲಿ ವಸಂತತಿಲಕೆಯನ್ನು ಕಂಡು ಮೋಹಿತನಾಗಿ ಅವಳನ್ನು ಕೂಡಿ ಅವಳ ಮನೆಯಲ್ಲಿದ್ದು ಕಾಲ ಕಳೆಯುತ್ತಾ ಪತ್ನಿ ಕಮಲೆಯನ್ನು ಮರೆತನು. ಹೀಗಿರಲು ಧನದೇವನಿಗೆ ವಸಂತತಿಲಕೆಗೆ ಗಂಡುಮಗುವಾಯಿತು.

ಇತ್ತ ಮಧುರೆಯಲ್ಲಿ ಚಿಂತಿತಳಾಗಿದ್ದ ಕಮಲೆಯನ್ನು ಕಂಡ ಜೈನಮುನಿಯೊಬ್ಬನು ಅವಳಿಂದ ಭಿಕ್ಷೆಯನ್ನು ಸ್ವೀಕರಿಸದೆ ಹೊರಟುಹೋಗಲು ದಾಸಿಯವರಿಂದ ಕಾರಣವನ್ನು ಕೇಳಿ ತಿಳಿದುಕೊಳ್ಳುತ್ತಾಳೆ. ಅವರು ಕಮಲೆ ಸಹೋದರನನ್ನ ಮದುವೆಯಾಗಿರುವ ಇವಳ ಗಂಡ ತಾಯಿಯೊಡನೆ ಸಂಸಾರ ಮಾಡುತ್ತಿರುವ ವಿಚಾರತಿಳಿದು ಬರಲು ದೇಹನ್ಯಾಸಕ್ಕೆ ತೊಡಗುತ್ತಾಳೆ. ಮುನಿಗಳು ಹಾಗೆ ಮಾಡಬೇಡ ಪ್ರತ್ಯಕ್ಷವಾಗಿ ಕಂಡುಬಾ ಎನಲು ಈಕೆ ಕೊರವಂಜಿ ವೇಷಧರಿಸಿ ಉಜ್ಜಯನಿಗೆ ಹೋದಳು. ಅಲ್ಲಿ ವಸಂತ ತಿಲಕೆಯ ಮನೆ ವಿಚಾರಿಸಿ ಹೋಗಿನೋಡಲು ಗಂಡ ಧನದೇವÀ ತಾಯಿ ವಸಂತತಿಲಕೆಯೊಡನೆ ಮಂಚದ ಮೇಲೆ ಕುಳಿತಿದ್ದನು. ಕಮಲೆಯನ್ನು ಗೊರವಬ್ಬೆ ಎಲ್ಲಿಂದ ಬಂದೆ ಎನ್ನುತ್ತಾನೆ. ದೇಶಾಂತರದಿಂದ ತಮ್ಮ ಸಂಪತ್ತಿನ ಬಲದ ಹಿರಿಮೆಯನ್ನು ಕೇಳಿ ಬಂದೆ ಎನಲು ತೊಟ್ಟಲಲ್ಲಿ ಮಲಗಿದ್ದ ಮಗುವಿನ ಅಳುವನ್ನು ತೊಟ್ಟಲು ತೂಗುತ್ತಾ,

ಜೋಂ, ನೀಂ ಮಗನೇ ತಮ್ಮನೆ

ತಮ್ಮನೆ, ನೀನಳಿಯಮ್ಮ, ಮೆಯ್ದ ನಾ ಕಿರಿಯಮ್ಮ

ಜೋ ನಿಮ್ಮಬ್ಬೆಗೆ ಮೊಮ್ಮನೆ

ಜೋ ನಿಮ್ಮಮ್ಮಂಗೆ ತಮ್ಮನಪ್ಪನೆ ಜೋಜೋ

ನೀ ಮಗ ಕಮಲೆಗೂ ಮಗ (ಕಾರಣ ಗಂಡನಿಂದ ಹುಟ್ಟಿದ ಕೂಸು) ತಮ್ಮನೂ ಹೌದು ಅವಳಿಗೆ. ಕಾರಣ ಅಮ್ಮನ ಹೊಟ್ಟೆಯಲ್ಲಿ ಹುಟ್ಟಿದೆ. ಮೈದುನನೂ ಆಗಿದ್ದಾನೆ ಕಾರಣ ಗಂಡನ ತಮ್ಮ. ಕಮಲೆ ಚಿಕ್ಕಮ್ಮನೂ, ಮಗುವಿನ ತಾಯಿ- ವಸಂತತಿಲಕೆಗೆ ಮೊಮ್ಮಗನೂ ಹೌದು. ನಾನಾ ಸಂಬಂಧಗಳನ್ನು ಪೋಣಿಸಿ ಹಾಡಿದ ಹಾಡು ಒಗಟಿನಂತಿದ್ದು ಧನದೇವ ವಸಂತತಿಲಕೆ ಅರ್ಥವನ್ನು ಬಿಡಿಸಿಕೇಳುತ್ತಾರೆ. ಕಥೆ ಕೇಳಿದ ನಂತರ ಧನದೇವನಿಗೆ, ವಸಂತತಿಲಕೆಗೆ ವೈರಾಗ್ಯವುಂಟಾಗಿ ಸಂಪತ್ತನ್ನು ದಾನಮಾಡಿ ವೈರಾಗ್ಯವನ್ನು ತಾಳುತ್ತಾರೆ. ತಮ್ಮ ಪಾಪಕ್ಕೆ ಕಾರಣವನ್ನು ಕೇಳುತ್ತಾರೆ. ಪೂರ್ವಜನ್ಮದಲ್ಲಿ ಮೂವರು ತಂದೆ ಮಕ್ಕಳಾಗಿದ್ದು ಜ್ಞಾನಿಗಳನ್ನು ಹಳಿದ ಕಾರಣದಿಂದ ಪಾಪಿಗಳಾದರೆಂದು ಹೇಳುವ ಮುಖೇನ ತಪಸ್ಸಿನಿಂದ ಶುದ್ಧರಾದರೆಂದು ಬಂಧುವರ್ಮ ಹೇಳಿದ ಕಥೆಯಲ್ಲಿ ಈಡಿಪಸ್ ಕಥೆ ಕಾಣಿಸುತ್ತದೆ.

ಜೀವವು ಜನ್ಮಾಂತರವನ್ನು ಹೊಂದಿ ಹುಟ್ಟುವಾಗ ಮಗನೇ ತಂದೆಯಾಗುವ, ಮಗಳೇ ಹೆಂಡತಿಯಾಗುವ ವಿಚಿತ್ರ ಸಂಬಂಧಗಳನ್ನು ಉಲ್ಲೇಖಿಸಿರುವ ರೀತಿ ಮೈನವಿರೇಳಿಸುತ್ತದೆ. ಹೆಣ್ಣು ವೇಶ್ಯೆಯಾದ ಕಾರಣದಿಂದ ತಾಯ್ತನದಿಂದ ವಂಚಿತಳಾಗುವುದು. ವೃತ್ತಿಯ ಕಾರಣದಿಂದ ತಾಯ್ತನದ ಸುಖಕ್ಕಿಂತ ಕಾಡುವ ಸಾಮಾಜಿಕ ಭಯ, ಕಾಮಕ್ಕೆ ಕಣ್ಣಿಲ್ಲವೆಂಬ ನುಡಿಗಟ್ಟು ಅನೇಕ ಅರ್ಥಗಳನ್ನು, ಪ್ರಶ್ನೆಗಳನ್ನು ಹೊಳೆಯಿಸಿ, ಮನಃಪಟಲದಲ್ಲುಳಿಸಿ, ಓದುಗರಿಗೆ ಅಭೀಪ್ಸೆ ಹುಟ್ಟುವ ಬದಲು ಜುಗುಪ್ಸೆ ಹುಟ್ಟಿಸುತ್ತದೆ. ದೇಹವನ್ನು ಚಿಗುಟಿಕೊಳ್ಳಬೇಕಿನಿಸುತ್ತದೆ. ದೇಹದ ಮೇಲೆ ವೈರಾಗ್ಯ ಹುಟ್ಟಿಬಿಡುತ್ತದೆ. ಇಂದಿನ ಅನೇಕ ಕುಟುಂಬದೊಳಗಿನ ಅತ್ಯಾಚಾರದ ವಿದ್ಯಮಾನಗಳು, ತಂದೆಯೇ ಮಗಳ ಮೇಲೆ ನಡೆಸಿದ ಅತ್ಯಾಚಾರದ ಸುದ್ದಿಗಳು ಬೆಚ್ಚಿಬೀಳಿಸುವಾಗ ಬಂಧುವರ್ಮನ ವಸಂತತಿಲಕೆಯ  ಕಥೆ ಮೈ ನವಿರೇಳಿಸುತ್ತದೆ ಅಥವಾ ಇಂದಿನ ಮನೋವಿಕಾರಗಳನ್ನು 12 ಶತಮಾನದÀ ಅಥವಾ ಅದಕ್ಕೂ ಹಿಂದಿನ ವಡ್ಡರಾಧನೆ ಕಥೆಯಲ್ಲಿನ ಕಾರ್ತಿಕ ರಿಷಿಯ ಕಥೆಯಲ್ಲಿ ತಂದೆ ಮಗಳನ್ನು ಮದುವೆಯಾದರೆ ಇಲ್ಲಿ ಮಗನನ್ನು ತಾಯಿ ಸೇರುವ ಮೊಮ್ಮಗನ ಹಡೆಯುವ ವಿಲಕ್ಷಣ ಸಂದರ್ಭಗಳೆರಡೂ ಇಂದಿನ ವ್ಯವಸ್ಥೆಯನ್ನು ಅನ್ಯವಿಧಗಳಲ್ಲಿ ಕನ್ನಡಿಸುತ್ತಿವೆಯೇ?  ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ಜೀವಸಂಬೋಧನೆ ಕೃತಿಯು ಶಾಸ್ತ್ರಗ್ರಂಥವಾಗಿದ್ದರೂ ಕಾವ್ಯಲಕ್ಷಣಗಳನ್ನು ಪ್ರತಿಧ್ವನಿಸುತ್ತಿದೆ. ಗಾದೆ, ಉಪಮೆಗಳು, ಒಗಟು ಯಥೇಚ್ಛವಾಗಿವೆ. ಜೈನ ಮತೀಯ ಗ್ರಂಥವಾದರೂ ಪರಮತ ಸಹಿಷ್ಣುತೆ, ವಿಶಾಲದೃಷ್ಟಿ ಕಂಡುಬರುತ್ತದೆ. ವೃತ್ತ, ಕಂದ, ಗದ್ಯ, ರಗಳೆ ರಚನೆಯಲ್ಲಿದೆ. ಗಾದೆಗಳು, ಪಡೆನುಡಿಗಳು ಬೆರೆತ ಕಾವ್ಯಶೈಲಿಯಿದೆ.

*ಲೇಖಕಿ ಕೃಷ್ಣರಾಜನಗರ ತಾಲೂಕಿನ ಹಂಪಾಪುರ ಗ್ರಾಮದವರು; ಪ್ರಸ್ತುತ ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

 

Leave a Reply

Your email address will not be published.