ಜೆ.ಎನ್.ಯು. ಪರಂಪರೆ ರಕ್ಷಣೆಗೆ ವಿದ್ಯಾರ್ಥಿ ಹೋರಾಟ

ಕೆಲವರು ಜನತೆಯನ್ನು ನಂಬಿಸಲಿಕ್ಕೆ ಯತ್ನಿಸುತ್ತಿರುವಂತೆ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‍ಯು) ಶಿಕ್ಷಕರು ಮತ್ತು ಪ್ರಾಧ್ಯಾಪಕರು ಹುಡುಗರ ತಲೆಯಲ್ಲಿ ಮಾಕ್ರ್ಸ್‍ವಾದಿ ವೈಚಾರಿಕತೆಯನ್ನಾಗಲೀ, ಎಡಪಂಥೀಯ ಸಿದ್ಧಾಂತವನ್ನಾಗಲೀ ತುರುಕಲುಯತ್ನಿಸುತ್ತಿಲ್ಲ. ಅವರು ತಮ್ಮ ಕರ್ತವ್ಯವನ್ನಷ್ಠೆ ನಿರ್ವಹಿಸುತ್ತಿದ್ದಾರೆ ಮತ್ತು ವಿಶ್ವವಿದ್ಯಾಲಯದ ಕೀರ್ತಿಗೆ ತಕ್ಕಂತೆ ಶೈಕ್ಷಣಿಕ ಉತ್ಕøಷ್ಟತೆಯ ಮಟ್ಟವನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ನಾನು ಹಾಜರಾದ ಮೊದಲ ತರಗತಿಯಲ್ಲೇ ನನ್ನ ಶಿಕ್ಷಕರಾದ ಪರ್ನಾಲ್ ಚಿರ್‍ಮುಲೆ ಅವರು ಕಪ್ಪು ಹಲಗೆಯ ಮೇಲೆ ಬರೆದ ಮೊದಲ ವಾಕ್ಯವೇ, ‘ನಮಗೆ ಯಾವ ಶಿಕ್ಷಣವೂ ಬೇಕಿಲ್ಲ’. ಅದು ಪಿಂಕ್ ಪ್ಲಾಯ್ಡ್ ಬ್ಯಾಂಡ್‍ನ ಹಾಡಿನ ಸಾಲು. ಅದನ್ನು ನೋಡಿ ನಾನು ಖುಷಿಯಿಂದ ಬಾಯಲ್ಲಿ ಲೊಟಿಗೆ ಹೊಡೆದೆ. ‘ಕೂಲ್ ಟೀಚರ್’ (ಬೊಂಬಾಟ್ ಶಿಕ್ಷಕಿ) ಎನಿಸಿತು. ಆದರೆ ನಾನು ಇಡೀ ತರಗತಿಯತ್ತ ನೋಡಿದಾಗ ಅದರಲ್ಲಿದ್ದ ಹದಿನಾರು ವಿದ್ಯಾರ್ಥಿಗಳಲ್ಲಿ ಯಾರಿಗೂ ಆ ಹಾಡು ಗೊತ್ತಿದ್ದಂತಿರಲಿಲ್ಲ ಮತ್ತು ಹಾಗಾಗಿ ಶಿಕ್ಷಕಿಯ ಬಗ್ಗೆ ನನಗೆ ಬಂದಂಥ ಮೆಚ್ಚುಗೆಯೂ ಅವರಲ್ಲಿ ಕಾಣಲಿಲ್ಲ.

ಖಾಸಗಿ ಶಾಲೆಯಲ್ಲಿ ಓದುತ್ತಾ ಅಲ್ಲಿನ ಹೆಚ್ಚಿನ ಸವಲತ್ತುಗಳನ್ನು ಅನುಭವಿಸಿಕೊಂಡು ನನ್ನದೇ ಲೋಕದಲ್ಲಿದ್ದ ನನ್ನಲ್ಲಿ ಆ ಕ್ಷಣ ತಾತ್ಸಾರ ಉಪೇಕ್ಷೆಗಳು ಮನೆಮಾಡಿದ್ದವು. ಆದರೆ ಮೂರು ವರ್ಷಗಳ ನಂತರ ನಾನು ಜೆಎನ್‍ಯುನಿಂದ ಹೊರಗೆ ಬಂದಾಗ ನನಗೆ ಗೊತ್ತಿದ್ದದ್ದು ಕೇವಲ ಪಿಂಕ್ ಪ್ಲಾಯ್ಡ್ ಅಲ್ಲ; ಪಾಶ್, ಬ್ರೆಕ್ಟ್, ಫಿರಾಕ್ ಗೋರಕ್‍ಪುರಿ ಮತ್ತು ನಾಮದೇವ್ ಧಸಾಲ್ ಕೂಡ ನನಗೆ ಪರಿಚಿತರಾಗಿದ್ದರು.

ವಿಶಾಲವಾದ ಆ ಜೆಎನ್‍ಯು ಕ್ಯಾಂಪಸ್ ನನ್ನ ಬದುಕನ್ನೂ ಅದರ ಎಲ್ಲ ಲಕ್ಷಣಗಳನ್ನು ಬುಡಮೇಲು ಮಾಡಿತು. ಅದು ಹದಿನೈದು ವರ್ಷಗಳ ಹಿಂದಿನ ಜೆಎನ್‍ಯು. ಅಲ್ಲಿನ ಬಹುತೇಕ ವಿದ್ಯಾರ್ಥಿಗಳು ಸಣ್ಣ ಪಟ್ಟಣಗಳಿಂದ, ಗ್ರಾಮೀಣ ಪರಿಸರದಿಂದ ಬಂದಿದ್ದರು. ಅದು ಅಂತರ್ಜಾಲ ನಮ್ಮ ಬದುಕನ್ನು ಆಕ್ರಮಿಸಿಕೊಳ್ಳುವ ಮುನ್ನ ಮತ್ತು ರಾಷ್ಟ್ರೀಯ ಕಲ್ಪನೆಯಲ್ಲಿ ಜೆಎನ್‍ಯು ಎಂದರೆ ರಾಷ್ಟ್ರ ವಿರೋಧಿ ಭಾವನೆಗಳಿಗೆ ಇನ್ನೊಂದು ಹೆಸರು ಎಂಬ ಅಭಿಪ್ರಾಯ ಮೂಡುವ ಮುನ್ನ.

ಜೆಎನ್‍ಯು ಜನಪ್ರಿಯತೆ ದೂರದೂರದ ಊರುಗಳನ್ನು ತಲುಪಿದ್ದು ಕೇವಲ ಜನ ತಮ್ಮಲ್ಲೇ ಆಡಿಕೊಳ್ಳುತ್ತಿದ್ದ ಮಾತುಗಳಿಂದ. ಅಲ್ಲಿನ ಶ್ರೇಷ್ಠ ಮಟ್ಟದ ಶಿಕ್ಷಣದ ಬಗ್ಗೆ ಯಾರೋ ದೂರದ ಸೋದರ ಸಂಬಂಧಿ ಅಥವಾ ಶಾಲೆಯಲ್ಲಿದ್ದ ಯಾರೋ ಹಿರಿಯ ವಿದ್ಯಾರ್ಥಿ ಅಥವಾ ಕೈಗೆ ಸಿಕ್ಕಿದ ಯಾವುದೋ ವೃತ್ತಪತ್ರಿಕೆಯ ತುಣುಕು ಇವುಗಳಿಂದ ತಿಳಿದುಕೊಂಡು,ನಿಜವಾದ ಶಿಕ್ಷಣವನ್ನು ದಕ್ಕಿಸಿಕೊಳ್ಳಬೇಕು ಕೇವಲ ಒಂದು ಪದವಿಯನ್ನಲ್ಲ ಎಂಬ ಆಸೆಯಿಂದ ವಿದ್ಯಾರ್ಥಿಗಳು ಅಲ್ಲಿಗೆ ಬಂದಿಳಿಯುತ್ತಿದ್ದರು.

ಇಲ್ಲಿ ಮಾತ್ರ ಯಾರೂ ನಿನಗೆ ಪಿಯುಸಿ ಮಟ್ಟದಲ್ಲಿ ಎಷ್ಟು ಅಂಕ ಬಂತು, ಯಾವ ಶಾಲೆಯಲ್ಲಿ ಓದಿದೆ ಇಂಥ ವಿವರಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಲ್ಲಿ ಮುಖ್ಯವಾಗುತ್ತಿದ್ದದ್ದು ಒಂದೇ ಅಂಶ: ನಿನಗೆ ಸ್ವತಂತ್ರವಾದ ಅಭಿಪ್ರಾಯಗಳಿವೆಯೇ, ಯಾವ ಭಯವೂ ಇಲ್ಲದೆ ಅದನ್ನು ವ್ಯಕ್ತಪಡಿಸುವ ದಾಷ್ಟ್ರ್ಯ ಇದೆಯೇ ಎಂಬುದು ಮಾತ್ರ. ನನ್ನ ಶಾಲೆಯಲ್ಲಿ ನನ್ನ ಶಿಕ್ಷಕರು ನನ್ನನ್ನು ಋಣಾತ್ಮಕವಾಗಿ ಬಯ್ಯಲು ಉಪಯೋಗಿಸುತ್ತಿದ್ದ ‘ವಾಚಾಳಿ’, ‘ಅಧಿಕ ಪ್ರಸಂಗಿ’, ‘ಚಂಚಲೆ’ ಮುಂತಾದ ವಿಶೇಷಣಗಳಿಗೆ ಈ ಕ್ಯಾಂಪಸ್‍ನಲ್ಲಿ ಬೇರೆಯದೇ ಆದ ಮಹತ್ವ ಸಿಕ್ಕಿತು.

ಇಲ್ಲಿಯೇ ನಾನು ಮುಝಪರ್ ಪುರ್, ಸುಪೌಲ್, ಸಿವಾನ್ ಮತ್ತು ವಾರಂಗಲ್‍ಗಳಿಂದ ಬಂದವರನ್ನೆಲ್ಲಾ ಭೇಟಿಯಾಗಲು ಸಾಧ್ಯವಾದದ್ದು. ಅವರಲ್ಲನೇಕರು ವಿಶ್ವವಿದ್ಯಾಲಯ ನೀಡುತ್ತಿದ್ದ, ಶಿಕ್ಷಣಾರ್ಹತೆ ಹಾಗೂ ಆರ್ಥಿಕ ಹಿನ್ನಲೆಯನ್ನು ಆಧರಿಸಿದ್ದ ವಿದ್ಯಾರ್ಥಿ ವೇತನಗಳನ್ನು ಪಡೆದು ಓದುತ್ತಿದ್ದರು. ಬೆಳಗಿನ ಪಾಠಗಳು ಮುಗಿಯುತ್ತಿದ್ದಂತೆ ಎಲ್ಲರೂ ಇನ್ನೆಲ್ಲಿ ಊಟ ಮುಗಿದು ಹೋಗಿಬಿಡುತ್ತದೋ ಎಂದು ಮೆಸ್‍ನತ್ತ ಓಡುತ್ತಿದ್ದರು; ಏಕೆಂದರೆ ಕ್ಯಾಂಟೀನ್‍ನಲ್ಲಿ ಸಿಗುವ ತಿಂಡಿಗಳ ಬೆಲೆ ದುಬಾರಿಯಲ್ಲದಿದ್ದರೂ ಅದನ್ನು ಕೊಳ್ಳುವುದೂ ಅವರಿಗೆಲ್ಲಾ ಕಷ್ಟವೆನಿಸುತ್ತಿತ್ತು.

ಜೆಎನ್‍ಯು ಶಿಕ್ಷಕರು, ಪ್ರಾಧ್ಯಾಪಕರು ಹುಡುಗರ ತಲೆಯಲ್ಲಿ ಮಾಕ್ರ್ಸ್‍ವಾದಿ ವೈಚಾರಿಕತೆಯನ್ನು, ಎಡವಾದಿ ಸಿದ್ಧಾಂತವನ್ನು ತುಂಬಿಸಲು ಯತ್ನಿಸುತ್ತಾರೆ ಎಂಬ ಅಭಿಪ್ರಾಯವನ್ನು ಪ್ರಚುರಪಡಿಸಲು ಕೆಲವರು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ವಾಸ್ತವಿಕತೆ ಹಾಗಿಲ್ಲ. ಅವರು ತಮ್ಮ ಕೆಲಸವನ್ನಷ್ಠೆ ಮಾಡಿಕೊಂಡು ಹೋಗುತ್ತಾರೆ, ವಿಶ್ವವಿದ್ಯಾಲಯವು ಯಾವ ಒಂದು ಶೈಕ್ಷಣಿಕ ಉತ್ಕಷ್ಟತೆಗೆ ಹೆಸರುವಾಸಿಯಾಗಿದೆಯೋ ಅದನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಾರೆ. ಅಲ್ಲಿ ನಿಜವಾದ ಕಲಿಕೆ ನಡೆಯುವುದು ತರಗತಿಗಳ ಆಚೆಗೆ; ಸುತ್ತಲಿನ ಹುಲ್ಲು ಹಾಸಿನಲ್ಲಿ, ಕ್ಯಾಂಟೀನ್‍ಗಳಲ್ಲಿ, ಧಾಬಾಗಳಲ್ಲಿ ಕೊನೆಯಿಲ್ಲದೆ ನಡೆಯುವ ಚರ್ಚೆ, ವಿಚಾರ ವಿನಿಮಯಗಳಲ್ಲಿ.

ಅಲ್ಲಿ ಕರಪತ್ರಗಳನ್ನು ಹಂಚುವ ಸಂಪ್ರದಾಯ ಒಂದು ದಶಕದ ಹಿಂದೆ ಜೋರಾಗಿದ್ದು, ಅದು ನಮ್ಮ ಮೆದುಳಿಗೆ ಒಳ್ಳೆಯ ಆಹಾರವನ್ನೇ ಒದಗಿಸುತ್ತಿತ್ತು. ಪ್ರತಿದಿನ ನಮಗೆ ಬಡಿಸುತ್ತಿದ್ದ ಯಾವುದಾದರೊಂದು ಆಲೂಗಡ್ಡೆಯ ಪಲ್ಯದೊಂದಿಗೆ ನಾವು ಅಂದಿನ ಕ್ಯಾಂಪಸ್ ಆಗುಹೋಗುಗಳು, ದೇಶ-ವಿದೇಶದ ರಾಜಕೀಯ ಇವೆಲ್ಲವನ್ನೂ ಜಗಿದು ನುಂಗುತ್ತಿದ್ದೆವು.

ಇಲ್ಲಿ ವಿದ್ಯಾರ್ಥಿ ನಿಲಯ ಎಂದರೆ ಅದು ಕೇವಲ ನಾವು ವಾಸ ಮಾಡುವ ಸ್ಥಳವಾಗಿರಲಿಲ್ಲ, ಅದು ನಮ್ಮ ಶಿಕ್ಷಣದ ಭಾಗವೇ ಆಗಿತ್ತು. ನಾನು ‘ಚಂದ್ರಭಾಗ’ ಎಂಬ ವಿದ್ಯಾರ್ಥಿನಿಲಯದಲ್ಲಿ ಮೂರು ವರ್ಷಗಳ ಕಾಲ ಪಿಎಚ್‍ಡಿ ವಿದ್ಯಾರ್ಥಿಗಳು, ಎಂ.ಎ. ಮತ್ತು ಎಂ.ಫಿಲ್. ವಿದ್ಯಾರ್ಥಿಗಳು ಇವರೊಂದಿಗೆ ಬದುಕಿದ್ದೆ ಮತ್ತು ಅಂಥವರು ಕೆಲವರೊಂದಿಗೆ ನಾನು ನನ್ನ ಕೋಣೆಯನ್ನು ಹಂಚಿಕೊಂಡು ಓದಿದೆ. ಒಬ್ಬ ಪ್ರಸಿದ್ಧ ಎಡಪಂಥೀಯ ನಾಯಕರ ಮಗಳು ನನ್ನ ಪಕ್ಕದ ಕೋಣೆಯಲ್ಲಿದ್ದಳು. ಆದರೆ ಬಹಳ ಕಾಲ ನನಗೆ ಆಕೆಯ ಹಿನ್ನಲೆಯೇ ಗೊತ್ತಿರಲಿಲ್ಲ.

ಇನ್ನೊಂದು ಕಡೆಯ ಕೋಣೆಯಲ್ಲಿ ಸಂಸ್ಕೃತಿದಲ್ಲಿ ಪಿಎಚ್‍ಡಿ ಮಾಡುತ್ತಿದ್ದ ವಿದ್ಯಾರ್ಥಿನಿ ಇದ್ದಳು. ಆಕೆ ಮಾತನಾಡುತ್ತಿದ್ದ ಹಿಂದಿ ಉಪಭಾಷೆಯೊಂದು ನನಗೆ ಅರ್ಥವೇ ಆಗುತ್ತಿರಲಿಲ್ಲ. ಗೋರಖ್ಪುರದಿಂದ ಬಂದಿದ್ದ ಆಕೆ ತನ್ನಷ್ಟಕ್ಕೆ ತಾನು ಇದ್ದುಬಿಡುತ್ತಿದ್ದಳು. ಆದರೆ ಛಾತ್ ಪೂಜೆಗೆಂದು ಊರಿಗೆ ಹೋದಾಗಲೆಲ್ಲ ತಪ್ಪದೆ ಮಿಠಾಯಿ ತಂದು, ಕಾರಿಡಾರ್‍ನಲ್ಲಿ ನಿಂತು ಎಲ್ಲರಿಗೂ ಹಂಚುತ್ತಿದ್ದಳು. ನಾವು ಮೂರೂ ಜನ, ಇನ್ನೂ ಅನೇಕರೊಡನೆ ಚಳಿಗಾಲದಲ್ಲಿ ಪ್ರತಿದಿನ ಸ್ನಾನಕ್ಕೆಂದು ಗೀಸರ್‍ನಿಂದ ಬಿಸಿ ನೀರು ಹಿಡಿದುಕೊಳ್ಳಲು ಸರತಿಯ ಸಾಲಿನಲ್ಲಿ ನಿಂತು, ‘ಇದೆಷ್ಟು ತಡವಾಗುತ್ತದಪ್ಪ’ ಎಂದು ಗೊಣಗುತ್ತಾ ಇರುತ್ತಿದ್ದೆವು.

ಮೆಸ್‍ನಲ್ಲಿ ಊಟಕ್ಕೆ ಬಡಿಸುತ್ತಿದ್ದದ್ದು ಪಾಲಕ್ ದಾಲ್ (ಬೇಳೆ-ಸೊಪ್ಪು) ಆದರೂ ನಾವು ಊಟದ ಸಮಯಕ್ಕೇ ಕಾತರದಿಂದ ಕಾಯುತ್ತಿದ್ದೆವು. ಅಲ್ಲಿ ಕರಪತ್ರಗಳನ್ನು ಹಂಚುವ ಸಂಪ್ರದಾಯ ಒಂದು ದಶಕದ ಹಿಂದೆ ಜೋರಾಗಿದ್ದು, ಅದು ನಮ್ಮ ಮೆದುಳಿಗೆ ಒಳ್ಳೆಯ ಆಹಾರವನ್ನೇ ಒದಗಿಸುತ್ತಿತ್ತು. ಪ್ರತಿದಿನ ನಮಗೆ ಬಡಿಸುತ್ತಿದ್ದ ಯಾವುದಾದರೊಂದು ಆಲೂಗಡ್ಡೆಯ ಪಲ್ಯದೊಂದಿಗೆ ನಾವು ಅಂದಿನ ಕ್ಯಾಂಪಸ್ ಆಗುಹೋಗುಗಳು, ದೇಶ-ವಿದೇಶದ ರಾಜಕೀಯ ಇವೆಲ್ಲವನ್ನೂ ಜಗಿದು ನುಂಗುತ್ತಿದ್ದೆವು. ಅನೇಕ ಬಾರಿ ಊಟವಾದ ಮೇಲೆ ಅಲ್ಲಿನ ನೆಲದ ತುಂಬಾರಾಶಿರಾಶಿ ಕರಪತ್ರಗಳು ಬಿದ್ದಿದ್ದರೂ, ಊಟವಾಗುತ್ತಿದ್ದಂತೆ ಅದನ್ನೆಲ್ಲಾ ಗುಡಿಸಿಹಾಕಿ ಬೇಗನೆ ಭೋಜನೋತ್ತರ ಸಾರ್ವಜನಿಕ ಸಭೆಯೊಂದನ್ನು ನಡೆಸಿಬಿಡುತಿದ್ದರು. ಇಂಥ ಸಭೆಗಳಲ್ಲೇ ನನಗೆ ಪ್ರಕಾಶ್ ಕಾರಟ್, ಬೃಂದಾ ಕಾರಟ್, ಸಚಿನ್ ಪೈಲಟ್ ಮತ್ತು ಬಾಬಾ ರಾಮ್‍ದೇವ್ ಅವರಂಥವರ ಭಾಷಣ ಕೇಳುವ ಅವಕಾಶ ಸಿಕ್ಕಿದ್ದು.

ಜೆಎನ್‍ಯು ಎಂದರೆ ‘ಶ್ರೀಮಂತ ಉದಾರವಾದಿಗಳ’ ಭದ್ರ ಕೋಟೆ ಎಂಬ ತಿಳಿವಳಿಕೆ ಚಾಲ್ತಿಯಲ್ಲಿದೆ. ಆದರೆ ದಿಲ್ಲಿಯ ರಸ್ತೆಗಳಲ್ಲಿ ಇದೀಗ ಪ್ರತಿಭಟನೆಗೆ ಇಳಿದಿರುವ ಹುಡುಗರು ಖಂಡಿತಾ ಶ್ರೀಮಂತ ಕುಲೀನ ವರ್ಗದವರಲ್ಲ. ಅಸ್ತಿತ್ವದಲ್ಲಿರುವ ಪರಿಸ್ಥಿತಿಯನ್ನು ಪ್ರಶ್ನಿಸಲು, ಪ್ರತಿವಾದ ಹೂಡಲು, ಚರ್ಚಿಸಲು ಕಲಿಸಿದ ತಮ್ಮ ವಿಶ್ವವಿದ್ಯಾಲಯದ ಚೈತನ್ಯವನ್ನು ರಕ್ಷಿಸಿಕೊಳ್ಳಲು ಅವರು ಹೋರಾಟಕ್ಕಿಳಿದಿದ್ದಾರೆ. ಏಕೆಂದರೆ ಕಡೆಗೂ ಅಲ್ಲೊಮ್ಮೆ ದುಬಾರಿ ಶುಲ್ಕ ಜಾರಿಯಾದರೆ ಈ
ಒಂದು ಸಮಾನತಾವಾದಿ ಪರಿಸರವು ಮಾಯವಾಗಿ, ಇದು ಖಾಸಗಿ ವಿಶ್ವವಿದ್ಯಾಲಯವನ್ನು ಹೋಲಲಾರಂಭಿಸುತ್ತದೆ- ಆಗ ಅಲ್ಲಿ ಒಂದೇ ರೀತಿಯ ಆರ್ಥಿಕ-ಸಾಮಾಜಿಕ ಹಿನ್ನಲೆಯ ಜನ ಬಂದು ಸೇರಿ, ತಮ್ಮ ಜೀವನ ದೃಷ್ಟಿಕೋನಕ್ಕೆ ಸವಾಲೆಸೆಯುವರೇ ಇಲ್ಲದೆ ಮನಸೋ ಇಚ್ಛೆ ಪಾಂಡಿತ್ಯ ಪ್ರದರ್ಶನದ ಪ್ರವಚನಗಳನ್ನು ಚಚ್ಚುತ್ತಿರುತ್ತಾರೆ.

*ಲೇಖಕಿ ‘ದಿ ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆಯ ವಿಶೇಷ ವರದಿಗಾರ್ತಿ;ಸಿನಿಮಾ, ಫ್ಯಾಷನ್, ಡಿಜಿಟಲ್ ಮಾಧ್ಯಮ ಆಸಕ್ತಿಯ ವಿಷಯಗಳು.

ಅನುವಾದ: ಡಾ.ಬಿ.ಆರ್.ಮಂಜುನಾಥ್
ಸೌಜನ್ಯ: ದಿ ಇಂಡಿಯನ್ ಎಕ್ಸ್‍ಪ್ರೆಸ್

Leave a Reply

Your email address will not be published.