ಜೈಟ್ಲಿ ಭರವಸೆ ನೀಡಿದ್ದ ಜಿಎಸ್‌ಟಿ ಪಾಲು

ಜಿಎಸ್‌ಟಿ ಎರಡು ಕಾರ್ಪೋರೇಟುಗಳ ನಡುವಿನ ವ್ಯಾಪಾರೀ ಒಪ್ಪಂದವಲ್ಲ. ಅನಿವಾರ್ಯ ಪರಿಸ್ಥಿತಿ ಅಂತ ಯಾವೊಂದು ಕಡೆಯವರೂ ಹಿಂದೆ ಸರಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಜೈಟ್ಲಿಗೆ ಅದು ಸಂಪೂರ್ಣ ಅರ್ಥ ಆಗಿತ್ತು. ಅವರ ಸ್ಥಾನಕ್ಕೆ ಬಂದವರೂ ಅರ್ಥಮಾಡಿಕೊಳ್ಳಬೇಕು.

ಎಸ್.ಎ.ಅಯ್ಯರ್

ಪ್ರತಿವರ್ಷ ಕಂದಾಯ ಸಂಗ್ರಹಣೆ ಶೇಕಡ 14ರಷ್ಟು ಹೆಚ್ಚಾಗುತ್ತದೆ ಎಂದು ಹಿಂದಿನ ವಿತ್ತ ಮಂತ್ರಿಗಳು ರಾಜ್ಯಗಳಿಗೆ ಭರವಸೆಯನ್ನು ನೀಡಿದ್ದರು. ಹಾಗೆಯೇ ಅದರ ಖಾತ್ರಿ ನೀಡುವುದರ ಮೂಲಕ ದೊಡ್ಡ ಉದಾರೀ ಮನೋಭಾವ ಪ್ರದರ್ಶಿಸಿದ್ದರು. ಜೊತೆಗೆ ಒಂದು ದೀರ್ಘಕಾಲೀನ ದೃಷ್ಟಿಯೂ ಅವರಲ್ಲಿತ್ತು. ಈ ಮೂಲಕ ಕೇಂದ್ರ ಹಾಗೂ ರಾಜ್ಯಗಳು ವಿಧಿಸುತ್ತಿದ್ದ ನೂರಾರು ವಿಭಿನ್ನ ತೆರಿಗೆಗಳ ಬದಲು ದೇಶಾದ್ಯಂತ ಒಂದು ಜಿಎಸ್‌ಟಿ -ಸರಕು ಹಾಗೂ ಸೇವಾ ತೆರಿಗೆಯ ನೀತಿಯನ್ನು ಜಾರಿಗೆ ತರುವುದಕ್ಕೆ ರಾಜ್ಯಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಅವರಿಗೆ ಸಾಧ್ಯವಾಯಿತು. ಜಿಎಸ್‌ಟಿ ಹೆಚ್ಚು ಪರಿಣಾಮಕಾರಿಯಾದ ವಿಧಾನವಾಗಿತ್ತು. ಇದರಿಂದ ತೆರಿಗೆ ಕಳ್ಳತನ ಹಾಗೂ ಅಧಿಕಾರಿಗಳ ಕಿರುಕುಳ ಕಡಿಮೆಯಾಗುತ್ತಿತ್ತು. ಜೊತೆಗೆ ದೀರ್ಘಕಾಲೀನ ಬೆಳವಣಿಗೆಯನ್ನು ಹೆಚ್ಚು ಕ್ಷಿಪ್ರವಾಗಿ ಸಾಧಿಸಬಹುದಿತ್ತು.

ಆದರೆ ಕೋವಿಡ್‌ನಿಂದಾಗಿ ಜಿಡಿಪಿಯಲ್ಲಿ ಆದ ಕುಸಿತದಿಂದ (ಮೊದಲ ತ್ರೈಮಾಸಿಕದಲ್ಲಿ ಅದು ಶೇಕಡ 24ರಷ್ಟು ಇಳಿದಿದೆ. ಇಡೀ ವರ್ಷದ ಕುಸಿತ ಶೇಕಡ 10ರಷ್ಟು ಆಗಬಹುದು) ಜಿಎಸ್‌ಟಿ ಸಂಗ್ರಹ ನೆಲಕಚ್ಚಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವೆ ರಂಪವಾಗಿದೆ. ತೊಂದರೆಯನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಏಕಪಕ್ಷೀಯವಾಗಿ ಸಲಹೆಗಳನ್ನು ನೀಡಿದ್ದಾರೆ. ರಾಜ್ಯಗಳು ಅದನ್ನು ಕೋಪದಿಂದ ತಿರಸ್ಕರಿಸಿವೆ. ಕೇಂದ್ರ ತಮ್ಮನ್ನು ವಂಚಿಸಿದೆ ಎಂದು ಆರೋಪಿಸುತ್ತಿವೆ. ನಿರ್ಮಲಾ ಸೀತಾರಾಮನ್ ಅವರು ಜೈಟ್ಲಿಯ ಆಶಯಕ್ಕೆ ಮರಳಬೇಕು.

ಜಿಎಸ್‌ಟಿಯಿಂದ ದೀರ್ಘಕಾಲೀನ ಅನುಕೂಲವಿದೆ ಅನ್ನುವ ಕಾರಣಕ್ಕಾಗಿ ಅದನ್ನು ಶ್ಲಾಘಿಸಲಾಯಿತು. ಅದು ಸರಿ ಕೂಡ. ಅವರಿಗಿಂತ ಹಿಂದೆ ಸುಮಾರು ಹತ್ತು ವರ್ಷಗಳಿಗೂ ಹೆಚ್ಚು ಕಾಲ ಜಿಎಸ್‌ಟಿಯನ್ನು ಕುರಿತಂತೆ ಚರ್ಚೆ ನಡೆದಿತ್ತು. ಆದರೆ ಏನೂ ಆಗಿರಲಿಲ್ಲ. ತೆರಿಗೆಯ ಈ ಸುಧಾರಣೆಯನ್ನು ಹೆಚ್ಚಿನ ರಾಜ್ಯಗಳು ಒಪ್ಪಿಕೊಂಡಿರಲಿಲ್ಲ ಕೆಲವು ರಾಜ್ಯಗಳಿಗೆ ನಷ್ಟವಾಗುತ್ತಿತ್ತು. ಜಿಎಸ್‌ಟಿ ಮುಂದೆ ಹೆಚ್ಚಿನ ವರಮಾನ ತಂದುಕೊಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ತಮ್ಮ ತೆರಿಗೆ ವಿಧಿಸುವ ಅಧಿಕಾರವನ್ನು ಶಾಶ್ವತವಾಗಿ ಕಳೆದುಕೊಳ್ಳಲು ಹಲವು ರಾಜ್ಯಗಳು ಹಿಂದೇಟು ಹಾಕುತ್ತಿದ್ದವು.

ಅವರ ಆತಂಕವನ್ನು ಜೈಟ್ಲಿಯವರ ಉದಾರತನ ನಿವಾರಿಸಿತು. ರಾಜ್ಯಗಳು ಒಪ್ಪಿಕೊಳ್ಳುವಂತೆ ಮಾಡುವುದಕ್ಕೆ ಅವರು ದೊಡ್ಡ ಆರ್ಥಿಕ ತ್ಯಾಗಕ್ಕೆ ಸಿದ್ಧರಿದ್ದರು. ಅದರಿಂದ ಅವರಿಗೆ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಸಾಧ್ಯವಾಯಿತು. ಹಿಂದಿನವರಿಗೆ ಸಾಧ್ಯವಾಗದ್ದು ಇವರಿಗೆ ಸಾಧ್ಯವಾಯಿತು.

ರಾಜ್ಯಗಳಿಗೆ ಬರಲಿರುವ ಜಿಎಸ್‌ಟಿ ಐದು ವರ್ಷಗಳ ಕಾಲ ಅಂದರೆ ಮಾರ್ಚ್ 2022ರವರೆಗೆ ಪ್ರತಿವರ್ಷ ಶೇಕಡ 14ರಷ್ಟು ಹೆಚ್ಚಾಗುತ್ತದೆ ಎಂದು ಜೈಟ್ಲಿ ಭರವಸೆ ನೀಡಿದರು. ಶೇಕಡ 14ಕ್ಕಿಂತ ತೆರಿಗೆ ಸಂಗ್ರಹಣೆ ಕಡಿಮೆಯಾದರೆ ಕೇಂದ್ರ ಅದನ್ನು ತುಂಬಿಕೊಡುತ್ತದೆ ಎನ್ನುವ ಖಾತ್ರಿಯನ್ನೂ ನೀಡಿದರು. ಇದು ತುಂಬಾ ಉದಾರವಾದ ಭರವಸೆ. ಯಾಕೆಂದರೆ ಆಗ ಜಿಡಿಪಿ ಶೇಕಡ 7ರಷ್ಟು ಬೆಳೆಯುತ್ತಿತ್ತು. ಜೊತೆಗೆ ಆರ್‌ಬಿಐ ಪ್ರಕಾರ ಹಣದುಬ್ಬರದ ದರ ಶೇಕಡ 4ನ್ನು ಮುಟ್ಟಬಹುದಿತ್ತು. ಹಾಗಾಗಿ ನಾಮಿನಲ್ ಜಿಡಿಪಿ ಶೇಕಡ 11ರಷ್ಟು ಮಾತ್ರ ಹೆಚ್ಚಬಹುದಿತ್ತು. ಕಂದಾಯ ಸಂಗ್ರಹಣೆಯೂ ಅದರ ಆಸುಪಾಸಿನಲ್ಲೇ ಇರುವುದಕ್ಕೆ ಸಾಧ್ಯ. ಜೈಟ್ಲಿ ಭರವಸೆ ನೀಡಿದ ಶೇಕಡ 14 ನಿಜವಾಗಿಯೇ ಹೆಚ್ಚು. ರಾಜ್ಯಗಳ ಸಂಗ್ರಹಣೆಯಲ್ಲಿನ ಕೊರತೆಯನ್ನು ತುಂಬಿಕೊಡಲು ಕೇಂದ್ರ ಹೊಸ ಸೆಸ್ಸನ್ನು ವಿಧಿಸುವುದಕ್ಕೆ ಸಮ್ಮತಿಸಲಾಯಿತು.

ಜಿಡಿಪಿ ವೇಗವಾಗಿ ಬೆಳೆದಂತೆ ತೊಂದರೆ ಕ್ರಮೇಣ ಕಡಿಮೆಯಾಗುತ್ತದೆ ಅನ್ನುವುದು ಜೈಟ್ಲಿಯವರ ನಿರೀಕ್ಷೆಯಾಗಿತ್ತು. ಪಾಪ, ಜಿಎಸ್‌ಟಿ ಒಪ್ಪಂದ ಆದ ಮೇಲೆ ಪ್ರಗತಿ ನಿರಂತರವಾಗಿ ಕುಸಿಯತೊಡಗಿತು. ಜಿಡಿಪಿ 2016-17ರಲ್ಲಿ ಶೇಕಡ 8.2ರಷ್ಟು ಇದ್ದುದು ನಂತರದ ಮೂರು ವರ್ಷಗಳಲ್ಲಿ ಶೇಕಡ 7ಕ್ಕೆ ಅಮೇಲೆ, ಶೇಕಡ 6.1ಕ್ಕೆ ಕೊನೆಗೆ ಶೇಕಡ 4.2ಕ್ಕೆ ಕುಸಿಯಿತು. ಈಗ ಕೊರೋನಾ ವೈರಾಣು ಅದನ್ನು ಶೇಕಡ ಮೈನಸ್ 10ಕ್ಕೆ ತಳ್ಳುತ್ತದೆ. ಅದು ಕೇಂದ್ರ ಹಾಗೂ ರಾಜ್ಯಗಳ ಹಣಕಾಸು ಪರಿಸ್ಥಿತಿಯಲ್ಲಿ ದೊಡ್ಡ ಕಂದಕವನ್ನು ಸೃಷ್ಟಿಸಿದೆ.

ರಾಜ್ಯಗಳ ಕೊರತೆಯನ್ನು ತುಂಬಿ ಕೊಡುವುದಕ್ಕೆ ಕೇಂದ್ರ ವಿಧಿಸುತ್ತಿರುವ ಸೆಸ್ ಸಾಲುತ್ತಿಲ್ಲ. ಅನಿರೀಕ್ಷಿತ ಪರಿಸ್ಥಿತಿ ಅಥವಾ “ದೈವ ಸಂಕಲ್ಪ” ಅಂತ ಒಂದು ಸಿದ್ಧಾಂತವಿದೆ. ನೈಸರ್ಗಿಕ ವಿಪತ್ತು ಎದುರಾದಾಗ ಮಾಡಿಕೊಂಡ ವಾಣಿಜ್ಯ ಒಪ್ಪಂದದಿಂದ ತಪ್ಪಿಸಿಕೊಳ್ಳುವುದಕ್ಕೆ ಇದೊಂದು ದಾರಿ. ನೈಸರ್ಗಿಕ ವಿಪತ್ತಿಗೆ ಯಾರೂ ಹೊಣೆಯಲ್ಲ ಅಲ್ಲವೆ? ಸೀತಾರಾಮನ್ ಈ ‘ಅನಿರೀಕ್ಷಿತ ಪರಿಸ್ಥಿತಿ’ಯ ಸಿದ್ಧಾಂತಕ್ಕೆ ಆತುಕೊಳ್ಳುತ್ತಿದ್ದಾರೆ. ಸಂಗ್ರಹವಾದ ಸೆಸ್ ಅನ್ನು ಮಾತ್ರ ಕೊಡುವುದಾಗಿ ಹೇಳುತ್ತಿದ್ದಾರೆ. ಕೇಂದ್ರ ಖಾತ್ರಿ ನೀಡಿದ ಶೇಕಡ 14ಕ್ಕೆ ಸಮೀಪಕ್ಕೂ ಅದು ಬರುವುದಿಲ್ಲ.

ಪರ್ಯಾಯವಾಗಿ ಕೊರತೆಯನ್ನು ತುಂಬಿಕೊಳ್ಳುವುದಕ್ಕೆ ರಾಜ್ಯಗಳಿಗೆ ಸೀತಾರಾಮನ್ ಎರಡು ಆಯ್ಕೆಯನ್ನು ನೀಡಿದ್ದಾರೆ. ಮೊದಲನೆಯದು ರಾಜ್ಯಗಳು ಕೇಂದ್ರ ಬ್ಯಾಂಕಿನಿಂದ 97,000 ಕೋಟಿ ರೂಪಾಯಿ ಸಾಲ ತೆಗೆದುಕೊಳ್ಳಬಹುದು. ಅದಕ್ಕೆ ವಿಶೇಷ ರಿಯಾಯಿತಿಯ ಕಡಿಮೆ ಬಡ್ಡಿದರದ ಸೌಲಭ್ಯ ಬಳಸಿಕೊಳ್ಳಬಹುದು. ಜಿಎಸ್‌ಟಿ ಜಾರಿಯಿಂದಾಗಿ ಈ ಕೊರತೆ ಉಂಟಾಗಿದೆ ಅಂತ ಕೇಂದ್ರದ ಅಭಿಮತ. 

ಜೊತೆಗೆ ಕೋವಿಡ್‌ನಿಂದಾಗಿಯೂ ನಷ್ಟವಾಗಿದೆ. ಎಲ್ಲಾ ಸೇರಿಕೊಂಡು 2.5 ಲಕ್ಷ ಕೋಟಿಯಷ್ಟು ಕೊರತೆ ಆಗುತ್ತಿದೆ. ಸೀತಾರಾಮನ್ ಅವರು ಸೂಚಿಸಿರುವ ಎರಡನೆಯ ಆಯ್ಕೆ ಅಂದರೆ ಇಡೀ ಮೊತ್ತವನ್ನು ಮಾರುಕಟ್ಟೆಯಲ್ಲಿ ಬೇಕಾದರೆ ರಾಜ್ಯಗಳ ಸಾಲ ಮಾಡಬಹುದು. ಸ್ವಾಭಾವಿಕವಾಗಿಯೇ ಇದಕ್ಕೆ ಹೆಚ್ಚಿನ ಬಡ್ಡಿಯನ್ನು ತೆರಬೇಕಾಗುತ್ತದೆ.

ಎರಡೂ ಮಾರ್ಗವು ತಮಗೆ ಸಮ್ಮತವಿಲ್ಲ ಎಂದು ರಾಜ್ಯಗಳು ಕೂಗಾಡುತ್ತಿವೆ. ಕೇಂದ್ರ ರಾಜ್ಯಗಳಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸಬೇಕು. ಅದು ಅದರ ಕರ್ತವ್ಯ. ಸಂಗ್ರಹವಾಗಿರುವ ಸೆಸ್ ಸಾಲುತ್ತಿಲ್ಲ ಅನ್ನುವುದನ್ನು ಕಾರಣ ಮಾಡಿಕೊಳ್ಳಬಾರದು.  ಜೈಟ್ಲಿ ನೀಡಿರುವ ಖಾತರಿಯ ಅರ್ಥವೇ ಇದು. ಇದು ರಾಜ್ಯಗಳ ವಾದ.

ರಾಜ್ಯಗಳು ಕೇಳುತ್ತಿರುವುದು ಸರಿ. ಜಿಎಸ್‌ಟಿ ಎರಡು ಕಾರ್ಪೋರೇಟುಗಳ ನಡುವಿನ ವ್ಯಾಪಾರೀ ಒಪ್ಪಂದವಲ್ಲ. ಅನಿವಾರ್ಯ ಪರಿಸ್ಥಿತಿ ಅಂತ ಯಾವೊಂದು ಕಡೆಯವರೂ ಹಿಂದೆ ಸರಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಒಪ್ಪಂದ. ಜೈಟ್ಲಿಗೆ ಅದು ಸಂಪೂರ್ಣ ಅರ್ಥ ಆಗಿತ್ತು. ನಂತರ ಅವರ ಸ್ಥಾನಕ್ಕೆ ಬಂದವರೂ ಅದನ್ನು ಅರ್ಥಮಾಡಿಕೊಳ್ಳಬೇಕು.

ಆರ್‌ಬಿಐನಿಂದ 2.35 ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ಎರವಲು ತೆಗೆದುಕೊಂಡು ರಾಜ್ಯಗಳಿಗೆ ಕೊರತೆಯನ್ನು ಪೂರ್ತಿಯಾಗಿ ತುಂಬಿಕೊಡಬೇಕು. ಇದರಿಂದ ಕೇಂದ್ರದ ವಿತ್ತೀಯ ಕೊರತೆ ಜಿಡಿಪಿಯ ಶೇಕಡ 1.25ರಷ್ಟು ಹೆಚ್ಚಬಹುದು. ದೊಡ್ಡ ಮೊತ್ತ ನಿಜ. ಆದರೆ ರೇಟಿಂಗ್ ಏಜನ್ಸಿಗಳ ರೇಟಿಂಗ್ ಇಳಿಯುವುದಕ್ಕಿಂತ ಇದು ಪರವಾಗಿಲ್ಲ. ನಿರ್ಮಲಾ ಸೀತಾರಾಮ್ ಅವರಿಗೂ ಕೂಡ ರೇಟಿಂಗ್ ಇಳಿಯುವುದು ಬೇಕಿಲ್ಲ.

2021-22ರಲ್ಲೂ ರಾಜ್ಯಗಳಿಗೆ ಕೊರತೆಯನ್ನು ಪೂರ್ಣ ತುಂಬಿಕೊಡುವುದಕ್ಕೆ ಇದೇ ಕ್ರಮವನ್ನು ಅನುಸರಿಸಬೇಕು. ಅಲ್ಲಿಗೆ ಜೈಟ್ಲಿ ನೀಡಿರುವ ಐದು ವರ್ಷಗಳ ಖಾತರಿಯ ಆವಧಿ ಮುಗಿಯುತ್ತದೆ. ಹಾಗೆ ಮಾಡುವುದರಿಂದ ಎರಡು ವರ್ಷಗಳು ಕೇಂದ್ರದ ಸಾಲ ಹೆಚ್ಚಬಹುದು. ಸೆಸ್ ಅನ್ನು 2021-22ರ ನಂತರವೂ ಮುಂದುವರಿಸಿ ಇದನ್ನು ಸರಿದೂಗಿಸಿಕೊಳ್ಳಬಹುದು. ಇದೇನೂ ರಾಕೆಟ್ ವಿಜ್ಞಾನ ಅಲ್ಲವಲ್ಲ.

ಜಿಎಸ್‌ಟಿ ಒಪ್ಪಂದ ಆದಾಗಿನಿಂದ ಬಿಜೆಪಿ ತಾನು ವಿತ್ತೀಯ ಫೆಡರಿಲಿಸಂ ಅನ್ನು ಪ್ರೋತ್ಸಾಹಿಸುತ್ತಿದ್ದೇನೆ ಅಂತ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ಆ ಧ್ಯೇಯಕ್ಕೆ ತಕ್ಕಂತೆ ಅದು ಬದುಕಬೇಕು.

*ಲೇಖಕರು (ಸ್ವಾಮಿನಾಥನ್ ಅಂಕ್ಲೆಸಾರಿಯಾ ಅಯ್ಯರ್) ಭಾರತದ ಪ್ರಮುಖ ಅರ್ಥಶಾಸ್ತ್ರ  ಪತ್ರಕರ್ತರು; ದ ಎಕನಾಮಿಕ್ ಟೈಮ್ಸ್ ಪತ್ರಿಕೆಯ ಸಲಹಾ ಸಂಪಾದಕರು, 1990ರಿಂದ ಸ್ವಾಮಿನಾಮಿಕ್ಸ್ ಹೆಸರಿನ ಅಂಕಣ ಬರೆಯುತ್ತಿದ್ದಾರೆ. ವಿಶ್ವ ಬ್ಯಾಂಕ್ ಮತ್ತು ಏಷಿಯನ್ ಡೆವಲೆಪ್‌ಮೆಂಟ್ ಬ್ಯಾಂಕಿಗೆ ಸಲಹೆಗಾರರು.

ಮೂಲ: ದ ಟೈಮ್ಸ್ ಆಫ್ ಇಂಡಿಯಾ 
ಅನು: ಟಿ.ಎಸ್.ವೇಣುಗೋಪಾಲ್

ಜಿ.ಎಸ್.ಟಿ. ಇನ್ವಾಯ್ಸಿಂಗ್ ಬದಲಾವಣೆ

ನಮ್ಮ ದೇಶದಲ್ಲಿ, 2017ರ ಜುಲೈ ಮೊದಲ ದಿನಾಂಕದಿಂದ ಜಿ.ಎಸ್.ಟಿ. (ಗುಡ್ಸ್ ಅಂಡ್ ಸರ್ವೀಸಸ್ ಟ್ಯಾಕ್ಸ್) ಪದ್ಧತಿ ಜಾರಿಗೆ ಬಂದಿತು.  ಅಂದಿನಿಂದ ಇಂದಿನವರೆಗೆ ಸರ್ಕಾರವು ಜಿ.ಎಸ್.ಟಿ. ಕಾಯಿದೆಗೆ ಹಲವಾರು ತಿದ್ದುಪಡಿಗಳನ್ನು ತಂದಿದೆ. ಇತ್ತೀಚಿನ ಪ್ರಮುಖ ಪರಿಷ್ಕರಣೆ ಇ-ಇನ್ವಾಯ್ಸ್ಗೆ ಸಂಬಂಧಿಸಿದ್ದಾಗಿದೆ. ಈ ವಿಷಯ ಕುರಿತಂತೆ ಕಳೆದ ಕೆಲವು ತಿಂಗಳುಗಳಲ್ಲಿ ವ್ಯಾಪಕ ಚರ್ಚೆಗಳು ಸಹ ನಡೆದಿವೆ.   

2020ರ ಅಕ್ಟೋಬರ್ ಮೊದಲ ದಿನದಿಂದ ಜಾರಿಗೆ ಬರಲಿರುವ ಜಿ.ಎಸ್.ಟಿ. ನಿಯಮದನ್ವಯ, ವಾರ್ಷಿಕ 500 ಕೋಟಿ ರುಪಾಯಿಗಳಿಗಿಂತ ಅಧಿಕ ವಹಿವಾಟು ಹೊಂದಿರುವ ಕಂಪನಿಗಳು ಇ-ಇನ್ವಾಯ್ಸ್ ನೀಡುವುದು ಕಡ್ಡಾಯವಾಗಲಿದೆ. ಈ ಬದಲಾವಣೆಯಿಂದಾಗಿ, ಇ-ಇನ್ವಾಯ್ಸ್ಗಳನ್ನು ಸಿದ್ಧಪಡಿಸುವ ಹಂತಗಳು ಹೆಚ್ಚಾಗಲಿವೆ.  ಮೊದಲಿಗೆ, ಸರ್ಕಾರದ ಇನ್ವಾಯ್ಸ್ ರಿಜಿಸ್ಟ್ರೇಷನ್ ಪೋರ್ಟಲ್‌ನಲ್ಲಿ (ಐ.ಆರ್.ಪಿ.) ಇನ್ವಾಯ್ಸ್ನ ಎಲ್ಲ ವಿವರಗಳನ್ನು ದಾಖಲಿಸಬೇಕು. ಈ ವಿವರಗಳ ಪರಿಶೀಲನೆಯ ನಂತರ ಇನ್ವಾಯ್ಸ್ ರೆಫರೆನ್ಸ್ ನಂಬರ್ (ಐ.ಆರ್.ಎನ್.) ಹಾಗು ಕ್ವಿಕ್ ರೆಸ್ಪಾನ್ಸ್ (ಕ್ಯೂ.ಆರ್.) ಕೋಡ್ ಲಭ್ಯವಾಗಲಿವೆ.  ಇದಾದ ನಂತರವಷ್ಟೇ ಇ-ಇನ್ವಾಯ್ಸ್ ಮಾನ್ಯವಾಗುತ್ತದೆ.

ಜಿ.ಎಸ್.ಟಿ. ಕಾನೂನು, ಐ.ಆರ್.ಪಿ.ಯಲ್ಲಿ ನೋಂದಣಿಯಾಗದ ಇನ್ವಾಯ್ಸ್ಗಳನ್ನು ಅಮಾನ್ಯ ಎಂದು ಪರಿಗಣಿಸುತ್ತದೆ. ಅಮಾನ್ಯವೆನಿಸಿದ ಪ್ರತಿ ಇನ್ವಾಯ್ಸ್ಗೆ 10,000 ರುಪಾಯಿಗಳ ದಂಡವನ್ನು ಸರ್ಕಾರ ನಿಗದಿಪಡಿಸಿದೆ. ಅಮಾನ್ಯ ಇನ್ವಾಯ್ಸ್ನೊಡನೆ ಸಾಗಣೆಯಾಗುವ ವಸ್ತುಗಳನ್ನು ಹಾಗು ಸಾಗಿಸುವ ವಾಹನಗಳನ್ನು ತಡೆಹಿಡಿದು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಮಾನ್ಯ ಇನ್ವಾಯ್ಸ್ಗಳನ್ನು ಗ್ರಾಹಕರೂ ಸೀಕರಿಸುವುದಿಲ್ಲ.

ಇ-ಇನ್ವಾಯ್ಸ್ ಪರಿಧಿಯಲ್ಲಿ ಬರುವ ಕಂಪನಿಗಳು ಇಂತಹ ಸಂಕೀರ್ಣತೆ ಹಾಗು ಅದರ ಪರಿಣಾಮಗಳನ್ನು ಮನಗಂಡಿವೆ; ತಮ್ಮ ಇ.ಆರ್.ಪಿ. ವ್ಯವಸ್ಥೆಯಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡಿಕೊಂಡು, ಪರೀಕ್ಷಿಸಿ, ಎಲ್ಲವೂ ಸರಿಯಿದೆಯೆಂಬುದುನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪೂರ್ವಭಾವಿ ಸಿದ್ಧತೆಗಳನ್ನು ನಡೆಸಿವೆ.  ಆದರೂ, ಆರಂಭದಲ್ಲಿ ಹಲವಾರು ತೊಡಕುಗಳು ಇದಿರಾಗುವ ಸಾಧ್ಯತೆಗಳು ಇದ್ದೇ ಇರುತ್ತವೆ.

ಈ ತೊಡಕುಗಳ ನಿವಾರಣೆಗೆ ಸಮಯ ನೀಡಬೇಕೆಂದು ಬಳಕೆದಾರರು ನಿರೀಕ್ಷಿಸುವುದು ಸಹಜ.  ಸರ್ಕಾರ ಇದನ್ನು ಹೇಗೆ ಪರಿಗಣಿಸುತ್ತದೆ, ಹಾಗು ಉದ್ಯಮಿಗಳಿಗೆ ಅನವಶ್ಯಕ ತೊಂದರೆಯಾಗದಂತೆ ಪರಿಸ್ಥತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.  

ಮಂಜುನಾಥ ಡಿ.ಎಸ್.

Leave a Reply

Your email address will not be published.