ಜೈಮಿನಿ ಭಾರತದ ಸೀತೆ

ಸೀತೆ ನಿಜಕ್ಕೂ ಹೆಣ್ಣೊಬ್ಬಳ ಆಂತರಿಕ ಶಕ್ತಿಯ ಪ್ರತೀಕವಾಗಿ ಕಾಣುತ್ತಾಳೆ. ಅಷ್ಟು ಗಂಡುಗಳ ಮಧ್ಯೆ ತನ್ನನ್ನು ತಾನು ಯಾವ ಹಿಂಜರಿಕೆಯಿಲ್ಲದೆ ಸಾಬೀತು ಪಡಿಸುತ್ತಾಳೆ. ಸೀತೆಯಿಂದಲೂ ದೂರವಿದ್ದ ರಾಮನನ್ನು ಅವಳೆಂದೂ ಶಂಕಿಸುವುದಿಲ್ಲ.

ಮಧ್ಯಕಾಲಿನ ಕನ್ನಡದ ಶಿಷ್ಟ ಕಾವ್ಯ ಪರಂಪರೆಯಲ್ಲಿ ಕುಮಾರವ್ಯಾಸ ಭಾರತದಂತೆ ಪ್ರಸಿದ್ಧವಾದ ಕೃತಿ ಲಕ್ಷ್ಮೀಶನ ‘ಜೈಮಿನಿ ಭಾರತ’. ಈ ಕಾವ್ಯವು ಮೂವತ್ನಾಲ್ಕು ಸಂಧಿಗಳಲ್ಲಿ ನಿರೂಪಿತಗೊಂಡಿದೆ. ಜೈಮಿನಿ ಮುನಿಯು ಜನಮೇಜಯನಿಗೆ ಹೇಳಿದ ಮಹಾಭಾರತದ ಕಥೆಯಿದು. ಈ ಕಾವ್ಯದಲ್ಲಿ ಸಂದರ್ಭೊಚಿತವಾಗಿ ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ಬಳಸಿದ್ದಾನೆ ಕವಿ ಲಕ್ಷ್ಮೀಶ. ಈ ಕಾವ್ಯದ ಹದಿನೆಂಟರಿಂದ ಇಪ್ಪತ್ತೊಂದರವರೆಗಿನ ಸಂಧಿಗಳು ರಾಮಾಯಣದ ಕಥೆಗೆ ಮೀಸಲಾಗಿವೆ. ಬಹುತೇಕ ಎಲ್ಲ ರಾಮಾಯಣಗಳಲ್ಲಿಯೂ ಸೀತೆಯ ಬದುಕು, ಬವಣೆ ಬದಲಾಗಿಲ್ಲ. ಅದು ಬದಲಾಗದ ಚಿತ್ರಣವೆಂಬಂತೆ ನಿರೂಪಿಸಲಾಗಿದೆ. ಕಾಡು-ನಾಡುಗಳ ಮಧ್ಯೆ ಪುನರಪಿ ಪಯಣ ಅವಳ ಇಡೀ ಬದುಕನ್ನು ಆವರಿಸಿಕೊಂಡಿದೆ. ರಾಮ-ರಾವಣರ ವ್ಯಕ್ತಿತ್ವದ ನಿಜ ಮುಖಗಳು ಅರಿಯುವುದು ಸೀತೆಯಿಂದಲೇ. ಅವಳು ಹೆಣ್ಣು ಮಾತ್ರವಲ್ಲ; ದಿಟ್ಟಶಕ್ತಿ. ಹಾಗಾಗಿಯೇ ತನಗೊದಗುವ ಬದುಕಿನ ಎಲ್ಲಾ ಸಂಕೀರ್ಣತೆಗಳನ್ನು ಮುಖಾ ಮುಖಿ ಯಾಗುತ್ತಲೇ ನಾರಿ ಶಕ್ತಿಯ ಆದೀಮ ಪ್ರತಿನಿಧಿಯಾಗಿದ್ದಾಳೆ.

ಲಂಕಾಯುದ್ಧದ ತರುವಾಯ ರಾಮನು ಸೀತೆಯನ್ನು ‘ಅಗ್ನಿ ಮುಖ’ ದಿಂದ ಸ್ವೀಕರಿಸುತ್ತಾನೆಯೆ ಹೊರತು ಪ್ರೀತಿ ಮುಖದಿಂದ ಅಲ್ಲ. ರಾಮನಿಗಾಗಿ ಪ್ರತಿಕ್ಷಣವೂ ಕಾತರ, ತವಕ-ತಲ್ಲಣ, ಆತಂಕಗಳಲ್ಲಿ ಕಳೆದ ಸೀತೆಗೆ ದೊರೆತದ್ದು ಅಗ್ನಿಮುಖದ ಸ್ವಾಗತ ಮತ್ತು ಸ್ವೀಕಾರ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಲಂಕೆಯಲ್ಲಿ ಪಡೆದ ಗೆಲುವು ಸೀತೆಗಾಗಿಯೋ ಅಥವಾ ರಾಮನ ಕೀರ್ತಿ ವಿಸ್ತಾರಕ್ಕಾಗಿಯೋ? ಸೀತೆಗಾಗಿಯೇ ಆಗಿದ್ದರೆ, ಅಗ್ನಿ ಮೂಲಕ ಅವಳ ‘ಪಾವಿತ್ರ್ಯದ ಸರ್ಟಿಫಿಕೇಟ್’ ಪಡೆಯುವ ಅಗತ್ಯ ವಿರಲಿಲ್ಲ. ಅಪಹರಣಕ್ಕೊಳಗಾದದ್ದು ಗಂಡಿನಿಂದ. ಆ ಕಾರಣಕ್ಕಾಗಿಯೇ ಹೆಣ್ಣಿಗೆ ಅಗ್ನಿದಿವ್ಯ. ಅಗ್ನಿಕೂಡಾ ಪುರುಷನೆಂದೇ ಗುರುತಿಸಲಾಗುತ್ತದೆ. ರಾಮನಿಗೆ ಇದರ ಬಗ್ಗೆ ಯಾವ ತಕರಾರು ಇದ್ದಂತಿಲ್ಲ ಸೇನೆ, ಅಗ್ನಿ, ಲಕ್ಷ್ಮಣ, ಹನುಮ ಒಟ್ಟಾರೆ ಪುರುಷ ಪರಿಸರದಲ್ಲಿ ಅವಳನ್ನು ಪರೀಕ್ಷಿಸಿ ಸ್ವೀಕರಿಸಿದನು ರಾಮ.ಇಲ್ಲಿ ಸೀತೆ ನಿಜಕ್ಕೂ ಹೆಣ್ಣೊಬ್ಬಳ ಆಂತರಿಕ ಶಕ್ತಿಯ ಪ್ರತೀಕವಾಗಿ ಕಾಣುತ್ತಾಳೆ. ಅಷ್ಟು ಗಂಡುಗಳ ಮಧ್ಯೆ ತನ್ನನ್ನು ತಾನು ಯಾವ ಹಿಂಜರಿಕೆಯಿಲ್ಲದೆ ಸಾಬೀತು ಪಡಿಸುತ್ತಾಳೆ. ಸೀತೆಯಿಂದಲೂ ದೂರವಿದ್ದ ರಾಮನನ್ನು ಅವಳೆಂದೂ ಶಂಕಿಸುವುದಿಲ್ಲ. ರಾಮನ ಮೇಲಿನ ಪ್ರತಿನಿಷ್ಠೆ ಮತ್ತು ನಂಬಿಕೆ ಅಷ್ಟು ಗಾಢವಾಗಿದ್ದವು. ಈ ನೆಲದ ಮೌಲ್ಯ ವ್ಯವಸ್ಥೆ ಗಂಡಿಗೆ ನೀಡಿದ ಸವಲತ್ತುಗಳು ಹೆಣ್ಣಿಗೆ ವಿಧಿಸಿದ ನಿರ್ಬಂಧಗಳು ಅಲಿಖಿತ ಶಾಸನಗಳಾಗಿ ಸದಾ ಜಾರಿಯಲ್ಲಿರುತ್ತವೆ. ಆದಾಗ್ಯೂ ಈ ಸಂದರ್ಭದಲ್ಲಿಯೇ ರಾಮನಿಗಿಂತಲೂ ಸೀತೆ ನಮ್ಮೆಲ್ಲರ ಗ್ರಹಿಕೆಯಲ್ಲಿ ಬಹು ಎತ್ತರದಲ್ಲಿ ನಿಲ್ಲುತ್ತಾಳೆ.

ಸೀತೆಯ ಬಸುರಿ ಬಯಕೆಯೂ ಕೂಡಾ ರಾಮನಿಗೊಂದು ಅನುಕೂಲ ಸಿಂಧುವಾಗುತ್ತದೆ. ಅವಳ ಈ ಬಯಕೆ ಎಲ್ಲಾ ಬಸುರಿ ಹೆಣ್ಣು ಮಕ್ಕಳ ಸಹಜ ಬಯಕೆಯಂತಿರದೆ, ಸೀತೆಯ ಮುಂದಿನ ಬದುಕಿಗೆ ಒದಗಿಬಂದ ಪೂರ್ವ ಯೋಜಿತ ಪೀಠಿಕೆಯಂತಿದೆ. ನಾಡಿನ, ಅರಮನೆಯ ವೈಭೋಗಕ್ಕಿಂತ ಕಾಡಿನ ಮಧ್ಯದಲ್ಲಿ ಸರಳವಾಗಿ, ನೆಲಮೂಲ ಬದುಕಿಗೆ ಹತ್ತಿರವಾಗಿ ಕಳೆಯುವುದರಲ್ಲಿಯೇ ಸೀತೆಗೆ ಜೀವಂತಿಕೆ ಕಂಡಂತಿದೆ.

ಅರಮನೆಯಲ್ಲಿ ರಾಮನಿಗೆ ತನ್ನ ಕುಲದ ವಾರಸುದಾರಿಕೆಯ ಪ್ರಶ್ನೆ ಕಾಡುತ್ತದೆ. ತನಗೆ ಮಕ್ಕಳಾಗದಿದ್ದರೆ  ‘ಕುಲಾಂತಕ’ ಎಂಬ ಆರೋಪ ಬರಬಹುದು ಎಂದು ಆತಂಕಗೊಳ್ಳುತ್ತಾನೆ. ತಾನು ತಂದೆಯಾಗುತ್ತೇನೋ ಇಲ್ಲವೋ ಎಂಬ ಅನುಮಾನಗಳಲ್ಲಿಯೇ ಸೀತೆಯನ್ನು ಕಾಣಲು ಬರುತ್ತಾನೆ. ಇಲ್ಲಿಯೂ ಕೂಡಾ ರಾಮನ ಮನಸ್ಥಿತಿ ಆರೋಪಗಳನ್ನು ದೂರವಾಗಿಸಿಕೊಳ್ಳುವ ಉದ್ದೇಶವೇ ಹೊರತು ಬೇರೇನು ಅಲ್ಲ. ಮನುಷ್ಯನಾಗಿ ಜನಿಸಿದುದಕ್ಕೆ ಸೀತೆಯಲ್ಲಿ ಒಂದಾಗದ ಹೊರತು ರಾಮನ ಅಸ್ತಿತ್ವ ಪೂರ್ಣಗೊಳ್ಳುವುದಿಲ್ಲ. ಗಂಡಿನ ಬದುಕು ಸಾರ್ಥಕಗೊಳ್ಳುವುದು ಹೆಣ್ಣಿನಲ್ಲಿ ಮತ್ತು ಹೆಣ್ಣಿನ ಮೂಲಕ, ಎಂಬುದಕ್ಕೆ ‘ರಘುಕುಲ ಲಲಾಮನೆಸೆದಂ ಮನುಜಲೀಲೆಗಿದು ಸಾರ್ಥಮೆನಲು’ (18ನೇ ಸಂಧಿ, 31ನೇ ಪದ್ಯ) ಎಂದು ಉದ್ಗರಿಸುತ್ತಾನೆ ಕವಿ ಲಕ್ಷ್ಮೀಶ. ಬದುಕಿನ ಪರಿಪೂರ್ಣತೆಗೆ ಗಂಡು-ಹೆಣ್ಣಿನ ಪರಸ್ಪರ ಪ್ರೀತಿ, ಸಾಂಗತ್ಯ ಮತ್ತು ಸಾತತ್ಯಗಳು ಇಬ್ಬರಿಗೂ ಅವಶ್ಯಕ. ಕೇವಲ ಯಾವುದೋ ಒಂದು ಸಂದರ್ಭಕ್ಕೆ ಮಾತ್ರ ಸೀಮಿತವಾದುದಲ್ಲ ಬಾಂಧವ್ಯ ಎಂಬುದು. ಬಾಳಿನುದ್ದಕ್ಕೂ ಕಾಯ್ದುಕೊಂಡಿರಬೇಕಾದ ಜೀವ ಚೈತನ್ಯವದು. ಅಂದಾಗ ಮಾತ್ರ ದಾಂಪತ್ಯಕ್ಕೆ ಅರ್ಥ ಬರುತ್ತದೆ.

ಸೀತೆಯ ಬಸುರಿ ಬಯಕೆಯೂಕೂಡಾ ರಾಮನಿಗೊಂದು ಅನುಕೂಲ ಸಿಂಧುವಾಗುತ್ತದೆ. ಅವಳ ಈ ಬಯಕೆ ಎಲ್ಲಾ ಬಸುರಿ ಹೆಣ್ಣು ಮಕ್ಕಳ ಸಹಜ ಬಯಕೆಯಂತಿರದೆ, ಸೀತೆಯ ಮುಂದಿನ ಬದುಕಿಗೆ ಒದಗಿಬಂದ ಪೂರ್ವ ಯೋಜಿತ ಪೀಠಿಕೆಯಂತಿದೆ. ನಾಡಿನ, ಅರಮನೆಯ ವೈಭೋಗಕ್ಕಿಂತ ಕಾಡಿನ ಮಧ್ಯದಲ್ಲಿ ಸರಳವಾಗಿ, ನೆಲಮೂಲ ಬದುಕಿಗೆ ಹತ್ತಿರವಾಗಿ ಕಳೆಯುವುದರಲ್ಲಿಯೇ ಸೀತೆಗೆ ಜೀವಂತಿಕೆ ಕಂಡಂತಿದೆ. ಅರಮನೆ-ನಾಡು-ನಾಗರಿಕತೆಗಳ ಬದುಕು ಅವಳ ಬಯಕೆಯನ್ನು ಈಡೇರಿಸಲಾರವು ಈ ಸಂದರ್ಭದಲ್ಲಿ ಸೀತೆ ಭಿನ್ನವಾಗಿ ನಿಲ್ಲುತ್ತಾಳೆ. ಮತ್ತೆ ಕಾಡಿನತ್ತ ಮುಖ ಮಾಡುತ್ತಾಳೆ. ಪ್ರಕೃತಿಗೂ ಹೆಣ್ಣಿಗೂ ಇರುವ ನಂಟು ವಿಶಿಷ್ಟವಾದುದು. ನಿಸರ್ಗದ ಮೂಲಕ ಅವಳ ಅಂತಃ ಚೈತನ್ಯ ಮತ್ತಷ್ಟು ವಿಸ್ತಾರಗೊಳ್ಳುವುದಿದೆ, ಜಾಗೃತಗೊಳ್ಳುವುದಿದೆ. ಆದರೆ ಸೀತೆಯ ಈ ಬಯಕೆಯೂ ರಾಮನಿಗೆ ಮತ್ತೆ ಸೀತೆಯನ್ನು ಕಾಡಿಗಟ್ಟುವ ಒಂದು ನೆಪವಾಗುವುದು ವಿಷಾದ.

ಲಕ್ಷ್ಮಿಶ  ಹೇಳುವಂತೆ ಒಬ್ಬ ‘ಹುಲುಮಾನವ’ ನಿಂದ ಬಂದ ಆರೋಪಕ್ಕೆ ಹೆದರಿ ರಾಮ ನಾಡಿದ ಎರಡು ಮಾತುಗಳನ್ನು ಗಮನಿಸಿ.
1. ‘ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ ಪಲವು ಮಾತೇನಿನ್ನು ಸೀತೆಯಂ ಬಿಟ್ಟೆನೆನೆ’ (18ನೇ ಸಂಧಿ, ಪದ್ಯ 51)
2. ‘ಸುಮ್ಮನ ಪಕೀರ್ತಿಗೊಳಗಾಗಲೇತಕೆ ಮಮತೆಯಂ ಮಹಾಯೋಗಿ ಬಿಡುವಂತಿವಳನುಳಿವೆನು’ (18ನೇ ಸಂಧಿ, ಪದ್ಯ 54)

ಈ ಎರಡೂ ಮಾತುಗಳು ರಾಮನಿಂದ ಬಂದವು. ಈ ಕಾವ್ಯದಲ್ಲಿ ರಾಮನಿಗೆ, ರುಘು ಕುಲೊತ್ತಮನಿಗೆ ತನ್ನ ಹೆಂಡತಿಯನ್ನು ‘ಬಿಟ್ಟು ಬಿಡುವ’ ಮಾತು ಎಷ್ಟು ಸುಲಭವಾಗಿ ಕಾಣುತ್ತದೆ, ಅಲ್ಲವೆ? ಆರೋಪಗಳಿಗೆ ವಿಚಲಿತಗೊಂಡು ತನ್ನ ಕೀರ್ತಿ ಕಿರೀಟದ ಮುಂದೆ ಸೀತೆ ಮತ್ತು ಅವಳ ವ್ಯಕ್ತಿತ್ವ ಅಷ್ಟು ಗೌಣವಾದವೆ? ಸೀತೆ ಮೊದಲು ಕಂಡ ರಾಮನೇ ಈತ? ಅಲ್ಲ. ರಾಮನ ಒಳಮುಖ, ಸೀತೆ ಕಾಣದಿರುವ ಒಳಮುಖ ಇಂತಹ ಸಂದರ್ಭದಲ್ಲಿ ಬಹುಸ್ಪಷ್ಟವಾಗಿ ಬಣ್ಣ ಕಳಚುತ್ತದೆ. ಕಲಿಯುಗದ ವಿಪ್ರರು ಆಚಾರ ಬಿಡುವಂತೆ ತಾನೂ ತನ್ನ ಹೆಂಡತಿಯನ್ನು ಬಿಡುವುದು ಎಂದು ನಿರ್ಧರಿಸುತ್ತಾನೆ. 

ಒಬ್ಬ ಅರಸನಾಗಿ, ಮರ್ಯಾದ ಪುರುಷನಾಗಿ ಖ್ಯಾತಿ ಪಡೆದ ರಾಮ ಒಬ್ಬ ಪತಿಯಾಗಿ ಮಾತ್ರ ಎಂದೂ ಆದರ್ಶ ಎನ್ನಿಸುವುದೇ ಇಲ್ಲ. ರಾಮ-ಸೀತೆಯರದು ಸುಖೀ ದಾಂಪತ್ಯವಂತೂ ಅಲ್ಲವೆ ಅಲ್ಲ. ಸೀತೆ ಬದುಕಿನುದ್ದಕ್ಕೂ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ ಏಕಾಂಗಿಯಾಗಿ  ಹೋರಾಡಿದಳು.

ಒಬ್ಬ ಅರಸನಾಗಿ ನಾಡಿನ ಪ್ರಭುವಾಗಿ ಆಚಾರ ಬಿಟ್ಟು ನಡೆವುದು ಎಷ್ಟು ಸರಿ? ತನ್ನ ಮೇಲೆ ಬಂದ ಆರೋಪವನ್ನು ಸರಿಯಾಗಿ ಪರಿಶೀಲಿಸದೆ ಅವಸರದ ನಿರ್ಧಾರಕ್ಕೆ ಸೀತೆಯ ಬಯಕೆಯನ್ನು ನೆಪವಾಗಿಸಿದ. ಇದೇನೆ ‘ರಾಮ ರಾಜ್ಯದ’ ಆಳ್ವಿಕೆಯ ನೀತಿ? ಒಬ್ಬ ಅರಸನಾಗಿ, ಮರ್ಯಾದ ಪುರುಷನಾಗಿ ಖ್ಯಾತಿ ಪಡೆದ ರಾಮ ಒಬ್ಬ ಪತಿಯಾಗಿ ಮಾತ್ರ ಎಂದೂ ಆದರ್ಶ ಎನ್ನಿಸುವುದೇ ಇಲ್ಲ. ರಾಮ-ಸೀತೆಯರದು ಸುಖೀ ದಾಂಪತ್ಯವಂತೂ ಅಲ್ಲವೆ ಅಲ್ಲ. ಸೀತೆ ಬದುಕಿನುದ್ದಕ್ಕೂ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ ಏಕಾಂಗಿಯಾಗಿ  ಹೋರಾಡಿದಳು. ಪರಿತ್ಯಕ್ತೆಯಾಗಿ ಬಾಳಿದರೂ ಆತ್ಮ ಘನತೆಯ ಪ್ರತೀಕವಾಗಿ ಬದುಕನ್ನು ಎದುರಿಸುವ ಪರಿ ಅನನ್ಯ. ರಾಮತಾನೊಬ್ಬ ತಂದೆಯಾಗುತ್ತಿರುವುದು ತಿಳಿದಾಗ್ಯೂ ಯಾವೊಂದು ಜವಾಬ್ದಾರಿಗಳನ್ನು ನಿರ್ವಹಿಸುವುದಿಲ್ಲ. ರಾಮನಿಗೆ ನಿಜಕ್ಕೂ ಸೀತೆಯ ಮೇಲೆ ಪ್ರೀತಿ ಇತ್ತೇ? ಅಥವಾ ತನ್ನ ಪುರುಷತ್ವದ ಮರುಸ್ಥಾಪನೆಗಾಗಿಯೇ ಸೀತೆಯನ್ನು ಗರ್ಭಿಸಿದನೆ? ತುಂಬುಗರ್ಭವತಿಯಾದ ಸೀತೆಗೆ ಇದ್ಯಾವುದೂ ಗೊತ್ತಿಲ್ಲದೆ ಕಾಡುದಾರಿ  ಹಿಡಿಯುತ್ತಾಳೆ. ಈ ಸಂದರ್ಭದಲ್ಲಿ ಮಾನವೀಯತೆಯ ಪರಿವಿಲ್ಲದೇ ನಡೆದುಕೊಳ್ಳುವ ರೀತಿಗೆ ರಾಮನಿಗೆ ‘ಮರ್ಯಾದಾ ಪುರುಷ’ ಎನ್ನಲೇಬೇಕು..!

ರಾಮನ ನಿಜಮುಖ ಲಂಕೆಯಲ್ಲಿ ಅಗ್ನಿ ಮುಂದೆಯೇ ಪ್ರಖರವಾಗಿ ಝಳಪಿಸಿತ್ತು. ಅಲ್ಲಿಯೂ ಮರೆಮಾಚಿದ ಒಳಮುಖ ಮತ್ತೊಮ್ಮೆ ಸೀತೆಯ ಅನುಭವಕ್ಕೆ ಬರುವುದು ಇನ್ನೊಂದು ಸಂದರ್ಭದಲ್ಲಿ. ಕಾಡಿನಲ್ಲಿ ಸೀತೆಯನ್ನು ಬಿಟ್ಟು ಬರುವಾಗ ಲಕ್ಷ್ಮಣನು, ‘ತಾಯೆ ನಿನ್ನ ಮೇಲೆ ಅಪವಾದ ಬಂದಿದೆ. ಹಾಗಾಗಿ ರಾಮನು ನಿನ್ನನ್ನು ಕಾಡಿಗೆ ಬಿಟ್ಟು ಬಾ ಎಂದು ಆಜ್ಞಾಪಿಸಿದ’ ಎಂದಾಗ ತನ್ನ ಗಂಡನ ಸೌಮ್ಯ ಮುಖದ ಹಿಂದಿನ ನಿಗಿಕೆಂಡ ಅವಳಿಗೆ ದರ್ಶನವಾಗುತ್ತದೆ. ಸಹಜವಾಗಿಯೇ ಈ ಸಂದರ್ಭದಲ್ಲಿ ಸೀತೆಯ ತಾಳ್ಮೆ, ಪ್ರೀತಿ, ಸಂಯಮಗಳು ಮುಪ್ಪುರಿಗೊಂಡು ಪ್ರತಿಭಟನೆಯ ರೂಪು ಪಡೆಯುತ್ತವೆ. ಆಗ ಅವಳು ಕೇಳುವ ಪ್ರಶ್ನೆಗಳಿಗೆ ಲಕ್ಷ್ಮಣನಲ್ಲಿ ಉತ್ತರಗಳಿಲ್ಲ.

‘ಅಗ್ನಿ ಮುಖದೊಳ್ಪರೀಕ್ಷಿಸಿದನೆನ್ನೊಳಪರಾಧಮಮಂ ಕಾಣಿಸಿದನೆ?’ (ಸಂಧಿ– 19, ಪದ್ಯ– 19) ಎಂದು ಕೇಳುತ್ತಾಳೆ. ಸೀತೆಯಿಂದ ಮೂಡುವ ಇಂತಹ ಪ್ರತಿಭಟನೆಯ ಸಂದರ್ಭವನ್ನು ಊಹಿಸಿಯೇ, ಧರ್ಮಸಂಕಟಕ್ಕೊಳಗಾಗದೆ ತಪ್ಪಿಸಿಕೊಳ್ಳುತ್ತಾನೆ  ರಾಮ. ಅವಳ ಬದುಕಿನ ವೈಪರೀತ್ಯಕ್ಕೆ ಕಾಡಿನ ಸಕಲ ಚೇತನ-ಅಚೇತನಗಳು ಸ್ಪಂಧಿಸುವ ರೀತಿಯೇ ವಿಶಿಷ್ಟವಾದುದು. ದಾರಿಕಾಣದೆ ಅವಳು ಹಲಬುವ ರೀತಿಗೆ ಎಂಥವರಲ್ಲಿಯೂ ಕರುಳು ಚುರುಕ್ಕೆನ್ನದೆ ಇರಲಾರದು.

ಪೃಥಿವಿಯಾತ್ಮಜೆ ಬಳಿಕ  ಚೇತರಿಸಿ ತನಗಿನ್ನು
ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸಲೆ
ಶಿಥಿಲಮಾದವಯವದ ಧೂಳಿಡಿದ ಮೈಯ್ಯ ಬಿಡುಮುಡಿಯಂ ವಿಕೃತಿಯನೆಣಿಸದೆ
ಮಿಥಿಲೇಂದ್ರವಂಶದೊಳ್ಜನಿಸಿ ರಘುಕುಲದ ದಶ
ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೋಳ್
ವ್ಯಥಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ್  ಕಲ್ಮರಂ ಕರಗುವಂತೆ.

ತನ್ನದಲ್ಲದ ತಪ್ಪಿಗೆ ಬಂದ ಆರೋಪಕ್ಕಾಗಿ ಸೀತೆ ಇನ್ನಾವ ಪರಿಯಲಿ ತನ್ನನ್ನು ಸಮರ್ಥಿಸಿಕೊಳ್ಳುವ ದಾರಿ ತಿಳಿಯದೆ ಬದುಕೇ ಬೆಂಗಾಡಾಗಿ ಅವಳನ್ನು ಆವರಿಸಿಕೊಂಡು ಬಿಟ್ಟಿದೆ. ಮಿಥಿಲ ವಂಶದ ಕುವರಿಯಾಗಿ  ಹುಟ್ಟಿ, ದಶರಥನ ಸೊಸೆಯಾದ ತನಗೆ ಅಡವಿ ಪಾಲಾಗುವುದನ್ನು ತಪ್ಪಿಸಲಿಲ್ಲ ಈ ಘೋರವಿಧಿ. ಸೀತೆಯ ಪ್ರಸ್ತುತದ ಸ್ಥಿತಿಗೆ ಕಾಡಿನ ಪರಿಸರವು ಮರುಗುವಂತೆ ಭಾಸವಾಗುತ್ತದೆ. ಕಾಡು ಮೃಗಗಳಿಗೆ, ಕಲ್ಮರಗಳಿಗೆ ಇರುವ ಸಂವೇದನೆ, ಸಹಸ್ಪಂದನೆ ಮನುಷ್ಯರಿಗಿಲ್ಲವಾಯಿತು. ಇಷ್ಟು ದುಃಖದ ಸಂದರ್ಭದಲ್ಲಿಯೂ ಸೀತೆಗೆ ಉದಾತ್ತ ರಾಘವನ ಮೇಲಿರುವ ಕಾಳಜಿ ತಪ್ಪುವುದಿಲ್ಲ.

‘ಹೋಗು ಲಕ್ಷ್ಮಣ ನಿನ್ನಣ್ಣ ಅಲ್ಲಿ ಅರಮನೆಯಲ್ಲಿ ಏಕಾಂಗಿಯಾಗಿದ್ದಾನೆ. ನನಗಿಲ್ಲಿ ಕಾಡು ಮೃಗಗಳು ಜೊತೆಗಿವೆ’ ಎನ್ನುತ್ತಾಳೆ. ಮುಂದಿನ ಈ ನುಡಿಯಲ್ಲಿ ನೊಂದ ಸೀತೆಯ ತಣ್ಣನೆಯ ಪ್ರತಿಭಟನೆ ಇದೆ.

ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಸಂಭವಿಸಿ
ದೊಡಲಂ ಪೊರೆವುದೆನ್ನೊಳ ಪರಾಧಮುಂಟು ಸಾಕಿಲ್ಲಿರಲ್ಬೇಡ ನೀ
ನಡೆ ಪೋಗು ನಿಲ್ಲದಿರ್ನಿನಗೆ ಮಾರ್ಗದೊಳಾಗ
ಲಡಿಗಡಿಗೆ ಸುಖಮೆಂದು ಸೀತೆ ಕಂಬನಿಗಳಂ
ಮಿಡಿದಾರ್ತೆಯಾಗಿರಲ್ಸೌಮಿತ್ರಿ  ನುಡಿದನಾ ವಿಪಿನದಭಿಮಾನಿಗಳ್ಗೆ.

ಕರುಣಾಳು ರಾಘವನಲ್ಲಿ ತಪ್ಪಿಲ್ಲ ಎಂಬ ಸೀತೆಯ ಮಾತಿನಲ್ಲಿ ನೀಷೇಧಾರ್ಥಕ  ಪ್ರತಿಭಟನೆಯ ಆಸ್ಫೋಟವಿದೆ. ಹೆಣ್ಣೊಡಲು ಸಂಭವಿಸಿರುವುದೇ ಮಹಾಪರಾಧ ಎಂಬ ಭಾವ ಅವಳಲ್ಲಿ ಮೂಡುವ ಮಟ್ಟಕ್ಕೆ ಪರಿಸ್ಥಿತಿಯನ್ನು, ಬದುಕನ್ನು ಬಿಗಡಾಯಿಸಿದ್ದಕ್ಕೆ ಕಾರಣಯಾರು? ಎಲ್ಲಿದೆ? ಹೆಣ್ಣೊಡಲ ಕಾರಣಕ್ಕಾಗಿ ಬದುಕಿನ ಎಲ್ಲಾ ಸಂಕೀರ್ಣತೆಗಳನ್ನು ಎದುರುಗೊಳ್ಳುವ ಸೀತೆ ಅದೇ ಹೆಣ್ಣೊಡಲ ಮೂಲಕವೇ ತನ್ನ ಅಸ್ಮಿತೆಯನ್ನು ಎಚ್ಚರಗೊಳಿಸುತ್ತಾಳೆ.

‘ಕಾನನದೊಳ್‍ ಬಂದುದಂಕಾಣ್ಬೆನಾನಿಂದು’ ಎಂದು ಆತ್ಮವಿಶ್ವಾಸದ ಅದಮ್ಯ ಚೇತನವಾಗುತ್ತಾಳೆ. ಬೆಂದೊಡಲಿನ ಬಸಿರಿನ ದಂದುಗಕ್ಕಾಗಿ ಮತ್ತೆ ಮತ್ತೆ ಬದುಕು ಎದುರಿಸುವಂತೆ ಪ್ರೇರೇಪಿಸುತ್ತದೆ ಸೀತೆಯ ಮನಸ್ಸು, ವಿರಹ, ಅಪವಾದ,  ವನವಾಸ, ಅಗ್ನಿದಿವ್ಯಗಳಲ್ಲಿ ಸದಾ ಬೆಂದಿರುವ ಸೀತೆಯ ಒಡಲಲ್ಲಿ ಬಸಿರಿನ ಜವಾಬ್ದಾರಿಯಿದೆ. ಹಾಗಾಗಿ ತಾನೊಂದು ಹೆಣ್ಣೊಡಲು ಮಾತ್ರವಲ್ಲ ತಾನೊಬ್ಬ ತಾಯಿ ಎಂಬ ಸ್ಥಿತಪ್ರಜ್ಞೆ ಅವಳಲ್ಲಿದೆ. ಅದಕ್ಕಾಗಿಯೇ ಕಾನನದೊಳ್ ಬಂದುದನ್ನು ಎದುರಿಸುತ್ತೇನೆ ಎಂದು ಸೃಷ್ಟಿಶಕ್ತಿಯ ಜೀವಂತ ಸಂಕೇತವಾಗುತ್ತಾಳೆ. ಬದುಕಿಗೆ ಎಂದೂ ವಿಮುಖಗೊಳ್ಳದೆ ಪೊರೆವ, ಪೋಷಿಸುವ, ಪಾಲಿಸುವ ಜೀವದಾಯಿನಿ ಯಾಗುತ್ತಾಳೆ.

ಗರ್ಭವತಿ ಸೀತೆ ಅಯೋಧ್ಯೆಯನ್ನು ಮಿಥಿಲೆಯನ್ನು ನೆನಪಿಸಿಕೊಳ್ಳದೆ ವಾಸ್ತವದ ಕಠೋರತೆಗೆ ದೃಢಮನಸ್ಕಳಾಗುತ್ತಾಳೆ. ವಾಲ್ಮೀಕಿಯ ಆಶ್ರಮದಲ್ಲಿ ಅವಳಿ ಮಕ್ಕಳನ್ನು ಪಡೆದು ರಾಮನನ್ನು ಮೀರಿಸುವ ಪ್ರತಿಭಾವಂತರನ್ನಾಗಿ ಬೆಳೆಸುತ್ತಾಳೆ. ನಾವು ‘ಸೀತಾದೇವಿಯ ಮಕ್ಕಳು’ ಎಂದು ಹೆಮ್ಮೆಯಿಂದ ಹೇಳುವಷ್ಟರಮಟ್ಟಕ್ಕೆ ಮಕ್ಕಳನ್ನು ಬೆಳೆಸುತ್ತಾಳೆ.

ರಾಮ ಲವಕುಶರ ಯುದ್ಧವಾದ ನಂತರ ರಾಮನಿಗೆ ಗೊತ್ತಾಗುತ್ತದೆ ಇವರು ತನ್ನ ಮಕ್ಕಳೆಂದು. ನಂತರವೂ ಆತನು ಸೀತೆಯನ್ನು ಕಾಣಲು ಬರುವುದಿಲ್ಲ. ವಾಲ್ಮೀಕಿಯ ಸಮ್ಮುಖದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಾನೆ. ಈ ಸಂದರ್ಭವೂ ಬದಲಾಗದ ರಾಮನ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಕವಿ ಆಕೆಯನ್ನು ವಾಲ್ಮೀಕಿಯ ಮಾತಿಗೆ ಬೆಲೆಕೊಟ್ಟು ಮತ್ತೆ ಅರಮನೆಗೆ, ಕಾಡಿನಿಂದ ನಾಡಿಗೆ ಕಳಿಸಿಕೊಡುತ್ತಾನೆ. ನಂತರ ಮತ್ತವೇ ಪರೀಕ್ಷೆಗಳು. ಕೊನೆಗೆ ‘ಸೀತೆ’ ಎಂಬದಿಟ್ಟ ಶಕ್ತಿಯನ್ನು ಬಾಳಗೆಡದೆ ಭೂಮಿ ಬಿರಿಸಿ ಹೂತು ಹೋಗುವಂತೆ ಮಾಡಿರುವುದು ಹೆಣ್ಣಿನ ಬಗೆಗಿನ, ವ್ಯವಸ್ಥೆಯ ಅಸಹನೆಯ, ವಿಷಾದದ ಪರಮದ್ಯೋತಕ.

ಜೀವಕ್ಕಿಂತ ಹೆಚ್ಚಾಗಿ ತನ್ನ ಮಕ್ಕಳಿಗಾಗಿಯೇ ಬದುಕಿದ ಸೀತೆಗೆ ಒಂದು ಮಾತೂ ತಿಳಿಸದೆ, ತಂದೆಯಾಗಿ ಈವರೆಗೆ ಯಾವ ಜವಾಬ್ದಾರಿಯನ್ನು ನಿಭಾಯಿಸದ ರಾಮ ಈಗಿವರು ತನ್ನ ಮಕ್ಕಳು, ಪರಾಕ್ರಮಿಗಳು ಎಂದು ಗೊತ್ತಾಗಿ ಕರೆದೊಯ್ಯುತ್ತಾನೆ. ಇದ್ಯಾವ ರಾಮನ್ಯಾಯ? ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದಂದಿನಿಂದಲೂ ಅವಳು ಬದುಕಿದ್ದಾಳೊ ಸತ್ತಿದ್ದಾಳೊ ಯಾವುದನ್ನು ಗಮನಿಸಿಕೊಳ್ಳದ ರಾಮನಿಗೆ ಈಗ ಮಕ್ಕಳು ಬೇಕಾದವು. ಸೀತೆಗೂ ರಾಮನಿಗಾಗಿ ಕಾಯುವ ಕಾತರವಿಲ್ಲ, ಹಂಬಲವಿಲ್ಲ. ಅವಳ ಮನಸ್ಸು, ವಿಚಾರ, ಬದುಕಿನ ಅನುಭವಗಳು ಪ್ರಬುದ್ಧಗೊಂಡ ಕಾರಣ ವಾಲ್ಮೀಕಿಗೆ ‘ನನ್ನ ಮಕ್ಕಳೆಲ್ಲಿ?’ ಎಂದು ಕೇಳುತ್ತಾಳೆ ಹೊರತು ಅಪ್ಪಿ ತಪ್ಪಿಯೂ ‘ರಾಮನೆಲ್ಲಿ?’ ಎಂದು ಕೇಳುವುದಿಲ್ಲ. ಈ ಸಂದರ್ಭ ಸೀತೆಯ ಆತ್ಮಪ್ರಜ್ಞೆ ಮುಕ್ಕಾಗದಿರುವುದಕ್ಕೆ ಸಾಕ್ಷಿಯಾಗಿದೆ. ಆತ್ಮಾಭಿಮಾನದಿಂದ ತನ್ನ ಮಕ್ಕಳನ್ನು ಬೆಳೆಸಿದ ಸೀತೆಗೆ ಮತ್ತೆ ಅರಮನೆಗೆ ಹೋಗುವ ಮನಸ್ಸಿಲ್ಲದಿದ್ದರೂ ಕಾವ್ಯದಲ್ಲಿನ ಕಥೆಯ ಸುಖಾಂತ್ಯಕ್ಕೆ ಕವಿ ಆಕೆಯನ್ನು ವಾಲ್ಮೀಕಿಯ ಮಾತಿಗೆ ಬೆಲೆಕೊಟ್ಟು ಮತ್ತೆ ಅರಮನೆಗೆ, ಕಾಡಿನಿಂದ ನಾಡಿಗೆ ಕಳಿಸಿಕೊಡುತ್ತಾನೆ. ನಂತರ ಮತ್ತವೇ ಪರೀಕ್ಷೆಗಳು. ಕೊನೆಗೆ ‘ಸೀತೆ’ ಎಂಬ ದಿಟ್ಟ ಶಕ್ತಿಯನ್ನು ಬಾಳಗೆಡದೆ ಭೂಮಿ ಬಿರಿಸಿ ಹೂತು ಹೋಗುವಂತೆ ಮಾಡಿರುವುದು ಹೆಣ್ಣಿನ ಬಗೆಗಿನ, ವ್ಯವಸ್ಥೆಯ ಅಸಹನೆಯ, ವಿಷಾದದ ಪರಮದ್ಯೋತಕ. ಇಂದಿಗೂ ನಮ್ಮ ವ್ಯವಸ್ಥೆಯಲ್ಲಿ ಬಹುಪ್ರಸಿದ್ಧವಾದ ಹಾರೈಕೆಗಳಿವೆ. ಅದು ಹೆಣ್ಣಿಗೆ: ‘ನಿನಗೆ ರಾಮನಂತ ಗಂಡ ಸಿಗಲಿ’(ಹುಡುಗಿಯರಿಗೆ), ‘ಶ್ರೀರಾಮಚಂದ್ರನಂತ ಮಗಹುಟ್ಟಲಿ’(ಗರ್ಭಿಣಿಯರಿಗೆ)ಎಂದು. ಈ ನಿರ್ವಚನಗಳನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ. 

ಲಕ್ಷ್ಮೀಶನ ಜೈಮಿನಿ ಭಾರತದ ಅರ್ಜುನ  ಬಬ್ರುವಾಹನರ ಕಾಳಗದ ಸಂದರ್ಭದಲ್ಲಿ ಈ ಸಂಕ್ಷಿಪ್ತ ರಾಮಾಯಣದ ಕಥನ ನಿರೂಪಿತಗೊಂಡಿದೆ. ಈ ಕಾವ್ಯಭಾಗದಲ್ಲಿ ಸೀತೆ ಆತ್ಮ ಪ್ರಜ್ಞೆಯ, ಅದ್ಭುತ ಸ್ತ್ರೀ ಶಕ್ತಿಯ ಅದಮ್ಯ ಚೇತನವೇ ಆಗಿದ್ದಾಳೆ. ‘ಸೀತೆ’ ಎಂದೋ ಸಂಭವಿಸಿದ ಪಾತ್ರಮಾತ್ರವಲ್ಲ. ಇಂದಿಗೂ ಸೀತೆ ಜೀವಂತವಾಗಿಯೇ ಇದ್ದಾಳೆ. ‘ಅಗ್ನಿ ದಿವ್ಯ’ಗಳ ಪರಂಪರೆ ಅಂದಿನಿಂದ ಇಂದಿನವರೆಗೂ ಹೆಜ್ಜೆ ಹೆಜ್ಜೆಗೂ ಹೆಣ್ಣಿಗಿವೆ. ರೂಪಾಂತರಗೊಂಡಿವೆಯಷ್ಟೆ. ಅವುಗಳನ್ನು ಮೀರುವಲ್ಲಿಯೇ ಸ್ತ್ರೀಪ್ರಜ್ಞೆಯೊಂದು ಸದಾಜಾಗೃತವಾಗಿ ಚಲನಶೀಲವಾಗಿರುತ್ತದೆ. ಈ ಸೃಷ್ಟಿಯಂತೆ…

ಆಕರ: ಜೈಮಿನಿಭಾರತ, ಪಂ.ಅ.ರಾ.ಸೇತುರಾಮರಾಮ್-2010.

*ಲೇಖಕಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯವರು. ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಕನ್ನಡ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸಂಶೋಧನಾರ್ಥಿಯಾಗಿದ್ದಾರೆ. ಕವಿತೆ, ಕತೆ, ಲೇಖನಗಳ ಬರವಣಿಗೆ ಇವರ ಹವ್ಯಾಸ.

6 Responses to " ಜೈಮಿನಿ ಭಾರತದ ಸೀತೆ

-ಪದ್ಮಶ್ರೀ ಕಂಪ್ಲಿ.

"

Leave a Reply

Your email address will not be published.